Story

ತುರಂಗ ಬಾಲೆ…….

ಕತೆಗಾರ ಸಂಗನಗೌಡ ಹಿರೇಗೌಡ ಅವರು ಮೂಲತಃ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಅಂಬರಖೇಡದವರು. ಓದು, ಬರವಣಿಗೆ ಇವರ ಹವ್ಯಾಸವಾಗಿದ್ದು ಅವರ ತುರಂಗ ಬಾಲೆ... ಕತೆ ನಿಮ್ಮ ಓದಿಗಾಗಿ...

ಗರ್ಭ ಗುಡಿಯ ಬಾಗಿಲು ʻದಡ್‌ ದಡ್‌ ದಡಲ್‌ʼ ಎಂದು ಜೋರಾಗಿ ಸಪ್ಪಳವಾದ ದಿನ ಅಮವಾಸೆಯಿತ್ತು. ಹಿಲ್ಲಾಣದ ಜಂತಿ ಎಣಿಸುತ್ತ ಮಲಗಿದ್ದ ಯಕ್ಕಯ್ಯ, ಗಬಕ್ಕನೆ ಎದ್ದು ಕಿವಿಗೆ ಕೈ ಹಚ್ಚಿ ಮಲಗಿದ್ದ ತನ್ನಣ್ಣ ಜೋಗಯ್ಯನ ಎದೆ ಅಲುಗಾಡಿಸಿ ʻಯಣ್ಣ! ಏಯ್‌ ಯಣ್ಣ. ಎದ್ದೇಳೋ, ಯಾಕ ಗುಡಿಬಾಗಿಲು ಸಪ್ಪಳ ಆಗಕತೈತಿʼ ಎಂದ. ತಮ್ಮನ ಮಾತು ಕೇಳಿದ ಜೋಗಯ್ಯ ಹೌಹಾರಿ ಎದ್ದು ಕಂಬಕ್ಕೆ ಸಿಕ್ಕಿಸಿದ್ದ ದಿವಟಿಗೆ ಹಿಡಿದು ಟೊಂಕ ಬಗ್ಗಿಸಿ ಸವಾಕಸ ಗುಡಿ ಹತ್ತಿರ ಬರುವುದರೊಳಗೆ ಮೈಮೇಲಿನ ಬೆವರು ಒಣಗಿ ಕುತ್ತಿಗೆಯಲ್ಲಿ ಉಪ್ಪು ಹರಡಿತ್ತು. ಹಾಕಿದ ಕೀಲಿ ಹಂಗs ಇತ್ತಾದರೂ ಬಾಗಿಲು ಸೀಳಿ ಸಿಕ್ಕು ಹಿಡಿದ ಕೂದಲಿನಂತೆ ಕಾಣುತಿತ್ತು. ಜೋಗಯ್ಯ ತನ್ನ ಉಡದಾರದಲ್ಲಿದ್ದ ಕೀಲಿಯಿಂದ ಬಾಗಿಲು ತೆಗೆದ. ದೈವದ ಬೆಳ್ಳಿಮುಖ ಕಾಣದ್ದಕ್ಕಾಗಿ ಒಬ್ಬರಿಗೊಬ್ಬರು ಮಾರಿ ನೋಡಿಕೊಂಡು ಹೊರಗೆ ಓಡಿದವರೆ ʻಬರ್ರೆಪ್ಪೋ! ಯಾರ ಕಳ್ರು ಬಾಗಿಲು ಒಡದು ಬೆಳ್ಳಿಮುಖ ಕದ್ಕೊಂಡು ಹೋಗ್ಯಾರʼ ಎಂದು ಲಬೋ ಲಬೋ ಹೊಯ್ಕೋತ್‌ ಊರಾಕ ಓಡೋಡಿ ಬಂದ್ರು. ಅದಾಗಲೆ ಬಾಗಿಲು ಸೀಳಿಕೊಂಡು ಹೊರಗೆ ಹಾಯ್ದಿದ್ದ ರೇಣುಕಾ ಹಿತ್ತಲದಲ್ಲಿದ್ದ ಕುದರೆ ಏರಿ ಹೋಗಿಯೇ ಬಿಟ್ಟಿದ್ದಳು.

ಕರಾಳ ಕತ್ತಲು. ನಾಯಿಗಳೆಲ್ಲಾ ಉಸಿರು ಬಿಡದೇ ಬೊಗಳುತ್ತಿದ್ದವು. ಅಗಸಿ ಹತ್ತಿರ ಯಕ್ಕಯ್ಯ ಜೋಗಯ್ಯ ಕೈಕಟ್ಟಿ ಅಪರಾಧಿಗಳಂತೆ ತಲೆಬಾಗಿ ನಿಂತಿದ್ದರು. ಮುಡ್ಡಿಚಾಟಿನ ಮೇಲಿದ್ದ ಧರ್ಮೇಂದ್ರ ದೇಸಾಯಿ ಟೊಂಕಕ್ಕೆ ಟಾವೆಲ್‌ ಸುತ್ತಿಕೊಂಡಿದ್ದ. ಅವನ ಮುಂದಗಡೆ ಕವಲ್ದಾರ ಹನಮಂತ, ತಳವಾರ ಚೆಂದಪ್ಪನನ್ನೂ ಒಳಗೊಂಡು ಇಡೀ ಊರಿಗೆ ಊರೇ ದಿವಟಿಗೆ ಹಿಡಿದು ದೇಸಾಯಿ ಅಪ್ಪಣೆಗೆ ತರಾತುರಿಯಲ್ಲಿ ಕಾಯುತ್ತಿದ್ದರು. ತುಟಿ ತಿನ್ನುತ್ತಿದ್ದ ದೇಸಾಯಿ ʻನೋಡ್ರೋ ಇದು ಊರಿನ ಕಿಮ್ಮತ್ತಿನ ಮಾತೈತಿ! ಮೇಲಾಗಿ ಬೆಳ್ಳಿ ಮುಖ ಸೀಮೆ ದಾಟಿ ಹೋತಂದ್ರ ಊರಿನ ಫಲಿ ಹೊಕ್ಕದ.

ನಾಲ್ಕೂ ದಿಕ್ಕಿಗೆ ಒಂದೊಂದು ಗುಂಪಾಗಿ ಹೋಗ್ರಿ. ಹ್ಞುಂ! ತಡ ಮಾಡಬ್ಯಾಡ್ರಿʼ ಎಂದು ಮೀಸೆ ತಿರುವಿದ. ದೇಸಾಯಿ ಅಪ್ಪಣೆ ಸಿಕ್ಕ ಜನರು ದಿಕ್ಕು ಪಾಲಾಗಿ ಸೊನ್ನಾರಿ ಓಡುತ್ತಿದ್ದರು. ರೇಣುಕಾಳು ಊರು ಬಿಡುವಾಗಲೇ ಬೊಗಳುತ್ತಿದ್ದ ನಾಯಿಗಳು ಮತ್ತಷ್ಟು ಹೆಜ್ಜೆ ಸಪ್ಪಳಕ್ಕೆ ನಮಗೇ ಕುತ್ತು ಬಂತು ಎಂಬಂತೆ ದ್ವನಿ ಬದಲಿಸಿ ಅಳಲು ಸುರು ಮಾಡಿದವು. ಈ ಸದ್ದು ಗದ್ದಲಗಳ ನಡುವೆ ಗಂಡುಗಚ್ಚಿ ಹಾಕಿದ್ದ ಕ್ವಾಮ್ಟಿಗೆರ ಸೀತವ್ವಳು ತುರುಬು ಬಿಚ್ಚಿ ಎಡಕು ಬಾಗಿಸಿ ಕುದಲೆಲ್ಲ ಮಾರಿಮ್ಯಾಲ ತೋಂಡವಳೆ ಕಿಸುಗಾಲಿನಗುಂಟ ಎದೆಗಳನ್ನು ಕುಣಿಸುತ್ತಾ ʻಅಲ್ಲ್ಯಾಳ ಇಲ್ಲ್ಯಾಳ ಎಲ್ಲ್ಯಾಳ ರೇಣುಕಾ! ಕಲ್ಲು ಗುಡ್ಡದಾಗ ಮಾಯಾವಾಗ್ಯಾಳʼ ಎಂದು ಎರಡೂ ಕೈಗಳಿಂದ ಬೆನ್ನಿಗೆ ಹೊಡೆದುಕೊಳ್ಳುತ್ತಿದ್ದಳು.

ಕೃಷ್ಣಾ ನದಿಯು ಕವಲೊಡೆದು ಹರಿಯುತ್ತಿದ್ದ ಹಳ್ಳಕ್ಕೆ ಬಂದ ರೇಣುಕಾ, ಕವಡೆ ಸರ ಮತ್ತು ಎಳ್ಳು ಹೂವ್ವಿನ ಸೀರೆ ಬಿಚ್ಚಿ ಕೆಂಜೆಡೆಗಳನ್ನು ಮೇಲಕ್ಕೇರಿಸಿ ಕಾಲು ಚಾಚಿ ಸವಳು ಹಚ್ಚಿ ಜಳಕ ಮಾಡಿದಳು. ನವಿಲು ಗರಿಗಳಿಂದ ಮೈ ಒರಸಿಕೊಂಡು ಕಾಲಿನ ಗೆಜ್ಜೆ, ಟೊಂಕದ ಢಾಬು, ಮೂಗಿನ ಮುತ್ತು, ಕವಡೆ ಸರ ಸರಿಪಡಿಸಿಕೊಂಡಳು. ಚಿಗರಿ ಚರ್ಮದ ಚೀಲದಿಂದ ಹಿಡಿ ಭಂಡಾರ ತೆಗೆದು ಕರಿ ಹುಬ್ಬಿನ ಮೇಲೆ ಹಚ್ಚಿಕೊಂಡು ಢೇಕರಕಿ ಹೊಡೆದಳು. ನಾಲ್ಕೈದು ಮಾರು ದುರದಲ್ಲಿದ್ದ ಕುದುರೆಗೆ ʻಏಯ್‌ ತುರಂಗʼ ಎಂದಾಗ ಓಡಿ ಬಂದ ಕುದುರೆಯು ತನ್ನ ನಡು ಬಗ್ಗಿಸಿ ನಿಂತಿತು. ಠಣ್ಣನೆ ಹಾರಿ ಕುಳಿತು ದಕ್ಷಿಣ ದಿಕ್ಕಿನ ಸಾತ್ಯಾಳದ ದಾರಿಯ ಸಾಲು ಟೆಂಗಿನ ಮರಗಳ ಬಲ್ಲ್ಯಾಕ ಹಾಯ್ದು ಹಿಪ್ಪರಗಿ ಕಡೆ ನಡೆದಳು.

ಅಮವಾಸೆಯ ರಾತ್ರಿ ಮುಗಿದು ಬೆಳಿಗ್ಗೆ ಕರಿಯಿರುವುದರಿಂದ ಭೂತಾಳಿ, ಜಟ್ಟೆಪ್ಪ ಹೆಸರಿನ ನಾಯಿಗಳು ಚಕ್ಕೆಂದು ತೆಗೆದು ಆಡುತ್ತಿದ್ದವು. ಕುದರೆಯ ಸಪ್ಪಳದ ನಾತ ಬಡಿದಿದ್ದೇ ತಡ ಒಮ್ಮಿಲೇ ಕಿವಿ ನಿಗುರಿಸಿ ಬೊಗಳಲು ಸುರು ಮಾಡಿದವು. ರಾವುತನ ಗುಡಿಮುಂದೆ ಕುದರೆ ತರುಬಿ ಶಿಖರದ ಕಡೆ ದೃಷ್ಟಿ ಹಾಯಿಸಿದಳು. ನಾಗರ ಹಾವೊಂದು ಕೊಗಿಲೆಯ ಕಂಠಕ್ಕೆ ಎಡೆಬಿಚ್ಚಿ ಆಡುತ್ತಿತ್ತು. ಸೂರ್ಯನ

ಕಿರಣಗಳು ರೇಣುಕಾಳ ನತ್ತಿನಿಂದ ಹಾಯ್ದು ಹಾವಿನ ಕಣ್ಣಿಗೆ ಬಡೆಯುತ್ತಿದ್ದವು. ಆಟ ನಿಲ್ಲಿಸಿದ ಹಾವು ಗೋಣು ಎತ್ತಿ ಅವಳನ್ನೇ ನೋಡುತ್ತಿತ್ತು. ಮುಗಳು ಮಾರಿಯಲ್ಲಿದ್ದ ರೇಣುಕಾ……

ʻಬಾಗಿಲ ಮ್ಯಾಲ ಕೋಗಿಲ ಕೂತು

ಕೂಗಿ ಕೂಗಿ ಮರವನೇರಿ ನಾಗರೆಡಿಯೊಂದಾಡೆವೇಳಯ್ಯ

ರಾಯ ರಾವುತರಾಯ ನಾಗರೆಡಿಯೊಂದಾಡೆವೇಳಯ್ಯ!

ಎಂದು ಹಾಡುತ್ತಿದ್ದಳು. ದನಿಕೇಳಿದ ರಾವುತ ಗರ್ಭ ಗುಡಿಯಿಂದ ಮಾಯವಾಗಿ ಹೊರಗಡೆ ಬಂದು ರೇಣುಕಾಳ ಮಾರಿ ನೋಡಿದ. ಎರಡು ಹರದಾರಿ ದೂರಿದ್ದ ಹಳ್ಳದೊಳಗ ಜಳಕ ಮಾಡಿದ್ದ ಅವಳ ಮಾರಿ ಮುಂಜಾವಿನ ಕೆಂಬಿಸಿಲಿಗೆ ಹೋಕಳಿ ಹುವ್ವಿನಂತೆ ಲಕ ಲಕ ಹೊಳೆಯಾಕತ್ತಿತ್ತು. ನಾಯಿಗಳು ಬಾಲ ಅಲುಗಾಡಿಸುತ್ತಾ ಒಪ್ಪಾರಿ ಗೋಣಿನಿಂದ ಸವಕಾಸ ಬಂದು ರಾವುತನ ಕಿರುದೊಡೆಗಳನ್ನು ನೆಕ್ಕುತ್ತಿದ್ದವು. ಅವುಗಳ ತಲೆಮ್ಯಾಲ ಕೈಯ್ಯಾಡಿಸುತ್ತಾ

ʻಮುತ್ತಿನ ಮೂಗುತಿಯ ನನ್ನಕ್ಕ ರೇಣುಕಾ

ಸುಲಿಹಲ್ಲ ಹೊಳದಾವ ನಕ್ಕಾರ!

ಎಂದು ಅವಳ ಒನಪು ಮಾಡಿದ. ಆಗ ರೇಣುಕಾ ʻಎಯ್‌ ತಮ್ಮ ರಾವುತ! ಮಾತಾಡಾಕ ನನಗೀಗ ಸಮಯವಿಲ್ಲ. ಶ್ರೀಶೈಲಕ್ಕ ಹೊಂಟೀನಿ. ಈ ನಾಯಿಗಳನ್ನು ಕರಕೊಂಡು ನೀನೂ ಬರುವಂಗಿದ್ರ ಬಾʼ ಎಂದು ಕಣ್ಣು ಮುಚ್ಚಿ ನಿಂತಿದ್ದ ಕುದುರೆಗೆ ʻಏಯ್‌ ತುರಂಗʼ ಎಂದಳು. ಒಮ್ಮಿಲೆ ಕಣ್ಣು ತೆಗೆದು ಕಿವಿ ನಿಗುರಿಸಿ ಮೂಗಿನ ಹೊರಳೆಗಳನ್ನು ಅಗಲಮಾಡಿ ಎರಡೂ ಕಾಲುಗಳನೆತ್ತಿ ಹಾರಗಾಲ್‌ ಬಿತ್ತು. ರೇಣುಕಾಳ ದ್ವಾರಗಣ್ಣು, ಎದೆಯ ಏರಿಳಿತ ನೋಡಿದ ರಾವುತನಿಗೆ ಬೆರಗಾಯಿತು.

ದೂರ ದೂರದಿಂದ ಗೊಲ್ಲಾಳನ ಗುಡಿಗೆ ಹಿಂಡು ಹಿಂಡಾಗಿ ಬಂದ ಭಕ್ತರು ಒಂದಿನ ವಸ್ತಿ ಇದ್ದು ಹೋಗುತ್ತಿದ್ದರು. ಗುಡಿಯ ಮುಂಭಾಗದಲ್ಲಿದ್ದ ಕಿರಾಣಿ ಅಂಗಡಿಯವನಿಗೆ ತುಂಬಾ ಬೇಕಾಗಿದ್ದ ಒಬ್ಬಾತ ಕುರ್ಚಿ ಹಾಕೊಂಡು ಕೂತಿದ್ದ. ಅವನ ಅಂಗಿ, ತಲೆಯಮ್ಯಾಲಿನ ಟೋಪಿ, ಇಳಿ ಬಿಟ್ಟಿದ್ದ ಧೋತಿ ಎಲ್ಲವೂ ಹಾಲಿನ ಬಣ್ಣದಂತೆ ಹೊಳೆಯುತ್ತಿದ್ದವು. ಜನರು ಗುಡಿವಳಗ ಹೋಗೋದು ನೋಡಿದ್ದಾತ ʻಅಲ್ಲೋ ಬಸಣ್ಣ, ಈ ಜನ ಎಂಥಾ ಹುಚ್ಚರು ಅಂತೀನಿ! ಮನುಷ್ಯರು ಕುಡಿಯಬೇಕಾಗಿದ್ದ ಹಾಲು ಒಯ್ದು ತಿಪ್ಪಿಗಿ ಸುರಿದ ಹುಂಬ ಗೊಲ್ಲಾಳಗ ಇಸೊಂದು ಭಕ್ತರದರಲ್ಲ, ಇವರೆಲ್ಲಾ ಯಾವಾಗ ಸುಧಾರಸ್ತಾರೋ!?ʼ ಅಂದ. ಬೆಲ್ಲವನ್ನು ತಕ್ಕಡಿಯಲ್ಲಿ ತೂಗುತ್ತಿದ್ದ ಬಸಣ್ಣ, ಹೆಚ್ಚಾದದ್ದನ್ನು ತಗೆಯುತ್ತಾ ʻಹೌದ್‌ ನೋಡು ಕಾಕ, ಮನ್ನಿ ಪುರಾಣಿಕರು ಇದs ಮಾತು ಅಂದ್ರು; ಆದ್ರ ನಿಮ್ಮಂಗ ಹುಂಬ ಗಿಂಬ ಪದ ಬಳಸಿರಲಿಲ್ಲ. ಅದೇನರ ಇರಲಿ ಕಾಕಾ ‘ಹಳಿ ಹಾದರ ತಗದು ಮೊಲಿ ಮೂಗು ನಾನ್ಯಾಕ ಕೊಯ್ಸಿಕೊಳ್ಬೇಕು…? ನಮಗ ವ್ಯಾಪಾರ ಆದರ ಸಾಕಪ್ಪʼ ಎಂದು ನಕ್ಕ. ಗುಡಿ ಸಮಿಪಾದಂತೆ ಕುದುರೆ ನಡಿಗೆಯ ಪೆಟ್ಟು ತಿನ್ನುತ್ತಿದ್ದ ನೆಲವು ಬಾಣಂತಿಯ ನರಗಳಂತೆ ಕಾಣುತ್ತಿತ್ತು. ಧ್ಯಾನಕ್ಕೆ ಕುಳಿತ್ತಿದ್ದ ಗೊಲ್ಲಾಳ ಗರ್ಭ ಗುಡಿಯಿಂದ ಮಾಯವಾದ. ಅಡುವಾದ ಗಡ್ಡ, ಹಳದಿ ಬಣ್ಣದ ಅಂಗಿ, ಕಚ್ಚಿ ಹಾಕಿದ ಧೋತಿ, ಎದೆಯಮ್ಯಾಲ ಬೂದುಗಂಬಳಿ, ಕೈಯೊಳಗೆ ನಾಗರ ಬೆತ್ತ, ಕಾಲೊಳಗೆ ನಾಲು ಕಟ್ಟಿಸಿದ್ದ ಗಡ್ಡಿ ಮೆಟ್ಟು ಹಾಕಿದ್ದ ಗೊಲ್ಲಾಳ ರೇಣುಕಾಳ ಎದುರಿಗೆ ಬಂದು ನಿಂತಿದ್ದ. ಅವನನ್ನು ನೋಡಿದ ಆಕೆ ʻಏಯ್ ತಮ್ಮ! ಯಾಕ್ ಅಡ್ಡಗಟ್ಟಿ ನಿಂತಿದಿ? ದಾರಿ ಬಿಡು ನಾನು ಹೋಗಾಕsಬೇಕುʼ ಅಂದಳು. ಅವಳ ಎಳ್ಳು ಹೂವಿನ ಪತ್ತಲ. ಕೊರಳೊಳಗಿನ ಕವಡೆ ಸರ ನೋಡಿದ ಗೊಲ್ಲಾಳ, ಕೇಳಬೇಕಾಗಿದ್ದ ಎಷ್ಟೋ ಮಾತುಗಳನ್ನು ಮನಸೊಳಗೇ ಉಳಿಸಿಕೊಂಡು ʻಅಕ್ಕ ನೀನು ನಡೆದು ಬಂದ್ರ ನೆಲ ನಡುಗಕತ್ತಾದ ಅಂದಮ್ಯಾಲ ನೀನು ಸಾಮನ್ಯದಾಕಿ ಅಲ್ಲವ್ವೋ! ನನಗೊಂದು ಸಂಕಟ ಐತಿ. ಅದಕ್ಕ ಪರಿಹಾರ ನೀಡಬೇಕುʼ ಅಂದ. ಅವನು ಮಾತು ಕೇಳಿದ ರೇಣುಕಾ ʻನನ್ ಮಾತು ಯಾರು ಕೇಳ್ತಾರಪ್ಪ?? ನನ್ ಮಾತೀಗಿ ಕಿಮ್ಮತ್ತಿಲ್ಲ ಈ ನಾಡಿನೊಳಗ!ʼ ಹತಾಶೆ ಭಾವದಿಂದ ನುಡಿದಳು. ʻಹಂಗ್‌ ಅನ್ಬ್ಯಾಡ ಅಕ್ಕ! ನೀನು

ಎಂತೆಂಥವರನ್ನೋ ಗುದ್ದು ಒಗಿಸಿದ ಮಹಾನ ಚತುರಳಂತ ನನ್ನ ಹಂತ್ಯಾಕ ಬರೋ ಜನ ಆಡಿಕೊಳ್ತಾರ. ನಿನಗ ಒಂದs ಒಂದು ಮಾತು ಕೇಳಿತೀನಿ ಹೇಳಕ್ಕʼ ಅಂದ.

ʻಯಾಕ್‌ ಆಗುವಲೆಕ್‌ ಕೇಳುʼ

ʻನಾನ್ಯಾರಂತ ನಿನಗ ಗೊತ್ತೇನು ಅಕ್ಕ??

ʻಎಲ್ಲಾ ಗೊತ್ತದಪ್ಪ… ಆದ್ರ ನಾನಿಲ್ಲಿ ಮಾತಾಡುವಂಗಿಲ್ಲ! ಹಂಗೇನರ ಮಾತಾಡಿದ್ರ ಪುರಾಣದವಳಾದ ನನಗ ಏನೂ ಆಗಲ್ಲ. ಚರಿತ್ರೆಯವನಾದ ನೀನು ಅಲುಗಾಡಬೇಕಾಗ್ತದ. ಹಂಗಾಗಿ ಮುಸುಕಿನ್ಯಾಗ ಮೌನದಿಂದ ಇರಾಕತ್ತೀನಿʼ ಅಂದಳು. ಅಲುಗಾಡುವ ಪದ ಕೇಳಿದ ಗೊಲ್ಲಾಳ ʻನೋಡಕ್ಕ! ಮನುಶ್ಯಾಗೊಮ್ಮಿ, ದೇವರಿಗೊಮ್ಮಿ ಯಾರೂ ಸಾಯಲ್ಲ! ನಾನು ತಿಪ್ಪೆಗೆ ಹಾಲು ಸುರಿದದ್ದು ನೋಡಿ ‘ಹುಂಬʼ ‘ಮಳ್ಳʼ ಅಂತ ಕೆಲವ್ರು ಹಗುರವಾಗಿ ಹಾರಿಸ್ಯಾಡ್ತಾರ; ತಿಪ್ಪೆಗೆ ಹಾಲು ಸುರಿದದ್ದು ಹುಂಬತನನಾ? ಹೇಳಕ್ಕ?? ದುಃಖದಿಂದ ಕೇಳಿದ. ಸ್ವಲ್ಪೊತ್ತು ಕಣ್ಣು ಮುಚ್ಚಿದ ರೇಣುಕಾ ಹೊಕ್ಕಳದಿಂದ ಉಸಿರು ಎಳೆದುಕೊಂಡು ʻನೀ ಹುಂಬಲ್ಲೋ ನನ್ನಪ್ಪ! ಮಹಾನ ಭಕ್ತ ಇದ್ದಿ. ನೀನು ತಿಪ್ಪೆಗೆ ಹಾಲು ಸುರಿದಿದ್ದು ಈಗ ಅವರು ಬದುಕುತ್ತಿರುವ ಕಾಲಕ್ಕ ತಪ್ಪು ಕಾಣಕತ್ತದ. ಹಂಗ್‌ ಕಾಣ್ಬೇಕು ಕೂಡಾ! ಅದರೆ ಯಾಕ ಸುರಿತಿದ್ದಿ ಅಂತ ನಿನಗೇನರ ಗೊತೈತಿ?ʼ

ʻನನಗೇನೂ ಗೊತ್ತಿಲ್ಲ ಅಕ್ಕʼ

ʻನಿನ್ನ ಗುರು ಮೂಲದಲ್ಲಿ ತಿಪ್ಪೆ ಒಳಗ ಹುಟ್ಟಿ ಬಂದಾನ ಗೊಲ್ಲಾಳ! ಅದು ನಿನ್ನ ಅರಿವಿಗೆ ಬರದ ಹಂಗಾಗಕತೈತಿ. ಇಂಥವುಗಳ ಮ್ಯಾಲ ಹುತ್ತು ಬೆಳೆದು ಮುಚ್ಚಿ ಹೋಗ್ಯಾವ. ಅದನ್ನು ಕೆದರಿ ತಗಿಬೇಕು. ಹಂಗಾಗಿ ಇದರ ಮೂಲಕ್ಕ ಹೊಂಟೀನಿʼ ಎಂದಳು. ರೇಣುಕಾಳ ಮಾತು ಕೇಳಿದ ಗೊಲ್ಲಾಳನಿಗೆ ಒಮ್ಮಿಲೆ ಸೊನ್ನಲಿಗೆ ಸಿದ್ಧರಾಮನ ನೆನಪಾಗಿ ಕಣ್ಣಿಗೆ ಕತ್ತಲು ಬಂದಂಗಾಗಿ ಹಿಂದಕ್ಕೆ ಸರಿದ. ಮೋಡದಲ್ಲಿ ಕೋಲು ಮಿಂಚುಗಳು ಫಳ್‌ ಎಂದು ಹೊಡೆದು ಹನಿ ಉದುರಲು ಸುರುವಾಯಿತು.

ಕಂಬಳಿ ಜಾಡಿಸಿದ ಗೊಲ್ಲಾಳ ತಲೆಯ ಮೇಲೆ ಹಾಕಿಕೊಂಡು ನಿಂತ. ʻಸರಿ……ಸರಿ…… ನಾನೀಗ ಹೋಗಬೇಕಾದ ದಾರಿ ಭಾಳ್‌ ದೂರೈತಿ. ನೀನೂ ಬರುವ ಹಾಗಿದ್ರ ಹಿಂದೆ ರಾವುತರಾಯ ಹೊಂಟಾನ. ಅವನ ಜತಿಗಿ ಬಾʼ ಎಂದು ಗೋಲಗೇರಿ ದಾಟಿ ಹದ್ನೂರ ಹಾದಿ ಹಿಡಿದಳು.

ಸುತ್ತೂರಿನ ಪನ್ನಾಳಿಗೆಯ ನೀರು ತಗ್ಗು ಪ್ರದೇಶದ ಗೋಗಿ ಕೆರೆಗೆ ಹರಿದು ಬಂದು ಒಂದರ ಮೇಲೊಂದು ಬಿದ್ದು ತಮ್ಮ ಕೂನ ಕಳೆದು ಕೊಂಡಿದ್ದವು. ಕೆರೆಯೊಳಗಿನ ಜೇಕು ಜಬಲು ಮೇಯುತ್ತಾ ಮಲಗಿದ್ದ ಸಾಹುಕಾರರ ಎಮ್ಮೆಗಳು ಇಳಿ ಹೊತ್ತಾದದ್ದರಿಂದ ತಮ್ಮ ಗೂಡು ಸೇರಲು ಹಿಂಡು ಹಿಂಡಾಗಿ ಹಾದಿ ತುಂಬಾ ಹೋಗುತ್ತಿದ್ದವು. ಕುದರೆಯ ನಾತಕ್ಕೆ ಒಂದೇ ಸವನೆ ಚೆಕ್ಕಂದು ತಗೆದು ಓಡಲು ಸುರುಮಾಡಿದವು. ಹರೆಯದ ಮಣಕಗಳು ಎಲ್ಲವುಗಳಿಗಿಂತ ಮುಂದಿದ್ದವು. ಹೊಟ್ಟಿಲೇಯಿದ್ದು ಇನ್ನೇನು ನಾಳೆ ನಾಡಿದ್ದು ಈಯಬೇಕಾಗಿದ್ದ ಎಮ್ಮೆಗಳು ಏದುಸಿರು ಬಿಡುತ್ತಾ ಕುಂಡಿ ಒಳಸ್ಯಾಡಿ ನಡಿಯುತ್ತಿರುವಾಗ ಮೇಲಿನ ಕೆಚ್ಚಲಿನಿಂದ ಕೊಳಮಾಸು ಸೋರುತ್ತಿತ್ತು. ಚಾಮನಾಳ ದಾರಿಯಿಂದ ವೇಗವಾಗಿ ಬಂದ ಕುದರೆ ಅವುಗಳನ್ನು ದಾಟಿ ಜೋಳದ ರವದಿಯಂತೆ ಹಾರಿ ಹೋಗಿಯೇ ಬಿಟ್ಟಿತು. ಇನ್ನೂ ಕಣ್ಣ ನಸುಕಾಗಿರಲಿಲ್ಲ. ಅಷ್ಟೊತ್ತಿಗೆ ಭೀಗುಡಿ ದಾಟಿ ಡಿಗ್ಗಿ ಸಂಗಮನಾಥನ ಗುಡಿಯ ಹತ್ತಿರ ಹೋಗಿ ನಿಂತಿತು. ಇನ್ನೇನೂ ಧ್ಯಾನದಿಂದ ಏಳುತ್ತಿದ್ದ ಸಂಗಮನಾಥನಿಗೆ ರೇಣುಕಾ ಬಂದದ್ದು ನೋಡಿ ತನ್ನ ನೆತ್ತಿಯ ಮೇಲಿದ್ದ ಚಂದಾ ಹುಸೇನಿಗೆ ದ್ವನಿಮಾಡಿ ಕರೆದ. ಇಬ್ಬರೂ ರೇಣುಕಾಳ ಹತ್ತಿರ ಬಂದು ನಿಂತು.

ʻಎಲ್ಲಿದ್ದೆ ರೇಣುಕಾ

ನಿನ ಹೂವ್ವ ಮಾಡಿ ಹುಡುಕಿದೇವೆ

ಹೂವ್ವ ಮಾಡಿ ಹುಡಿಕಿದೇವೆ

ಊರೂರು ತಿರುಗಿದೇವೆ!

ಎಂದು ಹಾಡಿ ಬರಮಾಡಿಕೊಂಡರು. ಇಬ್ಬರನ್ನು ನೋಡಿದ ರೇಣುಕಾ ಆಶ್ಚರ್ಯದಿಂದ ʻಏನಪಾ ಆರೂಢ! ಬೀದರ್ ಕೋಟೆಯಲ್ಲಿ ಇದ್ದಿಯಂತ ಕೇಳಿದ್ದೆ. ಈ ನಾಡಿಗೆ ನೀನ್ಯಾವಾಗ ಬಂದಿ? ಕೇಳಿದಳು. ಕೈಯಲ್ಲಿದ್ದ ಬೋಳು ಬೆತ್ತವನ್ನು ಬಗಲಾಗ ಬಡಿದುಕೊಂಡು ಎರಡೂ ಕೈ ಜೋಡಿಸಿದ ಸಂಗಮನಾಥ, ʻಎಲ್ಲಾ ಅದೊಂದು ದೊಡ್ಡ ಕತಿ ಐತಿ ಅಕ್ಕʼ ಎಂದು ಹೇಳಬೇಕೆಂದುಕೊಂಡ. ಆದರೆ ಮಾತಿಗೆ ಮರು ಮಾತು ಬೆಳೆದು ಮೂಗಿನಮ್ಯಾಲ ಸಿಟ್ಟಿರುವ ಇವಳು ಬೀದರಿಗೆ ಹೋಗಿ ಲಡಾಯಿ ಮಾಡೋದು ಅವನಿಗೆ ಬೇಕಾಗಿರಲಿಲ್ಲ. ಮುಖ್ಯವಾದದ್ದನ್ನು ಮನಸಿನ ಮೂಲೆಗೆ ಸರಿಸಿ ʻಯಾಕೋ ಏನೋ ಅಕ್ಕ, ಆ ಬೆಟ್ಟದಾಗ ಇರಾಕ ನನ್ನ ಮನಸು ಒಪ್ಪಲಿಲ್ಲ. ಹಂಗಾಗಿ ದಕ್ಷಿಣಾಭಿಮುಖವಾಗಿ ಬಂದೆ. ಕಟ್ಟಿ ಸಂಗಾವಿಯಲ್ಲಿ ಒಂದಷ್ಟು ದಿನ ಉಳಿದುಕೊಂಡೆ. ಅಲ್ಲಿನೂ ಬ್ಯಾಸರಾಗಿ ಗೋಗಿ ಕಡೆ ಬಂದೆ. ಅಲ್ಲಿ [ತನ್ನ ಗೆಳೆಯ ಚಂದಾ ಹುಸೇನನ್ನು ತೋರಿಸುತ್ತಾ] ನನಗ ಇವನ ಪರಿಚಯ ಆಯ್ತು. ಇಬ್ಬರ ದಾರಿ ಬೇರೆ ಬೇರೆಯಾದರೂ ಗುರಿ ಒಂದೆಂದು ಪರಸ್ಪರ ಅರ್ಥಮಾಡಕೊಂಡು ಲೋಕದ ಪರಿಪಾಟಲುಗಳನ್ನು ಪದಮಾಡಿ ಹಾಡುತಿದ್ವಿ. ದಾರಿಯನ್ನಷ್ಟೇ ನೋಡಿದ ಕೆಲವರು ನನ್‌ ಮುಂದುಮಾಡಿಕೊಂಡು ಇವನಿಗೆ ಬೈಯ್ಯಾಕತ್ರು. ಇನ್ನೂ ಕೆಲವರು ಇವನನ್ನು ಮುಂದುಮಾಡಿ ನನಗ ಬೈಯಾಕತ್ರು. ನನ್ನಿಂದ ಇವನಿಗ್ಯಾಕ ತೊಂದ್ರೆ ಅಂತ ನಾನೇ ಅಲ್ಲಿಂದ ಈ ಗುಡ್ಡಕ್ಕ ಬಂದೆ ನೋಡುʼ ಎಂದು ಹೇಳ್ತಾ ಎದೆ ಕೆಳಗಮಾಡಿ ಉಸಿರುಬಿಟ್ಟ. ಸಂಗಮನಾಥನ ಮಾತನ್ನು ಕೇಳಿದ ರೇಣುಕಾ ದಿಟ್ಟಿಸಿ ಚಂದಾ ಹುಸೇನಿ ಮಾರಿ ನೋಡಿದಳು. ಮೊಳವುದ್ದ ಗಡ್ಡ, ತಲೆಯ ಮೇಲೆ ಚಂದ್ರನಷ್ಟೇ ಬೆಳ್ಳಗಿದ್ದ ದುಂಡು ಟೋಪಿ, ಕಾಲಿನ ಮೀನುಗಂಡಗಳು ಕಾಣುವಂತೆ ಏರಿಸಿ ಕಟ್ಟಿದ್ದ ಹಸಿರು ಲುಂಗಿ, ಕೈಯಲ್ಲಿ ನವಿಲಿನ ಪುಚ್ಚಗಳ ಸೂಡು ಹಿಡಿದುಕೊಂಡು ನಿಂತಿದ್ದ ʻನೀನಾದ್ರು ಅಲ್ಲಿಯೇ ಇರಬೇಕಾಗಿತ್ತು ಯಾಕ್‌ ಬಿಟ್ಟು ಬಂದಿ?ʼ ಎಂದು ಚಂದಾ ಹುಸೇನಿಗೆ ಕೇಳಿದಳು. ಒಂದು ಹೆಜ್ಜೆ ಮುಂದಕ್ಕೆ ಬಂದ ಚಂದಾ ಹುಸೇನಿ ʻಅಸ್ಸಲಾಮು ಅಲೈಕುಮ್‌ ಬೆಹೆನ್‌. ನನಗಲ್ಲಿ ಯಾವುದೇ ಸಂಕಟ ಇರಲಿಲ್ಲ ಎನ್ನುವುದು ಸತ್ಯ. ಒಂದಿಷ್ಟು ದಿನ ನಾನು ಆರೂಢರು ಅವಳಿ ಮಕ್ಕಳಂತೆ ಒಬ್ಬೊರಿಗೊಬ್ಬರು

ಹಚ್ಚಿಕೊಂಡು ಆತ್ಮ ಜ್ಞಾನದಲ್ಲಿ ಮೇಲೇರಲು ತುದಿಗಾಲಿಲೇ ನಿಂತಿದ್ದೆವು. ಅದರೆ ಏಕಾಏಕಿ ಇವನು ಬಿಟ್ಟು ಹೋದಾಗ ಧ್ಯಾನಕ್ಕೆ ಕೂತ್ರ ಬ್ಯಾಸರಾಗುತ್ತಿತ್ತು. ಇದ್ದಲ್ಲೇ ಇರುವ ಪರಂಪರೆಯವರು ನಾವಲ್ಲವೆಂದು ನಿನಗೇನು ಹೊಸದಾಗಿ ಹೇಳಬೇಕಾಗಿಲ್ಲ. ಹಂಗಾಗಿ ಮೂಡಣಕ್ಕೆ ನಡೆದು ಶಹಾಪೂರದ ನಡುಗಡ್ಡೆಯಲ್ಲಿ ಮಲಗಿದ್ದೆ. ಹಗಲು ಕನಸುಗಳೆಲ್ಲಾ ರಾತ್ರಿ ದಾಳಿಮಾಡಿದವು. ಕನಸಿನಲ್ಲಿ ಮೀನಿನ ಬೆತ್ತವಿಡಿದ ಒಬ್ಬ ಸಾಧಕ ನನ್ನನ್ನು ಕರೆದು ʻಎಲ್ಲಿಗೆ ಹೊಂಟಿರುವೆ ಫಕೀರ್‌ʼ ಎಂದು ಕೇಳಿದ. ನಾನು ನಡೆದ ಘಟನೆಯನ್ನೆಲ್ಲಾ ವಿವರವಾಗಿ ಹೇಳಿದೆ. ಅವರು ಮುಂದೊರೆದು ‘ಈಗ ಏನು ಮಾಡಬೇಕೆಂದಿರುವೆ? ಎಂದು ಕೇಳಿದರು. ನಡೆದಷ್ಟು ಹಾದಿ ಕಂಡಷ್ಟು ಬಯಲು ಅಂತ ಹೇಳಿದೆ. ಆರೂಢರು ಡಿಗ್ಗಿಯಲ್ಲಿರುವುದನ್ನು ಹೇಳಿ ‘ನನ್ನ ಹೆಸರು ಹೇಳುʼ ಅಂದರು. ಬೆಳಿಗ್ಗೆ ಎದ್ದು ಸೀದಾ ಡಿಗ್ಗಿಯ ಗುಡ್ಡಕ್ಕೆ ಬಂದೆ. ಆರೂಢರು ಧ್ಯಾನದಲ್ಲಿದ್ದರು. ಸ್ವಲ್ಪೊತ್ತಿನ ನಂತರ ಕಣ್ಣು ಬಿಟ್ಟು ನನ್ನ ನೋಡಿ ‘ಗುರು ಮನಿಯ ಕೀಲ ಗೊತ್ತಿಲ್ಲದ ಕಾಲವಿದು ಚಾಂದ್! ಈ ಕಾಲ ನಮ್ಮನ್ನು ಜತೆಯಾಗಿರಲು ಬಿಡುವುದಿಲ್ಲʼ ಎಂದು ದುಃಖಿಸಿದರು. ನಾನು ಕನಸಿನಲ್ಲಿ ಬಂದ ವಿಚಿತ್ರ ಸಾಧಕರ ವಿವರ ಕೊಟ್ಟೆ. ಆದರೂ [ನಗುತ್ತಾ] ಒಪ್ಪಲಿಲ್ಲ. ಬಹುಶಃ ಅದು ನನ್ನ ಮೇಲಿನ ಕಾಳಜಿಯೂ ಇರಬಹುದು. ಕೆಲವು ದಿನ ಇಲ್ಲಿಯೇ ಸೀತಾಫಲ, ನೀಲದ ಹಣ್ಣು ತಿಂದು ತಿರುಗಾಡುತ್ತಿದ್ದೆ. ಆಗ ಇವರು ನನ್ನನ್ನು ಕರೆದು ‘ಬಂದದ್ದು ಬರಲಿ ಸದ್ಗುರುವಿನ ದಯೇ ನಮಗಿರಲಿʼ ಎಂದು ನನ್ನನ್ನು ಒಪ್ಪಿಕೊಂಡು ತಮ್ಮ ನೆತ್ತಿಯ ಮೇಲೆ ಚಿಗರಿ ಕೊಂಬಿನಷ್ಟು ಜಾಗಕೊಟ್ಟು ಉಳಿಸಿಕೊಂಡರುʼ ಎಂದು ವಿವರವಾಗಿ ಹೇಳಿದ. ಇದೆಲ್ಲವನ್ನು ಕೇಳಿದ ರೇಣುಕಾಳ ಕಣ್ಣುಗಳೆಲ್ಲಾ ಕೆಂಪಾಗಿದ್ದವು. ʻಇರಲಿ ಚಾಂದ್‌! ನಿಮ್ಮಿಬ್ಬರ ಸ್ನೇಹ ಅಜರಾಮರವಾಗಿರಲಿ. ನಿಮ್ಮಿಂದ ಲೋಕ ಕಲಿಯಬೇಕಾದ್ದು ಭಾಳ್‌ ಅದ. ನಾನೀಗ ಶ್ರೀಶೈಲಕ್ಕೆ ಹೊಂಟಿರುವೆ. ರಾವುತ, ಗೊಲ್ಲಾಳ ಬರುತ್ತಿದ್ದಾರೆ. ನೀವೂ ಬರುವ ಹಾಗಿದ್ರೇ ಖಂಡಿತಾ ಬನ್ನಿʼ ಎಂದು ಹೋಗಲು ನಿಂತಳು. ಚಂದಾ ಹುಸೇನಿ ತನ್ನ ಹಸಿರು ಜೋಳಿಗೆಗೆ ಕೈಹಾಕಿ ನೀಲದ ಹಣ್ಣು ತೆಗೆದು ʻಎ ಫಲ್‌ ಲೆಲೋ ಬೆಹೆನ್ʼ ಎಂದು ಕೊಟ್ಟ. ಮುಗಳು ಮಾರಿಯಲ್ಲಿ ಇಸ್ಕೊಂಡು ಟೊಂಕಕ್ಕೆ ಕಟ್ಟಿದ್ದ ಚಿಗರಿ ಚರ್ಮದ ಚೀಲದಿಂದ

ಭಂಡಾರ ತೆಗೆದು ಹೆಬ್ಬೆಟ್ಟಿನಿಂದ ಚಂದಾ ಹುಸೇನಿ ಮತ್ತು ಸಂಗಮನಾಥನ ಹಣೆಗೆ ಹಚ್ಚಿ ಜೋರಾದ ಢೇಕರಕಿ ಹೊಡೆದು ʻಏಯ್ ತುರಂಗʼ ಎಂದಳು. ದಕ್ಷಿಣಕ್ಕೆ ಮುಖಮಾಡಿ ನಿಂತಿದ್ದ ಕುದರೆ ಮುಂಗಾಲುಗಳನ್ನು ಎತ್ತಿ ಮೂಡಣಕ್ಕೆ ಇಟ್ಟಿತು. ʻಹಯ್ಯಾಳದ ಹಾದೀಗಿ ಹತ್ತಾರು ಹುಣಸೆಯ ಮರ, ಹಾರಿ ಹೊಂಟಾಳ ರೇಣಕಾʼ ಎಂದು ಇಬ್ಬರೂ ದನಿಗೂಡಿಸಿ ಹಾಡಿ ಬೀಳ್ಕೊಟ್ಟರು. ಕುದರೆ ಹಿಂಗಾಲು ಹಾರಿಸಿ ಓಡುತ್ತಿದ್ದಾಗ ಅದರ ಬೋಳಾದ ತೊಡೆಯ ನರಗಳು ಚೇಳಿನಂತೆ ಕಾಣುತ್ತಿದ್ದವು.

ಹತ್ತಿಗೂಡೂರ ಎಡಕ್ಕೆ ಹೊರಳಿ ಹಯ್ಯಾಳಪ್ಪಗೂ ಭೆಟ್ಟಿಕೊಟ್ಟಳು. ಯಾದಗಿರಿ ಕೋಟೆಗಳನ್ನು ದಾಟಿದಳು. ಬಳಿಚಕ್ರ ಗುಡ್ಡಗಳನ್ನು ಏರಿಳಿದಳು. ಮೈಲಾಪೂರ ಗುಡ್ಡ ಮುಟ್ಟುವುದರೊಳಗೆ ಚಂದಿರ ಮುಳುಗಿ ಇನ್ನೇನು ಸೂರ್ಯ ಹೊರ ಬರಲು ತುದಿಗಾಲಿಲೇ ಕಾಯುವ ಹೊತ್ತಾಗಿತ್ತಾದರೂ ದಿವಟಿಗೆಗಳಿಗೇನೂ ಬರವಿರಲಿಲ್ಲ. ಕುದುರೆಯ ನಾತ ಹಿಡಿದ ಗೇಣುದ್ದ ಎದೆಯುಳ್ಳ ಒಂಭತ್ತು ನಾಯಿಗಳು ಎಡಕು ಹಾರಿಸಿ ಬೊಗಳುತ್ತಿದ್ದವು. ರೇಣುಕಾ ಢೇಕರಿಕಿ ಹೊಡೆದಾಗ ಒಮ್ಮಿಲೇ ನಿಶಬ್ದ.

ʻಹರ ಹರ ಮಾರ್ಥಾಂಡ. ಭೂಲೋಕ ಕಂಡ ಭೂಮಿಯ ಗಂಡ

ಯಾದಗಿರಿ ಮಲ್ಲ ಕೋತಿಗಿರಿ ಮಲ್ಲ ಶ್ರೀಶೈಲ ಮಲ್ಲ

ಮಲ್ಲಯ್ಯನಾಟ ನಿಂತಲ್ಲೇ ದಿವಟಿಗಿ ಕುಂತಲ್ಲೇ ದಿವಟಿಗಿ

ಭಂಡಾರ ಹಚ್ಚಿ ಬೂದಿಯ ತೂರ್ಯ್ಯಾನ ಏಳು ಕೋಟಿ ಏಳು ಕೋಟಿಗೆ!

ಎಂದು ಕಾರಣಿಕ ನುಡಿದಳು. ತುಂಬು ಕೋರೆ ಮೀಸೆಗಳು. ಭುಜಕ್ಕೆ ಹತ್ತಿದ್ದ ಚಿಕ್ಕ ಚಿಕ್ಕ ಜೆಡೆಗಳು. ಕಿವಿಯಲ್ಲಿ ಮುತ್ತಿನ ಬೆಂಡೋಲೆಗಳು. ಕೈಯಲ್ಲಿ ಗೂಳಿ ಮುಖದ ಖಡ್ಗ. ಬಲಗೈ ಬೆರಳಿಗೆ ಆಮೆ, ಹಾವು, ಹಂಸ, ಮೀನು, ಚೇಳಿನ ಮುಖದ ಉಂಗುರಗಳು ಹಾಕಿದ್ದ ಮೈಲಾರ ಗರ್ಭ ಗುಡಿಯಿಂದ ಹೊರಗಡೆ ಬಂದು ನೋಡಿದ. ರೇಣುಕಾ ಧೀರ್ಘವಾಗಿ ಉಸಿರಾಡುತ್ತಿದ್ದಳು. ಮೈಲಾರ ಒಮ್ಮಿಲೆ ʻಇದೇನು ತಂಗಿ!

ಇಷ್ಟೊಂದು ರೋಷಾವೇಶದಲ್ಲಿ ಬಂದಿರುವಿ.? ಏನಾಯ್ತು.?? ಗಾಬರಿಯಾಗಿ ಕೇಳಿದ. ʻಏಯ್ ತುರಂಗʼ ಎಂದಾಗ ಕುದುರೆಯು ಮುಂಗಾಲು ಮುಂದಕ್ಕೆ ಹಿಂಗಾಲು ಹಿಂದಕ್ಕೆ ಚಾಚಿ ನಡು ಬಗ್ಗಿಸಿತು. ಠಣ್ಣನೆ ಹಾರಿದ ರೇಣುಕಾ ಮೈಲಾರನ ತೆಕ್ಕಿಗೆ ಬಿದ್ದು ಐದತ್ತು ನಿಮಿಷ ಮತ್ತಷ್ಟು ಗಟ್ಟಿಯಾಗಿ ತಬ್ಬಿಕೊಂಡು ಅತ್ತಳು. ಆ ನಂತರ ಅವಳ ತೋಳುಗಳನ್ನು ಎರಡು ಕೈಯಿಂದ ಬಿಡಿಸಿ ಕಣ್ಣಿನ ನೀರನ್ನು ಒರೆಸುತ್ತಾ ʻಏನಾಯ್ತು ತಂಗಿ? ಕೇಳಿದ. ತುಸು ಹಿಂದಕ್ಕೆ ಸರಿದ ರೇಣುಕಾ ʻಹಂಗೇನೂ ಇಲ್ಲಣ್ಣ ಆ ಊರು ನನಗ ಸಾಕಾಗೆದ. ನಿನ್ನ ನೋಡಬೇಕು ಅನ್ನುವ ಹಂಬಲ ನನಗಾಗಿತ್ತು. ಅದಕ್ಕs ಓಡೋಡಿ ಬಂದೆ” ಎಂದಳು. ಅಂಥಾದ್ದೇನೂ ಘಟಿಸಿರಲಿಕ್ಕಿಲ್ಲವೆಂಬಂತೆ ಮತ್ತೊಮ್ಮೆ ಸವಕಾಸ ಉಸಿರು ಬಿಟ್ಟ ಮೈಲಾರ ʻಹುಚ್ಚಿ! ಭೂತಾಳಿ, ಜೆಟ್ಟೆಪ್ಪರ ಕೊರಳೊಳಗ ಭಂಡಾರ ಕಟ್ಟಿ ಕಳಿಸಿದ್ರ ನಾನs ಬರ್ತಿದ್ದೆ. ಹೋಗಲಿ ರಾವುತಗಾದ್ರೂ ಹೇಳಿದ್ರ, ಅವನರೆ ಬರ್ತಿದ್ದ. ಒಂಟಿ ಹೆಣ್ಮಗಳು, ತುರಂಗ ಬ್ಯಾರೆ ತೆಗ್ಗು ನೊಡಲ್ಲ ತೆವರು ನೋಡಲ್ಲ. ಸುಮ್‌ ಹಾರಗಲ್‌ ಬೀಳೋದಷ್ಟೇ ಅವನ ಕೆಲಸ. ಎಟ್‌ ಹೈರಾಣ ಅಗಿಯೋ ಏನೋʼ ಎಂದು ಗುಡಿ ಒಳಗೆ ಕರೆದುಕೊಂಡು ಹೋಗಿ ಜೋಳದ ಕಿಚಡ್ಯಾಗ ಕುದಿಸಿದ್ದ ಗಿಣ್ಣದ ಹಾಲು ಹಾಕಿ ಉಳ್ಳಾಕ ಕೊಟ್ಟ. ರೇಣುಕಾ ತಾನು ಯಾಕೆ ಬಂದೆ. ಶ್ರೀಶೈಲಕ್ಕೆ ಯಾಕೆ ಹೋಗ್ತಿದ್ದೀನೆಂದು ಎಲ್ಲವೂ ಹೇಳಬೇಕು ಅಂದುಕೊಂಡಳಾದರೂ ಮನಸು ಒಪ್ಪಲಿಲ್ಲ. ಸ್ವಲ್ಪ ವಿಶ್ರಾಂತಿ ಪಡಿದು ಎದ್ದವಳೇ ಮೈಲಾರನಿಗೆ ಕರೆದು ʻಅಣ್ಣ ನಾನು ಇಲ್ಲಿತನ ಬಂದೀನಿ. ಇಲ್ಲಿಂದ ಶ್ರೀಶೈಲೇನೂ ತೀರಾ ದೂರಿಲ್ಲ. ಹಂಗಾಗಿ ಹೋಗಿ ಬರ್ತೀನಿʼ ಅಂದಳು. ಅವಳ ಮಾತು ಕೇಳಿದ ಮೈಲಾರ ʻಏನ್‌ ತಂಗಿ ನೀನು! ಒಬ್ಳೆ ಹೋಗೋದು ಬ್ಯಾಡ. ನಾನೂ ಸಂಗಾಟ ಬರ್ತೀನಿʼ ಅಂದಾಗ, ರೇಣುಕಾಳಿಗೆ ಖುಷಿಯಾಯಿತು. ʻಇವನಿಗೆ ಹೇಳುವುದಕ್ಕಿಂತ ಇಲ್ಲಿಗ್ಯಾಕೆ ಬಂದೆ ಎನ್ನುವುದು ಕುದ್ದು ತೋರಿಸಿದರಾಯ್ತುʼ ಎಂದು ಮನಸೊಳಗೆ ಅಂದುಕೊಳ್ತಾ ಕುದುರೆಯನ್ನು ತಯಾರಿ ಮಾಡಿದಳು. ಮೈಲಾರ ನಾಯಿಗಳಿಗೆ ಕೂಳಾಕಿ, ಯಾವಾಗಲೂ ಜೋಡಿಲೇ ಇರುತ್ತಿದ್ದ ಮಾಳ, ಭೀರ ಎನ್ನುವ ನಾಯಿಗಳ ಕೊರಳೊಳಗೆ ಒಳ್ಳೆಣ್ಣಿಯ ಡಬ್ಬಿ ಕಟ್ಟಿದ.

ಗೋಧೂಳಿಯ ಸಮಯವಾಗಿತ್ತು. ನಲ್ಲಮಲೈ ಪರ್ವತಗಳನ್ನು ಏರಿ ದಟ್ಟ ಕಾಡಿನಲ್ಲಿ ಮೈಲಾರ ರೇಣುಕಾ ನಡಿಯುತ್ತಾ ಹೋಗುತ್ತಿದ್ದರು. ಆ ಕಡೆಯಿಂದ ಮೊಲವೊಂದು ಮುಂದಾಯ್ದು ಓಡಿದಾಗ, ಗೇಣುದ್ದ ಎದೆಯ ನಾಯಿಗಳು ಒಂದೇ ಜಿಗಿತ್ತಕ್ಕೆ ಹಂಬರಿಸಿ ಹಿಡಿದು ಜಗಳಾಡಿ ತುಂಡು ತುಂಡು ಕತ್ತರಿಸಿ ಕಂಟಿಮರಿಗೆ ತಿನ್ನುತ್ತಿದ್ದವು. ಓಡೋಗಿ ಎರಡು ತುಂಡುಗಳನ್ನು ಬಿಡಿಸಿಕೊಂಡ ಮೈಲಾರ ಮಾಳ, ಭೀರ ಎನ್ನುವ ನಾಯಿಗಳಿಗೆ ಹಾಕಿದ. ಕುದರೆಯು ಹಸಿರು ಕಂಡಲ್ಲಿ ಮೇಯುತ್ತಿತ್ತು. ರೇಣುಕಾ ಹಿಂದುರುಗಿ ನೋಡಲು ಕಾಣದ್ದಕ್ಕಾಗಿ ‘ಏಯ್ ತುರಂಗʼ ಅಂತ ಕೂಗಿದ್ರೆ ಕ್ಷಣಮಾತ್ರದಲ್ಲಿ ಹಾಜರಿ. ರೇಣುಕಾಳು ʻಅಣ್ಣ ಇಲ್ಲಿಂದ ಹೋದಮ್ಯಾಲ ನೀನು ಮದುವೆ ಆಗಲೇಬೇಕುʼ ಎಂದು ಅವನ ಕೈ ಹಿಡಿದು ಕೇಳಿದಳು. ಅಮವಾಸೆಯ ವಾಸನೆ ಇನ್ನೂ ಆರದೆ ಸಂಪೂರ್ಣ ಕತ್ತಲು ಆವರಿಸಿ ನಾಯಿಗಳು ಕಾಲ ಕಾಲಾಗ ಬರುತ್ತಿದ್ದವು. ಅರುವೆಯನ್ನು ಬೆತ್ತಕ್ಕೆ ಸುತ್ತಿ ಭೀರನ ಕೊರಳೊಳಗಿನ ಎಣ್ಣೆ ಡಬ್ಬಿಬಿಚ್ಚಿ ದಿವಟಿಗೆ ಹಚ್ಚಿದವನೇ ʻನಿನ್ನ ಮಾತು ಖರೇ ಐತಿ ತಂಗಿ. ಆದರ ನನಗಿಂತ ಸಣ್ಣವಳಾದ ನಿನ್ನ ಮದುವೆ ಮಾಡ್ದೆ ನಾನಾದೆ ಅಂದ್ರ, ದೇವಲೋಕ ಭೂಲೋಕ ನಗತಾವ. ಮತ್ತs ಮೇಲಾಗಿ ಆ ತಿರುಪತಿ ತಿಮ್ಮಪ್ಪಗ ಕೊಡಬೇಕಾದ ಸಾಲ ಇನ್ನೂ ಹಂಗs ಉಳಿದೈತಿ. ಇವೆರಡು ಆದಮ್ಯಾಲ ಮುಂದೆ ನೋಡಿದ್ರಾತು ಬಿಡುʼ ಎಂದು ತಂಗಿಯ ಮಾತಿಗೆ ಉತ್ತರಿಸಿದ. ಕುದರೆ ಕಾಲಿನ ಸಪ್ಪಳ ತುಸು ನಿಂತಂತೆ ಅನ್ನಿಸಿದರೂ ʻಹೆಂಗೂ ಬಂದೇ ಬರ್ತಾನೆಂದುʼ ಈ ಸಲ ಕೂಗುವುದೇ ಬಿಟ್ಟಳು ರೇಣುಕಾ. ಹೀಗೆ ನಾವೊಂದು ತಾವೊಂದು ಅಂತ ಮಾತಾಡ್ತಾ ಸಾಗುತ್ತಿದ್ದಾಗ, ಏಕಾಏಕಿ ನಾಯಿಗಳು ಒಮ್ಮಿಲೇ ಅಳುವ ದನಿಯಲಿ ಕೂಗುತ್ತಿದ್ದವು. ರೇಣುಕಾ ʻಏಯ್ ತುರಂಗʼ ಎಂದು ಕರೆದರೂ ಕುದುರೆ ಬರಲೇ ಇಲ್ಲ. ಸ್ವಲ್ಪೊತ್ತಾದ ನಂತರ ಕುದರೆ ತಿಣುಕುವ ದ್ವನಿ ಕೇಳಿ ಬರುತ್ತಿತ್ತು. ರೇಣುಕಾ ಗಾಬರಿಯಾಗಿ ʻಅಣ್ಣ! ತುರಂಗ ಒಂದೇ ಮಾತಿಗೆ ಓಡಿ ಬರೋನು. ನಾಯಿ ಬೇರೆ ಬೊಗುಳಾಕತ್ತಾವ. ಹುಲಿ, ಚಿರತೆ, ಸಿಂಹಗಳು ತುರಂಗನ ಮ್ಯಾಲ ದಾಳಿ ಮಾಡಿದ್ಹಂಗ್ ಕಾಣ್ತಾವ. ತುಸು ಹಿಂದಕ್ಕೆ ಹೋಗೋಣ ನಡಿʼ ಎಂದಳು. ಟೊಂಕಕ್ಕೆ ಕಟ್ಟಿಕೊಂಡಿದ್ದ ಸರಪಳಿ ಬಿಚ್ಚಿ ಕೈಗೆ ಸುತ್ತಿಕೊಂಡು ನಾಯಿಗಳನ್ನು ಕೂಗಿದ.

ಮಾಳನ ಕೊರಳೊಳಗೆ ಕಟ್ಟಿದ್ದ ಎಣ್ಣೆಡಬ್ಬಿ ಬಿಚ್ಚಿ ಹಗುರ ಮಾಡಿದ. ಇಬ್ಬರೂ ಹೋಗುವಷ್ಟೊತ್ತಿಗೆ ಹೆಣ್ಣು ಹುಲಿಯೊಂದು ಕುದುರೆಯ ಕಿವಿಮಡ್ಡಿಗೆ ಹಿಡಿದಿತ್ತು. ಇನ್ನುಳಿದ ಹುಲಿಗಳು ನಿಂತು ನೋಡುತ್ತಿದ್ದವು. ಒಮ್ಮಿಲೇ ಸುತ್ತುವರೆದ ನಾಯಿಗಳು ಹುಲಿಗಳನ್ನು ತಿಕ್ಕಿ ಬರಲು ಓಡಿದವು. ಮಾಳ, ಭೀರ ಎನ್ನುವ ನಾಯಿಗಳು ಕಿವಿಮಡ್ಟಿಗೆ ಹಿಡಿದಿದ್ದ ಹುಲಿಯ ಎದೆಗೆ ಬಾಯಿ ಹಾಕಿ ಕಡೆಯುತ್ತಿದ್ದವು. ಮೈಲಾರ ಹುಲಿಯ ಬಾಯಿಗೆ ಕೈ ಹಾಕಿ ಜಗ್ಗಿ ಕಿವಿಯಿಂದ ಬಿಡಿಸಿ ಎತ್ತಿ ಒಗೆದ. ಹರಿದ ತೊಡೆಗುಂಟ ಹುಲಿ ಸತ್ತೆನೆಂಬಂತೆ ಓಡಿತು. ಕುದುರೆಯ ಕಿವಿ ಹರಿದು ಬಿಳಿಮಾಂಸ ಕಾಣುತ್ತಿತ್ತು. ಕಾಡೆಲ್ಲಾ ತಿರುಗಿದ ಮೈಲಾರ, ತುರುಬಿ ತಪ್ಪಲು ತಂದು ಸಣ್ಣಾಗಿ ಕುಟ್ಟಿ ತನ್ನ ರೂಮಾಲಿನ ತುದಿ ಹರಿದು ಅದರೊಳಗೆ ಹಾಕಿ ಕಟ್ಟಿದ. ತನ್ನ ತುರಂಗನಿಗೆ ಹೀಗಾಯ್ತಲ್ಲಾ ಎಂದು ರೇಣುಕಾ ಕಣ್ಣೀರು ಹೊರಬಿಡದೇ ಅತ್ತಳು. ಒಂದಷ್ಟು ಮೈ ಆರಿಸಿಕೊಂಡು ನಡೆಯುವಾಗ ಸವರಾತ್ರಿಯಾಗಿತ್ತು. ಕುದುರೆ ಕಾಲಿನ ಸಪ್ಪಳ, ನಾಯಿಗಳ ಉಸಿರಾಟ ಹೊರತು ಪಡಿಸಿ ಇಡೀ ಕಾಡಿಗೆ ಕಾಡೇ ನೀರವ ಮೌನ ಆವರಿಸಿತ್ತು. ಮೂಡಣ ದಿಕ್ಕಿನಲ್ಲಿ ಹೆಣ್ಣಿನ ಕಂಠದಿಂದ ʻಅಕ್ಕ ಕೇಳವ್ವ ನಾನೊಂದು ಕನಸ ಕಂಡೆ, ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನʼ ಎನ್ನುವ ಹಾಡು ಇಂಪಾಗಿ ಕೇಳಿಬಂತು. ತಕ್ಷಣಕ್ಕೆ ಮೈಲಾರ ಎಡವಿ ಕೆಳಗಡೆ ಬಿದ್ದ. ದಿವಟಿಗೆ ಎರಡು ಹೆಜ್ಜೆ ಮುಂದೋಗಿ ಟುಸ್ಸೆಂದು ಆರಿತು. ರೇಣುಕಾ ʻಅಣ್ಣಾ ನೋಡಿ ನಡಿಬಾರದಾʼ ಎಂದು ಅವನ ತೋಳಿಡಿದು ಎಬ್ಬಿಸಿದಳು. ʻತಂಗಿ ನೀನು ಇಲ್ಲಿಯೇ ನಿಲ್ಲು. ನಾನು ತುಸು ಈ ಕಡೆ ಹೋಗಿ ಬರ್ತೀನಿʼ ಎಂದು ಹೌಹಾರಿ ಓಡಲು ಸುರುಮಾಡಿದ. ಅವನ ಹಿಂದೆ ನಾಯಿಗಳೂ ಕಾಲು ಕಿತ್ತಿದವು. ʻಅಣ್ಣಾ…! ಓ ಅಣ್ಣಾ….! ನಿಲ್ಲೋ… ನಾನು ಬರ್ತೀನಿʼ ಅಂದಳು. ಬಿದ್ದಿರುವ ದಿವಟಿಗೆ ನೋಡಿ ಮತ್ತೆ ʻಅಣ್ಣಾ! ಹುಳಾ ಉಪ್ಪಡಿ ಅದಾವು, ಈ ದಿವಿಟಿಗರೆ ತೋಂಡು ಹೋಗುʼ ಎಂದು ಮತ್ತೊಮ್ಮೆ ಜೋರಾಗಿ ಕೂಗಿದಳು. ʻಬ್ಯಾಡ ತಂಗಿ! ಮನಸಿನ ಹಂಬಲದಿಂದ ಹೋಗಾಕತ್ತೀನಿ. ಬೆಳಕಿನ ಹಂಗ್ಯಾಕ…? ಅಂದ. ರೇಣುಕಾಳಿಗೆ ಒಮ್ಮಿಲೇ ಭಯವಾದಂತಾಗಿ ʻಅಣ್ಣಾ ಈ ದಟ್ಟವಾದ ಕಾಡಿನೊಳಗ ನನ್ನೊಬ್ಬಳನ್ನೇ ಬಿಟ್ಟು ಹೋಗ್ಬ್ಯಾಡಪೋ! ಹುಲಿಗಿ ಈಗಾಗಲೇ ಹಲ್ಲು ಸಿಹಿ

ಹತ್ತ್ಯಾದಪ್ಪೋ!!ʼ ಎಂದು ಚೀರಿ ಮೊಳಕಾಲು ನೆಲಕಚ್ಚಿ ಕುಳಿತಳು. ಹಂಗs ಓಡುತ್ತಲೇ ಇದ್ದ ಮೈಲಾರ, ಓಟದ ರಭಸದಲ್ಲಿ ಒಡೆದ ದನಿಯಲ್ಲಿಯೇ ʻನೋಡು ತಂಗಿ ನಿನ್ನದು ನಿರಂತರ ನಡಿಗೆ. ನನ್ನದು ಕಾಲದ ಕಾಯುವಿಕೆʼ ಎಂದ. ಇವನು ಬರುವುದೇ ಇಲ್ಲವೆನ್ನುವುದು ಖಾತ್ರಿ ಮಾಡಿಕೊಂಡ ರೇಣುಕಾ, ದುಃಖ ಹತಾಸೆ ಸಿಟ್ಟು ಒಂದುಮಾಡಿ ʻಓಡು…! ಓಡಣ್ಣ….! ಎಷ್ಟೇ ಓಡಿದರೂ ನಿನ್ನದು ಪೂರಾಣದ ಓಟವೇ ಹೊರತು; ಚರಿತ್ರೆಯ ನಡಿಗೆಯಲ್ಲ ಎನ್ನುವುದು ಖಬರು ಇರಲಿʼ ಎಂದು ಜೋರಾಗಿ ನಕ್ಕಳು. ಮತ್ತೊಮ್ಮೆ ದ್ವನಿ ಬದಲಿಸಿ ಅಷ್ಟೇ ಏರಿಳಿತದಲ್ಲಿ ಅತ್ತಳು. ಸಿಟ್ಟಿನಿಂದ ʻಹೆಯ್‌ ತುರಂಗʼ ಎಂದು ಹೊದರಿದಳು. ಕುದರೆ ಬಂದು ನಿಂತಿತು. ಸೆರಗಿನಲ್ಲಿ ಮುಚ್ಚಿದ್ದ ಕವಡೆ ಸರವನ್ನು ತೆಗೆದು ಹೊರಗೆ ಹಾಕಿ ಬೆಳಕು ಮಾಡಿಕೊಂಡಳು. ಪಶ್ಚಿಮಕ್ಕೆ ಹಿಂದಿರುಗಿ ನಡೆಯುವಾಗ ಕುದುರೆ ಕಾಲಿನ ಸಪ್ಪಳ ರಭಸವಾಗಿ ಕೇಳುತ್ತಿತ್ತು, ಮೂಡಣಕ್ಕೆ ಓಡುತ್ತಿದ್ದ ಮೈಲಾರನ ಗಡ್ಡಿ ಮೆಟ್ಟಿನ ಸಪ್ಪಳ ಧಮ್ಮಿಗೆ ಬಂದು ನಿಂತಿತ್ತು. ತಾಸೊತ್ತಿನ ನಂತರ ಅವರು ಅಗಲಿದ ಜಾಗಕ್ಕೆ ಬಂದ ನರಿ ತೋಳಗಳು ಬಿದ್ದಿದ್ದ ದಿವಟಿಗೆ ಮೂಸಿ ನೋಡಿ ʻಇಲ್ಲ್ಯಾರ ಬಿದ್ದೋಗ್ಯಾರ, ಕಾಡಿನ ಸುತ್ತ ಎಣ್ಣೆಲ್ಲಾ ಚೆಲ್ಲ್ಯಾಡೆರʼ ಎಂದು ಹಾಡುತ್ತಿದ್ದವು……

 

ಸಂಗನಗೌಡ ಹಿರೇಗೌಡ

ಸಂಗನಗೌಡ ಹಿರೇಗೌಡ ಅವರು ಮೂಲತಃ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಅಂಬರಖೇಡದವರು. ಸದ್ಯ ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ‘ತತ್ವಪದಗಳ ಕಾವ್ಯ ಮೀಮಾಂಸೆ’ ವಿಚಾರದಲ್ಲಿ ಸಂಶೋಧನ ಕೈಗೊಂಡಿದ್ದಾರೆ. ಓದು, ಬರವಣಿಗೆ ಇವರ ಹವ್ಯಾಸ

More About Author