Poem

ಉತ್ತರವೆಲ್ಲಿದೆ ಹೇಳಿ...

ಉತ್ತರವೆಲ್ಲಿದೆ ಹೇಳಿ ಈ ಪ್ರಶ್ನೆಗೆ
ಸುಮ್ಮನೆ ನೋಡುತ್ತಿದ್ದೇನೆ ಹೀಗೆ
ಹಾಗಾದರೆ ಹೇಗೆ
ಅವರಿವರ ಮನೆಯ ಮೇಲೆ ಹಾರಾಡುತ್ತಿದೆ ಕಾಗೆ
ಹಸಿವಿನ ಬಣ್ಣ ಕಂಡವರಿಲ್ಲ
ಉಸಿರಿಗೆ ಹೆಸರ ಕೊಟ್ಟವರಿಲ್ಲ
ಎಲ್ಲರೂ ನಡೆಯುತ್ತಿದ್ದೇವೆ
ಎಡವುತ್ತಿದ್ದೇವೆ
ಅವರಿವರ ಕಂಡು ನಗುತ್ತಿದ್ದೇವೆ
ನಮ್ಮ ನೆಮ್ಮದಿಗೆ ಅವರ ಅಪ್ಪಣೆ ಕೇಳಿ
ಕೆರಳುತ್ತಿದ್ದೇವೆ, ಕೊರಗುತ್ತಿದ್ದೇವೆ
ಆಗಸದ ಅಂಚಿಗೆ ಎಸೆದ ಚಪ್ಪಲಿ ಚೂರು
ಮತ್ತೆ ಬೆನ್ನಟ್ಟಿದೆ ಈಗ
ಅವರಿಗೆ ಅವರದ್ದೇ ಬದುಕು
ಬಣ್ಣವಾಗಿದೆ
ಹಿಡಿಶಾಪ ಹಾಕುತ್ತಾ ನಡೆಯುತ್ತಿದೆ ನೋಟ
ಯಾರ ಕೂಗಿಗೆ ಯಾವ ಸೋಗಿನ ಆಟ
ಅಂಟಿಕೊಂಡೇ ಕೊರೆವ ಈ ಪ್ರಶ್ನೆಗೆ
ಉತ್ತರವೆಲ್ಲಿದೆ ಹೇಳಿ


ಕುದಿಯುತ್ತಿದೆ ಯುವ ರಕ್ತ
ಕೆರಳುತ್ತಿದೆ ಕಣ್ಣು
ಯಾರ ಆಸೆ, ಯಾವ ಭಾಷೆ
ಬಸವಳಿದಿದೆ ಮಣ್ಣು
ಬಾ ನಿಂತು ನೋಡು ನಿನ್ನ ತಾಯಿ ಅಳುವುದನ್ನ
ಕಂದನಿರಿದ ಗಾಯದಿಂದ ಬಿರಿದು ನಗುವುದನ್ನ
ಅನ್ನ ಕೊಟ್ಟು ಆಸೆ ಇಟ್ಟು
ಬಿಡಿಗಾಸಿನ ಮೋಹ ಬಿಟ್ಟು
ಬಿಡದೆ ಕೆಡವುದಲ್ಲ ನನ್ನ
ಹೊಸ ಕನ್ನಡಿ ಬಸಿರು
ಯಾರು ನೀನು ಯಾರು ನಾನು
ಅಮ್ಮನೊಡಲ ನಗುವೆ
ದೇವರೆದೆಯ ದೀಪದುರಿಗೆ
ಕತ್ತಲಾಯ್ತು ಜಗವು
ಹೊಸ ಆಸರೆ ಅಕ್ಷರಕೆ
ಹೊಸ ಚೇತನ ನಲ್ನುಡಿಗೆ
ಹೊಸತೆಲ್ಲವು ಹಳತಾಗಿದೆ
ಯಾರು ಧಾಳಿಕೋರ
ಎದರು ನಿಂತು ಸಿಕ್ಕನೋಡು
ಮತಿಸೊ ಮೋಡಿಗಾರ
ಕೇಳುತಿರುವೆ ಹೇಳಿಬಿಡು ಉತ್ತರವಿದೆ ಎಲ್ಲಿ


ಅವನು ಬರನು ಇವನೂ ಕೂಡ
ನಾಳೆ ನೀನು ಮಾತ್ರ
ಹರೆಯದುರುಪು ಹರಿದ ಮೇಲೆ
ನೀ ಹುಡುಕಬೇಕು ಸೂತ್ರ
ಅನ್ನಕಿಲ್ಲದಾಗ ಹಸಿವು ಮೇಲೆ ಏರುತಿತ್ತು
ಅಗಳು ಕೊಡದ ಯಾವ ಕೈಯ್ಯಿ
ಎಣಿಸಿದೆ ಹೊಸ ನೋಟು
ನಾಳೆ ನೀನು ನಿಲ್ಲಬೇಕು ಅವರ ಮಕ್ಕಳಂತೆ
ಎಲ್ಲ ಒಳಗೆ ಬರಿಯ ಮಾತು
ಗೆಲ್ಲಬೇಕು ನಿಂತ ನೇರ ಬೇಕೆ ಎಡಬಲಗಳ ಚಿಂತೆ
ಅಕ್ಷರಕ್ಕೆ ಅಂಟಿಸಿಟ್ಟ ಹೊಸ ಬಣ್ಣದ ಓಕುಳಿ
ಬಣ್ಣ ಬಣ್ಣವಾಯ್ತು ಲೋಕ ಯಾವ ಬಣ್ಣ ಮೆಚ್ಚಲಿ
ಅವನು ನನ್ನ ಗೆಳೆಯನೇನೆ ಇವಳು ಕೂಡ ಹಾಗೇ
ಅನ್ನ ಬೆರೆಸಿಕೊಟ್ಟ ಅವರ ಅಮ್ಮ ಕೂಡ ತಾಯಿಯೆ
ಬದಲಾಗದ ಜನರ ನಡುವೆ ಉಪದೇಶಕೆ ನಿಲ್ಲೆನು
ನನ್ನ ನಾನು ನೋಡಿಕೊಂಡು ಈ ಹಾದಿಗೇ ನಡೆವೆನು
ಬನ್ನಿ ನನ್ನ ಜೊತೆಗೆ ನೀವು ಎಂದು ಎಂದೂ ಕರೆಯೆನು
ಉಚಿತವಾಗಿ ಸಲಹೆ ಕೊಟ್ಟು ಲೋಕ ಡೊಂಕ ತಿದ್ದೆನು
ಇರುವ ಅರಿವ ನನಗೆ ಮಾತ್ರ ಹೇಳಲ್ಯಾರು ಕೇಳ್ವರು
ನಿನಗೆ ನೀನೇ ನಾಯಕನು ಎದ್ದು ನಿಲ್ಲು ಸೋತರು
ದೀಪ ಸುಡುತಲಿತ್ತು ತನ್ನೇ ಯಾರ ಗೊಡವೆ ಬಂದರು

ಉತ್ತರ ಬೇಕದು ಯಾಕೆ
ಉತ್ತರ ಪ್ರಶ್ನಿಸೆ ಜೋಕೆ

- ಸರ್ವೇಶ್ ಬಂಟಹಳ್ಳಿ

ಸರ್ವೇಶ್ ಬಂಟಹಳ್ಳಿ

ಸರ್ವೇಶ್ ಬಂಟಹಳ್ಳಿ ಅವರು ಕನ್ನಡ ಅಧ್ಯಾಪಕರಾಗಿ ವೃತ್ತಿನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಿಂದ ಕವಿ, ಹವ್ಯಾಸಿ ಫೋಟೋಗ್ರಫರ್, ಭಾವಗೀತೆಗಳ ಗಾಯಕ. ಎನ್.ಸಿ.ಸಿ. ಅಧಿಕಾರಿ. ಕವಿತೆ, ಕಥೆ, ಲಲಿತ ಪ್ರಬಂಧ, ಅಂಕಣ ಬರಹ ಆಸಕ್ತಿಯ ಕ್ಷೇತ್ರ. ಕೃತಿಗಳು : ಭಾವಸಿರಿ

More About Author