Poem

ವಿಶ್ವಕುಟುಂಬಿ

ದೇವನಲ್ಲಿ ಬೆಳಕಿನ ಲೋಕಗಳಿವೆಯಂತೆ;
ಅಲ್ಲಿ ಪರಂಜ್ಯೋತಿ ಬೆಳಗುತಿದೆಯಂತೆ:
ಅವನೆಲ್ಲ ಕಾಣಲಿಲ್ಲ ನಾನು.
ಮುನ್ನೀರಿನಾಳದಲಿ ಹವಳ-ಮುತ್ತಿವೆಯಂತೆ,
ಬಣ್ಣ ಒಣ್ಣದ ಪಡುಶಿಲೆಗಳಿವೆಯಂತೆ:
ಆವನೆಲ್ಲ ಪಡೆಯಲಿಲ್ಲ ನಾನು.
ಕು೦ಗನು ಬಲ್ಲನು ಹಸಿರ ಕೆಳಗಣ ಕತ್ತಲೆ-ಬೆಳಕನು!
ಅನುಭಾವಿಗಳಿಗೆ ವಿದಿತವಲ್ಲವೆ ಬೆಳಕಿನ ಬಳ್ಳಿಗಳು?

ಆದರೆ ಹೃದಯ-ಹೃದಯದಲಿದ್ದ ದೇವನನ್ನು ತಿಳಿಯೆ ಬಯಸಿದಂತೆ
ಸಮುದ್ರದ ಬಣ್ಣಬಣ್ಣದಲ್ಲಿ ತರಂಗ-ತರಂಗದಲ್ಲಿ ಕಂಡೆ
ಹೊಸದೊಂದು ವಿಲಾಸವನು:
ಇಲ್ಲಿಯ ಮೂಡು-ಮುಳುಗುಗಳಲ್ಲಿ ಕಂಡೆ
ಮುನ್ನೀರ ಒಳಗುಹೊರಗನು.
ಖಂಡಖಂಡಗಳನ್ನು ಹೊಂದಿಸಿ, ತನ್ನೆದೆಯ ಮೇಲೆ
ಜಾತಿಜಾತಿಯ ಮಾನವರನು ತೇಲಿಬಿಟ್ಟು
ವಿಶ್ವಕುಟುಂಬಿಯಾದ ಪಾಂಗಿನಲಿ ಕಂಡೆ,-
ಅದರ ದೈವಿಕತೆಯನು!

ಈ ಕವಿತೆಯನ್ನು ವಿ. ಕೃ ಗೋಕಾಕ ಅವರ ‘ಸಮುದ್ರಗೀತೆಗಳು’ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.

ವಿ.ಕೃ. ಗೋಕಾಕ (ವಿನಾಯಕ)

‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕ್ ಅವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕರ್ನಾಟಕದಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ವ್ಯಕ್ತಿ ಗೋಕಾಕ್ ಅವರು. ಭಾರತದಲ್ಲಿಯೇ ಅತ್ಯಂತ ಪ್ರತಿಷ್ಠಿತ ಲೇಖಕ-ಸಾಹಿತಿ ಅವರಾಗಿದ್ದರು. ಧಾರವಾಡ ಜಿಲ್ಲೆಯ (ಈಗಿನ ಹಾವೇರಿ) ಸವಣೂರಿನಲ್ಲಿ 1909ರ ಆಗಸ್ಟ್ 9ರಂದು ಜನಿಸಿದರು. ತಂದೆ ಕೃಷ್ಣರಾಯ ತಾಯಿ ಸುಂದರಮ್ಮ. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ಪುಣೆಯ ಫರ್ಗ್ಯೂಸನ್  ಕಾಲೇಜಿನಲ್ಲಿ ಅನಂತರ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು.

ಉನ್ನತ ಶಿಕ್ಷಣ ಪಡೆದು ವಿದೇಶದಿಂದ ಬಂದ ಮೇಲೆ ಸಾಂಗ್ಲಿಯ ವಿಲ್ಲಿಂಗ್‍ಟನ್ ಕಾಲೇಜಿನಲ್ಲಿ, ಅನಂತರ ಕೊಲ್ಲಾಪುರದ ರಾಜಾರಾಮ್ ಕಾಲೇಜಿನಲ್ಲಿ, ಧಾರವಾಡದ ಕನಾಟಕ ಕಾಲೇಜಿನಲ್ಲಿ (1952) ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ (1966) ಗಳಾಗಿ ಮತ್ತು ಸಿಮ್ಲಾದ ಇನ್ಸ್ಟಿಟ್ಯೂಟ್ ಆಫ್ ಸ್ಟಡೀಸ್ ನಿರ್ದೇಶಕ (1970) ಆಗಿ ಕಾರ್ಯ ನಿರ್ವಹಿಸಿದ್ದರು.

ಆಂಧ್ರದ ಪುಟ್ಟಪರ್ತಿಯ ಸತ್ಯಸಾಯಿ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಗೋಕಾಕರು, ಪಿ. ಇ. ಎನ್. ಅಧಿವೇಶನಕ್ಕೆ ಜಪಾನಿಗೆ ತೆರಳಿದರು. ಬೆಲ್ಜಿಯಂನಲ್ಲಿ ಕವಿ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಜ್ಞಾನಪೀಠ ಪ್ರಶಸ್ತಿಯೂ ಸೇರಿದಂತೆ ಗೋಕಾಕರಿಗೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ. ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ (1958), ಅಮೆರಿಕಾದ ಫೆಸಿಫಿಕ್ ವಿಶ್ವವಿದ್ಯಾಲಯ, ಕರ್ನಾಟಕ, ಮೈಸೂರು, ಬೆಂಗಳೂರು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಗಳನ್ನು ನೀಡಿವೆ. ಪರಿಷತ್ತು ಬಳ್ಳಾರಿಯಲ್ಲಿ ನಡೆದ 40ನೇ ಕನ್ನಡ ಸಾಹಿತ್ಯ ಸಮ್ಮೇಳನ (1958) ಅಧ್ಯಕ್ಷ ಪದವಿಗೆ ಆಯ್ಕೆ ಮಾಡಿ ಗೌರವಿಸಿದೆ. ದ್ಯಾವಾ ಪೃಥಿವಿ ಖಂಡಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಭಾಷಾ ಆಯೋಗದ ಅಧ್ಯಕ್ಷರಾಗಿ ಸಲ್ಲಿಸಿದ ಗೋಕಾಕ ವರದಿ ಕರ್ನಾಟಕದಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿತು ಅರವಿಂದ ಭಕ್ತರೂ, ಬೇಂದ್ರೆ ಆರಾಧಕರೂ ಆಗಿದ್ದ ಗೋಕಾಕರು 1992ರ ಏಪ್ರಿಲ್ 28ರಂದು ಮುಂಬಯಿಯಲ್ಲಿ ನಿಧನರಾದರು

1ಸಮರಸವೇ ಜೀವನ (ಇಜ್ಜೋಡು) ಬೃಹತ್ ಕಾದಂಬರಿ, ನವ್ಯತೆ ಹಾಗೂ ಕಾವ್ಯ ಜೀವನ, ವಿಶ್ವಮಾನವ ದೃಷ್ಟಿ, ಸೌಂದರ್ಯಮೀಮಾಂಸೆ, ಆಂಗ್ಲ ಸಾಹಿತ್ಯಕ್ಕೆ ನೀಡಿದ ಸ್ಫೂರ್ತಿ ಇತ್ಯಾದಿ ವಿಮರ್ಶಾಗ್ರಂಥಗಳು, ಜನನಾಯಕ, ವಿಮರ್ಶಕ ವೈದ್ಯ, ಯುಗಾಂತರ, ಮುಂತಾದ ನಾಟಕಗಳು ಇವರಿಂದ ರಚಿತವಾಗಿವೆ.

ಕೃತಿಗಳು; ಕಲೋಪಸಾಕ, ಪಯಣ, ತ್ರಿವಿಕ್ರಮರ ಅಕಾಶಗಂಗೆ, ಅಭ್ಯುದಯ, ವಿನಾಯಕರ ಸುನೀತಗಳು, ನವ್ಯ ಕವಿತಗಳು, ಉಗಮ, ದ್ಯಾವಪೃಥಿವೀ,ಊರ್ಣನಾಭ, ಕಾಶ್ಮೀರ, ಚಿಂತನ, ಇಂದಲ್ಲ ನಾಳೆ, ತ್ರಿಶಂಕುವಿನ ಪ್ರಜ್ಞಾ ಪ್ರಭಾತ, ಪುಣ್ಯಭೂಮಿ, ಬಾಳದೇಗುಲದಲ್ಲಿ, ಸಮುದ್ರಗೀತೆಗಳು, ಭಾವರಾಗ, ಹಿಗ್ಗು, ಸಿಮ್ಲಾಸಿಂಫನಿ,ಭಾಗವತ ನಿಮಿಷಗಳು, ಕೊನೆಯ ದಿನ, ಸೆಳೆವು, ಸಸ್ಯ ಸೃಷ್ಟಿ ಪಾರಿಜಾತದಡಿಯಲ್ಲಿ (ಕವನ ಸಂಕಲನಗಳು) ಭಾರತ ಸಿಂಧು ರಶ್ಮಿ (ಮಹಾಕಾವ್ಯ) ನವಧ್ವನಿ (ಸಂಪಾದನೆ) ಜನನಾಯಕ, ಯುಗಾಂತರ, ವಿಮರ್ಶಕ ವೈದ್ಯ, ಮುನಿದ ಮಾರಿ (ನಾಟಕಗಳು) ಚೆಲುವಿನ ನಿಲುವು, ಜೀವನ ಪಾಠಗಳು (ಪ್ರಭಂದ) ಸಮರಸವೇ ಜೀವನ (ಕಾದಂಬರಿ) ಕವಿಕಾವ್ಯ ಮಹೋನ್ನತಿ, ನವ್ಯತೆ ಹಾಗು ಕಾವ್ಯ ಜೀವನ, ಸಾಹಿತ್ಯದಲ್ಲಿ ಪ್ರಗತಿ, ಇಂದಿನ ಕನ್ನಡ ಕಾವ್ಯದ ಗೊತ್ತು ಗುರಿಗಳು, ಕಲೆಯ ನೆಲೆ (ವಿಮರ್ಶೆಗಳು) ಸಮುದ್ರಾಚೆಯಿಂದ, ಸಮುದ್ರದೀಚೆಯಿಂದ, ಪಯಣಿಗ (ಪ್ರಾವಾಸ ಕಥನ).

More About Author