Poem

ಯಾವುದೂ ಈ ಮೊದಲಿನಂತಿಲ್ಲ

ಯಾವುದೂ ಈ ಮೊದಲಿನಂತಿಲ್ಲ
ಅವನು ಈಗ ನನ್ನತ್ತ ಸುಳಿಯುತ್ತಿಲ್ಲ
ಮೊದಲಿನಂತೆ ಮೂಗಿಗೆ ಮೂಗು ತಾಕಿಸಿ ಮಾತನಾಡುವುದಿಲ್ಲ
ಮುಂಗುರುಳನ್ನು ನೇವರಿಸುವುದಿಲ್ಲ
ಗುಳಿ ಕೆನ್ನೆಗೆ ಮುತ್ತುಗಳನ್ನಿಡುತ್ತಿಲ್ಲ
ಬೈಯಲಿಕ್ಕಾದರೂ ತುಟಿ ಬಿಚ್ಚುತ್ತಾನೆಂದುಕೊಂಡರೆ ಉಹುಂ ಅದೂ ಇಲ್ಲ;
ನಾನೀಗ ಪ್ರವಾಹಕ್ಕೆ ಸಿಲುಕಿ ತತ್ತರಿಸುತ್ತಿರುವ ಬೆಂಡಿನ ಬೊಂಬೆ
ನನ್ನದೀಗ ಬರಿಯ ನಿಟ್ಟುಸಿರು ಮತ್ತು ಒಬ್ಬಂಟಿತನದ ಕಣ್ಣೀರು!

ಪ್ರೇಮಕ್ಕೂ ಅಂತಿಮ ಗಡುವು ಎಂಬುದಿದೆಯ ಗೆಳೆಯ?
ನಾಲ್ಕು ಕಾಲು ಕೂಡಿ ಹಾಸಿಗೆ ಮೇಲೆ ಹೊರಳಾಡಿ ಎದ್ದ ಮೇಲೆ ಪ್ರೇಮ ಸತ್ತು ಹೋಗುತ್ತದೆಯೇ?
ಪ್ರೇಮ ಪ್ರತಿ ಕ್ಷಣವೂ ಚಿಗುರುವ ಕನಸು ಎಂಬುದೆಲ್ಲ ಒಣ ಮಾತೇ?
ನೀನೇ ಕೊಟ್ಟ ಹೊಟ್ಟೆಯೊಳಗಿನ ಫಲ ಕಣ್ಣುಬಿಟ್ಟ ಮೇಲೆ ದಿಡೀರನೆ ನನ್ನ
ಸಾಮೀಪ್ಯವನ್ನು ನೀನು ತೊರೆಯುವುದಾದರೆ ಈ ಜಗತ್ತನ್ನೇ ಆಳುತ್ತಿರುವ 'ಪ್ರೇಮಕ್ಕೂ'
ನನ್ನ ಧಿಕ್ಕಾರವಿರಲಿ!

ಹೌದು ಯಾವುದೂ ಈ ಮೊದಲಿನಂತಿಲ್ಲ;
ಹಾಲು ಬಯಸಿ ಹಸಿವಿನಿಂದ ಕಿರ್ರೋ ಎನ್ನುವ ಮಗುವಿನ ದನಿ ಕಿವಿಗೆ ತಾಕಿದೊಡನೆ
ಅವನು ದೌಡಾಯಿಸಿ ಬರುತ್ತಾನೆ; ಮಗುವನ್ನೇ ಮುದ್ದುಗರೆಯುತ್ತಾನೆ!
ಜೀವಚ್ಛವದಂತೆ ಮಲಗಿರುವ ನನ್ನೆಡೆಗೆ ಅವನದ್ದು ತಿರಸ್ಕೃತ ನೋಟವಷ್ಟೇ
ನನ್ನ ಬಾತುಕೊಂಡ ಮುಖ ಟೊಳ್ಳು ದೇಹ ಮತ್ತು ಜೋತು ಬಿದ್ದ ಮೊಲೆಗಳಿಗೆ ಈಗ
ಅವನನ್ನು ರಮಿಸುವ ತಾಕತ್ತಿಲ್ಲ;
ಅವನ ಕನಸಗೂಸನ್ನು ಹೆತ್ತುಕೊಡುವುದರೊಳಗೆ ನನ್ನದೆಲ್ಲವೂ ಸೋರಿ ಹೋಗಿದೆ
ಪ್ರೇಮ ಸ್ತಬ್ಧವಾಗಿದೆ!
ಅವನಂತೆಯೇ ನಾನು ಮಾತನಾಡುವುದನ್ನು ಮರೆತು ಮೌನ ಪ್ರಪಾತದಲ್ಲಿ
ಹೊಸ ಕನಸುಗಳನ್ನು ಹೆಣೆಯುತ್ತಿದ್ದೇನೆ;
ಹಾಂ.ಯಾವುದೂ ಈ ಮೊದಲಿನಂತಿಲ್ಲ!
ಗೆಳೆಯ..ಒಮ್ಮೆ ಕೇಳು ಪ್ರೇಮ ಮಾತ್ರ ಗೆಲ್ಲಲಿ ಕಾಮ ಸೋಲಲಿ

- ದೀಕ್ಷಿತ್ ನಾಯರ್
ಮಂಡ್ಯ

ವಿಡಿಯೋ
ವಿಡಿಯೋ

ದೀಕ್ಷಿತ್ ನಾಯರ್

ಲೇಖಕ ದೀಕ್ಷಿತ್ ನಾಯರ್ ಅವರು ಮೂಲತಃ ಮಂಡ್ಯ ಜಿಲ್ಲೆಯವರು. ತಾಯಿ ರಾಧಾಮಣಿ ಮತ್ತು ತಂದೆ ಕೇಶವ ಮುರಳಿ. ಜನವರಿ 12 2001 ಜನನ. ಮಂಡ್ಯದ ಪಿ.ಇ.ಎಸ್ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯದಲ್ಲಿ ಬಿ.ಎ ಪದವಿ ಪಡೆದ ಇವರು ಇದೀಗ ಮೈಸೂರು ಮಾನಸ ಗಂಗೋತ್ರಿ ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ. ಬಾಲ್ಯದಿಂದಲೂ ಭಾಷಣ, ಚರ್ಚೆ, ನಿರೂಪಣೆ ಮತ್ತು ಉಪನ್ಯಾಸಗಳಲ್ಲಿ ಆಸಕ್ತಿಯನ್ನು ಹೊಂದಿರುವ ದೀಕ್ಷಿತ್ ನಾಯರ್ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ನೂರಾರು ವೇದಿಕೆ ಕಾರ್ಯಕ್ರಮಗಳಲ್ಲಿ ಮಾತನಾಡಿ ಸನ್ಮಾನಕ್ಕೆ ಪಾತ್ರರಾಗಿದ್ದಾರೆ.

ಸಾಹಿತ್ಯದಲ್ಲೂ ಅಪಾರ ಆಸಕ್ತಿಯನ್ನು ಹೊಂದಿರುವ ಇವರು ನಿರಂತರ ಅಧ್ಯಯನಶೀಲರು. ಕವಿತೆ,ಕಥೆ, ಕಾದಂಬರಿ,ಲೇಖನ ಪ್ರಬಂಧಗಳನ್ನು ಬರೆದಿದ್ದಾರೆ. ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಇತ್ತೀಚಿಗಷ್ಟೇ ತಮ್ಮ ಚೊಚ್ಚಲ ಕೃತಿಯಾದ 'ಯಶೋ ದೀಕ್ಷೆ' (ಲೇಖನ ಸಂಕಲನ) ಹೊರ ತಂದಿದ್ದಾರೆ. ಇನ್ನೆರಡು ಕೃತಿಗಳು ಮುದ್ರಣದ ಹೊಸ್ತಿಲಿನಲ್ಲಿವೆ. ಅತೀ ಚಿಕ್ಕ ವಯಸ್ಸಿನ ಇವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿನ ಸಾಧನೆಗೆ ಹತ್ತು ಹಲವಾರು ಪ್ರಶಸ್ತಿಗಳು ಲಭಿಸಿವೆ. ಯುವ ವಾಗ್ಮಿಗಳ ಬಳಗ ಎಂಬ ತಮ್ಮದೇ ಸಂಸ್ಥೆಯ ಮೂಲಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆ ಹಾಗೂ ಕಾರ್ಯಕ್ರಮಗಳನ್ನು ಕಳೆದ ಮೂರು ವರ್ಷಗಳಿಂದ ಆಯೋಜಿಸುತ್ತಾ ಬರುತ್ತಿದ್ದಾರೆ.

More About Author