Article

ಅದ್ಭುತ ವಿಚಾರವಂತಿಕೆಯ ‘ಮೂಕಜ್ಜಿಯ ಕನಸುಗಳು’

ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಅವರ ಕಾದಂಬರಿಗಳಲ್ಲೇ ಅದ್ಭುತವಾದ ವಿಚಾರವಂತಿಕೆಯ ಕಾದಂಬರಿ ಆಗಿದೆ. ಮೂಕಜ್ಜಿಯ ಪಾತ್ರದ ಮೂಲಕ ಅವರು ಮಾನವರ ಜೀವನದ ಸಾರ ಸತ್ವವನ್ನು ವಿಮರ್ಶಿಸಿದ್ದಾರೆ. ಗಹನವಾದ, ವೈಚಾರಿಕ ವ್ಯಕ್ತಿ-ವಿಷಯಗಳ ಸುತ್ತ ಹಬ್ಬಿಕೊಂಡಿರುವ ಮೂಕಜ್ಜಿಯ ಪಾತ್ರದ ಮೂಲಕ ಈ ಕಾದಂಬರಿ ನಮಗೆ ಸಾಕಷ್ಟು ವಿಚಾರವಂತಿಕೆಗೆ ಎಡೆಮಾಡಿಕೊಡುತ್ತದೆ.

ಕಾದಂಬರಿಯ ಮುಖ್ಯ ಪಾತ್ರ ಆಗಿರುವ ಮೊಕಜ್ಜಿ ವಾಚಾಳಿತನಕ್ಕಿಂತ ಹೆಚ್ಚು ಮೌನಕ್ಕೆ ಶರಣಾಗುತ್ತಾಳೆ. ಆದರೆ ತನ್ನ ಮೊಮ್ಮಗನೊಟ್ಟಿಗೆ ಸದಾ ಕಾಲ ಅವಳ ಮನೆ ಮುಂದಿನ ಆಲದ ಮರದ ಕೆಳಗೆ ಹೆಚ್ಚು ಸಮಯ ಕಳೆಯುತ್ತಾ ಅವನೊಂದಿಗೆ ಮಾತು ಕಥೆ ಹರಟೆ ನಡೆಸುವಳು. ಮೊಕಜ್ಜಿಗೆ ಅಪಾರವಾದ ವೈಜ್ಞಾನಿಕ ಶಕ್ತಿ, ವಿಚಾರವಂತಿಕೆ ಸತ್ಯ ಸುಳ್ಳುಗಳ ಪರಿಕಲ್ಪನೆ ಹೆಚ್ಚಾಗಿ ಇರುತ್ತೆ. ಮೊಮ್ಮಗ ಸುಬ್ಬರಾವ್ ಅವಳೊಂದಿಗೆ ಹೆಚ್ಚಾಗಿ ಕಾಲ ಕಳೆಯುತ್ತಾನೆ ಕಾಡಲ್ಲಿ ಸುತ್ತಾಡಿ ಅಲ್ಲಿ ಸಿಕ್ಕಿದ ಮೊಳೆ, ಬೂದಿ, ತಾಮ್ರದ ತುಂಡು ತಂದು ಅಜ್ಜಿಯ ಮುಂದೆ ತನ್ನ ಶಂಕೆಗಳ ಹಿನ್ನೆಲೆಯಲ್ಲಿ ಬಿಚ್ಚಿಡುತ್ತಾನೆ. ಮೂಕಜ್ಜಿ ತನ್ನ ಸ್ಪರ್ಶಜ್ಞಾನದಿಂದ ಅದರ ಹಿಂದಿನ ನಡೆದು ಹೋಗಿದ ವಾಸ್ತವ ಘಟನೆ ಹೇಳುತ್ತಿರುತ್ತಾಳೆ.

ಸನ್ಯಾಸಿಗಳ ನಿಜವಾದ ಸಂಸಾರ ಜೀವನಕ್ಕೆ ಯಾಕೆ ಬಿಟ್ಟು ಎಲ್ಲೋ ಹೋಗಿ ಜಪ ಮಾಡುವ ಉದ್ದೇಶ ಅವರ ವೈರಾಗ್ಯ ಅವಿನಭಾವನೆ, ದೇವರ ನಡುವಿನ ಜನರಿಗೆ ಇರುವ ಮೂಢ ನಂಬಿಕೆಗಳು ಮನುಷ್ಯ ಮೊದಲು ಮನುಷ್ಯನಿಂದ ದೇವರ ಅಸ್ಮಿತೆಯನ್ನು ಸಹ ತಾರ್ಕಿಕವಾಗಿ ವಿಶ್ಲೇಷಿಸುತ್ತಾಳೆ. ದೇವರೇ ಎಲ್ಲದಕ್ಕೋ ಪರಿಹಾರವಲ್ಲ. ನಂಬಿಕೆಗಳು ಖುಷಿ ನೀಡಬೇಕು ಹೊರತು ಭಯ ತೋರಿಕೆ ಆಗಬಾರದು, ದೇವರ ಕುರಿತಾಗಿ ಮನುಷ್ಯನ ದೇವರ ನಡುವಿನ ಸಂಬಂಧ ಕುರಿತಾಗಿ ವಿಚಾರವನ್ನು ಎತ್ತಿ ಹಿಡಿಯುತ್ತಾಳೆ. ಯಾವುದೇ ವಸ್ತುವಾಗಲಿ ಅದನ್ನ ಮುಟ್ಟಿ ಅದರ ಹಿಂದಿನ ನಡುವೆ ಕಾಲ ಘಟನೆ ಅದೀಮಾನವರ ಜೀವನ ಕುರಿತು, ಸಾಂಸ್ಕೃತಿಕ ಧಾರ್ಮಿಕ ಗೊಂದಲ ಬಗ್ಗೆ, ಬುದ್ದ ಸನ್ಯಾಸಿಗಳ ಜೀವನ ಶೈಲಿ ಎಲ್ಲವನ್ನು ವಿವರಿಸುವಳು.

ಇಲ್ಲಿ ಈ ಮೂಕಜ್ಜಿ ಒಂದು ಸಾಮಾಜಿಕ ಚಿಂತನೆಯ ಸಂಕೇತವಾಗಿದ್ದಾಳೆ. ತನ್ನ ವಿಧವೆ ಜೀವನ ನಡೆಸುತ್ತಾ ಸಮಾಜದ ಅಲ್ಲಿನ ಜನ ಅವಳ ವಿಚಾರ ಆಲೋಚನ ಶಕ್ತಿಗೆ ಹುಚ್ಚಿ ಎಂಬ ಪಟ್ಟ ಕಟ್ಟಿ ಅವಮಾನ ಮಾಡಿದರು, ಅಂತಹ ಜನರೊಟ್ಟಿಗೆ ಅವಳು ಮೂಕಿ ಆಗಿ ಸಮಾಜದ ಧೋರಣೆಗೆ ಮೌನ ಆವರಿಸಿಕೊಂಡು ಇರುವಳು...

ಮೂಕಜ್ಜಿ ಮನೆಯಲ್ಲಿ ನಡೆಯುವ ಸುಬ್ರಾಯನ ತಮ್ಮ ನಾರಾಯಣನ ಮದುವೆ ಆಗು ಹೋಗುಗಳಲ್ಲಿ, ಊರ ಹಿರಿಯ ಏರ್ಪಡಿಸುವ ಮೂಕಾಂಬಿಕೆ ಅಮ್ಮನವರ ಕೈಂಕರ್ಯದಲ್ಲಿ ಭಾಗವಹಿಸುತ್ತಾಳೆ. ಬೇರೆ ಊರಿನಲ್ಲಿದ್ದ ತನ್ನಂತೆ ಬಾಲ್ಯ ಸ್ನೇಹಿತೆ ಹೆಂಗಸಾದ ತಿಪ್ಪಜ್ಜಿಯ ಕೊನೆಗಾಲದಲ್ಲಿ ಹೋಗಿ ನೆರವಾಗುವಂಥ ಮಾನವೀಯತೆಯನ್ನೂ ಮೆರೆಯುತ್ತಾಳೆ. ಮನೆಗೆ ಬಂದ ಅನಂತಯ್ಯನ ಖೊಟ್ಟಿ ಸನ್ಯಾಸತ್ವ, ಜನಾರ್ಧನನ ಚಂಚಲ ಸ್ವಭಾವ, ಊರಿಗೆ ಊಟ ಹಾಕಿಸಿ ಜಂಭದಿಂದ ಬೀಗುವ ಮಂಜುನಾಥನ ಅಹಂಕಾರ, ಸರ್ವಜ್ಞನೆಂದು ಭ್ರಮಿಸಿದವನ ಗರ್ವಭಂಗ, ಆಷಾಢಭೂತಿತನವನ್ನು ಬಯಲಿಗೆಳೆವ ಪ್ರಸಂಗಗಳೂ ನಡೆಯುತ್ತವೆ. ಒಟ್ಟಿನಲ್ಲಿ ಈ ಮೂಕಜ್ಜಿ ತನ್ನ ಅತೀಯ ಶಕ್ತಿಯಿಂದ ಹಿಂದಿನ ವಾಸ್ತವದ – ಭವಿಷ್ಯತ್ತಿನ ಎಲ್ಲ ಸಂಗತಿಗಳನ್ನೂ ತಿಳಿಸುವ ವಾಸ್ತವ ಸತ್ಯ ಸಂಗತಿ ಆಗಿರುತ್ತವೆ ಮೂಕಜ್ಜಿಯ ವಿಚಾರಗಳು. ಹಾಗೆ ಮೂಕಜ್ಜಿಯ ಕನಸುಗಳು ಮನುಷ್ಯನ ಸಾಮಾಜಿಕ ಬೆಳವಣಿಗೆಗಳು ಮತ್ತು ದೇವರ ಸ್ವರೂಪದ ಡಾಂಬಿಕತೆಯತ್ತ ತೋರಿಸುತ್ತದೆ ಈ ಕಾದಂಬರಿ.

ಈ ಕೃತಿಯ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಉಮ್ಮೆ ಜೈಬ