Article

ಅಳಿಯದ ಋಣಾನುಬಂಧದ ಅನುಭವ ‘ಅಳಿದ ಮೇಲೆ’

ದಾರಿ ಸಾಗಿದವರು ಅವರು. ತುಸುವೇ ಪರಿಚಯದಿಂದ ಕುತೂಹಲ ತಾಳಿದವನಾಗಿ ಜಾಡನ್ನು ಅರಸಿ ಹೋಗುವನು ನಾನು. ನನ್ನ ಅಳತೆಯ ಕೋಲಿನಿಂದ ಅಳೆಯುವುದಕ್ಕೆ ಪ್ರಯತ್ನಿಸಿದ್ದೇನೆ. ನನ್ನದು ನಿರೀಕ್ಷಕನ ಪಾತ್ರ. ಬೆಟ್ಟದ ಜೀವದಲ್ಲಿ ಅಂಥ ಪಾತ್ರ ವಹಿಸಿದಂತೆ ಇನ್ನೊಮ್ಮೆ ಇಲ್ಲಿಯೂ ವಹಿಸಿದ್ದೇನೆ ಅದೊಂದು ತೆರ, ಇದೊಂದು ತೆರ. ಅದು ಬದುಕಿದ್ದಾಗ ಕಂಡದ್ದು, ಇದು ಸಾವಿನ ಬಳಿಕ ಅರಸಿದ್ದು.

ಹೀಗೆ ಕಾದಂಬರಿಯ ಸಾರಥಿ ಮುನ್ನುಡಿಯಲ್ಲಿ ಸ್ಪಷ್ಟವಾಗಿ ಹೇಳಿ ಮುಂದುವರೆಯುತ್ತಾರೆ. ಅಳಿದ ಮೇಲಿನ ಜೀವನ ಜಾಡನ್ನು ಅರಸಿ ಬರಲು ಅವರು ರೈಲಿನ ಪ್ರಯಾಣದಿಂದ ತಮ್ಮ ಕಥೆ ಶುರುವಿಟ್ಟುಕೊಳ್ಳುತ್ತಾರೆ. ಬಂದವನಿಗೂ ಒಂದಿಷ್ಟು ಜಾಗವನ್ನು ಕೊಡೋಣ ಎನ್ನುವ ಮನಸ್ಸು ಬರುವುದು ಬಹಳ ಕಡಿಮೆ ಜನಕ್ಕೆ ಅಲ್ಲಿ ಜಾಗವೇ ಇಲ್ಲದಿದ್ದರೆ ಕೊಡುವ ಪ್ರಶ್ನೆಯೂ ಇಲ್ಲವಷ್ಟೆ.

ಹೀಗೆ ತಮಗಾದ ರೈಲಿನನುಭವವನ್ನು ಜಗತ್ತಿಗೊಳಗಾಗುವಂತೆ ದಾಖಲಿಸಿ ಲೇಖಕರು ಮುಂದಿನ ಕಥೆಯನ್ನು ಹೆಣೆಯುತ್ತಾರೆ. ನಮ್ಮ ನಂಬಿಕೆಯನ್ನೇ ಕಲುಕಿಸಿ, ಕೆಣಕಿದ ಸಮಸ್ಯೆಗಳು ಅಂಧಶ್ರದ್ಧೆಯಿಂದ ಉತ್ತರಿಸಲಾಗದಂಥವು. ವಾವ್ಹ್ ಎಂತಹ ಜೀವನದೃಷ್ಟಿ ಕಾರಂತರದು. ರೈಲಿನಲ್ಲಿ ಅಚಾನಕ್ಕಾಗಿ ಪರಿಚಯವಾಗುವ ಯಶವಂತ ರಾಯರು ಮುಂದೊಂದು ದಿನ ಪತ್ರದ ಮೂಲಕ ತಮಗೆ ಹತ್ತಿರವಾಗಿ ಇಡೀ ಕಾದಂಬರಿಗೆ ಮುಖ್ಯ ಪಾತ್ರದ ಕಾರಣವಾಗಿ ಕಾರಂತರನ್ನು ನಿಮಿತ್ತವಾಗಿ ಸಾಗುವಂತೆ ಮಾಡುತ್ತಾರೆ.

“ನಾಟಕದ ವೇಷಧಾರಿಯಾದರೂ ಒಂದು ದಿನ ಬಣ್ಣ ಕಳಚಲೇ ಬೇಕು ತನ್ನ ರಂಗಪರಿಕರವನ್ನು ಸಿಕ್ಕಿದಲ್ಲಿ ಎಸೆಯದೆ ಮುಂದಣ ವೇಷಧಾರಿಗಳಿಗೆ ಅನುಕೂಲವಾಗುವಂತೆ ಒದಗಿಸಿಕೊಡುವುದು ಅವನ ಕರ್ತವ್ಯವಲ್ಲವೇ.? ” ಬದುಕಿನ ನಾಜೂಕು ಮಾತುಗಳಿವು. ಕಾರಂತರು ಹೇಳುವಂತೆ ಇದರ ಆಳದ ಜಾಡುಹಿಡಿದು ಹೊರಟರೆ ನಾವು ಮುಂದಿನ ತಲೆಮಾರಿಗೆ ಏನು ಕೊಟ್ಟು ಹೋಗಬೇಕೆಂಬುದು ನಮ್ಮ ಅರಿವಿಗೆ ಬರುತ್ತದೆ.

ಚಿತ್ರವೆಂಬ ವಸ್ತು ಕಾಲದ ಹಿಂದು-ಮುಂದುಗಳಿಲ್ಲದ ಗೊಂಬೆ. ಒಂದು ಕ್ಷಣದ ಸ್ಥಗಿತ ರಸಭಾವಗಳ ಚಿತ್ರ. ಯಶವಂತ ರಾಯರು ಬಿಡಿಸಿದ ಚಿತ್ರಗಳನ್ನೇ ತದೇಕಚಿತ್ತದಿಂದ ಅವಲೋಕಿಸಿ ಅವರು ಚಿತ್ರದಲ್ಲಿ ಮಾಡಿದ ಉಪಮೇಯ ಉಪಮಾನ ಅಂದಾಜು ಮಾಡಿ ಇದು ಇವರದೇ ಇಂತಹದ್ದೆ ಚಿತ್ರ ಎನ್ನುವಷ್ಟರಮಟ್ಟಿಗೆ ಕಾರಂತರು ನಿರೀಕ್ಷಿತ ಪಾತ್ರದಲ್ಲಿ ತಾಳೆ ಹಾಕುತ್ತಾರೆ!

ಸತ್ತ ಯಶವಂತ ರಾಯರು ಕಳುಹಿಸಿದ ಒಂದು ಪತ್ರ ಮತ್ತು ಒಂದಷ್ಟು ಹಣ ಒಂದು ಕೌತುಕದ ಭಾವವನ್ನುಂಟು ಮಾಡಿದಾಗ ಲೇಖಕರು ತನಿಖೆಯ ಜಾಡಿಗೆ ಕೈಹಾಕುತ್ತಾರೆ ಅವರಿಗೆ ದೊರೆತ ಒಂದಷ್ಟು  ದಾಖಲೆಗಳೊಂದಿಗೆ ಪತ್ರದಲ್ಲಿ ಉಲ್ಲೇಖಿಸಿದ ವಿಳಾಸಗಳಿಗೆ ಭೇಟಿ ನೀಡುವಲ್ಲಿಗೆ ಲೇಖಕರ ಕುತೂಹಲ ಇಮ್ಮಡಿಗೊಂಡು ಕಥೆ ಸಾಗುತ್ತದೆ.

ನಮಗೆ ಜಗತ್ತಿನ ಸುಖ ಬೇಕಾದರೆ ಎಲ್ಲರ ಮಕ್ಕಳೂ ನಮ್ಮ ಮಕ್ಕಳೆಂದು ತಿಳಿದರಾಯಿತು. ಎಷ್ಟು ಚಂದದ ಸಾಲುಗಳು ಬದುಕಲ್ಲಿ ನಮಗೆ ಅತೃಪ್ತ ಭಾವ ಕಾಡಿದಾಗೊಮ್ಮೆ ಇಂತಹದೊಂದು ಸುರುಳಿ ಬಿಚ್ಚಿಕೊಂಡು ಬದುಕು ಕಟ್ಟಿಕೊಳ್ಳಬೇಕು. ಮನುಷ್ಯ ಸಂಘಜೀವಿ ಆತ ಒಬ್ಬಂಟಿಯಾಗಿ ಬದುಕಲಾರ. ಕೆಟ್ಟದು ಒಳ್ಳೆಯದು ಕೂಡಿಯೇ ಮನುಷ್ಯನಾಗುತ್ತಾನೆ ಕೊಳೆಯೇ ಕಾಣಿಸದ ಲೋಕವಿಲ್ಲ ಕೊಳೆಯಿಲ್ಲದ ದೇಹವಿಲ್ಲ. ಬಂದ ಕೊಳೆಯನ್ನು ಆಗಾಗ ಕಳಚಿಕೊಳ್ಳುವುದು ಚೊಕ್ಕತನದ ಲಕ್ಷಣ. ವಿಸ್ಮೃತಿಯ ಬಾಳು ತೀರ ಸುಖ. ಕಹಿಯನ್ನು ಮರೆಯುವುದಕ್ಕೆ ಬಂದರೇನೆ ಬಾಳು ಸಹನೀಯ. 

“ ಈ ದೇಹ ಹರಕು ಮಾಸಲು ಅಂಗಿ. ಅಂಗಿ ಹರಿಯುವುದಿಲ್ಲವೇ? ಹರಕು ಅಂಗಿ ತೊಟ್ಟ ಜೀವ ಇರುತ್ತದೆಯೇ? ಎಲ್ಲರ ಅಂಗಿ ಒಂದು ದಿನ ಹರಿಯುವಂತದ್ದು. ಇಂದು ಅವರದು ,ನಾಳೆ ನನ್ನ ಚರ್ಮ ಎಲುಬಿನ ಹಂದರವು ಅಳಿಯುತ್ತದೆ ನಾಳೆ ಕಳೆದರೆ ನೀನು ಹಾಗೆಯೇ” ನಿಜ ಎಂಬುದು ಮನಸ್ಸಿಗೆ ತಕ್ಕೊಂಡರೆ ಉಂಟು , ತಕ್ಕೊಳ್ಳಬೇಕು. ತೆಗೆದುಕೊಳ್ಳಲಿಕ್ಕೆ ಬಾರದವನು ಮನುಷ್ಯನಲ್ಲ. ನಾನು ,ನೀನು ಇಲ್ಲವಾದರೂ ನಾವು ನಂಬಿದ್ದು ಮಾತ್ರ ಉಳಿದುಕೊಳ್ಳುತ್ತದೆ. ಹೀಗೆ ಕಾರಂತರು ಮಾತನಾಡಿಸುವ ಪಾತ್ರಗಳು ಬದುಕಿನ ಆಳ ಹರಿವಿನ ಲೆಕ್ಕವನ್ನು ಹಿಡಿಹಿಡಿಯಾಗಿ ಎದೆಗೆ ಸುರಿಯುತ್ತವೆ. 

ಹೆಣ್ಣಿನಲ್ಲಿ ಹುದುಗಿದ ಮಾತೃ ಭಾವ ಅದ್ಭುತ ವಸ್ತು. ಆ ಭಾವ ಪ್ರಕಟಣೆಗೆ ಅವಕಾಶವಿಲ್ಲದಿದ್ದರೆ ಅದರ ಜೀವನವೇ ಬರಡಾಗುತ್ತದೆ. ತಾನು ಕಷ್ಟಪಟ್ಟದನ್ನೆಲ್ಲ ನೆನೆಯ ಬಲ್ಲ ಒಬ್ಬ ವ್ಯಕ್ತಿಗೆ ಅನ್ಯರ ಸುಖ ದುಃಖ ತಿಳಿಯುವುದು ಸುಲಭ. ದುಡ್ಡು ಎಂದರೆ ಶುದ್ಧ ಉಪ್ಪು ಅದನ್ನು ತುಸುವೇ ನಾಲಿಗೆಯ ಮೇಲಿರಿಸಿಕೊಂಡರೆ ರುಚಿ. ಹೆಚ್ಚಾಗಿ ತಿಂದರೆ ದಾಹ. ವಾತ್ಸಲ್ಯ ಹದಗೆಟ್ಟರೆ ಅದೇ ಹುಳಿತು ವಿಷವಾಗುತ್ತದೆ. ಹೀಗೆ ತರ್ಕಬದ್ಧವಾಗಿ ಸಾಲುಗಳನ್ನು ಓದುಗರಿಗೆ ಒಪ್ಪಿಸುವ ಲೇಖಕರು ಮಾಯೆಯ ಕುರಿತು ಸ್ವಪ್ನದ ಮೂಲಕ ವಿವರಣೆ ನೀಡುತ್ತಾರೆ. 

“ ಸ್ವಪ್ನ ಸಂಭವಿಸುವಿಸುವಷ್ಟು ಕಾಲ ,ಅದಕ್ಕೆ ತುತ್ತಾದ ಜೀವಕ್ಕೆ ಸುಖ ದುಃಖ ಭಯ ಭೀತಿಗಳೆಲ್ಲ ನಿಜವಾಗುತ್ತವೆ. ಬದುಕೆಂಬುದು ಮಾಯೆ ಎನ್ನುತ್ತಾರಲ್ಲ ಹೀಗೆಯೇ ಸ್ವಪ್ನ ತೀರ ಮಾಯೆ ಯಾರಿಗೆ - ಎಂದರೆ ನಮಗೆ. ಸತ್ತ ಮೇಲೆ ಅದು ಮಾಯೆ ಬದುಕಿರುವಾಗ ಆ ಎಲ್ಲ ಸುಖ-ದುಃಖ ಭಯ ಭೀತಿಗಳು ತೀರ , ತೀರ ನಿಜ. ಇನ್ನೊಬ್ಬರ ಸುಖ ದುಃಖಗಳು ನಮಗೆ ಸದಾ ಮಾಯೆಯೆಂದು ಕಾಣುವಾಗ ನಮ್ಮದು ನಮಗೆ ಮಾಯೆಯೋ - ಅಲ್ಲವೋ ಎಂಬುದನ್ನು ತಿಳಿಯಲು ನಮ್ಮ ವರ್ತನೆಯನ್ನು ಪರಿಶೀಲಿಸಬೇಕು.” ಕಾರಂತರ ಆತ್ಮ ವಿಮರ್ಶೆ ಎನ್ನಬಹುದಾದಷ್ಟು ಹತ್ತಿರದ ಸಾಲುಗಳಿವು! 

ನಾನಿರುವುದು ಈಗ. ಸತ್ತ ಮೇಲಲ್ಲ. ಹುಟ್ಟುವ ಮೊದಲಿದ್ದಿರಲಿಲ್ಲ. ಸತ್ತ ಮೇಲೆ ಉಳಿಯುವುದು ನನ್ನ ನಡುವಳಿಕೆ ನೆನಪು. ನಾನಲ್ಲ.! ಎಷ್ಟೊಂದು ಸತ್ಯದ ಸಾಲುಗಳಲ್ಲವೆ ಇವು. ನಮ್ಮವರು ನಮಗೆ ಪ್ರಿಯವಾದವರು ಎಂಬ ಮೋಹ ಸ್ವಲ್ಪ ಬಂದರೂ ಕೂಡ ನಮ್ಮ ವಿವೇಕ , ಸಮದರ್ಶಿತ್ವ , ತೋಲ ಎಲ್ಲವೂ ಮರೆಯಾಗುತ್ತವೆ. ಮನುಷ್ಯ ವಿವಿಧ ಭಾವ ರಸಗಳಿಗೆ ಆಳು. ಅಪ್ರಿಯ ಮಾತುಗಳು ನನ್ನನ್ನು ಉದ್ವೇಗಕ್ಕೆ ಗುರಿ ಮಾಡುತ್ತವೆ ಬದಲು ಪ್ರಿಯವಾದ ಮಾತುಗಳು ಸಂತೋಷಕ್ಕೆ ಗುರಿಮಾಡುತ್ತವೆ. ಹೀಗೆ ಕಾರಂತರು ಮನುಷ್ಯನ ಭಾವನೆಗಳ ತುಮುಲವನ್ನು ಗರಿಗರಿಯಾಗಿ ಬಿಚ್ಚಿಟ್ಟಿದ್ದಾರೆ. 

ಪದ್ಮಪತ್ರಮಿವಾಂಭಸಿ!

ಪದ್ಮ ಪತ್ರದ ಮೇಲೆ ನಿಂತ ನೀರಿನ ಬಿಂದುವಿನಂತೆ ಮನುಷ್ಯ ಯಾವುದಕ್ಕೂ ಅಂಟದೆ ಇರಬೇಕಂತೆ! ಜೀವನಕ್ಕೆ ಆಸರೆ ಕೊಟ್ಟವರಿಗೂ ಅಂಟಿರಬಾರದು ನಮ್ಮ ಮನಸ್ಸು. ಅಂದರೆ ಜೀವನದಲ್ಲಿ ನಾವು ಏನು ಗಳಿಸಿದರು ಅದು ಇಲ್ಲಿಯೇ ಕಳಚಿಟ್ಟು ಹೊರಡಬೇಕು ಎನ್ನುವುದನ್ನು ಸೂಕ್ಷ್ಮವಾಗಿ ಕಾರಂತರು ಹೇಳಿದ್ದಾರೆ. ಮುಂಬೈ ಅಂತಹ ನಗರಕ್ಕೆ ಲೇಖಕರು ಕೊಟ್ಟ ಉಪಮೇಯ ನಿಜಕ್ಕೂ ಓದುಗನಿಗೆ ಬೆಕ್ಕಸ ಬೆರಗಾಗುವಂತೆ ಮಾಡುವಂತದ್ದು “ಅರಣ್ಯ ದೊಡ್ಡದಾಗಿದ್ದರೆ ಗಿಡಮೂಲಿಕೆಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಯಾವ ಮದ್ದಿನ ಗಿಡವೂ ಅದರಲ್ಲಿ ಕಾಣಸಿಗಬಹುದು. ಗಿಡಗಳ ಗುರುತು ನಮಗಿದ್ದರೆ ನಮಗೆ ಬೇಕಾದ ಏನನ್ನೂ ಪಡೆಯಬಹುದು.”

ದುಡ್ಡುಕೊಟ್ಟು ಹಾಡನ್ನು ಕೇಳಬಹುದು. ದುಡ್ಡುಕೊಟ್ಟು ಮೈಯ ಸುಖವನ್ನು ಪಡೆಯಬಹುದು. ಮನಸ್ಸಿಗೆ ಸುಖವಾಗುವುದಕ್ಕೆ, ಹೃದಯಕ್ಕೆ ಶಾಂತಿ ದೊರೆಯುವುದಕ್ಕೆ ಮನಸ್ಸನ್ನು ತೆರೆಬಲ್ಲವರು ಬೇಕು. ನಮ್ಮೊಡನೆ ಭಾವ ತಲ್ಲೀನರಾಗುವರು ಬೇಕು. ಹೀಗೆ ಕಾರಂತರು ಅಳಿದ ಮೇಲಿನ  ಬದುಕಿನ ಕುರಿತು ಅವರಿಗೆ ಆದ ಋಣಾನುಬಂಧದ ಅನುಭವಗಳನ್ನು ಎಳೆಎಳೆಯಾಗಿ ಬಿಚ್ಚುತ್ತಾ ಓದುಗರಲ್ಲಿ ಒಂದು ಸಣ್ಣ ಬೆಳಕನ್ನು ತುರುಕಿದ್ದಾರೆ!  ನಂದುವ ದೀಪಕ್ಕೆ ಬೆಳಕು ಹೆಚ್ಚು ಹಾಗೆಯೇ ಮುಳುಗುವ ಸೂರ್ಯನಿಗೂ ಚೆಲುವು ಹೆಚ್ಚು. ಎನ್ನುವ ಕಾರಂತರು ಕಥೆಯನ್ನು ಹಿಡಿಹಿಡಿಯಾಗಿ ಹೆಣೆದು ಇಡಿಯಾಗಿ ಕೈಗಿರಿಸಿ ಓದಲು ಬಿಟ್ಟಿದ್ದಾರೆ! ಓದುವ ಸುಖ ನಿಮ್ಮದು! ನಮಸ್ಕಾರ. 

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 
 

ಮೌನೇಶ ಕನಸುಗಾರ

Comments