Article

ಬಾಲಮುರಳೀಗಾನದ ‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’

"ಸಂತೋಷವೆನ್ನುವುದು ನೆಲದಲ್ಲಿಲ್ಲ ನೆಲಕ್ಕಿಂತ ತುಸು ಮೇಲೆ"

ಕಾವ್ಯ ಯಾವಾಗಲೂ ಸಿಗುತ್ತದೆ,
ಆದರೆ ಓದಲು ಮನಸ್ಸು ಸಿದ್ಧವಾಗಿರಬೇಕಲ್ಲ!
ಆಗಲೇ ಕಾವ್ಯ ಆಸ್ವಾದ್ಯವಾಗುವುದು.
ಮನಸ್ಸು ಪಾಕಗೊಳ್ಳಬೇಕು.
ಕವಿಯ ಹೃದಯಕ್ಕೆ ಸಮವಾಗಿ ಸಹೃದಯನದೂ ತೂಗಬೇಕಲ್ಲ. ಸಂಗೀತದ ಆಸ್ವಾದವೂ ಅಷ್ಟೆ. ಸಂಗೀತಗಾರನ ನಾದಾವರಣದೊಳಗೆ ಒಳಗೊಳ್ಳುವ ಸಹೃದಯ ತಾನು ಕವಿಯಾಗಿದ್ದರಂತೂ ಅಲ್ಲಿ ಸೃಜಿಸಲ್ಪಡುವ ಕಾವ್ಯದ ಬಗೆ ಇದೆಯಲ್ಲ!; ಅದು ಬೆಳೆದು ಸುಂದರ ಕಾವ್ಯ ಮಂದಿರವಾಗುವ ಸೊಗವಿದೆಯಲ್ಲ! ಅದರ ಸೊಗಸಿದೆಯಲ್ಲ! ಅಲ್ಲಿಗೆ ಅಂದಿನ ಸಂಗೀತ ಸಾರ್ಥಕ್ಯವನ್ನು ಅನುಭವಿಸಿರುತ್ತದೆ. ರಾಗ- ರಾಗಿಣಿಯರ ನಾದ ತರಂಗಗಳು ಮತ್ತೋರ್ವ ಕವಿಯ ಮೂಲಕ ಶಬ್ಧಗಳ ಸುಂದರ ಕಾವ್ಯ ಕಟ್ಟೋಣವಾಗಿ ಒಡಮೂಡುವ ಅಲೌಕಿಕ ಕಾವ್ಯ- ಕರ್ಮದ ಓದಿಗೆ ಸಿದ್ಧವಾದ ಓದುಗನಿಗೂ ಆ ಸಂಗೀತದ ಆಳದ ಅರಿವನ್ನು ಅನುಭವಕ್ಕೆ ಕೊಡುತ್ತದೆ. ಮಾತಿಗೆ ನಿಲುಕದ ರೀತಿ!

"ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾನ್ಹ" ನನ್ನ ಪ್ರೀತಿಯ ಸಾಹಿತಿ ಎಸ್. ದಿವಾಕರ್ ಅವರ ಕವನ ಸಂಕಲನ. ಒಂದೊಂದು ಕಾವ್ಯಗಳ ಸೊಗಸು ಒಂದೊಂದು. ಅದರಲ್ಲೊಂದು ಕವನ -"ಬಾಲಮುರಳೀ ಗಾನ". ಗಂಭೀರ ಸಂಗೀತ ಆಸ್ವಾದಕರಾದ ಎಸ್. ದಿವಾಕರ್ ಅವರ ಬಾಲಮುರಳೀಕೃಷ್ಣರ ಸಂಗೀತವನ್ನು ಕೇಳಿ- ನೋಡಿ ನಾದವೆಂಬ ತಾಯಿಯ ಬೇಂದ್ರೆಯವರು ಹೇಳಿದಂತೆ "ಹಾಲು ನೆತ್ತರವ ಕುಡಿದಂಥ ಜೀವಂತ ಮಮತೆ" ಯಂತೆ ಒಡಲಿನಿಂದ ಮೂಡಿದ ಕಾವ್ಯಮಯೀ ಸಹೃದಯತೆ ಇಲ್ಲಿದೆ.

"ನೀನಿರುವುದೆಲ್ಲಿ ಭಾಷೆ ಭಾಷೆಗಳೆಲ್ಲ ಕೊನೆಯಾಗುವಲ್ಲಿ" ಸಂಗೀತ ಭಾಷಾತೀತ. ಕೇವಲ ಅನುಭವಕ್ಕೆ ಮಾತ್ರ; ಪ್ರಾಪ್ತಿ ಇದ್ದರೆ ಮಾತ್ರ ದಕ್ಕುವ ಸಂಗತಿ. ಇದು ಸೂಚ್ಯ. ಭಾಷೆ "ಭಾಷೆಗಳೆಲ್ಲ ಕೊನೆಯಾಗುವುದು" ನಾದದಲ್ಲಿ ಅಲ್ವೇ! ಸಂಗೀತದ ನೆಲೆ ಇದುವೇ. ನಾದ -ಬಿಂದು ಹೀಗೆ ಮುಂದುವರಿದು ಕವಿಗೆ ಅದೇ ನಾದ ಬಿಂದುವೇ ಸ್ಫೂರ್ತಿಯ ಸೆಲೆಯಾಗಿ ಕಾವ್ಯ -ಕರ್ಮ ಇಲ್ಲಿ ಉದಯಿಸಿದೆ. ನಾದಕ್ಕೆ ತನ್ನನ್ನು ಒಪ್ಪಿಸಿಕೊಂಡ ಕವಿಯ ಹೃದಯ ತೆರೆಯಲ್ಪಟ್ಟಿದೆ : ಪ್ರತಿಮೆಗಳ ಉಸಿರಾಟ, ಚಿತ್ರಪಟಗಳ ಮೌನ, ನೀರವದ ಎಲೆಯುದುರು ಮತ್ತು ಬಿಸಿಲು ಠಳ್ಳೆಂದೊಡೆದ ಗಾಜು.
"ಪ್ರತಿಮೆಗಳ ಉಸಿರಾಟ" ಅಂದರೆ "ಭಾಷೆ ಭಾಷೆಗಳೆಲ್ಲ ಕೊನೆಯಾದಾಗ" ಉಳಿವ ರಾಗ- ರಾಗಿಣಿಯರ ನಾದ -ಪ್ರತಿಮೆಗಳ ಉಸಿರಾಟವೇ ಸ್ವರಗಳು, ವಾದಿ ಸಂವಾದಿ, ವಿವಾದಿ ಸ್ವರಗಳ ಆಂದೋಲನವೇ?! ಆಹಾ! ಅದೆಂತಹಾ ಕಲ್ಪನೆ!

"ನೀರ ಕನ್ನಡಿಯಲ್ಲಿ ಮೂಡುತ್ತಿದೆಯೊಂದು ಅಲೆ; ಇನ್ನೇನು ಬೀಸಿ ಬಿಡಬಹುದೊಂದು ಚಂಡಮಾರುತ"- ರಾಗಗಳ ಸ್ವರಗಳನ್ನು ಅಲೆಯಂತೆ ಕಲ್ಪಿಸಿದೆ ಕವಿ ಮನಸ್ಸು. "ನೀರ ಕನ್ನಡಿ" ಬಾಲಮುರಳಿಯವರ ಮುಖವೆಂಬ ಕನ್ನಡಿಯನ್ನು ಕವಿ ಇಣುಕುತ್ತಾನೆ. ಇಣುಕಿದಾಗ ಕನ್ನಡಿಯಲ್ಲಿ ತನ್ನ ಮುಖ ಕಂಡಾಗ ಕಾಣುವ ಭಾವಗಳು ಕವಿಯಲ್ಲಿ ತನ್ನ ಮನದೊಳಗಿನ ಸ್ವರ ತರಂಗಗಳು ಗಾಯಕನ ಅಂತರ್ಯದಿಂದ ಮೆಲ್ಲ ಮೆಲ್ಲನೇ ಮೇಲೆದ್ದು ಬರುವ ಚಿತ್ರ ತನ್ನೊಳಗೇ ಕಂಡಂತಹಾ ಅನುಭವವಲ್ಲವೇ! ಅದೇ ಸ್ವರಗಳ ಅಲೆಗಳು ಚಂಡಮಾರುತದಂತೆ ಕಲ್ಪನಾ ಸ್ವರ, ಚಿಟ್ಟೆಸ್ವರ ಸಂಗತಿ, ಮೊಹರ ಮುಕ್ತಾಯಗಳಿಂದ ಹೊರಡುವ ದಟ್ಟ ಅಲೆಗಳು.

ಮುಂದೆ ಕವಿಯ ಮಾತು ನೋಡಿ. ಸಂಗೀತ ಕೇಳುತ್ತಾ ಕೇಳುತ್ತಾ ರಾಗ- ರಾಗಿಣಿಯರು ಕವಿಯ ಮನದಲ್ಲಿ ಮನೆಮಾಡುವ ಚಿತ್ರ: ಉಳಿಯೇಟಿಲ್ಲದೇ ಕಲ್ಲು ಕರಗಿ ಪುಡಿಯಾಗಿ ಕಲ್ಲೇ ಚಿಗುರಿ ಪಲ್ಲವಿಸುವ ರಮ್ಯ ಚಿತ್ರ.

"ಕಲ್ಲು ಕರಗುವ ಸಮಯ ಬೇಕಿಲ್ಲ ಉಳಿಯೇಟು
ನೋಡುನೋಡುತ್ತ ಪುಡಿಪುಡಿಯಾಗಿ
ಕುಡಿಯೊಡೆಯುವ ಕಲ್ಲೇ
ಬಳ್ಳಿಮಾಡಗಳಾಗಿ ಹೂತಳೆದು ವರ್ಣಮಯ
ಚಿಟ್ಟೆಗಳ ಬಳಿಕರೆದು ವಿರಹಿ ರಾಧೆಯ ಕೈಯ
ಕರೆತಂದಂತೆ ಶ್ರೀಕೃಷ್ಣ ಸನ್ನಿಧಿಗೆ"

"ಕಲ್ಲು ತುಯ್ಯುವ ರಾತ್ರಿ ಉಯ್ಯಲಾಡುವ ನಕ್ಷತ್ರಗಳ ಹಾಡಿಂದ ಉದುರುತ್ತಿದೆ ಸ್ವರ-ಸೇಬು"

ಆಹಾ ಅದೇನು ಸುಂದರ ನುಡಿಗಟ್ಟು. ಸ್ವರ -ಸೇಬು. ನೋಡಲೂ ಚಂದ ಸವಿಯಲೂ ಚಂದ.

ಕೊನೆಯಲ್ಲಿ ಕವಿ ಅನ್ನುತ್ತಾರೆ " ಸಂತೋಷವೆನ್ನುವುದು ನೆಲದಲ್ಲಿಲ್ಲ ನೆಲಕ್ಕಿಂತ ತುಸು ಮೇಲೆ"

ಸಂಗೀತವೆನ್ನುವುದು ಗಂಧರ್ವಲೋಕದ ಸೊತ್ತು ಅಂದರೆ ಸ್ವರ್ಗಕ್ಕಿಂತ ತುಸು ಕೆಳಗಿನ ಗಂಧರ್ವಲೋಕದ್ದು ಮತ್ತು ನೆಲಕ್ಕಿಂತ ಮೇಲಿನದು ಎಂಬುದೊಂದಾದರೆ; ಸಂಗೀತಾಸ್ವಾದ ಅಲೌಕಿಕ ಅನುಭವವೆನ್ನುವುದು ಕವಿಯ ಭಾವ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ

ಕೃಷ್ಣ ಪ್ರಕಾಶ ಉಳಿತ್ತಾಯ