Article

ಹೋರಾಟಗಾರ ಶಿವರಾಮನ ಹುಡುಕಾಟದ ಕತೆ ‘ಬೆಟ್ಟದ ಜೀವ’

ಸ್ವತಂತ್ರ ಹೋರಾಟಗಾರ ಶಿವರಾಮ ಸುಬ್ರಹ್ಮಣ್ಯದಿಂದ ಪಂಜಕ್ಕೆ ಕಾಡಿನ ಹಾದಿಯಲ್ಲಿ ಹೋಗುವಾಗ ದಾರಿ ತಪ್ಪಿ ಗುತ್ತಿಗಾರು-ಸುಳ್ಯ ರಸ್ತೆಯನ್ನು ಸೇರುತ್ತಾನೆ. ಎಷ್ಟು ಪ್ರಯತ್ನಿಸಿದರು ಆತನಿಗೆ ಪಂಜ ಮಾರ್ಗವು ಸಿಗುವುದಿಲ್ಲ, ಮುಸ್ಸಂಜೆಯ ಸಮಯ ಬೇರೆ, ಆಗ ಆತನಿಗೆ ಎದುರಾಗುವ ಇಬ್ಬರು ವ್ಯಕ್ತಿಗಳು ದೇರಣ್ಣ ಹಾಗು ಬಟ್ಯ. ದಣಿವಾದುದರಿಂದ ಉಳಿಯುವುದಕ್ಕೆ ಸ್ಥಳ ಕೇಳಿದಾಗ, ಆ ಇಬ್ಬರು ಕೆಳಬೈಲಿನ ಗೋಪಾಲಭಟ್ಟರ ಮನೆಯನ್ನು ತೋರಿಸುತ್ತಾರೆ. ಆ ಕೆಳಬೈಲಿನಲ್ಲಿ ಇರುವುದು ವೃದ್ಧ ದಂಪತಿಗಳು ಗೋಪಾಲಯ್ಯ ಹಾಗು ಶಂಕರೀ, ದಣಿವಾದುದರಿಂದ ಅಂದು ಅಲ್ಲಿಯೇ ಆಹಾರ ಸೇವಿಸಿ ವಿಶ್ರಮಿಸುತ್ತಾನೆ. ಶಿವರಾಮನಿಗೂ ಅತ್ಯವಸರದ ಕೆಲಸವು ಇಲ್ಲವಾದುದರಿಂದ ಆ ವೃದ್ಧ ದಂಪತಿಗಳ ಬಲವಂತದಿಂದ ಆತನು ಕೆಲವು ದಿನಗಳ ಕಾಲ ಅಲ್ಲಿಯೇ ಉಳಿಯುತ್ತಾನೆ.

ಶಿವರಾಮ ಕಾರಂತರು ಇಲ್ಲಿ ವರ್ಣಿಸಿರುವ ಕುಮಾರ ಪರ್ವತ, ಬಿಸಿಲೆ ಘಾಟ್ ಪರಿಸರದ ಬಗ್ಗೆ ಓದಿದರೆ ಅವನ್ನು ನೋಡಲೇಬೇಕೆಂಬ ತವಕ ಉಂಟಾಗುತ್ತದೆ. ಆ ವೃದ್ಧ ದಂಪತಿಗಳ ಪ್ರೀತಿ ವಾತ್ಸಲ್ಯಗಳಿಗೆ ಶಿವರಾಮು ಕರಗಿ ಹೋಗುತ್ತಾನೆ, ಇವುಗಳನ್ನು ಓದಿದರೆ ಖಂಡಿತವಾಗಿಯು ಮನಸ್ಸಿಗೆ ಖುಷಿ ಉಂಟಾಗುತ್ತದೆ. ಗಂಡ ಹೆಂಡತಿಯರು ಹೇಗೆ ಇರಬೇಕೆಂಬುದು ಆ ವೃದ್ಧ ದಂಪತಿಗಳ ಮೂಲಕ ಚಿತ್ರಿಸಿದ್ದಾರೆ. ತಮ್ಮ ದಾಂಪತ್ಯದ ಜೀವನದ ಬಗ್ಗೆ ಯಾರು ಯಾರನ್ನು ಯಾವ ಸಂಧರ್ಭದಲ್ಲಿಯೂ ಬಿಟ್ಟುಕೊಡದೆ, ತಮ್ಮ ಮನಸ್ಸಿನಲ್ಲಿ ಎಷ್ಟು ದುಃಖವಿದ್ದರು ಅದನ್ನು ತೋರಿಸಿಕೊಳ್ಳದೆ ಇತರರ ಮುಂದೆ ಸಂತೋಷವಾಗಿರುತ್ತಾರೆ.

ಆದರೆ ಶಂಕರೀ ಮತ್ತು ಗೋಪಾಲಭಟ್ಟರಿಗೆ ಒಂದೇ ಕೊರತೆ, ಮಗಳಿಗೆ ಮದುವೆಯಾಗಿ ೨ ವರ್ಷದಲ್ಲೇ ಖಾಯಿಲೆ ಬಂದು ತೀರಿ ಹೋಗುತ್ತಾಳೆ, ಮಗ ಶಂಭು ತನ್ನ ವಿದ್ಯಾಭ್ಯಾಸವನ್ನು ಮುಗಿಸಿ, ಬೆಟ್ಟ ಗುಡ್ಡಗಳಲ್ಲಿರಲು ಇಷ್ಟ ಪಡದೆ ಮತ್ತು ಇನ್ನಿತರ ಕಾರಣಗಳಿಂದ ಇವರನ್ನು ಬಿಟ್ಟು ಹೋಗುತ್ತಾನೆ.೧೫ ವರ್ಷಗಳಾದರೂ ಅವನ ಸುಳಿವಿರುವುದಿಲ್ಲ, ಶಂಭು ಈಗ ಬರುತ್ತಾನೆ ಆಗ ಬರುತ್ತಾನೆ ಎಂದು ಕಾಯುತ್ತಿರುತ್ತಾರೆ. ಶಂಭುವಿನ ಬಗ್ಗೆ ಹೇಳಿದಾಗಲ್ಲೆಲ್ಲ ಶಿವರಾಮನಿಗೆ ಶಂಭುವಿನನ್ನು ನೋಡಿರುವ ಭಾವನೆ ಸದಾ ಉಂಟಾಗುತ್ತದೆ. ಕಡೆಯಲ್ಲಿ ಶಂಭುವಿನ ಫೋಟೋ ತೋರಿಸುವಾಗ ಶಿವರಾಮನಿಗೆ ಖಚಿತವಾಗುತ್ತದೆ, ಶಿವರಾಮು ಶಂಭು ಸ್ವತಂತ್ರ ಚಳುವಳಿಯಲ್ಲಿ ಪೂಣೆಯಲ್ಲಿ ಬೇಟೆಯಾದುದೆಂದು ಹಾಗೂ ಆತನು ಮರಾಠಿ ಹೆಣ್ಣನ್ನು ಮದುವೆಯಾಗಿರುವುದೆಂದು.

ಈ ವೃದ್ಧ ದಂಪತಿಗಳು ತಮ್ಮ ಮಗನನ್ನು ಕಾಣುವ ಹಂಬಲವನ್ನು ಹಾಗು ಅವರು ಶಿವರಾಮನೊಡನೆ ವ್ಯಕ್ತಪಡಿಸುವ ಭಾವನೆಗಳನ್ನು ಈ ಕಾದಂಬರಿಯಲ್ಲಿ ವಿವರಿಸಿದ್ದಾರೆ, ಮನುಷ್ಯರ ಮನಸ್ಸಿನ ಭಾವನೆಗಳನ್ನು ಅವರ ಮೂಲಕ ವರ್ಣಿಸಿದ್ದಾರೆ. ಅವರ ಕಾತರತೆಯನ್ನು ಕಂಡ ಶಿವರಾಮು ತನ್ನ ತಂದೆ ತಾಯಿಯರನ್ನು ಕಾಣಲು ಬಯಸುತ್ತಾನೆ, ಸ್ವತಂತ್ರ ಚಳುವಳಿಯಲ್ಲೇ ಸದಾ ಕಾಲ ಕಳೆಯುತ್ತಿದ್ದ ಶಿವರಾಮನಿಗೆ ಇವರ ಮೂಲಕ ತನ್ನ ತಂದೆ. ತಾಯಿಯರೂ ತನಗೋಸ್ಕರ ಎದುರು ನೋಡುತ್ತಿರುತ್ತಾರೆಂದು ಅರಿವಾಗಿ ಅವರನ್ನು ಕಾಣಲು ಬಯಸುತ್ತಾನೆ. ಕಡೆಗೆ ಶಂಭು ಬರುತ್ತಾನೆಯೆ? ಅಥವಾ ಇಲ್ಲವೋ? ಎಂಬುದನ್ನು ಹೇಳಿದರೆ ಸರಿ ಇರುವುದಿಲ್ಲ, ಓದಿದರೆ ಉತ್ತಮ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾರ್ತಿಕೇಯ ಭಟ್‌