Article

ಇಂಟೆನ್ಸಿಟಿಯೊಂದಿಗೆ ಕಟ್ಟಿಕೊಡುವ `ವರ್ಜಿನ್ ಮೊಹಿತೊ’

ಸತೀಶ್ ಚಪ್ಪರಿಕೆ ಪ್ರಜಾವಾಣಿಯಲ್ಲಿ ಬರೀತಿದ್ದಮುಸಾಫಿರ್ಕಾಲಂ ಇಷ್ಟ ಆಗಿ ಕಳಿಸಿದ ಸಂದೇಶವೊಂದು ಎರಡು ತಲೆಮಾರಿನ ಪರಿಚಯವಾಗಿ ಬೆಳೆದದ್ದು ನಾಲ್ಕು ವರ್ಷಗಳ ಹಿಂದೆ.

ಕಾಲಂ ಇಷ್ಟ ಆಗಲಿಕ್ಕೆ ಮುಖ್ಯ ಕಾರಣ, ಅದು ನನ್ನೂರಿನ (ತಲ್ಲೂರಿನ) ನನ್ನ ಬಾಲ್ಯವನ್ನು ತೀವ್ರವಾಗಿ ನೆನಪಿಸಿದ್ದು.

ಚಪ್ಪರಿಕೆ ಕೂಡ ಅಲ್ಲೇ ಸಮೀಪದ ನಾವುಂದದಲ್ಲಿ ಅವರ ಅಪ್ಪನ ಹೊಟೇಲು ಜಗಲಿಯಲ್ಲಿ ಜನರೊಂದಿಗೆ ಬೆರೆತು ಬೆಳೆದವರು. ಅವರೂರಿಗೆ ಅದು ಒಂದೇ ಹೊಟೇಲು.

ನಾನೂ ಕೂಡ ತಲ್ಲೂರಿನಲ್ಲಿ ನಮ್ಮ ಕುಟುಂಬ ಆಗ ನಡೆಸುತ್ತಿದ್ದ ಕಿರಾಣಿ ಅಂಗಡಿಯ ಎದುರು ಜಗಲಿಯಲ್ಲಿ ಅಂಗಡಿಗೆ ಬರುತ್ತಿದ್ದ ಊರವರ ನಡುವೆ ಬೆಳೆದವನು. ಕಾಲಕ್ಕೆ ನಮ್ಮೂರಿನ ಸುಮಾರು ಉದ್ದಗಲಕ್ಕೆ ಅದೊಂದೇ ಕಿರಾಣಿ ಅಂಗಡಿ.

ಕಡೆಗೆ ನೋಡಿದರೆ ನನ್ನಜ್ಜ, ಅಲ್ಲೇ ಕಿರಿಮಂಜೇಶ್ವರದಲ್ಲಿಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ನಾರಾಯಣ ಫಾರೆಸ್ಟ್ರು ಐವತ್ತು-ಅರವತ್ತು ವರ್ಷ ಹಿಂದೆ, ಬಹಳ ಕಾಲ ಚಪ್ಪರಿಕೆ ತಂದೆಯವರ ಹೊಟೇಲಿನ ಖಾಯಂ ಗಿರಾಕಿ, ಚಿರಪರಿಚಿತರು.

ಅಲ್ಲಿಂದೀಚೆಗೆ ನಮ್ಮ ನಡುವೆ ಬಲವಾದ ಬಾಂಧವ್ಯ ಬೆಳೆದಿದೆ.

ವರ್ಜಿನ್ ಮೊಹಿತೊ ಸಂಕಲನದ ಗರ್ಭ ಕಥೆಯನ್ನು ಹೆಚ್ಚಿನಂಶ, ಅದನ್ನು ಬರೆದ ರಭಸದಲ್ಲೇ ಕಾವಲಿಯಿಂದ ಮಗುಚಿ ನನ್ನ ತಟ್ಟೆಗೆ ಹಾಕಿದ್ದರೆಂದು ನೆನಪು. ಓದಿ ಹೇಗಿದೆ ನೋಡು ಎಂದು. ಓದಿ ಏನು ಉತ್ತರಿಸಿದ್ದೆನೋ ನೆನಪಿಲ್ಲ.

ಆದರೆ ಚಪ್ಪರಿಕೆ ಎಂದಾಕ್ಷಣ ಈವತ್ತಿಗೂ ನನಗೆ ತಟ್ಟನೆ ನೆನಪಿಗೆ ಬರುವುದು ಚಿತ್ರಗಳನ್ನು ಬಹಳ ಇಂಟೆನ್ಸಿಟಿಯೊಂದಿಗೆ ಕಟ್ಟಿಕೊಡುವ ಅವರ ಬರವಣಿಗೆಯ ಶೈಲಿ. ಸಂಕಲನ ಈಗಷ್ಟೇ ಕೈಸೇರಿದೆ. ಸತೀಶ್ ಕುರಿತು ಇರುವ ಅಭಿಪ್ರಾಯವನ್ನು ಸಂಕಲನ ಹುಸಿಗೊಳಿಸುವುದಿಲ್ಲ ಎಂಬ ಭರವಸೆಯೊಂದಿಗೆ ಓದಲಾರಂಭಿಸುತ್ತಿದ್ದೇನೆ.

 

ರಾಜಾರಾಂ ತಲ್ಲೂರು