Article

ನಾಲ್ವರ ನಾಲ್ದೇರಾ ತಿರುಗಾಟದೊಂದಿಗೆ

ಶಿವಕುಮಾರ ಕಟ್ಟೆಯವರು ಕಳುಹಿಸಿದ ಪ್ರವಾಸ ಕಥನ ಕೈ ಸೇರಿತು. ಕೂಡಲೆ ಓದಲನುವಾದೆ. ಬೆಳಗಿನ ಜಾವ ಮೂರುವರೆಗೆ 'ನಾಲ್ದೇರಾ' ಕೃತಿ ಹಿಡಿದು ಕುಳಿತೆ. ಒಂದೇ ಸಿಟ್ಟಿಂಗ್ ನಲ್ಲಿ ಓದಿ ಮುಗಿಸಿದೆ. ಬೀದರಿನ ಶಿವಕುಮಾರ ಕಟ್ಟೆಯವರು ಸಾಹಿತ್ಯ ವಲಯದಲ್ಲಿ ಬಹಳ ಅಸಕ್ತಿ ಮತ್ತು ಉತ್ಸಾಹದಿಂದ  ಭಾಗಿಯಾಗುವವರು. ಯಾವುದೇ ಸಾಹಿತ್ಯಿಕ ಚಟುವಟಿಕೆ ಇರಲಿ ಅಷ್ಟೇ ಶ್ರದ್ಧೆಯಿಂದ ನಿರ್ವಹಿಸುವ ಚಾಕ್ಯತೆ. ಅದನ್ನು ಅವರ ಸಂಪಾದಿತ ಕೃತಿಗಳು ವ್ಯಕ್ತಪಡಿಸಿವೆ. 

ತಮ್ಮ ಬಿಡುವಿನ ಸಮಯದ ಅರ್ಥಪೂರ್ಣ ಬಳಕೆ. ಕವನ ಸಂಕಲನ 'ನೆನಪು' ಮತ್ತು ಐದು ಸಂಪಾದಿತ ಕೃತಿಗಳನ್ನು ರಚಿಸಿ, ಇದೀಗ ಲಾಕ್ ಡೌನ್ ಸಂದರ್ಭದಲ್ಲಿ 'ನಾಲ್ದೇರಾ' ಪ್ರವಾಸ ಕಥನ ಬರೆದು ಮುಗಿಸಿ, ಓದುಗರಿಗೆ ತಲುಪಿಸಿದ್ದಾರೆ. ಓದುವ ಹವ್ಯಾಸದೊಂದಿಗೆ ಹಿರಿಯರ ಅಭಿಪ್ರಾಯಗಳನ್ನು ಮನ್ನಿಸುವ ವಿನಂಬ್ರತೆ ಕಟ್ಟೆಯವರಲ್ಲಿರುವುದನ್ನು ಗುರುತಿಸುತ್ತೇವೆ. ಬಿ.ಜಿ.ಸಿದ್ದಬಟ್ಟೆಯವರು, 'ಶಿವಕುಮಾರ ಕಟ್ಟೆ ಮನಸು ಮಾಡಿದರೆ ಏನಾದರೂ ಬರೆಯಬಲ್ಲಂತಹ ಪ್ರತಿಭೆ. ವಿವಿಧ ಪ್ರಕಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು' ಎಂದು ಹೇಳುತ್ತಿದ್ದರು. ಆ ಮಾತನ್ನು ಈ ಕೃತಿಯಲ್ಲಿ ನಿಜವಾಗಿಸಿ, ತಮ್ಮ ಪ್ರವಾಸದ ಕಥನ ದಾಖಲಿಸಿರುವುದು ಮೆಚ್ಚುವಂಥದ್ದು. 

ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವೃತ್ತಿ ಮಾಡುತ್ತಿರುವ ಕಟ್ಟೆಯವರು, ಎರಡು ಬಾರಿ ತರಬೇತಿ ಕೇಂದ್ರಕ್ಕೆ ಆಯ್ಕೆಯಾಗಿ, ಮೂವರು ಸ್ನೇಹಿತರೊಂದಿಗೆ ಚಂಡಿಗಡ ಮತ್ತು ಕೋಲ್ಕತಾ ಪ್ರವಾಸ ಕೈಗೊಂಡರು. ಈ ನಾಲ್ವರ ಪ್ರವಾಸ ಕಥನವೇ 'ನಾಲ್ದೇರಾ' ತಿರುಗಾಟ. ಈ ನಾಲ್ಕೂ ಸ್ನೇಹಿತರು, ಸಹೋದ್ಯೋಗಿಗಳು ಒಟ್ಟಿಗೆ ಕಳೆದ ಸಮಯ, ಮಾತುಕತೆ, ಚರ್ಚೆ, ಹುಸಿಮುನಿಸು, ನಗು, ತಮಾಷೆ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಬಗೆ, ಕ್ಷಮಿಸುವ ರೀತಿ ಎಲ್ಲವೂ ಪ್ರಿಯವೆನಿಸಿತು. ಒಳಗೊಳಗೆ ಸ್ವಲ್ಪ ಹೊಟ್ಟೆಕಿಚ್ಚೂ ಆಯಿತು ಅನ್ನಿ. ಮನೆ, ವೃತ್ತಿ ಎಲ್ಲಾ ಬಿಟ್ಟು ದೂರದಲ್ಲಿ ಹೋಗಿ ಎರಡು ವಾರಗಳಷ್ಟು ಸಮಯ ನಿರಾತಂಕವಾಗಿ ಕಳೆಯುವುದು ವೈಯಕ್ತಿಕ ಸಂತೋಷವೇ ಸರಿ. ಹಾಗೆ ಓದುಗರಿಗೂ ನಾವೂ ಈ ರೀತಿ ಹೋಗಬೇಕು ಎನ್ನುವ ಸ್ಫೂರ್ತಿ ನೀಡುವ ಕೃತಿಯಿದು. ಈ ಕೃತಿಯನ್ನು ಓದುವಾಗ ಕಟ್ಟೆಯವರ ಜೊತೆಯಲ್ಲಿ ಬಿ.ಆರ್.ಮಲ್ಲಿಕಾರ್ಜುನ, ರವೀಂದ್ರಕುಮಾರ ಬಡಿಗೇರ, ಬಕ್ಕಪ್ಪ ನಿರ್ಣಾಕರ ಎಲ್ಲರೂ ಆಪ್ತರಾಗುತ್ತಾರೆ. ಹಾಗೆನಿಸಿದಾಗ ಮುಖಪುಟದ ಚಿತ್ರದಲ್ಲಿರುವವರು ಯಾರು ಯಾರೆಂದು ನೋಡುವಂತಾಗುತ್ತದೆ. ಈ ನಾಲ್ವರೂ ನಾಲ್ಕು ಕುದುರೆಯ ಮೇಲೆ ಕುಳಿತ ಚಿತ್ರವಿದೆ. ಬರಹಗಾರರಾಗಿ ಶಿವಕುಮಾರ ಅವರು ಆರಂಭದಿಂದ ಅಂತ್ಯದವರೆಗೆ ಓದಿಸಿಕೊಂಡು ಹೋಗುವಂತೆ, ಬರೆಯುತ್ತಾ ಸಾಗಿದ್ದಾರೆ. ಮೊದಲ ಭಾಗ ನಾಲ್ದೇರಾ ಕುತೂಹಲ ಕೆರಳಿಸುತ್ತ, ಸ್ಥಳದ ಮಹಿಮೆ, ಅಲ್ಲಿಯ ಹಿನ್ನೆಲೆ, ತಮಗನಿಸಿದ ಭಾವನೆಗಳು, ಸ್ನೇಹದ ಒಡನಾಟ ಎಲ್ಲವನ್ನೂ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. 

ಒಬ್ಬ ಜವಾಬ್ದಾರಿಯುತ ಲೇಖಕನ ಸ್ಪಂದನೆ, ಪ್ರಾಮಾಣಿಕತೆ, ಶ್ರದ್ಧೆ ಇಲ್ಲಿಯ ಬರಹದಲ್ಲಿ ಕಾಣುತ್ತೇವೆ. ಗಾಂಧಿ, ಮದರ್ ತೆರೆಸಾ, ಮೋದಿ, ಅಮಿತಾ ಶಾ ಮುಂತಾದವರ ಹೆಸರಗಳನ್ನು ತೆಗೆದುಕೊಳ್ಳುತ್ತ ಸಮಾಜಿಕ ಕಳಕಳಿಯ ಚಿಂತನೆ ಮಾಡಿದ್ದಾರೆ. ತಿಳಿಹಾಸ್ಯ ಮತ್ತು ಐತಿಹಾಸಿಕ ಹಿನ್ನೆಲೆಯ ವಿವರಣೆ ಬರಹದುದ್ದಕ್ಕೂ ಕಾಣುತ್ತದೆ. ಲೇಖಕರಾಗಿ ಸುಂದರ ಭಾಷೆಯೊಂದಿಗೆ ಭಾವನಾತ್ಮಕ ಸ್ಪಂದನೆ ನೀಡುವ ರೀತಿಯು ಗಮನ ಸೆಳೆಯಿತು. 

ಸರಕಾರದ ಜವಾಬ್ದಾರಿ, ಜನಸಾಮಾನ್ಯರ ಪ್ರಜ್ಞೆ, ರೈಲ್ವೆ ಕಂಪ್ಲೆಂಟ್ ಬುಕ್, ಥಾಪರ್ ಲವಲೀಸಿಂಗ್ ಹಾಸ್ಯ ನಾಮ, ಸರಳ ಶೌಚಾಲಯ, ಗುರುದ್ವಾರಗಳಲ್ಲಿಯ ಸ್ವಯಂ ಸೇವೆ, ಗ್ರಾಮ ಸ್ವಚ್ಛತೆ, ಪ್ರಾಚೀನ ಶಿಕ್ಷಣ ವ್ಯವಸ್ಥೆ, ನಿರುದ್ಯೋಗ ಸಮಸ್ಯೆ, ಶಿಮ್ಲಾ ಪ್ರಕೃತಿ ಸೌಂದರ್ಯ, 'ದೇವರ ನಾಡಿಗೆ ಸ್ವಾಗತ' ಫಲಕದ ಸುತ್ತ, ಆಗಾಗ ಬರುವ ಬಾಲ್ಯದ ನೆನಪು, ಕೋತಿ ಮತ್ತು ಹುಡುಗಿಯ ವೇಲ್ ಕತೆ ಮುಂತಾದ ಚರ್ಚೆ ಅರ್ಥಪೂರ್ಣವಾಗಿ ಸಾಗುತ್ತದೆ. 

'ಗುಡ್ಡಗಳಿಗೆ ಯಾರೋ ಟೈಲ್ಸ್ ಅಂಟಿಸಿದ್ದಾರೆ'

'ಜಲಿಯನ್ ವಾಲಾಬಾಗ್ ಎನ್ನುತ್ತಲೇ ನಮ್ಮ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೋರ್ಟಾ ಗ್ರಾಮ ನೆನಪಾಗುತ್ತದೆ'

'ಬೀದರ ನಾಡಿನಿಂದ ಬಂದ ನಮಗೂ ಪಂಜಾಬದ ಅಮೃತಸರಕ್ಕೂ ಏಕೊ ಏನೋ ಅವಿನಾಭಾವ ನಂಟಿದೆ ಎಂದು ಭಾಸವಾಗುತ್ತಿತ್ತು'

'ಮಲ್ಲಿಕಾರ್ಜುನ ಮಾತ್ರ ನಿಸರ್ಗದ ಆನಂದವನ್ನು ಅನುಭವಿಸುತ್ತಿದ್ದರು'

ಮುಂತಾದ ವಾಕ್ಯಗಳು ಓದುಗನ ಮನಸಿಗೆ ತಾಕಿ ಒಂದು ಕ್ಷಣ ಹಿಡಿದು ನಿಲ್ಲಿಸುತ್ತವೆ.

'ನಾಲ್ದೇರಾ' ಶೀರ್ಷಿಕೆ ಇಡುವಲ್ಲಿಯೂ ತಮ್ಮೊಳಗಿನ ಸೂಕ್ತ ಭಾವನೆಯನ್ನು ವಿವರಿಸಿದ್ದಾರೆ. ಆದರೂ ಇದಕ್ಕಿಂತಲೂ ಆಕರ್ಷಕವಾದ ಹೆಸರಿಡುವ ಸಾಧ್ಯತೆಗಳು ಇದ್ದವು ಎನಿಸುತ್ತದೆ. ಬೀದರ ಜಿಲ್ಲೆಯ ಒಂದು ಸುಂದರ ಪುಸ್ತಕವೆಂದು ಯಾವ ಮುಜುಗರವಿಲ್ಲದೆ ಹೇಳುವಂತಿದೆ. ಅಕ್ಷರ ದೋಷದಿಂದ ಮುಕ್ತವಾಗಿ, ಒಳ್ಳೆಯ ಕ್ವಾಲಿಟಿ ಪುಟಗಳು, ಸೂಕ್ತ ಮುಖಪುಟದಿಂದ ಓದುಗರನ್ನು ತನ್ನತ್ತ ಸೆಳೆದುಕೊಳ್ಳುತ್ತದೆ. ಇಂತಹ ಕೃತಿ ಓದಲು ಕಳುಹಿಸಿ ಶಿವಕುಮಾರ ಕಟ್ಟೆಯವರಿಗೆ ಧನ್ಯವಾದಗಳ ಹೇಳುತ್ತ ಅಭಿನಂದಿಸುವೆ.

ಕಾವ್ಯಶ್ರೀ ಮಹಾಗಾಂವಕರ್‌

Comments