Article

ಪರದೆ ಸರಿಸಿದ ’ಕೌದಿ’ಯ ಕವಿತೆಗಳಿವು

ಕವಯಿತ್ರಿ ಡಿ.ಬಿ.ರಜಿಯಾ ಮತ್ತು ಪರದೆ ಸರಿದಂತೆ ರಜಿಯಾ ಕವಿತೆ ಮಡಚಿಟ್ಟ ಕೌದಿ. ಅದರಲ್ಲಿ ಒಬ್ಬರದೇ ಸಾಮ್ರಾಜ್ಯ ದೌರ್ಜನ್ಯವಿಲ್ಲ. ಪರಂಪರೆಯಲ್ಲಿ ಬಾಳಿದ ದೊಡ್ಡಮ್ಮ, ಚಿಕ್ಕಮ್ಮ, ಅಮ್ಮ, ಅಕ್ಕ, ಅತ್ತೆ ಎಲ್ಲರ ದುಮ್ಮಾನ ಸುಮ್ಮಾನಗಳ ಮಹಾ ಕಾವ್ಯವಿದೆ. ಅವು ಅಮೂರ್ತ ರೂಪದ ಮನವರಿಕೆಗಳು. ಜೊತೆಗೆ ಮಹಾಮೌನದ ಕಾವ್ಯವೂ ಇದೆ. ಮನೆಯಂಗಳದ ಮಹಾಪ್ರಸ್ಥಾನದ ದಾರಿ ರಜಿಯಾರವರದು ಎಂದು ಕವಯತ್ರಿ ಪ್ರೊ.ಸ.ಉಷಾ ಹೇಳುತ್ತಾರೆ. ಆ ಮಾತು ಅಕ್ಷರಶಃ ಸರಿ ಎಂಬುದನ್ನು ಡಿ.ಬಿ.ರಜಿಯಾರವರ ಇತ್ತೀಚಿನ ಕವನ ಸಂಕಲನ `ಪರದೆ ಸರಿದಂತೆ’ ಓದಿದರೆ ಅರ್ಥವಾಗುತ್ತದೆ. 

ಬಳ್ಳಾರಿ ಬಳಿಯ ಹಿರೇಹಾಳ್‍ನ ಸಾಹಿತ್ಯದ ದೊಡ್ಡ ಪೋಷಕರಾಗಿದ್ದ ಹೆಚ್.ಇಬ್ರಾಹಿಂ ಮತ್ತು ಸಕೀನಾ ಬೇಗಂರವರ ಮಗಳಾದ ಡಿ.ಬಿ.ರಜಿಯಾ ಸಾಹಿತ್ಯ ಮತ್ತು ಮಾನವೀಯತೆ ಇರುವ ಪರಿಸರದಲ್ಲಿ ಬೆಳೆದವರು. ಆ ಮಾನವೀಯತೆ ಸಾಹಿತ್ಯದಲ್ಲಿ ತನ್ನದೇ ಆದ ರೀತಿಯಲ್ಲಿ ಇರುವಂತೆ ನೋಡಿಕೊಂಡವರು. ಈಗಾಗಲೇ ಛಾಯೆ, ಕಳೆದುಹೋಗುತ್ತೇವೆ, ಋತು, ಮಡಚಿಟ್ಟ ಕೌದಿ, ರಜಿಯಾರವರ ಕವನಗಳು ಸೇರಿದಂತೆ ಹಲವು ಕೃತಿಗಳು ಸಾಹಿತ್ಯಲೋಕದ ಗಮನ ಸೆಳೆದಿವೆ. ಈಗಾಗಲೇ ಬಹಳಷ್ಟು ಚರ್ಚಿತ ಮುಸ್ಲಿಂ ಲೇಖಕರಲ್ಲಿ ರಜಿಯಾರವರು ಕೂಡ ಒಬ್ಬರು. ಅವರು ಪರದೆಯ ಒಳಗಿನ ಪ್ರಪಂಚವನ್ನು ಕಂಡವರು. ಆ ಪ್ರಪಂಚದ ನೆಲೆಗಟ್ಟಿನ ಮೇಲೆಯೇ ನಿಂತು ಪರದೆ ಸರಿಸಿ ನೋಡಿದವರು. ಪರದೆ ಸರಿದಂತೆಲ್ಲ ಅಕ್ಷರಗಳನ್ನು ತಮ್ಮದೇ ಆದ ಭಾವನೆಗಳ ಜೊತೆ ಒಟ್ಟುಗೂಡಿಸಿ ಕವಿತೆ ಆಗಿಸಿದವರು. ಇವರ ಕವಿತೆಗಳು ಬೂದಿ ಮುಚ್ಚಿದ ಕೆಂಡದಂತೆ ಇರುತ್ತವೆ, ಕತ್ತಲೆಯಲ್ಲಿ ಪ್ರಜ್ಞೆ ಮರಳಿ ಕಣ್ಣು ಬಿಟ್ಟಂತಿರುತ್ತವೆ, ಆಗಷ್ಟೇ ಹಣತೆಗೆ ಹತ್ತಿದ ಬೆಳಕಿನಂತಿರುತ್ತವೆ. ಇವರ ಕವಿತೆಗಳನ್ನು ಒಂದೊಂದಾಗಿಯೇ ಓದಬೇಕು. ಯಾಕೆಂದರೆ, ಒಂದು ಕವಿತೆ ಬಹಳಷ್ಟು ಕವಿತೆಗಳ ಆಂತರ್ಯದ ಮಾತುಗಳನ್ನು ಆಡುತ್ತದೆ!

ತಣ್ಣಗೆ ನಡೆದಿದೆ ದೃಶ್ಯಗಳ ಅವಲೋಕನ ಎಂದು ಇವರ ಕವಿತೆ `ಪರದೆ ಸರಿದಂತೆ’ ಆರಂಭವಾಗುತ್ತದೆ. ಒಂದೊಂದೇ ಪರದೆ ಸರಿದಂತೆ ಅಲ್ಲಿನ ಲೋಕ ತೆರೆದುಕೊಳ್ಳುತ್ತಾ ಹೋಗುತ್ತದೆ. ಅಮ್ಮನ ನೆನಪು ಮಾಡಿಕೊಳ್ಳುತ್ತಲೇ ಅಲ್ಲಿ ನಿರಹಂಕಾರದ, ನಿರಾಡಂಬರದ ಜಗತ್ತನ್ನು ವಿವರಿಸುತ್ತಲೇ ಆಳ ಕಣಿವೆಯ ಪ್ರಪಾತದ ದರ್ಶನ ಮಾಡಿಸುತ್ತಾರೆ. ಹೊಕ್ಕುಳ ಬಳ್ಳಿ ಬಿಡಿಸಿಕೊಂಡಾಗ ಜ್ವಾಲೆಗಳ ಯಮಯಾತನೆ ಎಂಬುದನ್ನು ಹೇಳಲು ಈ ಕವಯಿತ್ರಿ ಅದೆಷ್ಟು ನೋವು ಅನುಭವಿಸಿರಬಹುದು! ಅಥವಾ ಅಂಥ ನೋವನ್ನು ದಟ್ಟವಾಗಿ ಎದುರಾ ಬದುರಾ ಕಂಡಿರಬಹುದು! ತೆರೆ ಸರಿದ ಪ್ರದರ್ಶನದೊಳಗಿನ ಬಯಲು ಬಯಲೆ ಎಂದು ಅಂತಿಮವಾಗಿ ಸರಿದ ಪರದೆಯ ಕೊನೆ ಏನೆಂಬುದನ್ನು ಬಿಂಬಿಸುತ್ತಾರೆ. ಈ ಬಿಂಬ ಆ ಕವಿತೆಯ ತಪ್ತ ನೆರಳು, ಅದೇ ಇಲ್ಲಿನ ಯಾತನೆಯ ದಿಗಿಲು. 

ಮುನ್ನುಡಿಯಲ್ಲಿ ಖ್ಯಾತ ಕವಿ ಎಸ್.ಜಿ.ಸಿದ್ದರಾಮಯ್ಯ ಸ್ಪಷ್ಟವಾಗಿಯೇ ಹೇಳಿಬಿಟ್ಟಿದ್ದಾರೆ; `ಇದು ವಿಘಟನೆಗಳ ಯುಗ. ಕೌಟುಂಬಿಕ ವಿಘಟನೆಗಳಿಂದ ಹಿಡಿದು ರಾಜ್ಯ, ದೇಶ, ಜಾಗತಿಕ ಸಂಬಂಧಗಳವರೆಗೆ ಎಲ್ಲೆಲ್ಲೂ ಬಿರುಕು. ಒಂದಾಗಿ ಬಾಳುವುದೆಂದರೆ ತಮ್ಮತನವನ್ನು ಮಾರಿಕೊಂಡು ಒಡಬಾಳುವೆ ನಡೆಸುವುದಲ್ಲ. ಬೇಂದ್ರಯರವರು ಕೂಡಿರಲಿ ಬಾಳು, ಇಡಿ ಗಾಳಿನಂತೆ ಎಂದು ಹೇಳಿದ್ದಾರೆ. ಬೀಜ ಇಡಿಯಾಗಿ ಇದ್ದಾಗ ಅದು ಬಿತ್ತ, ಫಲವತ್ತಾದ ನೆಲದಲ್ಲಿ ಬಿತ್ತಿದರೆ ಮೊಳೆತು ಸಸಿಯಾಗಿ ಆರೈಕೆಯಲ್ಲಿ ಹಬ್ಬಿದ ಬಳ್ಳಿಯಾಗಿಯೋ ಸಮೃದ್ಧ ತರುವಾಗಿಯೋ ಬೆಳೆಯುತ್ತದೆ. ಅದೇ ಬಿತ್ತ ಹೊಡೆದರೆ ಮತ್ತೊಂದು ಬೀಜವಾಗದು’ ಎಂದು ಹೇಳುತ್ತಲೇ ಕವಯಿತ್ರಿ ಡಿ.ಬಿ.ರಜಿಯಾ ಸಾಗುತ್ತಿರುವ ಹಾದಿಯನ್ನು ಸ್ಪಷ್ಟಪಡಿಸುತ್ತಾರೆ. ಅದಕ್ಕೆ ರಜಿಯಾರವರ `ಪಟ’ ಕವಿತೆಯನ್ನು ಉದಾಹರಿಸುತ್ತಾರೆ. ರಜಿಯಾ ಅರಗದ ಸಿದ್ಧಾಂತಗಳಿಗೆ ಬದ್ಧವಾಗಿ ಕಾವ್ಯ ಕಟ್ಟುವುದಿಲ್ಲ. ಅವರ ಅನುಭವ ಮಾತಾಡುತ್ತದೆ ಎಂದು ಸಿದ್ದರಾಮಯ್ಯ ಇಲ್ಲಿ ಸರ್ಟಿಫಿಕೇಟ್ ನೀಡುತ್ತಾರೆ. 

ಪರದೆ ಸರಿದಂತೆ ಸಂಕಲನದಲ್ಲಿ ದೂರದಲ್ಲಿ ನಿಂತು ಕವಯಿತ್ರಿ ಪದ್ಯ ಬರೆದಿಲ್ಲ. ಇಲ್ಲಿನ ಎಲ್ಲ ಕವಿತೆಗಳು ತಮ್ಮದೇ ಆದ ಅನುಭವದ ಬಾವಿಯಿಂದ ಜೀವಜಲ ಹೀರಿಕೊಂಡಿವೆ. ಕನ್ನಡಿಯಿಂದ ಆರಂಭವಾಗುವ ಇವರ ಪದ್ಯಗಳ ವಿಶೇಷತೆ ಕೊನೆ ಕೊನೆಗೆ ಹನಿಗವಿತೆಗಳ ಮೊರೆ ಹೋಗಿ ಅಮಲೇರಿಸುತ್ತಲೇ ರೂಪಕಗಳಾಗಿಬಿಡುತ್ತವೆ. ಕಳೆದ ಮೂರು ದಶಕಗಳಿಂದ ಕವಿತೆಗಳನ್ನು ತಮ್ಮ ಹೃದಯದಿಂದ ಹೆತ್ತುತ್ತಿರುವ ಡಿ.ಬಿ.ರಜಿಯಾ ದಟ್ಟ ಛಾಯೆಯನ್ನು ಮೂಡಿಸಬಲ್ಲ ನಿಜದ ಕವಿ. ಇಲ್ಲಿನ ಕವಿತೆಗಳಲ್ಲಿ ನಿಮಗೆ ಹೆಣ ್ಣನ ಆಂತರಿಕ ಮನಸಿನ ಚಲನೆಗಳ ಹೆಜ್ಜೆಗುರುತು ಕಾಣಸಿಗುತ್ತದೆ. ಆ ಗುರುತುಗಳು ಕೇವಲ ಒಬ್ಬ ಹೆಣ್ಣು ಮೂಡಿಸಿದ ಗುರುತುಗಳಲ್ಲ. ಅವು ಈ ಭೂಮಿಯಲ್ಲಿ ಹೆಣ್ತನ ಇರುವಂತಹ ಪ್ರತಿಯೊಬ್ಬರ ಮುನ್ನುಡಿಗಳಂತಿವೆ. ಕಾಯುವ ಹೊತ್ತು ಕವಿತೆಯಲ್ಲಿ ಪ್ರತಿಬಿಂಬವೊಂದು ಹೆಣ್ಣು ಅನುಭವಿಸುತ್ತಿರುವ ಅಂಟುನಂಟಿನ ತೊಡಕನ್ನು ವಿವರಿಸುತ್ತದೆ. ಬೇರುಗಳು ಜೀವ ಹಿಡಿದ ಕಥೆಯನ್ನು ಇಲ್ಲಿ ವಿವರಿಸಲಾಗಿದೆ. ಅಂತಿಮವಾಗಿ, ಬದಲಾದ ಈ ಕಾಲದ ವೇಗಕ್ಕೆ ಯಾರನ್ನು ದೂರುವುದು? ಎಂದು ಪ್ರತಿಬಿಂಬವೇ ಇಲ್ಲಿ ಪ್ರಶ್ನಿಸಿಕೊಳ್ಳುತ್ತದೆ. ಗೆರೆ ಪದ್ಯವಂತೂ ಇಡೀ ಕೃತಿಯ ಕುತೂಹಲಭರಿತ ಪದ್ಯ. 

ಕೆಲವೊಮ್ಮೆ ಮಣ್ಣ ನೆನಪಿನಾಳದಂತಹ ಕವಿತೆಗಳು ಈ ಕೃತಿಯ ಸ್ಫೋಟಕ ಪದ್ಯಗಳು ಎಂಬಂತೆ ಬಿಂಬಿಸಿಕೊಂಡಿವೆ. ಅಂತರಂಗ ಹೀಗೇಕೆ ಎಂಬ ಪದ್ಯ ಹೆಣ ್ಣನ `ಕಾಡುವ ಕಾಣದ ಕಲ್ಪನೆ ಮಾತ್ರವೇ ನೀನು’ ಎಂಬಲ್ಲಿಗೆ ಬಂದು ನಿಂತು ಫಲಿತಾಂಶ ಒಪ್ಪಿಸಿಬಿಡುತ್ತದೆ. ಈ ಸಂಕಲನದ ಶ್ರದ್ಧಾಂಜಲಿಯ ಕವಿತೆಗಳೂ ಇವೆ. ಕಿರಂ ರವರಿಗೆ ಶ್ರದ್ಧಾಂಜಲಿ ಹೇಳುತ್ತಲೇ `ಸೂಫಿ ಸಂತನ ಪ್ರೇಮವೆ ಯಾಗ ನನಗದೇ ಸ್ವರ್ಗ’ ಎಂದು ಹಾಡಿಬಿಡುವ ಕವಯಿತ್ರಿ ಕಿರಂ ವ್ಯಕ್ತಿತ್ವವನ್ನು ಎದೆಗೂಡಿಗೆ ಇಳಿಸುತ್ತಾರೆ. ಇವರ ಬಹುತೇಕ ಕವನಗಳಲ್ಲಿ ಸಮಾಜದೊಂದಿಗೆ ಜಗಳಕ್ಕಿಳಿಯುವ ಭಾವ ಕಾಣಬಹುದು. ತಾನು ಸರಿ ಇದ್ದೇನೆ. ಸಮಾಜ ಸರಿಯಾಗಬೇಕು ಎಂಬ ಕಾಳಜಿಯನ್ನು ಅವರು ತಮ್ಮ ಪದ್ಯಗಳಾದ ರಂಗಭೂಮಿ, ಈ ಬದುಕು ನೀಸಲೆಂದು, ಅನುಭಾವ ವಿಕಸನ, ಧ್ಯೇಯ, ಪ್ರಣತಿ, ಉಡುಪುಗಳು, ಮರದಲ್ಲಿ ಕಾಣಬಹುದು. 

ಖ್ಯಾತ ಕವಯಿತ್ರಿ ಎಚ್.ಎಲ್.ಪುಷ್ಪಾರವರು ಕೂಡ  ಈ ಸಂಕಲನಕ್ಕೆ ಮುನ್ನುಡಿ ಬರೆದಿದ್ದಾರೆ. ಅವರ ಪ್ರಕಾರ; ರಜಿಯಾರವರ ಕವಿತೆಗಳು ಮೆಲುದನಿಯಲ್ಲಿ ಮುಕ್ತ ಮಾನವಳ ಹುಡುಕಾಟ ನಡೆಸುತ್ತವೆ. ತನ್ನ ಚಹರೆಗಾಗಿ ಚಡಪಡಿಸುತ್ತವೆ. ತಾನೇ ಹೊತ್ತ ಛಾಯೆಯಿಂದ ಹೊರಬರಲು ಹವಣ ಸುತ್ತವೆ, ಪಟ ಎನ್ನುವ ಕವಿತೆ ಈ ರೀತಿಯ ಮುಕ್ತತೆಯ ಹುಡುಕಾಟ ನಡೆಸುತ್ತದೆ. `ನಾನ್ಯಾವತ್ತೂ ಕವಿತೆ ಕಟ್ಟಲಿಲ್ಲ. ಅದು ನನ್ನೊಳಗೆ ಹುಟ್ಟುವಂಥದ್ದು. ನಾಲ್ಕು ಸಾಲು ಬರೆದು ಮತ್ತೆ ಮತ್ತೆ ತಿದ್ದಿ ಬರೆದಿಲ್ಲ. ಯಾರಿಗೂ ತೋರಿಸಿಲ್ಲ... ಯಾವುದೇ ಸಿದ್ಧಾಂತ ತತ್ವಗಳಿಗೆ ಈಡಾಗದೇನೇ ನನ್ನ ಶ್ರದ್ಧೆಯ ಅಭ್ಯಾಸ ಅಧ್ಯಯನಗಳಿಗೆ ಪೂರಕವಾಗಿ ಲೇಖನಿ ನಿರಂತರ ಸಾಗುತ್ತಾ ಬಂದಿದೆ... ನನ್ನ ಕವಿತೆ ಮಾತಾಡುತ್ತಲಿವೆ. ಮೌನವಾಗೆ ಪ್ರಶ್ನಿಸಿ, ಚಿಂತಿಸಿ, ಎಚ್ಚರಿಸುತ್ತಾ ತನ್ನ ಅಸ್ತಿತ್ವದ ಹುಡುಕಾಟಕ್ಕೆ ಮಾನವೀಯ ನೈಜತೆಗೆ ದನಿಯಾಗುತ್ತಲಿವೆ’ ಎಂದು ತಮ್ಮ ಮತ್ತು ಕೃತಿಯ ಕುರಿತು ಮಾತನಾಡಿರುವ ಕವಯಿತ್ರಿ ಡಿ.ಬಿ.ರಜಿಯಾರವರ ಒಟ್ಟಾರೆ ಕವಿತೆಗಳನ್ನು ನಾವು ಕೂಡ ಓದುವಾಗ ಪರದೆ ಸರಿದಂತಹ ಅನುಭವವನ್ನು ಪಡೆಯಬಹುದು. ಇದು ಸ್ತ್ರೀವಾದಿ ನೆಲೆಯ ಪದ್ಯಗಳಲ್ಲ. ತಮ್ಮದೇ ಸ್ವಂತ ಛಾಪಿನ ಮೂಲಕ ಬರೆಯಲು ಹೊರಟ ಡಿ.ಬಿ.ರಜಿಯಾ ಮುಸ್ಲಿಂ ಲೋಕದ ಹೆಣ್ಣು ಮಕ್ಕಳ ಪ್ರತಿನಿಧಿಯಾಗಿ ಇಲ್ಲಿ ಕಾಣ ಸಿಕೊಳ್ಳುತ್ತಾರೆ. ಪರದೆ ಸರಿದಂತೆ ಎನ್ನುವುದಕ್ಕಿಂತ ಕವಯಿತ್ರಿಯೇ ಇಲ್ಲಿ ಪರದೆ ಸರಿಸಿ ತಮ್ಮ ಕರಗುತ್ತಿರುವ ಮೇಣದ ಬದುಕನ್ನು ಹೇಳಿಕೊಂಡಂತಿದೆ. ಇದು ಕೇವಲ ಡಿ.ಬಿ.ರಜಿಯಾರವರ ಅನುಭವಗಳಲ್ಲ; ಇದು ಪರದೆಯೊಳಗಿಂದ ಕಣ ್ಣೀರು ಸುರಿಸುತ್ತಿರುವ ಹೆಣ್ಣು ಮಕ್ಕಳ ಅನುಭವಗಳು. ಆ ಅನುಭವಗಳನ್ನೇ ಅವರು ಮೊದಲಿಂದಲೂ ಬರೆಯುತ್ತಾ ಬಂದಿದ್ದಾರೆ. ಹಾಗಾಗಿ, ಡಿ.ಬಿ.ರಜಿಯಾರವರನ್ನು `ಕೌದಿ ಕವಯಿತ್ರಿ’ ಎನ್ನಬಹುದೇನೋ!

ಪುಸ್ತಕದ ಕುರಿತಾದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿ.ಜು ಪಾಶ