Article

ತೇಜೋ ತುಂಗಭದ್ರಾ!

ಪ್ರೊ. ಗಣೇಶಯ್ಯನವರ ಒಂದು ಕತೆಯಲ್ಲಿ ಇತಿಹಾಸದ ಲಭ್ಯ ತುಣುಕುಗಳ ಆಧಾರದಲ್ಲಿ ಸಂಪೂರ್ಣ ಇತಿಹಾಸವನ್ನೇ ಪುನರ್ ಸೃಷ್ಟಿಸುವ (ಪಿಎಚ್ಡಿ ವಿಷಯವಾಗಿ) ಪ್ರಸಂಗ ಒಂದಿದೆ. ಹೇಗೆ ಲಭ್ಯವಿರುವ ಇತಿಹಾಸವನ್ನು ಬಳಸಿ, ಬಗೆದು, ವಿಮರ್ಶಿಸಿ ಇತಿಹಾಸವನ್ನು ಒಂದು ರೂಪದಲ್ಲಿ ಕಣ್ಣ ಮುಂದಿಡಬಹುದು ಎಂಬ ಒಂದು ಪ್ರಯತ್ನವದು‌. ಅಂತಹದ್ದೇ ಒಂದು ಪ್ರಯತ್ನವನ್ನು ವಸುಧೇಂದ್ರರು ತೇಜೋ ತುಂಗಭದ್ರಾ ಕಾದಂಬರಿಯಲ್ಲಿ ಮಾಡಿದ್ದಾರೆ.

ನಾವೆಲ್ಲಾ ಶಾಲಾ ದಿನಗಳಲ್ಲಿ ಸಮಾನಾಂತರ ರೇಖೆಗಳು ಒಂದನ್ನೊಂದು ಸಂಧಿಸುವುದಿಲ್ಲ ಅಂತ ಓದಿದ್ದೇವೆ. ಪೋರ್ಚುಗಲ್ ನ ತೇಜೋ ಮತ್ತು ವಿಜಯನಗರದ ತುಂಗಭದ್ರಾ ಎರಡೂ ನದಿಗಳೂ ಅಂತದ್ದೇ ಪ್ಯಾರಲಲ್ ಲೈನ್ಸ್. ಆದರೆ ವಸುಧೇಂದ್ರರ ಕಥನ ಶೈಲಿಯಲ್ಲಿ ಆ ಎರಡೂ ರೇಖೆಗಳು ಸೊಗಸಾಗಿ ಸಂಧಿಸಿವೆ. ಎಲ್ಲೂ ಆ ಎರಡೂ ರೇಖೆಗಳು ಸಂಧಿಸುವಂತೆ ಮಾಡಬೇಕೆಂಬ ಹಠದಲ್ಲಿ ಅವು ಸಂಧಿಸಿಲ್ಲ, ಕಥನ ಈ ನಿಟ್ಟಿನಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.

ಭಾರತಕ್ಕೆ ವಿದೇಶೀಯರ ಆಗಮನದ ಬಗ್ಗೆ ಕನ್ನಡದಲ್ಲಿ ಬಂದ ಒಂದು ಅತ್ಯಂತ ಅಮೂಲ್ಯ ಕಾದಂಬರಿ ತೇಜೋ ತುಂಗಭದ್ರಾ. ಬಹುಶಃ ರಾಜರುಗಳ ಕಥೆಗಿಂತಲೂ ಪೋರ್ಚುಗಲ್ ಹಾಗೂ ವಿಜಯನಗರದ ಸಾಮಾನ್ಯರ ಬದುಕು-ಬವಣೆಗಳನ್ನು ಕಟ್ಟಿಕೊಟ್ಟದ್ದೇ ಸಾಮಾನ್ಯ ಓದುಗರಿಗೆ ತಮ್ಮ ಸುತ್ತಲೇ ನಡೆಯುತ್ತಿರುವ ಕತೆಯನ್ನು ಹೇಳಿದಂತೆ ಭಾಸವಾಗಿಬಿಡುತ್ತದೆ. ಲೆಂಕ ಸೇವೆಯ ಕುರಿತಾಗಿ ಈ ಮೊದಲು ಬೇರೆ ಯಾವುದಾದರೂ ಕನ್ನಡ ಕೃತಿಯಲ್ಲಿ ಉಲ್ಲೇಖವಾಗಿದೆಯೆ? ನನಗೆ ತಿಳಿದಿಲ್ಲ. ಇತಿಹಾಸದಲ್ಲಿ ದಾಖಲಾದ ಹಂಪೆಯ ವೈಭವಕ್ಕೂ, ಜನಸಾಮಾನ್ಯರ ಜೀವನಕ್ಕೂ ಇರುವ ವ್ಯತ್ಯಾಸ ಕಣ್ಣಾರೆ ಕಂಡಂತೆ ಇಲ್ಲಿ ಪಡಿಮೂಡಿದೆ. ಅಷ್ಟೇ ಅಲ್ಲ, ದೇಶಭ್ರಷ್ಟ ಯಹೂದಿಗಳ ಬವಣೆಯನ್ನೂ ಕನ್ನಡದ ಓದುಗರಿಗೆ ಅಷ್ಟೇ ಸಮರ್ಥವಾಗಿ ಕೃತಿ ದಾಟಿಸಿದೆ. ಗೇಬ್ರಿಯಲ್, ಬೆಲ್ಲಾ, ಹಂಪಮ್ಮ, ಚಂಪಕ್ಕ ಪಾತ್ರಗಳು ಜನಸಾಮಾನ್ಯರ ಜೀವನವೂ ಇತಿಹಾಸದಲ್ಲಿ ದಾಖಲಾಗುವಷ್ಟು ರೋಚಕವಾಗಿತ್ತೆನಿಸುತ್ತದೆ. ನೈಜ ಇತಿಹಾಸದಲ್ಲಿ ಅದೆಷ್ಟು ಗೇಬ್ರಿಯಲ್, ಬೆಲ್ಲಾ, ಹಂಪಮ್ಮರು ಬಂದು ಹೋಗಿದ್ದಾರೋ? ನೌಕಾಯಾನದ ಕುರಿತು ಸುಂದರ ವಿವರಗಳನ್ನೂ ಕೃತಿ ಕನ್ನಡ ಓದುಗರಿಗೆ ನೀಡಿದೆ. (ಪ್ರದೀಪ್ ಕೆಂಜಿಗೆಯವರ ಅದ್ಭುತ ಯಾನವೂ ನೌಕಾಯಾನದ ಕುರಿತ ಸಾಹಸ‌ ಕಥನವನ್ನು ಸೊಗಸಾಗಿ ಹೇಳಿದೆ). ಸಾಂಬಾರ ಪದಾರ್ಥಗಳಿಗಾಗಿ ವಿದೇಶೀಯರ ಒದ್ದಾಟ, ಒಂದು ಕಾಳುಮೆಣಸಿನ ಬೆಲೆ ಹಾಗೂ ಭಾರತದಲ್ಲಿ ತೆಂಬಕ ಸ್ವಾಮಿಯ ತೇರಿಗೆ ಮುಷ್ಟಿಯಲ್ಲಿ ಉಗ್ಗುತ್ತಿದ್ದ ಕಾಳುಮೆಣಸಿನ ರಾಶಿ ಪ್ರಪಂಚದಲ್ಲಿರುವ ಬಡವ - ಶ್ರೀಮಂತರ ವೈಪರೀತ್ಯಕ್ಕೆ ಉಪಮೆಗಳಾಗಿವೆ. ಹಾಗೆಯೇ, ಪರ್ಷಿಯನ್ ಕುದುರೆಗಳೂ ಭಾರತದಲ್ಲಿ ಸಾಂಬಾರ ಪದಾರ್ಥಗಳಿಗೂ ಮೀರಿದ ಬೆಲೆ ಹೊಂದಿದ್ದವೆಂಬ ಸತ್ಯ ಆಶ್ಚರ್ಯಕರವಾಗಿದೆ. ಕೊನೆಯಲ್ಲಿ ಬರುವ ಪುರಂದರದಾಸರ ಉಲ್ಲೇಖವಂತೂ ಒಂದು ಸ್ವೀಟ್ ಸರ್ಪ್ರೈಸ್!

ಎಲ್ಲೋ ಕೃತಿಯ ಕೊನೆಯಲ್ಲಿ ಪಾತ್ರಗಳಿಗೆ, ಕತೆಗೆ ಒಂದು ತಾರ್ಕಿಕ ಅಂತ್ಯ ಕೊಡಲೇಬೇಕೆಂದು ವಸುಧೇಂದ್ರರು ಅಂದುಕೊಂಡರೋ ಎನಿಸಿತು. ಆದರೆ ಕಥೆಯ ಅಂತ್ಯ ಓಪನ್ ಎಂಡೆಡ್ ಆಗಬೇಕೋ, ಬೇಡವೋ, ಮುಗಿಯಬೇಕೋ, ಬೇಡವೋ ಎನ್ನುವ ಸ್ವಾತಂತ್ರ್ಯ ಖಂಡಿತಾ ಲೇಖಕರದೇ. ವಸುಧೇಂದ್ರರು ಪುಸ್ತಕದಲ್ಲಿ ಇತಿಹಾಸವೆಮಗೆ ಗುರು ಎಂದು ಬರೆದು ಸಹಿ ಹಾಕಿ ಕಳಿಸಿದ್ದಾರೆ. ಅದು ನಿಜ. ಇತಿಹಾಸದ ಒಡಲಲ್ಲಿ ನಮಗರಿವಿಲ್ಲದ ಇಂತಹ ಅದೆಷ್ಟು ಕತೆಗಳು ಹುದುಗಿವೆಯೋ ಬಲ್ಲವರಾರು? ಇತಿಹಾಸದಿಂದ ಇಂತಹ ಅಮೂಲ್ಯ ತುಣುಕನ್ನು ತಂದಿತ್ತದ್ದಕ್ಕೆ ವಸುಧೇಂದ್ರರಿಗೆ ವಂದನೆಗಳು.

ಶ್ರೀ ಹರ್ಷ