Article

ಉದಯವಾಯಿತೆ ಚೆಲುವ ಕನ್ನಡ ನಾಡು?

ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್ ಅವರ ಕೃತಿ 'ಉದಯವಾಯಿತೆ ಚೆಲುವ ಕನ್ನಡ ನಾಡು?' ಲೇಖನಗಳ ಸಂಗ್ರಹವಾಗಿದೆ. ಪ್ರಶ್ನಾರ್ಥಕ ಶೀರ್ಷಿಕೆಯುಳ್ಳ ಈ ಪುಸ್ತಕವನ್ನು ಪ್ರಕಟಿಸಿದವರು ಕಲಬುರಗಿಯ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆ. ಇದು ಪ್ರಥಮ ಮುದ್ರಣವಾಗಿ 2018ರಲ್ಲಿ ಲೋಕಾರ್ಪಣೆಯಾಗಿರುತ್ತದೆ. ಅಂದವಾದ ಮುಖಪುಟ ಶಿಲ್ಪ ಕಲೆಯ ಮತ್ತು ಕನ್ನಡಾಂಬೆಯ ಭಾವಚಿತ್ರದೊಂದಿಗೆ ರಂಗು ರಂಗಿನ ಬಣ್ಣಗಳು ಮೆರುಗು ನೀಡಿವೆ. ಈ ಕೃತಿಯು ಒಟ್ಟು ನೂರಾ ನಲವತ್ತು ಪುಟಗಳನ್ನು ಹೊಂದಿದೆ. ಇದರ ಬೆಲೆ ನೂರಾ ಹತ್ತು ರೂಪಾಯಿಗಳು. 

ಪುಸ್ತಕದ ಪುಟಗಳನ್ನು ತಿರುವಿದಾಗ, ಮೊದಲಿಗೆ ಲೇಖಕರ ಮಾತು, ಪ್ರಕಾಶಕರ ಮಾತು ಮತ್ತು ಕ್ರಮೇಣ ಹನ್ನೆರಡು ಲೇಖನಗಳಿವೆ. ವಿವಿಧ ಶೀರ್ಷಿಕೆಯನ್ನು ಇಟ್ಟುಕೊಂಡು ಕನ್ನಡ ನೆಲ, ಜಲ, ಭಾಷೆ, ಸಂಸ್ಕೃತಿ ಮುಂತಾದವುಗಳ ಕುರಿತು ತಮ್ಮ ಸಮರ್ಥ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ. ಕೃತಿಯ ಲೇಖಕರಾದ ಶ್ರೀನಿವಾಸ ಸಿರನೂರಕರ್ ಅವರು ತಮ್ಮ ಮಾತುಗಳಲ್ಲಿ, ಈ ಕೃತಿಯ ಶೀರ್ಷಿಕೆಯ ಕುರಿತು ಸ್ಪಷ್ಟತೆ ನೀಡಿದ್ದಾರೆ. ಅದು ಹೀಗಿದೆ...

"ಕವಿ ಹುಯಿಲಗೋಳ ನಾರಾಯಣರಾಯರು ಬರೆದದ್ದು 'ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು' ಎಂದು. ನವೆಂಬರ್ ಒಂದು, ಹತ್ತೊಂಬತ್ತು ನೂರಾ ಐವತ್ತಾರರಂದು ಕನ್ನಡಿಗರ ಮೈಸೂರು ರಾಜ್ಯ ಉದಯವಾದ ಸಂದರ್ಭದ ಮುಖ್ಯ ಕಾರ್ಯಕ್ರಮದಲ್ಲಿ ಪಿ. ಕಾಳಿಂಗರಾಯರು ಹಾಡಿದ್ದು 'ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು' ಎಂದು. ಇವೆರಡನ್ನೂ ಸಮೀಕರಿಸಿ ರಾಜ್ಯ ಉದಯವಾದ ನಂತರ ಕಳೆದ ಆರು ದಶಕಗಳಿಗೂ ಮೀರಿದ ಅವಧಿಯಲ್ಲಿ ಕನ್ನಡಿಗರನ್ನು ನೇರವಾಗಿ ಬಾಧಿಸುವ ಕೆಲವು ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಾನು ನನ್ನ ಲೇಖನಗಳ ಸಂಗ್ರಹಕ್ಕೆ ಕೊಟ್ಟ ಪ್ರಶ್ನಾರ್ಥಕ ಶೀರ್ಷಿಕೆ 'ಉದಯವಾಯಿತೆ ಚೆಲುವ ಕನ್ನಡ ನಾಡು?' ಈ ಶೀರ್ಷಿಕೆ ನನಗೆ ಅಪ್ರಸ್ತುತ ಎಂದಾಗಲೀ, ಅನಗತ್ಯ ಎಂದಾಗಲೀ ಅಥವಾ ಋಣಾತ್ಮಕ ಭಾವನೆಯಿಂದ ಕೂಡಿದ್ದು ಎಂದಾಗಲೀ ಪ್ರಾಮಾಣಿಕವಾಗಿ ಅನಿಸಿಲ್ಲ".

ಈ ಕೃತಿಯ ಮೂರು ಲೇಖನಗಳ ಪ್ರಾರಂಭದಲ್ಲಿ 'ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು' ಎನ್ನುವ ಸಾಲು ಪುನರಾವರ್ತನೆಯಾದಂತೆ ಕಂಡು ಬರುತ್ತದೆ. ಇದಕ್ಕೂ ಬರಹಗಾರ ಸಿರನೂರಕರ್ ಅವರ ಸಮಂಜಸವಾದ ಉತ್ತರವನ್ನು ತಮ್ಮ ಮಾತುಗಳಲ್ಲಿ ನೀಡಿದ್ದಾರೆ. ಅವರ ಅಭಿಪ್ರಾಯ ಹೀಗಿದೆ…"ಕೆಲವು ಸಿನಿಮಾಗಳಲ್ಲಿ ಅದರದೇ ಆದ ಮುಖ್ಯ ಆಶಯವನ್ನು ಒಳಗೊಂಡ ಹಾಡು, ಪದೇ ಪದೇ ಕೇಳಿ ಬರುತ್ತಿರುತ್ತದೆ. ಅದಕ್ಕೆ ಇಂಗ್ಲಿಷ್ ನಲ್ಲಿ haunting song ಎನ್ನುತ್ತಾರೆ. ಹಾಗೆಯೇ ನಮ್ಮ ಕನ್ನಡಿಗರನ್ನು ಪದೇ ಪದೇ ಕಾಡುವ, ಬಾಧಿಸುವ, ಎಚ್ಚರಿಸುವ ಹಾಡು ಎಂದರೆ ಹುಯಿಲಗೋಳ ಅವರ 'ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು.' ಕವಿಯ ಆಶಯವನ್ನು ಮತ್ತೆ ಮತ್ತೆ ನೆನಪು ಮಾಡಿ ಕೊಡುವುದಕ್ಕೋಸ್ಕರ ನಾನು ಪ್ರಜ್ಞಾಪೂರ್ವಕವಾಗಿಯೇ ಹಾಗೆ ಮಾಡಿದ್ದೇನೆ."

ಒಂದು ಕೃತಿಯನ್ನು ಓದುವಾಗ ಅದರ ಸ್ಥಳ, ಕಾಲ, ಕ್ರಿಯೆಯನ್ನು ಗಮನದಲ್ಲಿ ಇಟ್ಟುಕೊಂಡು ಅವಲೋಕಿಸುವುದು ಸೂಕ್ತ ಎನ್ನುವ ಮಾತಿದೆ. ಅದರಂತೆ ಈ ಕೃತಿಯಲ್ಲಿ ಅಡಕವಾಗಿರುವ ಎಲ್ಲಾ ಲೇಖನಗಳು ಸಾಂದರ್ಭಿಕವಾಗಿವೆ. ಆದ್ದರಿಂದ ಅವುಗಳನ್ನು ಆಯಾ ಸಂದರ್ಭದ ಹಿನ್ನೆಲೆಯಲ್ಲಿಯೇ ಸ್ವೀಕರಿಸಬೇಕೆಂದು ಲೇಖಕರು ವಿನಮ್ರವಾಗಿ ಕೇಳಿಕೊಂಡಿದ್ದಾರೆ.

'ಉದಯವಾಯಿತೆ ಚೆಲುವ ಕನ್ನಡನಾಡು' ಕೃತಿಯು ಅದ್ಯಯನ ಮಾಡುವವರಿಗೆ ಮತ್ತು ಸಂಶೋಧನಾ ಕಾರ್ಯದಲ್ಲಿ ತೊಡಗಿಸಿಕೊಂಡವರಿಗೆ ಆಕರವಾಗಿ ಬಳಸಿಕೊಳ್ಳಬಹುದು. ಲೇಖನಗಳೆಲ್ಲಾ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿ ತನ್ನ ಮೌಲ್ಯವನ್ನು ಸಾಬೀತು ಪಡಿಸಿವೆ. ಸಾಪ್ತಾಹಿಕವಾದ 'ತರಂಗ', ದೈನಿಕವಾದ 'ಮಾರ್ಗದರ್ಶಿ' ಮತ್ತು ಮಾಸಪತ್ರಿಕೆ 'ಅಭಿಮತ'ದಲ್ಲಿ ಕನ್ನಡದ ಓದುಗರನ್ನು ತಲುಪಿವೆ. ಪ್ರಕಾಶಕರ ಮಾತುಗಳಲ್ಲಿ ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಸಂಸ್ಥೆಯ ಕುರಿತು ಹಿರಿಮೆ ಗರಿಮೆಗಳನ್ನು, ಶ್ರೀ ಸಿದ್ಧಲಿಂಗ ಬಿ. ಕೊನೇಕ ಅವರು ಆಪ್ತವಾಗಿ ಹಂಚಿಕೊಂಡಿದ್ದಾರೆ. ಕಲಬುರಗಿಯ ಹೆಸರಾಂತ ಪ್ರಕಾಶನ ಸಂಸ್ಥೆ ಇದಾಗಿರುವುದು, ಅನೇಕ ಪ್ರಶಸ್ತಿ ಪಡೆದುಕೊಂಡಿರುವುದು ಎಲ್ಲರಿಗೂ ತಿಳಿದ ವಿಷಯವೇ. 

ಶ್ರೀನಿವಾಸ ಸಿರನೂರಕರ್ ಅವರ 'ಉದಯವಾಯಿತೆ ಚೆಲುವ ಕನ್ನಡ ನಾಡು?' ಕೃತಿಯ ಮೊದಲ ಲೇಖನ 'ಹೈದ್ರಾಬಾದ್ ಕರ್ನಾಟಕ ಮತ್ತು ಪ್ರತ್ಯೇಕ ರಾಜ್ಯ'. ಇದು ಇಪ್ಪತ್ತು ಪುಟಗಳ ಸುದೀರ್ಘವಾದ ಬರಹ. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದೊಳಗೆ ಪ್ರತ್ಯೇಕ ರಾಜ್ಯ ಬೇಡಿಕೆಯನ್ನು ಎತ್ತಿದ ಮೂರು ಪ್ರದೇಶಗಳ ಕೂಗನ್ನು ಪರಿಗಣಿಸಿ ಚರ್ಚಿಸಿದ್ದಾರೆ. ಹೈದ್ರಾಬಾದ - ಕರ್ನಾಟಕ, ಹುಬ್ಬಳ್ಳಿ - ಧಾರವಾಡ, ಮುಂಬೈ - ಕರ್ನಾಟಕ, ಕೊಡಗು ನಡೆಸಿದ ಚಳುವಳಿಗಳನ್ನು ವಿವರಿಸಿದ್ದಾರೆ. ಕನ್ನಡದ ನೆಲ, ಜಲ, ಭಾಷೆ, ಸಂಸ್ಕೃತಿಯ ಕುರಿತು ಲೇಖಕರ ಪ್ರಾಮಾಣಿಕ ಅಭಿಪ್ರಾಯ ಭಾವನಾತ್ಮಕವಾಗಿ ಹೀಗಿದೆ…

"ವಿವಿಧ ಸಂಸ್ಥಾನ / ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡದ ನೆಲ - ಜಲ ಭಾಷಾವಾರು ಪ್ರಾಂತ್ಯ ರಚನೆಯಿಂದಾಗಿ ಒಂದು ಕೌದಿಯ ರೂಪು ತಳೆಯಿತಷ್ಟೆ. ಆದರೆ ಅದು ಕಲಾತ್ಮಕವಾದ, ಸುಂದರವಾಗಿ ಹೆಣೆದ ಕೌದಿಯಾಗಿರಲಿಲ್ಲ. ಅದರೊಳಗೆ ಸಾಕಷ್ಟು ಕುದಿ, ಬೇಗುದಿ ಅಂತರ್ಗತವಾಗಿ ಬೇರು ಬಿಟ್ಟಿತ್ತು. ರಾಜ್ಯದ ಬೆಳವಣಿಗೆಯೇನೋ ಆಯಿತು. ಆದರೆ ಅಭಿವೃದ್ಧಿ ಎಲ್ಲರ ಪಾಲಿಗೆ ದಕ್ಕಲಿಲ್ಲ. ಸಮೃದ್ಧಿ ಒಂದೆಡೆ ಇರಲಿ, ಶಾಂತಿ - ನೆಮ್ಮದಿ ಕೂಡ ಕಾಣದಾಯಿತು".

ಈ ಹಿನ್ನೆಲೆಯಲ್ಲಿ ಅನೇಕ ಅಂಶಗಳನ್ನು ತೌಲನಿಕವಾಗಿ ಅಭ್ಯಾಸ ಮಾಡಿ, ಎರಡು ಕೋಷ್ಟಕಗಳನ್ನು ನಮೂದಿಸಿದ್ದಾರೆ.

ಕೋಷ್ಟಕ ಒಂದರಲ್ಲಿ - ಸಾಕ್ಷರತೆ - ಪ್ರತಿಶತ ೧೯೯೧ನೆಯ ಜನಗಣತಿ ಆಧಾರ.

ಕೋಷ್ಟಕ ಎರಡರಲ್ಲಿ - ಮಾನವ ಅಭಿವೃದ್ಧಿಯ ಇತರ ಕೆಲವು ಸಂಕೇತಗಳು.

ಪ್ರತ್ಯೇಕ ರಾಜ್ಯದ ಕೂಗಿಗೆ, ಅಂತ್ಯದಲ್ಲಿ ಶ್ರೀನಿವಾಸ ಅವರು ಹೀಗೆ ಹೇಳಿದ್ದಾರೆ…

"ಹೈದ್ರಾಬಾದ್ ಕರ್ನಾಟಕದ ಪರಿಸ್ಥಿತಿಯನ್ನು ಸುಧಾರಿಸಲು, ಪ್ರಾದೇಶಿಕ ಅಸಮಾನತೆಯನ್ನು ತೊಡೆದು ಹಾಕಬೇಕಾದರೆ, ಪ್ರತ್ಯೇಕ ರಾಜ್ಯ ನಿರ್ಮಾಣವೊಂದರಿಂದಲೇ ಸಾದ್ಯವೆಂದು ವೈಜಿನಾಥ ಪಾಟೀಲರಂತೆ, ಹಲವಾರು ಜನರು ಬಲವಾಗಿ ನಂಬಿದ್ದಾರೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ರಾಜ್ಯಗಳನ್ನು ವಿಭಜಿಸಿ ಉತ್ತರಾಂಚಲ, ಛತ್ತೀಸಗಡ, ಝಾರ್ಖಂಡ್ ಹೀಗೆ ಮೂರು ಹೊಸ ರಾಜ್ಯಗಳನ್ನು ಸೃಷ್ಟಿಸಬಹುದಾದರೆ ಪ್ರತ್ಯೇಕ ಹೈದ್ರಾಬಾದ್ ಕರ್ನಾಟಕ ರಾಜ್ಯ ನಿರ್ಮಾಣಕ್ಕೆ ಏಕೆ ಹಿಂದೇಟು ಹಾಕಬೇಕೆಂದು ಚಳುವಳಿ ಆಸಕ್ತರು ಕೇಳುತ್ತಾರೆ. ಸಮಜಾಯಿಷಿ ನೀಡುವವರು ಯಾರು?" ಎಂದು ಕೇಳುತ್ತ ಲೇಖಕರು ಈ ಸಮಸ್ಯೆಯನ್ನು ಎತ್ತಿ ತೋರಿಸಿದ್ದಾರೆ.

ಹಾಗಾದರೆ ಹೈದ್ರಾಬಾದ್ ಕರ್ನಾಟಕ ಎಂದರೆ ಯಾವುದು? ಎನ್ನುವುದನ್ನೂ ಚರ್ಚಿಸಿದ್ದಾರೆ. ಚರಿತ್ರೆ, ಇತಿಹಾಸ ಎಲ್ಲವನ್ನೂ ತಿಳಿದುಕೊಳ್ಳುತ್ತ ಮುಂದೆ ಸಾಗಬೇಕಾಗಿದೆ. ಇಂದಿನ ಯುವ ಜನತೆ ಹಿಂದಿನದನ್ನು ತಿಳಿದುಕೊಳ್ಳದೆ ಮುಂದೆ ಹೋಗುವುದರಲ್ಲಿ ಅರ್ಥವಿಲ್ಲ ಎನ್ಮುವ ಮಾತನ್ನು ಒತ್ತಿ ಹೇಳಿದ್ದಾರೆ. ಹೊಸ ತಲೆಮಾರಿನವರಿಗೆ ಹೈದ್ರಾಬಾದ್ ಕರ್ನಾಟಕ ಪ್ರದೇಶದ ವ್ಯಾಪ್ತಿ ಗೊಂದಲವಾಗುವ ಸಾದ್ಯತೆಯನ್ನು ಊಹೆ ಮಾಡಿ ಸ್ಪಷ್ಟತೆ ನೀಡಿದ್ದಾರೆ. 

ಇದೇ ಲೇಖನದ ಇನ್ನೊಂದು ಉಪಶೀರ್ಷಿಕೆ 'ಸ್ವಾತಂತ್ರ್ಯದ ಗಾಳಿ ಇಲ್ಲಿ ಸುಳಿಯಲಿಲ್ಲ!'. ಇದರಲ್ಲಿ ದೇಶ ಸ್ವತಂತ್ರ ಆದರೂ ಹೈದ್ರಾಬಾದ್ ಕರ್ನಾಟಕ ಸ್ವತಂತ್ರಗೊಳ್ಳದೆ ನರಳಿದ ಚಿತ್ರಣವನ್ನು ಸಂಕ್ಷಿಪ್ತವಾಗಿ ನೀಡಿದ್ದಾರೆ. ಸ್ವಾತಂತ್ರ್ಯ, ನಿಜಾಮರ, ರಜಾಕಾರರ, ಹಿಂದು - ಮುಸ್ಲಿಂ ತತ್ತರಿಸಿದ ಪರಿಯ ಒಂದು ನೋಟವಿದೆ. ಐದು ನೂರಾ ನಲವತ್ತಕ್ಕೂ ಹೆಚ್ಚು ಸಣ್ಣ - ದೊಡ್ಡ ಸಂಸ್ಥಾನಗಳನ್ನು ಭಾರತದ ಒಕ್ಕೂಟಕ್ಕೆ ಸೇರಿಸುವಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ರ ಶ್ರಮವನ್ನು ನೆನೆಯುತ್ತ, ಹೈದ್ರಾಬಾದ್  ಕರ್ನಾಟಕದ ಜನತೆ ಹೇಗೆ ನೆಮ್ಮದಿಯಿಂದ ಉಸಿರಾಡುವಂತಾಯಿತು ಎಂದು ವಿವರಿಸಿದ್ದಾರೆ. 'ಹೈದ್ರಾಬಾದ್ ಕರ್ನಾಟಕದ ಹಿರಿಮೆ', 'ಹೈಕೋರ್ಟ್ ಪೀಠ ಯಾಕಿಲ್ಲ?', 'ಅಭಿವೃದ್ಧಿಯ ಅಣಕು - ನಿರರ್ಥಕ ಪ್ರಹಸನ', 'ಸಂವಿಧಾನದ ೩೭೧ನೇ ವಿಧಿ' ಈ ಎಲ್ಲಾ ಉಪಶೀರ್ಷಿಕೆಗಳನ್ನು ಲೇಖಕರು ತಿಳಿಸಿದಂತೆ, ಅಂದಿನ ದಿನದ ಪರಿಸ್ಥಿತಿಯಲ್ಲೇ ಅರ್ಥೈಸಿಕೊಳ್ಳುವುದು ಸೂಕ್ತ. 

ಲೇಖನದ ಅಂತ್ಯದಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ ಕೆಲವರ ಅಭಿಪ್ರಾಯವನ್ನು ನೀಡಿಲಾಗಿದೆ. ಕಲಬುರಗಿಯ ಹಣಮಂತರಾವ್ ದೇಸಾಯಿ, ಮುಂಡರಗಿಯ ಸುಧೀಂದ್ರ ಆರ್. ಆಲೂರು, ಹುಲಿಮಂಗಲದ ಕಾಡನೂರು ರಾಮಶೇಷ, ಬೆಂಗಳೂರಿನ ನರೇಂದ್ರ ಸಿರಕಜೆ, ಸಾಗರದ ಪ್ರಶಾಂತ ಮಯ್ಯ ಅವರು ಸ್ಪಂದಿಸಿದ್ದನ್ನು ದಾಖಲಿಸಲಾಗಿದೆ.

ಈ ಕೃತಿಯ ಎರಡನೇ ಲೇಖನ 'ಕೊನೆಗೂ ಬಂದಿತು ೩೭೧'. ವಾರಪತ್ರಿಕೆ 'ತರಂಗ'ದಲ್ಲಿ ಪ್ರಕಟವಾದ ಸವಿಸ್ತಾರ ಲೇಖನದಲ್ಲಿ ಐದು ಉಪಶೀರ್ಷಿಕೆಗಳಿವೆ‌:

'ಏನಿದು ಆರ್ಟಿಕಲ್ 371 (ಜೆ)?'

'ಅಂತರ್ಗತ ವಿರೋಧಾಭಾಸ'

'ಅಸಮಾನತೆಯ ಕಟು ವಾಸ್ತವ'

'ಅಂಗೈ ಹುಣ್ಣಿಗೆ ಕನ್ನಡಿ ಹಿಡಿದ ಅಧ್ಯಯನಗಳು'

'ಅಸಮಾನತೆ ರೋಗಕ್ಕೆ ನಂಜುಂಡಪ್ಪ ಮದ್ದು'

ರಾಜ್ಯದ ಈಶಾನ್ಯ ಭಾಗದಲ್ಲಿ ಹೈದ್ರಾಬಾದ್ - ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ ೩೭೧ನೇಯ ವಿಧಿಯ ಅನ್ವಯ ವಿಶೇಷ ಸ್ಥಾನಮಾನ ನೀಡಬೇಕೆಂಬ ಹಿನ್ನೆಲೆಯಲ್ಲಿ ನಡೆದ ಇಡೀ ಪ್ರಕ್ರಿಯೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.  ಇದಕ್ಕೆಲ್ಲಾ ರಾಜಕೀಯ ಬದ್ಧತೆಯ ಕೊರತೆಯೇ ಕಾರಣವೆಂದು ಲೇಖಕರು ಅಭಿಪ್ರಾಯ ಪಡುತ್ತಾರೆ. 

ಮೂರನೇ ಲೇಖನ 'ಸುವರ್ಣ ಕರ್ನಾಟಕ : ಒಂದಿಷ್ಟು ಖುಷಿ, ಒಂದಿಷ್ಟು ವ್ಯಥೆ'. ಈ ಲೇಖನದ ಉಪಶೀರ್ಷಿಕೆಗಳು ಈ ಕೇಳಗಿನಂತಿವೆ:

'ಏಕೀಕರಣದ ಗಾಳಿ'

'ಸ್ವಾತಂತ್ರ್ಯನಂತರ'

'ಆಂಧ್ರದ ಉದಯ - ಕರ್ನಾಟಕ ಮೂಲೆಗೆ!'

'ಗಜ ಪ್ರಸವ'

'ಭವ್ಯತೆಯ ತುಣುಕುಗಳು'

'ಕನ್ನಡಿಗರಿಂದಲೇ ಕನ್ನಡನಾಡಿಗೆ ವಿರೋಧ!'

'ಅಂತ್ಯಕಾಣದ ಆತಂಕಗಳು'

'ಸುವರ್ಣ ಕರ್ನಾಟಕದ ಅಣಕು'

2007ರ ತರಂಗದಲ್ಲಿ ಪ್ರಕಟವಾದ ಈ ಲೇಖನದ ಕುರಿತು ಟಿ.ಎನ್.ಸರಸ್ವತಿ, ತುರುವೇಕೆರೆ ಅವರು ಹೀಗೆ ಹೇಳಿದ್ದಾರೆ…

"ಕನ್ನಡ ನಾಡಿನ ಏಕೀಕರಣ, ರಾಜ್ಯೋತ್ಸವ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಪ್ರಮಾಣ ಬದ್ಧ, ಐತಿಹಾಸಿಕ ವಿಷಯಗಳನ್ನೊಳಗೊಂಡು, ಎಲ್ಲ ಕಾಲಕ್ಕೂ ಸಂಗ್ರಹವೆನಿಸುವ ಲೇಖನ ಇದಾಗಿದೆ."

ಎಮ್. ಜೆ. ಆರ್. ದೊಡ್ಡಬಳ್ಳಾಪುರ ಅವರು ಹೀಗೆ ಹೇಳಿದ್ದಾರೆ…

"'ಹೊತ್ತಿತೋ ಹೊತ್ತಿತು ಕನ್ನಡದ ದೀಪ, ಕಳೆಯಿತೋ ಕಳೆಯಿತೋ ಶತಮಾನಗಳ ಶಾಪ' ಎಂಬ ಪದ್ಯವನ್ನು ಏಕೀಕರಣದ ಸುವರ್ಣಾಚರಣೆಯ ವರ್ಷದಲ್ಲಾದರೂ ಸಹಜವಾಗಿ ಹೇಳುವ ಸ್ಥಿತಿಯಲ್ಲಿ ಕನ್ನಡಿಗರಿಲ್ಲ ಎಂಬ ವಾಸ್ತವವನ್ನು ಅಂಕಿ - ಅಂಶ, ಇತಿಹಾಸ, ನೆನಪು, ಮಾಹಿತಿ, ದಾಖಲೆಗಳ ಮೂಲಕ ತೆರೆದಿಟ್ಟಿರುವ ಲೇಖನ, ಕನ್ನಡಿಗರ ಆತ್ಮವಿಮರ್ಶೆಗೆ ಅವಕಾಶ ನೀಡಿದೆ".

ತರಂಗದಲ್ಲಿ ಪ್ರಕಟವಾದ ನಾಲ್ಕನೇ ಲೇಖನ 'ಕರ್ನಾಟಕಕ್ಕೆ 60ರ ಸಂಭ್ರಮ'. ಇದರಲ್ಲಿ ಕರ್ನಾಟಕ ರಾಜ್ಯ ಅಭಿವೃದ್ಧಿ ವಿಚಾರದಲ್ಲಿ ಕಂಡು ಬಂದ ಏಳು-ಬೀಳುಗಳನ್ನು ಚರ್ಚಿಸಿದ್ದಾರೆ. ಕೈಗಾರಿಕೆ, ಶಿಕ್ಷಣ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ ಅವಲೋಕಿಸಲಾಗಿದೆ. ನೆಲ, ಜಲ ವಿವಾದಗಳಲ್ಲಿ ಸರಿಯಾಗಿ ನ್ಯಾಯ ಸಿಗದೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. ಗಡಿ ವಿವಾದಗಳು ಮತ್ತು ನದಿ ನೀರು ಹಂಚಿಕೆಯಲ್ಲಿ ನ್ಯಾಯ ಸಿಗದ ಸಮಸ್ಯೆ. ಇದಕ್ಕೆ ಮೂಲ ಕಾರಣ ಕನ್ನಡಿಗರಲ್ಲಿರುವ ಭಾಷಾಭಿಮಾನದ ಕೊರತೆ. 

ಈ ಎಲ್ಲಾ ವಿಷಯಗಳನ್ನು ಕೆಳಗಿನ ಉಪಶೀರ್ಷಿಕೆಯಡಿಯಲ್ಲಿ ಒರೆಗೆ ಹಚ್ಚಿದ್ದಾರೆ‌:

'ಛಿದ್ರ ವಿಛಿದ್ರ', 'ಸ್ವಾತಂತ್ರ್ಯ - ಏಕೀಕರಣ', 'ಕರ್ನಾಟಕದ ಹೆಮ್ಮೆಯ ಪುತ್ರರು', ನಾಡಗೀತೆ ಸರಿ; ಆದರೆ…' 'ಹೈದ್ರಾಬಾದ್ ಹೋರಾಟ: ಒಂದು ರೋಚಕ ಕಥನ', 'ಕ್ಲಾಸಿಕ್ ಕನ್ನಡಿಗರು ಇನ್ನೂ ಕತ್ತಲೆಯಲ್ಲಿ!', 'ವಿಕೇಂದ್ರೀಕರಣದ ತವರು ಕರ್ನಾಟಕ', 'ಗಗನ ಕುಸುಮವಾದ ತಾಲೂಕು', 'ಪ್ರಾದೇಶಿಕ ಅಸಮಾನತೆ - ಹಿಂದುಳಿದಿರುವಿಕೆ', 'ಶಿಕ್ಷಣ: ಬೃಹತ್ ಗಾತ್ರ ಗುಣದಲ್ಲಿ ಗೌಣ', 'ದಲಿತ ನಾಯಕತ್ವ ವಂಚಿತ ಪ್ರಗತಿಪರ ಕರ್ನಾಟಕ'.

'ನಾಡಧ್ವಜವೂ, ನಾಡವಿರರೂ' ಇದು ಐದನೆಯ ಲೇಖನ. ಮಯೂರ ಶರ್ಮ, ಅಮೋಘವರ್ಷ ನೃಪತುಂಗ ಮತ್ತು ಆರನೇ ವಿಕ್ರಮಾದಿತ್ಯ ಈ ಮೂವರ ಚಿತ್ರಣ ನೀಡುತ್ತ, ಕರ್ನಾಟಕದ ನಾಡವೀರನಾರು ಎನ್ನುವ ನಿಟ್ಟಿನಲ್ಲಿ ಎಲ್ಲರ ವಿವರಣೆ ಕೊಡುತ್ತ, ಓದುಗರಿಗೇ ಯಾರು ಹಿತವರೆಂದು ಪ್ರಶ್ನಿಸಿದ್ದಾರೆ. ಬಾವುಟ ಮತ್ತು ಲಾಂಚನಗಳ ಕುರಿತು ಸ್ಪಷ್ಟ ಮಾಹಿತಿ ದೊರೆಯುತ್ತದೆ.'ಮಾರ್ಗದರ್ಶಿ' ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ 'ಕೆಲವು ಕರ್ನಾಟಕಗಳ ಸುತ್ತ'. ಕಳೆದ ಐದು ದಶಕಗಳಲ್ಲಿ ಒಡೆದು ಆಳುವ ಕ್ಷುದ್ರ ರಾಜಕಾರಣದ ಪರಿಣಾಮವಾಗಿ ಕನ್ನಡನಾಡು ಇಂದು ಹಲವು ಕರ್ನಾಟಕಗಳಾಗಿ ಒಡೆದು ಹೋಗಿರುವ ವಿಚಾರವನ್ನು ಅರ್ಥಪೂರ್ಣವಾಗಿ ಮಂಡಿಸಿದ್ದಾರೆ. 

'ಆಲಮಟ್ಟಿ: ನಾಲ್ಕು ಮೀಟರಿನ ತಂಟೆ', ಈ ಲೇಖನದಲ್ಲಿ ಕರ್ನಾಟಕ ಮತ್ತು ಆಂಧ್ರದ ನಡುವಿನ ವಿವಾದ, ಎರಡು ಕೋಟಿ ರೂಪಾಯಿಗಳ ಮಂಜೂರು ಸ್ಥಗಿತ, ಆಲಮಟ್ಟಿಯ ಅಗಾಧತೆಯನ್ನು ಕುರಿತು ಸ್ಪಷ್ಟಪಡಿಸುತ್ತದೆ. 'ಕೃಷ್ಣಾರ್ಪಣೆಯ ನಂತರದ ಬಾಗಲಕೋಟೆ', 'ಕಾವೇರಿ - ಕಾತರಕ್ಕೆ ತೆರೆ, ಕರ್ನಾಟಕಕ್ಕೆ ಬರೆ', 'ಸಂಕಷ್ಟ ಸೂತ್ರವೊಂದೇ ಪರಿಹಾರ', ಮುಗಿಯಿತು ಕಾವೇರಿ ತಂಟೆ!', ಸಿದ್ಧರಾಮಯ್ಯ ಮತ್ತು ಕರ್ನಾಟಕದ ಐಡೆಂಟಿಟಿ' ಲೇಖನಗಳು ಆಯಾ ಸಂದರ್ಭದ ಪರಿಸ್ಥಿತಿ, ಸಮಸ್ಯೆಗನುಗುಣವಾಗಿ ಬರೆದುದಾಗಿದೆ‌. ಬೆನ್ನುಡಿಯಲ್ಲಿ ಡಾ.ಶಿವರಾಜ ಪಾಟೀಲರು, "ಇಲ್ಲಿರುವ ಲೇಖನಗಳು ಬಿಡಿಬಿಡಿಯಾಗಿದ್ದರೂ ಇಡಿಯಾದ ಅನುಭವವನ್ನು ಹೇಳುತ್ತವೆ. ಒಂದಕ್ಕೊಂದು ಬೆಸೆದುಕೊಂಡಿವೆ. ಹೀಗಾಗಿ ಇಡೀ ಕೃತಿ ಸಮಗ್ರತೆಯಿಂದ ಕೂಡಿದ್ದು, ಓದುಗನಿಗೆ ಒಂದು ವಿಷಯದ ಜ್ಞಾನವನ್ನು ಒದಗಿಸಿ ಕೊಡುತ್ತದೆ.

ಈ ಕೃತಿಯನ್ನು ಓದಿ ಮುಗಿಸಿದಾಗ, ಡಾ. ಶಿವರಾಜ ಪಾಟೀಲರ ಮಾತು ಸತ್ಯವೆನಿಸುವುದು.

ಕಾವ್ಯಶ್ರೀ ಮಹಾಗಾಂವಕರ್‌