About the Author

ವಿದ್ವಾನ್ ಎನ್. ರಂಗನಾಥಶರ್ಮಾ ಅವರು 1916 ಜನವರಿ 07ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ನಡಹಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ-ತಿಮ್ಮಪ್ಪ, ತಾಯಿ-ಜಾನಕಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ನಡಹಳ್ಳಿಯಲ್ಲಿ, ಮಾಧ್ಯಮಿಕ ವಿದ್ಯಾಭ್ಯಾಸವು ಸೊರಬದಲ್ಲಿ ಮುಗಿಯಿತು. ಅಗಡಿಯ ಆನಂದವನ ಆಶ್ರಮದಲ್ಲಿ ಸಂಸ್ಕೃತ ಕಲಿತ ಅವರು ನಂತರ ಕೆಳದಿ ಸಂಸ್ಕೃತ ಪಾಠಶಾಲೆಗೆ ಸೇರಿದರು. ಇದರೊಂದಿಗೆ ಖಾಸಗಿಯಾಗಿ ಮದರಾಸಿನ ವಿಶ್ವವಿದ್ಯಾಲಯದ ಕನ್ನಡ ವಿದ್ವತ್ ಮತ್ತು ಮೈಸೂರಿನ ಕನ್ನಡ ಪಂಡಿತ ಪರೀಕ್ಷೆಗಳನ್ನೂ ಪಾಸ್ ಮಾಡಿದರು. ಡಿವಿಜಿ ಅವರ ಒಡನಾಡಿ ಆಗಿದ್ದ ಅವರು ಡಿವಿಜಿ ಮರಣಾ ನಂತರ ‘ಮರಳು ಮುನಿಯನ ಕಗ್ಗ’ದ ಕರಡು ತಿದ್ದಿದವರೇ ರಂಗನಾಥ ಶರ್ಮಾ. 

ಸಂಸ್ಕೃತ ಕೃತಿಗಳು: ಬಾಹುಬಲಿ ವಿಜಯಂ (ಐತಿಹಾಸಿಕ ನಾಟಕ), ಏಕಚಕ್ರಂ (ಪೌರಾಣಿಕ ನಾಟಕ, ಗುರುಪಾರಮಿತ್ರ ಚರಿತಂ, ಗೊಮ್ಮಟೇಶ್ವರ ಸುಪ್ರಭಾತಂ, ಗೊಮ್ಮಟೇಶ ಪಂಚಕಂ.

ಕನ್ನಡ ಕೃತಿಗಳು: ಭಾಷಾಂತರ ಪಥ, ಲೌಕಿಕ ನ್ಯಾಯಗಳು, ಹೊಸಗನ್ನಡ ವ್ಯಾಕರಣ, ವಾಲ್ಮೀಕಿ ಮುನಿಗಳ ಹಾಸ್ಯಪ್ರವೃತ್ತಿ, ವರದಹಳ್ಳಿ ಶ್ರೀಧರ ಸ್ವಾಮಿಗಳು, ಶ್ರೀ ಕಾಮಚಂದ್ರ, ಬಾಸ, ಕಾಳಿದಾಸ ಮತ್ತು ಭವಭೂತಿ ಕವಿಗಳ ಪ್ರಭೆಯಲ್ಲಿ ಸೂಕ್ತಿವ್ಯಾಪ್ತಿ , ಉಪನಿಷತ್ತಿನ ಕಥೆಗಳು 

ಭಾಷಾಂತರ ಕೃತಿಗಳು: ವಾಲ್ಮೀಕಿ ರಾಮಾಯಣ, ಅಮರಕೋಶ, ವಿದುರನೀತಿ, ಶ್ರೀಮದ್ಭಾಗವತದ ಹತ್ತನೆಯ ಸ್ಕಂದ, ಶ್ರೀವಿಷ್ಣುಪುರಾಣ, ವ್ಯಾಸತಾತ್ಪರ್ಯನಿರ್ಣಯ, ತೋಟಕಾಚಾರ್ಯರ ಶ್ರುತಿಸಾರ ಸಮುದ್ಧರಣ, ವಾಕ್ಯಪದೀಯದ ಬ್ರಹ್ಮಕಾಂಡ, ವಿದ್ಯಾರಣ್ಯರ ಪಂಚದಶಿ,

ಸಂಪಾದಿತ ಕೃತಿಗಳು: ಭಗವಾನ್ ನಾಮಾವಳಿ, ಸುಭಾಷಿತ ಮಂಜರಿ, ಶ್ರೀಚಾಮರಾಜೋಕ್ತಿವಿಲಾಸ ರಾಮಾಯಣ.

ಅವರ ಸಾಹಿತ್ಯ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ, ಸಂಸ್ಕೃತ ಅಧ್ಯಾಪನಕ್ಕಾಗಿ ರಾಷ್ಟ್ರಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ. ಡಿವಿಜಿ ಬಳಗ ಕೊಡಮಾಡುವ ಡಿವಿಜಿ ಪ್ರಶಸ್ತಿಯ ಮೊದಲ ಗೌರವ. ತಿರುಪತಿಯ ಸಂಸ್ಕೃತ ವಿಶ್ವವಿದ್ಯಾನಿಲಯದ ‘ಮಹಾಮಹೋಪಾಧ್ಯಾಯ’ ಎಂಬ ಗೌರವ, ಸಂಸ್ಕೃತ ಭಾಷಾ ವಿದ್ವತ್ತಿಗಾಗಿ ರಾಷ್ಟ್ರೀಯ ಪ್ರಶಸ್ತಿ, ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ (ಹೋನರಿಸ್ ಕಾಸಾ ಡಿ.ಲಿಟ್. ಪದವಿ),  ಸಂಸ್ಕೃತದಲ್ಲಿನ ಬರವಣಿಗೆಗಾಗಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ನೀಡುವ ಪುಸ್ತಕ ಪ್ರಶಸ್ತಿ, ಆದಿಚುಂಚನಗಿರಿ ಮಹಾಸಂಸ್ಥಾನ ಕೊಡಮಾಡುವ ಚುಂಚಶ್ರೀ ಪ್ರಶಸ್ತಿ, ರಾಷ್ಟ್ರಪತಿಗಳ ಗೌರವ ಪ್ರಶಸ್ತಿ ಪತ್ರ ಮುಂತಾದ ಪ್ರಶಸ್ತಿ ಬಿರುದುಗಳು ಅವರನ್ನರಸಿವೆ. 

5ನೇ ಅಖಿಲ ಕರ್ನಾಟಕ ಸಂಸ್ಕೃತ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದು, ಅನೇಕ ಮಠ ಮಂದಿರ, ಸಂಘ-ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ. 2014ರ ಜನವರಿ 25ರಂದು ಮೈಸೂರಿನ ಕುವೆಂಪು ನಗರದಲ್ಲಿಯ ತಮ್ಮ ಮನೆಯಲ್ಲಿ ನಿಧನರಾದರು.

ಎನ್. ರಂಗನಾಥಶರ್ಮಾ

(07 Jan 1916-25 Jan 2014)