About the Author

ಲೇಖಕ ಪಿ.ವಿ. ಕೃಷ್ಣಮೂರ್ತಿ ಅವರು ಮೂಲತಃ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸಮಂದೂರು  ಗ್ರಾಮದವರು. (ಜನನ 05-01-1951) ತಂದೆ ಜಿ.ಎನ್. ಪಿಳ್ಳಪ್ಪ, ತಾಯಿ ಪಾಪಮ್ಮ. ಸಮಂದೂರು ಹಾಗೂ ಅತ್ತಿಬೆಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದು, ಮೈಸೂರು ವಿ.ವಿ.ಯಿಂದ ಬಿಎ ಹಾಗೂ ಎಂ.ಎ. ಪದವೀಧರರು. ‘ಬಾಣರಸರ ಶಾಸನಗಳು : ಒಂದು ಅಧ್ಯಯನ’ ವಿಷಯವಾಗಿ ಕನ್ನಡ ವಿ.ವಿ. ಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಬೆಂಗಳೂರಿನ ಎನ್.ಜಿ.ಇ.ಎ‍.ಫ್. ನಲ್ಲಿ ತಾಂತ್ರಿಕ ತರಬೇತಿ ಹಾಗೂ ಬೆಂಗಳೂರಿನ ಎಸ್.ಜೆ.ಪಾಲಿಟೆಕ್ನಿಕ್ ನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಡಿಪ್ಲೋಮಾ ಪಡೆದರು. ಎಚ್.ಎ.ಎಲ್.ನ ವೈಮಾಂತರಿಕ್ಷ ವಿಭಾಗದಲ್ಲಿ ಎಂಜಿನಿಯರರಾಗಿ ಸೇವೆ ಸಲ್ಲಿಸಿ, ಈಗ ನಿವೃತ್ತರು.

ಕನ್ನಡ ಸಾಹಿತ್ಯ ಪರಿಷತ್ತಿನ ‘ಶಾಸನ ಶಾಸ್ತ್ರ’ ಗೌರವ ಉಪನ್ಯಾಸಕರು, ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನ ಮತ್ತು ಐಜಿಎನ್ಸಿ ಯಲ್ಲಿ ಹಸ್ತಪ್ರತಿಶಾಸ್ತ್ರದ ಗೌರವ ಉಪನ್ಯಾಸಕರು ಹಾಗೂ ಕರ್ನಾಟಕ ಸರ್ಕಾರದ ಕನ್ನಡ ಭಾಷಾ ಬೋಧಕರಾಗಿ ಸೇವೆ ಸಲ್ಲಿಸಿದ್ದು, ಶಾಸನ ಹಾಗೂ ಹಸ್ತಪ್ರತಿಗಳ ಅಧ್ಯಯನ ಪರಿಣಿತರು.

ಕೃತಿಗಳು: ಸುಗುಟೂರು ವೀರಶೈವ ಅರಸುಮನೆತನ, ತಮಿಳುನಾಡಿನ ಕನ್ನಡ ಶಾಸನಗಳು, ಶಾಸನ ಮಂಥನ, ಶಾಸನ ಇತಿಹಾಸ ಮಂಥನ, ಬಾಣರಸರ ಶಾಸನಗಳು: ಒಂದು ಅಧ್ಯಯನ,  (ಸಂಶೋಧನ ಕೃತಿಗಳು), ವಿಂಧ್ಯ ನರ್ಮದೆಯರ ನಾಡಿನಲ್ಲಿ (ಪ್ರವಾಸ ಕಥನ), ‘ಇತಿಹಾಸ ದರ್ಶನ ಬೆಳ್ಳಿ ಬೆಳಸು ಲೇಖಕ- ಲೇಖನ ಸೂಚಿ‘ ಹಾಗೂ ಕರ್ನಾಟಕ ಇತಿಹಾಸ ಅಕಾದೆಮಿಯ ವಾರ್ಷಿಕ ಪ್ರಕಟಣೆ "ಇತಿಹಾಸ ದರ್ಶನ”ದ 19 ಸಂಪುಟಗಳ ಸಂಪಾದಕರು, ಅಗಸ್ತ್ಯ ಮತ್ತು ಕಾವೇರಿ (ಅನುವಾದ) ಹಾಗೂ ಸಹಲೇಖಕರೊಂದಿಗೆ ಬರೆದ ಕೃತಿಗಳ ಪೈಕಿ ‘ಶ್ರೀ ಭೈರವ ಕ್ಷೇತ್ರದ ಸೀತಿಬೆಟ್ಟ’, ಎಚ್.ಎ.ಇ.ಎ. ಹೆಜ್ಜೆ ಗುರುತುಗಳು, ಸುವರ್ಣ ಶಕ್ತಿ, ಕರ್ನಾಟಕ ಲೋಚನ ಲೇಖನ ಸೂಚಿ, ಪ್ರಮುಖವಾದವು. ಸಂಪಾದಿತ ಕೃತಿಗಳ ಪೈಕಿ -ಸೂರ್ಯಕೀರ್ತಿ (ಡಾ. ಸೂರ್ಯನಾಥ ಕಾಮತ್ ಅವರ ಅಭಿನಂದನ ಗ್ರಂಥ), ಗುಣಮಧುರ (ಡಾ. ದೇವರಕೊಂಡಾರೆಡ್ಡಿ ಅವರ ಅಭಿನಂದನ ಗ್ರಂಥ), ಏರೋಸ್ಪೇಸ್ ಕನ್ನಡ ಸಂಘದ ದಶಮಾನೋತ್ಸವ ಸ್ಮರಣ ಸಂಚಿಕೆ, ‘ಬನ್ನೇರುಘಟ್ಟ ದರ್ಶನ’ ಪ್ರಮುಖವಾದವು.

ಸನ್ಮಾನಗಳು: ಎಚ್.ಎ.ಎಲ್ ರಾಜ್ಯೋತ್ಸವ ಸಮಿತಿಯಿಂದ ಸನ್ಮಾನ, ವಿಮಾನ ಕಾರ್ಖಾನೆ ಕಾರ್ಮಿಕ ಸಂಘದ ಸುವರ್ಣ ಮಹೋತ್ಸವದಲ್ಲಿ ಸನ್ಮಾನ, ಕರ್ನಾಟಕ ಇತಿಹಾಸ ಅಕಾದೆಮಿಯಿಂದ ಅಭಿನಂದನಾ ಗೌರವ, ಡಾ. ಬಾ.ರಾ. ಗೋಪಾಲ ಶಾಸನ ಪ್ರಶಸ್ತಿ, ಶ್ರವಣ ಬೆಳಗೊಳದ ‘ಶಾಸನ ಸಾಹಿತ್ಯ ಪ್ರಶಸ್ತಿ’, ಗದಗಿನಲ್ಲಿ ನಡೆದ 76ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ವಿಜಯನಗರ ಅಧ್ಯಯನದ 23ನೆಯ ಸಮಾವೇಶದ ಸರ್ವಾಧ್ಯಕ್ಷತೆ, ಮಧ್ಯಪ್ರದೇಶದ ಸಾಗರದಲ್ಲಿ ನಡೆದ ಶ್ರೀ ದಿಗಂಬರ ಜೈನ ಅತಿಶಯ ಕ್ಷೇತ್ರ ಮಹೋತ್ಸವದಲ್ಲಿ ಸನ್ಮಾನ ಹಾಗೂ ‘ಅಕ್ಷರ ಮೇರು’ ಎಂಬುದು ಇವರ ಅಭಿನಂದನಾ ಗ್ರಂಥ.

 

ಪಿ.ವಿ.ಕೃಷ್ಣಮೂರ್ತಿ

(05 Jan 1951)