About the Author

ನಾಡೋಜ ಎಸ್‌.ಆರ್‌.ರಾಮಸ್ವಾಮಿ ಅವರು ಪತ್ರಕರ್ತರಾಗಿ, ಲೇಖಕರಾಗಿ, ಚಿಂತಕರಾಗಿ, ವಿಮರ್ಶಕರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ನಾಡಿನಲ್ಲಿ ಸುಪರಿಚಿತರು. ಮೂಲತಃ ಬೆಂಗಳೂರಿನವರೇ ಆದ ರಾಮಸ್ವಾಮಿ ಅವರು ಕನ್ನಡ, ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್, ಜರ್ಮನ್, ಫ್ರೆಂಚ್ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿದವರು. 1950ರ ದಶಕದಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು, 1972 ರಿಂದ 79ರ ವರೆಗೆ ಸುಧಾ ವಾರಪತ್ರಿಕೆಯ ಮುಖ್ಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದರು. 1980ರಲ್ಲಿ ರಾಷ್ಟೋತ್ಥಾನ ಸಾಹಿತ್ಯ ಮತ್ತು ಉತ್ಥಾನ ಮಾಸಪತ್ರಿಕೆಯ ಗೌರವ ಪ್ರಧಾನ ಸಂಪಾದಕರಾದ ಇವರು ಇಂದಿಗೂ ಆ ಹುದ್ದೆಯಲ್ಲಿ ಸೇವಾನಿರತರಾಗಿದ್ದಾರೆ.

ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು 55 ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿರುವ ಅವರು ಸಾವಿರಾರು ಲೇಖನ ಬರೆದಿದ್ದಾರೆ. ಐದು ದಶಕಗಳ ಸಾಹಿತ್ಯ ಮತ್ತು ಪತ್ರಿಕೋದ್ಯಮ ಜೀವನದ ನಡುವೆ ಸ್ವದೇಶಿ ಚಳುವಳಿಯ ಬಲವಾದ ಪ್ರತಿಪಾದಕರೂ ಹೌದು. ಡಿ.ವಿ.ಗುಂಡಪ್ಪ ಮತ್ತಿತರ ಶ್ರೇಷ್ಠ ಚಿಂತಕರ ಒಡನಾಟ ಇವರಿಗೆ ಲಭಿಸಿತ್ತು. ಡಿ.ವಿ.ಜಿ. ಅವರೊಂದಿಗೆ ಅತ್ಯಂತ ನಿಕಟ ಸಂಪರ್ಕ ಹೊಂದಿದ್ದ ಅವರು, ಡಿವಿಜಿಯವರ ಅತ್ಯಮೂಲ್ಯ ಗ್ರಂಥವಾದ ’ಜೀವನಧರ್ಮಯೋಗ’ ಸೇರಿದಂತೆ ಅನೇಕ ಗ್ರಂಥಗಳ ಪ್ರಕಾಶನಕ್ಕೆ ಬಹುಮುಖವಾಗಿ ಶ್ರಮಿಸಿದವರು. ಇವರು ಬರೆದ ’ಶತಮಾನದ ತಿರುವಿನಲ್ಲಿ ಭಾರತ’ ಕೃತಿಗೆ 1992ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. 2006ರಲ್ಲಿ 'ಆರ್ಯಭಟ' ಪ್ರಶಸ್ತಿ, 2008ರಲ್ಲಿ ರಾಜ್ಯಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2009ರಲ್ಲಿ ಮಿಥಿಕ್ ಸೊಸೈಟಿ ಶತಮಾನದ ಪ್ರಶಸ್ತಿ, 2011ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ, 2011ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ 'ವರ್ಷದವ್ಯಕ್ತಿ' ಪ್ರಶಸ್ತಿ, ಮೈಸೂರಿನ ಡಿವಿಜಿ ಬಳಗದಿಂದ 'ಡಿವಿಜಿ ಪ್ರಶಸ್ತಿ' ಹಾಗೂ 2015ರಲ್ಲಿ ಹಂಪಿ ವಿಶ್ವವಿದ್ಯಾನಿಲಯದಿಂದ ಪ್ರತಿಷ್ಠಿತ 'ನಾಡೋಜ' ಪ್ರಶಸ್ತಿಗಳಿಂದ ರಾಮಸ್ವಾಮಿ ಅವರು ಪುರಸ್ಕೃತರಾಗಿದ್ದಾರೆ.

ಎಸ್‌.ಆರ್‌. ರಾಮಸ್ವಾಮಿ

Comments