ಬಾಳನ್ನು ತಿಳಿಯಲು ಬೇಕಾದ ಸಾಧನಗಳನ್ನು ನಿರೂಪಿಸಿದ ಕಾದಂಬರಿ ‘ಬೆಟ್ಟದ ಜೀವ’


'ಬೆಟ್ಟದಜೀವ' ಕಾದಂಬರಿಯ ಕುರಿತು ಇದುವರೆಗೆ ಹಲವು ದೃಷ್ಟಿಕೋನಗಳ ವಿಮರ್ಶೆ ಪ್ರಕಟವಾಗಿದೆ. ಅವುಗಳಲ್ಲಿ ಮುಖ್ಯವಾದ ಬರೆಹಗಳನ್ನು ಸಂಗ್ರಹಿಸುವುದು ಮತ್ತು ಹೊಸ ತಲೆಮಾರಿನ ವಿಮರ್ಶಕರ ಪ್ರತಿಕ್ರಿಯೆಗಳನ್ನು ದಾಖಲಿಸುವುದು ಪ್ರಸ್ತುತ ಪುಸ್ತಕದ ಮೂಲ ಉದ್ದೇಶ ಎಂದಿದ್ದಾರೆ ಲೇಖಕ ಶ್ರೀಧರ ಹೆಗಡೆ ಭದ್ರನ್. ಅವರು ಸಂಪಾದಿಸಿರುವ ವಿಮರ್ಶಾ ಲೇಖನಗಳ ಸಂಕಲನ ಶಿವರಾಮ ಕಾರಂತರ ಬೆಟ್ಟದ ಜೀವ ಕೃತಿಗೆ ಬರೆದ ಪ್ರಸ್ತಾವನೆ ನಿಮ್ಮ ಓದಿಗಾಗಿ. 

ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಕೋಟ ಶಿವರಾಮ ಕಾರಂತರು (1902-1997) ಒಂದು ವಿಸ್ಮಯ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃತಿ ರಚನೆ, ಪತ್ರಿಕೋದ್ಯಮ, ಚಲನಚಿತ್ರ, ನಾಟಕ, ಯಕ್ಷಗಾನ, ಪರಿಸರ, ಶಿಕ್ಷಣ, ಸಮಾಜ ಸೇವೆ ಹೀಗೆ ಹಲವಂದದ ಸೇವೆಗಳನ್ನು ಸಲ್ಲಿಸಿ ಕನ್ನಡ ನಾಡಿನ ಮನೆ ಮಾತಾದವರು ಕಾರಂತರು, “ಕಡಲತೀರದ ಭಾರ್ಗವ', 'ಚಲಿಸುವ ವಿಶ್ವಕೋಶ' ಹೀಗೆ ಅನೇಕ ಕೃತಾರ್ಥ ನಾಮಗಳನ್ನು ನಾಡವರಿಂದ ಪಡೆದಿದ್ದ ಅವರು ಒಬ್ಬ ಶ್ರೇಷ್ಠ ಮಾನವತಾವಾದಿ. ಬದುಕನ್ನು ಒಂದು ಆಟವೆಂಬಂತೆ ಕಂಡು, ಅದನ್ನು ಶ್ರದ್ಧಾಪೂರ್ವಕವಾಗಿ ಆಡಿ ಸೈ ಎನಿಸಿಕೊಂಡು ಒಂದು ಶತಮಾನದ ಬದುಕನ್ನು ಉಂಡು ನಿರ್ಗಮಿಸಿದ ಮಹಾನ್ ಶಕ್ತಿ. ಯಾವುದೇ ವಿಶ್ವವಿದ್ಯಾಲಯದ ಪದವಿ ಪಡೆದಿರದಿದ್ದರೂ ಸ್ವತಃ ಒಂದು ವಿಶ್ವವಿದ್ಯಾಲಯ ಸದೃಶ ಕಾರ್ಯ ಮಾಡಿದವರು. ಈ ಕಾರ್ಯಗೌರವಕ್ಕಾಗಿ ಹಲವು ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಪದವಿಗಳನ್ನು ಪಡೆದವರು. ಸಾಹಿತ್ಯ, ವಿಜ್ಞಾನ ಮತ್ತು ಕಲೆ ಹೀಗೆ ಮೂರೂ ಜ್ಞಾನ ಶಾಖೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಪ್ರಯೋಗಶೀಲರು ಶಿವರಾಮ ಕಾರಂತರು, ಕನ್ನಡ ಸಾಹಿತ್ಯ ಲೋಕಕ್ಕೆ ಅವರ ಕಾಣ್ಕೆ ಅಪೂರ್ವವಾದುದು. ಬದುಕನ್ನು ಅದ್ಭುತವಾಗಿ ಪ್ರೀತಿಸಿದ್ದ, ತಮ್ಮ ನಂಬಿಕೆ, ಶ್ರದ್ದೆ, ವೈಚಾರಿಕತೆಗಳ ಆಧಾರದ ಮೇಲೆ ಬದುಕಿದ ಅವರೊಂದು ದೊಡ್ಡ ಮಾದರಿ. ಬಾಳ್ವೆ ಬದುಕುಗಳ ಬಗ್ಗೆ ಕಾರಂತರ ಜೀವನ ದೃಷ್ಟಿ ಅವರ ಕೃತಿಗಳಲ್ಲಿ ಹೇಗೋ ಹಾಗೆಯೇ 'ಬಾಳ್ವೆಯೇ ಬೆಳಕು' ಎಂಬ ಅವರ ವೈಚಾರಿಕ ಗ್ರಂಥದಲ್ಲಿ ಹರಳುಗಟ್ಟಿಕೊಂಡಿದೆ; “ಬಾಳ್ಮೆ ಇರುವುದೇ ಬದುಕುವುದಕ್ಕಾಗಿ, ಬದುಕಿನಿಂದ ಬೆಳೆಯುವುದಕ್ಕಾಗಿ, ಮಳೆಯಾಗಿ ಉದುರಿದ ಹನಿ ಅಲ್ಲವಾಗಿರಬಹುದು. ಆ ಹನಿ ನೆಲದಲ್ಲಿ ಬಿದ್ದು, ಹುದುಗಿ ಹೋಗುವ ಅದರ ಆಟ ಕ್ಷಣಿಕವಾಗಿಯೂ ತೋರಬಹುದು. ಜೀವನ ಪ್ರವಾಹದಲ್ಲಿ ಹುಟ್ಟಿ ಸಾಯುವ ಪ್ರತಿಯೊಂದು ಜೀವಿಯೂ ಕ್ಷಣಿಕವೂ ಅಲ್ಪವೂ ಹೌದು. ಆದರೆ ಅಂತಹ ಹನಿಗಳೇ ನೆಲವನ್ನೊಡೆದು ಬುಗ್ಗೆಗಳಾಗುತ್ತವೆ. ಅವು ಜಿನುಗಬೇಕು. ಹಂಬಲಿಸಿ ಹರಿಯಬೇಕು. ನದಿಯಾಗಿ ಹಿಗ್ಗಿ ವಿಸ್ತರಿಸಿ ತೊಡರುಗಳನ್ನು ಕೊಚ್ಚಿ ಮುಂದಕ್ಕೆ ಹರಿಯಬೇಕು. ಮಳೆಯ ಹನಿಗೆ ನಾಳಿನ ನದಿಯ ಕಲ್ಪನೆ ಆಗದಾದರೂ ಆ ನದಿಗೆ ಅಂತಹ ಹನಿಗಳೇ ಕಾರಣ” ಬದುಕನ್ನು ಬಾಳುವ ಪ್ರತ್ಯೇಕ ವ್ಯಕ್ತಿತ್ವಗಳೇ ಸೇರಿ ಸಮಾಜವಾಗುವುದು. ಅದರಲ್ಲಿ ಅಪರೂಪದ ವ್ಯಕ್ತಿತ್ವಗಳು ಮಾದರಿಯಾಗಿ ಉಳಿಯುತ್ತವೆ. ಅಂತಹ ವ್ಯಕ್ತಿತ್ವಗಳಲ್ಲಿ ಶಿವರಾಮ ಕಾರಂತರು ಒಬ್ಬರು ಮತ್ತು ಪ್ರಮುಖರು.

ನಾಡಿನ ಪಶ್ಚಿಮ ಕರಾವಳಿಯ ಕೋಟ ಶಿವರಾಮ ಕಾರಂತರ ಹುಟ್ಟೂರು. ಪಶ್ಚಿಮದಲ್ಲಿ ಭೋರ್ಗರೆಯುವ ಅರಬ್ಬಿ ಸಮುದ್ರ, ಪೂರ್ವದಲ್ಲಿ ಪಶ್ಚಿಮಘಟ್ಟಗಳ ಶ್ರೇಣಿ. ಇಂತಹ ಪ್ರಕೃತಿ ರಮ್ಯ ತಾಣದಲ್ಲಿ 1902ರ ಅಕ್ಟೋಬರ್ 10ರಂದು ಕಾರಂತರು ಜನಿಸಿದರು. ತಂದೆ ಶೇಷ ಕಾರಂತರು, ತಾಯಿ ಸಹನಾಮೂರ್ತಿ ಲಕ್ಷ್ಮಿ, ಐಗಳ ವೃತ್ತಿಯಿಂದ ತಂದೆಗೆ ಬರುತ್ತಿದ್ದ ತಿಂಗಳ ಎಂಟಾಣೆ ಸಂಬಳದ ಮೇಲೆ ಬದುಕು ನಡೆಯುತ್ತಿದ್ದುದನ್ನು ಅವರು ದಾಖಲಿಸಿದ್ದಾರೆ. ಹುಟ್ಟಿದ 14 ಮಕ್ಕಳಲ್ಲಿ ಎಂಟು ಗಂಡು ಹಾಗೂ ಮೂರು ಹೆಣ್ಣು ಮಕ್ಕಳ ಜವಾಬ್ದಾರಿ ಹೊತ್ತಿದ್ದ ತಂದೆಯ ಆರ್ಥಿಕ ಸ್ಥಿತಿ ಕಠಿಣವಿತ್ತು. ಚಿಕ್ಕಂದಿನಿಂದಲೂ ಸ್ವತಂತ್ರ ವ್ಯಕ್ತಿತ್ವವನ್ನು ರೂಢಿಸಿಕೊಂಡು ಬಂದಿದ್ದ ಕಾರಂತರು ಬದುಕಿನಲ್ಲಿ ಹೋರಾಟವನ್ನು ಬಯಸಿದವರು. ಅಂದಿನ ಕಾಲದಲ್ಲಿದ್ದ ಐಗಳ ಮಠಕ್ಕೆ ಹೋಗಿ ಕಲಿಯದೇ ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣ ಹಾಗೂ ಕುಂದಾಪುರದಲ್ಲಿ ಪ್ರೌಢ ಶಿಕ್ಷಣವನ್ನು ಪಡೆದರು. ಕಾರಂತರ ಆತ್ಮಕಥನ 'ಹುಚ್ಚು ಮನಸ್ಸಿನ ಹತ್ತು ಮುಖಗಳು' ಹಾಗೂ 'ಸ್ಮೃತಿ ಪಟಲದಿಂದ' ಜೀವನ ಕಥನಗಳು ಅವರ ಸಮಗ್ರ ಜೀವನದ ಚಿತ್ರಣವನ್ನು ಒದಗಿಸುತ್ತವೆ. ಆತ್ಮಕಥನದಲ್ಲಿ ಕಾರಂತರು; “ನಾವು ಭೂಮಿಗೆ ಬಂದಾಗಿನ ನಮ್ಮ ಸುತ್ತಲ ಬದುಕನ್ನು ಇದಕ್ಕಿಂತ ಒಂದಷ್ಟು ಚೆಂದವನ್ನಾಗಿ ಮಾಡಿ ಇಲ್ಲಿಂದ ಹೊರಡಬೇಕು ಎಂಬ ಭಾವನೆ ನನ್ನ ಬದುಕನ್ನು ನಡೆಸಿದೆ. ಸುತ್ತ ಮನುಷ್ಯ ಯಾರ ಯಾವ ಆಶೀರ್ವಾದದಿಂದಲೂ ಅಲ್ಲ, ಸ್ವಪ್ರಯತ್ನದಿಂದ, ಯಾವ ಹರಕೆಯಿಂದಲೂ ಅಲ್ಲ, ನಮ್ಮ ನಡೆನುಡಿಗಳಿಂದ”ಎಂದಿದ್ದಾರೆ. ಮನುಷ್ಯ ಸ್ವಪ್ರಯತ್ನದಿಂದಲೇ ಬದುಕನ್ನು ಗೆಲ್ಲಬೇಕೆ ಹೊರತು ಯಾರ ಕಾರುಣ್ಯದಿಂದಲೂ ಅಲ್ಲ ಎಂಬುದು ಕಾರಂತರ ದೃಢವಾದ ಪ್ರತಿಪಾದನೆ. ಹೀಗಾಗಿ ತಮ್ಮ ಕಾದಂಬರಿಗಳನ್ನು ತಾವೇ ವಿಮರ್ಶಿಸಿಕೊಳ್ಳುತ್ತಾ ಒಂದೆಡೆ ಕಾರಂತರು; “ನನ್ನ ಲೇಖನ ಬರೆಹಗಳು ಸಾಮಾನ್ಯವಾಗಿ ಸಿಹಿಪಾನಕಗಳಾಗಿ ಇರುವುದಿಲ್ಲ. ನನ್ನ ಬರೆಹದಲ್ಲಿ ಬೆಲ್ಲಕ್ಕಿಂತ ಬೇವು ಅಧಿಕ. ಸಾಹಿತಿಯ ಧ್ವನಿಯಿಂದ ಜಗತ್ತಿನ ಉದ್ದಾರವಾಗುತ್ತದೆಂದು ನಾನು ತಿಳಿದಿಲ್ಲ. ನಾನು ಮಾಡುತ್ತಿರುವ ಕೆಲಸಗಳು ಇತರರಿಗೆ ಪ್ರಿಯವಾಗಬೇಕೆಂಬ ಇಚ್ಛೆ ತೀರ ಸ್ವಾಭಾವಿಕವೇ. ನಾವು ಸಾಹಿತಿಗಳೆನಿಸಿ ಬರೆಯುವುದು ಕೂಡ ಇತರರಿಗೆ ತಿಳಿಸಬೇಕೆಂಬ ಉದ್ದೇಶದಿಂದಲೇ”-ಎಂದಿದ್ದಾರೆ. ಬದುಕಿನ ಸಿಹಿ-ಕಹಿಗಳನ್ನು ಯಾವ ಮುಲಾಜಿಗೂ ಒಳಗಾಗದೇ ತಮ್ಮ ಬರೆಹಗಳ ಮೂಲಕ ಕಾರಂತರು ಅಭಿವ್ಯಕ್ತಿಸಿದ್ದಾರೆ.

1924ರಿಂದಲೇ ಕಾರಂತರು ಬರೆವಣಿಗೆಯನ್ನು ಆರಂಭಿಸಿದರು. ತಿರುಮಲಾಂಬ, ಬಿ. ವೆಂಕಟಾಚಾರ್ಯ ಮೊದಲಾದವರು ಬರೆದ ಸಾಹಿತ್ಯವನ್ನು ಓದಿದಾಗ ತಾವೂ ಬರೆಯಬೇಕೆಂಬ ಕಾಂಕ್ಷೆ ಹುಟ್ಟಿತಂತೆ. 'ವಿಚಿತ್ರ ಕೂಟ' (1924) ಕಾರಂತರ ಮೊದಲ ಕಾದಂಬರಿಯಾದರೆ: “ಅಂಟಿದ ಅಪರಂಜಿ'(1986) ಕೊನೆಯದು. ತಾವು ನಡೆಸುತ್ತಿದ್ದ 'ವಸಂತ' ಪತ್ರಿಕೆಯಲ್ಲಿ ಪ್ರಕಟಣೆಗಾಗಿ ತಮ್ಮ ಆರಂಭದ ಪತ್ತೇದಾರಿ ಕಾದಂಬರಿಗಳನ್ನು ಕಾರಂತರು ಬರೆದರು. ಅವುಗಳನ್ನು ತುಂಬಾ ವಿನಯದಿಂದ ತೊದಲ್ನುಡಿ ಕಾದಂಬರಿ ಎಂದೇ ಅವರು ಕರೆದುಕೊಂಡಿದ್ದಾರೆ. ಆ ಪತ್ತೇದಾರಿ ಕಾದಂಬರಿಗಳ ಬಗ್ಗೆ ಅವರು ತಮ್ಮ ಆತ್ಮಕಥನದಲ್ಲಿ ಹೀಗೆ ಉಲ್ಲೇಖಿಸಿದ್ದಾರೆ; “ಪತ್ರಿಕೆ ಹೊರಡಿಸಿದ ಮೇಲೆ ಅದರಲ್ಲಿ ಲೇಖನ ತುಂಬಿಸಬೇಡವೇ? ಆಗ ತೊಡಗಿತು ಒದ್ದಾಟ, ಸ್ಥಳೀಯ ಅನೇಕ ಮಿತ್ರರನ್ನು ಕಾಡಿ ಲೇಖನ ಬರೆಸಿದೆ. ನಾನೇ ಬಹುಭಾಗ ತುಂಬಿಸುತ್ತಿದ್ದೆ. ಮೊದಲ ಎರಡು ವರ್ಷಗಳು ವಿಚಿತ್ರಕೂಟ, ಭೂತ ಎಂಬ ಎರಡು ಪತ್ತೇದಾರಿ ಕಥೆಗಳನ್ನು ಕ್ರಮಶಃ ಪ್ರಕಟಿಸಿದೆ. ಇಂದಿಗೂ ಅವುಗಳ ಕೀರ್ತಿ ಉಳಿದಿದೆ...ಆದರೆ ನನಗೆ ಬಹಳ ಬೇಗನೆ ಅತೃಪ್ತಿ ಬಂತು. ಒಬ್ಬ ಹಿರಿಯರು ಉಗ್ರಾಣ ಮಂಗೇಶರಾಯ ಎಂಬುವರು ಒಂದು ದಿನ; 'ಇಂಥ ಕಥೆಗಳಿಂದ ಏನು ಉದ್ದೇಶ ಸಾಧನೆ ಆಗುತ್ತದೆ' ಎಂದು ಕೇಳಿದರು. ಆಗ ನಾನು ಆ ಪ್ರಶ್ನೆಯನ್ನು ಕುರಿತು ವಿಚಾರ ಮಾಡಬೇಕಾಯಿತು. ಹೀಗೆ ಆರಂಭದಲ್ಲಿ ಪತ್ತೇದಾರಿ ಕಾದಂಬರಿಗಳನ್ನು ಬರೆದಿದ್ದ ಕಾರಂತರನ್ನು, ಗಂಭೀರ ಬರೆಹಗಳ ಕಡೆಗೆ ಚಲಿಸುವಂತೆ ಮಾಡಿದವರು ಉಗ್ರಾಣ ಮಂಗೇಶರಾಯರು. ಹಲವು ಲೇಖಕರ ಬದುಕಿನಲ್ಲಿ ಇಂತಹ ತಿರುವುಗಳನ್ನು ಕಾಣುತ್ತೇವೆ. ಮುಂದೆ ತಮ್ಮಲ್ಲಿರುವ ಅತ್ಯುತ್ತಮ ಕಥನಶಕ್ತಿ ಹಾಗೂ ಜೀವನಾನುಭವವನ್ನು ಆಧರಿಸಿ ಒಟ್ಟೂ 47 ಕಾದಂಬರಿಗಳನ್ನು ರಚಿಸಿದರು. ಕಾದಂಬರಿಯನ್ನು ಸೃಜನಶೀಲ ಅಭಿವ್ಯಕ್ತಿಯ ಮುಖ್ಯ ಮಾಧ್ಯಮವನ್ನಾಗಿಸಿಕೊಂಡ 'ಕಾರಂತ ಸಾಹಿತ್ಯ ಪ್ರಪಂಚ'ದಲ್ಲಿ 'ಬೆಟ್ಟದಜೀವ' ಒಂಬತ್ತನೆಯ ಹಾಗೂ ಒಂದು ಪ್ರಮುಖ ಕಾದಂಬರಿ.

1943ರಲ್ಲಿ ಧಾರವಾಡದ ಮನೋಹರ ಗ್ರಂಥ ಮಾಲೆಯಿಂದ 'ಬೆಟ್ಟದಜೀವ' ಮೊದಲು ಪ್ರಕಟವಾಯಿತು. ಅಂದಿನಿಂದ ಹತ್ತಾರು ಮುದ್ರಣಗಳನ್ನು ಕಂಡಿರುವ, ಹಲವು ಶೈಕ್ಷಣಿಕ ಹಂತಗಳಲ್ಲಿ ಪಠ್ಯಪುಸ್ತಕವಾಗಿ ನಿಯಮಿತವಾಗಿದ್ದ 'ಬೆಟ್ಟದಜೀವ' ಇಂದಿಗೂ ತನ್ನ ತಾಜಾತನದಿಂದ ಗಮನಸೆಳೆಯುವ ಕೃತಿ. ಹಿಂದಿ ಹಾಗೂ ಅನೇಕ ಭಾಷೆಗಳಿಗೆ ಅನುವಾದವಾಗಿರುವ 'ಬೆಟ್ಟದಜೀವ' ಹತ್ತಿರ ಹತ್ತಿರ ಎಂಟು ದಶಕಗಳಿಂದ ಚಲಾವಣೆಯಲ್ಲಿರುವ ಕಾದಂಬರಿ. ಇದೇ ಕಾರಣಕ್ಕೆ ಸಹೃದಯರ ಮೆಚ್ಚುಗೆಯೊಂದಿಗೆ ವಿಮರ್ಶಕರ ಚರ್ಚೆಗೂ ನಿರಂತರವಾಗಿ ಇದು ಒಳಗಾಗುತ್ತ ಬಂದಿದೆ. ಕಾರಂತರ ಅನುಭವವಿಶಿಷ್ಟ ದ್ರವ್ಯ ಹದವಾಗಿ ಬೆರೆತ ಕೃತಿ ಎಂಬುದೇ ಕಾದಂಬರಿಯ ಹೆಗ್ಗಳಿಕೆ. ವಸ್ತು-ತಂತ್ರಗಳೊಂದಿಗೆ ಸಾರ್ಥಕ ಪಾತ್ರ ಪ್ರಪಂಚದಿಂದ ಕೂಡಿರುವ ಕಾದಂಬರಿ “ಬಾಳನ್ನು ತಿಳಿಯಲು ಬೇಕಾದ ಸಾಧನಗಳನ್ನು ನಿರೂಪಿಸಿದೆ.

'ಬೆಟ್ಟದಜೀವ' ಕಾದಂಬರಿಯ ಕುರಿತು ಇದುವರೆಗೆ ಹಲವು ದೃಷ್ಟಿಕೋನಗಳ ವಿಮರ್ಶೆ ಪ್ರಕಟವಾಗಿದೆ. ಅವುಗಳಲ್ಲಿ ಮುಖ್ಯವಾದ ಬರೆಹಗಳನ್ನು ಸಂಗ್ರಹಿಸುವುದು ಮತ್ತು ಹೊಸ ತಲೆಮಾರಿನ ವಿಮರ್ಶಕರ ಪ್ರತಿಕ್ರಿಯೆಗಳನ್ನು ದಾಖಲಿಸುವುದು ಪ್ರಸ್ತುತ ಪುಸ್ತಕದ ಮೂಲ ಉದ್ದೇಶ. ಖ್ಯಾತ ಚಿತ್ರ ನಿರ್ದೇಶಕರಾದ ಪಿ. ಶೇಷಾದ್ರಿಯವರ ದಿಗ್ಧರ್ಶನದಲ್ಲಿ ಪ್ರಶಸ್ತಿ ಪುರಸ್ಕೃತ ಚಿತ್ರವಾಗಿ ಹೊರಹೊಮ್ಮಿದ ಬೆಟ್ಟದಜೀವ ಯುವ ಸಮುದಾಯವನ್ನೂ ಆಕರ್ಷಿಸಿದೆ. ಹೀಗೆ ಸುಮಾರು ನಾಲ್ಕು ತಲೆಮಾರುಗಳ ಮನಸ್ಸನ್ನು ಸೆರೆಹಿಡಿದು ತನ್ನ ಮೂಲ ಸತ್ವದ ಶಕ್ತಿಯನ್ನು ಪ್ರದರ್ಶಿಸಿರುವ ಶಕ್ತ ಕಾದಂಬರಿ 'ಬೆಟ್ಟದ ಜೀವ'.

ಇನ್ನು ಕೃತಜ್ಞತೆಯ ಮಾತುಗಳು; ಇಲ್ಲಿಯ ಲೇಖನಗಳನ್ನು ಬಳಸಿಕೊಳ್ಳಲು ಅನುಮತಿ ನೀಡಿರುವ ಎಲ್ಲ ಲೇಖಕರನ್ನು ಹಾಗೂ ಲೇಖನಗಳ ಹಕ್ಕುದಾರರನ್ನು ಮೊದಲಿಗೆ ನೆನೆಯುತ್ತೇನೆ. ವಿಶ್ವಾಸಪೂರ್ವಕವಾಗಿ ಈ ಪುಸ್ತಕಕ್ಕಾಗಿಯೇ ಲೇಖನ ಬರೆದುಕೊಟ್ಟಿರುವ ಆತ್ಮೀಯರಾದ ಡಾ. ನಾಗರಾಜ ಹೀರಾ ಹಾಗೂ ಡಾ. ಎಚ್. ಬಿ. ಪೂಜಾರ ಇವರಿಗೆ ಧನ್ಯವಾದಗಳು. ಈ ಬರೆಹ ಸಂಕಲನದ ಯೋಜನೆಯನ್ನು ರೂಪಿಸಿ, ಅದರ ಸಂಪಾದನೆಯ ಹೊಣೆಯನ್ನು ನನ್ನ ಹೆಗಲಿಗೆ ವರ್ಗಾಯಿಸಿದ ಗೆಳೆಯ ಶ್ರೀ ಸಚಿನ್ ಕುಡತೂರ್‌ಕರ್‌ ಯುವ ಸಾಹಸಿ ಉದ್ಯಮಿ. ಅರವಿಂದ್ ಇಂಡಿಯಾ ಪ್ರಕಾಶನ ಸಂಸ್ಥೆಯ ಮೂಲಕ ಹಲವು ಉತ್ತಮ ಪ್ರಕಟಣೆಗಳನ್ನು ಹೊರತಂದಿರುವ ಹಾಗೂ ವಿಶಿಷ್ಟ ಪುಸ್ತಕ ಪ್ರೀತಿಯನ್ನು ಹೊಂದಿರುವ ಅವರಿಗೆ ಧನ್ಯವಾದಗಳು. ಪುಸ್ತಕ ಸಿದ್ಧತೆಯಲ್ಲಿ ಸಹಕರಿಸಿದ ಮಡದಿ ಪುಷ್ಪಾ ಹಾಗೂ ಮಗಳು ಸೃಜನಾ ಇವರನ್ನು ಮರೆಯಲಾರೆ. ನನ್ನ ಓದು-ಬರೆಹಗಳನ್ನು ಮೆಚ್ಚುವ ಪ್ರೋತ್ಸಾಹಿಸುವ ಪ್ರಾಚಾರ್ಯರಾದ ಶ್ರೀ ಪ್ರಲ್ಲಾದ ಯಾವಗಲ್ ಹಾಗೂ ಸಹೋದ್ಯೋಗಿಗಳ ಸಹಕಾರಕ್ಕೆ ಕೃತಜ್ಞ, ನನ್ನ ಓದು, ಬರೆಹಗಳನ್ನು ಪ್ರೀತಿಯಿಂದ ಕಾಣುವ ಗುರುಗಳಾದ ಡಾ. ವೀರಣ್ಣ ರಾಜೂರ, ಡಾ. ಹಂಪ ನಾಗರಾಜಯ್ಯ, ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಹಾಗೂ ಸ್ನೇಹಿತರಾದ ನಾಗರಾಜ ಹೆಗಡೆ ಅಪಗಾಲ, ಶಶಿಧರ ತೋಡ್ಕರ್‌, ಕೃಷ್ಣ ಚೆಂಗಡಿ ಇವರೆಲ್ಲರಿಗೂ ಕೃತಜ್ಞ, ಪುಟ ವಿನ್ಯಾಸ ಮಾಡಿದ ನಂದೀಶ್ ಯು. ಎಸ್, ಮುಖಪುಟ ವಿನ್ಯಾಸ ಮಾಡಿದ, ಮುದ್ರಿಸಿದ-ಹಾಗೂ ಈ ಪುಸ್ತಕದ ಓದುಗರಾದ ನಿಮಗೆಲ್ಲರಿಗೂ ಹಾರ್ದಿಕ ವಂದನೆಗಳು ಸಲ್ಲುತ್ತವೆ.

ಡಾ. ಶ್ರೀಧರ ಹೆಗಡೆ ಭದ್ರನ್
ಧಾರವಾಡ

MORE FEATURES

ನಮ್ಮೊಳಗನ್ನು ಎಚ್ಚರಿಸುವ ಕೃತಿ ‘ದೇವನೂರ ಮಹಾದೇವ ಜೊತೆ ಮಾತುಕತೆ’

02-05-2024 ಬೆಂಗಳೂರು

'ಒಬ್ಬ ಜವಾಬ್ದಾರಿಯುತ ನಾಗರಿಕ, ಪ್ರಜ್ಞಾವಂತ ಬರಹಗಾರ- ತನ್ನ ಸಮಾಜದ ದುರಿತಗಳ ತುರ್ತಿಗೆ ಅನುಗಾಲವೂ ಹೇಗೆ ಸಂವೇದಿಸು...

ಕಾಳಿದಾಸನನ್ನು ಅನುವಾದ ಮಾಡುವುದು ಸುಲಭವಲ್ಲ: ಮಹಾಬಲ ಸೀತಾಳದೇವಿ

02-05-2024 ಬೆಂಗಳೂರು

'ಕಾಲೇಜುಗಳಲ್ಲಿ ಮೇಘದೂತವನ್ನು ಓದುವ ವಿದ್ಯಾರ್ಥಿಗಳಿಗೆ ಹಾಗೂ ಸಂಸ್ಕೃತ ಕಾವ್ಯದಲ್ಲಿರುವ ಆಸಕ್ತಿಯಿಂದ ಮೇಘದೂತವನ್ನು...

ಒಂದು ಕ್ಲಾಸಿಕ್ ಕಾದಂಬರಿಯನ್ನು ಓದಿದ ಸಾರ್ಥಕತೆ ನೀಡುವ ಕೃತಿ ‘ಗಂಗಾಪಾಣಿ’

02-05-2024 ಬೆಂಗಳೂರು

"ಗಂಗಾಪಾಣಿ" ಒಂದು ವಿಶಿಷ್ಠವಾದ ಕಾದಂಬರಿ. ಈ ಕಾದಂಬರಿ ತಳಸ್ಥರದ ಸಮುದಾಯಗಳ, ಕೃಷಿ ಸಂಸ್ಕೃತಿಯ ತಲಸ್ಪರ್ಶಿ ಬ...