ಬದುಕಿನ ಜ್ಞಾನದೀವಿಗೆಗಳ ಹೊತ್ತಿಗೆ ‘ಗೆಲುವೇ ಜೀವನ ಸಾಕ್ಷಾತ್ಕಾರ’


ಕೌಶಲವಿರದ ವ್ಯಕ್ತಿಗೆ ಕವಡೆ ಕಾಸಿನ ಚಿಮ್ಮತ್ತೂ ಇಲ್ಲ, ಪೈಪೋಟಿಯಿಂದ ಕೂಡಿದ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಸಾಧ್ಯವಾದಷ್ಟೂ ಹೊಸ ಹೊಸ ಕೌಶಲಗಳನ್ನು ಗಳಿಸುವ ಪ್ರಯತ್ನಕ್ಕೆ ಹೆಚ್ಚು ಬೆಲೆ ಹಾಗೂ ಸ್ವ-ಸಾಮರ್ಥ್ಯದ ಮೇಲೆ ನಂಬಿಕೆ ಬೇಕು ಎಂಬುದಕ್ಕೆ ಈ ಕೃತಿಯಲ್ಲಿ ಒತ್ತುಕೊಟ್ಟಿದ್ದಾರೆ ಎನ್ನುತ್ತಾರೆ ಲೇಖಕಿ ನಳಿನಿ. ಟಿ. ಭೀಮಪ್ಪ. ಅವರು ಸಂತೋಷ್ ರಾವ್ ಪೆರ್ಮುಡ ಅವರು ಬರೆದ ‘ಗೆಲುವೇ ಜೀವನ ಸಾಕ್ಷಾತ್ಕಾರ’ ಕೃತಿಯಲ್ಲಿ ಬರೆದ ಮುನ್ನುಡಿ ನಿಮ್ಮ ಓದಿಗಾಗಿ..

ಕೃತಿ: ಗೆಲುವೇ ಜೀವನ ಸಾಕ್ಷಾತ್ಕಾರ
ಲೇಖಕ: ಸಂತೋಷ್ ರಾವ್ ಪೆರ್ಮುಡ
ಪುಟ: 156
ಬೆಲೆ: 150
ಮುದ್ರಣ:2021
ಪ್ರಕಾಶಕರು: ವಂಶಿ ಪಬ್ಲಿಕೇಶನ್


'ಮಾನವ ಜನ್ಮ ದೊಡ್ಡದು, ಅದನ್ನು ಹಾನಿ ಮಾಡಿಕೊಳ್ಳಬೇಡಿರೋ ಹುಚ್ಚಪ್ಪಗಳಿರಾ' ಎನ್ನುವ ದಾಸರವಾಣಿ ಮಾನವ ಜನ್ಮದ ಪ್ರಾಮುಖ್ಯತೆಯನ್ನು ಎತ್ತಿಹಿಡಿಯುತ್ತದೆ. ಆದರೆ ಮಣ್ಯದ ಫಲದಂತೆ ದೊರಕಿದ ಈ ಅಪರೂಪದ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳುವಲ್ಲಿ ಬಹುತೇಕರು ಎಡವುತ್ತಾರೆ. ದಾರಿ ತಿಳಿಯದೆ ಕಂಗಾಲಾಗುತ್ತಾರೆ.

ಜೀವನ ಎಂದರೆ ಸೋಲು-ಗೆಲುವು, ನೋವು-ನಲಿವು ಎಲ್ಲದರ ಸಮ್ಮಿಶ್ರಣ. ಬದುಕುಕೊಟ್ಟೂ ನೋಡುತ್ತದೆ. ಕಸಿದೂ ನೋಡುತ್ತದೆ ಎಂದು ತಿಳಿದವರು ಹೇಳುವುದುಂಟು, ಕೊಟ್ಟಾಗ ಸದುಪಯೋಗಪಡಿಸಿಕೊಳ್ಳುವಲ್ಲಿ ಎಡವುವರು ಇರುವಂತೆಯೇ, ಕಸಿದಾಗ ಕುಸಿಯದೆ ಛಲದಿಂದ ಸಮಸ್ಯೆಗಳನ್ನು ಮೆಟ್ಟಿ, ಮೇಲೆದ್ದು ನಿಲ್ಲುವ ಛಾತಿಯವರನ್ನೂ ಕಾಣಬಹುದು. ಇಂತವರ ಸಾಧನೆಯೇ ಮತ್ತಷ್ಟು ನೊಂದ, ಬೆಂದ, ಸೋತ ಹೃದಯಗಳಿಗೆ ದಾರಿದೀಪವಾಗಬಲ್ಲದು. ಜೀವನದಲ್ಲಿ ಬರುವ ಪ್ರತಿಯೊಂದು ಸಮಸ್ಯೆಗಳು, ಸನ್ನಿವೇಶಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿ ಸೋತು ಕೈಚೆಲ್ಲಿಬಿಡುವವರೇ ಹೆಚ್ಚು, ಕುಗ್ಗಿಹೋದ ಅಂತಹ ಸನ್ನಿವೇಶಗಳಲ್ಲಿ, ಒಂದು ಭರವಸೆಯ ಆಶಾಕಿರಣ ಸಿಕ್ಕರೂ ಸಾಕು, ಜೀವನವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಬಹುದು. ಅವು ಸಜ್ಜನರ ಸ್ಪೂರ್ತಿಯ ಮಾತುಗಳಿರಬಹುದು, ಸ್ನೇಹಿತರ, ಆಪ್ತರ ಮಾನಸಿಕ ಬೆಂಬಲ ಕೊಡುವ ನುಡಿಗಳಿರಬಹುದು ಅಥವಾ ವ್ಯಕ್ತಿತ್ವವನ್ನು ಕಟ್ಟಿಕೊಡುವಂತಹ ವ್ಯಕ್ತಿತ್ವ ವಿಕಸನದಂತಹ ಪುಸ್ತಕಗಳ ಪ್ರೇರಣಾತ್ಮಕ ಸಂದೇಶ ಅಥವಾ ಸಾಲುಗಳಿರಬಹುದು. ಕುಸಿದು ಹೋದ ಆತ್ಮವಿಶ್ವಾಸವನ್ನು ಮರಳಿಸುವಲ್ಲಿ ಇವು ಮಹತ್ವದ ಪಾತ್ರವನ್ನು ವಹಿಸುತ್ತವೆ.

ಸಂತೋಷ್‌ರಾವ್ ಪೆರ್ಮುಡ ಬರೆದಿರುವಂತಹ ವ್ಯಕ್ತಿತ್ವ ವಿಕಸನದ ಲೇಖನಗಳ ಗುಚ್ಛವಿರುವ 'ಗೆಲುವೇ ಜೀವನ ಸಾಕ್ಷಾತ್ಕಾರ' ಅಂತಹ ಉತ್ತಮ ಪುಸ್ತಕಗಳಲ್ಲೊಂದು. ಹರಿಯುವ ನದಿಗೆ ತಾನು ಸಾಗುವ ದಾರಿ ಗೊತ್ತಿರುತ್ತದೆ. ಅಡೆ-ತಡೆಗಳನ್ನ ಮೀರಿ ಸಾಗುವುದು ಅದಕ್ಕೆ ಹೇಳಿಕೊಡಬೇಕಿಲ್ಲ. ತಡೆಯಾದೆಡೆ ಮತ್ತೊಂದು ಹೊಸ ದಾರಿಯನ್ನು ತಾನೇ ಹುಡುಕಿಕೊಳ್ಳುತ್ತದೆಯೇ ಹೊರತು ತನ್ನ ಚಲನೆಯನ್ನು ಸ್ಥಗಿತಗೊಳಿಸುವುದಿಲ್ಲ. ಹಾಗೆಯೇ ಜೀವನವೂ ಸಹ. ಎಂತಹ ಅಡೆತಡೆಗಳು ಬಾಧಿಸಿದರೂ, ಎದೆಗುಂದದೆ ಸಾಧಿಸುವ ಹುಮ್ಮಸ್ಸೂ ಇರಬೇಕು ಎನ್ನುವಂತಹ ಅರ್ಥಗರ್ಭಿತ ಸಂದೇಶಗಳನ್ನು ಹೊತ್ತ ಇವರ ಲೇಖನಗಳು ಸ್ಫೂರ್ತಿಯುತವಾಗಿವೆ. ಬದುಕನ್ನು ಬದುಕುವುದು ಮುಖ್ಯವಲ್ಲ, ಹೇಗೆ ಬದುಕಿದವ ಎನ್ನುವುದು ಮುಖ್ಯ. ಅಂತಹ ಬದುಕಿಗೆ ಬೇಕಾದ ಭರವಸೆಗಳು, ಸಾಂತ್ವನಗಳನ್ನು ಸಂದರ್ಭೋಚಿತ ಉದಾಹರಣೆಗಳ ಸಮೇತ ವಿವರಿಸುತ್ತ, ಮತ್ತೆ ಜೀವನೋತ್ಸಾಹ ಪುಟಿದೇಳುವಂತೆ ಪ್ರೋತ್ಸಾಹ ತುಂಬುವಲ್ಲಿ ಈ ಲೇಖನಗಳು ಯಶಸ್ವಿಯಾಗುತ್ತವೆ.

ಸಮಸ್ಯೆಗಳಿಲ್ಲದ ಜೀವನವೇ? ಊಹಿಸಲೂ ಸಾಧ್ಯವಿಲ್ಲ. ಸಮಸ್ಯೆಗಳಿಂದ ತಪ್ಪಿಸಿಕೊಂಡು ಓಡಲಂತೂ ಆಗದು. ಆದರೆ ಅವುಗಳನ್ನು ಜಾಣತನದಿಂದ ನಿಭಾಯಿಸುವ, ನಿವಾರಿಸಿಕೊಳ್ಳುವ, ಅವುಗಳೊಂದಿಗೆ ಬೆಳೆಯುವ, ಅವುಗಳಿಂದ ಸಮರ್ಥವಾಗಿ ಹೊರಬರುವ ದಾರಿಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಬದಲಾವಣೆ ಪ್ರಕ್ರಿಯೆಗೆ ನಮ್ಮನ್ನು ನಾವು ಹೇಗೆ ಒಡ್ಡಿಕೊಳ್ಳಬೇಕು ಎನ್ನುವುದನ್ನು, ಗಿಡುಗನ ಉದಾಹರಣೆ ಕೊಟ್ಟು ಹೇಳುವ ರೀತಿ ತುಂಬ ಇಷ್ಟವಾಗುತ್ತದೆ. ಯಾರೋ ಬರೆದಿಟ್ಟ ಸಾಲುಗಳನ್ನು ಅನುಸರಿಸುವುದಕ್ಕಿಂತ ನಮ್ಮ ಯಶಸ್ಸಿನ ಸಾಲುಗಳು ಮಸ್ತಕದಲ್ಲಿ ದಾಖಲಾಗುವಂತಾಗಲಿ, ಸೋಲಿನ ಕಥೆಗಳು ಯಶಸ್ಸಿನ ಹಾದಿಗೆ ಮುನ್ನುಡಿ ಬರೆಯುತ್ತವೆ, ನೀರಿನಿಂದ ಸ್ನಾನ ಮಾಡಿದ ವ್ಯಕ್ತಿ ಬಟ್ಟೆ ಮಾತ್ರ ಬದಲಾಯಿಸುತ್ತಾನೆ, ಆದರೆ ಬೆವರಿನಿಂದ ಸ್ನಾನ ಮಾಡುವ ವ್ಯಕ್ತಿ ಇತಿಹಾಸವನ್ನೇ ಬದಲಾಯಿಸುತ್ತಾನೆ. ಹೀಗೆ ಲೇಖನಗಳಲ್ಲಿ ಬರುವ ಎಷ್ಟೋ ಪ್ರೇರಣಾತ್ಮಕ ಸಾಲುಗಳು ತಟ್ಟನೆ ಗಮನ ಸೆಳೆದು ಬಿಡುತ್ತವೆ.

ಇನ್ನು ಮನುಷ್ಯ ಮೊದಲು ಭಯಪಡುವುದೇ ಸೋಲುಗಳಿಗೆ ಸೋಲನ್ನು ಸಹಿಸಿಕೊಳ್ಳುವುದು ಸುಲಭವಲ್ಲ. ಆದರೆ ಸೋಲನ್ನು ಸ್ಥಿತಪ್ರಜ್ಞೆಯಿಂದ ಸ್ವೀಕರಿಸುವುದು ಕಾರಣಗಳ ವಿಮರ್ಶೆ ಮಾಡಿಕೊಂಡು ಗೆದ್ದು ತೋರಿಸುವ ಛಲ, ಸೋಲು ಬಾಧಿಸದಂತೆ ಪೂರ್ವ ತಯಾರಿ ಮಾಡಿಕೊಳ್ಳುವ ಅಗತ್ಯತೆಯನ್ನು ಒತ್ತಿ ಹೇಳುತ್ತಾರೆ. ಒಂದಿಷ್ಟು ತ್ಯಾಗ ಕಠಿಣ ಪರಿಶ್ರಮ, ಕಲಿಕೆಯ ಮನಸ್ಥಿತಿ ಇದ್ದಲ್ಲಿ ಸೋಲನ್ನೂ ಸಹ ಸೋಲಿಸಬಹುದು ಎಂಬ ಆಶಾಭಾವನೆಯನ್ನು ತುಂಬುತ್ತಾರೆ. ಹಾಗೆಯೇ, ಗೆದ್ದರೂ ಸಹ ಬೀಗದಂತೆ ತನ್ನ ಕಾಯಕದಲ್ಲಿ ನಿರಂತರತೆ ಮತ್ತು ಕಲಿಕಾ ಮನೋಭಾವ ಬೆಳೆಸಿಕೊಳ್ಳುವ ಅಗತ್ಯತೆಯನ್ನು ಮನಗಾಣಿಸಿದ್ದಾರೆ. ಸಿಟ್ಟು, ಅಸೂಯೆ, ದ್ವೇಷ, ಅಹಂಕಾರದಿಂದ ಎದುರಾಳಿಗೆ ನನ್ನ ಮಾಡಲು ಪ್ರಯತ್ನಿಸಿದರೆ, ಮೊದಲು ಹಾನಿಯಾಗುವುದು ನಮಗೆ ಎನ್ನುವ ಸತ್ಯ ಶತುಗಳಲ್ಲಿರುವ ಒಳ್ಳೆಯ ಗುಣಗಳನ್ನೂ ಸಹ ಮುಕ್ತವಾಗಿ ಅಭಿನಂದಿಸುವ ಶ್ಲಾಘಿಸುವ ಉತ್ತಮ ನಡವಳಿಕೆ ಮುಖ್ಯ ಎನ್ನುವ ಲೇಖನಗಳು ಓದುಗರನ್ನು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡುತ್ತವೆ.

ಇವರ ಲೇಖನಗಳಲ್ಲಿ ತುಂಬಾ ಗಮನ ಸೆಳೆದ ಅಂಶವೆಂದರೆ, ಕೌಶಲಕ್ಕೆ ಹೆಚ್ಚು ಮಹತ್ವ ಕೊಟ್ಟಿರುವುದು. 'ಮೀನು ಹಿಡಿದುಕೊಡುವುದಕ್ಕಿಂತ, ಮೀನು ಹಿಡಿಯುವುದನ್ನು ಕಲಿಸುವುದು ಒಳ್ಳೆಯದು' ಎನ್ನುವ ಲೋಕಾರೂಢಿ ಮಾತುಗಳಿಗೆ ಇಂಬು ಕೊಡುತ್ತಾ, ಅವಲಂಬನೆ ಹೆಚ್ಚಾದಾಗ ಸಾಧನೆ ಕುಂಟುತ್ತದೆ. ಕೌಶಲವಿರದ ವ್ಯಕ್ತಿಗೆ ಕವಡೆ ಕಾಸಿನ ಚಿಮ್ಮತ್ತೂ ಇಲ್ಲ, ಪೈಪೋಟಿಯಿಂದ ಕೂಡಿದ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಸಾಧ್ಯವಾದಷ್ಟೂ ಹೊಸ ಹೊಸ ಕೌಶಲಗಳನ್ನು ಗಳಿಸುವ ಪ್ರಯತ್ನಕ್ಕೆ ಹೆಚ್ಚು ಬೆಲೆ ಹಾಗೂ ಸ್ವ-ಸಾಮರ್ಥ್ಯದ ಮೇಲೆ ನಂಬಿಕೆ ಬೇಕು ಎಂಬುದಕ್ಕೆ ಒತ್ತುಕೊಟ್ಟಿದ್ದಾರೆ. ಮಾನವ ಸಂಪನ್ಮೂಲ ಮತ್ತು ಪಾಕೃತಿಕ ಸಂಪನ್ಮೂಲವನ್ನು ಸಮರ್ಥವಾಗಿ ಬಳಸಲು ಅಗತ್ಯವಿರುವ ಜ್ಞಾನ ನಮ್ಮಲ್ಲಿಲ್ಲ. ಜ್ಞಾನ ಇದ್ದರೆ ತಂತ್ರಜ್ಞಾನ ಇಲ್ಲ, ತಂತ್ರಜ್ಞಾನ ಇದ್ದರೆ ಜ್ಞಾನ ಇಲ್ಲ. ಎಲ್ಲ ಇದ್ದರೂ ಯುವಪೀಳಿಗೆ ಸಮರ್ಥವಾಗಿ ಬಳಸಿಕೊಳ್ಳದೆ, ಸೋಮಾರಿಯಾದರೆ ವ್ಯರ್ಥ ಎನ್ನುವ ನುಡಿಗಳು ಚಿಂತನೆಗೆ ಹಚ್ಚುತ್ತವೆ. ಸಕಾರಾತ್ಮಕ ಚಿಂತನೆ, ಹೊಸ ಪ್ರಯತ್ನದ ಅಗತ್ಯ ವಿಭಿನ್ನವಾಗಿ ಗುರುತಿಸಿಕೊಳ್ಳುವಿಕೆ, ಉತ್ತಮರೊಂದಿಗಿನ ಒಡನಾಟ, ತಾವೂ ಬೆಳೆಯುತ್ತ ಇತರರನ್ನೂ ಬೆಳೆಸುವ ಪರಿಪಾಠದ ಮಹತ್ವ, ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿ ಎಂದು ಯುವ ಜನತೆಗೆ ಕಿವಿಮಾತುಗಳನ್ನು ಹೇಳಿದ್ದಾರೆ.

ಲೇಖನಗಳನ್ನು ಓದುತ್ತಾ ಹೋದಂತೆ ನಮ್ಮನ್ನೇ ನಾವು ಅರಿಯುತ್ತಾ ಹೋಗುವಲ್ಲಿ ಸಾಕಷ್ಟು ಸಫಲತೆಯನ್ನು ಸಾಧಿಸುತ್ತೇವೆ. ಸಮಸ್ಯೆಗಳಿಗೆ, ಕಷ್ಟಗಳಿಗೆ ಸೋಲುಗಳಿಗೆ ಇಷ್ಟೆಲ್ಲ ಪರಿಹಾರಗಳ ಸಾಧ್ಯತೆ ಇರುವಾಗ ಏಕೆ ಗೆಲುವನ್ನು ದಕ್ಕಿಸಿಕೊಳ್ಳುವಲ್ಲಿ ಸೋತು ಅಧೀರರಾಗುತ್ತೇವೆ ಎನ್ನುವ ಕಹಿಸತ್ಯ ಅನಾವರಣಗೊಳ್ಳುತ್ತಾ ಹೋಗುತ್ತದೆ. ಎಷ್ಟೊಂದು ಅಗಾಧ ಕಷ್ಟ ಕೋಟಲೆಗಳನ್ನು ಅನುಭವಿಸಿಯೂ ಜೀವನದಲ್ಲಿ ಸಾರ್ಥಕತೆಯನ್ನು, ಗೆಲುವನ್ನು ಕಂಡುಕೊಂಡವರ ಮುಂದೆ ನಮ್ಮ ಕಷ್ಟಗಳು ತೃಣದಂತೆ ಭಾಸವಾಗತೊಡಗುತ್ತವೆ. ನಾಲ್ಕು ದಿನದ ಈ ಬದುಕಿನಲ್ಲಿ, ನಾಲ್ಕು ಜನರಿಗೆ ನಮ್ಮ ಸಾಧನೆ ಗೊತ್ತಾಗುವಂತೆ ಬದುಕಿ, ನಾಲ್ಕಾರು ಜನರ ಸ್ನೇಹ, ಪ್ರೀತಿ ಸಂಪಾದಿಸಿದರೆ ಅದಕ್ಕಿಂತ ಸಾರ್ಥಕ ಜೀವನವುಂಟೇ, ಎಂದು ಮನಸ್ಸು ನಮ್ಮನ್ನೇ ಪ್ರಶ್ನಿಸುವಂತೆ ಮಾಡುವಲ್ಲಿ ಈ ಪುಸ್ತಕ ಗೆದ್ದು ಬಿಡುತ್ತದೆ. ಮನುಷ್ಯ ಅರವತ್ನಾಲ್ಕು ವಿದ್ಯೆಗಳಲ್ಲಿ ಪಾರಂಗತನಾಗುತ್ತಾನೋ ಇಲ್ಲವೋ ಗೊತ್ತಿಲ್ಲ, ಆದರೆ ಈ ಪುಸ್ತಕದಲ್ಲಿನ ಅರವತ್ನಾಲ್ಕು ಲೇಖನಗಳು ಖಂಡಿತ ಅವನ ಬದುಕಿಗೆ ಜ್ಞಾನದೀವಿಗೆಗಳಾಗಿ ಬೆಳಕು ತೋರಿಸಬಲ್ಲವು. ಸಂತೋಷ್ ರಾವ್ ಪೆರ್ಮುಡ ಅವರಿಂದ ಮತ್ತಷ್ಟು, ಮಗದಷ್ಟು ಸ್ಫೂರ್ತಿಯುತ ಲೇಖನಗಳು ಹೊರಹೊಮ್ಮಲಿ ಎಂದು ಹಾರೈಸಿ ಶುಭಕೋರುವೆ..

ಲೇಖಕ ಸಂತೋಷ್ ರಾವ್ ಪೆರ್ಮುಡ ಅವರ ಇನ್ನಷ್ಟು ಮಾಹಿತಿ ಇಲ್ಲಿದೆ..

‘ಗೆಲುವೇ ಜೀವನ ಸಾಕ್ಷಾತ್ಕಾರ’ ಕೃತಿಯ ಬಗ್ಗೆ ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ಕಿಸಿ..
ನಳಿನಿ.ಟಿ.ಭೀಮಪ್ಪ ಅವರ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ..

MORE FEATURES

ಕಥೆಯೊಳಗೊಂದು ಕಥೆ ಬರುವುದು ಭಾರತೀಯ ಕಾವ್ಯಗಳಲ್ಲಿ ಸಾಮಾನ್ಯ

28-04-2024 ಬೆಂಗಳೂರು

‘ಕನ್ನಡದಲ್ಲಿ ರಾಮಾಯಣ ಸಾಹಿತ್ಯ ಅಗಾಧವಾಗಿದೆ .ರಾಮನಂತೆ ಕೃಷ್ಣನೂ ಜನಪ್ರಿಯ ಜನಾರಾಧಿತ ವ್ಯಕ್ತಿಯೇ ಆಗಿದ್ದರೂ ಅವನ...

ಗೋಕಾಕರು ನವೋದಯದ ಸಮಯದಲ್ಲಿಯೇ ತಮ್ಮ ಸಾಹಿತ್ಯದ ವ್ಯಕ್ತಿತ್ವವನ್ನು ರೂಪಿಸಿಕೊಂಡವರು

28-04-2024 ಬೆಂಗಳೂರು

"ನವೋದಯದ ಸಮಯದ ಸಾಹಿತಿಗಳಲ್ಲಿ ಕೆಲವರು ಅಧ್ಯಾತ್ಮದ ಸಾಧನೆಯ ದಾರಿಯನ್ನೂ ಬರವಣಿಗೆಯ ಜೊತೆಜೊತೆಗೆ ಮೈಗೂಡಿಸಿಕೊಂಡಿದ್...

ವಿ. ಕೃ. ಗೊಕಾಕ್ ಜೀವನ ಮತ್ತು ಆದರ್ಶ: ಅನಿಲ್ ಗೋಕಾಕ್

28-04-2024 ಬೆಂಗಳೂರು

'ನೀನು ಕನ್ನಡವನ್ನು ಕಲಿ’ ಎಂಬುದು ತಂದೆಯವರ ಮೂರನೆಯ ಮಾತಾಗಿತ್ತು. ಮನೆಯಲ್ಲಿ ಮರಾಠಿ, ಗುಜರಾತಿ ಭಾಷೆ ಬಳಸಿದ...