ಹಲವು ಹಳ್ಳಿಗಳ ಸಹಜೀವನದ ಚಿತ್ರಣ ಈ ಲೇಖನಗಳಲ್ಲಿ ಸಿಗುತ್ತವೆ


"ಬೆಂಗಳೂರು ನಗರದ ಬದುಕಿನ ಕುರಿತು ಇರುವ ಎರಡು ಲೇಖನಗಳೂ ಅಷ್ಟೇ. ನಗರದ ಮಂದಿಯ ನಯವಂಚಕತನ, ಗ್ರಾಮೀಣರ ಬಗ್ಗೆ ಅವರಿಗಿರುವ ತಾತ್ಸಾರ, ನಗರದ ಯಾಂತ್ರಿಕ ಜೀವನ ಶೈಲಿ, ಅವರು ಸಂವೇದನಾ ಶೂನ್ಯತೆ- ಹೀಗೆ ಹಲವು ಮುಖಗಳ ಬಗ್ಗೆ ಲೇಖಕಿಯ ಅಸಮಾಧಾನವನ್ನು ವ್ಯಕ್ತಪಡಿಸುತ್ತವೆ," ಎನ್ನುತ್ತಾರೆ ಡಾ.ಪಾರ್ವತಿ ಜಿ.ಐತಾಳ್. ಅವರು ಲೇಖಕಿ ವಿನಿಶಾ ಅವರ 'ಎತ್ತಿನ ಗಾಡಿ ಎಕ್ಸ್ ಪ್ರೆಸ್ ಭಾಗ- 2' ಕೃತಿ ಕುರಿತು ಬರೆದ ವಿಮರ್ಶೆ.

ಉದಯೋನ್ಮುಖ ಲೇಖಕಿ ವಿನಿಶಾ ಅವರ 'ಎತ್ತಿನ ಗಾಡಿ ಎಕ್ಸ್ ಪ್ರೆಸ್ ಭಾಗ 2' ಎಂಬ ಇತ್ತಿಚೆಗೆ ಮಂದಾನಿಲ ಪ್ರಕಾಶನದಿಂದ ಪ್ರಕಟವಾದ ಕೃತಿಯ ವೈಶಿಷ್ಟ್ಯ ವೆಂದರೆ ಅದು ಒಳಗೂ ಹೊರಗೂ ಮೈತುಂಬಾ ಮುದ್ದಾಗಿ ಹೊದ್ದುಕೊಂಡ ತೀರ್ಥಹಳ್ಳಿಯ ಸುಂದರ ಆಡುಭಾಷೆ. ಬೆನ್ನುಡಿ, ರಕ್ಷಾ ಪುಟದ ಒಳಪುಟ ಎಲ್ಲವನ್ನೂ ಹಳ್ಳಿಗರ ಮಾತುಗಳಿಂದಲೇ ತುಂಬಿಸಲಾಗಿದೆ. ಒಳಪುಟಗಳ 51 ಲಲಿತಾ ಬರಹಗಳಿಗೆ 'ಲಘು ಬರಹಗಳ ಕಂತೆ' ಎಂಬ, ಒಳಗಿನ ಬರಹಗಳದ್ದೇ ಶೈಲಿಯ ಉಪಶೀರ್ಷಿಕೆ ನೀಡಲಾಗಿದೆ.

ಈ 51 ಲೇಖನಗಳನ್ನು ಲೇಖಕಿ ಆತ್ಮಕಥನದ ಶೈಲಿಯಲ್ಲಿ ಬರೆದಿದ್ದಾರೆ. ತಮ್ಮ ದೈನಂದಿನ ಬದುಕಿನಲ್ಲಿ ತಾವು ಕಣ್ಣಾರೆ ಕಂಡ ಹಾಗೂ ಸ್ವತಃ ಅನುಭವಿಸಿದ ವಿಚಾರಗಳನ್ನೇ ಎತ್ತಿಕೊಂಡಿದ್ದಾರೆ. ಸೂಕ್ಷ್ಮ ಕಣ್ಣುಗಳ ಅವರ ತಂಗಿ ಮುದ್ದು ತೀರ್ಥಹಳ್ಳಿ ಅವರ ಎಲ್ಲ ಅನುಭವಗಳಲ್ಲಿ ಸದಾ ಅವರ ಜೊತೆಗೆ ಇರುತ್ತಾರೆ. ಪತಿ ಪ್ರಸಾದ್ ಕೂಡಾ ಇರುತ್ತಾರೆ. ಎದ್ರು ಮನೆಯವರೂ, ಪಕ್ಕದ ಮನೆಯವರು, ಹಿಂದಿನ ಮನೆಯವರು ಊರೂರು ಸುತ್ತುತ್ತಾ ಇದ್ದ ಕುಟುಂಬವಾಗಿದ್ದರಿಂದ ಅವರು ಹಿಂದೆ ಇದ್ದ ಹಳ್ಳಿಯವರು-ಹೀಗೆ ಎಲ್ಲರೂ ಇಲ್ಲಿ ನುಸುಳುತ್ತಾರೆ. ಹೀಗೆ ಹಲವು ಹಳ್ಳಿಗಳ ಸಹಜೀವನದ ಚಿತ್ರಣ ಈ ಲೇಖನಗಳಲ್ಲಿ ಸಿಗುತ್ತದೆ. ಯಾರು ಮುಗ್ಧರು, ಯಾರು ವಂಚಕರು, ಯಾರು ಸ್ವಾರ್ಥಿಗಳು, ಯಾರು ಅವಕಾಶವಾದಿಗಳು ಎಂಬುದನ್ನೂ ಸೂಚ್ಯವಾಗಿ ಅವರು ಸೇರಿಸಿಕೊಳ್ಳುತ್ತಾರೆ. ನವಿರು ಹಾಸ್ಯದ ಜತೆಗೆ ಜನರ ಸ್ವಭಾವ ವೈಚಿತ್ರ್ಯಗಳನ್ನೂ ಲೇಖಕಿ ಬಣ್ಣಿಸುವ ಪರಿಯಲ್ಲಿ ಪ್ರೌಢಿಮೆ ಎದ್ದು ಕಾಣುತ್ತದೆ.‌

ಉದಾಹರಣೆಗೆ 'ತಿಕ್ಕಲು ತಿಮ್ಮಪ್ಪ ಮೇಷ್ಟ್ರಕಲಾ ಪ್ರೇಮ..!' ಪ್ರಾಥಮಿಕ ಶಾಲೆಯ ಎಳೆಯ ಹೆಣ್ಣು ಮಕ್ಕಳನ್ನು ತನ್ನ ತೆವಲಿಗೆ ಬಳಸಿಕೊಳ್ಳುವ ಮೇಷ್ಟ್ರ ಮಾನಸಿಕ ಅಸ್ವಸ್ಥ ಸ್ಥಿತಿಯ ಬಗ್ಗೆ ಲೇಖಕಿ ನೇರವಾಗಿ ಏನೂ ಹೇಳುವುದಿಲ್ಲ. ಅವರ ನಿರೂಪಣೆಯಲ್ಲಿ ಕೇವಲ ಮುಗ್ಧತೆಯಷ್ಪೇ ಇದೆ. ಅವರು ಹೇಳುವ ಹಾಸ್ಯಭರಿತ ಶೈಲಿ ಹೆಜ್ಜೆ ಹೆಜ್ಜೆಗೂ ನಗಿಸುತ್ತದೆ. ಆದರೆ ಅದರ ಹಿಂದೆ ಅಡಗಿದ ಸತ್ಯ ಮಾತ್ರ ಓದುಗರ ಗಮನದಿಂದ ತಪ್ಪಿಸಿಕೊಳ್ಳುವುದಿಲ್ಲ.

ಬೆಂಗಳೂರು ನಗರದ ಬದುಕಿನ ಕುರಿತು ಇರುವ ಎರಡು ಲೇಖನಗಳೂ ಅಷ್ಟೇ. ನಗರದ ಮಂದಿಯ ನಯವಂಚಕತನ, ಗ್ರಾಮೀಣರ ಬಗ್ಗೆ ಅವರಿಗಿರುವ ತಾತ್ಸಾರ, ನಗರದ ಯಾಂತ್ರಿಕ ಜೀವನ ಶೈಲಿ, ಅವರು ಸಂವೇದನಾ ಶೂನ್ಯತೆ- ಹೀಗೆ ಹಲವು ಮುಖಗಳ ಬಗ್ಗೆ ಲೇಖಕಿಯ ಅಸಮಾಧಾನವನ್ನು ವ್ಯಕ್ತಪಡಿಸುತ್ತವೆ. ಹಾಗೆಯೇ ಅಲ್ಲೊಂದು+ಇಲ್ಲೊಂದು ಮಿಂಚಿನಂತೆ ಹೊಳೆಯುವ ಸದ್ಗುಣಿಗಳೂ ಇಲ್ಲದಿಲ್ಲ. ಯಾಕೆಂದರೆ ಸಹಾಯ ಮಾಡುವೆನೆಂದು ಭರವಸೆಯಿತ್ತವರು ಗುರುತೇ ಇಲ್ಲದವರಂತೆ ಮುಖ ತಿರುಗಿಸಿದರೆ ದೂರದ ಪರಿಚಯದ ಮಂದಿ ಸಾಕು ಅನ್ನಿಸುವಷ್ಟು ಸಹಾಯ ಮಾಡಿದವರೂ ಇದ್ದಾರೆ. ಎಲ್ಲವನ್ನೂ ಲೇಖಕಿ ಹೇಳುವ ರೀತಿಯಲ್ಲಿ ಓದುಗನ ಮನಮುಟ್ಟುವ ಶಕ್ತಿ ಇದೆ.‌

`ಮಾನವನಾಗಿ ಹುಟ್ಟಿದ್ಮೇಲೆ ಏನೇನ್ಕಂಡಿ' ಎಂಬ ಲೇಖನದಲ್ಲೂ ಹೊಸದಾಗಿ ಮದುವೆಯಾದ ಗಂಡ-ಹೆಂಡಿರ ನಡುವೆ 'ನಮ್ಮೂರು ಚೆಂದವೋ ನಿಮ್ಮೂರು ಚೆಂದವೋ' ಎಂಬ ಕೋಳಿ ಜಗಳದ ನವಿರು ಹಾಸ್ಯದ ಜೊತೆಗೆ ಆಧುನಿಕತೆಯ ಹೆಸರಿನಲ್ಲಿ ನಡೆಯುವ ಪ್ರಕೃತಿ ನಾಶದ ಬಗ್ಗೆ ಮಾಡುವ ಗಂಭೀರ ಆಕ್ಷೇಪವೂ ಇದೆ.

ಬಹಳ ಒಳ್ಳೆಯ ಬರವಣಿಗೆಯ ಶೈಲಿ ವಿನಿಶಾ ಅವರಿಗೆ ಸಿದ್ಧಿಸಿದೆ. ಒಂದು ಒಳ್ಳೆಯ ಹಾಸ್ಯ ಹೇಗಿರಬೇಕೆಂಬ ಅರಿವೂ ಅವರಿಗೆ ಚೆನ್ನಾಗಿ ಇದೆ. ಯಾವುದೇ ರೀತಿಯ ವ್ಯಂಗ್ಯ-ಟೀಕೆಗಳನ್ನೂ ನೇರವಾಗಿ ಬಳಸದೆ ತಿಳಿಹಾಸ್ಯದ ಮೂಲಕ ತಮ್ಮ ಗುರಿಯನ್ನು ಅವರು ಮುಟ್ಟುತ್ತಾರೆ. ಎಷ್ಟೋ ಬಾರಿ ತಮ್ಮನ್ನು ತಾವೇ ಹಾಸ್ಯಕ್ಕೆ ಗುರಿ ಮಾಡುವುದೂ ಉಂಟು. ‌

ಸಂಕಲನದಲ್ಲಿ ಎರಡು extreme ಗಳಿಗೆ ಸಂಬಂಧಿಸಿದ ಲೇಖನಗಳಿವೆ-ಎತ್ತಿನ ಗಾಡಿ(ಗ್ರಾಮೀಣ ಶಾಂತ ಬದುಕು) ಮತ್ತು ಎಕ್ಸ್ ಪ್ರೆಸ್(ನಗರದ ವೇಗದ ಬದುಕು). ಹಾಗೆ ಒಂದು ಅರ್ಥಪೂರ್ಣ ಶೀರ್ಷಿಕೆಯನ್ನು ಲೇಖಕಿ ಕೃತಿಗೆ ಕೊಟ್ಟಿದ್ದಾರೆ. ಆರಂಭದ ನುಡಿಗಳಲ್ಲಿ 'ತಾನು ಲೇಖಕಿಯಾಗುತ್ತೇನೆಂದು ಎಣಿಸಿಯೇ ಇರಲಿಲ್ಲ, ತಂಗಿಯ ಒತ್ತಾಯಕ್ಕೆ ಬರೆಯ ತೊಡಗಿದೆ 'ಎಂದು ಹೇಳಿದರೂ ಬರೆಯದೇ ಕುಳಿತಿದ್ದರೆ ಸಾಹಿತ್ಯ ಲೋಕಕ್ಕೆ ನಷ್ಟವಾಗುತ್ತಿತ್ತು ಎಂದು ಹೇಳಬಹುದಾದ ರೀತಿಯಲ್ಲಿ ಅವರು ಬರೆದಿದ್ದಾರೆ. ಆಡುಭಾಷೆಯನ್ನು ಉಳಿಸಿಕೊಳ್ಳಬೇಕು ಎಂಬುದು ಅವರ ಕಾಳಜಿ. ಆಡುಭಾಷೆಯನ್ನು ಬರೆಯುವುದೂ ಓದುವುದೂ ಕಡು ಕಷ್ಟವೆಂದು ತಿಳಿದಿದ್ದರೂ ಅವರು ಆ ಕೆಲಸವನ್ನೂ ಸಮರ್ಥವಾಗಿ ಮಾಡಿದ್ದಾರೆ.

- ಡಾ.ಪಾರ್ವತಿ ಜಿ.ಐತಾಳ್

MORE FEATURES

'ಅಕ್ಕ'ನನ್ನು ಕುರಿತ ವಿಭಿನ್ನ ದೃಷ್ಟಿಕೋನದ ಕೃತಿ ‘ರೂಹಿಲ್ಲದ ಚೆಲುವ’

02-05-2024 ಬೆಂಗಳೂರು

ಈ ಕಾದಂಬರಿ ಅಕ್ಕಮಹಾದೇವಿಯ ಕಥನಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಶರಣ ಧರ್ಮದ ಸಾಮಾಜಿಕ, ತಾತ್ವಿಕ, ವೈಚಾರಿಕ ಚಿಂತನೆಗಳನ್ನು...

ನಾವೇನನ್ನೊ ಕಳೆದುಕೊಂಡರೆ ಅದಕ್ಕಿಂತ ಮಹತ್ವದ್ದನ್ನು ಪಡೆದುಕೊಳುತ್ತೇವೆ

02-05-2024 ಬೆಂಗಳೂರು

‘ನನಗೀ ಪುಸ್ತಕದಲ್ಲಿ ಅರ್ಥವಾದ್ದದಾದರು ಏನು. ಪುನಃ ಪುಸ್ತಕದ ಹೆಸರು ಓದಿದೆ. " ನಿರ್ಗಮನ ". ಹೂ...! ...

ನಮ್ಮೊಳಗನ್ನು ಎಚ್ಚರಿಸುವ ಕೃತಿ ‘ದೇವನೂರ ಮಹಾದೇವ ಜೊತೆ ಮಾತುಕತೆ’

02-05-2024 ಬೆಂಗಳೂರು

'ಒಬ್ಬ ಜವಾಬ್ದಾರಿಯುತ ನಾಗರಿಕ, ಪ್ರಜ್ಞಾವಂತ ಬರಹಗಾರ- ತನ್ನ ಸಮಾಜದ ದುರಿತಗಳ ತುರ್ತಿಗೆ ಅನುಗಾಲವೂ ಹೇಗೆ ಸಂವೇದಿಸು...