"ತಾಯಿಯ ಬಗ್ಗೆ ಹೇಳುವಾಗ "ಮನೆಯನ್ನು ಓರಣ ಮಾಡುವ ಒರಟು ಕೈಗಳು" ಸಾಲು ಕವಿಯೊಳಗಿನ ಹೆಣ್ಣುತನವನ್ನ ತೋರಿಸುತ್ತದೆ. ಹಾಗೆ ಬೇಜವಾಬ್ದಾರಿ ಕುಡುಕ ತಂದೆಯನ್ನು ಚಾಟಿಯಿಂದ ಜಾಡಿಸುತ್ತಾರೆ. ಮುದುಕಿಯ ನೋವು, ಮಗುವಿನ ಅಳಲು,ಕವಿತೆಗಳು ನಿರೂಪಣೆಯಲ್ಲಿ ಸೈ ಎನ್ನುತ್ತವೆ," ಎಂದು ಹೇಳುತ್ತಾರೆ ಸುಧಾಕೃಷ್ಣ. ಅವರು ದೀಕ್ಷಿತ್ ನಾಯರ್ ಅವರ ‘ಯಾವುದೂ ಈ ಮೊದಲಿನಂತಿಲ್ಲ?’ ಕೃತಿ ಕುರಿತು ಬರೆದ ವಿಮರ್ಶೆ.
ಯಾವುದೂ ಈ ಮೊದಲಿನಂತಿಲ್ಲ?
ಇದರಲ್ಲಿ ಇದೆ ಏನೆಲ್ಲಾ? ಏನಿಲ್ಲ?
ಪುಸ್ತಕದಲ್ಲಿ ಏನೆಲ್ಲಾ ಇದೆ ಏನೇನಿಲ್ಲ ಅಂತ ವಿಮರ್ಶೆ ಮಾಡುವ ಮುಂಚೆ 21-22 ನೇ ವಯಸ್ಸಿಗೆ ಪ್ರೀತಿ-ಪ್ರೇಮ ಅಂತ ಓಡಿ ಹೋಗಿ ಮಕ್ಳು ಮಾಡ್ಕೊಂಡು, ಕುಡಿದು ಹಾಳಾಗಿ ಹೋಗಿ, ಕುಟುಂಬಕ್ಕೆ ಸಮಾಜಕ್ಕೆ ಘಾತುಕರಾಗ್ತಾಯ್ರೋ ಯುವಕರ ನಡುವೆ ದೀಕ್ಷಿತ್ ನಾಯರ್ ಅವರಿಗೆ ಇರುವ ಸಾಹಿತ್ಯದ ಬಗೆಗಿನ ಆಸಕ್ತಿ, ವಯಸ್ಸಿಗೂ ಮೀರಿದ ಅಧ್ಯಯನ, ಅದನ್ನು ಬರವಣಿಗೆಗೆ ಇಳಿಸುವ ಕಲೆಯನ್ನು ಪ್ರೋತ್ಸಾಹಿಸೋಣ. ಅಭಿನಂದಿಸೋಣ. ಅದರಲ್ಲೂ ಈ ಹುಡುಗ ಮಂಡ್ಯದ ಪ್ರತಿಭೆ ಹಾಗಾಗಿ ನಾವು ಹೆಮ್ಮೆಪಡೋಣ.
ಮೊದಲನೆ ವರ್ಗಕ್ಕೆ ಸೇರುವ ಸಹೃದಯ ಓದುಗರು ಓದಿ ಪುಟ ತಿರುವಿ ಸುಮ್ಮನಾಗುತ್ತಾರೆ. ಎರಡನೇ ವರ್ಗಕ್ಕೆ ಸೇರುವ ಸಹೃದಯ ಓದುಗರು ಆ ಕವಿತೆಯ ಧ್ವನಿಯನ್ನು ಮತ್ತು ರಸವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಾರೆ. ಆದರೆ ಮೂರನೇ ವರ್ಗದ ಸಹೃದಯ ಓದುಗರು ಒಂದು ಕವಿತೆಯಲ್ಲಿ ಏನೆಲ್ಲಾ ಇದೆ ಏನೆಲ್ಲಾ ಇರಬಾರದಿತ್ತು ಅಂತ ಕವಿತೆಯ ಅಂಗಾಂಗಗಳನ್ನು ಅನುಭವಿಸುತ್ತಾರೆ. ಕವಿತೆಯ ಮೂಲಕ ಕವಿ ಸಮಾಜಕ್ಕೆ ಏನನ್ನು ಹೇಳಲಿಕ್ಕೆ ಪ್ರಯತ್ನಿಸುತ್ತಿದ್ದಾನೆ ಅಂತ ಹುಡುಕುವುದಕ್ಕೆ ವಿಮರ್ಶೆಯ ಗಾಳ ಹಾಕುತ್ತಾನೆ. ನಾನು ಹಾಗೆ ಯಾರದೇ ಕವಿತೆಯಾಗಲಿ ಪ್ರತಿ ಪದವನ್ನೂ ಆಸ್ವಾದಿಸುತ್ತೇನೆ.ಆನಂದಿಸುತ್ತೇನೆ. ಇಷ್ಟ ಆದವನೆಲ್ಲವನ್ನೂ ಎದೆಗಾನಿಸುತ್ತೇನೆ.
ಅಂದ ಹಾಗೆ ನಮ್ಮ ಹಿರಿಯ ಕವಿಗಳು ಹೇಳಿರುವ ಹಾಗೆ ಪ್ರತಿಭೆ ಕಣ್ಣು ತೆರೆದಾಗ ಕವಿಗೆ ದರ್ಶನಾಗುತ್ತದೆಯಂತೆ. ಪ್ರತಿಭೆ ಕಾವ್ಯದ ಬೀಜ. ಸಾಹಿತ್ಯದ ಎಲ್ಲಾ ಪ್ರಕಾರಗಳು ಜನಿಸುವುದು ಕವಿಗಳ ಪ್ರತಿಭೆಯಿಂದಲೇ. ಈ ನಿಟ್ಟಿನಲ್ಲಿ ನೋಡಿದರೆ ಪ್ರತಿಯೊಂದು ಕವಿತೆಯ ವಿಷಯದ ಆಯ್ಕೆ, ನಿರೂಪಣೆಯ ಶೈಲಿ,ಮುಕ್ತಾಯ ಮಾಡುವ ರೀತಿಗಳಲ್ಲಿ ದೀಕ್ಷಿತ್ ನಾಯರ್ ಅವರ ಪ್ರತಿಭೆ ಲೀಲಾಜಾಲವಾಗಿ ಪ್ರದರ್ಶನವಾಗುತ್ತದೆ.
ಪುಸ್ತಕವನ್ನು ನನ್ನಿಂದ ದೂರವಿಡಬೇಡಿ ಎಂಬ ಮೊದಲ ಕವಿತೆಯಲ್ಲೇ ಪ್ರತಿಭೆ ಮೊಳಕೆ ಒಡೆದು ಉಳಿದೆಲ್ಲ ಕವಿತೆಗಳಿಗೆ ಬೇರಾಗಿ ನಿಂತಿದೆ. ಮೊದಲ ಕವಿತೆಯನ್ನು ಓದಿದಾಗಲೇ ಉಳಿದೆಲ್ಲ ಕವಿತೆಗಳನ್ನು ಓದಲೇ ಬೇಕೆಂಬ ಅದರಲ್ಲೂ ಈಗಲೇ ಓದಬೇಕೆಂಬ ಕುತೂಹಲ ಕಾತರತೆಯನ್ನು ಕಾಯ್ದುಕೊಳ್ಳುತ್ತದೆ.
ತಾಯಿಯ ಬಗ್ಗೆ ಹೇಳುವಾಗ "ಮನೆಯನ್ನು ಓರಣ ಮಾಡುವ ಒರಟು ಕೈಗಳು" ಸಾಲು ಕವಿಯೊಳಗಿನ ಹೆಣ್ಣುತನವನ್ನ ತೋರಿಸುತ್ತದೆ. ಹಾಗೆ ಬೇಜವಾಬ್ದಾರಿ ಕುಡುಕ ತಂದೆಯನ್ನು ಚಾಟಿಯಿಂದ ಜಾಡಿಸುತ್ತಾರೆ. ಮುದುಕಿಯ ನೋವು, ಮಗುವಿನ ಅಳಲು,ಕವಿತೆಗಳು ನಿರೂಪಣೆಯಲ್ಲಿ ಸೈ ಎನ್ನುತ್ತವೆ.
"ನಮ್ಮನ್ನು ನಾವು ಅರಿಯಲಾಗದೆ ಪರಿತಪಿಸುವಾಗಲೂ ನಮ್ಮ ಕವಿತೆಗಳಲ್ಲಿ ಇತರರನ್ನು ಇಣುಕುತ್ತೇವೆ "ಸಾಲು ನೋಡಿ ಈ ಸಾಲುಗಳೇ ಸಾರುತ್ತವೆ ಈ ಕವಿ ಸಾಮಾಜಿಕ ಸಂವೇದನೆಗಳಿಗೆ ಹೆಚ್ಚು ಒತ್ತನ್ನು ಕೊಡುವ ಕವಿ ಎಂದು. ಸಾಮಾಜಿಕ ಸಮಸ್ಯೆಗಳನ್ನು ತಟ್ಟಿ ಎಚ್ಚರಿಸುವ ಇವರ ಲೇಖನಿ ಚುರುಕಾಗಿದೆ. ಇಂಕು ಖಾಲಿಯಾಗದೆ!.
ಆಕೆಗೆ ಅದೇ ಮೊದಲ ರಾತ್ರಿ,ಕಂಬನಿ, ಅಂದು ಇಂದು, ಯಾವುದೂ ಈ ಮೊದಲಿನಂತಿಲ್ಲ ಇಷ್ಟು ಕವಿತೆಗಳು "ದೀಪದ ರಸತ್ವo"ಗುಣಗಳನ್ನು ಹೊಂದಿದೆ. ಕವಿತೆಗಳು ಅಂದರೆ ಕಾವ್ಯ ರಸದಿಂದ ಬೆಳಗಲ್ಪಡಬೇಕಂತೆ. ಕವಿತೆ ಎಂದರೆ ಕೇವಲ ಶಬ್ದಾರ್ಥವಲ್ಲ. ರಸಾನುಭವದ ಪರಕಾಷ್ಟತೆಯಂತೆ. ಆ ನಿಟ್ಟಿನಲ್ಲಿ ಇವೆಲ್ಲವೂ ಸಹೃದಯ ಓದುಗರಿಗೆ ರಸವನ್ನೇ ಉಣಬಡಿಸುತ್ತವೆ.
ಈ ಹಿಂದೆ ಹೀಗಿರಲಿಲ್ಲ, ಆಸ್ಪತ್ರೆ ಬೆಡ್, ನಾನೂ ಅತ್ಯಾಚಾರಿ, ಪಾಲಿಶ್ ಮಾಡುತ್ತೇನೆ ಈ ಕವಿತೆಗಳು ಧ್ವನಿ ಸಿದ್ಧಾಂತವನ್ನೇ ಪ್ರತಿಪಾದಿಸುತ್ತವೆ. ಈ ಯುವ ಕವಿ ಏನು ಮಹಾ ಹೇಳಲಿಕ್ಕೆ ಹೊರಟಿದ್ದಾನೆ ಎನ್ನುವವರಿಗೆ ಈ ಕವಿತೆಗಳು ತಿರುಗಿ ಸವಾಲ್ ಗೆ ಜವಾಬ್ ಕೊಡುವಂತಿವೆ. ಸಾವಿನ ಜಪ,ನಾನು ಹೊರಗಿನವನು ಕವಿತೆಗಳು ಮಾತ್ರ ಯಾರೇ ಓದಿದರೂ ವಾವ್ ಎನಿಸುವಷ್ಟು ಅರ್ಹತೆಯನ್ನು ಹೊಂದಿವೆ.
ಅಂಬೇಡ್ಕರ್, ಬುದ್ಧ, ಕುವೆಂಪು, ಗಾಂಧಿ ಇವರನ್ನು ವಿಡಂಬಣೆ ಮಾಡಿ ಭೂಮಿಗೆ ಆಹ್ವಾನಿಸುವ ರೀತಿ ನೋಡಿದರೆ ಈ ಹುಡುಗ ಬಲಿತಿಲ್ಲ ಆದರೆ ಅವನ ಕವಿತೆಗಳು ಮಾತ್ರ ಬಹಳ ಬಲಿತಿವೆ ಎನಿಸುತ್ತದೆ. ಲೋಕದಲ್ಲಿ ಮನುಷ್ಯನಿಗೆ ಜನ್ಮ ಲಭಿಸುವುದು ಅದೃಷ್ಟ ಅಂತೆ ಅದರಲ್ಲೂ ವಿದ್ಯೆ ಲಾಭ, ಇನ್ನೂ ಅದೃಷ್ಟ ಅದರಲ್ಲೂ ಈ ವಯಸ್ಸಿಗೆ ಕವಿತ್ವದ ಅದೃಷ್ಟ ಸಿಕ್ಕಿದೆ ಎಂದರೆ ಅಂದರೆ ಮುಂದೆ ಇವರ ಸಾಧನೆಯನ್ನು ಊಹೆ ಮಾಡಲಿಕ್ಕೂ ಸಾಧ್ಯವಿಲ್ಲ.
ಇವರ ಎಲ್ಲಾ ಕವಿತೆಗಳು ರಸ ಹಾಗೂ ದ್ವನಿ ತತ್ವಗಳ ನಡುವೆ ಸಮನ್ವಯತೆಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿವೆ. ಕವಿಗೆ ವಯಸ್ಸು ಎಷ್ಟು ಅನ್ನೋದು ಮುಖ್ಯ ಅಲ್ಲ ಅವರ ಕವಿತೆಗಳು ಎಷ್ಟು ಮಾಗಿವೆ ಅನ್ನುವ ಮುಖ್ಯ.
ಒಟ್ಟಾರೆ ನೀವು ಯಾರೇ ಓದಿದರೂ ಕವಿತೆಗಳು ಸ್ವಲ್ಪ ಗದ್ಯ ರೂಪ ಹಾಗೂ ಅಲಲ್ಲಿ ವಾಚ್ಯ ಆಗಿವೆ. ಅನ್ನುವುದು ಬಿಟ್ಟರೆ ಕವಿತೆಯೊಳಗೆ ಯಾವುದೇ ಅಲಂಕಾರ,ಛಂದಸ್ಸು,ರೂಪಕ.ಗನ್ನು ಮುಲಾಜಿಲ್ಲದೆ ಬದಿಗಿಟ್ಟು ಭಾವನೆಗಳ ಬದ್ಧತೆಯನ್ನು ಕವಿತೆಗಳಲ್ಲಿ ಬದುಕಿಸಿದ್ದಾರೆ. ಅಂದ ಹಾಗೆ ಇವು ಕವಿಯಲ್ಲದವನ ಕವಿತೆಗಳಲ್ಲ. ಕಹಿಯಿಲ್ಲದ ಕವಿತೆಗಳು.
- ಸುಧಾಕೃಷ್ಣ
"ಅನಕ್ಷರಸ್ತರು, ಅಮಾಯಕರು ಮತ್ತು ಬಡವರಾಗಿದ್ದಆದಿವಾಸಿಗಳು ಅರಣ್ಯಗಳಲ್ಲಿ ಬದುಕುತ್ತಾ, ಅರಣ್ಯದ ಕಿರುಉತ್ಪನ್ನಗಳನ್ನ...
ಯಕ್ಷಗಾನ ಹಾಗೂ ನಾಟ್ಯಶಾಸ್ತ್ರ ವನ್ನು ತುಲನಾತ್ಮಕವಾಗಿ ನೋಡಲು ಇದೊಂದು ಪ್ರಾಥಮಿಕ ಪಠ್ಯ ಎಂಬ ಬಿನ್ನಹವೊಂದನ್ನು ಹಾಸ್ಯಗಾರ...
"ವೈಯಕ್ತಿಕವಾಗಿ ನನಗೆ ಸೃಜನಶೀಲ ಕೃತಿಗಳ ಬಗ್ಗೆ ಬರುವ ಅಧ್ಯಯನಪೂರ್ಣ ಗ್ರಂಥಗಳ ಬಗ್ಗೆ ಅಪಾರ ಗೌರವವಿದೆ. ಆದರೆ ನಾನು...
©2025 Book Brahma Private Limited.