ಮೌಖಿಕ ಪರಂಪರೆಯ ಕಲಾವಿದನ ಪಠ್ಯ


ಆಫ್ರಿಕನ್ ಸಾಹಿತ್ಯವನ್ನು ಪರಿಚಯಿಸುವ ತಮ್ಮ ಅಂಕಣ ‘ಕತ್ತಲೊಳಗಣ ಬೆಳಕು’ ದಲ್ಲಿ ಲೇಖಕ ಕೇಶವ ಮಳಗಿ ಅವರು ಕಥನ ನಿರೂಪಣಾ ಮೀಮಾಂಸೆ ಕುರಿತ ‘ದಿ ಓರಲ್‌ ಆರ್ಟಿಸ್ಟ್‌ಸ್‌ ಸ್ಕ್ರಿಪ್ಟ್’ಅನ್ನು ಕನ್ನಡಕ್ಕೆ ಅನುವಾದಿಸಿದ ಪಠ್ಯವಿದು.

ಹರೋಲ್ಡ್‌ ಶೆನ್ಬ್‌

(Harold Schenb)

`ಆಹಾ! ಹೀಗಿರಲಾಗಿ . . . ಏನಾಯಿತು ಅಂದರೆ . . .’ ‘ಕ್ವಾತಿ ಕೆ ಕಲೋಕು ಎನ್‌ಗಾಂಸ್ತೊಮಿ. . .’ ಎಂದು ಕಥನ ನಿರೂಪಕ ಔಪಚಾರಿಕ ಪದಗಳನ್ನು ನುಡಿದದ್ದೇ ಕಥೆ ಕೇಳುವವರ ಕಣ್ಮುಂದೆ ಗತಕಾಲದ ಸಾಂಸ್ಕೃತಿಕ ಕೊಪ್ಪರಿಗೆಯೇ ತೆರೆದುಕೊಳ್ಳುತ್ತದೆ. ಕಥಾ ನಿರೂಪಕನ ಕಲಾತ್ಮಕತೆಯನ್ನು ಆಧರಿಸಿ ಈ ರಮ್ಯಲೋಕದ ಶಬ್ದಗಳ ತಳಿರುತೋರಣ, ಕುಸುರಿ ಪದಗಳ ಕಮಾನು ಒಡಮೂಡತೊಡಗುತ್ತವೆ. ಆದರೆ, ಈ ಪ್ರಕ್ರಿಯೆಯಲ್ಲಿ ಕೇಳುಗರು ಕಲ್ಪಿಸಬಹುದಾದ ಲೋಕದ ಬಿಗಿಪಟ್ಟು ಕಥಾ ನಿರೂಪಕನ ಕೈಯಲ್ಲಿ ಭದ್ರವಾಗಿರುತ್ತದೆ. ಕಥನಕಾರ ಕೇಳುಗನಿಗೆ ಗತ-ವರ್ತಮಾನಗಳ ಸಂಬಂಧವನ್ನು ಕಲ್ಪಿಸುವನು. ಕೇಳುಗ, ಮಾಂತ್ರಿಕತೆಗೆ ಒಳಗಾದವನಂತೆ ವರ್ತಮಾನದ ಅನುಭವವನ್ನು ಪಡೆಯುವನು.

ಒಂದು ವಿಸ್ಮಯಕರ, ಅವಾಸ್ತವಿಕವೆನ್ನುವಂಥ, ತನ್ನದೇ ನಿಯಮಗಳ, ತನ್ನದೇ ಲೋಕದಲ್ಲಿ ಕಥೆ ತೆರೆದುಕೊಳ್ಳುವುದು. ಸಮಕಾಲೀನತೆಯೊಂದಿಗೆ ಬೆರೆತಂತಿರುವ ರಮ್ಯತೆಯ ಪ್ರತಿಮೆಗಳು ಪುನರಾವರ್ತನೆಗೊಳ್ಳುವಂತೆ ಅದರ ವಿನ್ಯಾಸವಿರುವುದು. ಕಥನಕಾರನ ಆಂಗಿಕ ಚಲನೆ, ಸಂಗೀತ, ಧ್ವನಿಗಳು ಕೇಳುಗರೊಂದಿಗೆ ಸಂಕೀರ್ಣವಾದ, ಆದರೆ, ಆಪ್ತತೆಯ ಸಂಬಂಧ ಸಾಧಿಸಿ ಕಲಾಪ್ರಜ್ಞೆಯನ್ನುಂಟು ಮಾಡುವವು. ಕೇಳುಗರು ಆಳವಾದ, ಸಂಕೀರ್ಣವಾದ ಅನುಭವಕ್ಕೆ ಒಳಗಾಗಲು ಕಥೆ ಹೇಳುವವನು ನೇರ ನಿರೂಪಣೆಯನ್ನು ಒಡೆದೊಡೆದು ಕಟ್ಟುವನು. ತದ್ವಿರುದ್ಧ ರೂಪಕಗಳನ್ನು ಮುಖಾಮುಖಿಯಾಗಿಸುವನು, ಬಳಿಕ ಕೊಂಚವೇ ತೆರೆದಿಡುತ್ತ, ಆಮೇಲೆ ಕೇಳುಗರು ಭಾವುಕರಾಗಿ ಭಾಗವಹಿಸುವಂತೆ ಮಾಡುವನು. ಎಲ್ಲವೂ ತನ್ನ ಕಲ್ಪನೆಗೆ ಹೊಂದಿಕೆಯಾಗುತ್ತಿವೆ ಎನ್ನುವಂತೆ ಮಾಡುವುದು ಕಥೆ ಹೇಳುವವನ ತಂತ್ರ. ಹೀಗೆ, ಹಿಂದಿನದು-ಇಂದಿನದು ಹದವಾಗಿ ಬೆರೆಯುವವು, ಆಗ ಕಥೆ ನಮ್ಮ ಬದುಕಿನೊಂದಿಗೆ ಬೆರೆತು ಹೋಗುವುದು.

ಪ್ರದರ್ಶನವು ರೂಪಕಗಳಿಗೊಂದು ಸನ್ನಿವೇಶವನ್ನು ಒದಗಿಸುತ್ತದೆ. ಕೇಳುಗ, ಗತಕಾಲ ಮತ್ತು ವರ್ತಮಾನಗಳು ಬೆಸೆದು ಸಮಕಾಲೀನ ಬದುಕನ್ನು ರೂಪಿಸುತ್ತಿದೆ ಎಂಬ ಅನುಭವ ಕೊಡುವ ಈ ಕ್ರಿಯೆಯಲ್ಲಿ ಭಾಗಿಯಾಗುತ್ತಾನೆ. ಕಲಾವಿದನೊಬ್ಬ ಬಣ್ಣಗಳನ್ನು ಬಳಸುವಂತೆ ಮೌಖಿಕ ಕಥಾನಿರೂಪಕ ತನ್ನ ಸಂಸ್ಕೃತಿಯ ಪರಿಕರಗಳನ್ನು ಬಳಸಿಕೊಳ್ಳುತ್ತಾನೆ. ಹೀಗಾಗಿ, ನಿರೂಪಕ ಬಳಸುತ್ತಿರುವ ಪರಿಕರಗಳು ನೇರವಾಗಿ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆಂದು ಕೇಳುಗರು ತಪ್ಪಾಗಿ ಭಾವಿಸಬಾರದು. ಕಥಾಪ್ರದರ್ಶನದ ಸಂಗತಿಗಳಿಗೂ, ಕಲಾವಿದನ ಸಮಾಜಕ್ಕೂ ಕೆಲವು ನೇರ ಸಂಬಂಧವಿರಬಹುದು. ತಮ್ಮ ಕಥಾ ನಿರೂಪಣೆಯೊಂದು ಕಾವ್ಯಸತ್ಯ ಎಂದು ದಕ್ಷಿಣ ಆಫ್ರಿಕಾದ ಕಥಾನಿರೂಪಕರು ಒತ್ತಿ ಹೇಳುತ್ತಾರೆ. ನಿರೂಪಣಾ ಪರಂಪರೆಯು ಸ್ವಭಾವವನ್ನು ಪ್ರತಿಬಿಂಬಿಸುತ್ತಿದ್ದರೆ, ಅದು ಗ್ರಹಿಸಿದ ಸ್ವರೂಪಗಳ ಕಲಾಪ್ರಜ್ಞೆಯನ್ನು ಜಟಿಲಗೊಳಿಸಲು ಹಾಗೆ ಮಾಡಿರುತ್ತದಷ್ಟೇ. ಅದರ ಅಂತಿಮ ಪರಿಣಾಮ- ದೃಶ್ಯಕಲೆ, ನಾಟ್ಯ ಮತ್ತು ಸಂಗೀತಗಳಲ್ಲಿ ಇರುವಂತೆಯೇ ಇರುತ್ತದೆ.

ಪ್ರದರ್ಶನವು ವಿಧಿವತ್ತಾಗಿ ಸಂಘಟಿಸಿದ ಪೌರಾಣಿಕ ರೂಪಕ: ಪ್ರೇಕ್ಷಕರು ಕಥೆಯ ಕೇಂದ್ರದೊಳಗೆ, ಕಾವ್ಯದೊಳಗೆ ಸಂಭ್ರಮದಲಿ ಸೇರಿಕೊಳ್ಳುವವರು. ಕ್ರಿಯೆಯನ್ನು ಸಂಯೋಜಿಸಿ, ಕಥಾ ಸಂಗೀತವನ್ನು ಕೂಡಿಸಲಾಗಿರುತ್ತದೆ. ಲಯಗಾರಿಕೆ, ನಾದಗಳನ್ನು ಹೊಂದಿರುವ ಇದಕ್ಕೆ ಅರ್ಥ ಸ್ಫುರಣೆಯೇ ಅಂತಿಮ ಉದ್ದೇಶ. ಸಂಗೀತ, ಪುರಾಣ ಮತ್ತು ಸಮಕಾಲೀನ ಪ್ರತಿಮೆ ಹಾಗೂ ಕ್ರಿಯೆಗಳು ರೂಪಕವಾಗಿ ಹೊಮ್ಮುತ್ತವೆ. ಕಥನ ನಿರೂಪಣಾ ಮೀಮಾಂಸೆಯಲ್ಲಿ ಈ ಎಲ್ಲವೂ ಒಳಗೊಂಡಿರುತ್ತವೆ. ಇದ್ದರೂ, ವಿಶೇಷವಾಗಿ ರೂಪಕಗಳು ಮತ್ತು ಸಂಗೀತ ಕಥನದ ಕೇಂದ್ರವಾಗಿರುತ್ತವೆ. ಹೀಗಾಗಿ, ಶಬ್ದ ಮತ್ತು ರೂಪಕಗಳು ಧ್ವನಿಸುವ ಸಂಕೀರ್ಣವಾದ ವಿವಿಧ ಭಾವಗಳ ಸಂಗಮವೇ ಕಥೆಯ ಅರ್ಥಕ್ಕೊಂದು ಸ್ವರೂಪವನ್ನು ಕೊಡುತ್ತವೆ. ಕಥಾ ಆಲಿಕೆಯಲ್ಲಿ ಭಾಗಿಗಳಾದ ಪ್ರೇಕ್ಷಕರವೃಂದದ ಭಾವುಕ ಅನುಭವವೇ ಕಥೆಯ ಅರ್ಥ ಅಥವ ಸಂದೇಶವನ್ನು ಕಂಡುಕೊಳ್ಳುವಂತೆ ಮಾಡುತ್ತದೆ. ಕಥನ ನಿರೂಪಣಾ ಮೀಮಾಂಸೆಯು ಆರಂಭವಾಗುವುದೇ ಒಂದು ಪೌರಾಣಿಕ ಪ್ರತಿಮೆಯ ಮೂಲಕ. ಆ ಪ್ರತಿಮೆಯು ಸಮಕಾಲೀನ ಪ್ರತಿಮೆಗಳ ಜತೆಗೆ ಸಮಸಮವಾಗಿ ಸಾಗುವಂತೆ ಜೋಡಿಸಿರಲಾಗುತ್ತದೆ. ಪುರಾಣ ಮತ್ತಿತರ ಪ್ರತಿಮೆಗಳನ್ನು ಮಧುರ ಸಂಗೀತದೊಂದಿಗೆ ಬೆಸೆಯಲಾಗುತ್ತದೆ. ಒಂದಕ್ಕಿಂತ ಹೆಚ್ಚಿನ ವಿಷಯವಸ್ತುಗಳಿದ್ದಲ್ಲಿ, ಅವು ಪ್ರತಿಸಂವಾದಿಯಂತಿರುತ್ತವೆ. ಒಟ್ಟಾರೆಯಾಗಿ, ಕಥಾನಿರೂಪಣಾ ವಿಧಾನವು ಅರ್ಥ, ಭಾವ, ಸ್ವರೂಪ, ಪುನರಾವರ್ತನೆ ಮತ್ತು ಪುರಾಣಗಳ ಸಂಯೋಗವಾಗಿರುತ್ತದೆ. ಜತೆಗದು, ಸಂಗೀತ ಮತ್ತು ಪೂರಕ ಪ್ರತಿಮೆಗಳನ್ನೂ, ನಿರೂಪಕ-ಪ್ರೇಕ್ಷಕರನ್ನು, ವಿಧಿವತ್ತತೆ ಮತ್ತು ಪ್ರದರ್ಶನದ ಅಂಶಗಳನ್ನೂ ಒಳಗೊಂಡಿದೆ.

ಇದು ಮೌಖಿಕ ಕಲಾವಿದನ ಪಠ್ಯ. ಪ್ರಾಚೀನ ರೂಪಕಗಳು, ಆತನ ಶರೀರ-ಶಾರೀರ, ಕಲ್ಪನಾಶೀಲತೆ ಮತ್ತು ಪ್ರೇಕ್ಷಕವೃಂದ ಆತನ ಪರಿಕರಗಳು. ಒಂದು ವಿಶಾಲ ವಸ್ತು-ವಿಷಯಗಳ ಚೌಕಟ್ಟಿನಲ್ಲಿ ಆತ ಸರಾಗವಾಗಿ ಚಲಿಸಬಲ್ಲಷ್ಟು ಸ್ವಾತಂತ್ಯ್ರ ಹೊಂದಿ‌ದ್ದಾನೆ. ತನ್ನ ಸ್ವೋಪಜ್ಞತೆಯಿಂದ ಪ್ರೇಕ್ಷಕರನ್ನು ಮರುಳುಗೊಳಿಸುವ ಆತ ಅದಕ್ಕಾಗಿ ಪ್ರಶಂಸೆಯನ್ನೂ ಪಡೆಯುತ್ತಾನೆ. ಇಲ್ಲಿ ನೆನಪಿನಲ್ಲಿರುವ ಅಂಶ ಬಹು ಕಡಿಮೆ. ಆತನ ಆಸರೆಯೇನಿದ್ದರೂ ಕಲ್ಪನಾಶೀಲತೆಯೇ. ಪ್ರೇಕ್ಷಕರು ತಮ್ಮ ಭಾವದಲ್ಲಿ ಮರುಸೃಷ್ಟಿ ಮಾಡಿಕೊಳ್ಳಬಲ್ಲ ಪೌರಾಣಿಕ ಪ್ರತಿಮೆಗಳನ್ನು ಆತ ಕಲಾ ಪರಂಪರೆಯಿಂದ ಎರವಲು ಪಡೆಯುತ್ತಿದ್ದಾನೆ.

ಕಥಾ ಪ್ರದರ್ಶನದಲ್ಲಿ ಪ್ರಸಂಗವನ್ನು ನೇರವಾಗಿ ನಿರೂಪಿಸುವುದು ಬಹುದೊಡ್ಡ ಸಾಧನೆಯೆಂದು ಪರಿಗಣಿಸುವುದಿಲ್ಲ. ಇಲ್ಲಿನ ಪ್ರದರ್ಶಕರು ಕಥನಕಾರರು, ಬುದ್ಧಿಜೀವಿಗಳು, ಮೇಲಾಗಿ ಕಲಾವಿದರು. ಈ ಪಾತ್ರವನ್ನು ಅವರಿಗೆ ತಲೆಮಾರುಗಳಿಂದ ದತ್ತವಾಗಿ ನೀಡಲಾಗಿದೆ. ಈ ಕಲಾವಿದರು, ಒಂದು ವಿಷಯ-ವಸ್ತುವನ್ನು ಸೂಚಿಸಲೋ, ವಾಗ್ವಾದವನ್ನು ನಡೆಸಲೋ ಅಥವ ಪ್ರೇಕ್ಷಕರಿಂದ ಜಾಣತನದ ಪ್ರತಿಕ್ರಿಯೆಯನ್ನು ಪಡೆಯಲೋ ನಿರೂಪಣೆಯ ಹೊರಮೈಯನ್ನು ಒಂದು ಪರಿಕರದಂತೆ ಬಳಸಬಲ್ಲ ನುರಿತ ಕುಶಲಿಗರು. ಬಳಸುತ್ತಿರುವ ರೂಪಕವೊಂದು ಈ ಹಿಂದೆಂದೂ ಅದೇ ರೀತಿಯಲ್ಲಿ ಬಳಸಿಲ್ಲದಿರುವಂಥದ್ದು, ಮಾತ್ರವಲ್ಲ, ಮುಂದೊಮ್ಮೆ, ಇದೇ ಮಾದರಿಯಲ್ಲಿ ಬಳಕೆಗೆ ಬಾರದಿರುವಂಥದ್ದು. ಕಲಾವಿದನ ಮಾತಿನ ಚಳಕದಿಂದ ನಿರೂಪಣೆಯ ಹೊರಮೈ ಪ್ರತಿ ಸಲವೂ ಬೇರೆಯೇ ವಿಧಾನದಲ್ಲಿ ಪ್ರಕಟಗೊಳ್ಳುವಂಥದ್ದು. ಏನೇ ಇದ್ದರೂ, ಮುಖ್ಯವಾದ ಸಂಗತಿಯೆಂದರೆ, ಪುರಾಣ ಪ್ರತಿಮೆಗಳ ಮೂಲಕ ಭಾವುಕತೆಯನ್ನು ಮುನ್ನೆಲೆಗೆ ತರುವುದು; ಬಳಿಕ ಅದನ್ನೊಂದು ನಾದಕ್ಕೆ ಹೊಂದಿಸುವುದು. ರೂಪಕವೊಂದರ ಸೃಷ್ಟಿಯೆಂದರೆ ಹೊಸ ಭಾಷೆಯನ್ನು ಸೃಷ್ಟಿಸಿದಂತೆಯೇ. ಇಲ್ಲಿ ಸಂವಹನ ನಡೆಯುತ್ತಿರುವುದು ಶಬ್ದಗಳ ಮೂಲಕವಲ್ಲ. ಬದಲಾಗಿ, ವಾಚ್ಯ, ವಾಚ್ಯವಲ್ಲದ ತಂತ್ರಗಳ ಮೂಲಕ ಸೃಷ್ಟಿಸಿದ ಪ್ರತಿಮೆಗಳ ಮೂಲಕ.

ಸಂಯೋಜನೆ ಮತ್ತು ಕೈಚಳಕದಿಂದ ಇಲ್ಲಿ ಸೃಷ್ಟಿಯಾಗುವ, ರೂಪಕ, ವಿಚಾರ, ಮೌಲ್ಯ, ವಾಗ್ವಾದಗಳು ಸಾಮಾಜಿಕ ಸಂಸ್ಥೆಗಳ ಸತ್ಯಗಳನ್ನು ಹೊರಗೆಡಹುವಂತಿರುತ್ತವೆ. ಒಂದು ಮೌಖಿಕ ಪರಂಪರೆಯ ಸನ್ನಿವೇಶದಲ್ಲಿ ತರ್ಕ, ಕಾರ್ಯಕಾರಣಗಳ ಹದಗಾರಿಕೆಯಿಂದ ಇದನ್ನು ಸಾಧಿಸಲಾಗುತ್ತದೆ. ನೇರ ನಿರೂಪಣಾ ವಸ್ತುವನ್ನು ಪೌರಾಣಿಕ ಪ್ರತಿಮೆಗಳಿಂದ ಕಟ್ಟಿ, ವಿಶೇಷ ಭಾಷೆಯ ಮೂಲಕ ಈ ಪರಂಪರೆಯನ್ನು ತಲೆಮಾರಿನಿಂದ ತಲೆಮಾರಿಗೆ ಹಸ್ತಾಂತರಿಸಲಾಗುತ್ತದೆ. ಸುಲಭವಾಗಿ ನೆನಪಿಟ್ಟುಕೊಳ್ಳಬಹುದಾದ ಈ ಪುರಾಣ ಪ್ರತಿಮೆಗಳು ಹುಟ್ಟು ಹಾಕುವ ಸಮಸ್ಯೆ ಮತ್ತು ಪರಿಹಾರಕ ನಿರ್ಣಯಗಳು ಕಲಾವಿದನ ಪ್ರದರ್ಶನದಲ್ಲಿ ಸಾಕಾರಗೊಳ್ಳುತ್ತವೆ. ಪುರಾಣ ಪ್ರತಿಮೆಗಳಿಗೆ ಆತ ತನ್ನ ಭಾಷೆ, ಶಬ್ದ ಗಾರುಡಿ ಮತ್ತು ಆಂಗಿಕಾಭಿನಯದ ಮುಖೇನ ಜೀವ ತುಂಬುತ್ತಾನೆ.

ಕಥಾನಿರೂಪಕ ಪುರಾಣ ಪ್ರತಿಮೆಗಳನ್ನು ಸ್ಮರಿಸಿದ್ದೇ ಆತನಿಗೆ ಸತತವಾಗಿ ಪ್ರೇಕ್ಷಕ ಬೆಂಬಲ ಅಗತ್ಯ ಬೀಳುತ್ತದೆ. ಒಂದೊಮ್ಮೆ, ಆತ ಪ್ರತಿಭೆ-ಆತ್ಮವಿಶ್ವಾಸಗಳ ಕಲಾವಿದನಾಗಿದ್ದರೆ ತನ್ನ ಹಾಗೂ ಪ್ರೇಕ್ಷಕರ ನಡುವಿರಬಹುದಾದ ಅಡೆತಡೆ, ನಕಾರಾತ್ಮಕ ಅಂಶಗಳನ್ನು ಪರಿಹರಿಸಿಕೊಳ್ಳುತ್ತಾನೆ. ಅಂದರೆ, ಕಲಾವಿದ ಸೃಷ್ಟಿಕೊಂಡಿರುವ ಪುರಾಣ ರೂಪಕಕ್ಕೂ, ಪ್ರೇಕ್ಷಕ ಕನಸುತ್ತಿರುವ ರೂಪಕಕ್ಕೂ ಸಾಮ್ಯತೆ ಇದೆಯೇ ಎಂದು ಖಾತರಿಪಡಿಸಿಕೊಳ್ಳುವುದು. ಒಂದೊಮ್ಮೆ, ಕಲಾವಿದ ಆ ರೂಪಕದ ವಿಶೇಷಣಗಳಲ್ಲಿ ಭಾವ ಪರವಶನಾಗಿ ನಿರೂಪಣೆಯ ಸಣ್ಣಪುಟ್ಟ ಅಂಶಗಳನ್ನು ಕೈಬಿಟ್ಟಿದ್ದರೂ ಪ್ರೇಕ್ಷಕರು ಆ ಕಂದಕವನ್ನು ತುಂಬಿಕೊಳ್ಳುವಂತಿರಬೇಕು. ಪ್ರೇಕ್ಷಕರ ಮಟ್ಟಿಗೆ ಇದೇನು ಕಲಾಸ್ವಾದನೆಯ ಸಮಸ್ಯೆಯಲ್ಲ. ಕಲಾತ್ಮಕ ಅಭಿವ್ಯಕ್ತಿಯು ಯಾವತ್ತಿದ್ದರೂ ಕಥನ ನಿರೂಪಕ ಸಮುದಾಯಗಳ ಕಾಳಜಿಯಾಗಿದೆ. ಇದ್ದರೂ, ಅದು ಸರಳರೇಖೆಯಂಥ ವಸ್ತುವನ್ನು ಮೀರಿ ಹೋಗುವಂಥದ್ದು. ಪ್ರೇಕ್ಷಕ ಕೂಡ ಸಂಕೀರ್ಣ ತರ್ಕ ಮತ್ತು ಒಳಹೆಣಿಗೆಗಳ ರೂಪಕ ಭಾಷೆಯಲ್ಲಿ ಸಿಲುಕಿಯೇ ಬಿಡುತ್ತಾನೆ. ಆರಂಭದಲ್ಲಿ ಇದೊಂದು ಸರಳವಾದ ವಾಚ್ಯ ಸಾಮ್ಯತೆಯಂತೆ ಕಾಣಿಸುವುದು ಕೊನೆಗೆ ವಿಶಿಷ್ಟ ರೂಪಕ ಭಾಷೆಯಾಗಿ ಬದಲಾಗಿ ಬಿಡುತ್ತದೆ.

ವಾಚ್ಯವಲ್ಲದ ಸಂವಹನದ ವಿಷಯದಲ್ಲಂತೂ ಪ್ರದರ್ಶಕ ಮತ್ತು ಪ್ರೇಕ್ಷಕರ ನಡುವಿನ ಸಂಬಂಧವು ಇನ್ನಷ್ಟು ಸಂಕೀರ್ಣವಾಗಿ ಬದಲಾಗಿಬಿಡುತ್ತದೆ. ಪ್ರೇಕ್ಷಕ ಸದಸ್ಯರು ವಾಚಿಕ-ದೈಹಿಕವಾಗಿ ಭಾಗವಹಿಸುತ್ತ ತನ್ನ ರೂಪಕಗಳನ್ನು ಬೆಳೆಸುವರೆಂಬುದು ಪ್ರದರ್ಶಕನ ನಿರೀಕ್ಷೆ. ತನ್ನ ಪ್ರದರ್ಶನವು ಯಶ ಕಾಣಬೇಕಾದರೆ ಪ್ರೇಕ್ಷಕರ ಸಹಭಾಗಿತ್ವ ಅಗತ್ಯವೆಂದು ಆತನಿಗೆ ಗೊತ್ತು. ಅದನ್ನು ಸಾಧಿಸಲು ಆತ ಅನೇಕ ಪರಿಕರಗಳನ್ನು ಬಳಸುತ್ತಾನೆ. ಈ ಪರಿಕರಗಳನ್ನಾದರೂ ಆತ ಬಳಸುತ್ತಿರುವುದು ತನ್ನ ರೂಪಕಗಳ ಹೊರಮೈಯನ್ನು ತೋರಿಸಿ, ವಸ್ತುವನ್ನು ಹೊರಗೆಡಹುವುದಕ್ಕೆ. ಮತ್ತು ಅದನ್ನು ಉಪಸಂಹಾರದವರೆಗೆ ಕೊಂಡೊಯ್ಯುವುದಕ್ಕೆ. ಪ್ರೇಕ್ಷಕರ ವಾಚ್ಯತೆ, ವಾಚ್ಯವಲ್ಲದ ತೊಡಗಿಸಿಕೊಳ್ಳುವಿಕೆ ಅದನ್ನು ಆಗು ಮಾಡುತ್ತದೆ. ಹೀಗಿದ್ದರೂ, ಪ್ರೇಕ್ಷಕರು ಯಾವಾಗಲೂ ಪ್ರದರ್ಶಕನ ನಿಯಂತ್ರಣದಲ್ಲಿದ್ದಾರೆ. ಪ್ರದರ್ಶಕನಾದರೂ ಹೊಸ ಹೊಸ ರೂಪಕಗಳನ್ನು ಸೃಷ್ಟಿಸುತ್ತ ಅವನ್ನೆಲ್ಲ ಒಟ್ಟಂದದಲ್ಲಿ ಕೂಡಿಸಲು ಹೆಣಗುತ್ತಿದ್ದಾನೆ. ಪ್ರೇಕ್ಷಕ ಎರಡು ಬಗೆಯಲ್ಲಿ ಕಲಾಪ್ರದರ್ಶನದ ಭಾಗವಾಗಿದ್ದಾನೆ: ಆತ ರೂಪಕಗಳ ಬೆಳಸುವಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದಾನೆ; ಭಾವತೀವ್ರತೆಯಲ್ಲಿ ಆ ರೂಪಕಗಳಲ್ಲಿ ಸಿಲುಕಿಕೊಂಡಿದ್ದಾನೆ. ಸಂಗೀತ ಇದಕ್ಕೊಂದು ಚೆಲುವಾದ ನಾಟಕೀಯತೆಯನ್ನು ಒದಗಿಸುತ್ತಿದೆ. ಮಾತ್ರವಲ್ಲ, ಪ್ರೇಕ್ಷಕರು ಪ್ರದರ್ಶನದಲ್ಲಿ ತಲ್ಲೀನರಾಗುವಂತೆ ಮಾಡಲೂ ಸಹಕಾರಿಯಾಗಿದೆ. ಪ್ರೇಕ್ಷಕರು, ಕಥಾನಿರೂಪಕನೊಂದಿಗೆ ದೇಹವನ್ನು ತೂಗಿಸುವರು, ಚಪ್ಪಾಳೆ ಹೊಡೆಯುವರು, ಗುನುಗುತ್ತ ತಮ್ಮ ಸಮ್ಮತಿಯನ್ನು ಸೂಚಿಸುವರು.

ಪುರಾಣ ಪ್ರತಿಮೆಯೊಂದು ಉಪಸಂಹಾರವನ್ನು ತಲುಪಿದಾಗ, ಕಥನ ನಿರೂಪಕ ಇನ್ನೊಂದು ಹೊಸ ರೂಪಕವನ್ನು ಪರಿಚಯಿಸಬಹುದು. ಅಂತ್ಯಗೊಂಡ ಪ್ರತಿಮೆಗೂ, ಹೊಸ ಪ್ರತಿಮೆಗೂ ಸಂಬಂಧವಿರಬಹುದು. ಪ್ರದರ್ಶಕ ತನ್ನೆಲ್ಲ ಕಲಾನೈಪುಣ್ಯತೆಯಿಮದ ಪಾತ್ರವನ್ನು ಪರಿಚಯಿಸಿ, ಎಲ್ಲವೂ ಒಂದರೊಳಗೊಂದು ಅಡಗಿದೆ ಎಂಬ ಭ್ರಾಮಕತೆಯನ್ನು ಹುಟ್ಟಿಸುವನು. ಪ್ರದರ್ಶನವು ಉತ್ತುಂಗಕ್ಕೇರಿದಂತೆಲ್ಲ ಪುರಾಣ ಪ್ರತಿಮೆಯು ಪುನರಾವರ್ತನೆಯಾಗಬಹುದು. ಈಗಾಗಲೇ ಪುನರಾವರ್ತನೆಯಾದ ರೂಪಕಗಳೊಂದಿಗೆ, ದಟ್ಟ ವಿವರಗಳೊಂದಿಗೆ ಸರಳ ರೇಖೆಯಂತೆ ಅವು ಒಂದಕ್ಕೊಂದು ಒಳ ಸಂಬಂಧವನ್ನು ಸಾಧಿಸಬಹುದು. ಪುನರಾವರ್ತನೆಗೊಂಡ ಪ್ರತಿಮೆಗಳು ಪಾತ್ರಗಳನ್ನು, ಸಂಗತಿಗಳನ್ನು ನಿರ್ಣಯಗಳತ್ತ ನೂಕುವವು. ಆದರೆ, ನಿರ್ಣಯ ಸಾಧ್ಯವಾಗಬೇಕಾದರೆ, ನಿರೂಪಣೆಯಲ್ಲಿ ಮಾರ್ಪಾಡು ಮುಖ್ಯ. ಪುರಾಣ ಪ್ರತಿಮೆಯು ಕೊನೆಯ ಸಲಕ್ಕೆ ಕಾಣಿಸಿಕೊಂಡಾಗ ಸ್ವಲ್ಪ ಬದಲಾವಣೆ ಉಂಟಾಗಬಹುದು. ತಮ್ಮ ಕೇಂದ್ರವನ್ನು ಕಳೆದುಕೊಂಡ ಪುನರಾವರ್ತನೆಗೊಂಡ ಪ್ರತಿಮೆಗಳ ವಿನ್ಯಾಸವು ಪುರಾಣ ಪ್ರತಿಮೆಯೊಂದಿಗೆ ಸೇರಿಕೊಳ್ಳುವುದು. ಮತ್ತು ಪ್ರತಿಮೆಗಳು ನಿರ್ಣಯಕ್ಕೆ ತರುತ್ತಿರುವ ಬದಲಾವಣೆಯು ಇದೇ ಆಗಿದೆ.

(ದಿ ಓರಲ್‌ ಆರ್ಟಿಸ್ಟ್‌ಸ್‌ ಸ್ಕ್ರಿಪ್ಟ್‌)

ಈ ಹಿಂದಿನ ಬರಹಗಳು

ಸಿದ್ಧಾಂತಗಳಲ್ಲಿ `ದಾರ್ಶನಿಕ ಚತುರತೆ’ ಅಥವ `ವಿವೇಚನೆ’

ಬಹುತ್ವದ ಅರ್ಥ-ಸುಳ್ಳು ಮತ್ತು ಸತ್ಯ

ಗ್ರೀಕ್ ಮತ್ತು ಅರಬ್ ಸಾಹಿತ್ಯದ ಮಧ್ಯೆ ಕಂದಕ ಏಕೆ?: ಒಂದು ವಿಶ್ಲೇಷಣೆ

MORE FEATURES

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...

ಮನಸ್ಸಿನ ಒಳಹೊರಗನ್ನು ಅರ್ಥಮಾಡಿಕೊಳ್ಳುವುದು ಬಲು ಕಷ್ಟ!

26-04-2024 ಬೆಂಗಳೂರು

‘ಮನಸ್ಸಿನ ಒಳಹೊರಗನ್ನು ಅರ್ಥಮಾಡಿಕೊಳ್ಳುವುದು ಬಲು ಕಷ್ಟ! ಹಾಗಾಗಿ ಮಾನಸಿಕ ಸಮಸ್ಯೆಗಳ ಬಗ್ಗೆ ನನಗೆ ತಿಳಿದಷ್ಟು ವ...

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...