ಸಿದ್ಧಾಂತಗಳಲ್ಲಿ `ದಾರ್ಶನಿಕ ಚತುರತೆ’ ಅಥವ `ವಿವೇಚನೆ’


ಆಫ್ರಿಕನ್ ಸಾಹಿತ್ಯ-ಸಂಸ್ಕೃತಿ-ಆಚರಣೆ-ತತ್ವಶಾಸ್ತ್ರ-ಸಿದ್ಧಾಂತ-ಧೋರಣೆ-ದಾರ್ಶನಿಕತೆ-ಬರಹ-ಮೌಖಿಕ ಪರಂಪರೆ-ಕಲ್ಪಿತ ಕಥೆಗಳು ಹೀಗೆ ವೈವಿಧ್ಯಮಯ ಆಯಾಮಗಳ ಮೂಲಕ ಹೆನ್ರಿ ಒಡೇರ ಒರುಕ ಅವರ ಸೆಗಾಸಿಟಿ ಆಫ್ ಆಫ್ರಿಕನ್ ಫಿಲಾಸಫಿ’ ಚಿಂತನೆಯ ಒಟ್ಟು ಸಾರವನ್ನು ವಿವರಿಸಿರುವ ಲೇಖಕ ಕೇಶವ ಮಳಗಿ ಅವರು ತಮ್ಮ ‘ಕತ್ತಲೊಳಗಿನ ಬೆಳಕು’ ಅಂಕಣದಲ್ಲಿ ವಿಸ್ತೃತವಾಗಿ ಚರ್ಚಿಸಿದ್ದಾರೆ.

ಹೆನ್ರಿ ಒಡೇರ ಒರುಕ

(Henry Odera Oruka)

ಆಫ್ರಿಕನ್‌ ತತ್ತ್ವಶಾಸ್ತ್ರ’ದ ಚರ್ಚೆಯು ಐತಿಹಾಸಿಕವಾಗಿ ಬಹುಮುಖ್ಯವಾದ ಅನೇಕ ಘಟ್ಟಗಳನ್ನು ಹಾದು ಬಂದಿದೆ. ಆರಂಭದಲ್ಲಿ ಅದನ್ನು ಕಪ್ಪುಜೀವಿಗಳ ಸಂಸ್ಕೃತಿ ಹಾಗೂ ಈ ಕಪ್ಪು ಮನಸ್ಸು ಯಾವುದೇ ತರ್ಕ, ಕಾರ್ಯಕಾರಣ, ವೈಜ್ಞಾನಿಕ ವಿಶ್ಲೇಷಣೆಗೆ ಒಗ್ಗಿಕೊಳ್ಳದ ಹೆದರಿಕೆ ಹುಟ್ಟಿಸುವ ಅನ್ಯಗ್ರಹ ವಸ್ತುವಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿತ್ತು. ಲೆವಿ ಬ್ರೂಲ್‌ ಮಾದರಿಯ ಮಾನವಶಾಸ್ತ್ರಜ್ಞರು ಇಂಥ ವಿಚಾರಗಳ ಪ್ರಚಾರಕರಾಗಿದ್ದರು. ‘ಆದಿಮ’ ಮನುಷ್ಯ, ಮತ್ತು ‘ಆದಿಮ’ ಮನಸ್ಥಿತಿ ಎನ್ನುವುದು ಇವರ ವಿಶ್ಲೇಷಣೆ. ಈ ಬಗೆಯ ಆದಿಮ ಮನಸ್ಥಿತಿಯು ಅತಾರ್ಕಿಕ, ಅವೈಜ್ಞಾನಿಕ, ಅಸಾಹಿತ್ಯಕ ಇತ್ಯಾದಿ ಎಂಬುದು ಇವರ ಅಂಬೋಣವಾಗಿತ್ತು.

ನಿಜ, ತತ್ತ್ವಶಾಸ್ತ್ರಪೂರ್ವ ಎನ್ನುವುದು ಆದಿಮ ಮನುಷ್ಯನ ಬದುಕು ಮತ್ತು ಸಂಸ್ಕೃತಿಗಳ ಸಹಜ ವಿಕಾಸದ ಪರಿಣಾಮವಾಗಿದೆ. ಮುಂದೊಮ್ಮೆ ಅದು ವೈಜ್ಞಾನಿಕ ಹಾಗೂ ತಾರ್ಕಿಕತೆಯನ್ನೊಳಗೊಂಡ ಸಂಸ್ಕೃತಿಯಾಗಿ ವಿಕಾಸಗೊಳ್ಳುವುದು ಎಂಬ ಸದಾಶಯ ಇದರ ಹಿಂದಿದೆ. ಆದರೆ, ಲೆವಿ ಬ್ರೂಲ್ ಮತ್ತು ಅಂತಹ ಮಾನವಶಾಸ್ತ್ರಜ್ಞರು ಇದಕ್ಕೆ ಅವಕಾಶವನ್ನೇ ನೀಡಲಿಲ್ಲ. ತತ್ತ್ವಶಾಸ್ತ್ರಪೂರ್ವಕ್ಕಿಂತ, ತತ್ತ್ವ ವಿಹೀನ ಎನ್ನುವುದರಲ್ಲಿಯೇ ಅವರಿಗೆ ಹೆಚ್ಚಿನ ಉಮೇದು. ಆಫ್ರಿಕಾ ಕುರಿತು ಅವರು ಸಾಧಿಸ ಬಯಸಿದ್ದಿಷ್ಟೇ: 1) ಆಫ್ರಿಕ ಖಂಡದಲ್ಲಿ ತಾತ್ತ್ವಿಕ ಸಂವಾದ ಸಾಧ್ಯವಿಲ್ಲ 2) ಇಲ್ಲಿ ಸಂಘಟಿತವಾದ ಸೈದ್ಧಾಂತಿಕ ಸಂಹಿತೆಗಳಿಲ್ಲ.

ಮೊದಲ ಪ್ರಮೇಯ ಹುಟ್ಟಿರುವುದೇ ಕಪ್ಪುಜೀವಿಗಳ ಮಾನಸಿಕಲೋಕವು ‘ಆದಿಮ ಸ್ಥಿತಿ’ಯಲ್ಲಿರುವುದು ಎಂಬ ಗ್ರಹಿಕೆಯಿಂದ. ಎರಡನೆಯ ಪ್ರಮೇಯವು ಮೊದಲಿನದ್ದರ ಪುನರುಕ್ತಿಯಷ್ಟೇ.

ತತ್ತ್ವಶಾಸ್ತ್ರಪೂರ್ವ ಎಂಬ ಗ್ರಹಿಕೆಯ ಬಳಿಕ ಬಂದಿದ್ದು ಕಟ್ಟಳೆಗಳಿಂದ ನಿರ್ದೇಶಿತವಾದ ವಿಶಿಷ್ಟ ತತ್ತ್ವಶಾಸ್ತ್ರ ಎಂಬ ಹಣೆಪಟ್ಟಿ. ಪಾಲಿನ್‌ ಹಾನ್‌ಟಾನ್‌ಜಿ ಇದನ್ನು ‘ಜನಾಂಗ ತತ್ತ್ವಶಾಸ್ತ್ರ’ ಎಂದು ಗುರುತಿಸುತ್ತಾರೆ. ನಾವೆಲ್ಲ ಬಲ್ಲಂತೆ ಜನಾಂಗ-ತತ್ತ್ವಶಾಸ್ತ್ರದಲ್ಲಿ ಸಾಮುದಾಯಿಕ ಒಮ್ಮತ ಅಗತ್ಯ. ಜನರ ಕಟ್ಟುಕಟ್ಟಳೆ, ನಂಬಿಕೆಗಳನ್ನಿದು ಒಟ್ಟಂದದಲ್ಲಿ ಸ್ವೀಕರಿಸುತ್ತದೆ. ಇದನ್ನು ಜನಪದ ತತ್ತ್ವಶಾಸ್ತ್ರವೆಂತಲೂ ಕರೆಯಬಹುದು. ತರ್ಕ, ಕಾರ್ಯಕಾರಣಗಳ ಮೇಲೆ ಕಟ್ಟಿದ ಸಿದ್ಧಾಂತಕ್ಕಿದು ತದ್ವಿರುದ್ಧವಾದುದು. ವಿಚಾರಗಳು ಒಬ್ಬ ವ್ಯಕ್ತಿಗೆ ಸೀಮಿತವಾಗಿಲ್ಲದಿರುವುದರಿಂದ ನಿರಾಕಾರವಾದುದು. ಸಮುದಾಯದ ಪ್ರತಿ ವ್ಯಕ್ತಿಯೂ ಇದನ್ನು ಅರ್ಥಮಾಡಿಕೊಂಡು ಆಚರಿಸುವುದರಿಂದ ಸಿದ್ಧಾಂತವು ಸಮುದಾಯಕ್ಕೆ ಸೇರಿದ್ದು. ತನ್ನ ಅತ್ತ್ಯುತ್ತಮ ಸ್ಥಿತಿಯಲ್ಲಿ ಶ್ರದ್ಧಾನಂಬಿಕೆಗಳ ಗುಚ್ಛ. ಕೆಲವೊಮ್ಮೆ ನಿಷೇಧ ಮತ್ತು ಮೂಢವಿಶ್ವಾಸಗಳ ರೂಪದಲ್ಲಿಯೂ ಪ್ರಕಟಗೊಳ್ಳುವುದು.

ಈ ಅಪೂರ್ವ ‘ಸಮುದಾಯ ಸಿದ್ಧಾಂತ’ವು ಬೇರೆ ಬೇರೆ ವಿಧಾನಗಳಲ್ಲಿ ಕಾಣಿಸಿಕೊಳ್ಳುವುದು. ಇದ್ದರೂ ನಾವೀಗ ಹೊಸಬಗೆಯ ಸೈದ್ಧಾಂತಿಕ ಪ್ರಸ್ತಾವನೆಯೊಂದನ್ನು ನೋಡುತ್ತಿದ್ದೇವೆ. ಅದನ್ನು ‘ವೃತ್ತಿನಿರತ ಸಿದ್ಧಾಂತ’ವೆನ್ನಬಹುದು. ಇದು ವೃತ್ತಿನಿರತವೇಕೆಂದರೆ, ಇಲ್ಲಿ ತಾಂತ್ರಿಕವಾಗಿ ತರಬೇತಿ ನೀಡಿ ಸಿದ್ಧಾಂತ ನಿರ್ವಾಹಕರನ್ನು ಸೃಷ್ಟಿಸಲಾಗುತ್ತದೆ. ಈ ಸಿದ್ಧಾಂತದ ವಿಶಿಷ್ಟ ಲಕ್ಷಣವೆಂದರೆ ಯುರೋಪ್‌ ಅಥವ ಪಶ್ಚಿಮದ ಸಿದ್ಧಾಂತಗಳೊಂದಿಗೆ ಹೊಂದಿಕೊಳ್ಳುವ ತಂತ್ರಗಳನ್ನಿದು ಬಳಸುತ್ತದೆ. ಇದ್ದರೂ, ಈ ತಂತ್ರಗಳು ಪಶ್ಚಿಮಕ್ಕೇನೂ ಸಿಮೀತವಲ್ಲ ಎಂಬ ಮಾತೂ ದಿಟ. ಸದ್ಯದ ಆಫ್ರಿಕನ್‌ ವೃತ್ತಿನಿರತ ತತ್ತ್ವಶಾಸ್ತ್ರವು ‘ಸ್ಥಿತ್ಯಂತರ ಸ್ವರೂಪಿ ಸಿದ್ಧಾಂತ’. ಈ ಸಿದ್ಧಾಂತದ ಕೇಂದ್ರ ಪ್ರಶ್ನೆಗಳು ತತ್ತ್ವಶಾಸ್ತ್ರವೆಂದರೇನು? ಆಫ್ರಿಕನ್‌ ತತ್ತ್ವಶಾಸ್ತ್ರವೆಂದರೇನು? ಎಂಬುವಾಗಿವೆ. ಕೆಲವು ನಿರ್ದಿಷ್ಟ ಚಿಂತನೆ, ನಂಬಿಕೆಗಳು ಸಿದ್ದಾಂತವೆಂದು ಸ್ವೀಕರಿಸಬಹುದೇ? ಎನ್ನುವ ಚರ್ಚೆಯೇ ಇದರ ಮುಖ್ಯ ಉದ್ದೇಶವಾಗಿದೆ. ಆ ಅರ್ಥದಲ್ಲಿದು ಸಿದ್ಧಾಂತಗಳ ಸಾಮಾನ್ಯ ಗ್ರಹಿಕೆಯ ಕುರಿತ ವಿಶ್ಲೇಷಣೆ ಇಲ್ಲವೆ ವ್ಯಾಖ್ಯಾನವೆಂದು ಹೇಳಬಹುದು. ಈ ವೃತ್ತಿನಿರತ ತತ್ತ್ವಶಾಸ್ತ್ರಕ್ಕೆ ಕೆಲವು ಗಮನಾರ್ಹ ಇತಿಮಿತಿಗಳಿವೆ. ಇದು ಮುಖ್ಯವಾಗಿ ‘ಸಮುದಾಯ ಸಿದ್ಧಾಂತ’ವನ್ನು ವಿಮರ್ಶಿಸುವುದಾದರೂ ತನ್ನದೇ ಆದ ಪ್ರಸ್ತಾವನೆಯನ್ನು ಹೊಂದಿಲ್ಲ. ತತ್ತ್ವಶಾಸ್ತ್ರ, ಅದರಲ್ಲೂ ಆಫ್ರಿಕನ್‌ ತತ್ತ್ವಶಾಸ್ತ್ರದ ಕುರಿತು ಸಾಮಾನ್ಯೀಕರಿಸಿದ ಚರ್ಚೆ ಕೈಗೆತ್ತಿಕೊಳ್ಳುವ ಬದಲು ನಿರ್ದಿಷ್ಟ ವಿಷಯ, ಪರಿಕಲ್ಪನೆಗಳ ಕುರಿತು ಮಾತನಾಡುವ ಮೂಲಕ ತನ್ನ ಮಿತಿಯನ್ನಿದು ಮೀರಬಹುದು. ಜತೆಗೆ, ಇದಕ್ಕೆ ಸುದೀರ್ಘ ಕಾಲದ ಸಂವಾದ-ವಾಗ್ವಾದಗಳ ಇತಿಹಾಸವಿಲ್ಲದಿರುವುದರಿಂದ ಕಾಪಿಡಲು, ವಿಸ್ತರಿಸಲು ಸಾಧ್ಯವಿಲ್ಲ. ಈ ಸಮಸ್ಯೆಯೇ ಇಂದಿನ ಆಫ್ರಿಕನ್‌ ಸಿದ್ಧಾಂತಿಗಳಿಂದ- ‘ನೂರು ಹೂಗಳು ಅರಳಲಿ’ ಎಂದು ಹೇಳಿಸುತ್ತಿದೆ. ಭವಿಷ್ಯವು ಈ ಹೂಗಳನ್ನು ಆರಿಸಿ, ಪರಂಪರೆಯನ್ನು ಕಾಪಿಡುತ್ತದೆ.

ಈ ವೃತ್ತಿನಿರತ ಆಫ್ರಿಕನ್‌ ಸಿದ್ಧಾಂತವು ಸ್ವಯಂ-ವಿಮರ್ಶೆಯನ್ನು ರೂಢಿಸಿಕೊಳ್ಳಬೇಕಿರುವುದು ಸಹ ಮುಖ್ಯವೇ. ಸಂಬಂಧಿಸಿದವರು ತಮ್ಮ ತಮ್ಮೊಳಗೆ, ಹೊರಗಿನವರೊಂದಿಗೆ ಬಿರುಸಿನ ಸಂವಾದದಲ್ಲಿ ತೊಡಗಬೇಕಿದೆ.

ನಾಲ್ಕು ಬಗೆಯ ಧೋರಣೆಗಳು

ಇತ್ತೀಚೆಗೆ ಆಫ್ರಿಕನ್‌ ಸಿದ್ಧಾಂತದಲ್ಲಿ ನಾಲ್ಕು ಪ್ರವೃತ್ತಿ-ಧೋರಣೆಗಳನ್ನು ನಾನು ಗುರುತಿಸಿದ್ದೇನೆ: ಸಾಮುದಾಯಿಕ ಸಿದ್ಧಾಂತ; ವಿವೇಚನಾ ಸಿದ್ಧಾಂತ; ರಾಷ್ಟ್ರೀಯವಾದಿ ಸಿದ್ಧಾಂತ ಮತ್ತು ವೃತ್ತಿನಿರತ ಸಿದ್ಧಾಂತ. ಕವಲುದಾರಿಯಲ್ಲಿರುವ ಆಧುನಿಕ ಆಫ್ರಿಕನ್‌ ಸಮಾಜದಲ್ಲಿ ಈ ನಾಲ್ಕು ತಾತ್ವಿಕ ಧೋರಣೆಗಳನ್ನು ಕಾಣಬಹುದು. ಸಾಮುದಾಯಿಕ ಸಿದ್ಧಾಂತವಲ್ಲದೆ ಬೇರಾವುದೂ ಋಜುಮಾರ್ಗವನ್ನು ತೋರಿಸದು ಎಂದು ಕೆಲವರು ಹೇಳುತ್ತಾರೆ. ಆದರೆ, ಈ ನಿಲುವನ್ನು ವೃತ್ತಿನಿರತ ಸಿದ್ಧಾಂತವು ಈಗಾಗಲೇ ತಳ್ಳಿ ಹಾಕಿದೆ. ಜತೆಗೆ, ತಾನೇ ಪರ್ಯಾಯವೆಂಬ ದರ್ಪವನ್ನು ಈ ವೃತ್ತಿನಿರತ ಸಿದ್ಧಾಂತವು ತೋರುತ್ತದೆ. ಈ ನಿಲುವನ್ನು ಆ ಸಿದ್ಧಾಂತದ ಎಲ್ಲರೂ ಒಪ್ಪುವುದಿಲ್ಲವಾದರೂ, ಈ ದಾವೆಗೆ ಬಹುಮತವಂತೂ ಇದೆ. ಅಧಿಕೃತ ಆಫ್ರಿಕನ್‌ ಸಿದ್ಧಾಂತವು ವೈಜ್ಞಾನಿಕ ತಳಹದಿಯನ್ನು ಹೊಂದಿರಬೇಕು ಮತ್ತು, ಅಥವ ಲಿಖಿತವಾಗಿರಬೇಕು, ಎಂಬುದು ಕೆಲವರ ನಿಲುವು. ಈ ನಿಲುವೇ ವಿವೇಚನೆಯನ್ನು ಅಂತಹ ಸಿದ್ಧಾಂತದಿಂದ ಹೊರದೂಡುವುದು. ಏಕೆಂದರೆ, ವಿವೇಚನೆ, ಚತುರತೆಗಳು ಲಿಖಿತ ರೂಪದಲ್ಲಿರುವುದಿಲ್ಲ, ‘ವಿಜ್ಞಾನಪೂರ್ವ’ ಸ್ಥಿತಿಯಲ್ಲಿರುವಂಥವು! ಸಿದ್ಧಾಂತಿಗಳಾದ ಪೀಟರ್‌ ಬೊದುನ್‌ರಿನ್‌ ಮತ್ತು ಪಾಲಿನ್‌ ಹಾನ್‌ಟಾನ್‌ಜಿ ಈ ನಿಲುವಿನವರು. ಪ್ರಸ್ತುತ ಲೇಖನದ ವಿಷಯ ‘ಸೈದ್ಧಾಂತಿಕ ವಿವೇಚನೆ’ಯಾಗಿರುವುದರಿಂದ ಈ ಇಬ್ಬರೂ ಪಂಡಿತರ ವಿರುದ್ಧ ವೀರಾವೇಶಕ್ಕಿಳಿಯುವುದಿಲ್ಲ. ಆಫ್ರಿಕನ್‌ ಸಮಾಜದ ಸೈದ್ಧಾಂತಿಕ ವಿವೇಚನೆ ಅಥವ ಚತುರತೆಯ ವಿಷಯ ಹೊರಲೋಕಕ್ಕಿನ್ನೂ ಅಪರಿಚಿತವೇ ಆಗಿದೆ. ಆದಾಗ್ಯೂ, ಸಾಮೂದಾಯಿಕ ಸಿದ್ಧಾಂತಕ್ಕೆ ನಿರ್ಣಾಯಕ ಸ್ಥಾನವನ್ನು ನಿಗದಿಪಡಿಸಲಿರುವುದು ಈ ಏಕಮಾತ್ರ ವಿಷಯವೇ ಆಗಿದೆ. ಉಳಿದ ಎರಡು ಸಿದ್ಧಾಂತಗಳಾದ ವೃತ್ತಿನಿರತ ತತ್ತ್ವಶಾಸ್ತ್ರ ಮತ್ತು ರಾಷ್ಟ್ರೀಯವಾದಿ ಸಿದ್ಧಾಂತಗಳು ತಮ್ಮ ವಿಚಾರ ಮತ್ತು ತಂತ್ರಗಳನ್ನು ಪಶ್ಚಿಮದಿಂದ ಎರವಲು ಪಡೆದಿವೆ ಎಂಬ ಸಂದೇಹವಿರುವುದರಿಂದ ನಿರ್ಣಾಯಕ ಪಾತ್ರವನ್ನು ವಹಿಸಲಾರವು.

ಸಾಮುದಾಯಿಕ ಸಿದ್ಧಾಂತದ ನಂಬಿಕೆಯಂತೆ ಪಾರಂಪರಿಕ ಆಫ್ರಿಕನ್‌ ಸಮಾಜವು ಇವುಗಳಿಂದ ಮುಕ್ತವಾಗಿದೆ: ೧) ಸೈದ್ಧಾಂತಿಕ, ಕಾರ್ಯಕಾರಣ ಸಂವಾದಗಳು ಹಾಗೂ ೨) ವೈಯಕ್ತಿಕ ನೆಲೆಯ ಸೈದ್ದಾಂತಿಕ ಚಟುವಟಿಕೆ. ಈ ಸಮಾಜದಲ್ಲಿ ಸಿದ್ಧಾಂತವನ್ನು ಸಾಮುದಾಯಿಕ ಚಟುವಟಿಕೆ ಎಂದು ಭಾವಿಸಲಾಗುತ್ತದೆ. ಫಲಿತಾಂಶವನ್ನು ವಿಶ್ಲೇಷಣೆಯಲ್ಲದೆ, ಸಿದ್ಧ ನಂಬಿಕೆ ಮತ್ತು ಭಾವುಕತೆಗಳು ನಿರ್ಧರಿಸುತ್ತವೆ. ದಾರ್ಶನಿಕ ವಿವೇಚನೆಯು ಯಾವಾಗಲೂ ವಿರುದ್ಧವಾದುದನ್ನೇ ಋಜುಪಡಿಸುವುದು. ಇದು ಆಫ್ರಿಕನ್‌ ಪರಂಪರೆಯು ತರ್ಕ, ಕಾರ್ಯಕಾರಣ ಅಥವ ವೈಜ್ಞಾನಿಕ ಕಾತರಗಳಿಂದ ನರಳುತ್ತಿಲ್ಲವೆಂಬುದನ್ನೇ ಎತ್ತಿ ತೋರಿಸುವುದು. ಅನೇಕ ದಾರ್ಶನಿಕರು ಈ ಬಗೆಯ ಕಟ್ಟುನಿಟ್ಟು ಮನೋಬಲದ ಕಾಣ್ಕೆಗಳನ್ನು ಬಳಸಿಕೊಳ್ಳುವುದನ್ನು ನಾವು ಕಾಣಬಹುದು. ಹೀಗಾಗಿ, ಅನೇಕ ಸಾಂಪ್ರದಾಯಿಕ ಸಮಾಜಗಳಲ್ಲಿ ಆಚರಣೆಯಲ್ಲಿರುವ ಸಾಮುದಾಯಿಕ ಒಮ್ಮತ ಪದ್ಧತಿಯು ವೈಯಕ್ತಿಕ ವಿಮರ್ಶೆಯನ್ನು ಅಡ್ಡಿಪಡಿಸುತ್ತದೆ ಎಂಬಂತೆ ನೋಡಬಾರದು. ಏಕೆಂದರೆ, ಧರ್ಮ ಮತ್ತು ಎಲ್ಲ ಬಗೆಯ ಸ್ಥಗಿತ ಅಂಧಶ್ರದ್ಧೆಗಳೇನೂ ಪಾಶ್ಚಿಮಾತ್ಯ ತತ್ತ್ವಶಾಸ್ತ್ರಗಳನ್ನು ನಾಶಪಡಿಸಲಿಲ್ಲವಲ್ಲ? ಅಂತೆಯೇ, ಆಫ್ರಿಕಾದ ಲೋಕ ದಾರ್ಶನಿಕತೆ ಮತ್ತು ನಿಷೇಧಕಗಳು ನಿಜವಾದ ತತ್ತ್ವಜಿಜ್ಞಾಸೆಗೆ ಕೊಂಚವಾದರೂ ಅವಕಾಶವನ್ನು ಕಲ್ಪಿಸಿಯೇ ಇವೆ.

ದಾರ್ಶನಿಕ ವಿವೇಚನೆ ಹಾಗೂ ಸಂಸ್ಕೃತಿ ಸಿದ್ಧಾಂತ

ಈ ಕ್ಷೇತ್ರದಲ್ಲಿ ವಿದ್ವಾಂಸರು ನಡೆಸಿದ ಬೇರೆ ಬೇರೆ ಅಧ್ಯಯನಗಳನ್ನು ಆಧರಿಸಿ ಮೇಲಿನೆರಡೂ ಪರಿಕಲ್ಪನೆಗಳನ್ನು ಸ್ಪಷ್ಟಪಡಿಸುವೆ. ದಾರ್ಶನಿಕ ವಿವೇಚನೆಯು ಒಬ್ಬ ವ್ಯಕ್ತಿಯಲ್ಲಿರುವ ಸಂತ ಮತ್ತು ಚಿಂತಕನನ್ನು ಪ್ರತಿನಿಧಿಸುತ್ತದೆ. ಈ ಸಂತತನದ ವ್ಯಕ್ತಿ ದಾರ್ಶನಿಕತೆ ಹಾಗೂ ತನ್ನ ಸಮುದಾಯಗಳ ಪರಂಪರೆಯಲ್ಲಿ ಪರಿಣಿತನಾಗಿದ್ದಾನೆ. ಬಹುಪಾಲು ಆತನ ಜನರೇ ಈ ಮೇಧಾಶಕ್ತಿಯನ್ನು ಗುರುತಿಸಿರುತ್ತಾರೆ. ಹಲವೊಮ್ಮೆ ಗುರುತಿಸದಿರುವ ಸಾಧ್ಯತೆಯೂ ಇರುತ್ತದೆ. ಆತ ದಾರ್ಶನಿಕನಾದ ಮಾತ್ರಕ್ಕೆ ತತ್ತ್ವಜ್ಞಾನಿಯಾಗಬೇಕೆಂದೇನೂ ಇಲ್ಲ. ಕೆಲವೊಮ್ಮೆ ಈ ಸಂತರು ಸರಳ ನೀತಿವಂತರು ಮಾತ್ರವಾಗಿದ್ದು, ಪರಂಪರೆಯೊಂದರ ಕರ್ಮಠ ಅನುಯಾಯಿಯಾಗಿರಬಹುದು. ಉಳಿದವರು ತಮ್ಮ ಸಮುದಾಯಗಳ ಇತಿಹಾಸ, ಆಚರಣೆಗಳ ಉತ್ತಮ ವ್ಯಾಖ್ಯಾನಿಗರೊ, ಕಾವಲುಪಡೆಯೋ ಆಗಿರಬಹುದು.

ಸಂಸ್ಕೃತಿಯೊಂದರ ಸಾಂಪ್ರದಾಯಿಕ ಮತ್ತು ಒಂದು ಐತಿಹಾಸಿಕ ಪ್ರಸಂಗದಲ್ಲಿ ಈ ಸಂತರು ವಿವೇಕಶೀಲರಾಗಿರುತ್ತಾರೆ. ಆದರೆ, ಅಂಥವರು ತಮ್ಮ ಸಂಸ್ಕೃತಿಯನ್ನು ಅರ್ಥೈಸಿಕೊಂಡು, ಅದರೊಳಗಿನ ಅಸಂಗತ ಸಂದಿಗ್ಧಗಳನ್ನು ನೇರ್ಪುಗೊಳಿಸುವ ಇಲ್ಲವೆ ಪರಶಕ್ತಿಗಳಿಂದ ಅದನ್ನು ಸಂರಕ್ಷಿಸುವ ವೈಚಾರಿಕ ಸಾಮರ್ಥ್ಯವನ್ನು ಹೊಂದಿಲ್ಲದವರಾಗಿರಬಹುದು. ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಆ ಸಂಸ್ಕೃತಿಯಲ್ಲಿ ಎಲ್ಲವನ್ನೂ ಬಲ್ಲ ಸಾಮಾನ್ಯರಂತೆಯೇ ಇವರೂ ಕೂಡ. ಒಂದೇ ವ್ಯತ್ಯಾಸವೆಂದರೆ, ಇವರು ಆ ಸಮುದಾಯದ ವಕ್ತಾರರಾಗಿರುವುದು, ಅಷ್ಟೇ. ಕೆಲವು ಸಂತರು ವಿವೇಚನೆಯ ಗಡಿಯನ್ನು ದಾಟಿ ದಾರ್ಶನಿಕತೆಯ ಸ್ತರಕ್ಕೆ ಏರಿರುತ್ತಾರೆ. ಸಂತರಾಗಿರುವುದರಿಂದಲೇ ತಮ್ಮ ಸಮುದಾಯಗಳ ಕಟ್ಟುಕಟ್ಟಳೆ, ದರ್ಶನಗಳಲ್ಲಿ ಪರಿಣಿತಿಯನ್ನು ಪಡೆದವರಾಗಿರುತ್ತಾರೆ. ಆದರೆ, ಚಿಂತಕರಾಗಿ ಅವರು ತಾರ್ಕಿಕ ವಿಮರ್ಶೆ ಮಾಡಬಲ್ಲವರಾಗಿದ್ದಾರೆ. ತಾರ್ಕಿಕತೆಯ ಪರೀಕ್ಷೆಗೊಳಪಟ್ಟು ಯಶ ಪಡೆದ ನಂಬಿಕೆ ಮತ್ತು ದರ್ಶನಗಳನ್ನು ಮಾತ್ರ ಶಿಫಾರಸ್ಸು ಮಾಡುತ್ತಾರೆ.

ಹೀಗಾದಾಗ, ಪ್ರಸ್ತುತ ಆಚರಣೆಯಲ್ಲಿರುವ ಶ್ರದ್ಧೆಯ ಕಟ್ಟಾನುಯಾಯಿಗಳೊಂದಿಗೆ ಸಂಭವನೀಯ ತಿಕ್ಕಾಟವೂ ಉಂಟಾಗುತ್ತದೆ. ಇದ್ದರೂ ಈ ಬಗೆಯ ಸಂತರು ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾರ್ಕಿಕ ವಿಚಾರಗಳನ್ನು ಅವರಿಗೆ ಒಪ್ಪಿಸಬಲ್ಲರು. ಎಲ್ಲರೂ ಒಪ್ಪಿಕೊಳ್ಳಬಲ್ಲಂಥ ಅಭಿಪ್ರಾಯ ರೂಪಿಸಬಲ್ಲರು ಮತ್ತು ಹೊಸ ಆಚರಣೆಗಳನ್ನು ಅನುಷ್ಠಾನಗೊಳಿಸಬಲ್ಲರು. ಈ ರೀತಿಯ ಚಲಾಚಲ ಸಂತರು ಸಾಮುದಾಯಿಕ ದರ್ಶನವನ್ನು ಉತ್ಕೃಷ್ಟಗೊಳಿಸಬಲ್ಲರು. ಸಮುದಾಯಗಳು ಈ ಸಂತರ ಗುಣವಿಶೇಷಣವನ್ನು ಗುರುತಿಸಿದರೆ ಅವರು ಭಾಗ್ಯವಂತರು. ಆಗ ಅವರಿಗೊಂದು ವಿಶಿಷ್ಟ ಸ್ಥಾನವೊದಗಿ, ಅವರ ಸಲಹೆಗಳನ್ನು ಸಮುದಾಯಗಳೊಪ್ಪಿ ಸಕಾರಾತ್ಮಕ ಸುಧಾರಣೆಗಳಿಗೆ ತೆರೆದುಕೊಳ್ಳುತ್ತವೆ. ಒಂದೊಮ್ಮೆ ಜನ ಅವರ ಕಾಣ್ಕೆಯನ್ನು ಗುರುತಿಸದಿದ್ದ ಸನ್ನಿವೇಶದಲ್ಲಿ, ಸಂತರು ಮೌನ ವಹಿಸಿ, ತಮ್ಮ ಪಾಡಿಗೆ ತಾವಿರುವುದು ಉತ್ತಮವೆಂದು ಸಮುದಾಯಗಳು ಅವರಿಗೆ ಸೂಚಿಸಬಹುದು. ಸಮುದಾಯದಿಂದ ಮಾನ್ಯತೆ ಪಡೆಯದ ಸಂತನಾಗಿ ಸಾಕ್ರೆಟಿಸ್‌ ಒಳ್ಳೆಯ ಉದಾಹರಣೆಯಾಗಬಹುದು. ಆತ ಮೌನವಾಗಿ ಉಳಿಯದಿದ್ದುದರಿಂದ ನಿರೀಕ್ಷಿತ ಭಯಾನಕ ಅಂತ್ಯವನ್ನು ಕಾಣಬೇಕಾಯಿತು.

ಕಲ್ಪಿತ ಕಥನಗಳೇ ಸಂಸ್ಕೃತಿಯ ಒಡಲಾಳ

ಇದು ದಾರ್ಶನಿಕ ವಿವೇಚನೆಯಾಯಿತು. ಈಗ ಸಂಸ್ಕೃತಿ ಸಿದ್ಧಾಂತವನ್ನು ಗಮನಿಸೋಣ. ಪ್ರತಿ ಸಂಸ್ಕೃತಿಯ ಅಂತರಂಗದಲ್ಲೂ ತನ್ನದೇ ಆದ ಸಮರ್ಥನೀಯ ವಿಚಾರ, ನಂಬಿಕೆಗಳಿರುತ್ತವೆ. ಸರಳಗೊಳಿಸಲು ಇವನ್ನು ಕಲ್ಪಿತ ಕಥನಗಳೆಂದು ಕರೆಯೋಣ. ಒಂದು ಸಂಸ್ಕೃತಿಯನ್ನು ಅರಿತುಕೊಳ್ಳಲು ಅದರ ಕಲ್ಪಿತಕಥೆಗಳನ್ನು ಅರ್ಥ ಮಾಡಿಕೊಳ್ಳುವುದೂ ಮುಖ್ಯ. ವಿಶಾಲ ನೆಲೆಯಲ್ಲಿ ಈ ಕಲ್ಪಿತ ಕಥನಗಳೇ ಒಂದು ಸಮುದಾಯದ ತಾತ್ತ್ವಿಕತೆಯನ್ನು ರೂಪಿಸುತ್ತದೆಂದು ಹೇಳಬಹುದು. ಸಂಸ್ಕೃತಿಯ ಒಡಲಾಳದಲ್ಲಿರುವ ಈ ಕಥನಗಳ ಸತ್ವವೇ ಆ ಸಮುದಾಯದ ತಾತ್ವಿಕತೆಯಾಗಿರುತ್ತದೆ. ಈ ಕ್ಷಣದ ಮತ್ತು ಅಂತಿಮವಾಗಿ ಹೊಮ್ಮುವ ಸಮರ್ಥನೆಯನ್ನು ಒದಗಿಸುತ್ತಿರುತ್ತದೆ. ಸಂತರು ಮತ್ತು ವಿವೇಕಶಾಲಿಗಳು ತಮ್ಮ ಸಂಸ್ಕೃತಿಯ ಕಲ್ಪಿತ ಕಥನಗಳಲ್ಲಿ ಪರಿಣಿತರಾಗಿರಬೇಕು. ಇದರ ನಿರ್ದಿಷ್ಟತೆಯನ್ನು ಗಮನಿಸಲು ಅದನ್ನು ‘ಸಂಸ್ಕೃತಿ ಸಿದ್ಧಾಂತ’ವೆಂದು ಕರೆಯೋಣ. ದಾರ್ಶನಿಕರಂತೂ ಇದರಲ್ಲಿ ಪರಿಣಿತಿಯನ್ನು ಸಾಧಿಸಿರಲೇಬೇಕು. ಇದ್ದರೂ, ಒಂದು ಮುಕ್ತವೂ, ತಿಳಿವಳಿಕೆ ಉಳ್ಳದ್ದೂ ಆದ ಸಮುದಾಯದಲ್ಲಿ ಪ್ರತಿ ವಿವೇಕಶಾಲಿಯೂ ಈ ಸಂಸ್ಕೃತಿ ಸಿದ್ಧಾಂತ ಕುರಿತು ಅರಿವುಳ್ಳವನಾಗಿರುತ್ತಾನೆ.

ಒಂದು ಸಂಸ್ಕೃತಿಯೊಳಗಿನ ನಂಬಿಕೆ ಅಥವ ಸತ್ಯ ಕಾರಣಿಕೆಗಳನ್ನು ಸಾಮಾನ್ಯವಾಗಿ ‘ಪರಿಪೂರ್ಣ’ವೆಂದು ಭಾವಿಸಲಾಗುತ್ತದೆ. ಸಂಸ್ಕೃತಿಗೆ ಹೊರತಾದುದನ್ನು ಇಲ್ಲವೇ ವಿರುದ್ಧವಾದುದನ್ನು ಅಸಡ್ಡೆ ಅಥವ ದ್ವೇಷಭಾವದಿಂದ ನೋಡಲಾಗುತ್ತದೆ. ಆ ಸಂಸ್ಕೃತಿಗೆ ಸೇರಿದ ಸಂತರೋ ಅಥವ ವಿವೇಕಿಗಳೋ ತಮ್ಮ ಸಿದ್ಧಾಂತವನ್ನು ಮತ್ತು ಸಾಮಾಜಿಕ ರಚನೆಯನ್ನು, ರಾಜಕೀಯ ನಿಲುವುಗಳಲ್ಲಿ ಸಮರ್ಥಿಸಿಕೊಳ್ಳುವ ಮೂಢರಂತೆಯೇ ಅತ್ಯುತ್ಸಾಹದಲ್ಲಿ ತಮ್ಮ ಸಂಸ್ಕೃತಿಯನ್ನು ಸಮರ್ಥಿಸಿಕೊಳ್ಳಲಾರಂಭಿಸುತ್ತಾರೆ. ದಾರ್ಶನಿಕ ವಿವೇಚನೆಯು ಸಂಸ್ಕೃತಿ ಸಿದ್ಧಾಂತದ ವಿಮರ್ಶಾತ್ಮಕ ಮರುಪರಿಶೀಲನೆಯಾಗಿದೆ. ದಾರ್ಶನಿಕ ವಿವೇಕವುಳ್ಳ ವಿರಳ ಗ್ಯಾನಿಗಳು ಮಾತ್ರ ತಮ್ಮ ಸಂಸ್ಕೃತಿಯೊಳಡಗಿದ ನಂಬಿಕೆಗಳನ್ನು ವಿಮರ್ಶಾತ್ಮಕ ವ್ಯಾಖ್ಯಾನಕ್ಕೆ ಒಳಪಡಿಸುತ್ತಾರೆ. ಈ ವಿರಳ ಸಂತರು ಸಾಮುದಾಯಿಕವಾಗಿ ಒಪ್ಪಿತವಾದ ಸಂಭ್ರಮಿತ ನಂಬಿಕೆ ಮತ್ತು ವಿವರಣೆಗಳನ್ನು ನೆಚ್ಚದೆ ವ್ಯವಸ್ಥೆಯೊಳಗೆ ಒಂದು ಆಂತರಿಕ ವಿಧಾನವನ್ನು; ಕಟ್ಟಳೆಯೊಳಗೊಂದು ಕಟ್ಟಳೆಯನ್ನು ರೂಪಿಸುತ್ತಾರೆ.

ಈ ವ್ಯವಸ್ಥೆಯ ಮೊದಲ ಕಟ್ಟಳೆಯೇ ಸಂಸ್ಕೃತಿ ಸಿದ್ಧಾಂತವಾಗಿದೆ. ದಾರ್ಶನಿಕತೆಯಿಲ್ಲದ ಸಾಮಾನ್ಯ ಸಂತರು ವ್ಯವಸ್ಥೆಯೊಂದನ್ನು ನಿರ್ವಹಿಸುವಲ್ಲಿ, ವಿಶ್ಲೇಷಿಸುವಲ್ಲಿ ಪರಿಣಿತರು. ವ್ಯವಸ್ಥೆಯ ವಿವಿಧ ಸ್ವರೂಪಗಳಲ್ಲಿ ವಿಶಿಷ್ಟ ಪಾಂಡಿತ್ಯವನ್ನೇ ಅವರು ಸಾಧಿಸಿರಬಹುದು. ಕೆಲವರು ಕವಿ, ವೈದ್ಯ, ಮೂಲಿಕೆ ಪಂಡಿತ, ಸಂಗೀತಗಾರ, ಕಾಲಜ್ಞಾನಿ ಇತ್ಯಾದಿಯಾಗಿರಬಹುದು. ಇದ್ದರೂ ಸಂಸ್ಕೃತಿಯಲ್ಲಿ ಈಗಾಗಲೇ ಇರುವ ಕಟ್ಟುಕಟ್ಟಳೆಗಳಾಚೆ ಅವರು ಯೋಚಿಸಲಾರರು.

ಆದರದೆ, ದಾರ್ಶನಿಕ ವಿವೇಚನೆಯು ಇದಕ್ಕೆ ವ್ಯತಿರಿಕ್ತವಾಗಿರುತ್ತದೆ. ಸಾಮಾನ್ಯ ಸಂತತನವು ಸಾಮುದಾಯಿಕ ಸ್ವೀಕೃತಿಗಳನ್ನು ವಿಜೃಂಭಿಸುತ್ತದೆ. ದಾರ್ಶನಿಕತೆಯು ಸಾಮುದಾಯಿಕ ಕಾಣ್ಕೆಗಳ ಕುರಿತು ಸಂದೇಹವನ್ನಿಟ್ಟುಕೊಂಡಿರುತ್ತದೆ. ತರ್ಕ-ಕಾರ್ಯಕಾರಣಗಳ ಮೂಲಕ ಅದನ್ನು ನಿಕಷಕ್ಕೆ ಒಡ್ಡುತ್ತದೆ. ಸಾಮಾನ್ಯ ಸಂತತನವು ಪರಿಪೂರ್ಣತೆಯತ್ತ, ಜಿಗುಟು ಸೈದ್ಧಾಂತಿಕತೆಯತ್ತ ತೂಗಿದರೆ, ದಾರ್ಶನಿಕ ವಿವೇಚನೆಯು ತೆರೆದ ಮನ, ಸಕಾರಣವನ್ನು ಹೊಂದಿರುತ್ತದೆ. ಅದು ಒದಗಿಸುವ ಸತ್ಯಗಳು-ದೇವರು ನೀಡಿದ ವರ-ಸಂದೇಶಗಳಂತಿರದೆ, ಖಚಿತ ಚಿಂತನೆಯಿಂದ ಹೊಮ್ಮಿದ ತಾತ್ಕಾಲಿಕವೂ, ತಾರ್ಕಿಕವೂ ಆದ ಸತ್ಯವಾಗಿರುತ್ತವೆ. [. . .]

ಬರಹ ಮತ್ತು ಮೌಖಿಕ ಪರಂಪರೆ

ಬರವಣಿಗೆಯ ಅಭ್ಯಾಸವು ನಮ್ಮಲ್ಲಿ ಬಹಳಷ್ಟು ಜನರನ್ನು ತಮ್ಮ ನೆನಪುಗಳಿಂದ ದೂರ ದೂರ ಸರಿಸುತ್ತಿದೆ. ಬರವಣಿಗೆ ರೂಢಿ ಹೆಚ್ಚತೊಡಗಿದಂತೆಲ್ಲ ಜನ, ಬರಹದಲ್ಲಿ ಮೂಡಿಸದಿದ್ದರೆ ಯಾವುದೂ ಸ್ಮರಣೀಯವಾಗುವುದಿಲ್ಲ, ಎಂಬ ಅಂಚಿನ ನಿಲುವಿಗೆ ತಲುಪುತ್ತಿದ್ದಾರೆ. ಹಿಂದೆ ನಾನೊಬ್ಬ ವ್ಯಕ್ತಿಯನ್ನು ಭೇಟಿಯಾಗಿದ್ದೆ. ತನ್ನ ಮಕ್ಕಳ ದೂರವಾಣಿ ಸಂಖ್ಯೆ ನೀಡುವಂತೆ ನನ್ನಲ್ಲಿ ಅವರು ಕೇಳಿಕೊಂಡರು. ಅದನ್ನು ಬರೆದುಕೊಳ್ಳಲು ನಿರಾಕರಿಸಿದರು. ಬರವಣಿಗೆಯನ್ನು ಅವಲಂಬಿಸದ ಸಮುದಾಯಗಳು ತಮ್ಮ ನೆನಪಿನ ಶಕ್ತಿಯನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳುತ್ತಾರೆ. ಅನೇಕ ರೀತಿಯ ಸಂಜ್ಞೆಗಳನ್ನು ಬಳಸುವ ಮೂಲಕ ಅವರು ತಮ್ಮ ನೆನಪನ್ನು ವೃದ್ಧಿಸಿಕೊಳ್ಳುತ್ತಿರುತ್ತಾರೆ. ನನ್ನದೇ ಸಮುದಾಯದಲ್ಲಿ, ಅಕ್ಷರಸ್ಥರಲ್ಲದವರು ಪುಸ್ತಕಗಳಷ್ಟೇ ಸ್ಫಟಿಕವಾಗಿ ತಮ್ಮ ನೆನಪುಗಳನ್ನು ಕಾಪಿಟ್ಟುಕೊಂಡವರನ್ನು ನಾನು ಬಲ್ಲೆ. ಪೂರ್ವಿಕರ ಲೋಕದಲ್ಲಿರುವ ನನ್ನ ತಂದೆ ಒರುಕ ರಂಗೀನ್ಯ (1900-1979) ಅವರು ನೂರು ವರ್ಷಗಳ ಹಿಂದಿನ ತಮ್ಮ ವಂಶದ ಎಲ್ಲರ ಹೆಸರುಗಳನ್ನೂ ಹೇಳಬಲ್ಲವರಾಗಿದ್ದರು. ಪ್ರತಿ ತಲೆಮಾರಿನಲ್ಲಿಯೂ ಕೆಲವು ವಿಶೇಷ ಗುರಿಕಾರರ ಸಮರ ಸಾಹಸಗಳನ್ನು ವಿವರಿಸ ಬಲ್ಲವರಾಗಿದ್ದರು. ಇಷ್ಟೊಂದು ನಿಖರವಾದ, ಅತ್ತ್ಯುತ್ತಮವಾದ ನೆನಪಿನ ಶಕ್ತಿಯನ್ನು ಹೇಗೆ ರೂಢಿಸಿಕೊಂಡಿರಿ? ಎಂದು ಕೇಳಿದರೆ, ತಮ್ಮ ಪೂರ್ವಿಕರಿಂದ ಎಂದವರು ಹೇಳುತ್ತಿದ್ದರು. ತನ್ನ ಸ್ಮೃತಿಯಲ್ಲಿರುವ ಎಲ್ಲ ಸಂಗ್ರಹಿತ ಮಾಹಿತಿಯೂ ಅವರ ವರದಾನ, ಎಂದೂ ಸೇರಿಸುತ್ತಿದ್ದರು.

ಇಲ್ಲಿನ ವಿಷಯ ನನ್ನ ತಂದೆ ಹೇಳುತ್ತಿದ್ದ ವಂಶವಾಹಿನಿ ನಿಖರವಾಗಿತ್ತೊ ಅಥವ ಅಸಮರ್ಪಕವಾಗಿತ್ತೊ ಎಂಬುದಲ್ಲ. ಅವೆಲ್ಲವೂ ತಪ್ಪೇ ಇದ್ದಿರಬಹುದು. ಮುಖ್ಯವಾದ ಅಂಶವೆಂದರೆ ಅದು ಸಾತತ್ಯವನ್ನು ಸಾಧಿಸಿತ್ತು ಎಂಬುದು. ಇನ್ನೂ ನಿಜವಾದ ವಿಷಯವೆಂದರೆ, ನಮ್ಮ ಪೂರ್ವಿಕರು ತಮ್ಮ ವಂಶವಾಹಿನಿ, ಕಲ್ಪಿತಕಥನಗಳನ್ನು ತಲೆಮಾರಿನಿಂದ ತಲೆಮಾರಿಗೆ ಸಾಗಿಸುವ ವಿಧಾನವನ್ನು ಬಲ್ಲವರಾಗಿದ್ದರು ಎಂಬುದು.

ಆಫ್ರಿಕಾ ಖಂಡ ಬರವಣಿಗೆಗೆ ತೆರೆದುಕೊಂಡಿದ್ದೇ ತಡವಾಗಿಯಾದ್ದರಿಂದ ಅಲ್ಲಿ ತತ್ತ್ವಶಾಸ್ತ್ರದ ಚಟುವಟಿಕೆ ಆರಂಭವಾದುದು ವಿಳಂಬವಾಗಿ ಎನ್ನುವುದು ನಮ್ಮ ಮಿತಿಯನ್ನೇ ತೋರಿಸುವುದು. ಅಂಥ ಚಟುವಟಿಕೆಗಳು ನಡೆದಿದ್ದವು ಎಂದು ಸಾದ್ಯಂತ ತೋರಿಸಬಹುದು. ಒಂದೊಮ್ಮೆ, ಆಧುನಿಕ ಆಫ್ರಿಕನ್‌ ತತ್ತ್ವಶಾಸ್ತ್ರದ ಬೆಳವಣಿಗೆಯಲ್ಲಿ ಸಾಂಪ್ರದಾಯಿಕ ಆಫ್ರಿಕನ್ ಸಮಾಜವು ಯಾವುದೇ ಸಕಾರಾತ್ಮಕ ಕೊಡುಗೆಯನ್ನು ನೀಡಲಾರದು ಎಂಬ ವಾದವನ್ನು ಒಪ್ಪಿದೆವು ಅಂದುಕೊಳ್ಳಿ. ಆಗ, ಸದ್ಯದ ಆಫ್ರಿಕನ್‌ ಸಿದ್ಧಾಂತಿಗಳು ಸಾಂಪ್ರದಾಯಿಕ ಆಫ್ರಿಕನ್‌ ಸಮಾಜದೊಂದಿಗೆ ಸಹಜ ಇಲ್ಲವೇ ಸಾಂಸ್ಕೃತಿಕ ಬಾಂಧವ್ಯವನ್ನು ಹೊಂದಿದ್ದರೆ, ಅದು ಅವರ ತಾತ್ವಿಕ ಸಾಮರ್ಥ್ಯದ ಗಂಭೀರ ಮಿತಿಗೆ ಸಮನಾಗಿರುತ್ತದೆ ಎಂದು ಒಪ್ಪಬೇಕಾಗುತ್ತದೆ.

ಇಂಥ ವಾದದ ತಾರ್ಕಿಕ ನಿರ್ಣಯವು ಆಫ್ರಿಕನ್ನರು ತತ್ತ್ವಶಾಸ್ತ್ರಜ್ಞರಾಗಬೇಕೆಂದರೆ ಸಾಂಪ್ರದಾಯಿಕ ಆಫ್ರಿಕಾವನ್ನು ತಿರಸ್ಕರಿಸಬೇಕು. ಅವರು ತಮ್ಮ ಸೈದ್ಧಾಂತಿಕ ಸಾಮರ್ಥ್ಯ ಮತ್ತು ತಿಳಿವಳಿಕೆಯನ್ನು ಬೆಳೆಸಿಕೊಳ್ಳಲು ಸಾಂಪ್ರದಾಯಿಕ ಆಫ್ರಿಕಾದಲ್ಲಿ ಅಭಿವೃದ್ಧಿಪಡಿಸಿದ ಭಾಷೆ ಮತ್ತು ಆಲೋಚನೆಗಳಿಂದ ಪ್ರಭಾವಿತರಾಗಬಾರದು ಅಥವಾ ಮಾರ್ಗದರ್ಶನ ನೀಡಬಾರದು, ಎಂಬುದಾಗಿದೆ!

ಇದೊಂದು ಅಸಂಗತವಾದ ಪ್ರಸ್ತಾವನೆ. ಹಾಗೆ ಮಾತನಾಡುವವರು ಎರಡೆರಡು ಸಲ ಯೋಚಿಸಬೇಕು.

(ಸೆಗಾಸಿಟಿ ಇನ್‌ ಆಫ್ರಿಕನ್‌ ಫಿಲಾಸಫಿ ಲೇಖನದ ಸಾರಸಂಗ್ರಹ)

ಈ ಹಿಂದಿನ ಬರಹಗಳು

ಬಹುತ್ವದ ಅರ್ಥ-ಸುಳ್ಳು ಮತ್ತು ಸತ್ಯ

ಗ್ರೀಕ್ ಮತ್ತು ಅರಬ್ ಸಾಹಿತ್ಯದ ಮಧ್ಯೆ ಕಂದಕ ಏಕೆ?: ಒಂದು ವಿಶ್ಲೇಷಣೆ

MORE FEATURES

ಅನುಪಮಾ ಅವರ ಶೈಲಿ ಹೆಚ್ಚು ಅಬ್ಬರವಿಲ್ಲದೆ ಮನಸ್ಸನ್ನು ಆರ್ದ್ರ ಗೊಳಿಸುತ್ತದೆ

06-05-2024 ಬೆಂಗಳೂರು

'ಅನುಪಮಾ ಅವರ ಶೈಲಿ ಹೆಚ್ಚು ಅಬ್ಬರವಿಲ್ಲದೆ, ಆಡಂಬರವಿಲ್ಲದೆ, ಶಾಸ್ತ್ರೀಯ ಚೌಕಟ್ಟುಗಳಲ್ಲಿ, ಹೊರೆ ಎನಿಸದ ಭಾವ ತೀವ್...

ಪುಸ್ತಕ ಬರೆಯುವುದಕ್ಕಿಂತ ಅದಕ್ಕೆ ಹೆಸರಿಡುವುದೇ ಕಷ್ಟದ ಕೆಲಸ

06-05-2024 ಬೆಂಗಳೂರು

'ಈ ಸಂಕಲನವನ್ನು 'ಬಿದಿರ ತಡಿಕೆ' ಎಂಬ ಹೆಸರಿನಿಂದ ಕರೆದಿರುವೆ. 'ಬಿದಿರು' ನಮ್ಮ ಕವಿಗಳಿಗೆ ಒಂದು...

ಅಂಬೇಡ್ಕರ್ ಕುರಿತು ಹೊಸ ಒಳನೋಟಗಳನ್ನು ನೀಡುವ ಕೃತಿ ‘ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ದಿನಚರಿ’

06-05-2024 ಬೆಂಗಳೂರು

‘ಅಂಬೇಡ್ಕರ್ ಅವರಂತಹ ಮೇರು ವ್ಯಕ್ತಿತ್ವವನ್ನು ಒಬ್ಬರಿಂದ ಸಂಪೂರ್ಣವಾಗಿ ಅಕ್ಷರಗಳಲ್ಲಿ ಹಿಡಿಯಲು ಸಾಧ್ಯವಾಗುವುದಿಲ...