ಹರ್ಷಕುಮಾರ್‌ ಕುಗ್ವೆ ಪ್ರತಿಕ್ರಿಯೆ: ಜಾತಿ ಪದ್ಧತಿಯ ಮೈಮನಗಳು


ಇತಿಹಾಸಕಾರ-ಸಂಶೋಧಕ ಮನು ವಿ. ದೇವದೇವನ್‌ ಅವರು ಬುಕ್‌ಬ್ರಹ್ಮದಲ್ಲಿ ಬರೆಯುತ್ತಿರುವ ’ಜಾತಿ ಪದ್ಧತಿಯ ಮೈಮನಗಳು’ ಸರಣಿಯು ಚರ್ಚೆಗೆ ಗ್ರಾಸ ಒದಗಿಸಿದೆ. ಈ ಹಿನ್ನೆಲೆಯಲ್ಲಿ ಬರುವ ಪ್ರತಿಕ್ರಿಯೆಗಳನ್ನು ಇಲ್ಲಿ ಪ್ರಕಟಿಸಲಾಗುತ್ತದೆ. ಪ್ರಜಾಸತ್ತಾತ್ಮಕ ನೆಲೆಯಲ್ಲಿ ಗಂಭೀರ ಚರ್ಚೆ-ಸಂವಾದ, ಮಾತುಕತೆಗೆ ಅನುವು ಮಾಡುವ ಬರಹಗಳನ್ನು ಪ್ರಕಟಿಸಲಾಗುತ್ತದೆ. ಈ ಸರಣಿಯಲ್ಲಿ ಯುವ ಸಂಶೋಧಕ-ಲೇಖಕ ಹರ್ಷಕುಮಾರ ಕುಗ್ವೆ ಅವರು ಬರೆದ ಪ್ರತಿಕ್ರಿಯೆ ಇಲ್ಲಿದೆ. ಈ ಸಂವಾದಕ್ಕೆ ಸಂಬಂಧಿಸಿದಂತೆ ಬರುವ ಪ್ರತಿಕ್ರಿಯೆಗಳನ್ನು ಪ್ರಕಟಿಸಲಾಗುತ್ತದೆ.

ಇತಿಹಾಸ ಸಂಶೋಧಕರಾದ ಮನು ವಿ ದೇವದೇವನ್ ಅವರು ಬರೆಯುತ್ತಿರುವ “ಜಾತಿ ಪದ್ಧತಿಯ ಮೈಮನಗಳು” ಎಂಬ ಅಂಕಣವು ಬುಕ್ ಬ್ರಹ್ಮ ಜಾಲತಾಣದಲ್ಲಿ ಪ್ರಕಟವಾಗುತ್ತಿದೆ. ಇದರ ಆರಂಭಿಕ ಪೀಠಿಕೆ ರೂಪದ ಲೇಖನಕ್ಕೆ ನಾವು ಹಲವು ಗೆಳೆಯರು ದಿಢೀರ್ ಪ್ರತಿಕ್ರಿಯೆಗಳನ್ನು ನೀಡತೊಡಗಿದ್ದೇವೆ. ಈ ಸಂದರ್ಭದಲ್ಲಿ ನನ್ನವೂ ಒಂದೆರಡು ಮಾತುಗಳನ್ನು ಸೇರಿಸಲು ಈ ಟಿಪ್ಪಣಿ. 
ಜಾತಿ ವ್ಯವಸ್ಥೆ’ ಎಂಬ ಬಹುಚರ್ಚಿತ ಜಟಿಲ ವಿಷಯದ ಕುರಿತು ಯಾರೇ ಅಂಕಣ ಬರೆಯುತ್ತೇನೆ ಎಂದು ಹೊರಟರೂ ಅದು ಒಂದು ಸವಾಲಿನ ಕೆಲಸವೇ ಸರಿ. ಹೀಗಾಗಿ ಮೊದಲನೆಯದಾಗಿ ಇಂತಹ ಒಂದು ಬೌದ್ಧಿಕ ಪ್ರಯತ್ನವನ್ನು ನಾವು ಯಾವುದೇ ಪೂರ್ವಾಗ್ರಹ ಇಟ್ಟುಕೊಳ್ಳದೆಯೇ ಸ್ವಾಗತಿಸಬೇಕು. ಇದು ಮೊದಲ ಅಂಶ.

ನೆನಪಿಸಿಕೊಳ್ಳಿ, ಕೆಲವು ವರ್ಷಗಳ ಹಿಂದೆ ಜಾತಿ ಕುರಿತ ಚರ್ಚೆಯೊಂದ ಕನ್ನಡ ಬೌದ್ಧಿಕ ವಲಯದಲ್ಲಿ ನಡೆದಿತ್ತು. ಇದಕ್ಕೆ ಕಾರಣವಾಗಿದ್ದು ಬೆಲ್ಜಿಯಂನ ಗೆಂಟ್ ಯೂನಿವರ್ಟಿಸಿ ಪ್ರೊಫೆಸರ್ ಬಾಲಗಂಗಾಧರ ಎಂಬುವವರ ಶಿಷ್ಯ ಡಂಕಿನ್ ಜಳಕಿ ಎಂಬುವವರು ಪ್ರಜಾವಾಣಿಯಲ್ಲಿ ಬರೆದಿದ್ದ ಲೇಖನ. ಇದಕ್ಕೆ ನಾಡಿನ ಹಲವು ಚಿಂತಕರು, ಗಣ್ಯರು ಪ್ರತಿಕ್ರಿಯಿಸಿದ್ದರು. ಆದರೆ ಆಗ ನಡೆದಿದ್ದ ಚರ್ಚೆಯ ಕುರಿತು ನನ್ನ ಪ್ರಾಮಾಣಿಕ ಅನಿಸಿಕೆ ಏನೆಂದರೆ, ಬಾಲು ಸ್ಕೂಲ್ ಆಫ್ ಥಾಟ್ ನವರು ‘ಜಾತಿ ವ್ಯವಸ್ಥೆ’ ಕುರಿತು ಎತ್ತಿದ್ದ ಪ್ರಶ್ನೆಗೆ ಬಂದ ಪ್ರತಿಕ್ರಿಯೆಗಳಲ್ಲಿ ಹೆಚ್ಚಿನವು ಆವೇಶಭರಿತವಾಗಿ ಮತ್ತು ಭಾವುಕವಾಗಿದ್ದವೇ ವಿನಃ ಬೌದ್ಧಿಕವಾಗಿರಲಿಲ್ಲ. ಬಾಲಗಂಗಾಧರನ ಶಿಷ್ಯರು ಕುವೆಂಪು ಯೂನಿವರ್ಸಿಟಿಯಲ್ಲಿ ಸಿಎಸ್ಎಲ್ಸಿ ಎಂಬ ಸ್ಥಳೀಯ ಸಂಸ್ಕೃತಿಗಳ ಕುರಿತ ಅಧ್ಯಯನಕ್ಕೆ ಸ್ಥಾಪಿಸಲಾಗಿದ್ದ ಸಂಸ್ಥೆಯನ್ನು ಅನಾಮತ್ತಾಗಿ ಹೈಜಾಕ್ ಮಾಡಿಕೊಂಡು ಕೊನೆಗೆ ತಮ್ಮ ಐಡಿಯಾಲಜಿಯ ಪ್ರಸಾರಕ್ಕೆ ಅದನ್ನು ಆಡೊಂಬಲ ಮಾಡಿಕೊಂಡಿದ್ದು, ಆ ಕುರಿತು ನಮ್ಮಲ್ಲಿನ ಕೆಲವರಿಗೆ ಕೋಪವಿದ್ದ ಹಿನ್ನೆಲೆಯೂ ಇತ್ತು. ಇದು ಬೇರೆಯ ವಿಷಯ. ಕೊನೆಗೆ ಅವರ ಅನಾಚಾರಗಳ ಕುರಿತು ಆಂತರಿಕ ತನಿಖೆಯಾಗಿ ಅದರ ವರದಿಯ ಆಧಾರದಲ್ಲಿ ಸರ್ಕಾರ ಅದನ್ನು ರದ್ದು ಮಾಡಿದಾಗ ಇವರೇ ದೊಡ್ಡದಾಗಿ ಬೊಬ್ಬೆ ಹೊಡೆದು ಅಯ್ಯಯ್ಯೋ ಸಿಎಸ್ಸೆಲ್ಸಿ, ಅಯ್ಯಯ್ಯೋ ಪ್ರಗತಿಪರರು, ಅಯ್ಯಯ್ಯೋ, ಡೆಮಕ್ರಸಿ ಎಂದೆಲ್ಲಾ ಹಲುಬುವ ನಾಟಕವಾಡಿದ್ದು ಒಂದು ಕಾಮಿಡಿ ಎಪಿಸೋಡ್.. ಆದರೆ ‘ಜಾತಿವ್ಯವಸ್ಥೆ ಮತ್ತು ವಚನ ಚಳವಳಿ ಕುರಿತು ಎತ್ತಿದ ಪ್ರಶ್ನೆಗೆ ಅಷ್ಟೇ ಬೌದ್ಧಿಕವಾಗಿ ಉತ್ತರ ನೀಡಬೇಕಾಗಿದ್ದು ನಮ್ಮ ಕರ್ತವ್ಯವಾಗಿತ್ತು. ‘ವಚನಗಳಲ್ಲಿ ಜಾತಿ ಎಂಬ ಪದ ಎಷ್ಟು ಸಲ ಉಲ್ಲೇಖವಾಗಿದೆ?” ಎಂಬಂತಹ ಅಸಂಬದ್ಧ ಪ್ರಶ್ನೆಗಳನ್ನು ಕೇಳಿ, ವಿಕೃತ ವಿತಂಡವಾದಗಳನ್ನು ಈ ಜಳಕಿ ತರದವರು ಮುಂದಿಟ್ಟಿದ್ದರಾದರೂ ಅದಕ್ಕೆ ಆವೇಶದ ಮಾತುಗಳು ಉತ್ತರವಾಗುವುದಿಲ್ಲ. ಪ್ರೊ.ರಾಜೇಂದ್ರ ಚೆನ್ನಿ, ಚಂದ್ರಶೇಖರ್ ಕಂಬಾರ, ಮನು ವಿ ದೇವದೇವನ್  ಮತ್ತಿತರರು ಆ ಸಂದರ್ಭದಲ್ಲಿ ಬರೆದಿದ್ದ ಲೇಖನಗಳು ಇಡೀ ಚರ್ಚೆಯ ತೂಕ ಹೆಚ್ಚಿಸಿದ್ದವು ಎಂದುಕೊಳ್ಳುವೆ.

ಈಗ “ಜಾತಿಯ ವಿಷಯ”ದಲ್ಲಿ ಒಂದು ಚರ್ಚೆಯನ್ನು ಹುಟ್ಟು ಹಾಕುವ ಪ್ರಯತ್ನ ಮಾಡುತ್ತಿರುವುದು ನಮ್ಮಲ್ಲಿನ ಅನೇಕರಿಗೆ ತಮ್ಮ ಬರೆಹಗಳ ಮೂಲಕ ಪರಿಚಿತವಾಗಿರುವ ಮನು ವಿ ದೇವದೇವನ್ ಅವರು. ನನಗೆ ತಿಳಿದ ಮಟ್ಟಿಗೆ ಮನು ವಿ ದೇವದೇವನ್ ಅವರು ಒಬ್ಬ ಉತ್ತಮ ಸಂಶೋಧಕರು, ಇತಿಹಾಸದ ವಿದ್ವಾಂಸರು. ‘ಈ ಹಿಂದೆ ಅವರು ಕರ್ನಾಟಕದ ಇತಿಹಾಸದ ಕುರಿತು ಒಂದು ಒಳ್ಳೆಯ ಕೃತಿಯನ್ನು ಸಹ ಪ್ರಕಟಿಸಿದ್ದರು ಎಂಬುದನ್ನು ನೆನಪಿಸಿಕೊಳ್ಳೋಣ.

ಅವರು ಬರೆದಿರುವ ಮೊದಲ ಪೀಠಿಕೆಯಲ್ಲಿ ನಮ್ಮ ಅಸಮಧಾನಕ್ಕೆ ಕಾರಣವೆನಿಸುವ ಕೆಲ ವಿಷಯಗಳೂ ಇಲ್ಲವೆಂದಲ್ಲ. ಬ್ರಾಹ್ಮಣರ ಬಗ್ಗೆ, ಬ್ರಾಹ್ಮಣಿಕೆಯ ಬಗ್ಗೆ, ಮನುಸ್ಮೃತಿ ಬಗ್ಗೆ ಅವರು ಏನೋ ಹೇಳಿ ಸಮರ್ಥಿಸಿಕೊಳ್ಳಲು ಹೊರಟಿದ್ದಾರೆ ಎಂಬ ಗುಮಾನಿಯೂ ಕೆಲವರಿಗೆ ಬಂದಿರಬಹುದು. ಆದರೆ ನಾವು ಸ್ವಲ್ಪ ತಾಳ್ಮೆಯಿಂದ ವರ್ತಿಸಬೇಕು ಅನಿಸುತ್ತದೆ. ಕೆಲವು ಗೆಳೆಯರು ಸರಿಯಾಗಿ ಗುರುತಿಸಿರುವಂತೆ ಮನು ಅವರ ಲೇಖನದಲ್ಲಿ ಕೆಲವು ಪದಬಳಕೆಗಳು, ಮತ್ತು ಸರಿಯಾದ ಸಂವಹನಕ್ಕೆ ತಡೆಯುಂಟುಮಾಡುವ ವಾಕ್ಯ ರಚನೆಗಳಿವೆ. ಅವುಗಳನ್ನು ಲೇಖಕರು ಮುಂದೆ ಸರಿ ಪಡಿಸಿಕೊಳ್ಳಬಹುದು ಎಂಬ ನಿರೀಕ್ಷೆಯಿದೆ. ಆದರೆ ಜಾತಿ ವ್ಯವಸ್ಥೆಯ ಕುರಿತು ಅವರು ಏನು ಹೇಳಲು ಹೊರಟಿದ್ದಾರೆ ಎಂಬುದನ್ನು ನಾವು ಈಗಲೇ ಊಹಿಸಿಕೊಂಡು ಅದಕ್ಕೆ ಪ್ರತಿಕ್ರಿಯಿಸುವುದು ನನ್ನ ಪ್ರಕಾರ ತಪ್ಪು. ಇದಕ್ಕೆ ಎರಡು ಕಾರಣಗಳಿವೆ. ಒಂದು ಲೇಖಕರ ಬಗ್ಗೆ ನನ್ನ ಸೀಮಿತ ಗ್ರಹಿಕೆಯ ಪ್ರಕಾರ ಹೇಳುವುದಾದರೆ ಅವರೆಂದೂ ಬಲಪಂಥೀಯ ಧೋರಣೆಗಳನ್ನು ಸಮರ್ಥಿಸಿದವರಲ್ಲ. ಅಥವಾ ಆ ಬಗೆಯ ಐಡಿಯಾಲಜಿ ಇಟ್ಟುಕೊಂಡವರೂ ಅಲ್ಲ. ಎರಡನೆಯದು, ‘ಜಾತಿ ವ್ಯವಸ್ಥೆ’ ಮತ್ತು “ಬ್ರಾಹ್ಮಣ”, ಬ್ರಾಹ್ಮಣ್ಯಕ್ಕಿರುವ ಸಂಬಂಧ ಕುರಿತು, ವರ್ಣಾಶ್ರಮ-ಜಾತಿ ಪದ್ಧತಿ ಸೇರಿದಂತೆ ಒಟ್ಟಾರೆ ಭಾರತೀಯ ಜಾತಿ ವ್ಯವಸ್ಥೆಯ ಇತಿಹಾಸದ ಕುರಿತು ನಮ್ಮಲ್ಲಿ ಎಲ್ಲರಿಗೂ ಏಕಾಭಿಪ್ರಾಯವಿಲ್ಲ. ಈ ಪ್ರಶ್ನೆಯ ಕುರಿತು ಕೆಲವು ಸರಳೀಕರಣಗಳೂ ಇವೆ. ಆದರೆ ಈ ಪ್ರಶ್ನೆ ಅಷ್ಟು ಸರಳವಾದುದು ಎನಿಸುವುದಿಲ್ಲ.
ಒಂದು ಉದಾಹರಣೆಯ ಮೂಲಕ ಹೇಳುವುದಾದರೆ ನಮ್ಮಲ್ಲಿ ಅನೇಕರು ‘ಬ್ರಾಹ್ಮಣರು ಎಂದರೆ ಆರ್ಯರು, ಆರ್ಯರು ಎಂದರೆ ಬ್ರಾಹ್ಮಣರು” ಎಂಬ ಸರಳ ಸಮೀಕರಣವನ್ನು ನಂಬಿಕೊಂಡಿದ್ದೇವೆ. ಆದರೆ ಆರ್ಯರು ಯಾರು? ಎಲ್ಲಿಂದ ಬಂದರು ಎಂಬ ಬಗ್ಗೆ ಡಾ.ಬಿ.ಆರ್. ಅಂಬೇಡ್ಕರ್ ಅವರು ಏನು ಹೇಳಿದ್ದಾರೆ ಎಂಬ ಪ್ರಶ್ನೆಯನ್ನು ಕೇಳಿಕೊಂಡು ನೋಡಿ. ಬ್ರಾಹ್ಮಣರ ಉಪ ಪಂಗಡಳ ಕುರಿತು ಬರೆಯುವಾಗ ಅಂಬೇಡ್ಕರ್ ಅವರು ಏನು ಹೇಳಿದ್ದಾರೆ ನೋಡಿ. ನಮ್ಮ ಕೆಲವು ನಂಬಿಕೆಗಳು ತಲೆಕೆಳಗಾಗುವ ಪರಿಸ್ಥಿತಿ ಬಂದರೂ ಬರಬಹುದು!

ಜಾತಿ ತಾರತಮ್ಯ ಹೋಗಬೇಕು ಎಂಬುದು ನಮ್ಮೆಲ್ಲರ ಹೆಬ್ಬಯಕೆಯೇನೋ ನಿಜ. ಆದರೆ ಈ ಜಾತಿ ಹೇಗೆ ಕೆಲಸ ಮಾಡುತ್ತದೆ, ಅದನ್ನು ಹೇಗೆ ಹೋಗಲಾಡಿಸಬೇಕು ಎಂಬ ಬಗ್ಗೆ ಎಲ್ಲಾದರೂ ರೆಡಿಮೇಡ್ ಉತ್ತರ ಇದೆಯೇ? ಈ ಪ್ರಶ್ನೆಯನ್ನು ಬುದ್ಧ ಒಂದು ರೀತಿ ಎದುರಿಸಿದರೆ, ಫುಲೆ ಒಂದು ರೀತಿ ಎದುರಿದರು, ಅಂಬೇಡ್ಕರ್, ಪೆರಿಯಾರ್ ಭಿನ್ನ ರೀತಿಗಳಲ್ಲಿ ಎದುರಿಸಿ ಹಲವು ಪ್ರಯೋಗಗಳನ್ನು ನಡೆಸಿದರು. ನಾರಾಯಣ ಗುರು, ಸ್ವಾಮಿ ವಿವೇಕಾನಂತ ಮತ್ತೊಂದು ರೀತಿಯಲ್ಲಿ ಎದುರುಗೊಂಡರು. ಕುವೆಂಪು, ನಂಜುಂಡ ಸ್ವಾಮಿ, ಬಿ ಕೃಷ್ಣಪ್ಪನವರು, ಲಂಕೇಶ್, ಡಿಆರ್ ಇತ್ಯಾದಿಗಳು ತಮ್ಮದೇ ರೀತಿಯಲ್ಲಿ ಜಾತಿ ಪ್ರಶ್ನೆಗೆ ಎದುರಾದರು.
ವಸ್ತುಸ್ಥಿತಿ ಹೀಗಿರುವಾಗ ಒಬ್ಬ ಇತಿಹಾಸಕಾರರಾಗಿ ಮನು ವಿ ದೇವದೇವನ್ ಅವರು ಈ ಜಾತಿ ಪ್ರಶ್ನೆಯನ್ನು ಹೇಗೆ ಎದುರುಕೊಳ್ಳುತ್ತಾರೆ ಎಂಬ ಬಗ್ಗೆ ಕನಿಷ್ಟ ಕುತೂಹಲವಾದರೂ ನಮಗಿರಬೇಕು. ಹೌದು ತಮ್ಮ ಲೇಖನದಲ್ಲಿ ಅವರು “ಮನುಸ್ಮೃತಿಯನ್ನು ಎಲ್ಲಾ ಬ್ರಾಹ್ಮಣರು” ಅನುಸರಿಸಿರಲಿಲ್ಲ ಎಂಬ ಸಂಗತಿಯೊಂದನ್ನು ಹೇಳಿದ್ದಾರೆ. ಇದಕ್ಕೆ ಕೇರಳ ಮತ್ತಿತರ ಕಡೆಗಳ ಬ್ರಾಹ್ಮಣರನ್ನು ಉಲ್ಲೇಖಿಸಿದ್ದಾರೆ. ಅವರ ಮಾತಿನಲ್ಲಿನ ಉದ್ದೇಶವನ್ನು ಹುಡುಕಲು ಹೊರಡುವ ಮೊದಲು ನಾವು ಅಂತಹ ಹೇಳಿಕೆಗಳನ್ನು ಒರೆಗೆ ಹಚ್ಚಿ ನೋಡಬೇಕಿರುತ್ತದೆ. ಜಾತಿ ವ್ಯವಸ್ಥೆ ಉತ್ತರ ಭಾರತದಲ್ಲಿ ಯಾವ ರೀತಿಯಲ್ಲಿ ಉಗಮಗೊಂಡು ವಿಕಾಸಗೊಂಡಿತೋ ಅದೇ ರೀತಿಯಲ್ಲಿ ದಕ್ಷಿಣ ಭಾರತದಲ್ಲಿ ಉಗಮಗೊಳ್ಳಲಿಲ್ಲ, ವಿಕಾಸ ಹೊಂದಲಿಲ್ಲ ಎನ್ನುವುದು ಇತಿಹಾಸ ಓದಿದವರಿಗೆ ತಿಳಿದಿರುತ್ತದೆ. ಬಹಳ ಸಲ ನಾವು ಉತ್ತರ ಭಾರತದಲ್ಲಿ ಜಾತಿ/ಅಸ್ಪೃಶ್ಯತೆ ಕುರಿತು ಇರುವ ಥಿಯರಿಗಳನ್ನೇ ದಕ್ಷಿಣ ಭಾರತಕ್ಕೂ ಅನ್ವಯಿಸಿಕೊಂಡು ನೋಡುತ್ತಿರುವುದರಿಂದಲೂ ಕೆಲವು ಸಮಸ್ಯೆಗಳಾಗುತ್ತಿವೆ. ಹಾಗೆಯೇ ಇತ್ತೀಚೆಗೆ ತಳಿ ವಿಜ್ಞಾನಿ ಡೇವಿಡ್ ರೀಚ್ ಅವರು ಬ್ರಾಹ್ಮಣ ಪಂಗಡಗಳ ಕುರಿತು, ಆರ್ಯರ ವಲಸೆ ಕುರಿತು ಡಿಎನ್ಎ ಅಧ್ಯಯನಗಳ ಹಿನ್ನೆಲೆಯಲ್ಲಿ ಕೆಲ ಖಡಕ್ಕಾದ ಮಾತುಗಳನ್ನು ದಾಖಲಿಸಿದ್ದಾರೆ. ಬಹುಶಃ ಮನು ದೇವದೇವನ್ ಅವರ ಅಂಕಣದಲ್ಲಿ ಇವೆಲ್ಲವೂ ಪ್ರಸ್ತಾಪವಾಗಬಹುದು.

ನಾವು ಈ ಅಂಕಣದ ಕುರಿತು ಪ್ರತಿಕ್ರಿಯಿಸುವುದು ತಪ್ಪೇನಲ್ಲ. ಈ ಪ್ರಕ್ರಿಯೆಯಲ್ಲಿ ಒಂದಷ್ಟು ಒಳ್ಳೆಯ ಚರ್ಚೆಗಳು ಹುಟ್ಟಿಕೊಳ್ಳಲಿ. ಎಲ್ಲರ ತಿಳುವಳಿಕೆಗಳು ಮತ್ತಷ್ಟು ಹೆಚ್ಚಲಿ. ಆದರೆ ಇಂತಹ ಒಂದು ಅಂಕಣದ ಹಿಂದೆ ಇದೇ ಉದ್ದೇಶವಿದೆ ಎಂದು ಮೊದಲೇ ತೀರ್ಪು ಹೊರಡಿಸಿಕೊಂಡು ಬಿಟ್ಟರೆ ಅದರಲ್ಲಿನ ಸ್ವೀಕಾರಾರ್ಹವಾದುದನ್ನೂ ಸಹ ಸ್ವೀಕರಿಸಲು ಕಷ್ಟವಾಗುತ್ತದೆ. ನಡೆಯಬಹುದಾದ ಒಂದು ಒಳ್ಳೆಯ ಚರ್ಚೆಯನ್ನು ದಿಕ್ಕು ತಪ್ಪಿಸಿದ ಹಾಗಾಗುತ್ತದೆ. ಹಾಗಾದಿರಲಿ. ನಮ್ಮ ಪ್ರತಿಕ್ರಿಯೆಗಳಲ್ಲಿ ಸಾಧ್ಯವಾದಷ್ಟು ವಸ್ತುನಿಷ್ಟತೆಗೆ ಒತ್ತು ನೀಡುವುದು ಒಳಿತು ಎಂದು ನನ್ನ ಸಲಹೆ.
ತಮ್ಮ ಈ ಲೇಖನದಲ್ಲಿ ಲೇಖಕರು ಐಡಿಯಲಿಸಂ (ಇದಕ್ಕೆ ಕನ್ನಡದಲ್ಲಿ ಭಾವನಾವಾದ ಎಂಬ ಪದಬಳಕೆ ಇದೆ-ಲೇಖಕರು ಪ್ರಜ್ಞಾವಾದ ಎಂದು ಬಳಸಿದ್ದಾರೆ) ಕುರಿತು ಪ್ರಸ್ತಾಪಿಸುತ್ತಾ ತಾವು ಐಡಿಯಲಿಸಂ ಹೇಳುವಂತೆ ಪ್ರಜ್ಞೆಯಿಂದ ಭೌತವಸ್ತುವಿನ ಸೃಷ್ಟಿಯಾಗುತ್ತದೆ ಎಂಬುದನ್ನು ಒಪ್ಪುವುದಿಲ್ಲ ಎಂದಿದ್ದಾರೆ. ಇದು ಸಕಾರಾತ್ಮಕ ಸಂಗತಿ. ಆದರೆ ಐಡಿಯಲಿಸಂಗೆ ಉದಾಹರಣೆಯಾಗಿ ಅವರು ನೀಡುವುದು ಬುದ್ಧನನ್ನು. ಭಾರತೀಯ ತತ್ವಶಾಸ್ತ್ರದ ಪರಂಪರೆಯಲ್ಲಿ ಈ ಐಡಿಯಲಿಸಂ-ಮೆಟೀರಿಯಲಿಂ ಗಳ ನಡುವಿನ ತಿಕ್ಕಾಟಕ್ಕೆ ದೊಡ್ಡ ಚರಿತ್ರೆಯಿದೆ. ಆದರೆ ಬುದ್ಧನನ್ನು ಐಡಿಯಲಿಂಗೆ ಪ್ರತೀಕಗೊಳಿಸುವುದು ಅಷ್ಟು ಸರಿಯಲ್ಲವೆನಿಸುತ್ತದೆ. ಐಡಿಯಲಿಸಂ ಎಂದಾಗಲೂ ಅದರಲ್ಲಿನ ಸಬ್ಜೆಕ್ಟಿವ್ ಐಡಿಯಲಿಸಂ (ಮನೋನಿಷ್ಠ ಭಾವನಾವಾದ) ಮತ್ತು ಆಬ್ಜೆಕ್ಟಿವ್ ಐಡಿಯಲಿಸಂ (ವಸ್ತುನಿಷ್ಠ ಭಾವನಾವಾದ) ಎಂಬ ಒಳ ವಿಂಗಡನೆಯಿದೆ. ಇದರಲ್ಲಿ ಸಬ್ಜೆಕ್ಟಿವ್ ಐಡಿಯಲಿಸಂ ಬ್ರಾಹ್ಮಣವಾದಕ್ಕೆ ಯಾವತ್ತಿಗೂ ತಾತ್ವಿಕ ಚೌಕಟ್ಟನ್ನು ಒದಗಿಸಿಕೊಂಡು ಅಪಾಯಕಾರಿಯಾಗಿ ವರ್ತಿಸುತ್ತಾ ಬಂದಿದೆ. ಶಂಕರಾಚಾರ್ಯನ "ಅಹಂ ಬ್ರಹ್ಮಾಸ್ಮಿ”, ವೈದಿಕ ಧರ್ಮದ ಕರ್ಮ ಸಿದ್ಧಾಂತ ಸಬ್ಜೆಕ್ಟಿವ್ ಐಡಿಯಲಿಸಂಗೆ ಸೂಕ್ತವಾದ ಉತ್ತಮ ನಿದರ್ಶನ. ಮೊದಮೊದಲು ಭೌತವಾದಿಯಾಗಿದ್ದ ದರ್ಶನಗಳೂ ಕೊನೆಕೊನೆಗೆ ಭಾವನಾವಾದದ ತೆಕ್ಕೆಗೆ ಬಿದ್ದಿರುವುದು, ಆಥವಾ ವೈದಿಕ ಭಾವನಾವಾದ ಹಲವು ಭೌತವಾದಿ ದರ್ಶನಗಳನ್ನು ಆಪೋಶನ ಪಡೆದಿದ್ದು ಮತ್ತೊಂದು ಇತಿಹಾಸ. ಬುದ್ಧ ಪ್ರಜ್ಞೆಯಿಂದ ಪರಿಸರ ಎಂದು ಹೇಳಿದ್ದನಾದರೂ ಅವನು ಬೌತಪ್ರಪಂಚದ ಅಸ್ತಿತ್ವವನ್ನು ನಿರಾಕರಿಸಲಿಲ್ಲ. ಈ ಅರ್ಥದಲ್ಲಿ ಅವನೊಬ್ಬ ಅಬ್ಜೆಕ್ಟಿವ್ ಐಡಿಯಲಿಸ್ಟ್.
ಸಬ್ಜೆಕ್ಟಿವ್ ಐಡಿಯಲಿಸ್ಟ್ ಗಳ ರೀತಿಯಲ್ಲಿ ಬುದ್ಧ ತಾನು ಪಾರಮಾರ್ಥಿಕ ವಿಷಯಗಳ ಕುರಿತು ನಿರರ್ಥಕ ವ್ಯಾಖ್ಯಾನಗಳನ್ನು ನಡೆಸದೇ ಬದುಕಿರುವ ಸಹ ಮನುಷ್ಯರ ಮತ್ತು ಸಕಲ ಜೀವಿಗಳ ಒಳಿತಿನ ಕುರಿತು ಚಿಂತನೆ ನಡೆಸಿದ. ಭೌತಿಕ ಜಗತ್ತಿನ ಸಂಕಷ್ಟಗಳಿಗೆ ಕಾರಣಗಳೇನು ಎಂದು ಯೋಚಿಸಿದ, ಪರಿಹಾರಗಳನ್ನು ಬೋಧಿಸಿದ ಎಂದು ನಾವು ತಿಳಿದಿದ್ದೇವೆ. ಒಂದೊಮ್ಮೆ ಅವನು ಶುದ್ಧ ಐಡಿಯಲಿಸ್ಟ್ ಆಗಿದ್ದರೆ ಹೀಗೆ ಮಾಡಲು ಸಾಧ್ಯವಿತ್ತೆ? ಭೌತ ಪ್ರಪಂಚದಿಂದಲೇ ಪ್ರಜ್ಞೆ ಹುಟ್ಟುತ್ತದೆಯಾದರೂ ಪ್ರಜ್ಞೆ-ಮತ್ತು ಪರಿಸರದ ನಡುವಿನ ಗತಿತಾರ್ಕಿಕ ಸಂಬಂಧವೂ ಅಷ್ಟೇ ಮುಖ್ಯ. ಒಂದು ಮತ್ತೊಂದನ್ನು ಯಾವತ್ತೂ ಪ್ರಭಾವಿಸುತ್ತವೆ. ಜೀವ ಸಂಕುಲಗಳಲ್ಲಿ ಮನುಷ್ಯ ಜೀವಿ ಮಿಕ್ಕೆಲ್ಲಾ ಜೀವಿಗಳಿಗೆ ಭಿನ್ನವಾಗುವುದೇ ಇಲ್ಲಿ. ಮನುಷ್ಯನಿಗೆ ತನ್ನ ಪರಿಸರವನ್ನು ಬದಲಿಸುವ ಶಕ್ತಿ ಎಲ್ಲಿಂದ ಬರುತ್ತದೆ ಎಂದರೆ ಅವನ ಅರಿವಿನಿಂದಲೇ. ಬುದ್ಧನ ಗ್ರಹಿಕೆಯೂ ಹೀಗೇ ಇದ್ದಿರಲು ಸಾಧ್ಯವಿದೆ. ದೇವರ ವಿಷಯ ಬಂದಾಗ ಬುದ್ಧ ಆಗ್ನಾಸ್ಟಿಕ್ ಆಗಿ ಉಳಿಯುತ್ತಾನೆ. ಆದರೆ ನಂತರದಲ್ಲಿ ಬುದ್ಧನನ್ನು ಬ್ರಾಹ್ಮಣೀಕರಿಸಿ ವೈದಿಕರು ಬುದ್ಧನ ವಿಚಾರಗಳನ್ನು ತಿರುಚಿರುವ ಬಗ್ಗೆ ಅಂಬೇಡ್ಕರ್ ಕೂಡಾ ತಿಳಿಸಿದ್ದಾರೆ. ಇಂದಿಗೂ ಬುದ್ಧನನ್ನು ನಾವು ಅರ್ಥ ಮಾಡಿಕೊಳ್ಳುತ್ತಿರುವುದು ಬುದ್ಧನ ನಂತರದಲ್ಲಿ ಅವನ ಶಿಷ್ಯರು ಬರೆದ ಕೃತಿಗಳ ಮೂಲಕವೆ ಅಲ್ಲವೇ?

ತಮ್ಮ ಬರವಣಿಗೆಯ ರಭಸದಲ್ಲಿ ಲೇಖಕರು ಕೆಲವು ಬೀಸು ಹೇಳಿಕೆಗಳನ್ನು ನೀಡುತ್ತಾರೆ. ಅವರ ಈ ಮಾತನ್ನು ಗಮನಿಸಿ: “ತಜ್ಞರಿಗಿಂತ ಹೆಚ್ಚಾಗಿ ಕಾರ್ಯಕರ್ತ (ಏಕ್ಟಿವಿಸ್ಟ್) ಮನೋಧರ್ಮವುಳ್ಳವರು ಜಾತಿ ಕುರಿತು ಹೇಳಿಕೆಯನ್ನು ಹೊರಡಿಸುವುದರಲ್ಲಿ ಮುಂದಾಗಿರುವುದು ನಮಗೆಲ್ಲ ತಿಳಿದುರುವ ಸಂಗತಿ. ಅಲ್ಲಿ ಬ್ರಾಹ್ಮಣ ಎಂದರೆ ಶೋಷಕ, ದಲಿತ ಎಂದರೆ ಶೂದ್ರ ಎಂಬ ಸರಳವಾದ ಸಮೀಕರಣವನ್ನು ಕಾಣುತ್ತೇವೆ”. ಇಂತಹ ಮಾತುಗಳನ್ನು ದಾಖಲಿಸುವಾಗ ನಿಖರತೆ ಇರದೇ ಹೋದರೆ ತಪ್ಪು ಗ್ರಹಿಕೆಗೆ ಕಾರಣವಾಗುತ್ತದೆ. ವಾಸ್ತವದಲ್ಲಿ ನಮ್ಮ ಸಮಾಜದಲ್ಲಿ ಜಾತಿಯಂತಹ ವಿಷಯವನ್ನು ಚರ್ಚೆಗೆ ತಂದವರೇ ಆಕ್ಟಿವಿಸ್ಟ್ ಮನೋಧರ್ಮದವರು. ಇಲ್ಲಿ ಲೇಖಕರು ಉಲ್ಲೇಖಿಸುವ ಫುಲೆ, ಅಂಬೇಡ್ಕರ್, ಕೋಸಾಂಬಿ, ಇರ್ಫಾನ್ ಹಬೀಬ್ ಎಲ್ಲರಿಗೂ ಒಂದಲ್ಲ ಒಂದು ರೀತಿಯ ಆಕ್ಟಿವಿಸ್ಟ್ ಮನೋಧರ್ಮವಿದೆ, ಆಕ್ಟಿವಿಸ್ಟ್ ಅನುಭವದ ಹಿನ್ನೆಲೆಯಿದೆ. ಜಾತಿಯ ಕುರಿತು ಹೆಚ್ಚು ಸಂಶೋಧನೆಗಳನ್ನು ನಡೆಸಿದವರು ಸಹ ಇದೇ ಮನೋಧರ್ಮದವರು. ಲೋಹಿಯಾ, ಲಂಕೇಶ್, ತೇಜಸ್ವಿ, ಪ್ರೊ.ಕೃಷ್ಣಪ್ಪ, ಮೇಕಿಂಗ್ ಹಿಸ್ಟರಿ ಬರೆದ ಸಾಕಿ, ಕೆ ವಿ ಸುಬ್ಬಣ್ಣ ಇವರೆಲ್ಲ ಜಾತಿ ಕುರಿತು ಕಡಿಮೆ ಜಿಜ್ಞಾಸೆ ನಡೆಸಿದ್ದಾರೆಯೇ? ಇವರೆಲ್ಲ ಇಂತಹ ಸರಳವಾದ ಸಮೀಕರಣವನ್ನು ಮುಂದಿಟ್ಟಿದ್ದಾರೆಯೇ? ಆಥವಾ ಇವರನ್ನು ಹೊರತುಪಡಿಸಿದ ಯಾವ “ಆಕ್ಟಿವಿಸ್ಟ್ ಮನೋಧರ್ಮದವರ” ಬಗ್ಗೆ ಲೇಖಕರು ಮಾತಾಡುತ್ತಿದ್ದಾರೆ? ಅದನ್ನಾದರೂ ಅವರು ತಿಳಿಸಬೇಕಿರುತ್ತದೆ.

ಇದೇ ಸಂದರ್ಭದಲ್ಲಿ “ನಮ್ಮ ನಡುವಲ್ಲಿ ಜಾತಿ ವ್ಯವಸ್ಥೆ ಕೊನೆಗೊಳ್ಳಬೇಕು ಎಂಬ ನಿಲುವಿನ ಸಂಪ್ರದಾಯವಾದಿಗಳನ್ನು ಕಾಣಬಹುದು, ಹಾಗೆಯೇ ಜಾತಿ ವೈಜ್ಞಾನಿಕವಾದ ವರ್ಗೀಕರಣವಾಗಿದೆ ಎಂಬ ಧೋರಣೆ ಹೊಂದಿರುವ ಪ್ರಗತಿಶೀಲರನ್ನೂ ಕಾಣಬಹುದು” ಎಂದು ಲೇಖಕರು ಬರೆಯುವಾಗಲೂ ಈ ಕುರಿತು ಸ್ಪಷ್ಟ ನಿದರ್ಶನಗಳನ್ನು ನೀಡುವುದು ಅವಶ್ಯವಿದೆ.


“ಇತ್ತೀಚೆಗೆ ಉದ್ವೇಗವನ್ನೇ ಅರಿವೆಂದು ಭಾವಿಸುವ ಹೊಸ ತಲೆಮಾರಿನ ಬರಹಗಾರರೊಬ್ಬರು ಮನುಸ್ಮೃತಿ ಈ ದೇಶದ ಕಾನೂನಾಗಿತ್ತು (ಲಾ ಆಫ್ ದಿ ಲ್ಯಾಂಡ್) ಎಂದು ಆವೇಶಭರಿತವಾಗಿ ಒದರಿದ್ದು ಗಮನಕ್ಕೆಬಂತು”- ಎಂದು ಲೇಖಕರು ಹೇಳುವಾಗ ಆ ಬರೆಹಗಾರರ ಹೆಸರನ್ನು ತಿಳಿಸಲು ಇರುವ ಸಮಸ್ಯೆ ಏನು? ಹಾಗೆ ಹೇಳಿದ್ದರೆ ಅಂತಹ ಮಾತಿನ ಸಂದರ್ಭವನ್ನು ತಿಳಿಯಲು ಅನುಕೂಲವಾಗುತ್ತಿತ್ತಲ್ಲವೇ? ಇದರಲ್ಲಿ ಮರೆಮಾಚುವುದು ಏನಿದೆ?

ಇಡೀ ಲೇಖನದಲ್ಲಿ ಜಾತಿ ವ್ಯವಸ್ಥೆಯ ಕುರಿತ ಲೇಖಕರ ಗ್ರಹಿಕೆಯನ್ನು ಸೂಚಿಸುವ ಮಾತುಗಳು ಇವು- “ಜಾತಿ ಪದ್ಧತಿಯ ವಿಶ್ಲೇಷಣೆಗಳಲ್ಲಿ ಪ್ರಜ್ಞಾವಾದದ ಚೌಕಟ್ಟಿಗೆ ಮೇಲುಗೈ ಉಂಟಾದರೂ ಈವರೆಗೆ ಜಾತಿ ಎಂಬ ಮನೋಗುಣವು ತನ್ನ ಭೌತಿಕ ಪರಿಸರವನ್ನು ಹೇಗೆ ಸೃಷ್ಟಿಸುತ್ತದೆ, ಹೇಗೆ ಮಾರ್ಪಾಟುಗೊಳಿಸುತ್ತದೆ, ಇವೇ ಮೊದಲಾದ ಪ್ರಶ್ನೆಗಳಿಗೆ ಉತ್ತರವಿಲ್ಲ. ಬಾಹ್ಮಣಿಕಲ್ ಎಂಬ, ಏನನ್ನು ಸೂಚಿಸುತ್ತಿದೆ ಎಂಬುದು ಸ್ಪಷ್ಟವಲ್ಲದ ಸೂಚಕವೊಂದರ ತೇಪೆಯಿಂದ ತಮ್ಮ ಅಸಮರ್ಪಕತೆಯನ್ನು ಮರೆಮಾಸಲು ಶ್ರಮಿಸುತ್ತ ಬಂದಿವೆ, ಈ ವಿಶ್ಲೇಷಣೆಗಳು. ಪ್ರಜ್ಞಾವಾದವನ್ನು ಒಪ್ಪಿಕೊಳ್ಳದಂತ ಮತ್ತು ಭೌತಿಕ ಪರಿಸರಕ್ಕೆ ಆದ್ಯತೆ ನೀಡುವಂತ ನನ್ನಂತ ಸಂಶೋಧಕರಿಗೆ ಜಾತಿಯನ್ನು ಅನೇಕ ಶತಮಾನಗಳ ಕಾಲ ನೆಲೆ ನಿಲ್ಲಿಸಿದ ಭೌತಿಕ ವ್ಯವಸ್ಥೆ ಎಂಥದ್ದು ಎಂಬುದು ಮುಖ್ಯ ಪ್ರಶ್ನೆಯಾಗುತ್ತದೆ. ಬ್ರಾಹ್ಮಣರ ಹಿತಾಸಕ್ತಿಯೇ ಭೌತಿಕ ವ್ಯವಸ್ಥೆಯಾಗಿತ್ತು ಎಂಬ ತಿಳಿಯಾದ ಧೋರಣೆ ಎರಡೋ ಅದಕ್ಕಿಂತ ಹೆಚ್ಚೋ ಸಹಸ್ರಮಾನಗಳ ಚರಿತ್ರೆಯನ್ನು ಕ್ರಮಾನುಗತವಾಗಿ ಪರಿಶೀಲಿಸಿದಾಗ ಸಮರ್ಥಿಸಿಕೊಳ್ಳಲು ಅಸಾಧ್ಯವಾಗಿಬಿಡುತ್ತದೆ”

ಈ ಮಾತುಗಳನ್ನು ಪ್ರಾಯಶಃ ಲೇಖಕರು ತಮ್ಮ ಮುಂದಿನ ಅಂಕಣಗಳಲ್ಲಿ ವಿವರವಾಗಿ ವಿಶದಪಡಿಸುತ್ತಾರೆ ಎಂದು ನಿರೀಕ್ಷಿಸೋಣ. ಜಾತಿ ಕುರಿತ ವಿಶ್ಲೇಶಣೆಗಳಲ್ಲಿ ಐಡಿಯಲಿಸಂ ಮೇಲುಗೈ ಸಾಧಿಸಿರುವುದು ಎಲ್ಲಿ ಮತ್ತು ಹೇಗೆ? ಜಾತಿ ಕೇವಲ ಒಂದು ಮನೋಗುಣ ಎಂದು ತರ್ಕಿಸಿದವರು ಯಾರು? ಎಲ್ಲಿ ಈ ಬಗೆಯ ತರ್ಕ ನಡೆದಿದೆ? ಭೌತಿಕ ಸಾಮಾಜಿಕ ವ್ಯವಸ್ಥೆಯನ್ನೇ ತಳಹದಿಯಲ್ಲಿರಿಸಿ ಜಾತಿ ವ್ಯವಸ್ಥೆ ಕುರಿತು ನಡೆಸಿರುವ ವಿಶ್ಲೇಷಣೆಗಳಿಲ್ಲವೇ? “ಬ್ರಾಹ್ಮಣಿಕಲ್” ಎಂಬುದು ಯಾರಿಗೆ ಸ್ಪಷ್ಟವಲ್ಲದ ಸೂಚಕವೊಂದರ ತೇಪೆಯಾಗಿ ಕಾಣುತ್ತಿದೆ?  ಯಾಕಾಗಿ ಕಾಣುತ್ತಿದೆ? “ಭಾರತದಲ್ಲಿ ರೂಪುಗೊಂಡ ಸಾಮಾಜಿಕ ವ್ಯವಸ್ಥೆಗಳಲ್ಲಿ ಬ್ರಾಹ್ಮಣ್ಯದ ಹಿತಾಸಕ್ತಿ ಏನೂ ಪಾತ್ರ ವಹಿಸಲಿಲ್ಲವೇ? ಉತ್ತರ ಭಾರತದಿಂದ ದಕ್ಷಿಣಕ್ಕೆ ಬ್ರಾಹ್ಮಣ ಕುಟುಂಬಗಳು ಬರುವಾಗ ಇದ್ದ ಕಾರಣಗಳೇನು? ಹೀಗೆ ಬಂದ ಕುಟುಂಬಗಳು ಇಲ್ಲಿನ ರಾಜ ಮನೆತನಗಳೊಂದಿಗೆ ಹೊಂದಿದ್ದ ಭೌತಿಕ ಸಂಬಂಧವೆಂತದು, ಬೆರಳೆಣಿಕೆಯಲ್ಲಿದ್ದ ಬ್ರಾಹ್ಮಣರು ದೊಡ್ಡ ದೊಡ್ಡ ರಾಜ ಮನೆತನಗಳನ್ನು, ಇಡೀ ಆಡಳಿತವನ್ನು ಭೌತಿಕ ಪರಿಸರದಲ್ಲಿ ನಿಯಂತ್ರಿಸಲು ಸಾಧ್ಯವಾದದ್ದು ಹೇಗೆ? ಕೇರಳದಂತಹ ಕಡೆ ಲೇಖಕರು ಉಲ್ಲೇಖಿಸಿರುವ ನಂಬೂದರಿ ಬ್ರಾಹ್ಮಣರು ಈಳವರಂತಹ ದೊಡ್ಡ ಸಮುಯದಾಯವನ್ನು, ಹಾಗೂ ಮೂಲನಿವಾಸಿ ಸಮುದಾಯಗಳನ್ನು ಭೌತಿಕ ಪರಿಸ್ಥಿತಿಯಲ್ಲಿ ಕೆಳಕ್ಕೆ ತಳ್ಳಿದ ಬಗೆ ಏನು? ನಾಯರ್ ಗಳಂತಹ ಮಧ್ಯಮ ಸಮುಯದಾಯಗಳೊಂದಿಗೆ ಅವರು ಮಾಡಿಕೊಂಡ ಹೊಂದಾಣಿಕೆ ಎಂತಹುದಾಗಿತ್ತು? ದಕ್ಷಿಣ ಭಾರತದಲ್ಲಿ ಬ್ರಾಹ್ಮಣ ಮಠಗಳು ಭೌತಿಕ ಪರಿಸರದಲ್ಲಿ ಉಂಟು ಮಾಡಿರುವ ಪ್ರಭಾವ, ಪರಿಣಾಮಗಳು ಏನು? ಬ್ರಾಹ್ಮಣ ಜಾತಿಗಿರುವ ಸೋಷಲ್ ಕ್ಯಾಪಿಟಲ್ ಎಂತಹುದು? ಅದು ಹೇಗೆ ಸೃಷ್ಟಿಯಾಯಿತು, ಇದೇ ಸೋಷಲ್ ಕ್ಯಾಪಿಟಲ್ ಇತರ ಜಾತಿಗಳಿಗೆ ಏಕೆ ಸೃಷ್ಟಿಯಾಗಲಿಲ್ಲ? ಇತ್ಯಾದಿ ಪ್ರಶ್ನೆಗಳನ್ನು ಸಧ್ಯಕ್ಕೆ ಲೇಖಕರತ್ತ ಒಗೆಯುತ್ತಾ ಅವರ ಮುಂದಿನ ಅಂಕಣ ಬರೆಹಗಳಿಹಾಗಿ ಕಾಯೋಣ.

ಮನು ವಿ. ದೇವದೇವನ್‌ ಅವರ ಲೇಖನದ ಲಿಂಕ್‌ ಇಲ್ಲಿದೆ-

https://www.bookbrahma.com/news/jaati-paddatiya-mai-managalu-1

 

MORE FEATURES

ಮಾನವನ ಮೂರ್ಖತನದ ಬಗ್ಗೆ ಲೇಖಕರು ಬರೆಯದೇ ಮತ್ಯಾರು ಬರೆಯಬೇಕು?

28-04-2024 ಬೆಂಗಳೂರು

'ಕಠಾರಿಯವರ ವ್ಯಂಗ್ಯ ಮತ್ತು ವಿಡಂಬನೆಗಳು ವಾಸ್ತವದ ವೈರುದ್ಧ್ಯಗಳನ್ನು ದಿಟ್ಟವಾಗಿ ತೆರೆದಿಡುತ್ತವೆ. ಇವುಗಳ ಓದು&nb...

ದ್ಯಾವಾ-ಪೃಥವಿ: ಸಂಕೀರ್ಣತೆಯ ಉಪಾಸನೆ

28-04-2024 ಬೆಂಗಳೂರು

'ನಾನೊಬ್ಬ ಸಂಕೀರ್ಣತೆಯ ಉಪಾಸಕ ಎನ್ನುವುದರ ಮೂಲಕ ಗೋಕಾಕರು ನವೋದಯದ ಸರಳತೆಯನ್ನು ಒಡೆಯುತ್ತಾರೆ. ಕಟ್ಟದಿರು ಶರಧಿಗೆ ...

ವಾರದ ಲೇಖಕ ವಿಶೇಷದಲ್ಲಿ ಕನ್ನಡದ ವ್ಯಂಗ್ಯಶೈಲಿಯ ಬರಹಗಾರ ‘ಬೀಚಿ’

28-04-2024 ಬೆಂಗಳೂರು

ಬುಕ್ ಬ್ರಹ್ಮದ ವಾರದ ಲೇಖಕ ಸರಣಿಯಲ್ಲಿ ಮೂಡಿಬಂದ ಕನ್ನಡದ ವ್ಯಂಗ್ಯಶೈಲಿಯ ಬರಹಗಾರ ಬೀಚಿ ಅವರ ಕುರಿತ ಒಂದು ನೀಳ ನೋಟ.. ...