ಸಂಶೋಧನಾ ಶ್ರಮ ಸಾಂಕೇತಿಸುವ  ಕೃತಿ ‘ಕರ್ನಾಟಕ ಯುಗಪುರುಷ ಪಂ. ತಾರಾನಾಥರು’  


ಬದುಕು-ಬರಹಗಳ ಅನನ್ಯತೆ ಹಾಗೂ ಅನ್ಯೋನ್ಯತೆಯನ್ನು ಪ್ರತಿನಿಧಿಸುವ, ಉನ್ನತ ಚಿಂತನೆಯ ಪಂ.ತಾರಾನಾಥರ ಸತ್ವಪೂರ್ಣ ವ್ಯಕ್ತಿತ್ವವನ್ನು ಸಂಶೋಧನಾಸಕ್ತಿಯ ಬದ್ಧತೆಯೊಂದಿಗೆ ಕಟ್ಟಿಕೊಟ್ಟ ಲೇಖಕಿ ಲಕ್ಷ್ಮೀದೇವಿ ಶಾಸ್ತ್ರಿ ಅವರ ‘ಕರ್ನಾಟಕ ಯುಗಪುರುಷ ಪಂ. ತಾರಾನಾಥರು’ ಕೃತಿಯು ಕನ್ನಡ ಸಾಹಿತ್ಯಕ್ಕೊಂದು ಉತ್ತಮ ಕೊಡುಗೆ ಎಂದು ಪತ್ರಕರ್ತ ವೆಂಕಟೇಶ ಮಾನು ವಿಶ್ಲೇಷಿಸಿದ ಬರಹವಿದು.

ಪಂ. ತಾರಾನಾಥರ ಕುರಿತು ಎಷ್ಟೇ ಕೃತಿಗಳಿದ್ದರೂ ಕಡಿಮೆ. ಅಂತಹ ವ್ಯಕ್ತಿತ್ವ ವೈಶಾಲ್ಯತೆ, ಅಧ್ಯಯನದ ಆಳ, ಮಾನವೀಯತೆಯ ಎತ್ತರ ಅವರದ್ದು. ಈವರೆಗಿನ ಕೃತಿಗಳು ಹಿಮಪಾತಳಿಯಲ್ಲಿ ಮಂಜುಗಡ್ಡೆಯ ತುದಿ ಮಾತ್ರ. ಇವರ ಕುರಿತು ಬರೆಯುವ ಕೃತಿಗಳು ನದಿಗೆ ಹರಿವು, ಕಡಲ ಅಬ್ಬರಕ್ಕಿರುವ ಸಣ್ಣ ಸಣ್ಣ ತೊರೆಗಳಂತೆ.

ಜ್ಞಾನದ ಹತ್ತು ಹಲವು ಎತ್ತರಕ್ಕೇರಿದರೂ ಪಂ. ತಾರಾನಾಥರು ಸಾಹಿತ್ಯಲೋಕದಲ್ಲಿ ಪ್ರತಿಫಲಿಸಲಿಲ್ಲವೇಕೆ? ಎಂಬ ಪ್ರಶ್ನೆಯನ್ನು ಸಾಹಿತಿ ಜೆ. ಶ್ರೀನಿವಾಸಮೂರ್ತಿ ಅವರು ಕೃತಿಗೆ ಬರೆದ ಮುನ್ನುಡಿಯಲ್ಲಿ ಪ್ರಸ್ತಾಪಿಸಿ, ‘ತಾರಾನಾಥರು ಸಂಪ್ರದಾಯದಲ್ಲಿ ಆಳವಾಗಿ ಬೇರು ಬಿಟ್ಟು, ಅನಂತ ಬೆಳವಣಿಗೆ ಬದಲಾವಣೆಗಳ ಆಕಾಶಕ್ಕೆ ಗರಿಚಾಚಿದ ಕಲ್ಪತರು. ಆದರೆ, ಆಧುನಿಕ ಕನ್ನಡ ಸಾಹಿತ್ಯ, ರಾಷ್ಟ್ರೀಯತೆ ಕುರಿತ ವಿಚಾರ ಸಂಕಿರಣಗಳಲ್ಲಿ ಪಂ. ತಾರಾನಾಥರ ಕುರಿತು ಚರ್ಚೆಯಾಗಿದ್ದು ಕಡಿಮೆ’ ಎಂದು ವಿಷಾದಿಸಿದ್ದಾರೆ.

ಪಂ. ತಾರಾನಾಥರ ಪುತ್ರ ಪಂ. ರಾಜೀವ ತಾರಾನಾಥ ‘ಮಾವೋ, ಮಾರ್ಕ್ಸ್, ಸಾತ್ರ ರಿಂದ ಪ್ರೇರಣೆ ಪಡೆಯುವ ನಾವು, ನಮ್ಮ ಎದುರಿನಲ್ಲೇ ಬದುಕಿ ಹೋದ ಮೂರ್ತ ವಿಪ್ಲವವನ್ನು ಅದೇಕೆ ಮರೆತಬಿಟ್ಟೆವು? ಒಬ್ಬ ವ್ಯಕ್ತಿ ತನ್ನ ಜೀವಿತದಲ್ಲಿ ತನ್ನ ಸಮಾಜದಿಂದ ಎಷ್ಟು ಮುಂದಿರುತ್ತಾರೆಂದರೆ ಬಹುಶಃ ಆ ಸಮಾಜವನ್ನೇ ನಾಚಿಸುವ, ಕಾಡಿಸುವ ಗೂಢ ಸಂವೇದನೆಯಾಗುತ್ತಾನೆ. ಪಂ. ತಾರಾನಾಥರ ಬದುಕಿನಲ್ಲಿ, ಬರಹಗಳಲ್ಲಿ ಇರುವ ನಿಲುವುಗಳನ್ನು ವಿಂಗಡಿಸಿ ಅವುಗಳ ಬಗ್ಗೆ ಆಲೋಚನೆ ಮಾಡಿದರೆ ಬಹಳಷ್ಟು ಮಾಡಿದಂತೆ’ ಎಂದು ಅಭಿಪ್ರಾಯಪಡುತ್ತಾರೆ. ಇವುಗಳಲ್ಲಿ ವ್ಯಕ್ತವಾದ ಸಾಮಾನ್ಯ ಅಂಶಗಳು;

1. ಪಂ. ತಾರಾನಾಥರ ಕುರಿತು ಕೃತಿಗಳು ಕಡಿಮೆ.

2. ಕೃತಿಗಳಿದ್ದರೂ ಅವು ಸಮಗ್ರ ವ್ಯಕ್ತಿತ್ವದ ಅಪೂರ್ಣ ಚಿತ್ರಣ .

3. ತಾರಾನಾಥರಂತಹ ವ್ಯಕ್ತಿ ವಿಶೇಷದ ಸಾಹಿತ್ಯ ಸರಣಿಯ ಕೊಂಡಿ ಕಳಚಿಕೊಂಡಿದ್ದೇಕೆ, ಹೇಗೆ? ಇಂತಹ ಭಾವಗಳು ಪದೇ ಪದೆ ಚರ್ಚೆಗೀಡಾಗುತ್ತಿವೆ. ಸಾಹಿತ್ಯಕವಾಗಿ ಕಾಡುವ ಇಂತಹ ಅಪರಾಧಿ ಭಾವದ ಮಧ್ಯೆ ಹಿರಿಯ ಬರಹಗಾರ್ತಿ ಲಕ್ಷ್ಮೀದೇವಿ ಶಾಸ್ತ್ರಿ ಅವರ ‘ಕರ್ನಾಟಕ ಯುಗಪುರುಷ ಪಂ. ತಾರಾನಾಥರು’ ಕೃತಿಯು ರೂಪುಗೊಂಡಿದೆ.

ಮಹಾತ್ಮ ಗಾಂಧೀಜಿ ಅವರ ವ್ಯಕ್ತಿತ್ವವನ್ನೇ ಪ್ರಭಾವಿಸಿದ ತಾರಾನಾಥರನ್ನು ಕುರಿತು `ಇವರು ರಾಜಕೀಯಕ್ಕೆ ಬಂದರೆ ಗೋಖಲೆ-ತಿಲಕರಗಿಂತ ಹೆಚ್ಚು ಪ್ರಭಾವಿ ನಾಯಕರಾಗುತ್ತಾರೆ’ ಎನ್ನುವ ಭಾರತದ ಕೋಗಿಲೆ ಸರೋಜಿನಿ ನಾಯ್ಡು, 5 ವರ್ಷ ಹಿರಿಯರಿದ್ದೂ ತಾರಾನಾಥರನ್ನು ‘ಗುರು’ ಎಂದು ಸ್ವೀಕರಿಸಿದ್ದ ಕನ್ನಡದ ನಾಟಕ ಪಿತಾಮಹಾ ಟಿ.ಪಿ. ಕೈಲಾಸಂ… ಹೀಗೆ ದೇಶ-ವಿದೇಶಿ ಗಣ್ಯರ ಅಸಂಖ್ಯ ಅಭಿಪ್ರಾಯಗಳು ಇವರ ವ್ಯಕ್ತಿತ್ದದ ಅಗಣಿತ ಆಯಾಮಗಳು, ಒಡನಾಟದ ಅನುಭವಗಳು, ಓದಿನ ವಿಸ್ತಾರಗಳ ವಿರಾಟ ದರ್ಶನ ನೀಡುತ್ತವೆ. ಸರಳ ಬದುಕು, ಉನ್ನತ ವಿಚಾರಗಳಲ್ಲಿ ಮೈದಳೆದ ತಾರಾನಾಥರ ಕನ್ನಡ -ಇಂಗ್ಲಿಷ್ ಬರಹ, ಆಯುರ್ವೇದ ಚಿಕಿತ್ಸೆ- ಶಿಕ್ಷಣ ಸೇವೆ, ಸ್ವಾತಂತ್ಯ್ರ ಹೋರಾಟ, ಕನ್ನಡ ಏಕೀಕರಣ ಹೋರಾಟ, ವಿದ್ವತ್ ಪೂರ್ಣ ಉಪನ್ಯಾಸಗಳು, ಮೆರೆದ ಭಾವೈಕ್ಯತೆ, ಮನಸ್ಸಿನ ಔದಾರ್ಯತೆ, ಅಧ್ಯಾತ್ಮಿಕತೆ ಹೀಗೆ…ಹತ್ತು ಹಲವು ಸೇವಾ ಪದರುಗಳಲ್ಲಿಯ ವಿಶೇಷತೆಯು ಸಂಶೋಧನೆಗೆ ಹೇರಳ ಸಾಮಗ್ರಿ ಪೂರೈಸುತ್ತವೆ. ಆದರೆ, ಅತ್ತ ಕಡೆ ಸಂಶೋಧನೆಯ ನಿರ್ಲಕ್ಷ್ಯವಿದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ.

ಕೃತಿಯ ವಿಶೇಷತೆಗಳು: ಪಂ. ತಾರಾನಾಥರ ಕುರಿತು ಪ್ರೊ. ಎಂ. ಧ್ರುವನಾರಾಯಣರ ಸಂಪಾದಕತ್ವದಲ್ಲಿ ಪುಸ್ತಕಗಳು ಬಂದಿದ್ದು, ಮತ್ತೊಂದು ಹೊಸ ಪುಸ್ತಕ ಬರೆಯುವ ಅವಶ್ಯಕತೆ ಏನುಂಟು? ಅದಕ್ಕೆ ಉತ್ತರವಾಗಿ ಈ ಪುಸ್ತಕ ನೋಡಬಹುದು.ಪಂ. ತಾರಾನಾಥರ ತತ್ವ, ಸಿದ್ಧಾಂತಗಳು, ಬದುಕಿನುದ್ದಕ್ಕೂ ಪಾಲಿಸಿಕೊಂಡ ಬಂದ ಅವರ ಶಿಷ್ಯರು, ಒಡನಾಡಿಗಳು ಈಗ ಗತಿಸಿಹೋಗಿದ್ದು, ಕಳೆದು ಹೋದವರನ್ನುಈ ಕೃತಿಯಲ್ಲಿ ಸಂದರ್ಭಾನುಸಾರ ಹಾಗೂ ಛಾಯಾಚಿತ್ರಗಳೊಂದಿಗೆ ವಿಷಯ ಜೀವಂತಗೊಳಿಸಲಾಗಿದೆ ಎಂಬುದು ಲೇಖಕಿಯ ಮಾತು. ‘ಪಂ. ತಾರಾನಾಥರ ವಿದ್ವತ್ ವಿಷಯಗಳು ಸಾಗರದಾಳದಷ್ಟು. ನಮಗೆ ದೊರೆತಿದ್ದು ಒಂದೆರಡು ಮುತ್ತು. ಹೀಗಾಗಿ ನನಗೆ ತೃಪ್ತಿಯಿಲ್ಲ’ ಎಂದೂ ಹೇಳುವ ಅವರ ಮಾತು, ಈ ಕೃತಿಯ ಸ್ವರೂಪ-ಸ್ವಭಾವದ ಚಿಂತನ-ಮಂಥನವನ್ನು ದರ್ಶಿಸುತ್ತದೆ. ಮಾತ್ರವಲ್ಲ; ಜೀವನ ಸಂತೃಪ್ತಿಯನ್ನೇ ಪಣಕ್ಕಿಟ್ಟು ಪಡೆದಂತಿರುವ ಸಂಶೋಧನಾ ಶ್ರಮದ ಅಗಾಧತೆಯನ್ನು ತೋರುತ್ತದೆ. ಅದು ಕೃತಿಯ ವಿಶೇಷತೆಯಾಗಿಯೂ ಗಮನ ಸೆಳೆಯುತ್ತದೆ.

  1. ಪಂ. ತಾರಾನಾಥ ಕುರಿತು ಬರೆದ ಗ್ರಂಥಗಳಲ್ಲಿ ಕಾಣಸಿಗದ ಅಂಶಗಳು; ಅಪರೂಪದ ವ್ಯಕ್ತಿ, ಘಟನೆ, ಸನ್ನಿವೇಶಗಳು, ಮಹತ್ವದ ಕಾಗದ ಪತ್ರಗಳ ದಾಖಲೆಗಳು, ಅಪರೂಪದವೇ ಆದ ಫೋಟೋಗ್ರಾಫ್ ಗಳು. ವಿಶೇಷವಾಗಿ, 1933 ರಲ್ಲಿ ಫ್ರಾನ್ಸ್ ನಿಂದ ರಾಜರಾವ್ ಹಾಗೂ ಮೇಡಂ ಕೆಮಿ ಪ್ರೇಮಾಯತನ ತುಂಗಭದ್ರಾಕ್ಕೆ ತತ್ವಶಾಸ್ತ್ರ ಕಲಿಯಲು ಪಂ ತಾರಾನಾಥರನ್ನು ಭೇಟಿಯಾಗಿದ್ದು, ಹಾಗೂ ಮಹಾತ್ಮಾ ಗಾಂಧೀಜಿ ಯವರು ಪಂ ತಾರಾನಾಥರ 'ದೀನ ಬಂಧು ಕಬೀರ್ 'ನಾಟಕ ನೋಡಿದ ವಿಷಯವನ್ನು ತಮ್ಮ ಡೈರಿಯಲ್ಲಿ ಪೂರಕ ದಾಖಲೆಗಳೊಂದಿಗೆ ಬರೆದದ್ದು ಇತ್ಯಾದಿ.

  2. ವ್ಯಕ್ತಿಗತ, ಕೌಟುಂಬಿಕ ಹಾಗೂ ಜನಸೇವೆಯ ವೈವಿಧ್ಯಮಯ ವಿವರಗಳು

  3. ಇತ್ತ ನಿಜಾಮನ ಸರ್ಕಾರ- ಅತ್ತ ಬ್ರಿಟಿಷರ ವಿರುದ್ಧದ ಹೋರಾಟಗಳ ಚಿತ್ರಣ

  4. ಪಂ. ತಾರಾನಾಥರ ಗುರುಗಳ-ಒಡನಾಡಿಗಳ-ಶಿಷ್ಯರ ಅಪರೂಪದ ಮಾಹಿತಿ

  5. ಇಂದಿನ ಸಂಬಂಧಿಗಳ ಕಣ್ಣಲ್ಲಿ ಪಂ. ತಾರಾನಾಥರು.

  6. ಪುತ್ರ ವಿಶ್ವನಾಥ ಶಾಸ್ತ್ರಿ ಅವರೊಂದಿಗೆ ಲೇಖಕಿಯ ಸಂಶೋಧನಾಸಕ್ತಿಯ ಶ್ರಮ -ಕ್ಷೇತ್ರ ಕಾರ್ಯದ ವಿವರ

ಪಂ. ತಾರಾನಾಥರ ವ್ಯಕ್ತಿತ್ವ ವೈಶಾಲ್ಯತೆಯನ್ನು ಲೇಖಕಿಯು ಸೀಮಿತವಾದ ಐದು ಪ್ರಮುಖ ವಿಭಾಗಗಳಡಿ ಅಚ್ಚುಕಟ್ಟಾಗಿ ಜೋಡಿಸಿದ್ದಾರೆ. ಪಂ. ತಾರಾನಾಥರ ಸಂಪೂರ್ಣ ವಂಶಾವಳಿ, ಅವರ ಸ್ಥಾಪನೆಯ ಹಮ್ ದರ್ದ್ ಶಾಲೆ, ಪ್ರೇಮಾಯತನ ಸಂಸ್ಥೆ ಹಾಗೂ ಅವುಗಳ ಇಂದಿನ ಮಹತ್ವ, ಪ್ರೇಮ ಹಾಗೂ ಕಲಿಯುಗ ದಂತಹ ಪತ್ರಿಕೆಗಳು, ಅವು ಅಂದು ಬೀರಿದ ಪ್ರಭಾವ, ಸಂದರ್ಭಕ್ಕನುಸಾರವಾಗಿ ಛಾಯಾಚಿತ್ರಗಳೊಂದಿಗೆ ದೇಶ-ವಿದೇಶಿ ಗಣ್ಯರು ಪಂ. ತಾರಾನಾಥರ ವ್ಯಕ್ತಿತ್ವ ಪ್ರಶಂಸಿಸಿದ ಮಾತುಗಳು, ಮಹತ್ವದ ಸಭೆಯ ಚಿತ್ರಗಳು, ಪ್ರಕಟಿತ ಬರಹ ಹಾಗೂ ಕೈಬರಹ ಶೈಲಿಯ ಚಿತ್ರಗಳು… ಹೀಗೆ ಪ್ರತಿ ಪುಟವು, ಪಂ. ತಾರಾನಾಥರ ಬಗ್ಗೆ ಇರುವ ಲೇಖಕಿಯ ಸಂಶೋಧನಾಸಕ್ತಿಯನ್ನು ಸಾಂಕೇತಿಸುತ್ತದೆ. ಮಂಗಳೂರಿನಲ್ಲಿ ಅವರ ಜನನ ವೃತ್ತಾಂತದಿಂದ ಹಿಡಿದು, ಬೀದರ, ರಾಯಚೂರು, ಬಳ್ಳಾರಿಯೊಂದಿಗೆ ಸಂಪರ್ಕ, ಗ್ರಹಸ್ಥಾಶ್ರಮ ಪ್ರವೇಶ, ಸಾಹಿತ್ಯ ಕೃಷಿಯ ಪಕ್ಷಿನೋಟ.. ಹೀಗೆ ವಿವಿಧ ಉಪ ಅಧ್ಯಾಯಗಳ ಮೂಲಕ ಸಾವಿನ ಮುನ್ಸೂಚನೆ ಎಂಬ ಅಚ್ಚರಿಯ, ಕುತೂಹಲದ, ಗಂಭೀರತೆಯತ್ತ ಓದುಗರನ್ನು ಸೆಳೆಯುವ ಒಟ್ಟು ಕೃತಿಯು ಸಾಮಾನ್ಯನಂತೆ ಬದುಕಿ ಬಾಳಿದ ಅಸಾಮಾನ್ಯ ಪುರುಷರೊಬ್ಬರ ವ್ಯಕ್ತಿತ್ವದ ದಿವ್ಯತೆಯನ್ನು ದರ್ಶಿಸುತ್ತದೆ.

ಆಂತರ್ಯದ ಸೌಂದರ್ಯ ಅನಾವರಣ: ಸಾಧ್ಯವಿದ್ದ ಘಟನೆ, ಸನ್ನಿವೇಶಗಳ ಮೂಲಕ, ಬರಹ-ಉಪನ್ಯಾಸಗಳ ಮೂಲಕ, ವಿಚಾರ-ಭಾವ ಹಾಗೂ ವರ್ತನೆಗಳ ಮೂಲಕ ಲೇಖಕಿಯು ಪಂ. ತಾರಾನಾಥರ ಅಂತರಂಗದ ಸೌಂದರ್ಯವನ್ನು ಅನಾವರಣಗೊಳಿಸುತ್ತಲೇ ಹೋಗುತ್ತಾರೆ. ಘಟನೆ, ಸನ್ನಿವೇಶಗಳನ್ನು ವರದಿಯಂತೆ ಅಥವಾ ಗಣಿತದ ಮಾದರಿಯಂತೆ ಒಪ್ಪಿಸುವುದಿಲ್ಲ. ಹುಟ್ಟಲಿರುವ ಮಗುವಿನ ತಂದೆ ಯಾರು? ಎಂಬ ಗರ್ಭಿಣಿಯ ಪ್ರಶ್ನೆಗೆ ‘ತಾರಾನಾಥರದು ಎಂದು ಹೇಳು’ ‘ಎಂಬ ಉತ್ತರ ನೀಡಿದ ಘಟನೆ, ಅನಾರೋಗ್ಯದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಕ್ಷಯ ರೋಗಿಯನ್ನು ಪತ್ನಿಯಾಗಿ ಸ್ವೀಕರಿಸಿ, ಬದುಕು ನೀಡಿದ್ದು, ಬ್ರಹ್ಮಚರ್ಯ ಬೋಧಕ ತಾರಾನಾಥರ ಲಂಪಟತನ ಎಂಬ ಟೀಕೆಗೆ ಮನೋಸ್ಥೀಮಿತತೆ ಕಳೆದುಕೊಳ್ಳದ ಗಟ್ಟಿತನ, ವಿಶ್ವಧರ್ಮ ಸಮ್ಮೇಳನಕ್ಕೆ (1933) ಅಮೆರಿಕದಿಂದ ಆಹ್ವಾನ ಬಂದರೂ ಬಡರೋಗಿಗಳ ಸೇವೆಗಿಂತ ಅದು ಹೆಚ್ಚಲ್ಲ ಎಂದು ತಿಳಿಸುವ ವಿನಮ್ರತೆ, ನಿಜಾಮ ಸರ್ಕಾರ-ಬ್ರಿಟಿಷರು ಹೀಗೆ ಅಡಕೊತ್ತಿನಲ್ಲಿ ಸಿಕ್ಕ ಅಡಕೆಯಂತಿರುವ ಸ್ಥಿತಿ ಮಧ್ಯೆಯೂ ರಾಯಚೂರಿನಲ್ಲಿ ಹಮ್ ದರ್ದ್ ಶಾಲೆಯ ಸ್ಥಾಪನೆ, ಈ ಎರಡೂ ಆಡಳಿತಗಳ ವಿರುದ್ಧ ದಿಟ್ಟತನದ ಬರಹಗಳು, ಉಪನ್ಯಾಸಗಳು, ಎಲ್ಲಕ್ಕಿಂತ ಹೆಚ್ಚಾಗಿ, ಪಂ. ತಾರಾನಾಥರ ಕುರಿತು ದೇಶ-ವಿದೇಶಿ ಗಣ್ಯರ ಅಭಿಪ್ರಾಯಗಳು, ಪಂ. ತಾರಾನಾಥರದ್ದೇ ಆದ ಉಜ್ವಲ (ಉಕ್ತಿ) ವಿಚಾರಗಳು ಹೀಗೆ. ಈ ಕೃತಿಯ ಉದ್ದೇಶ, ಪಂ. ತಾರಾನಾಥರ ಬದುಕನ್ನು ಚಿತ್ರಿಸುವುದಷ್ಟೇ ಅಲ್ಲ; ಸಂಶೋಧನೆಯ ಬೆಳಕಿನಲ್ಲಿ ವಿಚಾರಗಳ ಎತ್ತರವನ್ನು ದರ್ಶಿಸುವುದು ಆಗಿದೆ. .ದೇಶದ ಸ್ವಾತಂತ್ಯ್ರದ ಅಮೃತ (75ನೇ ವರ್ಷ) ಮಹೋತ್ಸವಕ್ಕೆ ಲೇಖಕಿಯು ಕನ್ನಡ ಸಾಹಿತ್ಯಕ್ಕೆ ನೀಡಿದ ಅಮೂಲ್ಯ ಕೊಡುಗೆಯ ಕೃತಿ ಇದು.

(ಪುಟ: 370, ಬೆಲೆ: 350 ರೂ, ವಿಶ್ವ ಪ್ರಕಾಶನ, ಬೆಂಗಳೂರು, 2021)

MORE FEATURES

ಅಪಾರ ಅನುಭವ ಮತ್ತು ಅಧ್ಯಯನದ ಸಂಗಮ ಈ ಕೃತಿ

07-05-2024 ಬೆಂಗಳೂರು

"ಅಪಾರ ಅನುಭವ ಮತ್ತು ಅಧ್ಯಯನದ ಸಂಗಮವಾದ ಈ ಕೃತಿ ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಅದರಲ್ಲೂ ಪ್ರಮುಖವಾಗಿ...

ಕನ್ನಡ ಸಾಹಿತ್ಯ ಅಗೆದಷ್ಟೂ ಆಳವಾಗುತ್ತಲೇ ಹೋಗುತ್ತದೆ; ಕಮಲ ಹಂಪನಾ

07-05-2024 ಬೆಂಗಳೂರು

‘ಕನ್ನಡದ ಕಾಯಕಕ್ಕೆ ಕೈಹಾಕಿ ಕೈಲಾದಷ್ಟು ಸಾಹಿತ್ಯ ಕೃಷಿ ಮೊಗೆದು ಸಾರ್ಥಕತೆಯನ್ನು ಪಡೆದಿದ್ದಾರೆ. ಸಾಹಿತ್ಯ ಕೃಷಿಯ...

ಬಣ್ಣಗಳ ಮಧ್ಯೆ 'ಪ್ರೀತಿ' ಹುಡುಕುವ ಮನಸ್ಥಿತಿ: ಆಮಿರ್ ಬನ್ನೂರು ಅವರ ಬ್ಯಾರಿ ಭಾಷೆಯ ಕವಿತೆ

07-05-2024 ಬೆಂಗಳೂರು

"'ಕಪ್ಪು ವರ್ಣಿಯ' ಎನ್ನುವ ಕಾರಣಕ್ಕಾಗಿ, ಕೆಳ ಜಾತಿಯ ಎನ್ನುವ ಕಾರಣಕ್ಕಾಗಿ, ನಿಂದನೆ ಮಾಡುವ ಜನಾಂಗದ ಬಾಯ...