ಶಾಪಗ್ರಸ್ತ ಗಂಧರ್ವ, ಈಗ ನಾತಿಚರಾಮಿ...


"ಅವನಿಗೂ ಮನಸ್ಸಿದೆ, ಇಚ್ಛೆ ಇದೆ, ಎಲ್ಲರಿಗೋಸ್ಕರ ಒದ್ದಾಡುತ್ತಾನೆ ಅನ್ನುವುದು ಒಂದು ಸಂಸಾರದಲ್ಲಿ ಮುಖ್ಯವಾಗಿ ಹೆಣ್ಣಿನ ಮನಸ್ಸಿಗೆ ಬಂದಾಗ ಅವಳು ಅವನಿಗೆ ಜೊತೆಯಾಗಿ ನಿಲ್ಲುತ್ತಾಳೆ ಹಾಗೂ ಅವನ ಪ್ರಾಮುಖ್ಯತೆಯನ್ನು ಮನಗಾಣುತ್ತಾಳೆ. ಇದು ಆಗದೆ ಇದ್ದಾಗ ಮಾತ್ರ ಅವನು ಹೇಗೆ ಮೂಲೆಗುಂಪಾಗುತ್ತಾನೆ ಅನ್ನುವುದನ್ನು ಮನದಟ್ಟಾಗಿಸುವ ಒಂದು ಬರಹ," ಎನ್ನುತ್ತಾರೆ ನಯನ ಬಜಕೂಡ್ಲು. ಅವರು ಸಂತೋಷ್ ಕುಮಾರ್ ಮೆಹಂದಳೆ ಅವರ ‘ನಾತಿಚರಾಮಿ..’ ಕೃತಿ ಕುರಿತು ಬರೆದ ವಿಮರ್ಶೆ.

"ಯಾವ ಪ್ರೀತಿಯೂ ಅನೈತಿಕವಲ್ಲ, ಶಾಪಗ್ರಸ್ತ ಗಂಧರ್ವ, ಈಗ ನಾತಿಚರಾಮಿ. ಗಂಡು ಹೆಣ್ಣು ಎಂಬ ಭೇದವಿಲ್ಲದೆ ಈ ಎಲ್ಲ ಪುಸ್ತಕಗಳಲ್ಲಿ ಇಬ್ಬರ ಭಾವನೆಗಳಿಗೂ ಮಹತ್ವ ನೀಡಲಾಗಿದೆ, ಭಾವನೆಗಳು ಅನಾವರಣಗೊಂಡಿದೆ. ಮನಸೆಂಬ ಕುಲುಮೆಯಲ್ಲಿ ಬೇಯುವ ಭಾವನೆಗಳ ಹದ ಒಂದೇ ತರನಾಗಿರುವುದಿಲ್ಲ, ವಿಭಿನ್ನವಾಗಿರುತ್ತದೆ. ಅವುಗಳನ್ನು ಹೊರ ಹಾಕುವ ರೀತಿಯೂ. ಎಲ್ಲವನ್ನು ಇಲ್ಲಿ ಕಟ್ಟಿ ಹಾಕುವ ಸೂತ್ರ ಒಂದೇ ಹೊಂದಾಣಿಕೆ.

ಸಂಸಾರದ ಬಂಡಿ ಅದರ ಎರಡೂ ಗಾಲಿಗಳು ಜೊತೆಯಾಗಿ ತಿರುಗಿದಾಗ ಮಾತ್ರ ಮುಂದೆ ಹೋಗಲು ಸಾಧ್ಯ. ಒಂದು ಗಾಲಿಯನ್ನಿಟ್ಟುಕೊಂಡು ಈ ಬಂಡಿಯನ್ನು ಎಳೆಯಲಾಗುವುದಿಲ್ಲ. ಎಳೆಯ ಹೊರಟರೂ ಉರುಳಿ ಬೀಳುವ ಭಯ. ಹೆಣ್ಣು ಅನೇಕ ಕಾರಣಗಳಿಂದ ಈ ಸಮಾಜದಲ್ಲಿ ಶ್ರೇಷ್ಠಳೆ. ಆದರೆ ಎಷ್ಟೇ ಜೀವ ತೇಯ್ದರು ಕಾಣದೇ ಇರುವುದು ಗಂಡಿನ ತ್ಯಾಗ, ಕೆಲಸ ಮಾತ್ರ. ಅವನಿಗೂ ಮನಸ್ಸಿದೆ, ಇಚ್ಛೆ ಇದೆ, ಎಲ್ಲರಿಗೋಸ್ಕರ ಒದ್ದಾಡುತ್ತಾನೆ ಅನ್ನುವುದು ಒಂದು ಸಂಸಾರದಲ್ಲಿ ಮುಖ್ಯವಾಗಿ ಹೆಣ್ಣಿನ ಮನಸ್ಸಿಗೆ ಬಂದಾಗ ಅವಳು ಅವನಿಗೆ ಜೊತೆಯಾಗಿ ನಿಲ್ಲುತ್ತಾಳೆ ಹಾಗೂ ಅವನ ಪ್ರಾಮುಖ್ಯತೆಯನ್ನು ಮನಗಾಣುತ್ತಾಳೆ. ಇದು ಆಗದೆ ಇದ್ದಾಗ ಮಾತ್ರ ಅವನು ಹೇಗೆ ಮೂಲೆಗುಂಪಾಗುತ್ತಾನೆ ಅನ್ನುವುದನ್ನು ಮನದಟ್ಟಾಗಿಸುವ ಒಂದು ಬರಹ.

ಒಂದು ಮನೆ, ಮನೆಗೆಲಸಗಳನ್ನು ನಿಭಾಯಿಸುವುದು ಸುಲಭದ ಮಾತಲ್ಲ. ಇಲ್ಲಿ ಸಾಕಷ್ಟು ಸಂಯಮ, ತಾಳ್ಮೆ ಇರಬೇಕಾಗುತ್ತದೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ತನ್ನ ಸಮಯ, ಸಂಯಮವನ್ನು ಮನೆಗಾಗಿ, ಮನೆಯವರಿಗಾಗಿ ಸವೆಸುವ ಹೆಣ್ಣಿನ ದುಡಿಮೆಗೆ ಬೆಲೆ ಕಟ್ಟಲಾಗದು ಅನ್ನುವ ಸತ್ಯ ಇಲ್ಲಿ ಅನಾವರಣಗೊಂಡಿದೆ. ಮನೆ, ಸಂಸಾರವನ್ನು ನಿಭಾಯಿಸುವುದರ ಜೊತೆಗೆ ಹೊರಗೆ ಹೋಗಿ ದುಡಿಯುವ ಹೆಣ್ಣು ಮಕ್ಕಳೂ ಇದ್ದಾರೆ. ಒಂದು ದಿನದ ಮಟ್ಟಿಗೆ ಮನೆಯ ಜವಾಬ್ದಾರಿಯನ್ನು ಗಂಡಿನ ಕೈಗೆ ವರ್ಗಾಯಿಸಿದರೆ ಒಮ್ಮೆ ಅದರಿಂದ ಮುಕ್ತಿ ಪಡೆಯುವದನ್ನೇ ಅವನು ಕಾಯುತ್ತಾನೆ. ಹೆಣ್ಣಿನಷ್ಟು ಅಚ್ಚುಕಟ್ಟಾಗಿ ಮನೆ, ಮನೆಗೆಲಸಗಳನ್ನು ನಿಭಾಯಿಸುವುದು ಗಂಡಿನಿಂದ ಅಸಾಧ್ಯ ಅನ್ನುವುದು ಎಲ್ಲರೂ ಅರಿತಿರುವ ಸತ್ಯ. ದುರಂತವೆಂದರೆ ಎಲ್ಲವನ್ನು ನಿಭಾಯಿಸುವ ಜೀವಕ್ಕೆ ಮನಸ್ಸಿಗೆ ಮುದ ನೀಡುವ ಒಂದೆರಡು ಶ್ಲಾಘನೆಯ ಮಾತುಗಳನ್ನು ಆಡಲೂ ನಮ್ಮಲ್ಲಿ ಪದಗಳಿಗೆ ಬರ.

ಪುರುಷ ಮೌನಕ್ಕೆ ಜಾರ ತೊಡಗಿದಾಗ ಅವನನ್ನು ಆ ಸ್ಥಿತಿಯಲ್ಲಿ ಕಳೆದು ಹೋಗಲು ಬಿಡದೆ ಅವನ ಮನಸ್ಸನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಿದಾಗ ಅವನು ಹೆಣ್ಣಿನ ಭಾವನೆಗಳಿಗೂ ಬೆಲೆ ಕೊಡಲು, ಅವಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ಅದಲ್ಲದೆ ಅವನನ್ನು ಅವನ ಪಾಡಿಗೆ ಬಿಡುತ್ತಾ ಹೋದಾಗ ಸಂಬಂಧಗಳ ನಡುವೆ ಒಂದು ಅಂತರ ಸೃಷ್ಟಿಯಾಗುತ್ತಾ ಹೋಗುತ್ತದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಎಲ್ಲೆಡೆ ಕಂಡು ಬರುವ ಒಂದು ಸಾಮಾನ್ಯ ಸಮಸ್ಯೆ ಆದರೆ ಬಹಳ ಅಪಾಯಕಾರಿ. ಬದುಕು ಸುಂದರವಾಗಲು ಜೊತೆಯವರ ಮನಸ್ಸು, ಆ ಮನಸಿನೊಳಗಿನ ತಳಮಳ, ಉದ್ವೇಗ, ವಿಚಾರಧಾರೆಗಳನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಹೀಗಾಗದೆ ಹೋದಾಗ ಬದುಕು ಹಳಿ ತಪ್ಪಿ ಹೋಗುವ, ಹತಾಶೆ ಆವರಿಸಿಕೊಳ್ಳುವ ಸಂಭವವೇ ಜಾಸ್ತಿ.

ಫೇಸ್ಬುಕ್ ಎಂಬ ಮಾಯಾಲೋಕದೊಳಗೆ ಪರಿಚಯ ಮಾಡಿಕೊಂಡು ಹಂತ ಹಂತವಾಗಿ ಮೋಸದ ಜಾಲ ಹೆಣೆಯುವ ಕೆಲವು ಮಹಿಳಾ ಮಣಿಗಳ ಕತೆ. ಇಂತಹ ಮೋಸದ ಬಲೆ ಬೀಸುವುದರಲ್ಲಿ ಕೆಲವು ಗಂಡಸರು ಕೂಡ ಎತ್ತಿದ ಕೈ ಅನ್ನುವುದು ಬೇರೆ ವಿಚಾರ, ಆದರೆ ಹೆಣ್ಣೊಬ್ಬಳು ಬೀಸುವ ಮೋಸದ ಜಾಲದಷ್ಟು ಶಕ್ತಿಯುತವಾದದ್ದು ಬೇರೊಂದಿಲ್ಲ. ಇಲ್ಲಿ ಬಳಸಲ್ಪಡುವ ಅಸ್ತ್ರವೇ ಆತ್ಮ ಗೌರವ, ಮಾನ, ಮರ್ಯಾದೆ, ಹಾಗೂ ತೇಜೋವಧೆ ಮಾಡುವ ಬೆದರಿಕೆ. ಗಂಡಿನ ಚಂಚಲ ಮನಸ್ಸು ಹೆಣ್ಣಿನ ವಿಚಾರದಲ್ಲಿ ಸ್ವಲ್ಪ ಕದಲಿದರು ಸಾಕು ಅವನು ಆಕೆಯ ಆಟದ ದಾಳವಾಗುತ್ತಾನೆ. ಇದರಿಂದ ಹೊರ ಬರಲಾಗದೆ ಜೀವ ಕಳೆದುಕೊಂಡವರು ಅದೆಷ್ಟೋ ಮಂದಿ. ಸಾಮಾಜಿಕ ಜಾಲತಾಣವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡರೆ ಉತ್ತಮ ಅಭಿರುಚಿ ಹೊಂದಿರುವ ಮಂದಿಯ ಸ್ನೇಹ,, ಪರಿಚಯವಾಗುತ್ತದೆ. ಇದೊಂದು ಬದುಕಿನಲ್ಲಿ ಉತ್ತಮ ಬೆಳವಣಿಗೆ ಎನ್ನಬಹುದು. ಕೆಲವರು ತಮ್ಮ ಸ್ವಾರ್ಥಕ್ಕಾಗಿಯೇ ಬೇರೆಯವರ ಬದುಕನ್ನು ಸರ್ವನಾಶ ಮಾಡುವ ಗುರಿ ಹೊಂದಿರುತ್ತಾರೆ, ಇಂತಹವರಿಂದ ಎಚ್ಚರದಿಂದಿರಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ಆಗುವ ಪರಿಚಯ ಯಾವತ್ತಿದ್ದರೂ ತಾತ್ಕಾಲಿಕ. ಅಲ್ಲಿ ಮುಖತಃ ಭೇಟಿಯಾಗದೆಯೇ ಎಲ್ಲವನ್ನು ದೋಚುವ ಅಪಾಯಕಾರಿ ಮಂದಿ ಬಹಳ. ಇಂಥವರ ಕುರಿತು ಎಚ್ಚರ, ಎಚ್ಚರಿಕೆ, ಜಾಗೃತಿ, ಸದಾ ಇದನ್ನು ಬಳಸುವವರಲ್ಲಿ ಇದ್ದರೆ ಬದುಕಿದಂತೆ, ಇಲ್ಲದಿದ್ದರೆ ಅವರ ಬಾಳು ನರಕ ಸದೃಶ. ಇಲ್ಲಿ ವಿವೇಚನೆಯನ್ನು ಮರೆತು ನಡೆಯುವ ಸ್ಪಂದನೆಯೇ ಹೆಚ್ಚು, ಎಚ್ಚರಗೊಂಡಾಗ ಎಲ್ಲವೂ ಮುಗಿದಿರುತ್ತದೆ.

ಸಂಬಂಧಗಳ ನಡುವೆ ನಂಬಿಕೆ ಅನ್ನುವುದು ಇಲ್ಲದೆ ಹೋದಾಗ ಅದು ಎಷ್ಟೇ ಸರಿ ಹೊಂದಿಸಿಕೊಂಡು ಸಾಗುತ್ತೇವೆ ಅಂದರು ಆ ಸಂಬಂಧ ಗಟ್ಟಿಯಾಗುವುದಿಲ್ಲ. ಮತ್ತೆ ಮತ್ತೆ ಅದು ಕಡಿಯುತ್ತಲೇ ಇರುತ್ತದೆ. ಯಾವುದೇ ಸಂಬಂಧ ಇರಬಹುದು ಬಾಂದವ್ಯದ ತಂತು ಬೆಸೆಯುವುದು ನಂಬಿಕೆ, ಹೊಂದಾಣಿಕೆ ಇದ್ದಾಗ ಮಾತ್ರ. ಇಲ್ಲಿ ನಾನು ಎಂಬ ಅಹಂನ ತೆಳು ಪರದೆಯೂ ಶತ್ರುವೆ. ಬಾಗಲು, ಹೊಂದಿಕೊಳ್ಳಲು ಕಲಿತಾಗಲ್ಲಷ್ಟೇ ಇಲ್ಲಿ ಬದುಕು. ಇದು ಕೇವಲ ಒಂದು ಕಡೆ ಮಾತ್ರವಲ್ಲ ಎರಡೂ ಕಡೆಯಿಂದ ಆಗಬೇಕು.

ಫೇಸ್ಬುಕ್, ಮೆಸೆಂಜರ್ ಗಳೆಂಬ ಫೇಕು ಲೋಕದಲ್ಲಿ ಎಲ್ಲರೂ ಒಳ್ಳೆಯವರೇ. ಇಲ್ಲಿ ಮುಖವಾಡಗಳು ಕಳಚುವುದೇ ಇಲ್ಲ. ಅಸಲಿ ಬಣ್ಣ ವ್ಯಕ್ತವಾಗುವುದೇ ಇಲ್ಲ. ವಿನಯವಂತಿಕೆ, ಸೌಮ್ಯತೆ ತುಂಬಿ ತುಳುಕಾಡುವ ಕಥೆಯನ್ನು ಹೇಳುವ ಖಡಕ್ ಲೇಖನ, ಇವತ್ತಿನ ವಾಸ್ತವವನ್ನು ಹಂತ ಹಂತವಾಗಿ ಬಿಚ್ಚಿಡುವ ಲೇಖನ. ಒಳ್ಳೆಯತನದ ಸೋಗು ಹಾಕಿ ಮನೆ ಮನಸುಗಳನ್ನು ಮುರಿಯುವ ಹಂತಕರು ಇಲ್ಲಿ ಧಾರಾಳವಾಗಿ ಸಿಗುತ್ತಾರೆ. ಎಚ್ಚೆತ್ತುಕೊಂಡವರು ಬದುಕುತ್ತಾರೆ, ಅವರ ಜಾಲಕ್ಕೆ ಸಿಲುಕಿದವರ ಪಾಡು ಮಾತ್ರ ಆ ದೇವರಿಗೆ ಪ್ರೀತಿ. ಸಾಮಾಜಿಕ ಜಾಲತಾಣದಲ್ಲಿ ಸಿಗುವ ಸ್ನೇಹಿತರು ಮನೆ ಮಂದಿಗಿಂತಲೂ ಆಪ್ತರಾಗುವುದೇ ವಿಶೇಷ. ಮನೆ ಮಂದಿಯೊಡನೆ ಮುಖ ಕೊಟ್ಟು ಮಾತನಾಡದಿದ್ದರೂ ಪರ್ವಾಗಿಲ್ಲ ಸೋಶಿಯಲ್ ಮೀಡಿಯಾದಲ್ಲಿ ಸ್ನೇಹದ ಹೆಸರಲ್ಲಿ ಸಿಗುವ ಮಂದಿಯೊಡನೆ ಎಲ್ಲಾ ಗುಟ್ಟುಗಳನ್ನು ಹಿಂದೆ ಮುಂದೆ ನೋಡದೆ ಬಿಚ್ಚಿಡುತ್ತಾರೆ ಜನ. ಅಷ್ಟು ವಿವೇಚನಾ ಹೀನರನ್ನಾಗಿಸುವಂತಹ ಮಾಯಾಜಾಲವಿದೆ ಅದರಲ್ಲಿ. ಇಲ್ಲಿ ಮಂದಿ ಕಳೆದುಕೊಳ್ಳುವುದು ಕೇವಲ ಮಾನಸಿಕ ನೆಮ್ಮದಿ, ಹಣ ಮಾತ್ರವಲ್ಲ ಬಹಳಷ್ಟು ಬಾರಿ ಮಾನವನ್ನು ಕೂಡ. ಎಲ್ಲವೂ ಇತಿಮಿತಿಯಲ್ಲಿ ಇದ್ದರಷ್ಟೇ ಚಂದ, ಅತಿಯಾದರೆ ಎಲ್ಲವನ್ನು ಕಳೆದುಕೊಂಡು ಪಶ್ಚಾತಾಪ ಪಡುವ ಪರಿಸ್ಥಿತಿ.

ಬಟ್ಟೆ ಮುಳ್ಳಿನ ಮೇಲೆ ಬಿದ್ದರೂ, ಮುಳ್ಳು ಬಟ್ಟೆಯ ಮೇಲೆ ಬಿದ್ದರೂ ಹರಿಯುವುದು ಬಟ್ಟೆಯೆ ಎನ್ನುವ ಮಾತು ಹಲವಾರು ಹೆಣ್ಣು ಮಕ್ಕಳ ಬದುಕಿಗೆ ಅನ್ವಯವಾದದ್ದಿದೆ. ಇಲ್ಲಿ ಹೆಣ್ಣಿನ ಯಾವ ತಪ್ಪು ಇಲ್ಲದೆ ಗಂಡಿನ ದಬ್ಬಾಳಿಕೆ,ಒತ್ತಾಯ ಅಥವಾ ಇನ್ನಾವುದೇ ರೀತಿಯ ಶೋಷಣೆಗೆ ಒಳಪಟ್ಟರೂ ದೂಷಣೆಗೆ ಒಳಪಡುವವಳು ಹೆಣ್ಣೆ. ಗಂಡು ಏನೇ ಮಾಡಿದರು ಅವನು ಗಂಡಸು ಅನ್ನುವ ಬೆಂಬಲದಡಿ ನುಣುಚಿಕೊಳ್ಳುತ್ತಾನೆ ಅನ್ನವ ಅಂಶಗಳನ್ನು ಒಳಗೊಂಡ ಲೇಖನದ ಹಿಂದೆಯೇ ಇವತ್ತು ಗಂಡು ಕೂಡ ಹೆಣ್ಣಿನ ಅಹಂ,ಶೋಕಿ, ಲಾಲಸೆ, ಲೋಭತನದ ಮುಂದೆ ಹೇಗೆ ತನ್ನ ತಪ್ಪಿಲ್ಲದೆ ಎಲ್ಲವನ್ನು ಕಳೆದುಕೊಳ್ಳುತ್ತಾನೆ ಅನ್ನುವುದರ ಮೇಲೆ ಬೆಳಕು ಚೆಲ್ಲುವ ಬರಹ. ಇಲ್ಲಿರುವ ಪ್ರತಿಯೊಂದು ಬರಹವು ಇಂದಿನ ವಾಸ್ತವವೇ. ಹೆಣ್ಣು ಗಂಡು ಇಬ್ಬರೂ ಬೇರೆ ಬೇರೆ ರೀತಿಗಳಲ್ಲಿ ಇಲ್ಲಿ ಬವಣೆಯನ್ನು ಅನುಭವಿಸುತ್ತಿದ್ದಾರೆ.

ಕೆಲವೊಂದು ಲೇಖನಗಳನ್ನು ಓದುವಾಗ ಇಷ್ಟೊಂದು ಮುಕ್ತವಾಗಿ, ಬಿಂದಾಸ್ ಆಗಿ ಬರೆದಿದ್ದಾರಲ್ಲ ಅನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಅದಕ್ಕೆಲ್ಲ ಸ್ಪಷ್ಟ ಹಾಗೂ ನೇರವಾದ ಉತ್ತರವನ್ನು, ಬದುಕಿನ ವಾಸ್ತವವನ್ನು ಉಪಸಂಹಾರದಲ್ಲಿ ನೀಡಿದ್ದಾರೆ, ತೆರೆದಿಟ್ಟಿದ್ದಾರೆ ಲೇಖಕರು. ಇಲ್ಲಿರುವ ಸ್ಪಷ್ಟಿಕರಣ ಖಂಡಿತ ಒಪ್ಪಿತವಾಗುವಂತದ್ದು ಹಾಗೂ ಚಾಟಿಯಲ್ಲಿ ಬೀಸಿ ಹೊಡೆದಂತಹ ಅನುಭವ ನೀಡದೇ ಇರದು ಕೆಲವರಿಗಾದರು.

ಬದುಕಿನಲ್ಲಿ ಬರುವ ಪ್ರೀತಿ ಪ್ರೇಮಗಳ ಬಣ್ಣ ಮನದಾಗಸವನ್ನು ಸಿಂಗರಿಸಿದರೆ, ಕ್ರೌರ್ಯ, ಸಿಟ್ಟು, ಸೆಡವು, ಗಂಡು ಹೆಣ್ಣು ಪರಸ್ಪರ ತೋರುವ ಅಸಡ್ಡೆತನ, ಮಾಡುವ ಅವಮಾನ ಎಲ್ಲಾ ಬಣ್ಣಗಳನ್ನು ಚೆಲ್ಲಪಿಲ್ಲಿ ಆಗಿಸಿ ದಿಗಿಲು ಮೂಡಿಸುತ್ತದೆ. ಪ್ರೀತಿಯಲ್ಲಿ ಬಂಧಿಸುವ ಗುಣವಿದ್ದರೆ, ಇನ್ನೊಬ್ಬರನ್ನು ಕೇವಲವಾಗಿ ನೋಡುವ ಗುಣ ದ್ವೇಷವನ್ನು ಹುಟ್ಟು ಹಾಕಿ ಮನಸುಗಳನ್ನು ವಿಕಾರಗೊಳಿಸುತ್ತದೆ. ಜಗತ್ತು ಹೇಗೆಲ್ಲಾ ಸಾಗುತ್ತಿದೆ ಅನ್ನುವ ಕಥೆಗಳನ್ನು ಅಕ್ಷರ ಮಾಂತ್ರಿಕ ಸಂತೋಷ್ ಕುಮಾರ್ ಮೆಹೆಂದಳೆಯವರು ನಮ್ಮ ಮುಂದೆ "ನಾತಿಚರಾಮಿ" ಯ ರೂಪದಲ್ಲಿ ತೆರೆದಿಟ್ಟಿದ್ದಾರೆ.

- ನಯನ ಬಜಕೂಡ್ಲು

MORE FEATURES

ಮನ ತಟ್ಟಿದ ಕೃತಿ ‘ಹಿಮಾಲಯನ್ ಬ್ಲಂಡರ್’ 

05-05-2024 ಬೆಂಗಳೂರು

"ಪುಸ್ತಕ ಓದುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲೊಂದು. ಇದುವರೆಗೂ ಕುವೆಂಪು, ತೇಜಸ್ವಿ, ಭೈರಪ್ಪ ಸೇರಿದಂತೆ ಹಲವರ ಕ...

ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ದನದ ಹಾಗೆ

04-05-2024 ಬೆಂಗಳೂರು

'ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ...

ಕನ್ನಡದ ಮುನ್ನೋಟ ಎಂಬುದು ನುಡಿ ಬೆಳವಣಿಗೆಯನ್ನು ಕುರಿತ ಸಂಕಥನವಾಗಿದೆ

04-05-2024 ಬೆಂಗಳೂರು

‘ಕನ್ನಡ ನುಡಿ ಬೆಳವಣಿಗೆಯನ್ನು ಕುರಿತು ಮಾತನಾಡುವುದೆಂದರೆ ಅದು ನುಡಿ ನೀತಿ ಮತ್ತು ಯೋಜನೆಯ ನಿಲುವುಗಳನ್ನು ಹೊರತು...