ಅನುಬಂಧಗಳ ಲೀಲೆ

Date: 25-01-2022

Location: ಬೆಂಗಳೂರು


‘ಮುತ್ತಾನ ಜೀವನ ನನ್ನ ಮಟ್ಟಿಗೆ ನಿಜಕ್ಕೂ ಅಚ್ಚರಿ ತರಿಸುವಂಥಾದ್ದು. ಅವಳ ಪ್ರತಿ ನಡೆಯಲ್ಲೂ ನನಗೆ ನಿಗೂಢತೆ ಕಾಣುತ್ತಿತ್ತು. ಕೆಲವೊಮ್ಮೆ ಅವಳ ಮಾತುಗಳು, ನಡಾವಳಿ ಸಂದರ್ಭವನ್ನು ಮೀರಿ ಇರುತ್ತಿತ್ತು’ ಎನ್ನುತ್ತಾರೆ ಲೇಖಕಿ ಪಿ. ಚಂದ್ರಿಕಾ. ಅವರ ‘ತೇಲುವ ಪಾದಗಳು’ ಅಂಕಣದಲ್ಲಿ ತಮ್ಮ ಬಾಲ್ಯದ ಕತೆಗಳಲ್ಲಿ ಅಚ್ಚರಿಯಾಗುಳಿದ ಅಜ್ಜಿ ಹಾಗೂ ಆಕೆಯ ಅನುಬಂಧಗಳ ಲೀಲೆಯ ಕುರಿತು ಬರೆದಿದ್ದಾರೆ. 

ರಾಮುಡು ಮತ್ತು ಮುತ್ತಾಳ ನಡುವಣ ಬಾಂಧವ್ಯಕ್ಕೆ ಕಾರಣ ಇವತ್ತು ನೆನ್ನೆಯದಲ್ಲ. ಈ ಕಥೆ ಮಾತ್ರ ಊರಿನ ಎಲ್ಲರೂ ಹೇಳುತ್ತಿದ್ದರು. ಅದನ್ನ ಅವರೇ ನೋಡಿದ್ದರೋ ಕೇಳಿದ್ದನ್ನು ರಸವತ್ತಾಗಿ ಹೇಳುತ್ತಿದ್ದರೋ ಕಾಣೆ. ನನಗೆ ಸ್ವಲ್ಪ ಬುದ್ಧಿ ಬರುವಾಗ ಕೇಳಿದ ಈ ಕಥೆ ಮಾತ್ರ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿತ್ತು. 

ಮುತ್ತಾ ಮಾದುವೆಯಾಗಿ ಬಂದಾಗ ಹತ್ತರ ಹುಡುಗಿಯಾದರೆ ರಾಮುಡು ಕಂಕುಳ ಕೂಸಂತೆ. ಹಾಲು ಕುಡಿಯುವ ಕಂದಮ್ಮನನ್ನು ಅವನ ತಾಯಿ ಮುತ್ಯಾಲಮ್ಮ ಹಜಾರದಲ್ಲಿ ಮಲಗಿಸಿ ಹಿತ್ತಲಲ್ಲಿ ಪಾತ್ರೆ ತೊಳೆಯಲಿಕ್ಕೆ ಹೋಗುತ್ತಿದ್ದಳಂತೆ. ಹತ್ತರ ಹುಡುಗಿ ಮುತ್ತಾಗೆ ಎಲ್ಲವೂ ಹೊಸತೇ. ಆ ಮಗುವನ್ನೇ ತದೇಕ ನೋಡುತ್ತಾ ಕುಳಿತು ಬಿಟ್ಟಿರುತ್ತಿದ್ದಳಂತೆ. ಅಳು ನಗು ಎಲ್ಲವೂ ಅವಳಿಗೆ ವಿಸ್ಮಯವೇ. ‘ಮಗುವನ್ನು ಹಾಗೆಲ್ಲಾ ನೋಡಬೇಡ ದೃಷ್ಟಿ ಆಗುತ್ತೆ’ ಎಂದರೂ ಕೇಳುತ್ತಿರಲಿಲ್ಲವಂತೆ. ಮುತ್ತಾನ ಅತ್ತೆ ಮುತ್ಯಾಲಮ್ಮನನ್ನು ಕರೆದು, ‘ನೋಡು ಮಗೂನ ಯಾರ ಹತ್ತಿರವಾದರೂ ಬಿಟ್ಟು ಬಾ ಇಲ್ಲದಿದ್ರೆ ರುಕ್ಮಿಣಿಯ ದೃಷ್ಟಿಯೇ ತಗುಲಿ ಬಿಡುತ್ತೆ. ಎಷ್ಟು ಹೇಳಿದರೂ ಅವಳದ್ದು ನೆಟ್ಟ ನೋಟ. ಅವಳು ಸಣ್ಣವಳೇ, ಅರಿಯದ ವಯಸ್ಸೇ ನಿಜ, ನಾಳೆ ಮಗೂಗೆ ಆದ್ರೆ ನೋಡುವವರು ಯಾರು?’ ಎಂದಿದ್ದರಂತೆ. ನಾಕು ದಿನ ಮಗೂನ ಆಕೆ ಕೆಲಸಕ್ಕೆ ಬರುವಾಗ ಜೋಲಿಯಲ್ಲೇ ಮಲಗಿಸಿ ತನ್ನ ಹಿರಿಯ ಮಗಳಿಗೆ ನೋಡಿಕೊಳ್ಳಲು ಹೇಳಿ ಬಂದಿದ್ದಳಂತೆ. ಮಗು ಎಲ್ಲಿ ಏನು ಎಂದೆಲ್ಲಾ ಕೇಳದ ಮುತ್ತಾ, ಟಮಗೂಗೆ ಹುಷಾರಿಲ್ಲ ಅಂದ್ರೆ ನನ್ನ ಹತ್ತಿರ ಕರೆದುಕೊಂಡು ಬಾ. ಇಲ್ಲಾಂದ್ರೆ ವಾಸಿಯಾಗಲ್ಲ’ ಎಂದಿದ್ದಳಂತೆ. ಅವಳ ಮಾತನ್ನ ಕೇಳಿ ಅವಳ  ಅತ್ತೆ ಕೋಲಿನಿಂದ ಸರಿಯಾಗಿ ಬಾರಿಸಿ ‘ಸಣ್ಣ ಹುಡುಗಿ ಅಂದುಕೊಂಡಿದ್ದೆ, ಉಢಾಳತನ ದಿನಾ ದಿನಾ ಜಾಸ್ತಿಯಾಗ್ತ ಇದೆ. ಏನಿದು ನಿನ್ನ ಅವತಾರ?’ ಎಂದು ಬೈದಿದ್ದಳಂತೆ. ಮುತ್ತಾ ಅಳದೆ, ಬೇಸರಿಸಿಕೊಳ್ಳದೆ, ಮೂಲೆಯಲ್ಲಿ ಕೂತು, ‘ನನಗೆ ಕಂಡಿದ್ದನ್ನ ಹೇಳಿದೆ. ಅವನಿಗೆ ಇನ್ನು ಮೂರುದಿನಗಳಲ್ಲಿ ಹುಷಾರಿಲ್ಲದ ಹಾಗಾಗುತ್ತೆ. ಅದು ಅವನ ಮುಖದಲ್ಲಿ ಕಾಣೂತ್ತಿದೆ. ತಪ್ಪೆಲ್ಲಾ ನನ್ನದೇ ಎನ್ನುವ ಹಾಗೆ ಯಾಕೆ ಮಾತಾಡುತ್ತೀರಿ’ ಎಂದು ಗೊಣಗಿದ್ದಳಂತೆ.

ಮುತ್ಯಾಲಮ್ಮನಿಗೂ ಪುಟ್ಟ ಹುಡುಗಿಗೆ ಹೊಡೆದದ್ದು ಬೇಸರವಾಗಿ, ‘ಬಿಡಮ್ಮ ಅರೀದ ಹುಡುಗಿ ಆಡಿದ ಮಾತನ್ನ ಯಾಕೆ ಗಂಭೀರ ತೆಗೆದುಕೊಳ್ಳುತ್ತೀರಿ’ ಎಂದಿದ್ದಳಂತೆ. ‘ಅಲ್ಲ ಕಣೆ ಈ ಹುಡುಗಿ ಇಂಥಾ ಮಾತನ್ನ ಕೇಳಿದ್ರೆ ನನಗೇ ಎದೆ ಒಡೆದುಹೋಗುತ್ತೆ. ಪಾಪ ತಾಯಾದವಳು ನಿನಗೆ ಏನನ್ನಿಸಿರಬೇಡ ಎಂದು ಪೇಚಾಡಿದಾಗ, ‘ಅಭಾ ಶುಭಾ ತಿಳೀದ ಹುಡುಗಿ ಮಾತಾಡುತ್ತೆ ಅಂದರೆ ಅದರಲ್ಲಿ ಏನು ಮರ್ಮವಿದೆಯೋ ಬಿಡೀಮ್ಮಾ’ ಎಂದು ಆ ತಾಯಿಯೇ ಸಮಾಧಾನ ಮಾಡಿದ್ದಳಂತೆ.      

ಮುತ್ತಜ್ಜ ಕೃಷ್ಣಪ್ಪನಿಗಾದರೂ ಏನು ತಿಳಿಯುತ್ತಿತ್ತೋ ಗೊತ್ತಿಲ್ಲ, ಅವನದ್ದು ಹನ್ನೆರಡರ ಪ್ರಾಯ. ತವರಿನ ಬಡತನಕ್ಕೆ ಅಲ್ಲಿ ಬಿಡಲಾಗದೆ ಮೈ ನೆರೆಯುವುದಕ್ಕೆ ಮೊದಲೇ ಅತ್ತೆ ಮನೆಗೆ ಕರೆದುಕೊಂಡು ಬಂದಿದ್ದಳಂತೆ ಅವರ ಅತ್ತೆ. ಶಾಸ್ತ್ರ ಸಂಪ್ರದಾಯ ಎಂದ ಊರ ಜನಕ್ಕೆ ಬಡತನ ಕಿತ್ತು ತಿನ್ನುವಾಗ ಈ ಹುಡುಗೀನ ಅಲ್ಲೇ ಬಿಟ್ಟರೆ ಹುಡುಗಿಯೇ ಇರಲ್ಲ ಅಷ್ಟೇ ಎಂದು ಸಮಜಾಯಿಷಿ ಕೊಟ್ಟಿದ್ದಳಂತೆ. ತನ್ನ ಜೊತೆ ಆಡಲಿಕ್ಕೆ ಇನ್ನೊಂದು ಹುಡುಗಿ ಬಂದಿದ್ದಾಳೆ ಎಂದು ತಿಳಿದುಕೊಂಡಿರಬೇಕು. ಹಿತ್ತಲಲ್ಲಿ ಕಂಡರೆ ‘ಆಡೋಕ್ಕೆ ಬಾ’ ಅಂತ ಕರೀತಿದ್ದನಂತೆ, ಇಲ್ಲದಿದ್ದರೆ ಬಚ್ಚಿಟ್ಟೂಕೊಂಡು ಇದ್ದಕ್ಕಿದ್ದ ಹಾಗೆ ಹೆದರಿಸಿ, ಹೆದರಿದ ಮುತ್ತಾನನ್ನು ಓಡಿಸಿಕೊಂಡು ಬರುತ್ತಿದ್ದನಂತೆ. ಸೀರೆ ಉಡಲೂ ಬಾರದ ವಯಸ್ಸಿನ ಮುತ್ತಾ ಬಿದ್ದು ಮಂದಿ ಮೊಣಕೈ, ಮೈಯೆಲ್ಲಾ ಗಾಯ ಮಾಡಿಕೊಂಡು ಬಂದಾಗ, ಅವಳ ಅತ್ತೆ ಮಗನಿಗೆ ಹೇಳದೆ, ‘ಆ ಗಂಡು ಹುಡುಗನ ಜೊತೆ ಏನೆ ಆಟ ನಿಂದು’ ಎಂದು ಗದರುತ್ತಿದ್ದರಂತೆ. ಆ ದಿನಗಳಿಂದ ಮುತ್ತಾಗೆ ತನ್ನ ಗಂಡನ ಮೇಲೆ ವಿಪರೀತ ಕೋಪ ಇತ್ತಂತೆ. ಮೈನೆರೆದ ಮೇಲೆ ಎಷ್ಟೋ ವರ್ಷಗಳು ಗಂಡನ ಕೋಣೆಗೂ ಹೋಗಿರಲಿಲ್ಲವಂತೆ. ಇದೆಲ್ಲಾ ಅವಳ ಅತ್ತೆಗೆ ತಲೆನೋವಾಗಿ ಪರಿಣಮಿಸಿ ತಾನು ಮೊಮ್ಮಕ್ಕಳನ್ನು ನೋಡದೆ ಸತ್ತು ಹೋಗುತ್ತೇನೇನೋ ಎಂದು ಗೋಳಾಡುತ್ತಿದ್ದಳಂತೆ. ಆಗ ಇದೇ ಮುತ್ಯಾಲಮ್ಮ ಅವಳನ್ನ ಕೂಡಿಸಿಕೊಂಡು ಕೈಗೆ ರಾಮುಡೂವನ್ನು ಕೊಟ್ಟು, ‘ಆಡುವ ಇಂಥಾ ಕಂದ ಬೇಕು ಅಂದರೆ ನೀನು ದೊಡ್ಡವರು  ಹೇಳಿದ ಹಾಗೆ ಕೇಳು’ ಎಂದು ತಿಳಿ ಹೇಳಿದ್ದಳಂತೆ. ಆಗಲೂ ಮುತ್ಯಾನದ್ದು ಒಂದೇ ಮಾತು ‘ಕೃಷ್ಣಪ್ಪನ ಜೊತೆ ಹೋದರೆ ಅತ್ತೆ ಬೈತಾಳೆ’ ಅಂತ.

ನಂತರ ಮುತ್ತಾ ಹಡೆದ ಆರು ಮಕ್ಕಳಲ್ಲಿ ನಾಲ್ಕು ಮಕ್ಕಳು ಹೋಗಿ ಉಳಿದಿದ್ದು ಒಂದು ಗಂಡು, ಇನ್ನೊಂದು ಹೆಣ್ಣು ಮಾತ್ರ. ಹುಟ್ಟುತ್ತಲೇ ಸತ್ತ ಮಕ್ಕಳನ್ನು ಗಂಡನ ಕೈಗೆ ಹೂವುಕೊಡುವಂತೆ ಕೊಟ್ಟು, ‘ಕೃಷ್ಣಪ್ಪ ಇದನ್ನ ಸುಡಬೇಡವೋ ಇದರ ಮೇಲೊಂದು ಗಿಡ ನೆಟ್ಟುಬಿಡು. ಇವು ನನ್ನ ಹೊಟ್ಟೆಗೆ ಬಂದದ್ದೆ ಮರ ಆಗಲಿಕ್ಕೆ’ ಎಂದು ಹೇಳಿದ್ದಳಂತೆ. ಬ್ರಾಹ್ಮಾಣ ಜಾತಿಗೆ ಅತೀತವಾದ ಆ ಮಾತುಗಳನ್ನು ಕೇಳಿ ಎಲ್ಲರೂ ದಂಗು ಬಡೆದಿದ್ದರಂತೆ. ಅಷ್ಟು ಹೊತ್ತಿಗೆ ಗಂಡನಿಗೆ ಮಾತ್ರ ತನ್ನ ಹೆಂಡತಿ ಹೇಳುವುದೆಲ್ಲಾ ಸತ್ಯ ಎನ್ನುವುದು ಗೊತ್ತಾಗಿಬಿಟ್ಟಿತ್ತು. ಹಿತ್ತಲ ಮೂಲೆಯಲ್ಲಿ ನಾಲ್ಕು ಮರಗಳಿಗೆ ದಿನವೂ ನೀರೆರೆಯುತ್ತಾ ಮಾತಾಡುವುದನ್ನು ನಾನೂ ನೋಡಿದ್ದೆ. ಮುತ್ಯಾನ ಮುಖದಲ್ಲಿ ಎಂಥದ್ದೋ ಆನಂದ ಆ ಮರಗಳ ಜೊತೆ ಮಾತಾಡುವಾಗ. ಅಮ್ಮನಿಗೆ ಮರಳು ಎಂದು ತಾತ ಹೇಳಿದ್ದನ್ನ ಕೇಳಿಲ್ಲ. ಆದರೆ ಅಮ್ಮಮ್ಮ ಮಾತ್ರ ಮುತ್ತಾನನ್ನು ಇಂಥಾ ಸಂಗತಿಗಳಿಗೆ ಬೈಯ್ಯುತ್ತಲೇ ಇರುತ್ತಿದ್ದಳು. ಮೊದಲಿಗೆ ವಿಷಯ ತಿಳಿದಾಗ ಅಮ್ಮಮ್ಮ ಹೌಹಾರಿದ್ದಳಂತೆ. ಉಳ್ಳವರ ಮನೆಯ ಮಗಳು. ಕಷ್ಟದ ಛಾಯೆಯೂ ಇಲ್ಲದೆ ಬೆಳೆದವಳು. ಅವಳ ತಂದೆ ಆಗಿನ ಕಾಲಕ್ಕೆ ದೊಡ್ಡ ವಕೀಲರು. ಅಮ್ಮಮ್ಮನನ್ನು ಮದುವೆಗಾಗಿ ನೋಡಲು ಹೋದಾಗ ಅಂಥಾ ವೃತ್ತಿಯೊಂದು ಇದೆಯಾ? ಎಂದು ಮೂಗಿನ ಮೇಲೆ ಮುತ್ತಾ ಬೆರಳಿಟ್ಟಿದ್ದಳಂತೆ. ಹುಡುಗಿ ಕಪ್ಪು ಎಂದು ಎದ್ದು ಬಂದ ತಾತನಿಗೆ ನೀನು ಅವಳನ್ನೆ ಮದುವೆಯಾಗುವುದು ಎಂದು ಮುತ್ತಾ ಹೇಳಿಬಿಟ್ಟಿದ್ದಳಂತೆ. ನಿನ್ನ ನಾಲಿಗೆಯಲ್ಲಿ ಮಚ್ಚೆ ಇಲ್ಲ ಆದರೂ ಮಾತಾಡುವ ಮಾತೆಲ್ಲಾ ನಿಜ ಆಗುತ್ತೆ. ಈ ವಿಷಯವಾಗಿ ಏನೂ ಹೇಳಬೇಡ ನಾನು ಆ ಕಪ್ಪು ಹುಡುಗಿಯನ್ನು ಮದುವೆಯಾಗಲಾರೆ ಎಂದು ತಾತ ಹೇಳಿದಾಗ, ಭಗವಂತನ ಆಟ ಯಾರೂ ಬದಲಿಸಲಾಗುವುದಿಲ್ಲ ಎಂದಿದ್ದಳಂತೆ ಮುತ್ಯಾ, ಬೇಡ ಬೇಡ ಅನ್ನುತ್ತಿದ್ದ ತಾತನ ಮನಸ್ಸಿನಲ್ಲಿ ಕೃಷ್ಣ ಸುಂದರಿಯ ಚಿತ್ರ ಹೇಗೆಲ್ಲಾ ಅಚ್ಚಾಯಿತೋ ಗೊತ್ತಿಲ್ಲ.  ಮಾವನ ಕಡೆಯಿಂದ ನಮಗೆ ಒಪ್ಪಿಗೆ ಎನ್ನುವ ಪತ್ರಕ್ಕೆ ಮಾರು ಹೋಗಿ ಮದುವೆಯಾಗಿದ್ದರಂತೆ ತಾತ. ಮುತ್ತಾ ‘ನನ್ನ ಮಗ ನಿನ್ನನ್ನು ಬೇಡ ಅಂದವ ಮದುವೆಯಾಗಿ ಬಿಟ್ಟ’ ಎಂದು ಅಮ್ಮಮ್ಮನ ಹತ್ತಿರ ಹೇಳಿ ನಕ್ಕಿದ್ದಳಂತೆ. ಅವಳ ಮಾತಿನಲ್ಲಿ ಯಾವ ಕಟುವೂ ಇರಲಿಲ್ಲ ಎನ್ನುವುದು ನನ್ನ ನಂಬಿಕೆ. ಆದರೆ ಇದು ಮಾತ್ರ ಅಮ್ಮಮ್ಮನ ಜೀವನದುದ್ದಕ್ಕೂ ಅವಮಾನವಾಗಿ ಕಾಡಿದ್ದು ನಿಜ. ತಾತನ ಅಚ್ಚ ಬಿಳುಪು ಬಣ್ಣ ಅವಳನ್ನು ಜೀವಿತದುದ್ದಕ್ಕೂ ಹಿಂಬಾಲಿಸುತ್ತಲೇ ಇತ್ತು.   

ಅದೇ ಕೋಪ ಅಮ್ಮಮ್ಮನಿಗೆ ಮುತ್ತಾನಲ್ಲಿ ಕಂಡೂ ಕಾಣದ ಅಸಹನೆಗೆ ಕಾರಣವಾಗಿಬಿಟ್ಟಿತ್ತು. ಮನೆಯ ಹಿತ್ತಲ ಮರಗಳ ಬಳಿ ಮುತ್ತಾ ಮಾತಾಡುವಾಗ, ‘ಮನೆಯ ಹತ್ತಿರ ಮೂಳೆ ಇರಬಾರದು, ಒಳ್ಳೇದಲ್ಲಾ ಎನ್ನುತ್ತಾರೆ. ಅಂಥಾದ್ದರಲ್ಲಿ ಇದೇನಿದು ಮನುಷ್ಯರದ್ದು?’ ಎಂದು ಹೇಳಿದಾಗ, ಮುತ್ತಾ ವಿಷಾದದಿಂದ, ‘ಇಷ್ಟು ವರ್ಷಗಳು ಮೂಳೆ ಎಲ್ಲಿ ಉಳಿದಿರುತ್ತೇ, ಅದೂ ಹಾಲು ಹಸುಳೆಗಳದ್ದು? ಯಾವಾಗಲೂ ಕರಗಿ ಹೋಗಿರುತ್ತೆ. ಪ್ರಕೃತಿಗೆ ಗೊತ್ತಿದೆ ಅದು ಎಲ್ಲವನ್ನೂ ಅರಗಿಸಿಕೊಳ್ಳುತ್ತೆ. ಯಾಕೆ ಮರಗಳು ಮಗುವಾಗಲಾರವೇ? ಮಕ್ಕಳನ್ನು ಬೆಳೆಸುವ ಹಾಗೆ ಅವುಗಳನ್ನೂ ಬೆಳೆಸುತ್ತೇವಲ್ಲವೇ?’ ಎಂದು ನೋವಿಂದ ಹೇಳಿದ್ದಳಂತೆ. ಅದಾದ ಮೇಲೆ ಅಮ್ಮಮ್ಮನಿಗೆ ಈ ವಿಷಯಕ್ಕೆ ಅಸಹನೆ ಇದ್ದರೂ ಅವಳ ಎದುರಿಗೆ ಮಾತ್ರ ಆಡುತ್ತಿರಲಿಲ್ಲವಂತೆ. ಎಷ್ಟಾದರೂ ಹೆಣ್ಣೀನ ನೋವನ್ನು ಅರ್ಥ ಮಾಡಿಕೊಳ್ಳುವುದು ಅವಳಿಗೇನೂ ಕಷ್ಟವಾಗಿರಲಿಲ್ಲ. ಆದರೂ ಒಳಿತಾಗಬೇಕಲ್ಲಾ? ತವರಿಗೆ ಹೋದಾಗ ಯಾವ ಯಾವ ಜ್ಯೋತಿಷಿಗಳನ್ನೋ ಕಂಡು ತನ್ನ ಸ್ಥಿತಿಯನ್ನು ಹೇಳಿ ಅವರಿಂದ ಏನೇನೋ ಉತ್ತರ ಕೇಳಿ, ಗಾಬರಿ, ನೋವು ಎಲ್ಲಾ ಪಟ್ಟುಕೊಂಡು, ತನ್ನ ಈ ಸ್ಥಿತಿಗೆ ಎಲ್ಲಾ ಆ ಮರಗಳೇ ಕಾರಣ ಎಂದು ನಿರ್ಧಾರಕ್ಕೆ ಬಂದುಬಿಟ್ಟಿದ್ದಳಂತೆ. ಕಡಿಸುವಂತೆ ಗಂಡನಿಗೆ ದುಂಬಾಲು ಬಿದ್ದಿದ್ದೂ ಉಂಟಂತೆ. ಆದರೆ ತಾತ ಯಾವುದನ್ನೂ ಮನಸ್ಸಿಗೆ ಹಾಕಿಕೊಂಡಿಲ್ಲವಾದ್ದರಿಂದ ಅಮ್ಮಮ್ಮನೂ ಸುಮ್ಮನಾಗಿಬಿಟ್ಟಳಂತೆ. ಆಡುತ್ತಾ ಆಡುತ್ತಾ ಯಾರೇ ಅಲ್ಲಿಗೆ ಹೋದರೂ ಅವಳು ಬೈಯ್ಯುವುದಂತೂ ಗ್ಯಾರೆಂಟಿಯಾಗಿತ್ತು. ಅಮ್ಮಮ್ಮ ಹೀಗೆಲ್ಲಾ ಬೈಯ್ಯುತ್ತಿದ್ದುದರಿಂದ ಅದನ್ನ ನಾವೆಲ್ಲಾ ದೆವ್ವದ ಮರಗಳು ಎಂದೆ ಕರೆಯುತ್ತಿದ್ದೆವು. ಇದನ್ನೆಲ್ಲಾ ಕೇಳುತ್ತಾ ಇದ್ದಿದ್ದರಿಂದಲೋ ಏನೋ ಜೋರಾಗಿ ಬೀಸಿದಾಗ ಮರಗಳ ಆ ಸದ್ದು ದೆವ್ವಗಳ ಊಳಿನಂತೆ ಅನ್ನಿಸುತ್ತಿತ್ತು.

ಮುತ್ತಾನ ಜೀವನ ನನ್ನ ಮಟ್ಟಿಗೆ ನಿಜಕ್ಕೂ ಅಚ್ಚರಿ ತರಿಸುವಂಥಾದ್ದು. ಅವಳ ಪ್ರತಿ ನಡೆಯಲ್ಲೂ ನನಗೆ ನಿಗೂಢತೆ ಕಾಣುತ್ತಿತ್ತು. ಕೆಲವೊಮ್ಮೆ ಅವಳ ಮಾತುಗಳು, ನಡಾವಳಿ ಸಂದರ್ಭವನ್ನು ಮೀರಿ ಇರುತ್ತಿತ್ತು. ಇದರ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಂತೆ ಕಾಣುತ್ತಿರಲಿಲ್ಲ. ಬಹುಶಃ ಚಿಕ್ಕಂದಿನಿಂದಲೂ ಹಾಗೇ ಇದ್ದಿರಬೇಕು. ಅವರ ಅತ್ತೆ ನಿಮ್ಮ ಹುಡುಗಿ ಹೀಗೆಂದು ಮುತ್ತಾನ ತಾಯಿಯ ಹತ್ತಿರ ಹೇಳಿದ್ದಳಂತೆ. ಅವಳ ತಾಯಿ ಕೂಡಾ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಳಂತೆ ಅದೂ ನಿಜವೇ ಹತ್ತು ವರ್ಷಕ್ಕೆ ಮದುವೆ ಮಾಡಿ ನಿಮ್ಮ ಹುಡುಗಿ ಹೀಗೆಂದರೆ ಯಾರಿಗೆ ತಾನೆ ಅರ್ಥ ಆಗಬೇಕು. ಹೆರುತ್ತಿದ್ದುದು ಒಂದೆರಡಲ್ಲವಲ್ಲ. ಬಸುರಿ ಬಾಣಂತನಗಳಲ್ಲೇ ಹೆಣ್ಣು ಮಕ್ಕಳ ಆಯುಸ್ಸು ಮುಗಿದು ಮೂವತ್ತರ ಹೊತ್ತಿಗೆ ಮುಪ್ಪು ಅಡರುತ್ತಿತ್ತು. ಕೊನೆಗೆ ಮುತ್ತಾನನ್ನು ಒಪ್ಪಿಕೊಳ್ಳದೆ ಬೇರೆ ದಾರಿಯೇ ಇರದ ಹಾಗೆ ಇಡೀ ಊರ ಜನ ಅವಳ ಮೇಲೆ ನಂಬಿಕೆಯನ್ನು ಇಟ್ಟು ಬಿಟ್ಟರು- ರಾಮುಡುವಿನ ಆ ಒಂದು ಪ್ರಸಂಗದಿಂದ.                             

ಮುತ್ಯಾಲಮ್ಮನ ಹತ್ತಿರ ಹಾಗೆ ಹೇಳಿದ ಮೂರನೆಯ ದಿನಕ್ಕೆ ಸರಿಯಾಗಿ ಹತ್ತು ತಿಂಗಳ ಮಗು ರಾಮುಡು ವಾಂತಿ ಬೇಧಿ ಮಾಡಿಕೊಂಡು ಸುಸ್ತಾಗಿ ಬಿಟ್ಟಿದ್ದನಂತೆ. ಮುತ್ಯಾಲಮ್ಮ ದೇವರು-ದಿಂಡರು ಎಲ್ಲಾ ಹರಕೆ ಹೊತ್ತಾದ ಮೇಲೂ ಸರಿಹೋಗದೇ ಇದ್ದಾಗ, ದೂರದ ಧರ್ಮಾಸ್ಪತ್ರೆಗೆ ಕರೆದುಕೊಂಡು ಹೋಗೋದು ಎಂದು ಸಂಬಂಧಿಗಳೆಲ್ಲಾ ತೀರ್ಮಾನಿಸಿದರು. ಮುತ್ಯಾಲಮ್ಮ ಮಾತ್ರ `ಹೀಗೆ ಹೀಗೆ ಆಗುತ್ತೆ ಅಂತ ಇದನ್ನೆಲ್ಲಾ ಮುಂಚೇನೆ ಆ ರುಕ್ಮಿಣಮ್ಮ ಹೇಳಿದ್ದಳು ಮೊದಲು ನಾನು ಅವಳ ಹತ್ತಿರ ಕರೆದೊಯ್ಯುತ್ತೇನೆ’ ಎಂದು ಹಟ ಹಿಡಿದಿದ್ದಳಂತೆ. `ಆ ಸಣ್ಣ ಹುಡುಗಿ ಏನು ಮಾಡಿಯಾಳು ಏನೋ ಮನಸ್ಸಿಗೆ ಬಂದಿದ್ದು ಹೇಳಿದ್ದಾಳೆ. ಅದೇ ಸತ್ಯ ಎಂದು ಹೇಗೆ ಅಂದುಕೊಳ್ಳುತ್ತೀಯ?’ ಎಂದು ಎಲ್ಲಾ ಪರಿಪರಿಯಾಗಿ ಕೇಳಿದ್ದರಂತೆ. ಮುತ್ಯಾಲಮ್ಮನದ್ದು ಮಾತ್ರ ಒಂದೇ ಹಟ. `ಇಲ್ಲ ನಾನು ಇವನನ್ನು ರುಕ್ಮಿಣಮ್ಮನ ಹತ್ತಿರಕ್ಕೆ ಕರೆದೊಯ್ಯ ಬೇಕು’ ಎಂದು. 

ಮಗುವನ್ನು ಕರೆದುಕೊಂಡು ಮುತ್ತಾನ ಹತ್ತಿರ ಬಂದಾಗ, ರಾಮುಡುವಿನ ಉಸಿರು ಕ್ಷೀಣವಾಗುತ್ತಿತ್ತು. ಅದನ್ನ ನೋಡಿ ಮುತ್ತಾನ ಅತ್ತೆ ಮಗು ಮನೆಯಲ್ಲಿ ಹೋಗಿಬಿಟ್ಟರೆ ಮೈಲಿಗೆ ಕಳಿಯಬೇಕಾಗುತ್ತೆ ಅಂತ ಹೊರಗೆ ಕಟ್ಟೆಯ ಮೇಲೆ ಕೂಡುವಂತೆ ಹೇಳಿದ್ದಳಂತೆ. ಮುತ್ತಾ ಮಾತ್ರ ಯಾವುದನ್ನೂ ಗಮನಿಸಿದೆ ಬಂದು, ಅವನನ್ನು ತನ್ನ ಕೈಗಳಲ್ಲಿ ತೆಗೆದುಕೊಂಡು `ನನ್ನ ಉಸಿರನ್ನ ನಿನಗೆ ಹಂಚುವ ಕಾಲ ಬಂದೇ ಬಿಟ್ಟಿತಾ ರಾಮುಡು’ ಎಂದು ಮಗುವನ್ನು ಎತ್ತಿಕೊಂಡು ಕೋಣೆಯೊಳಗೆ ಹೋಗಿ ಬಾಗಿಲನ್ನು ಹಾಕಿಕೊಂಡಳಂತೆ. `ನಿನಗೆ ಬುದ್ಧಿ ಇದೆಯಾ?’ ಎಂದು ಮುತ್ತಾನ ಅತ್ತೆ ಮುತ್ಯಾಲಮ್ಮನಿಗೆ ಬೈಯ್ಯುತ್ತಿದ್ದರೆ, ಮುತ್ಯಾಲಮ್ಮನಿಗೆ ಒಳಗೆ ಮಗುವಿಗೆ ಏನಾಯಿತೋ ಎನ್ನುವ ಭಯ. ಸಂಜೆಯಾದರೂ ಪತ್ತೆ ಇಲ್ಲ. ಸೂರ್ಯ ಅಸ್ತಮಿಸಿ ಕೆಂಪುಬಣ್ಣ ಲೀಲೆಯ ಹಾಗೆ ಹರಡುತ್ತಿದ್ದರೆ ಊರವರಕಣ್ಣುಗಳಲ್ಲಿ ಭಯವನ್ನೂ ಮೀರಿದ ಕುತೂಹಲ. ಹಾಕಿದ್ದ ಬಾಗಿಲನ್ನು ಎಷ್ಟು ತಟ್ಟಿದರೂ ತೆಗೆಯುತ್ತಿಲ್ಲ. ಒಳಗಿನಿಂದ ಒಂದು ಸಣ್ಣ ಸದ್ದೂ ಇಲ್ಲ. ದೀಪ ಹಚ್ಚಬೇಕೆಂದರೆ ಒಳಗೆ ಏನಾಗಿದೆಯೋ ಎನ್ನುವ ಆತಂಕ. ವಿಷಯ ತಿಳಿದು ಪರ ಊರ ಜನ ಕೂಡಾ ಮನೆಯ ಮುಂದೆ ಜಮಾಯಿಸುತ್ತಿದ್ದಾರೆ. `ಆ ಹುಡುಗಿಗೆ ಬುದ್ಧಿ ಇಲ್ಲ ನಿಮಗಾದರೂ ಬೇಡವೇ’ ಎಂದು ಮನೆಯಲ್ಲಿದ್ದವರನ್ನೆಲ್ಲಾ ಬೈದಿದ್ದಾರೆ. ಹಳೆಯ ಬಾಗಿಲುಗಳು ಭಾರ ಬೇರೆ. ಏನು ದಾರಿಯಿದೆ ಇನ್ನು? ಒಡೆದು ತೆಗೆಯುವುದೊಂದೇ ಬಾಕಿ. ವಯಸ್ಸಿನ ಕೆಲ ಹುಡುಗರು ಹಾರೆಗಳನ್ನು ಸಿದ್ಧ ಮಾಡುಕೊಂಡು ಬಂದಿದ್ದಾರೆ. ಇನ್ನೇನು ಬಾಗಿಲಿಗೆ ಏಟನ್ನು ಹಾಕಬೇಕು, ಅಷ್ಟರಲ್ಲಿ ಇದ್ದಕ್ಕಿದ್ದಂತೆ ಬಾಗಿಲು ತೆರೆದುಕೊಂಡು ಬಿಟ್ಟಿತಂತೆ! ಆಡುವ ರಾಮುಡುವನ್ನು ಕೈಲಿ ಹಿಡಿದ ಮುತ್ತಾ ಸೆರಗಲ್ಲಿ ಬೆಚ್ಚಗೆ ಮುಚ್ಚಿಟ್ಟುಕೊಂಡು ಹೊರಗೆ ಬಂದಿದ್ದಾಳೆ. ಖಾಯಿಲೆ ಬಿದ್ದ ಯಾವ ಲಕ್ಷಣ ಲವಲೇಷವೂ ಮಗುವಿನ ಮುಖದಲ್ಲಿ ಇರಲಿಲ್ಲವಂತೆ. 

`ನನ್ನ ಉಸಿರನ್ನ ಹಂಚಿದ್ದೇನೆ. ಇನ್ನು ಇವನಿಗೆ ಯಾವ ಅಪಾಯವೂ ಇಲ್ಲ’ ಎಂದು ಮಗುವನ್ನು ತಾಯ ಕೈಗೆ ಕೊಡುತ್ತಿದ್ದರೆ ತಾಯ ಕಣ್ಣಿನಲ್ಲಿ ಧಾರಾಕಾರ ನೀರು. ಊರಜನರೆಲ್ಲಾ `ಎಲಾ ಹುಡುಗಿ!’ ಎಂದು ಮೂಗಿನ ಮೇಲೆ ಬೆರಳನ್ನು ಇಟ್ಟಿದ್ದರಂತೆ. ಏನು ನಡಿತಾ ಇದೆ ಎನ್ನುವ ಅರಿವೂ ಇಲ್ಲದ ಮುತ್ತಾನ ಅತ್ತೆ ಮಾತ್ರ ದೇವರ ಮುಂದೆ ದೀಪ ಹಚ್ಚಿ ಈ ಮನೇನ ಕಾಪಾಡು ಎಂದು ಬೇಡಿಕೊಂಡಿದ್ದಳಂತೆ.  

ಆ ಕೃತಜ್ಞತೆ ರಾಮುಡೂವಿನಲ್ಲೂ ಇತ್ತು. ಅಷ್ಟು ಜಮೀನಿನ ಒಡೆಯನಾಗಿದ್ದರೂ ಈ ಮನೆಯ ಬಾಗಿಲಿಗೆ ಸೆಗಣಿ ನೀರು ಹಾಕುವುದನ್ನು ಮಾತ್ರಬಿಟ್ಟಿರಲಿಲ್ಲ. ಊರ ಯಾವ ಮಗುವಿಗೆ ಹುಷಾರಿಲ್ಲ ಅಂದರೂ ಮುತ್ತಾನ ಮಡಿಲು ಅದಕ್ಕೆ ತೆರೆದಿರುತ್ತಿತ್ತು. ಮುತ್ತಾನ ಬೆಳಗು ಮಾತ್ರ ರಾಮುಡುವಿನ ‘ಅವ್ವಾ’ ಎನ್ನುವ ಕೂಗಿನಿಂದಲೇ ಆರಂಭವಾಗುತ್ತಿದ್ದು, ಅದು ಬರಿಯ ಮಾತಾಗಿರಲಿಲ್ಲ, ಮಂತ್ರದ ಹಾಗೆ ಭಾಸವಾಗುತ್ತಿತ್ತು.  ನಾನಂತೂ ಆ ದಿನಚರಿ ತಪ್ಪಿದ್ದನ್ನು ಕಾಣಲೇ ಇಲ್ಲ.

ಈ ಅಂಕಣದ ಹಿಂದಿನ ಬರೆಹಗಳು:
ಕನಸಿನೊಳಗಿನ ನನಸು
ನೀಲಿ ಕಣ್ಣುಗಳ ಮುತ್ತಜ್ಜಿ ಮತ್ತು ನಾನು

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...