ಅಪ್ಪ ಮತ್ತು ಮುಪ್ಪು: ಸಮಕಾಲೀನ ಹಾಗೂ ಸಾರ್ವಕಾಲಿಕ ಎರಡು ಸಂಗತಿಗಳು

Date: 16-09-2022

Location: ಬೆಂಗಳೂರು


ಸಮಕಾಲೀನ ಪುಸ್ತಕಲೋಕ ಅಂಕಣದಲ್ಲಿ ಅಪರೂಪದ್ದೆನ್ನಿಸುವ ಕೃತಿಗಳ ಬಗ್ಗೆ ಚರ್ಚಿಸುವ ಲೇಖಕ ಶ್ರೀಧರ ಹೆಗಡೆ ಭದ್ರನ್ ಈ ಸಲ ಇನ್ನೆರಡು ವಿಶಿಷ್ಟ ಪುಸ್ತಕಗಳ ಬಗ್ಗೆ ಬರೆದಿದ್ದಾರೆ. ಒಂದು ಅಪ್ಪನ ಕುರಿತದ್ದು; ಇನ್ನೊಂದು ಮುಪ್ಪಿನ ಕುರಿತದ್ದು.

ಯಾವುದೇ ಒಂದು ವಿಚಾರ ಅಥವಾ ವಿಷಯಕ್ಕೆ ಸಂಬಂಧಿಸಿದ ಲೇಖನಗಳನ್ನು ಸಾಂದರ್ಭಿಕವಾಗಿ ಸಂಗ್ರಹಿಸಿ ಸ್ಮರಣ ಸಂಚಿಕೆಗಳಲ್ಲಿ ಪ್ರಕಟಿಸುವ ಪರಿಪಾಠ ಹಿಂದಿನಿಂದಲೂ ಇದೆ. ಇತ್ತೀಚೆಗೆ ಇದರ ಪರಿಷ್ಕೃತ ರೂಪವಾಗಿ ಇಂತಹ ಲೇಖನಗಳನ್ನು ಸಮಾನ ಆಸಕ್ತಿಯ ಲೇಖಕರಿಂದ ಬರೆಸಿ, ಸಂಪಾದಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸುವ ಪ್ರವೃತ್ತಿಯನ್ನು ಕಾಣುತ್ತೇವೆ. ಇದು ಸಂಪಾದಕರ ನಿತಾಂತ ಆಸಕ್ತಿಯನ್ನು ಜೊತೆಗೆ ಪರಿಶ್ರಮವನ್ನು ಬೇಡುವ ಕೆಲಸ. ಇದರಿಂದ ಓದುಗರಿಗೆ ವಿಶೇಷ ಲಾಭವಾಗುತ್ತದೆ. ಒಂದೇ ವಿಷಯದ ಕುರಿತ ಹಲವು ಲೇಖಕರ ಬರಹಗಳನ್ನು ಒಂದೆಡೆ ಓದುವುದರಿಂದ ಹಲವು ದೃಷ್ಟಿಕೋನಗಳು, ಮಗ್ಗುಲುಗಳು, ಸಂವೇದನೆಗಳು ಲಭ್ಯವಾಗುತ್ತವೆ. ಅವುಗಳ ಓದಿನ ಜೊತೆಗೆ ತಮ್ಮದೇ ಆದ ಸ್ವಂತ ಅಭಿಪ್ರಾಯವನ್ನು ರೂಪಿಸಿಕೊಳ್ಳಲೂ ಸಹಾಯವಾಗುತ್ತದೆ. ಹೀಗೆ ಹಲವು ಕಾರಣಗಳಿಂದ ಇಂತಹ ಸಂಪಾದಿತ ಬರಹಗಳ ಪ್ರಕಟಣೆಗಳು ಸ್ವಾಗತಾರ್ಹವೆನಿಸುತ್ತವೆ. ಇಂತಹ ಎರಡು ಪುಸ್ತಕಗಳನ್ನು ಓದುಗರ ಗಮನಕ್ಕೆ ತರುವುದು ಈ ಬರಹದ ಉದ್ದೇಶ.

***

ಆಕಾಶದಗಲದ ಅಪ್ಪಂದಿರ ವ್ಯಾಪಕ ಚಿತ್ರಣ: ಅಪ್ಪನು ನನಗಿಷ್ಟ.

ಅಪ್ಪನು ನನಗಿಷ್ಟ
ಸಂಪಾದಕರು: ಡಾ. ಶರಣಮ್ಮ ಗೊರೇಬಾಳ
ಪ್ರಕಾಶಕರು: ಶ್ರೀಕ್ಷೇತ್ರ ಪ್ರಕಾಶನ, ಮೈಸೂರು
ಪುಟಗಳು: 308; ಬೆಲೆ: 308/-

“ಅಮ್ಮ ಜೀವ ಕೊಡುತ್ತಾಳೆ ಅಪ್ಪ ಬಾಳು ಕೊಡುತ್ತಾನೆ” ಎಂಬ ಮಾತಿದೆ. ಅಮ್ಮನ ದೈವಿಕ ಆವರಣದೆದುರು ಅಪ್ಪನ ಚಿತ್ರ ನಮ್ಮ ಸಮಾಜದಲ್ಲಿ ಮಂಕಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಪ್ಪಂದಿರ ಮಹತ್ವವನ್ನು ಮನಗಾಣಿಸುವಂತಹ ಅನೇಕ ಕೃತಿಗಳು, ಹಾಡುಗಳು ಜನಪ್ರಿಯವಾಗುತ್ತಿವೆ. ಮಕ್ಕಳು ಹುಟ್ಟಿದಾಗ ಅತ್ಯಂತ ಸಂಭ್ರಮಿಸುವ, ಮಕ್ಕಳ ಅನಾರೋಗ್ಯಕ್ಕೆ ಕಂಗಾಲಾಗುವ, ಮಕ್ಕಳನ್ನು ಚೆನ್ನಾಗಿ ಓದಿಸಿ ಎಂದು ಶಿಕ್ಷಕರಿಗೆ ಕೈಮುಗಿಯುವ, ಮಕ್ಕಳಿಗೆ ಒಳಿತಾಗಲೆಂದು ದುಡಿಯುವ, ಭವಿಷ್ಯದ ನೂರಾರು ಕನಸುಗಳನ್ನು ಮಕ್ಕಳ ಮೂಲಕ ಸಾಕಾರಗೊಳಿಸಿಕೊಳ್ಳಲು ಹಂಬಲಿಸುವ, ಒಟ್ಟಿನಲ್ಲಿ ಮಕ್ಕಳ ಒಳ್ಳೆಯ ಬದುಕಿಗಾಗಿ ಜೀವ ತೇಯುವ ಕೊನೆಗೂ ಮಕ್ಕಳಿಂದ ತಿರಸ್ಕಾರಕ್ಕೆ ಒಳಗಾಗುವ ಆಪ್ಪಂದಿರ ಪಾಡು ಅನಂತವಾದುದು. ‘ಅಪ್ಪಾ ಐ ಲವ್ ಯೂ ಪಾ’ ಎಂಬ ಹಾಡು ಜನಪ್ರಿಯವಾದಾಗ ಎದೆಯುಬ್ಬಿಸಿ ಸ್ವಾಗತಿಸಿದ ಹಲವು ಅಪ್ಪಂದಿರನ್ನು ಕಂಡಿದ್ದೇವೆ. ಅಪ್ಪಂದಿರನ್ನು ಕಂಡರೆ ಭಯಪಡುವ ಮಕ್ಕಳಿಗೆ ಅಪ್ಪ ಎಂದೂ ಆಪ್ತನಾಗುವುದೇ ಇಲ್ಲ. ಬಹುಶಃ ಇದೇ ಕಾರಣಕ್ಕೆ ಅಪ್ಪಂದಿರು ಕೊನೆಗೆ ತಾತ್ಸಾರಕ್ಕೆ ಗುರಿಯಾಗುತ್ತಾರೆ. ಖ್ಯಾತ ಕವಿ ಡಾ. ಜಿ. ಎಸ್. ಶಿವರುದ್ರಪ್ಪನವರು ‘ಮುಂಬೈ ಜಾತಕ’ ಕವಿತೆಯಲ್ಲಿ ನಗರದ ಅಪ್ಪಂದಿರನ್ನು ಹೀಗೆ ಪರಿಚಯಿಸಿದ್ದಾರೆ;

ತಂದೆ: ಬೆಳಗಿಂದ ಸಂಜೆಯ ತನಕ ಕಣ್ಮರೆಯಾಗಿ
ಒಮ್ಮೊಮ್ಮೆ ರಜಾ ದಿನಗಳಲ್ಲಿ ಕಣ್ಣಿಗೆ ಕಂಡು
ಕುಳಿತು ಕೆಮ್ಮುವ ಪ್ರಾಣಿ
ಇಂತಹ ರೂಕ್ಷ ವಾಸ್ತವದ ಮಧ್ಯೆ ಬೇರೆ ಬೇರೆ ಭೌಗೋಳಿಕ ಪ್ರದೇಶದಿಂದ ಬಂದ, ಬೇರೆ ಬೇರೆ ವೃತ್ತಿಯಲ್ಲಿರುವ 51 ಲೇಖಕ-ಲೇಖಕಿಯರು ತಮ್ಮ ಆಪಂದಿರನ್ನು ಇಲ್ಲಿ ಲೇಖನಗಳ ಮೂಲಕ ಕಟ್ಟಿಕೊಟ್ಟಿದ್ದಾರೆ.

ಅಪ್ಪಂದಿರನ್ನು ಕುರಿತ ಇಂತಹ ಬರವಣಿಗೆಗಳಲ್ಲಿ ಬಹುಶಃ ಚಾರಿತ್ರಿಕವಾಗಿ ಮೊದಲ ಪುಸ್ತಕ- ಖ್ಯಾತ ಅಂಕಣಕಾರರಾಗಿದ್ದ ಡಾ. ಹಾ. ಮಾ. ನಾಯಕರು ತಮ್ಮ ತಂದೆಯವರನ್ನು ಕುರಿತು 1984ರಲ್ಲಿ ಪ್ರಕಟಿಸಿದ್ದ ‘ಅಪ್ಪಯ್ಯ’ ಎಮ್ಬ ಪುಸ್ತಿಕೆ. ಅದರಲ್ಲಿ ಅವರ ಬರಹದೊಂದಿಗೆ ಅವರ ಅಪ್ಪಯ್ಯನವರನ್ನು ಬಲ್ಲ ಹಲವು ಜನರ ಬರಹಗಳನ್ನು ಸಂಗ್ರಹಿಸಿದ್ದರು. ಎ. ಆರ್. ಮಣಿಕಾಂತ್ ಅವರ ‘ಅಪ್ಪ ಅಂದ್ರೆ ಆಕಾಶ’ ಎಂಬ ಪುಸ್ತಕ ಬಹು ಪ್ರಸಿದ್ದ ಹಾಗೂ ಜನಪ್ರಿಯವಾದುದು. ಧಾರವಾಡದಿಂದ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಹಾಗೂ ಡಾ. ಹೇಮಾ ಪಟ್ಟಣಶೆಟ್ಟಿಯವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ‘ಸಂಕಲನ’ ದ್ವೈಮಾಸಿಕ ಪತ್ರಿಕೆಯಲ್ಲಿ ‘ನನ್ನ ಅವ್ವ-ನನ್ನ ಅಪ್ಪ’ ಕೃತಜ್ಞತೆಯ ಮಾಲಿಕೆಯ ಲೇಖನಗಳ ಸರಣಿ ಸತತ ಐದು ವರ್ಷಗಳ ಕಾಲ ಪ್ರಕಟವಾಯಿತು. ಜನ ಮೆಚ್ಚುಗೆ ಪಡೆಯಿತು. ಇದರ ಪರಿಣಾಮ ಡಾ. ಹೇಮಾ ಅವರ ಸಂಪಾದಕತ್ವದಲ್ಲಿ ಇದೇ ಹೆಸರಿನಲ್ಲಿ ಎರಡು ಸಂಪುಟಗಳಲ್ಲಿ ಆ ಲೇಖನ ಮಾಲಿಕೆ ಪುಸ್ತಕ ರೂಪದಲ್ಲಿಯೂ ಪ್ರಕಟವಾಯಿತು.

ಪ್ರಸ್ತುತ ಕೃತಿ; ‘ಅಪ್ಪನು ನನಗಿಷ್ಟ’ ಪುಸ್ತಕದ ಹೊಳಹು, ಸಂಪಾದನೆ-ಪ್ರಕಟಣೆಯ ಜವಾಬ್ದಾರಿಯನ್ನು ಹೊತ್ತವರು ಸಹೋದರಿ ಡಾ. ಶರಣಮ್ಮ ಗೊರೇಬಾಳ. ಅವರು ವೃತ್ತಿಯಲ್ಲಿ ಕನ್ನಡ ಉಪನ್ಯಾಸಕಿಯಾಗಿ, ಧಾರವಾಡದ ಪ್ರತಿಷ್ಠಿತ ವಿದ್ಯಾ ಸಂಸ್ಥೆ ವಿದ್ಯಾರಣ್ಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಉತ್ತರ ಕರ್ನಾಟಕ ಲೇಖಕಿಯರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು ಮುಂತಾದ ಸಂಘಟನೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ. ಕವಿಯಿತ್ರಿ, ವಿಮರ್ಶಕಿ, ವಾಗ್ಮಿ ಹೀಗೆ ಹಲವು ಮುಖಗಳ ಸಾರಸ್ವತ ಸೇವೆ ಅವರದು. “ಅವ್ವನ ಕುರಿತು ಲೇಖನ ಬರೆಯಬೇಕಾದ ಸಂದರ್ಭದಲ್ಲಿ ಅಪ್ಪನೂ ನನಗಿಷ್ಟ ಅನಿಸತೊಡಗಿತು. ಹೀಗಾಗಿ ಅಪ್ಪನ ಕುರಿತು ಲೇಖನ ಬರೆಯುವಾಗ ನನ್ನಪ್ಪನ ಜೊತೆ ಇನ್ನಿತರರ ಅಪ್ಪನ ಕಷ್ಟ-ಸುಖ, ಜೀವನದ ಹೋರಾಟದ ವಿಷಯವನ್ನು ಏಕೆ ಬರೆಯಿಸಬಾರದು ಎಂಬ ಪ್ರಶ್ನೆ ಮೂಡಿತು. ಆಗಿಂದಾಗಲೇ ನಾನು ನನ್ನ ಹಿತೈಷಿಗಳ, ಆತ್ಮೀಯರ, ಕೆಲವು ಹಿರಿಯರ ಹೆಸರುಗಳನ್ನು ಪಟ್ಟಿ ಮಾಡಿದೆ. ಅವರಿಗೆ ಆ ಕೂಡಲೇ ಲೇಖನ ಬರೆದುಕೊಡುವಂತೆ ವಿನಂತಿಸಿಕೊಂಡೆ.” ಹೀಗೆ ಈ ಪುಸ್ತಕ ರೂಪುಗೊಂಡ ಹಿನ್ನೆಲೆಯನ್ನು ಸಂಪಾದಕಿ ನಿರೂಪಿಸಿದ್ದಾರೆ.

ಇಲ್ಲಿಯ ಐವತ್ತೊಂದು ಲೇಖನಗಳಲ್ಲಿ ಅನೇಕ ಹಿರಿಯರು ಅಂದರೆ ಸುಮಾರು ಎಪ್ಪತ್ತು ವರ್ಷದವರಿಂದ ಸುಮಾರು ಮೂವತ್ತು ವರ್ಷದವರವರೆಗೆ ಭಿನ್ನ ವಯೋಮಾನದ ಲೇಖಕರಿದ್ದಾರೆ. ಅವರು ತಮ್ಮ ಅಪ್ಪನ ಬಗ್ಗೆ ಬರೆಯುವಾಗ ಇದರ ವ್ಯಾಪ್ತಿ ಸುಮಾರು ಮೂರು ತಲೆಮಾರುಗಳನ್ನು ಒಳಗೊಳ್ಳುತ್ತದೆ. ಜೊತೆಗೆ ಭಿನ್ನ ಭಿನ್ನ ಕಾರ್ಯಕ್ಷೇತ್ರದ, ಮನೋಧರ್ಮದ ಅಪ್ಪಂದಿರು ಇಲ್ಲಿ ಅನಾವರಣಗೊಂಡಿದ್ದಾರೆ. ಇದು ಸಾಹಿತ್ಯ ಕೃತಿ ಮಾತ್ರವಾಗದೇ ಮುನ್ನುಡಿಯಲ್ಲಿ ಖ್ಯಾತ ವಿದ್ವಾಂಸರಾದ ಡಾ. ಗುರುಲಿಂಗ ಕಾಪಸೆಯವರು ಹೇಳಿರುವಂತೆ; “ಸಮಾಜಶಾಸ್ತ್ರಕ್ಕೆ ಅಧ್ಯಯನವಾಗಬಲ್ಲ ವಸ್ತು ವಿನ್ಯಾಸ ಇಲ್ಲಿದೆಯೆಂದು ನಾನು ಭಾವಿಸಿದ್ದೇನೆ”.

ಇಲ್ಲಿನ ಲೇಖನಗಳಲ್ಲಿ ಅಪ್ಪ; ಗುರುವಾಗಿ, ಗೆಳೆಯನಾಗಿ, ಆದರ್ಶವಾಗಿ ಹಲವು ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾನೆ. ತಮ್ಮ ಬದುಕನ್ನು ರೂಪಿಸಿದ ಅಪ್ಪನ ನೆನಪಿಗೆ ಅಕ್ಷರ ಶ್ರದ್ಧಾಂಜಲಿ ಧಾರಾಳವಾಗಿ ಸಂದಿದೆ. ಬಡತನವಿರಲಿ, ನೋವಿರಲಿ, ಎಂತಹುದೇ ಕಷ್ಟವಿರಲಿ ಅದರ ಝಳ ಮಕ್ಕಳಿಗೆ ತಾಗದಂತೆ ನೋಡಿಕೊಂಡ ಅಪ್ಪನ ವಾತ್ಸಲ್ಯದ ಝರಿ ಇಲ್ಲಿ ಹೊನಲಾಗಿ ಹರಿದಿದೆ. ಅಪ್ಪ ಎಂದೂ ಮಕ್ಕಳ ದೃಷ್ಟಿಯಲ್ಲಿ ಅಗ್ಗವಾದ ಉದಾಹರಣೆ ಇಲ್ಲಿ ಸಿಗುವುದಿಲ್ಲ. ಬದುಕನ್ನು ಕಟ್ಟಿಕೊಳ್ಳಲು ಆತ ಪಟ್ಟ ಕಷ್ಟಗಳು, ಮುಂದೆ ಸುಖ ಸಿಗುತ್ತದೆಂಬ ನಿರೀಕ್ಷೆಯಲ್ಲಿ ಆತ ಸವೆಸಿದ ನಿಸ್ಪೃಹ ಬದುಕು ಹಾಗೂ ಜೀವನದ ಕೊನೆಯ ಕಾಲದಲ್ಲಿ ಆತ ಅನುಭವಿಸಿದ ಸಂತೃಪ್ತಿಯ ಪಲುಕುಗಳು ಇಲ್ಲಿನ ಬರಹಗಳಲ್ಲಿ ಜೀವತಳೆದಿವೆ. ಡಾ. ವೈ. ಎಂ. ಭಜಂತ್ರಿಯವರು ಲೇಖನದ ಕೊನೆಗೆ ‘ಅಪ್ಪ ನೀ ಹೋದ ಮೇಲೆ’ ಎಂಬ ಕವಿತೆಯನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಅಪ್ಪನ ಸಮೃದ್ಧ ಚಿತ್ರಣವನ್ನು ನೀಡಿ ಕೊನೆಯಲ್ಲಿ;

ನನಗೆ ನಿನ್ನದೆ ಕೊರಗು
ಅಪ್ಪ ನೀ ಬಿಟ್ಟು ಹೋದ ಅಂಗೈಯಗಲ
ಹೊಲದಲ್ಲಿ ಆಕಾಶದೆತ್ತರ ಬೆಳೆ ತೆಗೆಯುವೆ
ಆಕಾಶದೀಪ ಕಟ್ಟಿ ಅದರೊಳಗೊಂದು
ಪುಟ್ಟ ಹಣತೆಯನಿಟ್ಟು ಯಾವಾಗಲೂ
ಆರದಂತೆ ಕಾಯುವೆ; ಯಾಕೆಂದರೆ ಅದರೊಳಗೆ ನೀನಿರುವೆ.
ಎಂದಿದ್ದಾರೆ. ಅಪ್ಪ ಬಿಟ್ಟು ಹೋಗಿರುವ ಕನಸನ್ನು ಪೂರೈಸುವ ಅದನ್ನು ಇತ್ಯೋಪ್ಯತಿಶಯವಾಗಿ ಮುಂದುವರಿಸುವ ಬದ್ಧತೆ ಇಲ್ಲಿ ಎದ್ದು ಕಾಣಿಸುತ್ತದೆ.

ಸಾಮಾನ್ಯ ಬದುಕಿನ, ಬದುಕನ್ನು ಕಟ್ಟಿಕೊಳ್ಳಲು ಹೋರಾಡಿದ ಅಪ್ಪಂದಿರ ಜೊತೆಗೆ ಹಲವು ಕ್ಷೇತ್ರಗಳ ಸಾಧಕರೆನಿಸಿದ ಅಪ್ಪಂದಿರ ಚಿತ್ರಣವೂ ಇಲ್ಲಿದೆ. ‘ನನ್ನ ಅಪ್ಪ ನನ್ನ ಗುರು’ ಎಂಬ ಶಿಕ್ಷಕ ಎಸ್. ಜಿ. ನಾಡಗೀರರ ಬದುಕು, ‘ನನ್ನ ಅಪ್ಪ ದೇಸಾಯಿ ಪಾಂಡುರಂಗರಾಯರು’ ಎಂಬ ಖ್ಯಾತ ಇತಿಹಾಸ ತಜ್ಞ ಪಿ. ಬಿ. ದೇಸಾಯಿಯವರ ಬದುಕು, ‘ಚಿರಂತನ ಜೀವಂತಿಕೆಯ ಜೀಬಿ’ ಎಂಬ ಖ್ಯಾತ ಪ್ರಕಾಶಕ ಲೇಖಕ ಜಿ. ಬಿ. ಜೋಶಿಯವರ ಬದುಕು, ‘ಅಪ್ಪನ ಛಾಯೆಯಲ್ಲಿ’ ಎಂಬ ಖ್ಯಾತ ಲೇಖಕ ಗಿರಡ್ಡಿ ಗೋವಿಂದರಾಜ ಅವರ ಬದುಕು ಇವೆಲ್ಲವೂ ಇಲ್ಲಿ ಅನಾವರಣಗೊಂಡಿವೆ.

ಇಲ್ಲಿಯ ಲೇಖನಗಳು ಒಂದು ರೀತಿಯ ಹೊಸ ಸಾಂಸ್ಕೃತಿಕ ದಾಖಲೆಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿವೆ. ಸಂಸ್ಕೃತಿಯ ರಕ್ಷಣೆ, ಐತಿಹಾಸಿಕ ಪ್ರಜ್ಞೆ, ವ್ಯಕ್ತಿಯ ಭಾವಶುದ್ಧಿಗಳು ಇಲ್ಲಿ ಆಕಾರಪಡೆದಿವೆ. ಅಪ್ಪಂದಿರ ತ್ಯಾಗ, ಶ್ರಮ ಸಹಿಷ್ಣುತೆ, ತಮ್ಮ ಮಕ್ಕಳ ಬದುಕನ್ನು ರೂಪಿಸುವಲ್ಲಿ ಅವರು ಎದುರಿಸಿದ ಕಷ್ಟ ಕಾರ್ಪಣ್ಯಗಳು ಇಲ್ಲಿ ನಿರ್ಭಿಡೆಯಿಂದ ಅನಾವರಣಗೊಂಡಿವೆ. ಐವತ್ತಕ್ಕೂ ಹೆಚ್ಚು ಲೇಖಕರ ಆತ್ಮಕಥನಾತ್ಮಕ ಬರವಣಿಗೆಗಳ ಈ ಸಂಕಲನ ಸಮಕಾಲೀನ ಕನ್ನಡ ಸಾಹಿತ್ಯಕ್ಕೆ ಒಂದು ಅಪೂರ್ವ ಕಾಣಿಕೆ ಎಂದೇ ಪರಿಗಣಿಸಬೇಕು.

ನಮ್ಮ ಸತ್ವಯುತ ಸಾಂಸ್ಕೃತಿಕ, ಸಾಮಾಜಿಕ ಬೇರುಗಳು ಅಭದ್ರಗೊಳ್ಳುತ್ತಿರುವ ಸಮಕಾಲೀನ ಸಂದರ್ಭದಲ್ಲಿ ಅವುಗಳ ಉಳಿವಿಗಾಗಿ ಶ್ರಮಿಸಬಹುದಾದ ಮಾದರಿಗಳನ್ನೂ ಇಲ್ಲಿಯ ಬರಹಗಳು ನಿರ್ಮಿಸಿವೆ. ಯುವ ಪೀಳಿಗೆಗೆ ಒಂದು ಕಾಲಮಾನದ ಆದರ್ಶಗಳನ್ನು ಕಟ್ಟಿಕೊಡುವ ಪಾರಂಪರಿಕ ಪಠ್ಯವಾಗಿ ಇಂತಹ ಪುಸ್ತಕದ ಮಹತ್ವವನ್ನು ಗೌರವಿಸಬೇಕಾಗಿದೆ. ನಮ್ಮ ಸಾಮಾಜಿಕ ಸ್ಥಿತಿಯಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ, ಭಾವನಾತ್ಮಕ ಬದುಕನ್ನು ಹೆಚ್ಚು ಬಂಧುರವಾಗಿಸುವ ದೃಷ್ಟಿಯಲ್ಲಿ ಇಲ್ಲಿಯ ಬರಹಗಳು ಸಫಲವಾಗಿವೆ. ಈ ಲೇಖನಗಳ ಓದು ಅಪ್ಪಂದಿರಾದವರಿಗೆ ಕನ್ನಡಿಯಾದರೆ, ಅಪ್ಪಂದಿರಾಗುವವರಿಗೆ ಮಾರ್ಗದರ್ಶನ ಮಾಡುತ್ತದೆ. ನನಗೂ ನನ್ನ ಅಪ್ಪಯ್ಯನ ಶಬ್ದಚಿತ್ರಣ ನಿರ್ಮಿಸುವ ಅವಕಾಶ ಈ ಪುಸ್ತಕದಲ್ಲಿ ಲಭಿಸಿದೆ. ಇಂತಹ ಅರ್ಥಪೂರ್ಣ ಯೋಜನೆಯನ್ನು ರೂಪಿಸಿ, ಕಾರ್ಯಗತಗೊಳಿಸಿರುವ ಡಾ. ಶರಣಮ್ಮ ಗೊರೇಬಾಳ ಅವರಿಗೆ ಓದುಗರ ಪರವಾಗಿ ಧನ್ಯವಾದಗಳು ಸಲ್ಲುತ್ತವೆ.

***

ಮುಪ್ಪಿನ ಹಲವು ಮುಖಗಳ ಅನಾವರಣ

ವೃದ್ಧಾಪ್ಯ: ಹಲವು ನೋವು-ಕೆಲವು ನಲಿವು
ಸಂಪಾದಕರು: ಶ್ರೀ ಎನ್. ಆರ್. ಕುಲಕರ್ಣಿ
ಪ್ರಕಾಶಕರು: ಎಸ್. ಎಲ್. ಎನ್. ಪಬ್ಲಿಕೇಷನ್ಸ್, ಬೆಂಗಳೂರು
ಪುಟಗಳು: 176 ಬೆಲೆ: 150/-

ಸಿರಿಗನ್ನಡ ವೇದಿಕೆಯ ವಿಜಯಪುರ ಜಿಲ್ಲಾ ಅಧ್ಯಕ್ಷರಾದ ಶ್ರೀ ಎನ್. ಆರ್. ಕುಲಕರ್ಣಿಯವರ ನಿತಾಂತ ಆಸಕ್ತಿಯ ಫಲವಾಗಿ ಪ್ರಸ್ತುತ ಪುಸ್ತಕ ಪ್ರಕಟವಾಗಿದೆ. ಬಹುತೇಕ ಮನುಷ್ಯರ ಜೀವನದ ಅನಿವಾರ್ಯ ಅವಸ್ಥೆಯಾದ ಮುಪ್ಪು ನೋವು-ನಲಿವುಗಳ ಒಂದು ಸಂಯುಕ್ತ. ಇದರಲ್ಲಿ ನೋವಿನ ಪ್ರಮಾಣವೆಷ್ಟು? ನಲಿವಿನ ಪ್ರಮಾಣವೆಷ್ಟು? ಎಂಬುದು ಕುತೂಹಲದ ಪ್ರಶ್ನೆಯೇ ಆಗಿದೆ. ಇದಕ್ಕೆ ಒಂದು ಹಂತದ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನ ಎಂಬಂತೆ ಪ್ರಸ್ತುತ ಪುಸ್ತಕವಿದೆ. ಹಾಗೆಂದು ಇದೇನೂ ಸಮೀಕ್ಷೆಯಲ್ಲ್ಲ. ತಮ್ಮ ಪರಿಚಯದ ಲೇಖಕರನ್ನು ಸಂಪರ್ಕಿಸಿ ವೃದ್ಧಾಪ್ಯದ ಕುರಿತು ಬರೆಸಿದ 26 ಲೇಖನಗಳನ್ನು ಸಂಪಾದಿಸಿ ಪ್ರಕಟಿಸಿರುವ ಕೃತಿಯಿದು.

ಇದರಲ್ಲಿ ಬದುಕನ್ನು ಹಲವು ದೃಷ್ಟಿಕೋನಗಳಿಂದ ಕಾಣುವ ಪ್ರಯತ್ನವಿದೆ. ಬೇಡವೆಂದರೂ ಅವಲಂಬನೆಯನ್ನು ಒಪ್ಪಿಕೊಳ್ಳಬೇಕಾದ ಅಸಹಾಯಕ ಸ್ಥಿತಿಯಲ್ಲಿ ತಾಳ್ಮೆಯಿರದಿದ್ದರೆ ಆಗುವ ಸಂಕಟವನ್ನು, ಬದಲಾದ ಸಾಮಾಜಿಕ ವ್ಯವಸ್ಥೆಗೆ ಹೊಂದಿಕೊಳ್ಳಲಾಗದ ವೃದ್ಧರ ಮಾನಸಿಕ ಅವಸ್ಥೆಯನ್ನು ಹಿರಿಯ ಲೇಖಕ ನಾ. ಡಿಸೋಜ ಅವರ ‘ವೃದ್ಧಾಪ್ಯ ಒಂದು ಸವಾಲು’ ಎಂಬ ಲೇಖನ ಹಿಡಿದಿಟ್ಟಿದೆ. ವೃದ್ಧಾಪ್ಯವೆಂದರೆ ಮಧುರ ನೆನಪುಗಳ ಆಗರ ಎಂಬುದು ಎಂ. ಎಸ್. ನರಸಿಂಹಮೂರ್ತಿಯವರ ಅಭಿಪ್ರಾಯ. ಬಾಳಿನ ಇಳಿಹೊತ್ತು ಮೌಲಿಕ ಕಾಲ ಎನ್ನುವ ಕವಿ ದೊಡ್ಡರಂಗೇಗೌಡರು;

ವೃದ್ಧಾಪ್ಯದಲಿ ನೆನೆನೆನೆ ಯೌವನದ ದಿನಗಳ
ನೆನೆ ನೆನೆ ಹುರುಪಿನ ಕ್ಷಣಗಳ;
ನೆನೆ ನೆನೆ ಹೊಂಗನಸುಗಳ ಕಾರ್ಯಾಚರಣೆ
ನೆನೆ ನೆನೆ ಜೀವಯೋಜನೆಯ ಪ್ರೇರಣೆ!
ವೃದ್ಧಾಪ್ಯ ಶಾಪವಲ್ಲ; ವರ
ಕುಳಿತಲ್ಲೇ ಒಳಿತ ಕಾಣು, ಕಟ್ಟು;
ಪ್ರತಿ ಬೆಳಗೂ ಸೂರ್ಯನಂತಾಗು
ಚಿಂತನ ಕಿರಣಗಳಿಂದ ಬಾಗು-ಬೀಗು!

ಎಂದು ಕವಿತೆಯ ಮೂಲಕ ವೃದ್ಧಾಪ್ಯದ ಹೆಮ್ಮೆಯನ್ನು ಅನಾವರಣ ಮಾಡಿದ್ದಾರೆ. ವೃದ್ಧರಿಗೆ ನಾಳೆ ಎಂಬುದಿದೆ – ಎಂದು ಪ್ರತಿಪಾದಿಸಿರುವ ಡಾ. ವಸಂತಕುಮಾರ ಪೆರ್ಲರು; “ಹಿರಿಯರಾದ ನಾವು ಅನುಭವದ ಗಣ ಗಳೆನಿಸುವ ವಿಶ್ವಾಸವಿರಬೇಕೇ ಹೊರತು ಅದು ದುರಹಂಕಾರಕ್ಕೆ ಕಾರಣವಾಗಬಾರದು. ಅನುಭವವೊಂದೇ ಎಲ್ಲಾ ಕಷ್ಟಗಳನ್ನೂ ಪರಿಹರಿಸಲಾರದು. ಹಳೇಬೇರಿನಲ್ಲಿ ಹುಟ್ಟಿದ ಹೊಸ ಚಿಗುರು ಮಿಳಿತವಾದಾಗಲೇ ಬದುಕು ಸುಂದರ” ಎಂದು ಅಭಿಪ್ರಾಯಪಟ್ಟಿದ್ದಾರೆ. ವೃದ್ಧಾಪ್ಯ ಯಾತ್ರೆಯ ಕುರಿತು ಜಂಬುನಾಥ ಕಂಚ್ಯಾಣ ಅವರ ವಚನ ತುಂಬಾ ಆಶಾದಾಯಕವಾದುದು;

ಹಿರಿಯರೆಂದರೆ ಶಾಪವಲ್ಲ
ಹಿರಿಯರೆಂದರೆ ಪಾಪವಲ್ಲ
ಹಿರಿಯರೆಂದರೆ ತಾಪವಲ್ಲ
ಹಿರಿಯರು ನಮ್ಮ ನಿಮ್ಮ ಮನೆಯ
ನಂದಾದೀಪ ನೋಡಾ
ಶರಣಬಸವಪ್ರಿಯ ಜಂಬಣ್ಣ.

‘ತುಂಬಬೇಕಿದೆ ಒಣಗಿದ ಎಲೆಗಳಿಗೆ ನೆಮ್ಮದಿಯ ಹಸಿರು ಬಣ್ಣ’ ಎಂಬುದು ಜಯಶ್ರೀ ಅಬಿಗೇರಿಯವರ ಬರಹದ ಶೀರ್ಷಿಕೆಯಾದರೆ; ‘ಜೀವನೋತ್ಸಾಹವು ಚಿಮ್ಮುತ್ತಿರಲಿ’ ಎಂಬುದು ಸ. ರಾ. ಸುಲಕೂಡೆಯವರ ಸದಾಶಯವನ್ನು ಹೊತ್ತಿರುವ ಶೀರ್ಷಿಕೆ. ಬಿ. ಆರ್. ಪೆÇಲೀಸ್ಪಾಟೀಲರ ‘ದಿಸ್ ನಂಬರ್ ಡಸ್ ನಾಟ್ ಎಗ್ಸಿಸ್ಟ್’ ಒಂದು ವೃದ್ಧ ಬದುಕಿನ ಹೃದಯವಿದ್ರಾವಕ ಕಥೆಯನ್ನೇ ನಿರೂಪಿಸಿದೆ.

‘ನಮ್ಮ ಬದುಕಿನಲ್ಲಿ ಯಾವುದೇ ಶ್ರಮವೂ ಇಲ್ಲದೇ ಒದಗಿಬರುವ ಕೊನೆಯ ಅವಸ್ಥೆಯೇ ವೃದ್ಧಾಪ್ಯ’ ಎಂಬುದು ಹೆಲೆನ್ ರೌಲ್ಯಾಂಡ್ ಅವರ ವ್ಯಾಖ್ಯಾನ. ಇದು ಎಲ್ಲ ಪ್ರಾಣಿಗಳ ಬದುಕಿನಲ್ಲಿ ಸಹಜವಾಗಿ ಬರುವ ಹಂತ. ಮತ್ತು ಬಾಲ್ಯಕ್ಕಿಂತಲೂ ಹೆಚ್ಚು ಸೂಕ್ಷ್ಮ ಹಂತ. ಮುಪ್ಪು ದೇಹಕ್ಕೆ ಬಲು ನಿಧಾನವಾಗಿ ಬರುತ್ತದೆ ಎಂಬುದೇ ಒಂದು ಸಮಾಧಾನ. ಸಾಗಿ ಮಾಗಿ ಬರುವ ಹಿರಿತನದ ವೈಶಿಷ್ಟ್ಯವನ್ನು ಇಲ್ಲಿಯ ಲೇಖನಗಳು ಹದವರಿತು ಚಿತ್ರಿಸಿವೆ.

ಸಹಜವಾಗಿಯೇ ಸಮಕಾಲೀನ ಜಗತ್ತಿನಲ್ಲಿ ಯುವಕರು ಮತ್ತು ಮುದುಕರ ಮಧ್ಯೆ ಬಹುದೊಡ್ಡ ತಲೆಮಾರಿನ ಅಂತರದ ಕಂದಕ ಸೃಷ್ಟಿಯಾಗಿದೆ. ಬಹುತೇಕ ಹಳೆಯ ತಿಳುವಳಿಕೆಗಳು, ಕೌಶಲಗಳು ಅವಜ್ಞೆಗೆ ಗುರಿಯಾಗಿವೆ. ಹೀಗಿರುವಾಗ ವೃದ್ಧರ ಸಲಹೆಗಳು, ಉಪದೇಶಗಳು ಮೌಲಿಕವೆನಿಸದ ಸ್ಥಿತಿಗೆ ಸಮಾಜ ಬಂದು ತಲಪಿದೆ. ಇಂತಹ ಸಂಧಿಕಾಲದಲ್ಲಿ ವೃದ್ಧಾಪ್ಯದ ನೋವು ನಲಿವುಗಳನ್ನು ಮುಕ್ತಮನಸ್ಸಿನಿಂದ ಚರ್ಚಿಸುವ ಇಲ್ಲಿಯ ಲೇಖನಗಳು ಅತ್ಯಂತ ಪ್ರಸ್ತುತವೆನಿಸುತ್ತವೆ.

ಈ ಅಂಕಣದ ಹಿಂದಿನ ಬರಹಗಳು:
ಸಮಕಾಲೀನ ಪುಸ್ತಕಲೋಕದ ಅಘಟಿತ ಘಟನೆ
ಮರಾಠಿಯನ್ನು ಮೀರಿ ಕನ್ನಡ ಪತ್ರಿಕೋದ್ಯಮದ ’ಚಂದ್ರೋದಯ’

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...