ಕ್ಯಾಲಿಬನ್‍ನ ದಶಾವತಾರಗಳು

Date: 01-10-2020

Location: ಬೆಂಗಳೂರು


16ನೇ ಶತಮಾನದಿಂದ ಆರಂಭವಾಗುವ ಸಮುದ್ರ ಪರ್ಯಟನೆಗಳು, ವಲಸೆಗಳು ಅತ್ಯಂತ ಕ್ರೂರವಾದ ವಸಾಹತುಶಾಹಿಯನ್ನು ಮುಂದಿನ ಶತಮಾನಗಳಲ್ಲಿ ಸ್ಥಾಪಿಸಿದವು ಎನ್ನುವ ಹಿರಿಯ ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಅವರು ’ಹಾಗೆ ಆಗುವ ಮೊದಲೇ ಪಶ್ಚಿಮವು ತಾನು ಮತ್ತು ಇತರರು ಎಂದು ಮನುಷ್ಯ ಜಗತ್ತನ್ನು ಇಬ್ಭಾಗ ಮಾಡಿಕೊಂಡು ಮಾನಸಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಸಿದ್ಧವಾಗಿತ್ತು. ಹೀಗೆ ರಚಿಸಲ್ಪಟ್ಟ ‘ಇತರ’ನ ಅತ್ಯಂತ ಪ್ರಭಾವಿ ವ್ಯಕ್ತಿತ್ವವೇ ಶೇಕ್ಸ್‌ಪಿಯರ್ ನ ಕ್ಯಾಲಿಬನ್’ ಎಂದು ವಿವರಿಸಿದ್ದಾರೆ.

“ನೀನು ನನಗೆ ಭಾಷೆಯನ್ನು ಕಲಿಸಿದೆ.
ಅದರ ಪ್ರಯೋಜನವೆಂದರೆ ನಾನು ಅದರಲ್ಲಿ ನಿನ್ನನ್ನೂ ಶಪಿಸಬಲ್ಲೆ”

ಬಹು ಪ್ರಸಿದ್ಧವಾದ ಈ ಮಾತನ್ನು ಕಳೆದ ನಾನೂರು ವರ್ಷಗಳಲ್ಲಿ ಜಗತ್ತಿನ ಅನೇಕ ದೇಶಗಳಲ್ಲಿ ಯಾರು ಯಾವ ಸಂದರ್ಭದಲ್ಲಿ ಯಾವ ಅರ್ಥದೊಂದಿಗೆ ಬಳಸಿದ್ದಾರೆ ಎನ್ನುವುದೇ ಸಂಶೋಧನೆಯ ವಿಷಯವಾಗಬಲ್ಲದು. ಈ ಮಾತನ್ನು ಹೇಳುವವನು ಶೇಕ್ಸ್‌ಪಿಯರ್ ನ The Tempest ನಾಟಕದಲ್ಲಿ ಒಬ್ಬ ಪಾತ್ರವಾಗಿ ಬರುವ ಕ್ಯಾಲಿಬನ್. ಈ ನಾಟಕದಲ್ಲಿ ಮಿಲಾನ್‍ನ ರಾಜ್ಯದ (?) ಡ್ಯೂಕ್ ಆಗಿದ್ದ ಪ್ರಾಸ್ಟೆರೋ ತನ್ನ ಸಹೋದರನಿಂದ ಮೋಸ ಹೋಗಿ ಅಧಿಕಾರವನ್ನು ಕಳೆದುಕೊಂಡು ತನ್ನ ಪುಟ್ಟ ಮಗಳು ಹಾಗೂ ಅನೇಕ ಗ್ರಂಥಗಳೊಂದಿಗೆ ಬಂದು ತಲುಪುವುದು ಒಂದು ನಿರ್ಜನವಾದ ದ್ವೀಪಕ್ಕೆ. ಅಲ್ಲಿ ತಂದೆ ಮಗಳ ಹೊರತಾಗಿ ಇರುವವರು ಕ್ಯಾಲಿಬನ್ ಮತ್ತು ಏರಿಯಲ್ ಎನ್ನುವ ಒಬ್ಬ spirit ಮಾತ್ರ. ಮುಂದೆ ನಾಟಕದಲ್ಲಿ ಪ್ರಾಸ್ಟೆರೋ ಹೇಳುವ ಹಾಗೆ ಪೂರ್ತಿ ಮನುಷ್ಯನ ಹಾಗೆಯೂ ಕಾಣದ ಆದಿಮಾನವನಂತಿರುವ ಕ್ಯಾಲಿಬನ್‍ಗೆ ಭಾಷೆ ಬರದು. ಪ್ರಾಸ್ಟೆರೋ ಮತ್ತು ಅವನ ಮಗಳು ಮಿರಾಂಡಾ ಅವನಿಗೆ ತಮ್ಮ ಭಾಷೆಯನ್ನು ಕಲಿಸಿಕೊಡುತ್ತಾರೆ. ಅವನನ್ನು “ನಾಗರೀಕ” ಗೊಳಿಸಲು ಪ್ರಯತ್ನಿಸುತ್ತಾರೆ. ಆದರೆ ಶುದ್ಧ ಒರಟನೂ, ಅವಿವೇಕಿಯೂ ಆಗಿರುವ ಕ್ಯಾಲಿಬನ್ ಪ್ರಾಸ್ಟೆರೋನನ್ನು ದ್ವೇಷಿಸುತ್ತಾನೆ. ಅವನ ಮಗಳು ಮಿರಾಂಡಾಳ ಮೇಲೆ ಎರಗಲು ಹೋಗಿ ಶಿಕ್ಷೆಗೆ ಒಳಪಡುತ್ತಾನೆ. ಈಗ ಅವನು ಒಡೆಯನಾದ ಪ್ರಾಸ್ಟೆರೋನ ಗುಲಾಮ. ಏಕೆಂದರೆ ಪ್ರಾಸ್ಟೆರೋ ಒಬ್ಬ ಮಂತ್ರವಾದಿ ಕೂಡ. ತನ್ನ ಗ್ರಂಥಗಳ ಸಹಾಯದಿಂದ ಏನನ್ನೂ ಮಾಡಬಲ್ಲ, ಜೊತೆಗೆ ಏರಿಯಲ್ ಅವನ ನಂಬಿಗೆಯ ಬಂಟನಾಗಿ ಅವನು ಹೇಳಿದ್ದನ್ನೆಲ್ಲಾ ಮಾಡಬಲ್ಲ ಶಕ್ತಿಯುಳ್ಳವನು. ಹೀಗಾಗಿ ಆಗಾಗ ದುಮು ದುಮು ಬುಸಗುಟ್ಟುತ್ತಾ ಒಡೆಯನ ಕೆಲ ಮಾಡಿಕೊಂಡು ಕ್ಯಾಲಿಬನ್ ಇದ್ದಾನೆ.

ಅಂದ ಹಾಗೆ ಕ್ಯಾಲಿಬನ್ ಪಾತ್ರದ ಕಲ್ಪನೆ ಹೇಗೆ ಬಂದಿರಬಹುದು ಎನ್ನುವುದು ರೋಚಕವಾದ ಸಂಶೋಧನೆಯ ವಸ್ತುವಾಗಿದೆ. ಹದಿನಾರನೆಯ ಶತಮಾನದ ಉದ್ದಕ್ಕೂ ಪಶ್ಚಿಮದ ಅನೇಕ ದೇಶಗಳು ಸ್ಪೇನ್, ಪೊರ್ಚುಗಾಲ್, ಫ್ರಾನ್ಸ್ ಮತ್ತು ಇಂಗ್ಲೆಂಡ್ ಸಮುದ್ರಯಾನದ ಮೂಲಕ ಅನೇಕ ಹೊಸ ಭೌಗೋಳಿಕ ಪ್ರದೇಶಗಳನ್ನು “ಕಂಡು ಹಿಡಿದು” ಅನ್ವೇಷಣೆ ಮಾಡುತ್ತಲಿದ್ದವು. ಹಾಗೆ ನೋಡಿದರೆ ಇದು ಮನುಷ್ಯ ಚರಿತ್ರೆಯಲ್ಲಿ ಹೊಸದಲ್ಲ. ಫೀನಿಶಿಯಾದ ನಾವಿಕರು ತಮ್ಮ ನಾವೆಗಳಲ್ಲಿ ಆಫ್ರಿಕಾದ ಪರಿಭ್ರಮಣೆಯನ್ನು ಕ್ರಿಸ್ತಪೂರ್ವ 600ರ ಹೊತ್ತಿಗೆ ಮಾಡಿದ್ದರು. ಅರಬ್ ರಾಜ್ಯಗಳ ವ್ಯಾಪಾರಿಗಳು ಭಾರತದ ಪಶ್ಚಿಮ ಕರಾವಳಿಯಲ್ಲಿ ವಿಶೇಷವಾಗಿ ಮಲಬಾರ್‌ನಲ್ಲಿ ಅನೇಕ ಶತಮಾನಗಳಿಂದ ಮಳಿಗೆಗಳನ್ನು ಮಾಡಿಕೊಂಡು ಅನೇಕರು ಇಲ್ಲಿಯ ನಿವಾಸಿಗಳಾಗಿ ಬಿಟ್ಟಿದ್ದರು. ಅಂದಿನ ಜಾಗತೀಕರಣದಲ್ಲಿ ಭಾರತವೇ ಪ್ರಮುಖ ಕೇಂದ್ರವಾಗಿತ್ತು.

ಆದರೆ 16ನೇ ಶತಮಾನದಿಂದಾಚೆಗೆ ನಡೆದದ್ದೇ ಬೇರೆ. ಅದು ಕೇವಲ ಸಾಹಸ, ಪರ್ಯಟನೆ, ಸಮುದ್ರಯಾನವಾಗಿರಲಿಲ್ಲ. ವ್ಯಾಪಾರಿ ಬಂಡವಾಳಶಾಹಿಯು ಪ್ರಬಲವಾಗಿ ಬೆಳೆಯುತ್ತಿದ್ದು ರಾಜಸತ್ತೆಗಳ ಸಹಾಯದೊಂದಿಗೆ ವ್ಯಾಪಾರಿ ಕಂಪನಿಗಳಂಥ ಸಂಘಟನೆಗಳನ್ನು ಕಟ್ಟಿಕೊಳ್ಳಲು ಆಗತಾನೆ ಆರಂಭಿಸಿದ್ದವು. ಹೊಸ ಭೂಖಂಡಗಳಲ್ಲಿ ಇರುವ ಅಪಾರವಾದ ಸಂಪನ್ಮೂಲಗಳನ್ನು ದೋಚುವ ಕೆಲಸವೂ ಆರಂಭವಾಗಿತ್ತು. ಚರಿತ್ರೆಯಲ್ಲಿ ಮಹಾಸಾಹಸಿಗರು ಎಂದು ವರ್ಣಿತವಾಗಿರುವ ಬಹುಪಾಲು ವ್ಯಕ್ತಿಗಳು ಕಡಲುಗಳ್ಳರೇ (pirates) ಆಗಿದ್ದರು. ಧಾರ್ಮಿಕ ಕಿರುಕುಳದಿಂದಾಗಿ ಅಮೇರಿಕಾಗೆ 1620ರಲ್ಲಿ ವಲಸೆ ಹೋದ ಇಂಗ್ಲೆಂಡ್‍ನ ಪ್ಯೂರಿಟನ್ ಪಂಥದವರು ಆ “ಹೊಸ ಜಗತ್ತಿನಲ್ಲಿ” ವಸಾಹತುಗಳನ್ನು ಕಟ್ಟಿದರು. ಹಾಗೆಯೇ ದಕ್ಷಿಣ ಅಮೇರಿಕಾದ (ಇಂದಿನ ಲ್ಯಾಟಿನ್ ಅಮೇರಿಕಾ) ಪ್ರದೇಶವನ್ನು ತಲುಪಿ ಸ್ಪೇನ್‍ನ ಸೇನಾನಿಗಳು ಅಲ್ಲಿದ್ದ ಅತ್ಯಂತ ಪ್ರಾಚೀನ ಸಂಸ್ಕೃತಿಗಳನ್ನು ಸಮಾಜಗಳನ್ನು ನಾಶ ಮಾಡಿದರು. ಅಮೇರಿಕಾದ ಮೂಲ ನಿವಾಸಿಗಳಾದ ರೆಡ್ ಇಂಡಿಯನ್ ಕುಲದವರು ಹೀಗೆಯೇ ಪಶ್ಚಿಮದ ‘ನಾಗರೀಕ’ ವಲಸೆಗಾರರಿಂದಾಗಿ ಅನಾಥರಾದರು.

ಇದೆಲ್ಲ ಸಾಧ್ಯವಾದುದಕ್ಕೆ ಕಾರಣವೆಂದರೆ ಪಶ್ಚಿಮದವರ ಪ್ರಕಾರ ಈ ಹೊಸ ಭೂಖಂಡಗಳು, ದ್ವೀಪಗಳು Terra Nullius ಅಂದರೆ ನಿರ್ಜನ ಖಾಲಿ ಪ್ರದೇಶಗಳು. ಅಲ್ಲಿಯ ಭೂಮಿ, ನೈಸರ್ಗಿಕ ಸಂಪನ್ಮೂಲಗಳು ಪಶ್ಚಿಮದ ಸಾಹಸಿಗರು ಬರಲಿ ಎಂದು ಶತಮಾನಗಳಿಂದ ಕಾಯುತ್ತಿದ್ದವು. ಹಾಗಿದ್ದರೆ ಅಲ್ಲಿಯ ನೆಲ ಸಂಸ್ಕೃತಿಗಳ, ಬುಡಕಟ್ಟುಗಳ ಆದಿವಾಸಿಗಳು ಮನುಷ್ಯರಾಗಿರಲಿಲ್ಲವೆ? ಇಲ್ಲ ಅವರು ಅನಾಗರೀಕರು, ಆದಿಮಾನವರು, ರಾಕ್ಷಸರು (Monsters) ಆಗಿದ್ದರಿಂದ ಅವರು ಮನುಷ್ಯರ ಲೆಕ್ಕಕ್ಕೆ ಬರುತ್ತಿರಲಿಲ್ಲ. ಅವರನ್ನು ಕೊಲ್ಲುವುದು, ಲೈಂಗಿಕವಾಗಿ ಬಳಸಿಕೊಳ್ಳುವುದು, ಗುಲಾಮರನ್ನಾಗಿಸುವುದು ನಿಸರ್ಗದ ನಿಯಮವೇ ಆಗಿತ್ತು. ಏಕೆಂದರೆ ಅವರು “ಇತರರು” ಇದು ಮನುಷ್ಯ ನಾಗರೀಕತೆಯ ಹೊಸರೋಗವೇನಲ್ಲ. ನಾವು ಬಲ್ಲ ಎಲ್ಲಾ ನಾಗರೀಕತೆಗಳು ಇತರರನ್ನು ರಾಕ್ಷಸರು, ದಸ್ಯುಗಳು, ಮ್ಲೇಚ್ಛರು ಹೀಗೆಂದು ಕರೆದು ಅವರ ವ್ಯಕ್ತಿತ್ವವನ್ನು ತಾವೇ ರಚಿಸಿಕೊಟ್ಟೆವು. ಆದರೆ 16ನೇ ಶತಮಾನದಿಂದ ಆರಂಭವಾಗುವ ಸಮುದ್ರ ಪರ್ಯಟನೆಗಳು, ವಲಸೆಗಳು ಅತ್ಯಂತ ಕ್ರೂರವಾದ ವಸಾಹತುಶಾಹಿಯನ್ನು ಮುಂದಿನ ಶತಮಾನಗಳಲ್ಲಿ ಸ್ಥಾಪಿಸಿದವು. ಹಾಗೆ ಆಗುವ ಮೊದಲೇ ಪಶ್ಚಿಮವು ತಾನು ಮತ್ತು ಇತರರು ಎಂದು ಮನುಷ್ಯ ಜಗತ್ತನ್ನು ಇಬ್ಭಾಗ ಮಾಡಿಕೊಂಡು ಮಾನಸಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಸಿದ್ಧವಾಗಿತ್ತು. ಹೀಗೆ ರಚಿಸಲ್ಪಟ್ಟ ‘ಇತರ’ನ ಅತ್ಯಂತ ಪ್ರಭಾವಿ ವ್ಯಕ್ತಿತ್ವವೇ ಶೇಕ್ಸ್‌ಪಿಯರ್‌ನ ಕ್ಯಾಲಿಬನ್.

ಶೇಕ್ಸ್‌ಪಿಯರ್ ಪಶ್ಚಿಮದ ಶ್ರೇಷ್ಠ ಸಾಹಿತ್ಯವನ್ನು ಸ್ವಲ್ಪಮಟ್ಟಿಗೆ ಇತಿಹಾಸವನ್ನು ಇಂಗ್ಲಿಷ್ ಅನುವಾದಗಳಲ್ಲಿ ಓದಿ ಅರಗಿಸಿಕೊಂಡಿದ್ದ. ಸ್ಟ್ರಾಟ್‍ಫರ್ಡ್ ಅಪಾನ್ ಏವನ್ ಎನ್ನುವ ಅವನು ಹುಟ್ಟಿದ ಊರಿನಲ್ಲಿ ಮಕ್ಕಳಿಗೆ ಕುಂಡೆಯ ಮೇಲೆ ಕೋಲಿನಿಂದ ಬಾರಿಸಿ ಲ್ಯಾಟಿನ್ ಕಲಿಸುತ್ತಿದ್ದರು. (ಹೀಗಾಗಿ ಒಬ್ಬ ಬರಹಗಾರನು “ದೇವರು ನಮ್ಮ ಹಿಂಬದಿಗಳನ್ನು ಸೃಷ್ಠಿ ಮಾಡಿದ್ದೇ ಲ್ಯಾಟಿನ್ ಕಲಿಯಲು ಎಂದು ಉದ್ಗರಿಸಿದ್ದನಂತೆ!). ಅಷ್ಟೇನೂ ಒಳ್ಳೆಯ ವಿದ್ಯಾರ್ಥಿಯಾಗಿರದ ವಿಲಿಯಂ ಶೇಕ್ಸ್‌ಪಿಯರ್‌ನಿಗೆ ಅವನ ಸಮಕಾಲೀನ ನಾಟಕಕಾರ ಬೆನ್ ಜಾನ್ಸನ್‍ನ ಪ್ರಕಾರ ‘ಕೊಂಚ ಲ್ಯಾಟಿನ್, ಇನ್ನೂ ಕಡಿಮೆ ಗ್ರೀಕ್ ಬರುತ್ತಿತ್ತು. ಆದರೆ ಆ ಸಂಕ್ರಮಣದ, ಬದಲಾವಣೆಯ, ಯುಗದ ಉತ್ಸಾಹದ ಕಾಲದಲ್ಲಿ ಗ್ರಂಥಗಳು ಇಂಗ್ಲಿಷ್ ಅನುವಾದದಲ್ಲಿ ದೊರೆಯುತ್ತಿದ್ದವು. ಅಲ್ಲದೇ ಶೇಕ್ಸ್‌ಪಿಯರ್ ಪ್ರಿಯ ಸಂಸ್ಕೃತಿಯಲ್ಲಿ ಶಿರದುದ್ದ ಮುಳುಗಿದ್ದವನು. ಹೀಗಾಗಿ ಅಂದಿನ ಅತ್ಯಂತ ಜನಪ್ರಿಯ ಬರಹಗಳಾದ ಪ್ರವಾಸಿ ಕಥನಗಳನ್ನು, ಸಾಹಸ ಯಾತ್ರೆಗಳನ್ನು, ದೂರದ ಜಗತ್ತಿನ ವಿಚಿತ್ರ ಜನರ ವರ್ಣನೆಗಳನ್ನು ಕಂಠಮಟ ಕುಡಿದುಬಿಟ್ಟಿದ್ದ. ಅದರಲ್ಲಿ ಒಂದು ವಿಲಿಯಂ ಸ್ಪ್ರೇಚಿ ಎನ್ನುವವನ ನೇತೃತ್ವದಲ್ಲಿ ಅಮೇರಿಕಾಗೆ ಹಡಗಿನಲ್ಲಿ ಹೊರಟು ಬರ್ಮುಡಾದ ಯಾವುದೋ ಒಂದು ದ್ವೀಪದಲ್ಲಿ ಕಳೆದು ಹೋದ ಕತೆಯೂ ಒಂದು. ಆ ದ್ವೀಪ ಅದೆಷ್ಟು ಸುಂದರವಾಗಿತ್ತೆಂದರೆ ನಾವಿಕರು ಅದನ್ನು ಬಿಟ್ಟು ಬರಲೊಲ್ಲೆವೆಂದು ಹಟಮಾಡಿದರು. ಕೊನೆಗೂ ಸುಮಾರು ಒಂಬತ್ತು ತಿಂಗಳ ನಂತರ ಹಠಾತ್ತನೆ ಪ್ರತ್ಯಕ್ಷರಾಗಿ ಎಲ್ಲರಿಗೆ ಅಚ್ಚರಿ ಮೂಡಿಸಿದ್ದರು. ಇದು ಪ್ರಾಸ್ಟೆರೋ ಹದಿಮೂರು ವರ್ಷ ಆರಾಮವಾಗಿ ಇರಲು ಅನುಕೂಲವಾಗಿದ್ದ ದ್ವೀಪದ ಮೂಲ ಮಾದರಿ.

ಇನ್ನು ಅನೇಕ ಸಾಹಸಿ ನಾವಿಕರು ತಾವು ನೋಡಿದ ವಿಚಿತ್ರ ಮನುಷ್ಯರ ಬಗ್ಗೆ ರಂಗು ರಂಗಾದ ಕತೆಗಳನ್ನು ಹೇಳುತ್ತಿದ್ದರು. ಇದರಲ್ಲಿ ಮುಖ್ಯವೆಂದರೆ ಆದಿವಾಸಿಗಳು ನರಭಕ್ಷಕರಾಗಿದ್ದರು ಎನ್ನುವುದು. ನರಭಕ್ಷಕರಿಗೆ Cannibals ಎಂದು ಕರೆಯಲಾಗುತ್ತಿತ್ತು. ಈ ಪದದ anagram(ಅಕ್ಷರ ಹಿಂದುಮುಂದೆ ಮಾಡುವುದು) Caliban ಎನ್ನುವ ಪದ. ಹೀಗಾಗಿ ಸಿಕೋರ್ಯಾಕ್ಸ್ ಎನ್ನುವ ದುಷ್ಟ ಮಾಟಗಾತಿಗೆ ಕ್ಯಾಲಿಬನ್ ಮಗನಾಗಿ ಹುಟ್ಟುವ ಮೊದಲೇ ಪಶ್ಚಿಮವು ಅವನಿಗೆ ನಾಮಕರಣವನ್ನು ಮಾಡಿಬಿಟ್ಟಿತ್ತು. ಆದರೆ The Tempest ನಾಟಕದಲ್ಲಿ ಅವನು ಕಾಯಿ, ಹಣ್ಣು ಇತ್ಯಾದಿಗಳನ್ನು ಇಷ್ಟಪಡುವ vegetarian ಆಗಿದ್ದಾನೆ! ಅಲ್ಲದೆ ಅಮೇರಿಕಾದ ಮೂಲನಿವಾಸಿಗಳಂತೆ ಹುಲ್ಲು ಜೊಂಡಿನ ಕೊಳವೆಯಲ್ಲಿ ತಂಬಾಕು ಹೊಗೆ ಎಳೆಯುವ ಅಭ್ಯಾಸವೂ ಅವನಿಗಿಲ್ಲ, ಅವನು ಆಫೀಮು ಬಳಸುವ ಯಾವ ವಿವರವೂ ನಾಟಕದಲ್ಲಿಲ್ಲ. (ಹೀಗಾಗಿ ಈ ಲೇಖನವನ್ನು ಓದುತ್ತಿರುವ ನಿಮಗೆ ಕರ್ನಾಟಕ ಪೊಲೀಸರಿಂದ ಯಾವ ಅಪಾಯವೂ ಇಲ್ಲ. ಮುಂದುವರೆಯಿರಿ).

ಆದರೆ ಒಡೆಯನಾದ ಪ್ರಾಸ್ಟೆರೋನ ಕಣ್ಣಿನಲ್ಲಿ ಅವನು ಅನಾಗರೀಕ, ಒರಟ; ಮಿರಾಂಡಾಳ ಪ್ರಕಾರ “ಪ್ರಕೃತಿಯೇ ನೈಸರ್ಗಿಕವಾಗಿ ಅವನ ಮೇಲೆ ಅಂಟಿಕೊಳ್ಳದಂಥ” ವಿಕಾರ ವ್ಯಕ್ತಿತ್ವದವನು. ವಿಶೇಷವೆಂದೆ ಅವನನ್ನು “This thing of darkness” ಎಂದು ಕರೆಯುವ ಪ್ರಾಸ್ಟೆರೋ ಅವನನ್ನು ಕರಿಯ ಅಥವಾ ಕಪ್ಪು ಎಂದು ಕರೆಯುವುದಿಲ್ಲ. ಆದರೆ ಖಚಿತವಾಗಿಯೇ ಅವನು ಇನ್ನೊಂದು ಜನಾಂಗದವನು (Race). ಈ ನಾಟಕ ಹೊರಬರುವ ಹೊತ್ತಿಗೆ ಜನಾಂಗೀಯ ದ್ವೇಷವು ವಿವಿಧ ರೂಪಗಳಲ್ಲಿ ಪಶ್ಚಿಮದ ಪ್ರಜ್ಞೆಯನ್ನು ಆಳವಾಗಿ ಪ್ರವೇಶಿಸಿತ್ತು.

ಇದರ ದ್ಯೋತಕವಾಗಿ ಕ್ಯಾಲಿಬನ್ ದೈಹಿಕವಾಗಿ ವಿಕಾರ ರೂಪದವನಾಗಿ ಚಿತ್ರಿತನಾಗಿದ್ದಾನೆ. ಪ್ರಾಸ್ಟೆರೋ ತನ್ನ ಮಂತ್ರಶಕ್ತಿಯಿಂದ ತನ್ನ ದುಷ್ಟ ಸಹೋದರ ಹಾಗೂ ಇತರರು ಪ್ರಯಾಣ ಸುತ್ತಿದ್ದ ನೌಕೆಯನ್ನು ಬಿರುಗಾಳಿಗೆ ಸಿಕ್ಕಂತೆ ಮಾಡಿ ಅವರನ್ನು ಈ ದ್ವೀಪದ ಮೇಲೆ ತಂದಿದ್ದಾನೆ. ಅವರಲ್ಲಿ ಇಬ್ಬರು ವಿದೂಷಕ ಸ್ವಭಾವದವರು ಕ್ಯಾಲಿಬನ್‍ನ ನೋಡಿದ ಕೂಡಲೇ “ಇವನು ಮನುಷ್ಯನೋ, ಮೀನೋ” ಎಂದು ಉಗ್ದರಿಸುತ್ತಾರೆ. ಅವನನ್ನು Monster ಎಂದು ಕರೆಯುತ್ತಾರೆ. ಅವರಲ್ಲಿ ಒಬ್ಬನು ಈ ಪ್ರಾಣಿಯನ್ನು ಲಂಡನ್‍ಗೆ ಕರೆದೊಯ್ದರೆ ಪ್ರದರ್ಶನಕ್ಕಿಟ್ಟು ದುಡ್ಡು ಮಾಡಬಹುದಿತ್ತು ಎಂದು ಹೇಳುತ್ತಾನೆ. ಶೇಕ್ಸ್‌ಪಿಯರ್‌ನ ಲಂಡನ್‍ನಲ್ಲಿ ವಿಚಿತ್ರ ದೇಶಗಳಿಂದ ತಂದ ಪ್ರಾಣಿಗಳನ್ನು, ಮನುಷ್ಯರನ್ನು ಪ್ರದರ್ಶನಕ್ಕೆ ಇಡುವುದು ಜನಪ್ರಿಯ ಹವ್ಯಾಸವಾಗಿತ್ತು. ಆ ಕಾಲದ ಅನೇಕ ವರ್ಣಚಿತ್ರಗಳಲ್ಲಿ, ರೇಖಾಚಿತ್ರಗಳಲ್ಲಿ ಇವರನ್ನು ಕಾಣಬಹುದು. ಹೀಗಾಗಿ ತಾನು ಬರೆಯುವುದು ಜನಪ್ರಿಯ ಸಾಹಿತ್ಯವೇ ಎಂದು ಗಾಢವಾಗಿ ನಂಬಿದ್ದ ಶೇಕ್ಸ್‌ಪಿಯರ್ ಕ್ಯಾಲಿಬನ್ ಪಾತ್ರವನ್ನು ಸೃಷ್ಟಿಸಿದ್ದು ನಾಟಕದ ಆಕರ್ಷಕ ತಂತ್ರವೂ ಆಗಿತ್ತು. ಅಲ್ಲಿಂದಾಚೆಗೆ ರಂಗದ ಮೇಲೆ ಬಂದ ನೂರಾರು ಕ್ಯಾಲಿಬನ್‍ರ ಆಕಾರ ವಿಕಾರ, ವೇಷಭೂಷಣಗಳನ್ನು ನೋಡುವುದೇ ಒಂದು ಸಾಂಸ್ಕೃತಿಕ ಶಿಕ್ಷಣವಾಗುತ್ತದೆ. ಮುಂದಿನ ಶತಮಾನಗಳಲ್ಲಿ ಕ್ಯಾಲಿಬನ್‍ನ ಜನಾಂಗವು (Race) ಅನೇಕ ಬಾರಿ ಬದಲಾಗುತ್ತದೆ. ಬರಬರುತ್ತ ಅವನು ಕಪ್ಪು ಜನಾಂಗದ ವ್ಯಕ್ತಿಯಾಗಿ ಕಾಣತೊಡಗುತ್ತಾನೆ.

1611ರ ಒಂದು ಸಾಯಂಕಾಲ ಮೇಣಬತ್ತಿಗಳ ಬೆಳಕಿನಲ್ಲಿ ಬ್ಲ್ಯಾಕ್ ಫ್ರಾಯರ್ಸ್ ಎನ್ನುವ ಚಾರಿತ್ರಿಕ ಕಟ್ಟಡದ ಒಂದು ವಿಶಾಲವಾದ ಹಾಲ್‍ನಲ್ಲಿ ರಚಿಸಲಾದ ರಂಗದ ಮೇಲೆ ಕ್ಯಾಲಿಬನ್ ಮೊದಲಬಾರಿ ಕಾಣಿಸಿಕೊಂಡ. ಅಂದಿನ ಯುಗಧರ್ಮದ ಪ್ರಕಾರ ಅವನು ಪ್ರಾಸ್ಟೆರೋ ಸಂಕೇತಿಸುವ ಪಶ್ಚಿಮದ ಬಿಳಿಯ ಕುಲೀನ ನಾಗರೀಕತೆಯ ಪರಿಪೂರ್ಣ ವಿರುದ್ಧವಾದ ಅನಾಗರೀಕ, ಕರಾಳ ಸ್ವಭಾವದ, ಕೃತಘ್ನನಾದ ‘ಇತರ’ನಾಗಿದ್ದ. ಪ್ರಾಸ್ಟೆರೋ ಉದಾರ ಮನಸ್ಸಿನ, ಕ್ಷಮಾಗುಣದ ತಂದೆಯ ಸ್ಥಾನದಲ್ಲಿದ್ದ ಸುಸಂಸ್ಕೃತ ವ್ಯಕ್ತಿಯಾಗಿ ಅವನನ್ನು ತಿದ್ದಲಾಗುವುದಿಲ್ಲ. ಸಾಲದೆನ್ನುವಂತೆ ಆಗಂತುಕರಾಗಿ ದ್ವೀಪಕ್ಕೆ ಬಂದ ಇಬ್ಬರನ್ನು ಪುಸಲಾಯಿಸಿ ಪ್ರಾಸ್ಟೆರೋನ ಕೊಲೆಗೆ ಪ್ರಯತ್ನಿಸುತ್ತಾನೆ.

ಇಷ್ಟೇ ಆಗಿದ್ದರೆ ಶೇಕ್ಸ್‌ಪಿಯರ್ ಈ ನಾಟಕವು ಇಪ್ಪತ್ತನೇಯ ಶತಮಾನದ ವಸಾಹತುಶಾಹಿ ವಿರೋಧಿ ಚಿಂತನೆಗಳಿಗೆ ಮೂಲ ದ್ರವ್ಯವಾಗುತ್ತಿರಲಿಲ್ಲ. ಅಂದಿನ ಮೊದಲ ಪ್ರಯೋಗವನ್ನು ನೋಡಿದ ಸೂಕ್ಷ್ಮ ಮನಸ್ಸಿನ ಕೆಲವು ಪ್ರೇಕ್ಷಕರಿಗಾದರೂ ಬೇರೆಯ ಹೊಳಹುಗಳು ಕಂಡಿರಬಹುದು. ಪ್ರಾಸ್ಟೆರೋ, ಮಿರಾಂಡಾರಿದ್ದ ಭಾಷೆ ಕಲಿತ ಕ್ಯಾಲಿಬನ್ ಅತ್ಯಂತ ಸುಂದರವಾಗಿ, ಕಾವ್ಯಾತ್ಮಕವಾಗಿ ಆ ದ್ವೀಪದಲ್ಲಿ ಕೇಳುವ ಸಂಗೀತದ ದನಿಗಳನ್ನು ವರ್ಣಿಸುತ್ತಾನೆ. ಅಷ್ಟೇ ನೇರವಾಗಿ ಶೇಕ್ಸ್‌ಪಿಯರ್ ಅನೇಕ ನಾಯಕರಿಗೂ ಸಾಧ್ಯವಾಗದ ಖಚಿತ ನುಡಿಗಳಲ್ಲಿ ಹೀಗೆ ಹೇಳುತ್ತಾನೆ.

“ಈ ದ್ವೀಪ ನನ್ನದು. ನನ್ನ ತಾಯಿ ಸಿಕೋರ್ಯಾಕ್ಸ್ ಳಿಂದ ನನಗೆ ಬಂದುದು... ಇದನ್ನು ನೀನು ನನ್ನಿಂದ ಕಿತ್ತುಕೊಂಡೆ.... ಹೀಗಾಗಿ ಈ ದ್ವೀಪದ ದೊರೆಯಾಗಬೇಕಿದ್ದ ನಾನು ನಿನ್ನ ಏಕಮಾತ್ರ ಪ್ರಜೆಯಾಗಿದ್ದೇನೆ”.

ಪ್ರಾಸ್ಟೆರೋನ ಪ್ರಕಾರ ಇದು ನಿಜವೆ. ಸಿಕೋರ್ಯಾಕ್ಸ್ ಮಾಡಬಾರದ ಮಾಟಮಂತ್ರಗಳನ್ನು ಮಾಡಿದ್ದರಿಂದ ಅವಳಿಗೆ ಶಿಕ್ಷೆಯೆಂದು ಈ ದ್ವೀಪದ ಮೇಲೆ ಬಿಟ್ಟುಹೋಗಿರುತ್ತಾರೆ. ಅಲ್ಲಿ ಅವಳು ತನ್ನ ಮಗನಾದ ಕ್ಯಾಲಿಬನ್‍ಗೆ ಜನ್ಮ ನೀಡುತ್ತಾಳೆ. ಅವಳ ಸಾವಿನ ನಂತರ ಪ್ರಾಸ್ಟೆರೋ ಅವನ ಒಡೆಯನಾಗುತ್ತಾನೆ. 16ನೇ ಶತಮಾನದ ತಿಳುವಳಿಕೆಯ ಪ್ರಕಾರ ಇದರಲ್ಲಿ ಏನೂ ತಪ್ಪಿರಲಿಲ್ಲ. ನಾಗರೀಕನೇ ಅಲ್ಲದ ಅರೆಮಾನವನಿಗೆ ಭೂಮಿಯ ಒಡೆತನ ಎಲ್ಲಿಯದು? ಪಶ್ಚಿಮದ ಪ್ರಾಸ್ಟೆರೋ ಅಲ್ಲಿ ಬಂದದ್ದು ನಾಗರೀಕತೆಯ ಬೆಳಕನ್ನು ತಂದು ಕ್ಯಾಲಿಬನ್‍ನ ಉದ್ಧಾರಕ್ಕಾಗಿ ಅನೇಕ ಶತಮಾನಗಳವರೆಗೆ ಈ ನಾಟಕವನ್ನು ಕ್ರಿಶ್ಚಿಯನ್ ಧರ್ಮದ ತಿರುಳಾದ ದಯಾಗುಣದ, ಕ್ಷಮೆಯ ನಿರೂಪಣೆ ಮಾತ್ರವೆಂದು ಭಾವಿಸಲಾಗಿತ್ತು. ತನ್ನ ದುಷ್ಟ ತಮ್ಮನನ್ನೂ ಕ್ಷಮಿಸಿ, ಮಗಳು ಮಿರಾಂಡಾಳನ್ನು ನೇಪಲ್ಸ್ ನಗರ ರಾಜ್ಯದ ದೊರೆಯ ಮಗನಿಗೆ ವಧುವಾಗಿ ಒಪ್ಪಿಸಿ ಕೊನೆಗೆ ತನ್ನ ಮಂತ್ರದಂಡವನ್ನು ತ್ಯಜಿಸುವ ಪ್ರಾಸ್ಟೆರೋನನ್ನು ಬಹಳ ಜನ ನಾಟಕರಂಗದಿಂದ ನಿವೃತ್ತಿ ಹೊಂದಿ ಶ್ರೀಮಂತನೂ, ಸಂತೃಪ್ತನೂ ಆಗಿ ಮನೆಗೆ ಮರಳುವ ಶೇಕ್ಸ್ಪಿಯರ್ನ ಸಂಕೇತವೆಂದು ಭಾವಿಸಿದರು. ತನ್ನ ಮಂತ್ರದಂಡವಾದ ಲೇಖನಿಯನ್ನು ತ್ಯಜಿಸಿ ಹೋಗುವ ಮಾಂತ್ರಿಕ ಕಲೆಗಾರ, ಅಪಾರ ಪ್ರತಿಭೆಯ ಮೇಜಸ್ (Magus), ಮಹಾಜ್ಞಾನಿ ಶೇಕ್ಸ್‌ಪಿಯರ್‌ನ ಅನುಕೃತಿಯಾಗಿ ನೋಡಿದರು. ಮಗಳ ಮದುವೆ ಸಂಬಂಧದ ಖುಷಿಗಾಗಿ ತನ್ನ ಮಂತ್ರದಂಡದಿಂದ ಸೃಷ್ಟಿಸಿದ ಅಪೂರ್ವ ಔತಣ, ಹಾಡು, ಸಂಗೀತ ಇವೆಲ್ಲವೂ ಕ್ಷಣಭಂಗುರ, ಬದುಕು ಎನ್ನುವ ನಾಟಕದಂತೆ ಎಂದು ಹೇಳಿ ಅವುಗಳನ್ನು ಮತ್ತೆ ಮಾಯ ಮಾಡುವ ಪ್ರಾಸ್ಟೆರೋ ಗ್ಲೋಬ್ ನಾಟಕ ಮಂದಿರದಿಂದ ಹೊರ ಹೊರಟ ಶೇಕ್ಸ್‌ಪಿಯರ್ ಅಲ್ಲದೆ ಇನ್ನೇನು ಎಂದು ನಂಬಲಾಗಿತ್ತು. ಇದರಲ್ಲಿ ಕ್ಯಾಲಿಬನ್‍ನ ಮೊದಲ ಅವತಾರ ಅಮುಖ್ಯ ಪಾತ್ರದ್ದಾಗಿತ್ತು.

ಮೂರುವರೆ ಶತಮಾನಗಳ ನಂತರ ಕ್ಯಾಲಿಬನ್ ಆಶ್ಚರ್ಯಕರವಾದ ಹೊಸ ಅವತಾರದಲ್ಲಿ ಮರುಹುಟ್ಟು ಪಡೆದ. ಇದು 20ನೇ ಶತಮಾನದ 50ರ ದಶಕದಿಂದೀಚೆಗೆ. ಅಷ್ಟರಲ್ಲಿ ಭಾರತವೂ ಸೇರಿದಂತೆ ಅನೇಕ ವಸಾಹತುಗಳು ರಾಜಕೀಯ ಸ್ವಾತಂತ್ರ್ಯ ಪಡೆದಿದ್ದವು. ವಿಶೇಷವಾಗಿ ಕ್ಯಾರಿಬಿಯನ್ ದ್ವೀಪಗಳೆಂದು ಕರೆಯುವ ವೆಸ್ಟ್ ಇಂಡೀಜ್‍ನ ಅನೇಕ ಪ್ರಾಂತಗಳಲ್ಲಿ ವಸಾಹತು ವಿರೋಧಿ ಚಳುವಳಿಗಳು ಗಾಢವಾದ ಪ್ರಭಾವ ಬೀರಿದ್ದವು. ಅಂದರೆ ತಮ್ಮ ಹಿಂದಣ ವಸಾಹತುಶಾಹಿ ಅನುಭವದ ಹಾಗೂ ಅದರ ಬೆಂಬಿಡದ ಪರಿಣಾಮಗಳನ್ನು ತೀವ್ರವಾಗಿ ಶೋಧಿಸ ತೊಡಗಿದ ಬರಹಗಾರರು ಹಾಗೂ ಚಿಂತಕರಿಗೆ ಶೇಕ್ಸ್ಪಿಯರ್ನ The Tempest ನಾಟಕವು ವಸಾಹತುಶಾಹಿಯ ಮೂಲ ಕಥೆಯಾಗಿ (Script) ಕಾಣತೊಡಗಿತು. ಪ್ರಾಸ್ಟೆರೋ ತನ್ನ (ಪಶ್ಚಿಮದ) ಜ್ಞಾನ ಹಾಗೂ ಭಾಷೆಯ ಮೂಲಕ ಕ್ಯಾಲಿಬನ್‍ನಂಥ ಮೂಲ ನಿವಾಸಿಗಳನ್ನು ಗುಲಾಮರನ್ನಾಗಿಸುವ ವಸಾಹತುಶಾಹಿ ನಾಯಕನಾಗಿ ಕಾಣತೊಡಗಿದ. “ನೀ ಕಲಿಸಿದ ಭಾಷೆಯಲ್ಲಿ ನಿನ್ನನ್ನು ಶಪಿಸಬಲ್ಲೆ” ಎನ್ನುವುದು ಭಾರತವೂ ಸೇರಿದಂತೆ ಅನೇಕ ವಸಾಹತುಗಳಲ್ಲಿ ಇಂಗ್ಲಿಷ್ ಕಲಿತು, ಪಶ್ಚಿಮದ ಶಿಕ್ಷಣ ಪಡೆದು ಸಾಮ್ರಾಜ್ಯಶಾಹಿ ಇಂಗ್ಲೆಂಡ್‍ನ ವಿರುದ್ಧ ಹೋರಾಟಕ್ಕೆ ನಿಂತ ಇಲ್ಲಿಯ elite ವರ್ಗದ ಅನುಭವವೇ ಆಗಿತ್ತು. ಕೊನೇ ಪಕ್ಷ ಭಾರತದಲ್ಲಿ ಬ್ರಿಟಿಷ್ ವಸಾಹತುಶಾಹಿ ಭಿನ್ನವಾಗಿರುವುದು ಅನಿವಾರ್ಯವಾಗಿತ್ತು. ಆದರೆ ವಸಾಹತುಶಾಹಿ, ಜನಾಂಗೀಯ ಪೂರ್ವಾಗ್ರಹ, ಗುಲಾಮಗಿರಿ ಇವೆಲ್ಲವನ್ನು ಅನುಭವಿಸಿದ್ದ ಕ್ಯಾರಿಬಿಯನ್ ಬರಹಗಾರರಿಗೆ ಕ್ಯಾಲಿಬನ್ ಒಬ್ಬ ಪ್ರತಿರೋಧಿಯಾಗಿ ಕಂಡ. ಒಂದು ಕಡೆಗೆ ಅನೇಕ ಚಿಂತಕರು ಕ್ಯಾಲಿಬನ್‍ನನ್ನು ಒಂದು ರೂಪಕವಾಗಿಟ್ಟುಕೊಂಡು ಪ್ರಖರವಾಗಿ ವಸಾಹತೋತ್ತರ ಚಿಂತನೆಯನ್ನು ಆರಂಭಿಸಿದರು. ಇವರಲ್ಲಿ ಪ್ರಮುಖರೆಂದರೆ ಆ್ಯಲ್ಬರ್ಟ್ ಮಮ್ಮಿ, ಆಕ್ಟೇವ್ ಮನ್ನೋನಿ, ಏಮೇ ಸೆಸೆರ್ ಮತ್ತು ಜಾರ್ಜ್ ಲ್ಯಾಮಿಂಗ್. ಕ್ಯಾರಿಬಿಯನ್‍ನ ಮಾರ್ತೇನೀಕ್ ಪ್ರಾಂತದ ಫ್ರ್ಯಾಂಜ್ ಫ್ಯಾನನ್ ವಸಾಹತೋತ್ತರ ಚಿಂತನೆಯ ಶ್ರೇಷ್ಠ ಪ್ರತಿಪಾದಕ, ಅವನು ಆ್ಯಲ್ಜೀರಿಯಾನಲ್ಲಿದ್ದು ಈ ಚಿಂತನೆಗೆ ಬುನಾದಿ ಒದಗಿಸಿದ. ಮುಖ್ಯವೆಂದರೆ ಫ್ಯಾನನ್ ಬಿಟ್ಟರೆ ಉಳಿದವರೆಲ್ಲರೂ ಪ್ರಾಸ್ಟೆರೋ ಹಾಗೂ ಕ್ಯಾಲಿಬನ್ ರೂಪಕಗಳನ್ನೇ ಬಳಸಿಕೊಂಡಿದ್ದಾರೆ. ಉದಾಹರಣೆಗೆ ಮನ್ನೋನಿಯ ವಾದವೆಂದರೆ ವಸಾಹತುಶಾಹಿ ದೇಶ/ ಸಮಾಜದಲ್ಲಿ ಮೂಲ ನಿವಾಸಿಯು ವಸಾಹತುಶಾಹಿ ಆಡಳಿತಗಾರನ ಮೇಲೆ ಅವಲಂಬಿತನಾಗಿ ಬಿಡುತ್ತಾನೆ (dependency complex). ಉದಾಹರಣೆಗೆ ನಾಟಕದಲ್ಲಿ ಇಬ್ಬರೂ ವಿದೂಷಕರಿಗೆ ಕ್ಯಾಲಿಬನ್ ಇನ್ನು ಮೇಲೆ ನೀವೇ ನನಗೆ ದೇವರಾಗಿರಿ ಎಂದು ಕಾಲಿಗೆ ಬೀಳುತ್ತಾನೆ. ನಾನು ಸ್ವತಂತ್ರನಾಗುತ್ತೇನೆಂದು ಹೇಳುವುದಿಲ್ಲ. ಸ್ವತಃ ಕವಿ ನಾಟಕಕಾರನಾಗಿದ್ದ ಏಮೇ ಸೆಸೆರ್ ಫ್ರೆಂಚ್ ಭಾಷೆಯಲ್ಲಿ Une Tempete, (A Temest) ಎನ್ನುವ ನಾಟಕವನ್ನು ಬರೆದ. ಇದರಲ್ಲಿ ಕಪ್ಪು ಜನಾಂಗದ ಕ್ಯಾಲಿಬನ್ ಒಬ್ಬ ಪ್ರತಿರೋಧಿ ಹೋರಾಟಗಾರ. ಅಂತರ್ ಜನಾಂಗೀಯ Mulatto ಆಗಿರುವ ಏರಿಯಲ್ ಕ್ರಾಂತಿಯ ಬದಲು ಪ್ರಾಸ್ಟೆರೋನ ಮನಸ್ಸು ಬದಲಾಯಿಸ ಬಯಸುವ ಯಥಾಸ್ಥಿತಿವಾದಿ. ಈ ನಾಟಕದಂಥ ನೂರಾರು ಮರುಕಥನಗಳು ಮುಂದೆ ಆಫ್ರಿಕಾ, ಕ್ಯಾನಡಾ, ಪೋರ್ಚುಗಲ್ ಮುಂತಾದ ದೇಶಗಳಲ್ಲಿ ಬಂದವು. ಇವುಗಳಲ್ಲಿ ಕ್ಯಾಲಿಬನ್‍ನ ದಶಾವತಾರಗಳಲ್ಲ, ಶತಾವತಾರಗಳಿವೆ. ಸೆಸೆರ್ನ ಚಿಂತನೆ ವಸಾಹತೀಕರಣಗೊಂಡವರು ತಮ್ಮ ಸಾಚಾ ವ್ಯಕ್ತಿತ್ವಗಳನ್ನು ಹುಡುಕುವುದರ ಬಗ್ಗೆ ಇದೆ. ಅಂಥ ವ್ಯಕ್ತಿತ್ವ ಇದೆಯೆ? ನಮ್ಮೊಳಗೆ ಒಬ್ಬ ಕ್ಯಾಲಿಬನ್ ಇಲ್ಲವೆ? ಅನ್ಯ ಭಾಷೆಯಿಂದ ನಮ್ಮ ಸಾಂಸ್ಕೃತಿಕ ವ್ಯಕ್ತಿತ್ವವನ್ನು ರಚಿಸಲಾಗಿದೆ ನಿಜ. ಆದರೆ ಅದು ಈಗಲೂ ಅಧಿಕಾರದ ಭಾಷೆಯಾಗಿದೆ. ನಮ್ಮ ಸವಲತ್ತುಗಳ ಭಾಷೆಯಾಗಿದೆ. ಹಾಗಿದ್ದರೆ ನಮ್ಮ ಅಧಿಕೃತ ಭಾಷೆ ಯಾವುದು? ಇವು ಅತ್ಯಂತ ಆಳದ ತಾತ್ವಿಕ ಪ್ರಶ್ನೆಗಳು.

ಜಾರ್ಜ್ ಲ್ಯಾಮಿಂಗ್‍ನ Pleasures of Exile ಒಂದು ಅದ್ಭುತವಾದ ಕೃತಿ. ಅವನು ಹೇಳುತ್ತಾನೆ: “ಒಬ್ಬ ಪ್ರವಾದಿಯ ಪ್ರತಿಭೆಯಿಂದ ಶೇಕ್ಸ್‌ಪಿಯರ್ ಮುಂಬರುವ ಭವಿಷ್ಯವನ್ನು ಕಲ್ಪಿಸಿದ. ಆ ಭವಿಷ್ಯವೇ ಇಂದು ನಮ್ಮ ವರ್ತಮಾನವಾಗಿದೆ.” ಅಂದರೆ 1611ರಲ್ಲಿ ಪೂರ್ವ ಆಧುನಿಕ ಯುಗದಲ್ಲಿ ಇನ್ನೂ ವಸಾಹತುಶಾಹಿ ಹರಳುಗಟ್ಟದೇ ಇದ್ದ ಇತಿಹಾಸದ ಸಂದರ್ಭದಲ್ಲಿ ಶೇಕ್ಸ್‌ಪಿಯರ್ ಪ್ರೊಸ್ಟೆರೋ ಮತ್ತು ಕ್ಯಾಲಿಬಾನ್‍ನಂಥ ರೂಪಕಗಳನ್ನು ಸೃಷ್ಟಿಸಿದ. ಶತಮಾನಗಳ ನಂತರ ಈ ರೂಪಕಗಳು ವರ್ತಮಾನದ ಸತ್ಯಗಳಾಗಿ ಕಾಣತೊಡಗಿದವು. ವಿಶೇಷವೆಂದರೆ ಇಂದಿನ ಜಾಗತೀಕರಣದ ಕಾಲದಲ್ಲಿ ಹೆಚ್ಚಿದ ಭೀಕರ ಸಂದರ್ಭದ ರೂಪಕಗಳಾಗಿ ಅವರು ಕಾಣುತ್ತಿದ್ದಾರೆ.

ಅನೇಕ ಇತಿಹಾಸಕಾರರು The Tempest ನಾಟಕದ ಇಂಥ ವ್ಯಾಖ್ಯಾನಗಳನ್ನು anachronistic ಎಂದು ಕರೆದಿದ್ದಾರೆ. ಅಂದರೆ ಶೇಕ್ಸ್‌ಪಿಯರ್‌ನ ಕಾಲದಲ್ಲಿ ಇನ್ನೂ ವಾಸ್ತವವೇ ಆಗದೇ ಇದ್ದುದನ್ನು ಅದರಲ್ಲಿ ಕಂಡರಿಸುವ ತಪ್ಪು ಓದು ಎಂದು. ಇದಕ್ಕೆ ನಾನು ಒಪ್ಪುವ ಉತ್ತರವೆಂದರೆ ಎಲ್ಲಾ ಓದುಗಳೂ anachronistic ಓದುಗಳು. ನಾಟಕವು ಚರಿತ್ರೆಯಲ್ಲ. ಚರಿತ್ರೆಯ ವ್ಯಾಖ್ಯಾನಕ್ಕೆ ಬೇಕಾದ ರೂಪಕಗಳನ್ನು, ಕಥನಗಳನ್ನು, ಸಂಕಥನಗಳನ್ನು ಸೃಷ್ಟಿಸುವ ಸೃಜನಶೀಲ ಬರಹ. ಹಾಗಿರದಿದ್ದರೆ ಪಾಪ ಕ್ಯಾಲಿಬನ್‍ಗೆ ದಶಾವತಾರಗಳು ಸಾಧ್ಯವಾಗುತ್ತಿರಲಿಲ್ಲ.

ಈ ಅಂಕಣದ ಹಿಂದಿನ ಬರೆಹಗಳು

ಪಾಶ್ಚಾತ್ಯ ಸಾಹಿತ್ಯ ಮತ್ತು ಜೆಂಡರ್‌ ನ್ಯಾಯದ ಪರಿಭಾಷೆ

ಬದುಕು-ಸಾವುಗಳ ಸಹಜ ಲಯ ತಪ್ಪಿಸುವ ಅಸಂಗತ-ಅರ್ಥಶೂನ್ಯ

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...