ಚಂದ್ರಶೇಖರ ಕಂಬಾರರ ಚಕೋರಿ: ಕನಸುಗಳು ಕಾವ್ಯವಾಗುವ ಪರಿ

Date: 26-12-2021

Location: ಬೆಂಗಳೂರು


‘ಚಕೋರಿಯಂತಹ ರಾಗ-ರಚನೆಯ ಮುಖ್ಯ ಉದ್ದೇಶವು; “ಬರುವ ಜನ ಬಾಳಲೆಂದು ಬದುಕಲೆಂದು”. ಇದೇ ವಿಚಾರಧಾರೆಯು ‘ಚಕೋರಿ’ಯ ಕೇಂದ್ರ ಆಶಯವೂ ಜಿಜ್ಞಾಸೆಯೂ ಆಗಿ ಪ್ರಕಟವಾಗಿದೆ’ ಎನ್ನುತ್ತಾರೆ ಲೇಖಕ ಶ್ರೀಧರ ಹೆಗಡೆ ಭದ್ರನ್. ಅವರು ತಮ್ಮ ಬದುಕಿನ ಬುತ್ತಿ ಅಂಕಣದಲ್ಲಿ ಚಂದ್ರಶೇಖರ ಕಂಬಾರರ ಮಹಾಕಾವ್ಯವಾದ ‘ಚಕೋರಿ’ ಯ ಕುರಿತು ವಿಶ್ಲೇಷಿಸಿದ್ದಾರೆ. 

ಇದು ಜಗದ ಖಾಲಿಗಳನ್ನು ಹಾಡುಗಳಿಂದ
ತುಂಬಿದವನ ಕಥೆ,
ಸ್ಮಶಾನದಲ್ಲಿ ಮೈಮರೆತು ಕುಂತಿದ್ದ ಶಿವ
ಮರೆತ ಹೆಜ್ಜೆಯ ಹಾಕಿ ಮತ್ತೆ ಕುಣಿಯುವಂತೆ
ಮಾಡಿದವನ ಕಥೆ,
ಕಿವಿಗಳ ಕಿಲುಬು ತೊಳೆದು
ಹೃದಯದ ಕೊಳೆ ಕಳೆದು
ಕಥೆಯ ಕೇಳುವುದಕ್ಕೆ ಸಿದ್ಧವಾಗಿರಯ್ಯಾ
ಹೃದಯದ ಯಾವುದಾದರೂ ಮೂಲೆಯಲ್ಲಿ
ಒಂದೆರಡು ಕನಸು ಮಲಗಿದ್ದರೆ ಎಚ್ಚರಿಸಿರಯ್ಯಾ
ನಮ್ಮ ಹಾಡು ಕೇಳುವುದಕ್ಕೆ.

ಆಧುನಿಕ ಕನ್ನಡ ಕಾವ್ಯ ಸಂದರ್ಭದ ಹಿರಿಯ ಕವಿ, ದೇಸೀ ಸಂವೇದನೆಯ ಮೂಲಕ ಕನ್ನಡ ಕಾವ್ಯ ಪರಂಪರೆಗೆ ಹಲವು ಹೊಸದನ್ನು ಸೇರಿಸಿರುವ ಕವಿ ಡಾ. ಚಂದ್ರಶೇಖರ ಕಂಬಾರರ ‘ಚಕೋರಿ’ 1996ರಲ್ಲಿ ಪ್ರಕಟವಾಯಿತು. ಲೇಖಕರೇ ಇದನ್ನು ಮಹಾಕಾವ್ಯ ಎಂದು ಕರೆದಿದ್ದಾರೆ. ಆಧುನಿಕ ಕನ್ನಡ ಮಹಾಕಾವ್ಯಗಳ ಜಾಯಮಾನಕ್ಕಿಂತ ತುಂಬಾ ಭಿನ್ನವಾದ ಲಯವನ್ನು ಇದು ಒಳಗೊಂಡಿದೆ. ತನ್ಮೂಲಕ ಸಮುದಾಯಗಳ ಅಂತಃಸಾಕ್ಷಿಯನ್ನು ಹಾಗೂ ಸಮುದಾಯಗಳ ಅನೇಕ ತಲೆಮಾರುಗಳ ಸ್ಮೃತಿ ಪ್ರಪಂಚವನ್ನು ರೂಪಕ, ಪ್ರತಿಮೆ, ಸಂಕೇತ ಹಾಗೂ ಧ್ವನಿ ಮತ್ತು ಆಶಯಗಳ ರೂಪದಲ್ಲಿ ಹಿಡಿದಿಟ್ಟುಕೊಂಡಿದೆ. ಮಹಾಕಾವ್ಯದ ಮಹತ್ವಾಕಾಂಕ್ಷೆಯನ್ನು ಹೊಂದಿರುವ ‘ಚಕೋರಿ’ “ಕನ್ನಡ ಜನಪದದಲ್ಲಿ ವ್ಯಾಪಕವಾಗಿ ಪ್ರಚಲಿತದಲ್ಲಿರುವ ಮಲೆಮಹದೇಶ್ವರ ಕಾವ್ಯದ ಕಥನ ತಂತ್ರದಿಂದ ಹಿಡಿದು ಹಾಡು, ಭಾವಗೀತೆ, ಭಾವಗೀತಾತ್ಮಕ ಗದ್ಯ ಕನ್ನಡ ಗದ್ಯದ ಬೇರೆ ಬೇರೆ ಅವಸ್ಥಾಂತರಗಳು ಎಲ್ಲವನ್ನೂ ಬಳಸಿಕೊಂಡಿದೆ. ವಚನಕಾರರ ನುಡಿಯ ರೀತಿಯಿಂದ ಹಿಡಿದು ಉತ್ತರ ಕರ್ನಾಟಕದ ಆಡುಮಾತಿನ ರೂಪಗಳವರೆಗೆ, ಚಂಪೂ ರೀತಿಯ ಗದ್ಯ ಪದ್ಯ ಮಿಶ್ರಣದಿಂದ ಹಿಡಿದು ಆಧುನಿಕ ನಿರೂಪಣಾತ್ಮಕ ಗದ್ಯದವರೆಗೆ ಚಕೋರಿಯಲ್ಲಿ ಬೇರೆ ಬೇರೆ ರೀತಿಯ ಭಾಷೆಯ ಬಳಕೆಯನ್ನು, ರೂಪಗಳನ್ನು ಕಾಣಬಹುದು” ಎಂಬ ಪ್ರೊ.  ಓ. ಎಲ್. ನಾಗಭೂಷಣಸ್ವಾಮಿಯವರ ಮಾತು ಚಕೋರಿಯ ಬಾಹ್ಯ ಸ್ವರೂಪವನ್ನು ಅಕ್ಷರಶಃ ವಿವರಿಸಿದೆ.

ಓಂ ಪ್ರಥಮದಲ್ಲಿ
ಆದಿಗಾಧಾರವಾದ ಸಾವಳಗಿ ಶಿವಲಿಂಗನ ನೆನೆದು
ನಾದದಲಿ ಹುರಿಗೊಂಡ ತನ್ನ ನಿಜವ ತೋರಲಿ ಸ್ವಾಮಿ
ಎಂದು ಬೇಡಿಕೊಂಡು ಕಥಾರಂಭ ಮಾಡುತ್ತೇವೆ

ಎಂದು ತಾನು ನಂಬುವ ಸ್ಥಳೀಯ ದೈವದ ಸಾಂಪ್ರದಾಯಿಕ ಪ್ರಾರ್ಥನೆಯೊಂದಿಗೆ ‘ಚಕೋರಿ’ ಆರಂಭವಾಗಿದೆ. ಅನಂತರ ಮಹಾಕಾವ್ಯದ ಪ್ರಸ್ತಾವನೆಯ ಭಾಗದಂತಿರುವ ಆದಿ ಸೃಷ್ಟಿಯ ವಿವರಗಳು ಬರುತ್ತವೆ. ನಮ್ಮ ಹಳೆಯ ಕಾವ್ಯಗಳು ಮತ್ತು ಪುರಾಣಗಳ ವಿಶ್ವಸೃಷ್ಟಿಯ ವಿವರಗಳಿಗಿಂತ ಭಿನ್ನವಾದ ವಿವರ ಇಲ್ಲಿಯದು. ಇಲ್ಲಿ ಶಿವನೇ ಸೃಷ್ಟಿಯ ದೇವತೆ, ಇಡೀ ವಿಶ್ವದ ಮೂಲ ಕಾರಣ. ಮೂಲಶಕ್ತಿ ಮತ್ತು ಸೃಷ್ಟಿಕರ್ತ. ಪಾರ್ವತಿಯು ಬೆಟ್ಟ ಗುಡ್ಡಗಳಾಗಿ, ನದಿ-ಸಮುದ್ರಗಳಾಗಿ, ಗಿಡ-ಮರಗಳಾಗಿ ತಾನೇ ಇಡೀ ವಿಶ್ವವಾಗಿ ಮೈ ಪಡೆಯುತ್ತಾಳೆ. ಶಿವನು ಇಬ್ಬರು ಪುರುಷರನ್ನು ಸೃಷ್ಟಿಸಿ ಪ್ರಕ್ರೃತಿಯನ್ನು ಪತ್ನಿಯಾಗಿ ಪಡೆಯುವಂತೆ ಸೂಚಿಸುತ್ತಾನೆ. ಹೀಗೆ ಅನಂತವಾದ ಮನುಷ್ಯ ಜೀವನದ ಕಥೆ ತೊಡಗುತ್ತದೆ. “ಆಧುನಿಕ ಕಾಲದಲ್ಲಿ ಇದು ಅಸಾಮಾನ್ಯವೆಂಬಂತೆ ತೋರುತ್ತದೆ. ಏಕೆಂದರೆ ಆಧುನಿಕತೆಯು ಸಮಕಾಲೀನವಾದುದನ್ನು ಮಾತ್ರ ನಂಬುತ್ತದೆ. ಗತಕಾಲವನ್ನು ನಿರಾಕರಿಸಿ ಭವಿಷ್ಯದತ್ತ ಸಾಗುವುದರಲ್ಲಿಯೇ ನಂಬಿಕೆ ಹೆಚ್ಚು” (ಕೀರ್ತಿನಾಥ ಕುರ್ತಕೋಟಿ)

ಕಾವ್ಯದ ನಾಯಕ ಚಂದಮುತ್ತ ಒಬ್ಬ ಗೋವಳ ತರುಣ ಹಾಗೂ ಸುಮಧುರ ಸಂಗೀತವನ್ನು ದೈವದತ್ತವಾಗಿ ಪಡೆದವನು. ಈತ ಚಂದ್ರವಂಶಸ್ಥ. ಅವನಿಗೆ ಕೇವಲ ತಾಯಿಯ ಬಗ್ಗೆ ತಿಳಿದಿದ್ದು, ತಂದೆ ಯಾರೆಂಬುದರ ನೆನಪು ಸಹ ಇಲ್ಲ. ಚಿನ್ನಮುತ್ತ ಎಂಬವನು ಹಳ್ಳಿಯ ಮುಖ್ಯಸ್ಥನ ಮಗ ಹಾಗೂ ಚಂದಮುತ್ತನ ಸಹಪಾಠಿ, ಪ್ರತಿಸ್ಪರ್ಧಿ. ಕಾಡಿನ ನಡುವೆ ಕಲ್ಲು ರೂಪದ ಯಕ್ಷಿಯನ್ನು ಚಂದಮುತ್ತ ಕಂಡುಹಿಡಿಯುತ್ತಾನೆ. ಆ ಮೂರ್ತಿಯೊಂದಿಗೆ ಗೆಳೆಯರೆಲ್ಲಾ ಸೇರಿ ಇವನ ಮದುವೆಯನ್ನು ಮಾಡುತ್ತಾರೆ. ಇವನ ಸಂಗೀತಕ್ಕೆ ಅವಳು ಮೋಹಿತಳಾಗುತ್ತಾಳೆ, ಇವನ ಮನದಲ್ಲಿಯೂ ಅವಳೇ ತುಂಬಿಕೊಂಡಿದ್ದಾಳೆ. ಇದರ ಪರಿಣಾಮವಾಗಿ;

ಕಾಡಿಂದ ಬಂದ ಮಗ ಮಲಗಿಬಿಟ್ಟಿದ್ದಾನೆ
ಬಂದವನು ನುಡಿದಾಡಿಸಲಿಲ್ಲ, ಉಣಲಿಲ್ಲ
ಒದ್ದೆಬಟ್ಟೆ ತೆಗೆದುಡಲಿಲ್ಲ.
ಎಂದು ಅಬ್ಬೆ ಕುಲಗುರುವಿನಲ್ಲಿ ದೂರೊಯ್ಯುತ್ತಾಳೆ.

ಚಂದಮುತ್ತನು ಕುರೂಪಿಯಾದ ಮಾಟಗಾತಿ (ಮುದಿಜೋಗ್ತಿ)ಗೆ ಸೋಲಬಹುದೆಂಬ ಭಯವಿದ್ದರೂ ಕೊನೆಯಲ್ಲಿ ತನ್ನ ಸಾಧನೆಯಿಂದ ಸಂಗೀತ ಕಲೆಯಲ್ಲಿ ಪರಿಣತಿಯನ್ನು ಪಡೆಯುತ್ತಾನೆ. ಸಂಗೀತದ ಸಾಧನೆಯಲ್ಲಿ ‘ಮಹಾನುಭಾವ’ನ ಸಹಾಯ ದೊರೆತರೂ ಕೊನೆಯಲ್ಲಿ ಆತನೇ ಚಂದಮುತ್ತನಿಗೆ ಪ್ರತಿಸ್ಪರ್ಧಿಯಾಗಿ ತನ್ನ ದುಷ್ಟ ಮಂತ್ರ ತಂತ್ರಗಳಿಂದ ಯಕ್ಷಿಯನ್ನು ನಿಶ್ಚೇಷ್ಟಿತಗೊಳಿಸುತ್ತಾನೆ. ಚಂದಮುತ್ತನ ಸಂಗೀತಕ್ಕೆ ಸಂಚಕಾರ ತರುತ್ತಾನೆ.

ಚಂದಮುತ್ತ ತನ್ನ ಸಂಗೀತದ ಶಕ್ತಿಯಿಂದ ಅಮವಾಸ್ಯೆಯ ದಿನದಂದು ಚಂದ್ರನನ್ನು ಒತ್ತಾಯಪೂರ್ವಕವಾಗಿ ಮೂಡಿಸಿದರೆ ಯಕ್ಷಿಯನ್ನು ಉಳಿಸಿಕೊಳ್ಳುವುದು ಸಾಧ್ಯವೆಂದು ತಿಳಿದುಬರುತ್ತದೆ. ಹಾಗೂ ಅವಳನ್ನು ಉಳಿಸಿಕೊಳ್ಳಲು ಅದೊಂದೇ ಮಾರ್ಗವೆಂಬುದೂ ತಿಳಿಯುತ್ತದೆ. ಆದರೆ ಈ ಹಾದಿಯ ಫಲಿತಾಂಶವೆಂದರೆ; ಯಕ್ಷಿ ಜೀವವನ್ನು ಪಡೆದರೆ ಚಂದಮುತ್ತ ಕಲ್ಲಾಗಿ ಮಾರ್ಪಡಬೇಕಾಗುತ್ತದೆ. ಕಾವ್ಯದಲ್ಲಿ ಘಟನೆಗಳು ಹೀಗೆಯೇ ಘಟಿಸುತ್ತವೆ. ಕೃತಿಯಲ್ಲಿ ಅತ್ಯಂತ ವಿಶೇಷವಾಗಿ ಸಾವೇ ಪರಿಪೂರ್ಣ ಎಂಬ ತಿಳಿವಳಿಕೆ ಸ್ಥಾಯಿಯಾಗಿದೆ.

ಕಥೆಯ ನಾಯಕನಾದ ಚಂದಮುತ್ತ ಚಂದ್ರನ ವಂಶಸ್ಥನೆನಿಸಿಕೊಂಡಾಕ್ಷಣ ನಾಯಕನೆನಿಸಿಕೊಳ್ಳಲಾರ. ನಾಯಕನಲ್ಲಿರಬೇಕಾದ ಶೌರ್ಯ ಹಾಗೂ ಹಗೆತನ ಸಾಧಿಸುವ, ನಿಭಾಯಿಸುವ ಗುಣಗಳು ಅವನಲ್ಲಿಲ್ಲ. ಅವನೊಬ್ಬ ಸಂಗೀತಗಾರ, ಕೊಳಲನ್ನು ನುಡಿಸುವವ ಹಾಗೂ ಕಲೆಯ ಆರಾಧಕ ಮಾತ್ರ. ಸಂಗೀತದಲ್ಲಿನ ಸೂಕ್ಷ ಹಾಗೂ ಪ್ರಾವೀಣ್ಯಗಳನ್ನು ಸಾಧಿಸಿಕೊಳ್ಳಲು ಸದಾ ಬಯಸುವವ. ಕಾಡಿನ ಮೌನದ ಜೊತೆಗೆ ಸಂವಾದ ನಡೆಸುವ ಅವನು ತಾಯಿಯ ಮಗ. ಚಂದಮುತ್ತನ ಜೀವನದಲ್ಲಿ ತಾಯಿಯಾದ ಲಕ್ಕಬ್ಬೆಯ ಪಾತ್ರ ಮಹತ್ತರವಾದುದು. ಅವಳು ಮನೆಯ ಸಂಪ್ರದಾಯ, ವಿಧಿ-ವಿಧಾನಗಳನ್ನು ಹಾಗೂ ಅವುಗಳ ಪಾವಿತ್ರ್ಯವನ್ನು ಅವನಿಗೆ ಕಲಿಸಿಕೊಡುತ್ತಾಳೆ. ಮತ್ತು ಅವನಲ್ಲಿನ ದೈವದತ್ತವಾದ ಅಂಶಗಳನ್ನು ಗುರುತಿಸುತ್ತಾಳೆ. ಎಲ್ಲ ತಾಯಿಯರಂತೆ ಅವನ ಬೆಳವಣಿಗೆಯನ್ನು ನೋಡಿ ಸಂತೋಷ ಹಾಗೂ ದುಃಖ ಪಡುತ್ತಾಳೆ. ಇಷ್ಟೆಲ್ಲದರ ಅರಿವಿದ್ದರೂ ಮಗ ತನ್ನ ಬಳಿ ಬರುವನೆಂದೇ ನಂಬುತ್ತಾಳೆ, ಕಾಯುತ್ತಾಳೆ. ಲಕ್ಕಬ್ಬೆ ‘ಆದಿಮಾಯೆಯ’ ಪ್ರತಿರೂಪ. ಸಂಗೀತ ಸ್ಪರ್ಧೆಯಲ್ಲಿ ಚಂದಮುತ್ತ ಭಾಗವಹಿಸಿದಾಗ ಲಕ್ಕಬ್ಬೆ ಚಂದ್ರಬಿಂಬದಿಂದ ಪವಿತ್ರಗೊಂಡ ನೀರನ್ನು ಚಂದಮುತ್ತನಿಗೆ ಕುಡಿಯಲು ಕೊಡುವುದರೊಂದಿಗೆ ಅವನಲ್ಲಿ ಪುನಃ ಚೇತರಿಕೆಯನ್ನುಂಟು ಮಾಡುತ್ತಾಳೆ. 

ಅಸಂಖ್ಯ ಲೋಕಗಳು, ಆದಿಮಾಯಿ, ಪುಣ್ಯಕೋಟಿ, ನಂದಿಯ ಅವತಾರ, ಭೌತಿಕ ಜಗತ್ತು, ಚೌರ್ಯಾಂಸಿ (84) ಲಕ್ಷ ತಿರ್ಯಕ್ ಜಂತು ಜಾಲಗಳ ಪ್ರಾಣಿಜಗತ್ತು, ನರಮಾನವನ ಸೃಷ್ಟಿ, ಅವನ ಸಂಸಾರ ದಂದುಗ, ಉಡುಗೆಯ ಶೋಧ, ಹಗಲು-ರಾತ್ರಿಗಳ ಕಲ್ಪನೆ, ಕುಟುಂಬದಿಂದ ಎದುರಾಗುವ ಸೋದರ ಸಂಬಂಧಿ ಸಮಸ್ಯೆಗಳು, ಮಾತೃ-ಪಿತೃ ಪ್ರಧಾನ ಕುಟುಂಬಗಳ ಪ್ರಶ್ನೆಗಳು, ಒಡೆತನ, ಆಸ್ತಿಯ ಬಗೆಗಿನ ಮೋಹ, ಅದರ ವಿಭಜನೆ, ಕೃಷಿಯ ಆರಂಭ, ಅಸಂಖ್ಯ ವಿದ್ಯೆಗಳು, ಸಂಗೀತ-ಸಾಹಿತ್ಯದಂತಹ ಕಲೆಗಳ ಮಹತ್ವ, ವಿದ್ಯೆ ಹಾಗೂ ಕಲೆಗಳ ನಡುವಣ ಸಂಘರ್ಷ, ಅವುಗಳಿಂದ ದೊರಕುವ ಕೀರ್ತಿಗಾಗಿ ನಿರಂತರ ನಡೆಯುವ ಸ್ಪರ್ಧೆಗಳು, ಘರ್ಷಣೆಗಳು, ಹಿಂಸೆ-ಅಹಿಂಸೆ-ತ್ಯಾಗದ ಜಿಜ್ಞಾಸೆ ಇವು ಇಡೀ ಕಾವ್ಯದಲ್ಲಿ ಪಡೆಯುವ ಜೀವ ಅನನ್ಯವಾದುದು. ಚಂದಮುತ್ತ ಮತ್ತು ಚಿನ್ನಮುತ್ತರ ಬದುಕಿನ ವಿವರಗಳಲ್ಲಿ ಪ್ರಸ್ತಾವನೆಯ ಕತೆಯ ಎಲ್ಲ ಆಶಯಗಳು, ವೈರುಧ್ಯಗಳು ಆಕಾರಗೊಳ್ಳುತ್ತಾ; ವಿದ್ಯೆಗಳ ಕ್ರೌರ್ಯ ಹಾಗೂ ಕಲೆಗಳ ಮಹತ್ವ ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಸಂಸ್ಕೃತಿ-ನಾಗರಿಕತೆಗಳ ಬೆಳವಣಿಗೆ, ಅವನತಿಗಳನ್ನು ಚಂದಮುತ್ತ-ಚಿನ್ನಮುತ್ತರ ಸಾಂಕೇತಿಕ ಪಾತ್ರಗಳ ಬದುಕಿನ ಸುತ್ತ ಅತ್ಯಂತ ಸೂಕ್ಷ್ಮವಾಗಿ, ಗಾಢ ವಿವರಗಳ ಮುಖಾಂತರ ಕವಿ ಸೃಷ್ಟಿ ಕ್ರಿಯೆಗೆ ಒಳಪಡಿಸಿದ್ದಾರೆ. “ಆದಿಮ ನಾಗರಿಕತೆಯ ವೈರುಧ್ಯಗಳಾದ ಎಡ-ಬಲ ಪಂಥೀಯರ ಘರ್ಷಣೆ, ಜಾತಿ-ಜಾತಿಗಳ ನಡುವಣ ವೈರತ್ವ, ಧರ್ಮ-ಧರ್ಮಗಳ ನಡುವಿನ ಈರ್ಷ್ಯೆಗಳು ಪ್ರಸ್ತಾವನೆಯ ಭಾಗದಲ್ಲಿ ಬೀಜರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಈ ವಿಚಾರಧಾರೆ ಕೃತಿಯಲ್ಲಿ ಬೇರೆ ಬೇರೆ ಆಯಾಮಗಳಲ್ಲಿ ಅರ್ಥ ಪರಂಪರೆಗಳನ್ನು ಉಂಟುಮಾಡುತ್ತದೆ” (ಕೆ. ಸಿ. ಶಿವಾರೆಡ್ಡಿ). ಚಂದಮುತ್ತ ಯಕ್ಷಿಗೆ ಆಕರ್ಷಿತನಾಗುವುದು, ಕೊಳಲ ವಿದ್ಯೆಯ ಸಾಧನೆಗೆ ತೊಡಗುವುದು, ಅದಕ್ಕೆ ಚಿನ್ನಮುತ್ತನಿಂದ ಎದುರಾಗುವ ಘರ್ಷಣೆ, ಸ್ಪರ್ಧೆ, ಮಾಟ, ಮಂತ್ರ, ಕರಿವಿದ್ಯೆ, ಸೇಡಿನ ವಿದ್ಯೆಗಳು, ಪಶ್ಚಾತ್ತಾಪ ಮೊದಲಾದ ಘಟನೆ, ಸನ್ನಿವೇಶಗಳಲ್ಲಿ ಇಂತಹ ಅರ್ಥವಲಯಗಳನ್ನು ಯಾರೂ ಕಾಣಬಹುದು. ಅಂದರೆ, ಮನುಷ್ಯ ಪ್ರಪಂಚದ ಸಾಂಸ್ಕೃತಿಕ, ರಾಜಕೀಯ ಪ್ರಶ್ನೆಗಳು ಹೆಣ್ಣಿನ ಘರ್ಷಣಾ ನೆಲೆಯಿಂದ ಆರಂಭವಾಗಿ; ದೇವರು, ಧರ್ಮ, ಭಾಷೆ, ವರ್ಣ, ವಿದ್ಯೆ, ಶಕ್ತಿಗಳ ಕಡೆಗೆ ಚಲಿಸುತ್ತವೆ. ಅವು ಸಮಷ್ಟಿ ಬದುಕಿಗೆ ಮಾರಕವಾಗುವುದರ ಕಡೆಗೆ ಮನುಕುಲ ಹೊರಟಿರುವ ದುರಂತವು ಸೂರ್ಯಮುತ್ತ, ಚಿನ್ನಮುತ್ತ, ಮಹಾನುಭಾವರು ಎಸಗುವ ಕೃತ್ಯಗಳಲ್ಲಿ, ತೊಡಗುವ ಕ್ರಿಯೆಗಳಲ್ಲಿ ಹಾಗೂ ಪಶ್ಚಾತ್ತಾಪದ ಘಟನೆಗಳಲ್ಲಿ ಅತ್ಯಂತ ಮಾರ್ಮಿಕವಾದ ವ್ಯಂಗ್ಯ ಪ್ರಕಟವಾಗುತ್ತದೆ.

ಚಿನ್ನಮುತ್ತನ ವ್ಯಕ್ತಿತ್ವ, ಭೋಗಿಸುವ ವಸ್ತು ಪ್ರಪಂಚದ ಬಗೆಗಿನ ವ್ಯಾಮೋಹದ ಪ್ರತಿನಿಧಿಯಂತೆ ಕಾಣುತ್ತದೆ. ಆದರೆ ಚಂದಮುತ್ತನದು ಅಂತಹ ಪ್ರಪಂಚದಿಂದ ಭಿನ್ನವಾದ, ಕಲೆಯ ಸಾಧನೆಯ ಮೂಲಕ ವಿಜ್ಞಾನ, ನಾಗರಿಕತೆಗಳ ಅಭಿವೃದ್ಧಿಗಳ ಹೆಸರಿನಲ್ಲಿ ಪರಿಸರಕ್ಕೆ ಒದಗಿದ ಅಘಾತಗಳನ್ನು ಇಲ್ಲವಾಗಿಸಿ ಸಮೃದ್ಧಿಯನ್ನು ತಂದುಕೊಂಡಂತಹ ವ್ಯಕ್ತಿತ್ವ. ಪರಿಸರದ ಸಮೃದ್ಧಿಗೆ ಅತ್ಯವಶ್ಯಕವಾದ ಮಳೆಯನ್ನು ನಾಡಿಗೆ ಎಳೆದುತಂದು, ತಿಂಗಳ ರಾಗದ ಸಾಧನೆಗೆ ತನ್ನನ್ನೇ ತೆತ್ತುಕೊಳ್ಳುವ ಪ್ರತಿನಿಧಿಯಾಗುತ್ತಾನೆ-ಚಂದಮುತ್ತ.

ಬಿಸಿಲುಗುದುರೆಯನೇರಿ ಹೋದಾ
ಕೈಮೀರಿದ ಚಂದಿರನ ಬೇಟೆಗೆ ಹೋದಾ
ಅಂಬಾರದಾಚೆಯ ರಂಭೇರ ನಾಡಿಂದ 
ಬಾದದ ನಗೆ ತರುವೆನೆಂದ
ಚಕ್ಕಂದವಾಡುವ ಚಿಕ್ಕೆ ತಾರೆಗಳನ್ನು 
ಉಡಿತುಂಬ ತರುತೇನೆ ಅಂದ
ಸೊಕ್ಕೀನ ಚಂದ್ರ ಸಭ್ಯನ ಮಾಡುವೆ
ಪಳಗಿಸುವೆ ದೇವರನೆಂದಾ//ಹೋದಾ//

ಕಣ್ಣಿಗೆ ಬಣ್ಣಗಳನ್ನು ಹಚ್ಚಿಕೊಂಡು ಬಿಸಿಲುಗುದುರೆಯನ್ನೇರಿ ಚಂದಮುತ್ತ ಬೆಳ್ಳಿಯ ಚಂದ್ರನನ್ನು ಅರಸುತ್ತಾ ಹೋಗುತ್ತಾನೆ. ಅಂಬರದಾಚೆಗಿನ ಸಂಬಂಧಗಳನ್ನು ಬೆಸೆಯುವ ಕೊಂಡಿಯಾಗುತ್ತಾನೆ. ನೆಲ-ಬಾನುಗಳ ಕರುಳು ಬಳ್ಳಿಯ ಸಂಬಂಧಗಳನ್ನು ಬೆಸೆಯಲು ಯಕ್ಶಿಗಾಗಿ ತಿಂಗಳು ರಾಗದ ಸಾಧನೆಯಲ್ಲಿ ಸಾರ್ಥಕತೆಯನ್ನು ಪಡೆಯುತ್ತಾನೆ. ಬಾಹ್ಯಕ್ಕೆ ಶಿಲೆಯಾದರೂ ಚಕೋರ ಪಕ್ಷಿಯಲ್ಲಿ ತನ್ನ ಆತ್ಮ ಅಂತರ್ಗತವಾಗುವುದರ ಮೂಲಕ ಎಲ್ಲೆಲ್ಲೂ ಸೇರಿ ಹೋಗುತ್ತಾನೆ. ಕಲೆ ಹಾಗೂ ಕಲಾಕಾರನಾದ ಬೆಳಕಿನ ಅವಧೂತನ ಕಥೆ ಹೀಗೆ ಮಹತ್ವ ಪಡೆಯುತ್ತದೆ.

ಚಂದಮುತ್ತನಂತಹ ಪಾತ್ರದ ಸುತ್ತ ಹೆಣೆದಿರುವ ಈ ಕಾವ್ಯ; ಕಲೆ ಹಾಗೂ ಕಲಾವಿದರ ಸಂಬಂಧಗಳ ಜಿಜ್ಞಾಸೆಯನ್ನು ವಿಶ್ಲೇಷಣೆಗೆ ಗುರಿಪಡಿಸುತ್ತದೆ. ಕಲಾವಿದನೊಬ್ಬ ಕಲಾಸಾಧನೆಯ ಮೆಟ್ಟಿಲುಗಳನ್ನು ಏರುವಲ್ಲಿ, ಕಲೆಯನ್ನು ತನ್ನದಾಗಿಸಿಕೊಳ್ಳುವಲ್ಲಿ ಎದುರಾಗುವ ಕಷ್ಟ ಪರಂಪರೆ, ದುಃಖ ದುಮ್ಮಾನ, ದುರಂತಗಳು ಇಲ್ಲಿವೆ. ಕಲಾಸಾಧಕ ತನ್ನಲ್ಲಿರುವ ಅಸೂಯೆ, ಈರ್ಷ್ಯೆಗಳನ್ನು ಕಳಚಿಕೊಳ್ಳುತ್ತಲೇ ಅತ್ಯಂತ ಶ್ರದ್ಧಾಮುಖಿಯಾಗಿ ಬಲಿದಾನದಿಂದ ಕಲೆಯನ್ನು ಒಲಿಸಿಕೊಳ್ಳಬೇಕೆಂಬ ಧ್ವನಿ ಮತ್ತು ಆಶಯಗಳನ್ನು ‘ಚಕೋರಿ’ಯು ತನ್ನ ಕಾವ್ಯಾಂತರಾಳದಲ್ಲಿ ಹುದುಗಿಸಿಕೊಂಡಿದೆ.

ಕಲಾವಿದನಂತೆ ಕಲೆಯೂ ಹುಡುಕುತ್ತದೆ
ತಕ್ಕವನನ್ನು
ಹಾಗೆ ಪರಸ್ಪರ ಹುಡುಕಿ ಪಡಕೊಂಡವರು
ನಾವು ನಿನ್ನನ್ನ
ನೀವು ನಮ್ಮನ್ನ...

ಕಲಿತುಕೋಬೇಕಪ್ಪ ಖಾಲಿಯಾಗುವುದನ್ನ
ಹಾಗೆಯೇ ಬೇರೊಂದು ಬೆಳಕು ನುಗ್ಗಿದಾಗ
ತುಂಬಿಕೊಳ್ಳೋದನ್ನ

‘ಚಕೋರಿ’ಯ ಇಂತಹ ಉದ್ಧರಣಗಳಲ್ಲಿ ಕಲೆಯನ್ನು ಕುರಿತ ವಿಶ್ಲೇಷಣೆ ಕೃತಿಯುದ್ದಕ್ಕೂ ಅಡಕವಾಗಿದೆ. ಚಕೋರಿಯಂತಹ ರಾಗ-ರಚನೆಯ ಮುಖ್ಯ ಉದ್ದೇಶವು; “ಬರುವ ಜನ ಬಾಳಲೆಂದು ಬದುಕಲೆಂದು”. ಇದೇ ವಿಚಾರಧಾರೆಯು ‘ಚಕೋರಿ’ಯ ಕೇಂದ್ರ ಆಶಯವೂ ಜಿಜ್ಞಾಸೆಯೂ ಆಗಿ ಪ್ರಕಟವಾಗಿದೆ. ಕಲೆಯ ಬಗೆಗಿನ ಕನಸು, ಕಲಾಸಾಧಕನ ಬದುಕೂ ಸಹ ಕೃತಿಯ ಕೊನೆಯಲ್ಲಿ ಇಂತಹ ಉದ್ದೇಶಕ್ಕೆ ಅರ್ಪಿತವಾಗುತ್ತದೆ. ಕಲಾಸಾಧಕನ ಬದುಕು ಹಾಗೆ ಅರ್ಪಿತವಾಗುವುದರ ಮುಖೇನ ದೇವರು, ಸೃಷ್ಟಿ, ಮನುಷ್ಯ, ಪ್ರಾಣಿ ಸಂಬಂಧದ ಅಂತರಗಳನ್ನೇ ತೊಡೆದುಹಾಕುವ ಧ್ವನಿಯನ್ನು ಹೊರಡಿಸುತ್ತದೆ. ಲೋಕದ ಮೈಲಿಗೆಯನ್ನು ತೊಳೆದು ಬೆಳಕು ಮೂಡಿಸಿದ ಚಂದ್ರಶೇಖರನಾದ ಚಂದಮುತ್ತ ಕೊನೆಗೆ ಯಕ್ಷಿಯಲ್ಲಿಯೇ ಐಕ್ಯವಾಗುವುದರ ಮೂಲಕ ನೆಲ ಮುಗಿಲುಗಳ ಅಂತರವನ್ನೇ ಇಲ್ಲವಾಗಿಸುತ್ತಾನೆ. ಚಂದಮುತ್ತ ತಿಂಗಳು ರಾಗವನ್ನು ಹಾಡುವುದರ ಮೂಲಕ ಯಕ್ಷಿಗೆ ಚೈತನ್ಯವನ್ನು ದೊರಕಿಸಿಕೊಡುತ್ತಾನೆ. ಕಾವ್ಯದಲ್ಲಿ ಈ ಸನ್ನಿವೇಶ ಅತ್ಯಂತ ಧ್ವನಿಪೂರ್ಣವಾದ ಸಾಂಕೇತಿಕ ಭಾಗವೂ ಆಗಿದೆ.

ಮನುಷ್ಯನ ಕನಸು, ಕನಸಿನಿಂದ ಕಟ್ಟಿಕೊಳ್ಳುವ ಜವಾಬ್ದಾರಿಗಳು, ಅವುಗಳ ಅಧಃಪತನಗಳ ಕಾಣ್ಕೆಯನ್ನು ಅತ್ಯಂತ ಆಳ ಮತ್ತು ವಿಶಾಲವಾದ ಭಿತ್ತಿಯಲ್ಲಿ ಕನಸುಗಳೇ ಕಥೆ ಹೇಳುತ್ತವೆ. “ಕನಸುಗಳೇ ಕಥೆ ಹೇಳುವ ಚಕೋರಿಯ ತಂತ್ರ ಸಂಕೀರ್ಣ ವಿಚಾರಧಾರೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರಕಟಪಡಿಸುತ್ತದೆ. ಕಂಬಾರರು ಕಂಡುಕೊಂಡಿರುವ ಈ ತಂತ್ರ ಕನ್ನಡ ಕಾವ್ಯ ಜಗತ್ತಿಗೆ ವಿಶಿಷ್ಟ ಮಾದರಿಯಾಗಿದೆ. ಕಾಲ, ದೇಶ, ವಯಸ್ಸು, ಮನಸ್ಸುಗಳ ಅಂತರಗಳನ್ನು ಮೀರಿ, ಆದಿಮ ಕಾಲದಿಂದ ಉಳಿದು ಬಂದಿರುವ ಕನಸುಗಳು ಚಕೋರಿಯ ಎಲ್ಲ ಪಾತ್ರ ಸನ್ನಿವೇಶಗಳ ಒಳ-ಹೊರ ಪ್ರಪಂಚವನ್ನು ಓದುಗನಿಗೆ ಪರಿಚಯಿಸುವ ಸ್ನೇಹಿತನಂತೆ ಆತ್ಮೀಯವಾಗಿ ಎದುರಾಗುತ್ತವೆ” (ಕೆ. ಸಿ. ಶಿವಾರೆಡ್ಡಿ). ಈ ಮೂಲಕ ಲೋಕಾತೀತವಾದ ಬದುಕಿನ ಚಿತ್ರಣ ದೊರಕುತ್ತದೆ. ಕನಸುಗಳು ನಾಟಕದ ಸೂತ್ರಧಾರನಂತೆ ಪದೇ ಪದೇ ಪಾತ್ರಗಳಾಗಿ ಎದುರಾಗುವ ಅನನ್ಯ ಕ್ರಿಯೆ ನಡೆಯುತ್ತಲೆ ಇರುತ್ತದೆ. 

ಹೀಗೆ ಕನಸುಗಳು ಕಟ್ಟಿಕೊಳ್ಳುವ ನಾಡಿಗೆ ಚಂದಮುತ್ತನೇ ನಾಯಕನಾಗುತ್ತಾನೆ. ಹೆಂಗರುಳಿನ ಅವನು ಕನಸುಗಳನ್ನು ಕಟ್ಟುವವನು, ಜಗದ ಖಾಲಿಗಳನ್ನು ಹಾಡಿನಿಂದ ತುಂಬ ಹೊರಟವನು. ಈ ಖಾಲಿಗಳೇ ಕನಸುಗಳು. ಚಕೋರಿಯ ಕನಸುಗಳು. ಆ ಕನಸುಗಳು ಪೂರ್ತಿಯಾದಾಗಲೇ ಚಕೋರಿಯ ಬಿಡುಗಡೆ. ಅದೇ ಚಂದಮುತ್ತನ ಬದುಕಿನ ಉದ್ದೇಶ. ಚಕೋರಿ ತುಟಿಗೆ ತುಟಿ ಹಚ್ಚಿ ಅವನ ಬದುಕನ್ನು ಪೂರ್ತಿ ಹೀರಿ ಕನಸಿನ ಲೋಕಕ್ಕೆ ಒಯ್ಯುತ್ತಾಳೆ. ಆ ಕನಸುಗಳನ್ನೇ ಬಳದಿಂಗಳನ್ನಾಗಿಸಿಕೊಂಡು ಬದುಕುತ್ತಾಳೆ. ಆದ್ದರಿಂದಲೇ ಚಂದಮುತ್ತನಿಗೆ ಸಾವಿಲ್ಲ. ಚಂದ್ರನ ಬೆಳದಿಂಗಳನ್ನು ಕುಡಿಯುವ ಚಕೋರಿ ಚಂದ್ರಚಕೋರಿಯಾಗುತ್ತಾಳೆ. ಅವಳಲ್ಲಿ ಚಂದಮುತ್ತ ಲಯವಾಗುತ್ತಾನೆ. ಅಲ್ಲ್ಲ, ಅಸ್ತಿತ್ವ ಪಡೆಯುತ್ತಾನೆ. 

ಚಂದಮುತ್ತನ ದೇಹ ಈಗ ಪೂರಾ ಶಿಲೆಯಾಗಿ
ಕಲ್ಲುಗಳಲ್ಲಿ ಕಲ್ಲಾಗಿ ಬಿದ್ದಿದೆ.
ಕಣ್ಣು ಮಾತ್ರ ಗಾಜಿನ ಕಣ್ಣಿನಂತೆ ಕಾಣುತ್ತಿದ್ದವು.
ಕಣ್ಣುಗಳಲ್ಲಿ ಹೆಪ್ಪುಗಟ್ಟಿದ ಚಂದ್ರನಿದ್ದ.
ಎರಡೂ ಕಣ್ಣಲ್ಲಿ ಸೋರಿದ್ದ ಕಣ್ಣೀರು ಮಾತ್ರ
ಹಾಗೇ ನೀರು ನೀರಾಗೇ ಇತ್ತು.

ಅವನ ಅಸ್ತಿತ್ವಕ್ಕೆ, ಬೆಳದಿಂಗಳಲ್ಲಿ ತೋಯ್ದಿರುವ ಚಂದಮುತ್ತನ ಶಿಲೆಯೇ ಸಾಕ್ಷಿ, ಶಿಲೆಯ ಕಂಗಳಲ್ಲಿ ಹರಿದಿದ್ದ ಕಣ್ಣೀರೇ ಸಾಕ್ಷಿ. ಈ ಮೂಲಕ ಚಂದಮುತ್ತ ಶಾಶ್ವತವಾಗುತ್ತಾನೆ. ಕಲೆ ಶಾಶ್ವತವಾಗುತ್ತದೆ. ಮನುಷ್ಯರಿರುವವರೆಗೆ ಅದು ಬಾಳುತ್ತದೆ, ಬದುಕುತ್ತದೆ. ಅದಕ್ಕೇ ಕವಿ ಚಂದಮುತ್ತ ಸತ್ತನೆಂದು ಹೇಳಬೇಡಿ ಎಂದು ಕೇಳಿಕೊಳ್ಳುತ್ತಾನೆ. ಏಕೆಂದರೆ ಕಲೆಗೆ ಸಾವಿಲ್ಲ;

ಬೆಳಕಿನ ಅವಧೂತ ಚಂದಮುತ್ತ
ಸತ್ತನೆನಬ್ಯಾಡಿರಯ್ಯಾ
ಅವನ ತುಟಿಯ ಮ್ಯಾಲಿನ ಹಾಡನ್ನ
ಹಕ್ಕಿಗಳಿಗೆ ಕೊಡಿರಯ್ಯ
ಕಣ್ಣಂಚಿನಲ್ಲಿರೋ ಕಣ್ಣೀರನ್ನ
ತರುಮರಗಳಿಗೆ ಬೇರಿಸಿ ಹನಿಸಿರಯ್ಯ 
ಆತ್ಮದ ತುಂಬ ಚಂದಮುತ್ತನ ಬೆಳ್ದಿಂಗಳ
ತುಂಬಿಕೊಂಡು ಹೋಗಿರಯ್ಯ
ಈ ಅಂಕಣದ ಹಿಂದಿನ ಬರೆಹಗಳು:

ದೇವನೂರರ ಒಡಲಾಳ: ದಲಿತ ಬದುಕಿನ ದರ್ಶನ
ವಾಸ್ತವ–ವಿಕಾಸಗಳ ನಡುವಿನ ಜೀಕುವಿಕೆ: ತೇಜಸ್ವಿಯವರ ಕರ್ವಾಲೊ
ಅನಂತಮೂರ್ತಿಯವರ ‘ಸಂಸ್ಕಾರ’ : ಬದುಕಿನ ಭಿನ್ನ ಮುಖಗಳ ಅನಾವರಣ
ಕಾರ್ನಾಡರ ತುಘಲಕ್: ವರ್ತಮಾನವಾಗುವ ಇತಿಹಾಸದ ತುಣುಕು
ಎಂದಿಗೂ ಮುಪ್ಪಾಗದ ’ಹಸಿರು ಹೊನ್ನು’
ಪ್ರಾದೇಶಿಕತೆಯ ದಟ್ಟ ವಿವರಗಳ-ಮಲೆಗಳಲ್ಲಿ ಮದುಮಗಳು
ಗ್ರಾಮಾಯಣ ಎಂಬ ಸಮಕಾಲೀನ ಪುರಾಣ
ಬದುಕಿನ ದಿವ್ಯದರ್ಶನ ಮೂಡಿಸುವ `ಮರಳಿ ಮಣ್ಣಿಗೆ’
ಮಾಸ್ತಿಯವರ ಕತೆಗಾರಿಕೆಗೆ ಹೊಸ ಆಯಾಮ ದಕ್ಕಿಸಿಕೊಟ್ಟ ಕೃತಿ ‘ಸುಬ್ಬಣ್ಣ’
ಮೈಸೂರ ಮಲ್ಲಿಗೆ ಎಂಬ ಅಮರ ಕಾವ್ಯ
ಪುಸ್ತಕ ಲೋಕವೆಂಬ ಬದುಕಿನ ಬುತ್ತಿ
ಎ.ಆರ್. ಕೃಷ್ಣಶಾಸ್ತ್ರಿಯವರ 'ವಚನ ಭಾರತ'
ಅಂಬಿಕಾತನಯದತ್ತರ ಸಖೀಗೀತ
ಡಿ. ವಿ. ಜಿ.ಯವರ ಮಂಕುತಿಮ್ಮನ ಕಗ್ಗ

 

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...