ಕನ್ನಡ ತತ್ವಪದಗಳ ಗಝಲ್ ಕಾಕಾ

Date: 12-03-2022

Location: ಬೆಂಗಳೂರು


'ರವೀಂದ್ರ ಹಂದಿಗನೂರು ಅಕ್ಷರಶಃ ಅಭಿಜಾತ ಗಾಯಕ. ಅವನದು ಏಕಲವ್ಯ ಪ್ರತಿಭೆ. ಸಂಗೀತದ ಸೆಲೆ ಅಂತರಾಳದ ನಾಭಿಯನ್ನು ಸತಾಯಿಸಿ ಅವನೊಳಗೊಬ್ಬ ಗಂಧರ್ವ ಗಾಯಕ ಹುಟ್ಟಿಕೊಂಡ. ಯಾವುದೇ ಗುರುವಿನ ಬಳಿ ಸಂಪ್ರದಾಯದ ಸಂಗೀತ ಶಿಕ್ಷಣ ಪಡೆಯಲಿಲ್ಲ. ಆದರೆ ತನ್ನ ಜೀವಧ್ವನಿಯ ಅದ್ವೈತ ಧೈರ್ಯದಿಂದ ಗಝಲ್ ಗಾಯನ ಶೈಲಿಯಲ್ಲಿ ಪ್ರಭುತ್ವ ಸಾಧಿಸಿದ' ಎನ್ನುತ್ತಾರೆ ಲೇಖಕ, ರಂಗಕರ್ಮಿ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ ಗಾಯಕ ರವೀಂದ್ರ ಹಂದಿಗನೂರು ಅವರ ಕುರಿತು ಬರೆದಿದ್ದಾರೆ.

ಹೌದು ಅಭಿಮಾನಿಗಳ ಬಾಯಲ್ಲಿ ಅವನ ಹೆಸರು 'ಗಝಲ್ ಕಾಕಾ' ಎಂದೇ ಹೆಸರುವಾಸಿ. ಆದರೆ ಮಾತು ಮಾತಿಗೂ ಆತನೇ ಎಲ್ಲರನ್ನು 'ಕಾಕಾ' ಎಂತಲೇ ಕರೆಯುತ್ತಿದ್ದುದು ವಾಡಿಕೆಯಾಗಿತ್ತು. ಕನ್ನಡದ ತತ್ವಪದಗಳನ್ನು ಗಝಲ್ ಶೈಲಿಯಲ್ಲಿ ಮನೋಜ್ಞವಾಗಿ ಹಾಡಬಹುದೆಂಬುದನ್ನು ತೋರಿಸಿಕೊಟ್ಟ ಗಾನಗಂಧರ್ವ ಅವರು. ಹೆಸರು ರವೀಂದ್ರ ಹಂದಿಗನೂರು. ತತ್ವಪದಗಳ ಪಾಲಿಗೆ ರವೀಂದ್ರ 'ಕನ್ನಡದ ಗುಲಾಮ್ ಅಲಿ' ಎಂತಲೇ ಸುಪ್ರಸಿದ್ದರು. ಈ ಮಾತನ್ನು ಖುದ್ದಾಗಿ ಹೇಳಿದ್ದು ಜಗದ್ವಿಖ್ಯಾತ ಗಝಲ್ ಗಾಯಕರೆಂದೇ ಪ್ರಸಿದ್ಧರಾದ ಪಾಕಿಸ್ತಾನದ ಲಾಹೋರಿನ ಗುಲಾಮ ಅಲಿ.

ರವೀಂದ್ರ ಕಾಕಾನ ಹುಟ್ಟೂರು ವಿಜಯಪುರ ಜಿಲ್ಲೆಯ ಹಂದಿಗನೂರು. ಅದು ವೃತ್ತಿರಂಗಭೂಮಿಯ ನಾಮಾಂಕಿತರಾದ ನಟಕೇಸರಿ ಸಿದ್ರಾಮಪ್ಪನವರ ಊರು. ರವೀಂದ್ರರ ತಂದೆ ಗುರುಬಸಪ್ಪ ಮುಳವಾಡ ಅವರಿಗೆ ವೃತ್ತಿರಂಗದ ಅನನ್ಯತೆಯ ಅಪಾರ ನಂಟು. ಅವರೊಬ್ಬ ಅಪರೂಪದ ರಂಗನಿರ್ದೇಶಕರು. ಅಷ್ಟಕ್ಕೂ ಅದು ವೃತ್ತಿ ರಂಗಭೂಮಿ ಉಳುಮೆಯ ಹುಲುಸಾದ ನಾಟಕಗಳ ನಾಡು. ಮುಳವಾಡ ಎಂಬುದು ರವೀಂದ್ರ ಹಂದಿಗನೂರ ಮನೆತನದ ಹೆಸರು. ಆತನಿಗೆ ಮನೆತನದ ಹೆಸರಿಗಿಂತ ಊರಿನ ಹೆಸರೇ ಪರಮಾಪ್ತ. ಹಾಗೆಂದೇ ಅದನ್ನೇ ಪ್ರಚಲಿತ ಮಾಡಿಕೊಂಡರು.

ರವೀಂದ್ರ ಅಕ್ಷರಶಃ ಅಭಿಜಾತ ಗಾಯಕ. ಅವನದು ಏಕಲವ್ಯ ಪ್ರತಿಭೆ. ಸಂಗೀತದ ಸೆಲೆ ಅಂತರಾಳದ ನಾಭಿಯನ್ನು ಸತಾಯಿಸಿ ಅವನೊಳಗೊಬ್ಬ ಗಂಧರ್ವ ಗಾಯಕ ಹುಟ್ಟಿಕೊಂಡ. ಯಾವುದೇ ಗುರುವಿನ ಬಳಿ ಸಂಪ್ರದಾಯದ ಸಂಗೀತ ಶಿಕ್ಷಣ ಪಡೆಯಲಿಲ್ಲ. ಆದರೆ ತನ್ನ ಜೀವಧ್ವನಿಯ ಅದ್ವೈತ ಧೈರ್ಯದಿಂದ ಗಝಲ್ ಗಾಯನ ಶೈಲಿಯಲ್ಲಿ ಪ್ರಭುತ್ವ ಸಾಧಿಸಿದ. ಅದಕ್ಕೆ ಶಿರಪೇಷು ಇಟ್ಟಂತೆ ಗದುಗಿನ ಪುಟ್ಟರಾಜ ಗವಾಯಿಗಳಿಂದ ಶಾಸ್ತ್ರೀಯ ಸಂಗೀತ ಧರ್ಮದ ದೀಕ್ಷೆ ಪಡೆದಿದ್ದ. ಏಕೆಂದರೆ ಗಝಲ್ ಎಂಬುದು ಸಂಗೀತದ ಒಂದು ಬಗೆಯ ಸಂಕರಪ್ರಜ್ಞೆ. ಬಾಲ್ಯದಿಂದಲೇ ಭಜನೆ, ದೊಡ್ಡಾಟ, ಹಂತೀಹಾಡು, ಮೊಹರಂ ಹಾಡು, ಸ್ಥಳೀಯ ಜನಪದ ಹಾಡುಗಳ ಒಡನಾಟ. ಜೊತೆಗೆ ಕಂಪನಿ ನಾಟಕಗಳಲ್ಲಿನ ಕಂದಪದ್ಯಗಳ ಪೊಗದಸ್ತಾದ ಪರಿಚಯ. ಮೇಲಾಗಿ ಹಂದಿಗನೂರು, ಕೋರವಾರ, ಕಲಕೇರಿ, ಯಲಗೋಡ, ಬೋರಗಿ ಮೊದಲಾದ ಇಂಗರೇಜಿ ಸೀಮೆಗಳಲ್ಲಿ ಕಡಕೋಳ ಮಡಿವಾಳಪ್ಪನವರ ತತ್ವಪದಗಳ ಹಾಡುಗಬ್ಬದ ಹೊಳೆ.

ರವೀಂದ್ರಗೆ ಅಂತಹ ಹೊಳೆಯಲ್ಲಿ ಅಗದೀ ಸೋಜಾಗಿ ಈಜಾಡುವ ವಿಪುಲ ಅವಕಾಶ. ಅಲ್ಲಿನ ಪರಿಸರ ನಿಜಗುಣ ಶಿವಯೋಗಿಗಳ ಅನುಭಾವ ಶಾಸ್ತ್ರ, ಕೈವಲ್ಯ ನವನೀತದ ಚಿಂತನ ಗೋಷ್ಠಿ, ವೇದಾಂತ ಪ್ರವಚನಗಳು ನಡೆಯುವ ಶಿವ ಜಿಜ್ಞಾಸುಗಳ ನೆಲೆಬೀಡು. ತತ್ವವೇತ್ತರ ತಾಯಿನಾಡು. ಮುರುಗೇಂದ್ರ ಶಿವಯೋಗಿಗಳು, ಗುರುಪಾದೇಶ್ವರ ಪರಂಪರೆಯ ಹೋಳಗಿ ರಾಚಪ್ಪ, ಮಡಿವಾಳಪ್ಪ ಬಿರಾದಾರ, ವೈದ್ಯರಾಜ ವೀ. ಸಿ. ಹಳ್ಳೆ, ಕಲಕೇರಿ ಗುರುಸ್ವಾಮಿ, ಬೋರಗಿ ಭೀಮಾಶಂಕರ ಸಂಪ್ರದಾಯದ ಖಾದರಸಾಬ, ಕುಂಬಾರ ಶರಣಮ್ಮ ಅವರಿಂದ ಹಿಡಿದು ಲಕ್ಷ್ಮಣ ಶಾಸ್ತ್ರಿ ಇತ್ತೀಚೆಗೆ ನಿಧನರಾದ ಕಲ್ಲಪ್ಪ ಶರಣರು, ನಮ್ಮ ನಡುವಿನ ಅಮೋಘಸಿದ್ಧ ಶಾಸ್ತ್ರಿಗಳವರೆಗೂ ನಿಜಗುಣರ ಮಾದರಿಯ ಮುಕ್ತಿಕಾಂಡದ ಗುರುಮಾರ್ಗ ವಿವೇಚನೆ-ವಿವೇಕ, ಚಿಂತನ-ಮಂಥನ ಉಳ್ಳವರ ಊರುಗಳು.

ಇಂತಹ ಸಾಂಸ್ಕೃತಿಕ ಸನ್ನಿವೇಶಗಳ ಹಸಿರು ಪರಿಸರದಲ್ಲಿ ಅರಳಿದ್ದು ರವೀಂದ್ರ. ಒಂಬತ್ತನೆಯ ಈಯತ್ತೆಗೇ ಆತನ ಓದಿನ ಬಂಡಿ ನಿಂತಿತು. ಪರಂತು ಸಂಗೀತ ನಾದಶ್ರದ್ಧೆಯ ಚಕ್ಕಡಿ ಪಯಣ ಅವನ ಸಾವಿನ ಕಟ್ಟಕಡೇ ಗಳಿಗೆತನಕ ಸಾಗಿತು. ಅದು ತತ್ವಪದಗಳ ಮಾರ್ದವ ಚಕ್ರದ ನಿತಾಂತ ನಡಿಗೆ. ಹೀಗಂತಲೇ ಸಂಗೀತದ ರಸಾರ್ದ್ರತೆಗೆ ಮತ್ತೊಂದು ಹೆಸರೇ ರವೀಂದ್ರ ಹಂದಿಗನೂರ. ಅದು ಎಂತಹದೇ ಕಾಡು ಕಟುಕನಲ್ಲೂ ಕುಸುಮ ಕೋಮಲ ಅಂತಃಕರಣ ಅರಳಿಸುವ ಅಂತಃಶ್ರೋತದ ಸಂವೇಗ. ಅವನ ಗಝಲ್ ಗಾಯನದ ಶೃತಿ ಮಾಧುರ್ಯಕ್ಕೆ ಮಾರು ಹೋಗದವರೇ ಇಲ್ಲ. ಅದೊಂದು ಚಿತ್ತಾಕರ್ಷಕ ಚಿತ್ತಭಿತ್ತಿ. ತಿರುತಿರುಗಿ ಸವಿದರೂ ತೀರದ ಬುತ್ತಿ.

ಅವನಿಗೆ ಆರಂಭದ ದಿನಗಳಲ್ಲಿ ಸ್ಥಳೀಯ ಭಜನೆಗಳ ಹಾಡುಗಾರಿಕೆ ಶೈಲಿಯೇ ರೂಢಿ. ಬರಬರುತ್ತಾ ಸುಗಮದ ಸಹವಾಸ. ಕರಗತ ಮಾಡಿಕೊಂಡು ಕೆಲವುಕಾಲ ಸುಗಮದಲ್ಲೇ ತತ್ವಪದಗಳ ಹಾಡಿಕೆ. ಹೀಗೊಮ್ಮೆ ಹುಮನಾಬಾದ ಪಟ್ಟಣದ ಪಾನಪಟ್ಟಿ ಅಂಗಡಿಯವನು ಹಚ್ಚಿದ ಗಝಲ್ ಗಾಯನದ ಕ್ಯಾಸೆಟ್ ಹಾಡು ತಾನು ಪಾನಬೀಡಾ ಮೆಲಿಯುತ್ತಲೇ ಆಲಿಸುತ್ತಾನೆ. ಅದನ್ನು ಮತ್ತೆ ಮತ್ತೆ ಕೇಳಬೇಕೆಂಬ ದಿವಿನಾದ ನಾದ ಕುತೂಹಲ. ರವೀಂದ್ರನ ವಿನಂತಿಯ ಮೇರೆಗೆ ಪಾನಬೀಡಾ ಅಂಗಡಿಯಾತ ಹೊಳ್ಳಿ ಹೊಳ್ಳಿ ಅದೇ ಗಝಲ್ ಹಾಡು ಕೇಳಿಸುತ್ತಾನೆ. ಅದು ಲಾಹೋರಿನ ಗುಲಾಮಲಿಯ ಗಝಲ್.

ಅದು ಅವನಲ್ಲಿ ಅನುಪಮ ಅಚ್ಚರಿ, ಅಂಥದೇ ಆಸಕ್ತಿ ಅರಳಿಸುತ್ತದೆ. ಹೌದು ಪಾಕಿಸ್ತಾನದ ಗುಲಾಮ ಅಲಿಯ ಗಝಲುಗಳಿಗೆ ಜಾತಿ, ಮತ, ಧರ್ಮ, ಪಂಥಗಳ ಮೀರಿದ ಅಪ್ಪಟ ಮನುಷ್ಯತ್ವದ ಜೀವಸ್ಪರ್ಶ. ಹೀಗಾಗಿ ತರುಣ ರವೀಂದ್ರ ಗುಲಾಮ್ ಅಲಿಯ ಗುಲ್ದಾಸ್ಥದಂತಹ ಕ್ಯಾಸೆಟ್ಟುಗಳನ್ನು ಹುಡುಕಿ, ಹುಡುಕಿ ಕಲೆಹಾಕಿ ಧ್ಯಾನಸ್ಥನಾಗಿ ಆಲಿಸುತ್ತಾನೆ. ಅವುಗಳನ್ನೇ ಅನುಕರಿಸಿ ಹಾಡ ತೊಡಗುತ್ತಾನೆ. ತನ್ಮೂಲಕ ಗಝಲ್ ಸಿದ್ಧಿಯ ಸಾಧಕನಾಗುತ್ತಾನೆ. ಅದು ಅವನ ಸಂಗೀತ ಬದುಕಿನ ವಿಭಿನ್ನ ಪರಂಪರೆಯ ಪಾರಮ‌್ಯ. ತದನಂತರದೆಲ್ಲ ಕನ್ನಡ ತತ್ವಪದಗಳ ಗಝಲ್ ಮಾಯಾ ಲೋಕದ ವಿಸ್ಮಯ. ಹಾಗೆ ಶುರುವಾದ ಗಝಲ್ ಹಾಡಿನ ಹುಚ್ಚು ಹಲವು ಸೃಜನಶೀಲ ಸಂವೇದನೆಗಳೊಂದಿಗೆ ಅವನ ಜೀವದ ಅಂತಿಮ ಕ್ಷಣಗಳವರೆಗೂ ಜೀವಂತವಾಗಿತ್ತು. ಅವನು ಗತಿಸಿದ ಮೇಲೂ ಅವನ ಪ್ರಯೋಗಶೀಲ ಸಂಗೀತ ಸಾಧ್ಯತೆಯ ಕ್ಷಿತಿಜ ವಿಸ್ತೃತಗೊಳ್ಳುತ್ತಲಿದೆ. ಟೀವಿಗಳ ರಿಯಾಲಿಟಿ ಷೋಗಳೇ ಅದಕ್ಕೆ ನಿದರ್ಶನ. ಅವನ ಸಿರಿಕಂಠದ ಗಝಲ್ ಶೈಲಿಯ ತತ್ವಪದಗಳಿಗೆ ಕಾರ್ಪೊರೇಟ್ ದುನಿಯಾದಲ್ಲಿ ಎಲ್ಲಿಲ್ಲದ ಮಾನ್ಯತೆ. ಅವನ ಅಗಲಿಕೆಯ ವಾರ್ತೆ ತಿಳಿಯುತ್ತಿದ್ದಂತೆ ಅನೇಕ ದೂರದರ್ಶನ ವಾಹಿನಿಗಳು ಅವನಿಗೆ ಶ್ರದ್ಧಾಂಜಲಿಯ ವಿಶೇಷ ಕಾರ್ಯಕ್ರಮಗಳನ್ನೇ ಏರ್ಪಡಿಸಿ ಗಾಯನ ನಮನ ಅರ್ಪಿಸಿದವು.

ರವೀಂದ್ರ ವಯಸ್ಸಿನಲ್ಲಿ ನನಗಿಂತ ಹಿರೀಕನಾಗಿದ್ದ. ಹಾಗಿದ್ದಾಗ್ಯೂ ನಮ್ಮದು ಏಕವಚನದ ದೋಸ್ತಿ. ಪ್ರತಿವರ್ಷ ನಮ್ಮೂರ ಮಡಿವಾಳಪ್ಪನ ಜಾತ್ರೆಯ ಆಹೋರಾತ್ರಿಯಲಿ ಅವನ ಸಂಗೀತ ಸಮಾರೋಹ. ಅದಕ್ಕೆಂದೇ ಮುಂಚಿತವಾಗಿ ಸಾವಿರಾರು ಮಂದಿ ಶ್ರೋತೃಗಳು ಪರ ಊರುಗಳಿಂದ ಬಂದು ಸೇರುತ್ತಿದ್ದರು. ಮೇಲೆತ್ತರದ ನಿಲುವು. ತಲೆತುಂಬಾ ಯದ್ವಾತದ್ವಾ ಹರಡಿಕೊಂಡ ಕಡುಕಪ್ಪನೆಯ ಗುಂಗುರು ಕೂದಲು. ಕಡಲೆಬೇಳೆ ಬಣ್ಣದ ಸುಂದರ ಶರೀರ. ಅಷ್ಟೇ ಸುಂದರ ಶಾರೀರ. ಸಹಜವಾಗಿ ಗಂಡು ಹೆಣ್ಣೆನ್ನದೇ ಎಂಥವರಲ್ಲೂ ಪ್ರೀತಿ ಉಕ್ಕಿಸುವ ಆಕರ್ಷಕ ವ್ಯಕ್ತಿತ್ವ ಅವನದು. ಅವನ ಗಝಲ್ ಗುಂಗಿನಲಿ ಮುಳುಗೆದ್ದು ಬೆಳಕು ಹರಿಯುವಷ್ಟರಲ್ಲಿ ಹುಟ್ಟಿಕೊಳ್ಳುವ ಹಿಂಡು ಹಿಂಡು ಅಭಿಮಾನಿಗಳ ದಂಡು. ಇದೆಲ್ಲ ಕಳೆದ ಶತಮಾನದಷ್ಟು ಹಿಂದಿನ ಕಥನ. ಜವಾರಿತನದ ನನ್ನ ಈ ನೆನಪುಗಳು ನಾಲ್ಕು ದಶಕಗಳಿಗೂ ಹಿಂದಿನವು.

ಸತ್ವಯುತವಾದ ಮಡಿವಾಳಪ್ಪನ ತತ್ವಪದಗಳಿಗೆ ಗಝಲ್ ಚ್ಯಾಲಿನ ಅವನ ರಾಗ ಸಂಯೋಜನೆ ನಿನ್ನೆ ಮೊನ್ನೆಯ ಗಾಯಕರ ಮೇಲೂ ಯಥೇಚ್ಛ ಪ್ರಭಾವ ಬೀರಿವೆ. ಇತ್ತೀಚೆಗೆ ಅಂತಹದ್ದೊಂದು ನಿದರ್ಶನ ಜಗಜ್ಜಾಹೀರುಗೊಂಡಿತು. ರವೀಂದ್ರ ಕಾಕಾ ರಾಗಸಂಯೋಜನೆ ಮಾಡಿರುವ ಮೂಕನಾಗಬೇಕು/ ಜಗದೊಳು ಜ್ವಾಕ್ಯಾಗಿರಬೇಕು// ಎಂಬ ಕಡಕೋಳ ಮಡಿವಾಳಪ್ಪನವರ ತತ್ವಪದ ಕಲರ್ಸ್ ಕನ್ನಡ ವಾಹಿನಿಯ "ಎದೆ ತುಂಬಿ ಹಾಡುವೆನು" ರಿಯಾಲಿಟಿ ಷೋ ಸ್ಪರ್ಧೆಯಲ್ಲಿ ಸೂರ್ಯಕಾಂತ ಎಂಬ ಉಗ್ಗು ಮಾತಿನ ತರುಣ ಎಗ್ಗಿಲ್ಲದೇ ಹಾಡಿದ. ಹಾಗೆ ಹಾಡಿದ ಎರಡೇ ಎರಡು ತಾಸಲ್ಲಿ ವಿಶ್ವಾದ್ಯಂತ ಹತ್ತು ಲಕ್ಷಕ್ಕೂ ಹೆಚ್ಚುಮಂದಿ ಪ್ರೇಕ್ಷಕ ಶ್ರೋತೃಗಳ ಮನಸೂರೆಗೊಂಡ. ಅದು ರವೀಂದ್ರ ಹಂದಿಗನೂರು ಎಂಬ ಗಝಲ್ ಗಾರುಡಿಗನ ರಾಗಮೋಡಿಯ ಗಮ್ಮತ್ತು ಮಾತ್ರವಲ್ಲ ಖರೇ ಖರೇ ತಾಕತ್ತು.

ಬಹುಪಾಲು ನಮ್ಮ ಪ್ರತಿಭಾಶಾಲಿಗಳಿಗೆ ಇರಬಹುದಾದ 'ಮದ್ಯರಾತ್ರಿ'ಯ ಮೋಹಕ ಸಾಂಗತ್ಯ; 'ಮದ್ಯಸ್ಥಿಕೆ'ಯ ಸಣ್ಪುಟ್ಟ ದೌರ್ಬಲ್ಯ ಮತ್ತು ತಿಕ್ಕಲುತನಗಳು ಅವನಲ್ಲಿದ್ದವು. ಎಸ್. ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಕಾಕಾನಿಗೆ ಸರಕಾರ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿತು. ಅದರ ಪೂರ್ವ ತಯಾರಿಯಂತೆ ಆಪ್ತಮಿತ್ರನಾಗಿ ಅವನ‌ ಪ್ರತಿಭೆ ಕುರಿತು ಸರಕಾರ ಮತ್ತು ಸಾಂಸ್ಕೃತಿಕ ಪ್ರಭುತ್ವದ ಗಮನ ಸೆಳೆಯಲೆಂದು ಅವನಿಂದ 'ಬಯೋಡೆಟ' ಪಡೆಯಲು ನಾನು ತಿಪ್ಪರಲಾಗ ಹಾಕಿದೆ. ಆಸಾಮಿ ಜಗ್ಗಲಿಲ್ಲ. ಸಂಸ್ಕೃತಿ ಚಿಂತಕರಾದ ಬರಗೂರು ರಾಮಚಂದ್ರಪ್ಪ ಆಗ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು. ಹರಪನಹಳ್ಳಿಯಲ್ಲಿ ರವೀಂದ್ರ ಕಾಕಾ ಹಾಡಿದ ಮಡಿವಾಳಪ್ಪನ ತತ್ವಪದಗಳ ಗಝಲ್ ಕಾರ್ಯಕ್ರಮ ತಾಸೊಪ್ಪತ್ತು ಬರಗೂರು ನಿವಾಂತ ಕುಂತು ಕೇಳಿದ ನೆನಪಿತ್ತು. ಬರಗೂರರ ಗಮನಕ್ಕೆ ಕಾಕಾನ ಹೆಸರು ತರುವುದೇ ತಡ, ರವೀಂದ್ರಗಿಂತ ಅರ್ಹರು ಇನ್ಯಾರಿದ್ದಾರೆ ಕಡ್ಕೋಳ್ ಎನ್ನುತ್ತಾ ಅರ್ಜಿ- ಬಯೋಡೆಟಗಳ ಅಗತ್ಯವೇ ಇಲ್ಲ ಎಂದರು.

ಬರಗೂರರ ಪ್ರಯತ್ನದ ಫಲವಾಗಿ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಆಯ್ತು. ಅಚ್ಚರಿ ಅದಲ್ಲ. ನವೆಂಬರ್‌ ಒಂದರಂದು ಪ್ರಶಸ್ತಿ ಪಡೆಯಲು ಬೆಂಗಳೂರಿಗೆ ಅವನನ್ನು ಕರಕೊಂಡು ಬರುವುದು ದುಸ್ತರವಾಯ್ತು.‌ ಈಗಿನಂತೆ ಆಗ ಮೊಬೈಲುಗಳಿರಲಿಲ್ಲ. ಅವನು ಒಂದ್ಕಡೆ ಇರೋ ಆಸಾಮಿಯಲ್ಲ. ಮುಂಜಾನೆ ಒಂದೂರಲ್ಲಿದ್ರೆ ಸಂಜೆ ಮತ್ತೊಂದು ಊರಲ್ಲಿ. ನಾನು ದಾವಣಗೆರೆಯಲ್ಲಿ. ಬೆಂಗಳೂರಿನ ಸಂಸ್ಕೃತಿ ಇಲಾಖೆಯಿಂದ ನನಗೆ ನಾಕೈದು ಬಾರಿ ಫೋನ್ ಮೇಲೆ ಫೋನ್. ಅವರನ್ನು ಕರೆತರುವ ಒಪ್ಪಿತ ಜವಾಬ್ದಾರಿ. ಅದಕ್ಕಾಗಿ ನಾನು ಒಂದೆರಡು ದಿನ ರಜೆ ಹಾಕಬೇಕಾಯ್ತು. ಅವನ ಠಿಕಾಣಿ ಗದಗ. ವೀರೇಶ್ವರ ಪುಣ್ಯಾಶ್ರಮಕ್ಕೆ ಫೋನ್ ಮಾಡಿದೆ. ತಾಸೊತ್ತಿನ ನಂತರ ಬಂದು ರೋಣ, ಅಣ್ಣಿಗೇರಿ ಕಾರ್ಯಕ್ರಮಕ್ಕೆ ಹೋಗಿದ್ದಾರೆಂದು ಸೋದರಿ ಮೀನಾಕ್ಷಿ (ಅವನ ಪತ್ನಿ) ಹೇಳಿದ್ದು. ಅಲ್ಲಿಗೆಲ್ಲ ಫೋನ್ ಮಾಡಿದಾಗ ಮಾತಾಡಲು ಅವನು ಸಿಕ್ಕಿದ್ದೇ ಖುಷಿ. ಆದರೆ ಕಾಕಾ ಹೇಳಿದ್ದೇನು ಗೊತ್ತೆ; " ನೀನೇ ಹೋಗಿ ಪ್ರಶಸ್ತಿ ಇಸ್ಕೊಂಬಾ " ಅಂತ ನನಗೆ ಹೇಳಿ ಪಟ್ಟಂತ ಫೋನ್ ಕಟ್ ಮಾಡಿದ. ನನಗೋ ಪೀಕಲಾಟ.

ಅಣ್ಣಿಗೇರಿಯ ಹಿರಿಯ ಗೆಳೆಯರಾದ ಪ್ರೊ. ಎಸ್. ಎಸ್. ಹರ್ಲಾಪೂರ ಮತ್ತು ಹಾಲಪ್ಪ ತುರ್ಕಾಣಿ ಅವರನ್ನೆಲ್ಲ ಸಂಪರ್ಕಿಸಿದೆ. ಏನೇನೋ ಗುದುಮುರಗಿ ಹಾಕಿ ವಾಗೀಶ (ಕಾಕಾನ ಮಗ) ಬೆಳಗಿನ ಜಾವ ಅವನನ್ನು ಡಾವಣಗೇರಿಗೆ ಕರಕೊಂಡು ಬಂದ. ಅಂದೇ ನವೆಂಬರ್ ಒಂದು. ಹ್ಯಂಗೋ ಮಾಡಿ ಅವನನ್ನು ಬೆಂಗಳೂರಿಗೆ ಜತನವಾಗಿ ಕರಕೊಂಡು ಹೋದೆವು. ಊರಿಂದ ಬರುವಾಗ ಬಸ್ಸಿನಲ್ಲಿ ಚಪ್ಪಲಿ ಕಳಕೊಂಡು ಬರಿಗಾಲಲ್ಲಿ ಬಂದಿದ್ದ. "ಬಸ್ಸಲ್ಲಿ ಹಾಗೆ ಪ್ರಯಾಣಿಸಿದ ಚಪ್ಪಲಿಗಳಿಗೆ ನಾನು ಟಿಕೆಟ್ ತೆಗಿಸಿರಲಿಲ್ಲ. ಟಿಕೆಟ್ ರಹಿತ ಪ್ರಯಾಣ ಅಪರಾಧ. ಕಂಡಕ್ಟರ್ ಪುಗಸಟ್ಟೆ ಕರಕೊಂಡು ಹೋಗಿದ್ದಾನೆಂದು" ಗಂಭೀರ ಸ್ವರದಲ್ಲಿ ಚ್ಯಾಷ್ಟಿ ಮಾಡಿದ. ಅವನಲ್ಲಿ ಪ್ರಕಾಂಡ ಹ್ಯುಮರ್ ಸೆನ್ಸ್ ಇತ್ತು. ಅವನು ಕಾಲೋಚಿತ ಚುರುಕಾದ ನುಡಿಕಾರನು ಆಗಿದ್ದ.

ಬೆಂಗಳೂರಲ್ಲಿ ಪೊಲೀಸ್ ಮಹಾನಿರ್ದೇಶಕ ಸುಭಾಷ್ ಭರಣಿ ಅವರ ಅಭಿನಂದನಾ ಕಾರ್ಯಕ್ರಮ. ಕಾಕಾನ ಗಝಲ್ ಪ್ರಸ್ತುತಿ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸಿತು. ನಾವೆಲ್ಲ ಸಾಹಿತಿಗಳು ತಾಸುಗಟ್ಟಲೇ ಸುಭಾಷ್ ಭರಣಿಯನ್ನು ಹಾಡಿ ಹೊಗಳಿದ್ದೇ ಹೊಗಳಿದ್ದು. ಆದರೆ ಕಾಕಾ ಹಾಡಿನ ನಡುವೆ ಆಡಿದ ಒಂದೇಒಂದು ಮಾತು ಕಿವಿ ಗಡಚಿಕ್ಕುವ ಚಪ್ಪಾಳೆ ಗಿಟ್ಟಿಸಿತು. "ನೀವು‌ ಸುಭಾಷ್ ಭರಣಿ ಅಲ್ಲ. ಶಹಬ್ಬಾಸ್ ಭರಣಿ " ಇದು ಕಾಕಾನ ಅವತ್ತಿನ ಪಂಚಿಂಗ್ ಡೈಲಾಗ್. ಅವನಲ್ಲಿ ಇಂತಹ ಅನೇಕಾನೇಕ ನೇರ ಮತ್ತು ಖಾರದ ನಿಪುಣ ನುಡಿಗಳು. ಮಾತಾಡುವಾಗ ಒಂದಷ್ಟು ಉಗ್ಗುತ್ತಿದ್ದ. ಆದರೆ ಹಾಡುವಾಗ ಮಾತ್ರ ಉಗ್ಗು ಮಟಾಮಾಯ.

ಜೆ. ಎಚ್. ಪಟೇಲರ ಕುಟುಂಬಕ್ಕೆ ಕಾಕಾನ ಪರಿಚಯಿಸಿ ಕೊಟ್ಟೆ. ರವಿ ಬೆಳಗೆರೆ, ಬರಗೂರು, ಶಾಸಕ ಭೂಪತಿ ಹೀಗೆ ಅನೇಕ ಸಾಂಸ್ಕೃತಿಕ ವ್ಯಕ್ತಿತ್ವಗಳ ಪರಿಚಯ. ಶ್ರೀನಿವಾಸ ಕಪ್ಪಣ್ಣ ಜೊತೆ ಅಮೆರಿಕೆಯ ಅಕ್ಕ ಫೆಸ್ಟಿವಲ್. ಒಂದೆ ಎರಡೇ ದಕ್ಷಿಣ ಕರ್ನಾಟಕದ ತುಂಬೆಲ್ಲ ಕಾಕಾನ ಗಝಲ್ ಪದಗಳ ಪರಿಚಯ. ದಾವಣಗೆರೆಯ ಎಸ್. ಪಿ. ಶೃತಿಗೆ ತನ್ನ ಗಝಲ್ ಸಂಗೀತದ ಕಲಿಕೆಯ ಮಟ್ಟುಗಳ ಧಾರೆಯೆರೆದ. ಎರಡರಿಯದ ಗಝಲ್ ಕಾಕಾ ತನ್ನ ಐವತ್ತೆಂಟನೇ ವಯಸ್ಸಿನಲ್ಲಿ (ಸೆಪ್ಟೆಂಬರ್ 2012) ಸಂಗೀತಯಾತ್ರೆ ಮುಗಿಸಿದ. ಇನ್ನಷ್ಟು ಕಾಲ ಇರಬೇಕಿತ್ತು. ಕನ್ನಡ ತತ್ವಪದಗಳ ಗಝಲ್ ಲೋಕ ಇನ್ನಷ್ಟು ಬೆಡಗು ಮತ್ತು ಬೆರಗುಗಳಿಗೆ ತೆರೆದುಕೊಳ್ಳುವ ಅವಕಾಶಗಳಿದ್ದವು. ಸಂಗೀತಜ್ಞಾನ ಮಾತ್ರವಲ್ಲದೇ ಅವನಿಗೆ ಅಮೋಘವಾದ ಮೆಕಾನಿಕಲ್ ವಿಷಯದ ತಾಂತ್ರಿಕ ಜ್ಞಾನವಿತ್ತು. ರೇಡಿಯೋ, ಟೀವಿ, ಕಾರು, ವಾಚ್ ರಿಪೇರಿ ಮಾಡುತ್ತಿದ್ದ. ಆಳೆತ್ತರದ ಗಡಿಯಾರ ತಯಾರಿಸಿದ್ದ. ಅದಕ್ಕೆ ಮೀನಾ ಟವರ್ ಟೈಮ್ ಅಂತ ಹೆಸರಿಟ್ಟಿದ್ದ. ಅಮೋಘ ಪ್ರತಿಭೆಯ ಅಪರೂಪದ ವ್ಯಕ್ತಿತ್ವವೊಂದು ಸಾಂಸ್ಕೃತಿಕ ಪಯಣದ ಅರ್ಧ ಹಾದಿಯಲ್ಲೇ ನಿರ್ಗಮಿಸಿತು.

*ಮಲ್ಲಿಕಾರ್ಜುನ ಕಡಕೋಳ*
9341010712

ಈ ಅಂಕಣದ ಹಿಂದಿನ ಬರಹಗಳು
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲ

 

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...