ಕಥನ ಕುತೂಹಲವಿರದ 'ಗೋಲ್'


‘ಒಟ್ಟು ನಾಟಕ ಶಿಲ್ಪವೂ ಹೊಸ ದಾರಿಗಳಿಗೆ ತೆರೆದುಕೊಳ್ಳುತ್ತಿದ್ದ ಕಾಲದಲ್ಲಿ 'ಗೋಲ್' ಬೇಂದ್ರೆಯವರ ನಾಟಕ ಜಗತ್ತಿನ ಗುರಿಯು ಎಂಬಂತೆ ಕಾಣುತ್ತದೆ’ ಎನ್ನುತ್ತಾರೆ ರಂಗಕರ್ಮಿ, ಲೇಖಕ ಡಾ. ಬೇಲೂರು ರಘುನಂದನ. ಅವರು ‘ಬೇಂದ್ರೆ ನಾಟಕಗಳ ರಂಗ ಪ್ರವೇಶ’ ಎಂಬ ವಿಶೇಷ ಸರಣಿ ಆರಂಭಿಸಿದ್ದು, ಈ ಸರಣಿಯಲ್ಲಿ ಈ ಬಾರಿ ಸಂಸಾರಿಕ ಜೀವನದ ಕುರಿತು ಬೇಂದ್ರೆಯವರು ಬರೆದ ಮೂರು ವಿಶೇಷ ನಾಟಕಗಳ ಕುರಿತು ವಿಶ್ಲೇಷಿಸಿದ್ದಾರೆ.

ಬೇಂದ್ರೆಯವರು ರಚಿಸಿದ ನಾಟಕಗಳಲ್ಲಿ 'ಗೋಲ್' ಮೊದಲನೆಯದ್ದು. ಈ ಕೃತಿ 1920ರಲ್ಲಿ ರಚನೆಗೊಂಡು, 1921ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪ್ರಯೋಗಗೊಂಡಿತು. ಈ ಅವಧಿಯಲ್ಲಿ ಉತ್ತರ ಕರ್ನಾಟಕದಲ್ಲಿ ಹವ್ಯಾಸಿ ರಂಗಭೂಮಿ ರೂಪತಾಳುತ್ತಿತ್ತು. ‘ಗೋಲ್ ಎಂದರೆ ಗುರಿ, ಕುರಿಯ ಹಾಗೆ ಹೋಗುವವರು ಬಹಳ. ಗುರಿಯ ನಿಟ್ಟಿನಿಂದ ಹೋಗುವವರು ಬಹಳ ಕಡಿಮೆ. ನಮ್ಮ ಸಮಾಜವು ಇನ್ನೂ ಆದರ್ಶ ಹೀನವಾಗಿದೆ. ನಮ್ಮ ವಿದ್ಯಾಶಾಲೆಗಳು ವಿದ್ಯೆಗಿಂತ ಬುದ್ಧಿಯ ಮುದ್ದೆಗಳಾಗಿವೆ’(ಪುಟ 3 'ಗೋಲ್' ಶ್ರೀಮಾತಾ ಪ್ರಕಾಶನ 2008) ಎಂಬ ಬೇಂದ್ರೆಯವರ ಮಾತುಗಳು ಒಟ್ಟು ನಾಟಕದ ಕೇಂದ್ರ ಶಕ್ತಿಯಂತೆ ತೋರಿದರೂ ಆದರ್ಶ ಸಮಾಜದ ಕಲ್ಪನೆಯನ್ನು ನಾಟಕ ಮುಂದಿಡುತ್ತದೆ. ಸ್ವತಂತ್ರ ಪೂರ್ವದಲ್ಲಿ ಶಿಕ್ಷಣ, ಚಳುವಳಿ ಮತ್ತು ಸಾಮಾಜಿಕ ಒಳನೋಟಗಳುಳ್ಳ ನಾಟಕ ಇದಾಗಿದೆ. ಯುವಕರು ಸಾಗಬೇಕಾದ ದಾರಿಯನ್ನು ಹಾಸ್ಯ ಲೇಪಿತ ಗಂಭೀರ ದೃಶ್ಯಗಳ ಮೂಲಕ ನಾಟಕ ರಚನೆಯಾಗಿದೆ. ಗೆಳೆತನ ಮತ್ತು ಆದರ್ಶಕ್ಕೆ ಇರಬಹುದಾದ ಸಾಧ್ಯತೆಗಳು ಹಾಗೂ ವೈಚಾರಿಕ ಜೀವನ, ಆದರ್ಶದಿಂದ ಬೇರ್ಪಟ್ಟ ಸಮಾಜದ ಚಿತ್ರಣ ಈ ನಾಟಕದ ಒಟ್ಟು ಪರಿಪ್ರೇಕ್ಷದಲ್ಲಿ ಹರಡಿಕೊಂಡಿದೆ. ಒಟ್ಟು ನಾಟಕ ಶಿಲ್ಪವೂ ಹೊಸ ದಾರಿಗಳಿಗೆ ತೆರೆದುಕೊಳ್ಳುತ್ತಿದ್ದ ಕಾಲದಲ್ಲಿ 'ಗೋಲ್' ಬೇಂದ್ರೆಯವರ ನಾಟಕ ಜಗತ್ತಿನ ಗುರಿಯು ಎಂಬಂತೆ ಕಾಣುತ್ತದೆ. ಆದರ್ಶವಿಲ್ಲದ ಬಾಳು ಸಮಾಜವನ್ನು ಸರಿದಾರಿಗೆ ಕೊಂಡೊಯ್ಯಲು ಸಾಧ್ಯವೆ? ಎಂಬ ಮುಖ್ಯವಾದ ಪ್ರಶ್ನೆ ಇಡೀ ನಾಟಕದುದ್ದಕ್ಕೂ ಕಾಣುತ್ತದೆ.

ಬೇಂದ್ರೆಯವರೆ ಪ್ರಸ್ತಾಪಿಸುವಂತೆ 'ಗೋಲ್' ನಾಟಕ ಮೊದಲು 1922ರಲ್ಲಿ 'ಇಂಟರ್ ಪ್ರಿಟರ್ಸ್’ ಪ್ರಕಾಶನದಿಂದ ಪ್ರಕಟವಾಯಿತು. ಈ ಕೃತಿಯನ್ನು1924ರಲ್ಲಿ ಬೇಂದ್ರೆಯವರು ಕೊಂಡುಕೊಂಡದ್ದು, 1920ರಲ್ಲಿ ಈ ನಾಟಕವನ್ನು ಬೇಂದ್ರೆಯವರ ಗೆಳೆಯ ಶಂಕರಗೌಡರಿಗಾಗಿ ನಾಟಕವನ್ನು ಬರೆದದ್ದು. ಈ ಎಲ್ಲಾ ವಿವರಗಳು ಚಾರಿತ್ರಿಕವಾಗಿ ಮತ್ತು ಕನ್ನಡ ರಂಗಭೂಮಿಯ ವಿವಿಧ ಮಗ್ಗುಲುಗಳನ್ನು ಅರಿಯಲು ಬೇಕಾದ ವಿವರಗಳನ್ನು ನೀಡುತ್ತದೆ. ಬೇಂದ್ರೆಯವರ ನಾಟಕದ ಪ್ರಯಾಣ ಶತಮಾನ ಪೂರೈಸಿರುವ ಈ ಹೊತ್ತಿನಲ್ಲಿ ಗೋಲ್ ಅಂದರೆ ಗುರಿ ಕನ್ನಡ ನಾಟಕದ ಆರಂಭದ ಹೆಜ್ಜೆಗಳನ್ನು ಅದರ ವಸ್ತು, ವಿನ್ಯಾಸ ಮತ್ತು ಅಭಿವ್ಯಕ್ತಿ ಕ್ರಮದ ದೃಷ್ಟಿಯಿಂದ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ನಾಟಕದ ಕೊನೆಯಲ್ಲಿ ಬರುವ ಪಾಟೀಲರ, ಗೋಖಲೆಯವರ, ನಾಯಕರ ಹಾಗೂ ಕುಲಕರ್ಣಿಯ ಭಾಷಣದ ಭಾಗಗಳು ಬೇಂದ್ರೆಯವರು ನಾಟಕದ ಮೂಲಕ ಹೇಳಲು ಹೊರಟಿರುವ ಸಾಮಾಜಿಕ ವಿಮರ್ಶೆಯ ಹಾಗೂ ಆದರ್ಶಪ್ರಾಯವಾದ ವ್ಯಕ್ತಿಯನ್ನು ಕುರಿತಾದ ನಿಲುವುಗಳಾಗಿವೆ. ಈ ನಾಟಕ ಸಂಭಾಷಣ ಪ್ರಧಾನವಾಗಿದ್ದು ಮಾತಿಗೆ ಮಾತು ಎನ್ನುವಂತೆ ಹಾಗೂ ಬೇಂದ್ರೆಯವರು ಪ್ರಭಾವಿತರಾಗಿದ್ದ ಅರವಿಂದರ ವಿಚಾರಗಳನ್ನು ಹೇಳಲು ಬೇಕಾದ ಭೂಮಿಕೆ ಎಂಬಂತೆ ನಾಟಕ ಕಾಣುತ್ತದೆ.

ಸಮಾಜದಲ್ಲಿರುವ ಯುವಕರ ಮನಸ್ಥಿತಿಯನ್ನು ಈ ನಾಟಕದ ಎಲ್ಲ ಪಾತ್ರಗಳು ಪ್ರತಿನಿಧಿಸುತ್ತವೆ. ನಾಟಕದ ಆರಂಭದಲ್ಲಿ ಬಳಸಲಾಗಿರುವ 'ಗರಿ' ಕವನಸಂಕಲನದ ಸೀಮೋಲಂಘನ ಕವಿತೆಯನ್ನು ಹಾಡುವ ರಂಗನಾಯಕ ಹಾಗೂ ನಾಲ್ಕನೇ ದೃಶ್ಯದಲ್ಲಿ ಬೇಂದ್ರೆಯವರು ಬಳಸಿಕೊಂಡಿರುವ ಯಕ್ಷ-ಯಕ್ಷಿ ಸಂಕಲನದ ಸೂಕ್ತಿಗಳು ನಾಟಕದ ಒಟ್ಟಂದದಲ್ಲಿ ಕಥಾವಸ್ತುವಿನ ದೃಷ್ಟಿ ಮತ್ತು ಆಶಯವನ್ನು ಸ್ಪಷ್ಟಪಡಿಸುತ್ತದೆ. ಶ್ರೀಮಂತಿಕೆ ಮತ್ತು ವಿಲಾಸಿ ಜೀವನದಲ್ಲಿ ಆಸಕ್ತನಿಲ್ಲದ ರಂಗ ನಾಯಕನ ಮನಸ್ಥಿತಿ, ಅವನ ಸಮಸ್ಯೆಗಳಿಗೆ ಮಾನಸಿಕವಾಗಿ ಜೊತೆಯಾಗುವ ಗೆಳೆಯರು, ನಾಟಕದುದ್ದಕ್ಕೂ ವ್ಯಕ್ತಿಯ ಗುರಿ ಮತ್ತು ಆದರ್ಶಗಳನ್ನು ಪ್ರಸ್ತಾಪಿಸುತ್ತಾರೆ. "ನಗಿಯಲ್ಲಿ ಹೊಗಿ ಬ್ಯಾಡ|ಹೊಗಿ ಹಿಂದ ಧಗಿ ಬ್ಯಾಡ ಬಾಳಿಗೆ ಎರಡು ಬಗಿ ಬ್ಯಾಡ|ನನ ಗೆಣೆಯಾ ಬ್ಯಾಸರಿಕೆ ಬ್ಯಾಡೊ ನಗುವಾಗ"ಎಂಬ ಮಾತುಗಳ ಮೂಲಕ ಮನುಷ್ಯನ ಮನಸ್ಸು ಮತ್ತು ಅಂತರಂಗ ತಾರುಣ್ಯದಲ್ಲಿ ದಾಟಿಕೊಳ್ಳಬೇಕಾದ ಸಂಘರ್ಷಗಳ ಸಾಧ್ಯತೆಗಳೂ ಆಗಿವೆ.

ಬೇಂದ್ರೆಯವರ ಚೊಚ್ಚಲ ಕವನ ಸಂಕಲನ 1922 ರಲ್ಲಿ ಪ್ರಕಟವಾಯಿತು. ಕವಿ ಬೇಂದ್ರೆಯವರು ತಮ್ಮ ಮೊದಲ ಸಂಕಲನ ರಚನೆ ಮಾಡುವುದಕ್ಕೆ ಮೊದಲು 'ಗೋಲ್' ಎಂಬ ನಾಟಕವನ್ನು ರಚಿಸಿದರು. ಕನ್ನಡ ರಂಗಭೂಮಿಯು ಹೊಸ ರೂಪ ತಳೆಯುತ್ತಿದ್ದ ಕಾಲದಲ್ಲಿ ಬೇಂದ್ರೆಯವರು ಗೋಲ್ ನಾಟಕವನ್ನು ರಚನೆ ಮಾಡಿದ್ದು ಗಮನಿಸಿದರೆ ರಂಗಭೂಮಿ, ನಾಟಕ ಸಾಹಿತ್ಯ ಹಾಗೂ ನಾಟಕದ ಕಥಾವಸ್ತು ಅಭಿವ್ಯಕ್ತಿಗೊಳ್ಳಲು ತೆರೆದುಕೊಂಡ ಹಲವು ಆಯಾಮಗಳನ್ನು ಗಮನಿಸಬಹುದು. ಸಾಹಿತ್ಯ ರಚನೆಗೆ ಬೇಂದ್ರೆ ನಾಟಕ ಪ್ರಕಾರದ ಮೂಲಕ ಪ್ರವೇಶಿಸಿದರೂ ಅವರು ನಾಟಕ ಪ್ರಕಾರವನ್ನು ತಮ್ಮ ಅಭಿವ್ಯಕ್ತಿಯ ಮೂಲ ಸೆಲೆಯಾಗಿಸಿಕೊಳ್ಳಲಿಲ್ಲ ಎಂಬುದು ಅವರ ನಾಟಕಗಳ ಓದಿನಿಂದ ತಿಳಿಯಬಹುದು. 'ಕಾವ್ಯದಲ್ಲಿ ಕಂಡ ಯಶಸ್ಸು ನಾಟಕದಲ್ಲಿ ಕಾಣಲಿಲ್ಲ'ಎಂಬ ಮೇಲು ಮೇಲಾದ ಬೀಸು ಹೇಳಿಕೆಯನ್ನು ನೀಡುವುದು ಸೂಕ್ತವಲ್ಲ ಅನಿಸುತ್ತದೆ. ಕಾವ್ಯಕ್ಕಿರುವ ದೀರ್ಘ ಪರಂಪರೆ ಆಧುನಿಕ ಕನ್ನಡ ನಾಟಕಕ್ಕೆ ಇಲ್ಲ ಎಂಬುದು ಒಪ್ಪಿಕೊಳ್ಳಬೇಕಾದ ಮಾತು. ಅನೇಕ ಹೊಸತುಗಳೊಂದಿಗೆ ಆಧುನಿಕ ಕನ್ನಡ ನಾಟಕ ಕೂಡ ಹುಡುಕಾಟ ನಡೆಸಲು ಆರಂಭಿಸಿತ್ತು. ವಸ್ತು, ಅಭಿವ್ಯಕ್ತಿ, ರೂಪ ಮತ್ತು ಶಿಲ್ಪದ ದೃಷ್ಟಿಯಿಂದ ಬೇಂದ್ರೆಯವರ ನಾಟಕಗಳು ಹೊಸ ಸಾಧ್ಯತೆಗಳನ್ನು ಹುಡುಕುವ ಸಲುವಾಗಿ ಮಾಡಿದ ಚೊಚ್ಚಲ ಪ್ರಯತ್ನಗಳು ಎನ್ನಬಹುದು. ಬೇಂದ್ರೆಯವರ ನಾಟಕಗಳು ರಂಗಪ್ರಯೋಗದ ಗುಣಗಳನ್ನು ಮರೆತಂತೆ ತೋರುತ್ತದೆ. ಅದಕ್ಕೆ ಸೂಚ್ಯವಾಗಿ ಮೇಲೆ ಪ್ರಸ್ಥಾಪಿಸಿದ ಕೆಲವು ವಿಷಯಗಳು ಕೂಡ ಪೂರಕವಾಗಿವೆ.

ನಾಟಕಕಾರನನೇ ನಾಟಕದ ವಸ್ತು ವಿಚಾರಗಳನ್ನು ಪ್ರಕಟಪಡಿಸಲು ಹಾತೊರೆಯುವುದನ್ನು ಬೇಂದ್ರೆಯವರ ಬಹುತೇಕ ನಾಟಕಗಳಲ್ಲಿ ಗಮನಿಸಬಹುದು. ಗೋಲ್ ನಾಟಕವು ಈ ಅಂಶದಿಂದ ಬೇರೆಯಾಗಿಲ್ಲ. ಮಾತು ಮಾತನ್ನೆ ಬೇಡುತ್ತ ರಂಗಕ್ರಿಯೆಗೆ ಸ್ಥಳಾವಕಾಶವನ್ನೇ ನೀಡದೆ ಗೋಲ್ ಸೇರಿದಂತೆ ಬೇಂದ್ರೆಯವರ ಎಲ್ಲಾ ನಾಟಕಗಳು ರಚನೆಗೊಂಡಿವೆ. ಸಂಭಾಷಣೆಯನ್ನೇ ಪ್ರಧಾನ ಭೂಮಿಕೆಯನ್ನಾಗಿ ಮಾಡಿಕೊಂಡ ಬೇಂದ್ರೆಯವರ ನಾಟಕಗಳು ವಾಚಾಳಿಯಂತೆ ಕಂಡರೂ ಬೇಂದ್ರೆಯವರು ಆಯ್ದುಕೊಂಡ ಕಥಾವಸ್ತುಗಳು ಹೆಚ್ಚು ಮಾತನ್ನೇ ಬಯಸಿದಂತೆ ತೋರುತ್ತದೆ.

ಬೇಂದ್ರೆಯವರು ತಮ್ಮ ಶೈಕ್ಷಣಿಕ ಜೀವನದಲ್ಲಿ ಶ್ರೀಅರವಿಂದರ ವಿಚಾರದಿಂದ ಹೆಚ್ಚು ಪ್ರೇರಣೆಗೊಂಡಿದ್ದರು ಆ ಪ್ರೇರಣೆ 'ಗೋಲ್' ನಾಟಕದ ವಸ್ತುವಾಯಿತು. "What is there new that we have yet to accomplish? Love for as yet we have only accomplished hatred and self-pleasing ; knowledge, for as yet we have only accomplished error and perception and conceiving; Bliss, for as yet we have only accomplished pleasure and pain and indifference; Power, for as yet we have only accomplished weakness and effort and a defeated victory; life for as yet we have only accomplished birth and growth and dying; unity, for as yet we have only accomplished war and association" (ಗೋಲ್ ಸಂ.ಡಾ|| ವಾಮನ ಬೇಂದ್ರೆ, ಶ್ರೀ ಮಾತ ಪ್ರಕಾಶನ 2008, ಪುಟ 44)

ಜೀವನ, ಒಗ್ಗಟ್ಟು, ಪ್ರೀತಿ, ಮಿತಿ ಮತ್ತು ಶಕ್ತಿ ಮುಂತಾದ ಅಂಶಗಳು ಅರವಿಂದರ ಈ ಮಾತುಗಳ ಸತ್ಯ ಗೋಲ್ ನಾಟಕದಲ್ಲಿ ಬೇರೆ ಬೇರೆ ನೆಲೆಯಲ್ಲಿ ಅಭಿವ್ಯಕ್ತಿಗೊಂಡಿದೆ. ಅರವಿಂದರ ಕೃತಿ 'Thoughts and Glimpses Aphorisms' ಎಂಬ ಕೃತಿಯಲ್ಲಿ ಈ ಮೇಲಿನ ವಿಚಾರಗಳು ಚರ್ಚಿತ ಗೊಂಡಿವೆ. ಈ ಹಿನ್ನೆಲೆಯಲ್ಲಿ ಬೇಂದ್ರೆಯವರು ಯುವ ವಿದ್ಯಾರ್ಥಿಗಳು, ಅದರಲ್ಲೂ ಚರ್ಚೆ ಮತ್ತು ಸಂವಾದಕ್ಕೆ ತೆರೆದುಕೊಳ್ಳುವ ಮನಸ್ಸುಗಳನ್ನು ನಾಟಕದ ವಿವಿಧ ಪಾತ್ರಗಳನ್ನಾಗಿಸಿದ್ದಾರೆ. ಶಿಕ್ಷಣ ಪಡೆದ ಯುವಕರ ಮನಸ್ಥಿತಿ, ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನಾಟಕ ಮಂಡಿಸುತ್ತದೆ. ಅಷ್ಟೇ ಅಲ್ಲದೆ ಗೆಳೆತನಕ್ಕಿರುವ ಮಹತ್ವ ಮತ್ತು ಗೆಳೆಯರ ಬಳಗಕ್ಕೆ ಇರಬೇಕಾದ ಸ್ವರೂಪ ಎರಡನ್ನು ನಾಟಕ ತನ್ನ ಅಂತರಂಗದಲ್ಲಿ ಬೆಸೆದುಕೊಂಡಿದೆ. ಸ್ವತಂತ್ರ ಪೂರ್ವದ ಭಾರತೀಯ ಸಮಾಜದಲ್ಲಿ ಶಿಕ್ಷಿತ ಯುವಮನಸ್ಸುಗಳ ಯೋಚನಾ ಕ್ರಮವನ್ನು ನಾಟಕ ಸ್ಪಷ್ಟವಾಗಿ ಅರ್ಥಮಾಡಿಸುತ್ತದೆ.

ಅಕ್ಷರ ಮತ್ತು ಸಾಮಾಜಿಕ ವಿವೇಕ ರೂಪುಗೊಳ್ಳುವ ಕಾಲಘಟ್ಟದಲ್ಲಿ ಗೋಲ್ ನಾಟಕ ಶಿಕ್ಷಿತ ಸಮಾಜ ಯಾವ ಬಗೆಯ ಗುರಿಯನ್ನು ಹೊಂದಿರಬೇಕು ಸಾಮಾಜಿಕ ಕ್ರಾಂತಿಗೆ ಪೂರಕವಾಗಿ ಹೇಗೆ ದುಡಿಯುತ್ತದೆ ಎಂಬ ವಿವರಗಳಲ್ಲಿ ನಾಟಕ ಆದರ್ಶದ ಕಲ್ಪನೆಯನ್ನು ಕಟ್ಟಿಕೊಡುತ್ತದೆ. ಆರೋಗ್ಯವಂತ ಸಮಾಜಕ್ಕೆ ಬೇಕಿರುವ ಪಾತ್ರಗಳು, ಸುಧಾರಣೆಯಾಗಬೇಕಿರುವ ಪಾತ್ರಗಳು ಅಥವಾ ವಿವೇಕಿಯಾಗಿ ಮಾತನಾಡುವ ಪಾತ್ರಗಳ ಮೂಲಕ ಬೇಂದ್ರೆಯವರು ಗೋಲ್ ನಾಟಕದಲ್ಲಿ ಅರಿವಿನ ಬಹುಮುಖಿ ಆಯಾಮಗಳನ್ನು ಮಂಡಿಸಿದ್ದಾರೆ. ಶಿಕ್ಷಣಕ್ಕಿಂತ ಕೇವಲ ಬುದ್ಧಿಮತ್ತೆಯನ್ನು ಮುಂದಿಟ್ಟುಕೊಂಡು ರೂಪುಗೊಳ್ಳುತ್ತಿರುವ ಶೈಕ್ಷಣಿಕ ವ್ಯವಸ್ಥೆಯ ಬಗೆಗೂ ನಾಟಕಕಾರರು ಸೂಚ್ಯವಾಗಿ ಮಾತನಾಡಿದ್ದಾರೆ. ಚಳುವಳಿ ಹೋರಾಟಗಳ ಮೂಲಕ ವಿದ್ಯಾರ್ಥಿಗಳ ಬಳಗ ಯಾವುದನ್ನು ಸಂಪಾದಿಸಬೇಕು? ನಿಜವಾದ ವಿದ್ಯಾರ್ಥಿಗಳು ಯಾರು? ಗುರಿ ಎಂದರೇನು? ಎಂಬುದರ ನಿರ್ವಚನ ಗೋಲ್ ನಾಟಕದ ಕೇಂದ್ರ ಶಕ್ತಿಯಾಗಿದೆ.

ಗೋಲ್ ನಾಟಕದಲ್ಲಿ ವಿದ್ಯಾ ವಿನೋದ ಸಮಾಜದ ಗೆಳೆಯರ ಗುಂಪು ಮಾತನಾಡುತ್ತದೆ, ಸಂವಾದ ಮಾಡುತ್ತದೆ ಮತ್ತು ಚರ್ಚಿಸುತ್ತದೆ. ರಂಗನಾಯಕ ತಿಮ್ಮ, ಮಿಸ್ಟರ್ ಗೋಖಲೆ, ಪಾಟೀಲರು, ಕುಲಕರ್ಣಿ ಶ್ಯಾಮರಾವ್ ಗೌಡರು ಹಾಗೂ ಕಾಜೀ ಸಾಹೇಬರು ಕರ್ನಾಟಕದ ಪಾತ್ರಧಾರಿಗಳಾಗಿ ಮಾತನಾಡುತ್ತಾರೆ ಈ ನಾಟಕದಲ್ಲಿ ಬರುವ ಪಾತ್ರಧಾರಿಗಳು ಬೇಂದ್ರೆಯವರು ಬಯಸುತ್ತಿದ್ದ ಗೆಳೆಯರ ಗುಂಪಿನವರೂ ಆಗಿದ್ದರೆಂದು ತೋರುತ್ತದೆ. ಸ್ವತಃ ಬೇಂದ್ರೆಯವರು ತಮ್ಮ ಗೆಳೆಯರೊಂದಿಗೆ ಫುಟ್ ಬಾಲ್ ಆಟವನ್ನು ಆಡುತ್ತಿದ್ದರು ಮತ್ತು ಆಟದಲ್ಲಿ ಅವರು ಪ್ರವೀಣರಾಗಿದ್ದರು ಎಂಬ ವಿಷಯ ಅವರ ಬದುಕಿನಿಂದ ತಿಳಿಯಬರುತ್ತದೆ. ಹಾಗಾಗಿ ನಾಟಕ ಗೋಲ್ ನಲ್ಲಿ ಮಂಡನೆಯಾಗಿರುವ ಗುರಿಗೂ ಈ ಮೇಲಿನ ವಿಚಾರಗಳಿಗೂ ಮತ್ತೊಂದು ಭಿನ್ನವಾದ ಅರ್ಥ ಒದಗಿಬರುತ್ತದೆ.

ಕರ್ನಾಟಕ ಕಾಲೇಜಿನ ಸ್ನೇಹ ಸಮ್ಮೇಳನಕ್ಕಾಗಿ ನಾಟಕವನ್ನು ಬರೆದುಕೊಡಲು ಬೇಂದ್ರೆಯವರ ಗೆಳೆಯರ ಬಳಗ ಒತ್ತಾಯಿಸುತ್ತದೆ. ಈ ಕಾರಣಕ್ಕಾಗಿ ಬೇಂದ್ರೆಯವರು ತಮ್ಮ ಗೆಳೆಯರೊಂದಿಗೆ ಮಾಡಿದ ಸಂವಾದದ ಫಲವಾಗಿ ಗೋಲ್ ನಾಟಕ ಹುಟ್ಟುತ್ತದೆ. ನಾಟಕ ಆರಂಭದಲ್ಲಿ ರಂಗನಾಯಕ ಹಾಡುತ್ತಿರುವಾಗ ತಿಮ್ಮ ಕೊಳಲು ನುಡಿಸುತ್ತಿರುತ್ತಾನೆ ತಕ್ಷಣ ರಂಗನಾಯಕ ಹಾಡನ್ನು ನಿಲ್ಲಿಸಿ ಪುಸ್ತಕ ಕೈಗೆತ್ತಿಕೊಳ್ಳುತ್ತಾನೆ. ತಿಮ್ಮ ಚಹ ಮಾಡಲು ಒಳಗಡೆ ಹೋಗುತ್ತಾನೆ. ಹೀಗೆ ಶುರುವಾಗುವ ನಾಟಕ ಓದುವ ರುಚಿ, ಹೊಸ ಶಿಕ್ಷಣ ಮಾದರಿಯ ಶಿಕ್ಷಣ ಸಂಸ್ಥೆಗಳು, ಆಹಾರ, ನಿದ್ರೆ, ಭಯ, ಮೈಥುನಗಳಲ್ಲಿ ಕಳೆದುಹೋಗುತ್ತಿರುವ ಯುವಕರು ಕುರಿತು ಸ್ಪಷ್ಟವಾಗಿ ಮಾತಾಡುತ್ತದೆ. ಕಡಿಮೆಯಾಗುತ್ತಿರುವ ಮಾನವೀಯತೆ ಮುಂತಾದ ತಾತ್ವಿಕ ಚರ್ಚೆಗಳೊಂದಿಗೆ ರಂಗನಾಯಕ ಮಾತುಗಳನ್ನು ನಾಟಕದಲ್ಲಿ ಆರಂಭಿಸುತ್ತಾನೆ. ಗುರಿ ಇಲ್ಲದಿದ್ದರೆ ಅದೊಂದು ಅಪರಾಧ ಎಂದು ಹೇಳುತ್ತಾನೆ. ತಿಮ್ಮ ಮತ್ತು ರಂಗನಾಯಕನ ಚರ್ಚೆಯ ಜೊತೆಗೆ ಗೋಖಲೆ, ಪಾಟೀಲ, ಕುಲಕರ್ಣಿ ಮುಂತಾದವರು ಸೇರಿಕೊಂಡು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾ ಹೋಗುತ್ತಾರೆ. ಇಡೀ ನಾಟಕದಲ್ಲಿ ಕಥೆ ಕಾಣುವುದೇ ಇಲ್ಲ ಪ್ರತಿ ಪಾತ್ರವೂ ಏನು ಮಾತನಾಡಬೇಕು ಎಂಬುದನ್ನು ನಾಟಕಕಾರರು ತೀರ್ಮಾನಿಸಿ ನಾಟಕ ಬರೆದಂತಿದೆ. ಕತೆ ಬೆಳೆಯುತ್ತ ನಾಟಕ ಬೆಳೆಯುವುದು ಗೋಲ್ ನಾಟಕದಲ್ಲಿ ಕಾಣದೆ ಪ್ರತಿ ಪಾತ್ರಗಳ ಅಭಿಪ್ರಾಯ ಮಂಡನೆಯಂತೆ, ಪುಟ್ಟ ಪುಟ್ಟ ಭಾಷಣಗಳಂತೆ ಕಾಣುತ್ತದೆ. ಗೋಖಲೆ ಇರಬಹುದು, ಕುಲಕರ್ಣಿ ಇರಬಹುದು, ಪಾಟೀಲರಿರಬಹುದು, ತಿಮ್ಮ, ಕಾಜೀ ಸಾಹೇಬ ಅಥವಾ ರಂಗ ನಾಯಕನ ನೆಲೆಯಲ್ಲಿ ಗೋಲ್ ಎಂದರೆ ಏನು? ಎಂಬ ಚರ್ಚೆ ಅವರವರ ಅನಿಸಿಕೆಯ ಪ್ರಕಾರ ನಾಟಕದಲ್ಲಿ ಅಡಕವಾಗಿದೆ.

ಎರಡನೆ ದೃಶ್ಯದಲ್ಲಿ ಇಸ್ಪೀಟ್ ಆಟ ಆಡುವ ದೃಶ್ಯದಲ್ಲಿ ರಂಗಕ್ರಿಯೆಗೆ ಕೊಂಚ ಅವಕಾಶಸಿಕ್ಕರೂ ಮತ್ತೆ ಪಾತ್ರಗಳು ಮಾತಿಗಿಳಿಯುತ್ತವೆ. ನಾಡು, ನುಡಿ, ಭೌಗೋಳಿಕತೆ, ನಗರ ಮತ್ತು ಗ್ರಾಮೀಣ ಪರಿಸರ, ಕಾವ್ಯಮೀಮಾಂಸೆಯ ಚರ್ಚೆಗಳು, ಧರ್ಮ, ಸಮಾಜ ಎಲ್ಲವನ್ನು ಕುರಿತು ನಾಟಕ ಮಾತನಾಡುತ್ತ ವ್ಯಕ್ತಿ ಕೇಂದ್ರದಲ್ಲಿ ನಿಲ್ಲುತ್ತದೆ. ರವೀಂದ್ರರು, ಅರವಿಂದರು, ವಿವೇಕಾನಂದರು, ಗಾಂಧೀ ಜಗದೀಶ್ ಚಂದ್ರರು, ತಿಲಕರ ಉದಾಹರಣೆಗಳ ಮೂಲಕ ಧರ್ಮ, ಸಾತ್ವಿಕತೆ, ಸೇವೆ, ಕವಿತ್ವ, ವಿಜ್ಞಾನ ಮತ್ತು ಋಷಿತ್ವವನ್ನು ಸಾಧಿಸಲು ಏನೆಲ್ಲ ಮಾಡಬೇಕು ಎಂಬುದನ್ನೇ ಗೋಲ್ ನಾಟಕದ ಪಾತ್ರಗಳು ಮಂಡಿಸುತ್ತವೆ. ವ್ಯಕ್ತಿ ಮತ್ತು ಸಮಾಜದ ಆದರ್ಶದ ಸಲುವಾಗಿ ರೂಪುಗೊಳ್ಳಬೇಕಾದ ತಾತ್ವಿಕತೆಯ ಅಗತ್ಯವನ್ನು ಗೋಲ್ ನಾಟಕ ತನ್ನ ಮೂಲ ಆಶಯವನ್ನಾಗಿಸಿಕೊಂಡಿದೆ.

ನಾಟಕದುದ್ದಕ್ಕೂ ಬಳಕೆಯಾಗಿರುವ ಇಂಗ್ಲಿಷ್ ಪದಗಳು ಮತ್ತು ಸಂಭಾಷಣೆಗಳು ನಾಟಕದ ವೇಗಕ್ಕೆ ಕಿರಿಕಿರಿಯನ್ನುಂಟು ಮಾಡುತ್ತದೆ. ಬೇಂದ್ರೆಯವರ ಶೈಕ್ಷಣಿಕ ಜೀವನದ ಹಂತದಲ್ಲಿ ಈ ನಾಟಕ ರಚನೆಯಾಗಿದ್ದು ಸಹಜವಾಗಿಯೇ ಇಂಗ್ಲಿಷ್ ಭಾಷೆಯ ಬಗೆಗೆ ಇದ್ದ ಮೋಹ ಕಾಣಿಸುತ್ತದೆ. ಒಟ್ಟು ಭಾರತವೇ ಹೊಸದೊಂದು ಓದುವ ಮತ್ತು ಬರೆಯುವ ಕ್ರಮಕ್ಕೆ ತೆರೆದುಕೊಳ್ಳುತ್ತಿದ್ದ ಸಂದರ್ಭವನ್ನು ಗಮನಿಸಿದರೆ ನಾಟಕದಲ್ಲಿ ಇಂಗ್ಲಿಷ್ ಭಾಷೆಯ ಬಳಕೆ ಸಹಜವೆನಿಸುತ್ತದೆ. ದೀರ್ಘ ಸಂಭಾಷಣೆಗಳು, ವಿಚಾರಗಳ ತಾರ್ಕಿಕ ಮಂಡನೆ ನಾಟಕದುದ್ದಕ್ಕೂ ಸಂವಾದ ರೂಪ ತಳೆಯುವುದರಿಂದ ಕಥನ ಕುತೂಹಲದಿಂದ ನಾಟಕ ದೂರ ಉಳಿಯುತ್ತದೆ.

ಈ ಸರಣಿಯ ಹಿಂದಿನ ಬರೆಹಗಳು:
ಭಾರತೀಯ ಕೌಟುಂಬಿಕ ವ್ಯವಸ್ಥೆ ಮತ್ತು ಹೊಸ ಸಂಸಾರ ನಾಟಕ ಸಮುಚ್ಚಯ
ಸಾಮಾಜಿಕ ವಿವೇಕ ಮತ್ತು ತಿರುಕರ ಪಿಡುಗು
ರೋಗ ಮತ್ತು ಅಧಿಕಾರ : ಬೇಂದ್ರೆಯವರ ಜಾತ್ರೆ ನಾಟಕ ಸಮಕಾಲೀನ ಅಸಂಗತ ಅಭಿವ್ಯಕ್ತಿ
ಬೇಂದ್ರೆ ನಾಟಕಗಳ ರಂಗ ಪ್ರವೇಶಕ್ಕೆ ಇದು ಸಕಾಲ

 

MORE FEATURES

ದ್ಯಾವಾ-ಪೃಥವಿ: ಸಂಕೀರ್ಣತೆಯ ಉಪಾಸನೆ

28-04-2024 ಬೆಂಗಳೂರು

'ನಾನೊಬ್ಬ ಸಂಕೀರ್ಣತೆಯ ಉಪಾಸಕ ಎನ್ನುವುದರ ಮೂಲಕ ಗೋಕಾಕರು ನವೋದಯದ ಸರಳತೆಯನ್ನು ಒಡೆಯುತ್ತಾರೆ. ಕಟ್ಟದಿರು ಶರಧಿಗೆ ...

ವಾರದ ಲೇಖಕ ವಿಶೇಷದಲ್ಲಿ ಕನ್ನಡದ ವ್ಯಂಗ್ಯಶೈಲಿಯ ಬರಹಗಾರ ‘ಬೀಚಿ’

28-04-2024 ಬೆಂಗಳೂರು

ಬುಕ್ ಬ್ರಹ್ಮದ ವಾರದ ಲೇಖಕ ಸರಣಿಯಲ್ಲಿ ಮೂಡಿಬಂದ ಕನ್ನಡದ ವ್ಯಂಗ್ಯಶೈಲಿಯ ಬರಹಗಾರ ಬೀಚಿ ಅವರ ಕುರಿತ ಒಂದು ನೀಳ ನೋಟ.. ...

ಕಥೆಯೊಳಗೊಂದು ಕಥೆ ಬರುವುದು ಭಾರತೀಯ ಕಾವ್ಯಗಳಲ್ಲಿ ಸಾಮಾನ್ಯ

28-04-2024 ಬೆಂಗಳೂರು

‘ಕನ್ನಡದಲ್ಲಿ ರಾಮಾಯಣ ಸಾಹಿತ್ಯ ಅಗಾಧವಾಗಿದೆ .ರಾಮನಂತೆ ಕೃಷ್ಣನೂ ಜನಪ್ರಿಯ ಜನಾರಾಧಿತ ವ್ಯಕ್ತಿಯೇ ಆಗಿದ್ದರೂ ಅವನ...