ಮಾಧ್ಯಮದಿಂದ ಮಾಧ್ಯಮಕ್ಕೆ - ತೆರೆ ಐದು

Date: 14-02-2021

Location: .


ಅಕ್ಷರದ ಕನ್ನಡೀಕರಣ ಅಕ್ಕರ. ಅದರಲ್ಲಿ ಅಕ್ಷರವೂ ಇದೆ. ಹಾಗೆಯೇ ಅಕ್ಕರೆ‌ ಕೂಡ. ಸದಭಿರುಚಿಯ ಕನ್ನಡ ಚಿತ್ರಗಳನ್ನು ನಿರ್ದೇಶಿಸಿ, ದೃಶ್ಯಮಾಧ್ಯಮದ ಮೂಲಕ ಕನ್ನಡಿಗರಲ್ಲಿ ಹೊಸ ಕಂಪನ ಸೃಷ್ಟಿಸಿದವರು ನಿರ್ದೇಶಕ ಪಿ. ಶೇಷಾದ್ರಿ. ಸತತವಾಗಿ ಏಳು ರಾಷ್ಟ್ರಪ್ರಶಸ್ತಿ ಪಡೆದ ಭಾರತದ ಏಕೈಕ ನಿರ್ದೇಶಕ ಎಂಬ ಹೆಗ್ಗಳಿಕೆ ಇವರದ್ದು. ಕತೆಯನ್ನು ದೃಶ್ಯಮಾಧ್ಯಮಕ್ಕೆ ಅವಳವಡಿಸುವಾಗಿನ ಅನುಭವ ಮತ್ತು ಈ ಬಗ್ಗೆ ಕತೆಗಾರರ ಹಲವು ಆಯಾಮಗಳ ಅಭಿಪ್ರಾಯವನ್ನು ಅವರು ತಮ್ಮ ‘ಅಕ್ಕರದ ತೆರೆ’ ಅಂಕಣದಲ್ಲಿ ಹಂಚಿಕೊಂಡಿದ್ದು ಇಲ್ಲಿದೆ.

‘ಕತೆಗಾರ ಧಾರಾವಾಹಿಯ ಮತ್ತೊಂದು ವಿಶೇಷವೆಂದರೆ ಕನ್ನಡಕ್ಕೆ ಜ್ಞಾನಪೀಠದ ಗೌರವ ತಂದುಕೊಟ್ಟ ಹೆಚ್ಚಿನ ಖ್ಯಾತನಾಮರ ಸಣ್ಣಕತೆಗಳನ್ನು ದೃಶ್ಯಮಾಧ್ಯಮಕ್ಕೆ ಅಳವಡಿಸಿದ್ದು, ಅದರಲ್ಲಿ ಮುಖ್ಯವಾಗಿ ದ.ರಾ.ಬೇಂದ್ರೆಯವರ ‘ನಾಸ್ತಿಕ, ಕುವೆಂಪುರವರ ‘ಮೀನಾಕ್ಷಿ ಮನೆ ಮೇಷ್ಟ್ರು, ಕೆ.ಶಿವರಾಮಕಾರಂತರ ‘ಹೋಳಿಗೆ, ವಿ.ಕೃ.ಗೋಕಾಕರ ‘ಇಜ್ಜೋಡು, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ‘ನಾಲ್ಕನೇ ಅಧ್ಯಾಯ, ಯು.ಆರ್.ಅನಂತಮೂರ್ತಿ ಅವರ ‘ಕಾರ್ತೀಕ ಕತೆಗಳನ್ನು ಚಿತ್ರೀಕರಿಸಲಾಯಿತು. ಇವು, ಅಂದರೆ ಇವಷ್ಟೇ ಅಲ್ಲ ಮೂಲಭೂತವಾಗಿ ಎಲ್ಲ ಕತೆಗಳೂ ರಚಿತವಾಗುವುದು ಕಥಾರೂಪದ ಅಭಿವ್ಯಕ್ತಿಗಳಾಗಿ. ಒಂದನ್ನು ಇನ್ನೊಂದು ಮಾಧ್ಯಮಕ್ಕೆ ಮರುಹೊಂದಿಸುವುದು ಅತ್ಯಂತ ಕ್ಲಿಷ್ಟವಾದ ಕೆಲಸ. ಈ ರೂಪಾಂತರದ ಪ್ರಕ್ರಿಯೆಯಲ್ಲಿ ಕೆಲವೊಂದಷ್ಟು ಬದಲಾವಣೆಗಳು ಅನಿವಾರ್ಯವಾಗಿರುತ್ತವೆ. ಮುಖ್ಯವಾಗಿ ನಾವು ವಹಿಸಬೇಕಾದ ಎಚ್ಚರ ಅದರ ಮೂಲ ಆಶಯಕ್ಕೆ ಲೋಪ ಬರದಿರುವಂತೆ ನೋಡಿಕೊಳ್ಳುವುದು.
ಇಲ್ಲೊಂದು ಪ್ರಶ್ನೆ ಏಳುತ್ತದೆ. ಯಾವುದೇ ಒಂದು ಕತೆಯಾಗಲಿ, ಕಾದಂಬರಿಯಾಗಲಿ, ಕಾವ್ಯವಾಗಲೀ ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ರೂಪಾಂತರವಾಗಬೇಕೆ? ಕೆಲವರು ನಮ್ಮ ಕತೆಗಳನ್ನು ಸಿನಿಮಾ ಮಾಡಿ, ಸೀರಿಯಲ್ ಮಾಡಿ ಎಂದು ಕೇಳುವವರೂ ಇದ್ದಾರೆ ಇನ್ನು ಕೆಲವರು ನಮ್ಮ ಕತೆಗಳು ಅಕ್ಷರ ಮಾಧ್ಯಮದಲ್ಲಿಯೇ ಇರಲಿ, ಮತ್ಯಾವ ರೂಪವೂ ಬೇಡ ಎನ್ನುವವರೂ ಇದ್ದಾರೆ. ಈ ಅಭಿಪ್ರಾಯಗಳನ್ನು ಗೌರವಿಸುತ್ತಲೇ ಕತೆಗಾರ ಧಾರಾವಾಹಿಯ ಸಂದರ್ಭದ ಒಂದು ಪ್ರಸಂಗವನ್ನು ಇಲ್ಲಿ ಉದಾಹರಿಸಬೇಕು ಅನ್ನಿಸುತ್ತದೆ.
ಎಸ್.ದಿವಾಕರ್ ಯಾರಿಗೆ ಗೊತ್ತಿಲ್ಲ? ಕನ್ನಡದಲ್ಲಿ ಸಣ್ಣಕತೆ, ಕಾವ್ಯ, ಪ್ರಬಂಧ, ವಿಮರ್ಶೆ, ಭಾಷಾಂತರ, ಅಂಕಣ ಬರಹಗಳಲ್ಲಿ ದೊಡ್ಡ ಹೆಸರು. ಅವರ ಓದುಬಾಕುತನ, ನೆನಪಿನ ಶಕ್ತಿ ಕಂಡರೆ ಅಚ್ಚರಿಯಾಗುತ್ತದೆ. ಕತೆಗಾರ ಧಾರಾವಾಹಿಯ ನಿರ್ಮಾಣದ ಸಂದರ್ಭದಲ್ಲಿ ಅವರದ್ದೊಂದು ಸಣ್ಣಕತೆಯನ್ನು ಚಿತ್ರೀಕರಿಸಲು ಎಲ್.ಎಸ್.ಎಸ್., ಗಿರಡ್ಡಿ, ವಿಜಯಾ ಮತ್ತು ಎಂ.ಎಚ್.ಕೃಷ್ಣಯ್ಯ ನಮಗೆ ಸೂಚಿಸಿದರು. ಅದರಂತೆ ಅವರನ್ನು ಸಂಪರ್ಕಿಸಿದೆವು. ಆಗ ಅವರು ಎನ್.ಆರ್.ಕಾಲೋನಿಯ ಮನೆಯಲ್ಲಿದ್ದರು. ನಮ್ಮ ಯೋಜನೆಯನ್ನು ತಿಳಿಸಿ, ಹೀಗೆ, ನಿಮ್ಮ ಸಣ್ಣಕತೆಯೊಂದನ್ನು ದೃಶ್ಯಕ್ಕೆ ಅಳವಡಿಸಲು ನಿಮ್ಮ ಅನುಮತಿ ಬೇಕಾಗಿದೆ ಎಂದು ನಾನು ಮತ್ತು ನಾಗೇಂದ್ರ ಶಾ ಹೋಗಿ ಕೇಳಿದೆವು. ಅದೇಕೋ ಅವರು, ನಾನು ಯೋಚಿಸಿ ತಿಳಿಸುತ್ತೇನೆ. ನೀವೇನು ಮಾಡಬೇಕೆಂದಿದ್ದೀರಿ ಅದನ್ನು ಬರೆದು ಕಳಿಸಿ ಎಂದರು.
ಕೆಲವು ದಿನ ಬಿಟ್ಟು ಮತ್ತೆ ಸಂಪರ್ಕಿಸಿದಾಗ, ನನ್ನ ಕತೆಯನ್ನು ಬೇರೆ ಮಾಧ್ಯಮಕ್ಕೆ ಅಳವಡಿಸುವುದಕ್ಕೆ ನನ್ನ ಒಪ್ಪಿಗೆಯಿಲ್ಲ ಎಂದುಬಿಟ್ಟರು. ಅನಿವಾರ್ಯವಾಗಿ ನಾವು ಬೇರೆ ಕತೆಗಾರರತ್ತ ಹೊರಳಿದೆವು. ಇತ್ತೀಚೆಗೆ ಪತ್ರಿಕೆಯೊಂದರ ಅಂಕಣದಲ್ಲಿ ‘ಸಾಹಿತ್ಯ ಮತ್ತು ದೃಶ್ಯ ಮಾಧ್ಯಮ ಹೆಸರಿನಲ್ಲಿ ಅವರು ಇದನ್ನು ಪ್ರಸ್ತಾಪಿಸುತ್ತಾ ಸಾಹಿತ್ಯ ಮತ್ತು ದೃಶ್ಯಮಾಧ್ಯಮದ ವಿಚಾರವನ್ನು ವಿಸ್ತರಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಬರಹವನ್ನು ಇಲ್ಲಿ ಯಥಾವತ್ ಉದ್ಧರಿಸುತ್ತಿದ್ದೇನೆ
‘...ಅವರ ಮಾತಿನಲ್ಲಿ ಉಪಕಾರ ಮಾಡುವ ಇರಾದೆಯಿತ್ತು. ನನ್ನ ಕೃತಿಯನ್ನು ಚಿತ್ರೀಕರಿಸಿ, ನೋಡಿ ನಮ್ಮ ಸಾಹಿತ್ಯದಲ್ಲಿ ಇಂಥ ಅದ್ಭುತ ಕತೆಯಿದೆ ಎಂದು ಜಗಜ್ಜಾಹೀರುಗೊಳಿಸುವುದೇ? ಅದರಿಂದ ಅಪಾರ ಖ್ಯಾತಿ ತಂದುಕೊಡುವುದೆ? ನಮ್ಮ ಕನ್ನಡದ ಸಂದರ್ಭವನ್ನು ಬಿಡಿ, ಇಡೀ ಜಗತ್ತಿನ ಸಂದರ್ಭದಲ್ಲೇ ಇಂಥ ಏಕಮಾತ್ರ ಉದ್ದೇಶದಿಂದ ಯಾರಾದರೂ ದೃಶ್ಯಮಾಧ್ಯಮದ ನಿರ್ದೇಶಕರಾಗ ಬಯಸುತ್ತಾರೆಂದರೆ ನಾನಂತೂ ಅದನ್ನು ನಂಬುವ ಪೈಕಿಯಲ್ಲ...
ಆದರೂ ತಮ್ಮ ಒಂದು ಕೃತಿಯಾದರೂ ಸಿನಿಮಾ ಆಗಬೇಕೆಂದು ಆಸೆಪಡುವ ಲೇಖಕರಿಗೆ ನಮ್ಮಲ್ಲಿ ಬರವಿಲ್ಲ... ಮೆಕ್ಸಿಕೋದ ಪ್ರಸಿದ್ಧ ಲೇಖಕ ಕಾರ್ಲೋಸ್ ಫುಯೆಂಟೆಸ್ ತನ್ನ ‘ಡಯಾನಾ, ದಿ ಗಾಡೆಸ್ ಹೂ ಹಂಟ್ಸ್ ಅಲೋನ್’ ಎಂಬ ಕಾದಂಬರಿಯಲ್ಲಿ ಒಂದೆಡೆ ಹೀಗೆ ಹೇಳುತ್ತಾನೆ: ಒಬ್ಬ ವ್ಯಕ್ತಿಯ ನಿಜವಾದ ಭಾವಚಿತ್ರ ಸಿನಿಮಾಗಳಲ್ಲಿ ಆತ ಅಥವಾ ಆಕೆ ಯಾವುದೇ ವೇಷ ಹಾಕಿದರೂ ಮರೆಯಾಗುವುದಿಲ್ಲ. ಹೇಗೆಂದರೆ ಗ್ರೇಟಾ ಗಾರ್ಬೊ, ರಾಣಿ ಕ್ರಿಸ್ತೀನಾಳ ಹಾಗೆ ನಟಿಸಿದರೂ ಗ್ರೇಟಾ ಗಾರ್ಬೊ ಆಗಿಯೇ ಉಳಿದಿರುತ್ತಾಳೆ. ಮಾರ್ಲೀನ್ ಡೀಟ್ರಿಚ್ ರಷ್ಯದ ಕ್ಯಾಥೆರಿನ್‌ನಂತೆ ಸೋಗು ಹಾಕುತ್ತಿದ್ದರೂ ಆಕೆ ಮಾರ್ಲೀನ್ ಡೀಟ್ರಿಚ್ಚೇ. ಇನ್ನು ಸೈನಿಕ ಸನ್ಯಾಸಿನಿ? ಅವಳು ಮರಿಯಾ ಫೆಲಿಕ್ಸ್ ಮಾತ್ರ. ಸಾಹಿತ್ಯವಾದರೂ ಕಣ್ಣಿಗೆ ಕಟ್ಟುವಂಥ ಇಂಥ ಚಿತ್ರಕ ಕಲ್ಪನೆಯಿಂದ ನಮ್ಮನ್ನು ಬಿಡುಗಡೆಗೊಳಿಸಬಲ್ಲುದು...
...ಸಿನಿಮಾ ಎನ್ನುವುದು ಹೇಳಿಕೇಳಿ ವಾಸ್ತವಿಕತೆಯ ಮಾಧ್ಯಮ. ಸಾಹಿತ್ಯವಾದರೋ ವಾಸ್ತವವನ್ನೋ ಒಳಗೊಂಡು ನಮ್ಮ ಮನೋಲೋಕದ ಮೂಲೆ ಮೊಡಕುಗಳನ್ನು ತಡಕಾಡಬಲ್ಲ, ನಮ್ಮ ಇಂದ್ರಿಯಗಳಲ್ಲಿ ಒಂದೊಂದನ್ನೂ ಸ್ಪರ್ಶಿಸಬಲ್ಲ ಮಾಂತ್ರಿಕ ಸೃಷ್ಟಿ...
ಹಾಲಿವುಡ್ ಮಂದಿ ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್ ಕಾದಂಬರಿಯನ್ನು ಸಿನಿಮಾ ಮಾಡಬಯಸಿದಾಗ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಒಂದು ಸಂದರ್ಶನದಲ್ಲಿ ಹೇಳಿದಂತೆ, ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್ ಕಾದಂಬರಿಯನ್ನು ಓದುವ ಸಾವಿರಾರು ಮಂದಿ ಅದರ ಮುಖ್ಯ ಪಾತ್ರವಾದ ಉರ್ಸುಲಾಳನ್ನು ಸಾವಿರಾರು ರೀತಿ ಕಲ್ಪಿಸಿಕೊಳ್ಳಬಲ್ಲರು. ಆದರೆ ಸಿನಿಮಾದಲ್ಲಿ ಅದೇ ಉರ್ಸುಲಾ ಸೋಫಿಯಾ ಲಾರೆನ್ನೊ, ಮಾರ್ಲಿನ್ ಡೀಟ್ರಿಚ್ಚೋ ಮಾತ್ರ ಆಗಿಬಿಟ್ಟಿರುತ್ತಾಳೆ. ಪಾತ್ರವೊಂದು ಪಡೆದುಕೊಳ್ಳಬಹುದಾದ ಆಯಾಮಕ್ಕೆ ಸಂಬಂಧಿಸಿದಂತೆ ಈ ಮಾತು ನಿಜವಿರಬಹುದು. ಆದರೆ ಸಿನಿಮಾ ಇಷ್ಟೇ ಅಲ್ಲವಲ್ಲ. ಬರ್ಗ್‌ಮನ್, ಸತ್ಯಜಿತ್ ರಾಯ್, ಕುರಾಸೋವಾ ಮೊದಲಾದ ಶ್ರೇಷ್ಠ ನಿರ್ದೇಶಕರ ಚಿತ್ರಗಳು ಸಾಹಿತ್ಯ ಕೃತಿಗಳನ್ನು ಆಧರಿಸಿದ್ದೂ, ಸಾಹಿತ್ಯ ಕೃತಿಗಳ ಅನುವಾದಗಾಳಾಗದೆ ಸಾಹಿತ್ಯ ಕೃತಿಗಳಂತೆಯೇ ಅನನ್ಯ ಸೃಷ್ಟಿಗಳಾಗಿವೆಯಲ್ಲವೆ? ಇಷ್ಟೇ, ಒಳ್ಳೆಯ ಕತೆಯೊಂದು ತನಗೆ ತಾನೇ ಅನನ್ಯ, ಆ ಕತೆಯನ್ನು ಆಧರಿಸಿದ ಚಲನಚಿತ್ರವೂ ಅನನ್ಯವಾಗಿರಬಲ್ಲುದು.
...ನಮ್ಮ ಸಾಹಿತ್ಯ ಲೋಕದಲ್ಲಿ ಫ್ರಾಂಝ್ ಕಾಫ್ಕಾನ ‘ಮೆಟಮಾರ್ಫೊಸಿಸ್ ನಮ್ಮವರೇ ಆದ ಎಂ.ಎಸ್.ಕೆ.ಪ್ರಭುವಿನ ಕತೆಗಳು. ಅಷ್ಟೇಕೆ ನಮ್ಮ ವಚನಗಳು, ಬೇಂದ್ರೆ, ಅಡಿಗರ ಕಾವ್ಯ, ಅವುಗಳನ್ನು ಮುಕ್ಕಾಗದಂತೆ ದೃಶ್ಯ ಮಾಧ್ಯಮಕ್ಕೆ ಅಳವಡಿಸಲಾದೀತೆ?... ಒಟ್ಟಿನಲ್ಲಿ ಲೇಖಕನಾದವನು ಚೆನ್ನಾಗಿ ಬರೆದರೆ ಅದು ಭಾಷೆಯಲ್ಲಿ ರೆಕಾರ್ಡ್ ಆಗಿಹೋಗುತ್ತದೆ. ಅದಕ್ಕೆ ದೃಶ್ಯಮಾಧ್ಯಮದವರ ಉಪಕಾರ ಏನೇನೂ ಬೇಡ
(ಸಶೇಷ)

ಈ ಅಂಕಣದ ಹಿಂದಿನ ಬರಹಗಳು

ವೆತೆಗಳ ಕಳೆಯುವ ಕತೆಗಾರ! - ತೆರೆ ಮೂರು

ವೆತೆಗಳ ಕಳೆಯುವ ಕತೆಗಾರ! - ತೆರೆ ಎರಡು

ಜಗತ್ತಿನಲ್ಲಿ ಮೊಟ್ಟ ಮೊದಲು ಕಥೆ ಹೇಗೆ ಹುಟ್ಟಿರಬಹುದು?

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...