ನೆನ್ನೆ ಮನ್ನೆ-1

Date: 21-12-2022

Location: ಬೆಂಗಳೂರು


''ಅಲ್ಲೊಂದು ಕಣಿವೆಯಿತ್ತು. ಆ ಕಣಿವೆಯಲ್ಲೊಂದು ಮುಳ್ಳುಬೇಲದ ಮರ. ಅದರಲ್ಲಿ ಕೊಂಬೆಗಳು ನಾಲ್ಕು ನಾಲ್ಕು ಮಾರುದ್ದ ಹಾವಿನ ಥರ ಬೆಳೆದಿದ್ದವು. ಆ ಮರದಲ್ಲಿ ಒಂದು ತಿರಿಗಟ್ಟಿದ ಹಕ್ಕಿಗೂಡು ಕಂಡಿತು. ಮೊದಲಿಗೆ ಭಾರೀ ಜೇನಿನ ಹಾಗೆ ಕಂಡ ಅದು ಆಮೇಲೆ ಹಕ್ಕಿ ಗೂಡೆಂದು ತಿಳಿಯಿತು'' ಎನ್ನುತ್ತಾರೆ ಲೇಖಕ ರಾಮಲಿಂಗಪ್ಪ ಟಿ ಬೇಗೂರು. ಅವರು ತಮ್ಮ ‘ನೀರು ನೆರಳು' ಅಂಕಣದಲ್ಲಿ ‘ನೆನ್ನೆ ಮನ್ನೆ-1’ ಕುರಿತು ಬರೆದಿದ್ದಾರೆ.

ಆ ದಿನ ನನ್ನ ಬದುಕಿನಲ್ಲಿ ಒಂದು ಮರೆಯದ ದಿನ. ಆವತ್ತು ಸೋಮವಾರ. ಆರೂಡಲು ರಜ. ಸೋಮವಾರದ ದಿನ ಯಾರೂ ಹೊಲ ಉಳಲು ಆರೂಡುವುದಿಲ್ಲ. ಆದರೆ ನಮ್ಮ ಹಲಸಿನ ಮರ ಕಾಯುವ ಕಾಯಕಕ್ಕೆ ಮಾತ್ರ ಎಂದಿಗೂ ರಜವಿರಲಿಲ್ಲ. ನಮ್ಮ ದಿಣ್ಣೆ ಹೊಲದ ಮಧ್ಯದಲ್ಲಿ ಒಂಟಿ ಕಾಲಿನ ರಾಕ್ಷಸನಂತೆ ಬೃಹದಾಕಾರವಾಗಿ ಹಲಸಿನ ಮರವೊಂದಿತ್ತು. ಪ್ರತಿ ವರ್ಷ ಆ ಮರ ಸಾವಿರದಿಂದ ಸಾವಿರದ ಐನೂರು ಹಲಸಿನ ಕಾಯಿಗಳನ್ನು ಬಿಡುತ್ತಿತ್ತು. ಅದಕ್ಕೆ ಇನ್ನಿಲ್ಲದಂತೆ ಕೋತಿ ಕಾಟ ಇತ್ತು. ಜೊತೆಗೆ ಅಗಾಗ ಕಳ್ಳರ ಕಾಟ ಕೂಡ. ಕೋತಿಗಳನ್ನು ಕಾಯಲು ನಾನು ಮತ್ತು ನನ್ನ ತಮ್ಮ ಮುನಿಯ ಇಬ್ಬರೂ ದಿನಾ ಮರದ ಹತ್ತಿರವೇ ಹೋಗಿ ಕೂರಬೇಕಾಗುತ್ತಿತ್ತು. ಹಲಸಿನ ಕಾಯಿಯ ಕಾಲ ಬಂದಾಗ ನಮಗೆ ಕೈ ಕಾಲು ಕಟ್ಟಿದ ಅನುಭವ. ದಿನಪೂರ್ತಿ ಯಾವ ಕುಣಿತ ಮೆರೆತವೂ ಇಲ್ಲದೆ ಮರ ಕಾಯ್ತಾ ಕೂರಬೇಕಾಗುತ್ತಿತ್ತು. ಆಗೆಲ್ಲ ನಮಗೆ ಬಹಳ ದುಕ್ಖ ಆಗೋದು.

ನಮಗೆ ಒಂದೇ ಕಡೆ ದಿನವಿಡೀ ಕೂತಿರುವುದೆಂದರೆ ರವರವ ನರಕ ಶಿಕ್ಷೆ. ಆದರೂ ನಾವು ಅಲ್ಲೆ ಸಮೀಪದಲ್ಲೆ ಇದ್ದ ಹೊಂಗೆ ಗುಂಪಿನಲ್ಲಿ, ಅಂದಾನಿ ಹಳ್ಳದಲ್ಲಿ ಮರಹತ್ತಿ ಇಳಿಯೋದು; ಹೊಂಗೆ ನೆರಳಿನಲ್ಲಿ ಉಪ್ಪುಪ್ಪು ಕಡ್ಡಿ ಆಡೋದು; ಬೇಲ-ಸರ್ವೆ ಮರಗಳಲ್ಲಿ ಜೀರಜಿಂಬೆ ಹಿಡಿಯೋದು ಇತ್ಯಾದಿ ಕೆಲಸಗಳಲ್ಲಿ ಬ್ಯುಸಿ ಆಗ್ತಾ ಇದ್ದೆವು. ಕಾರೆ ಹಣ್ಣು ಕಂಗಾಣಿ ಹಣ್ಣು, ತೂಬ್ರೆ ಹಣ್ಣು, ಹತ್ತಿ ಹಣ್ಣು, ನೇರಿಲೆ, ಎಲಚಿ ಹೀಗೆ ಸೀಸನ್ನಿಗೆ ಬರುವ ಕಾಡು ಹಣ್ಣುಗಳಿಗಾಗಿ ಅಲೆಯೋದು ಹೀಗೆಲ್ಲ ಮಾಡ್ತಾ ಇದ್ದೆವು. ನಾವು ಎಲ್ಲಿಗೆ ಅಲೆಯಲು ಹೋದರೂ ಹಲಸಿನ ಮರದ ಕಡೆ ಒಂದು ಕಣ್ಣು ಸದಾ ಇರೋದು. ಕೆಲವೊಮ್ಮೆ ನಮ್ಮ ಅಪ್ಪ ನಾವು ಇದ್ದೀವೋ ಇಲ್ಲವೋ ಅಂತ ಚೆಕ್ಕು ಮಾಡೋಕೆ ಬರೋನು. ಆಗ ನಾವೇನಾದರೂ ಅಲ್ಲಿ ಇರದಿದ್ದರೆ ಚಮಡ ಸುಲಿದು ಬಿಡೋನು. ಅದಕ್ಕಾಗಿಯೆ ನಾವು ಏನು ಅಲೆದರೂ ಹಲಸಿನ ಮರದ ಕಣ್ಣಳತೆಯಲ್ಲೆ ಅಲೆಯಬೇಕಾಗಿತ್ತು.

ಅಪ್ಪನು ಬರುವ ದಾರಿಗಳೆಲ್ಲ ನಮಗೆ ಗೊತ್ತಿತ್ತು. ಆದ್ದರಿಂದ ಅವನು ಬರುವುದನ್ನು ದೂರದಿಂದಲೆ ಗಮನಿಸಿ ಅಲಕ್ಕಂತ ಹಲಸಿನ ಮರದ ಹತ್ತಿರ ಬಂದು ಬಿಡುತ್ತಿದ್ದೆವು. ಒಂದು ವೇಳೆ ಏನಾದರೂ ನಾವು ಅಲ್ಲಿಂದಿಲ್ಲಿಂದ ಬರುವುದನ್ನು ಅವನು ಕಂಡುಬಿಟ್ಟರೆ ಇಲ್ಲೆ ಮಾರಿದೊಂಗರಕ್ಕೆ ನೀರು ಕುಡಿಯೋಕೆ ಹೋಗಿದ್ದೆವು ಅಂತಲೊ, ಅಂದಾನಿ ಹಳ್ಳಕ್ಕೆ ಎರಡಕ್ಕೆ ಹೋಗಿದ್ದೆವು ಅಂತಲೋ ಸಟ್ಟನೆ ಬೂಸಿ ಬಿಡುತ್ತಿದ್ದೆವು. ಹಾಗೂ ಒಂದು ವೇಳೆ ನಾವು ಬೇರೆ ದಿಕ್ಕಿನಿಂದ ಬರುವುದನ್ನು ಕಂಡು ಅವನು ಅನುಮಾನಿಸಿದರೆ ಏನೋ ಮಹಾ ಕೋತಿ ದಂಡನ್ನು ಅಟ್ಟುವವರಂತೆ ಕೂಗಾಡುತ್ತ ಅಬ್ಬರ ಮಾಡುತ್ತ ಕಲ್ಲುಗಳನ್ನು ಎಸೆದುಕೊಂಡು ಹಿಂದಕ್ಕೆ ಹಿಂದಕ್ಕೆ ನೋಡುತ್ತ ಬರುತ್ತಿದ್ದೆವು. ಏನೋ ನಮ್ಮ ಮಕ್ಕಳು ಅಪ್ಪಂಥವರು ಕೋತಿಗಳನ್ನು ತಿಟ್ಟಿಗೆ ತರುಬಲು ಹೋಗಿದ್ದರು ಎಂದು ತಿಳಿದುಕೊಳ್ಳಲಿ ಅಂತ.

ನಮ್ಮಪ್ಪ ಏನೂ ಸುಮಾರಲ್ಲ. ಅವನೂ ಐನಾತಿ ಗಿರಾಕಿನೆ. ಪಾಕಡಾ ಬಡ್ಡಿಮಗ. ಎಷ್ಟೇ ಆಗಲಿ ನಮ್ಮಪ್ಪ ತಾನೆ. ಅವನು ಅಂದರೆ ನಮಗೆ ಗೌರವಕ್ಕಿಂತ ಭಯ ಜಾಸ್ತಿ. ‘ಲೇಯ್ ಮರದಾಗ್ ಒಂದ್ ಕಾಯ್ ಎಪ್ಪೇಸ್ ಆದ್ರೂ ಸರಿ ನಿಮ್ಮಮ್ಮನ್ ತಿಂದ್ ಕುವ್ವತ್ತೆಲ್ಲ ಕಕ್ಕಿಸಿಬಿಡ್ತೀನಿ’ ಅಂತ ಅಬ್ಬರಿಸಿದರೆ ಸಾಕು ನಾವು ಪತರುಗುಟ್ಟಿ ಹೋಗುತ್ತಿದ್ದೆವು. ಅವನು ನೆಲದಿಂದ ಹಾರಿ ರೆಕ್ಕೆಗೆ ಕೈ ಎಟಕಿಸಿ ಜೋತು ಅಲ್ಲಿಂದಲೆ ಮರಕ್ಕೆ ಹತ್ತಿ ಸುಯ್ ಅಂತ ಕೊಂಬೆಯಿಂದ ಕೊಂಬೆಗೆ ಹಾರುವುದನ್ನು ನಾವೂ ಕಲಿಯಲು ಹೋಗಿ ಎಷ್ಟೋ ಸಾರಿ ಬಿದ್ದು ಮೈಕೈ ಪರಂಗಿಹಣ್ಣು ಮಾಡಿಕೊಂಡದ್ದೂ ಉಂಟು. ಅವನೊಂದು ಸಾರಿ ಒದ್ದರೆ ಪುಟ್‌ಬಾಲಿನ ಥರ ನಾವು ಉಳ್ಳುಳ್ಳಾಡಿಕೊಂಡು ಕೆರೆದಡ ಕಾಣ್ತಿದ್ದದ್ದು ನೆನದರೆ ಈಗಲೂ ಮೈ ಜುಮ್ಮೆನ್ನುತ್ತದೆ. ನಮ್ಮ ದಿಣ್ಣೆ ಹೊಲಕ್ಕೆ ಅನತಿ ದೂರದಲ್ಲೆ ಎನ್.ಎಚ್.4 ಇದ್ದದ್ದರಿಂದ ರಸ್ತೆ ಪಕ್ಕದ ಮಾವಿನ ಮರ, ನೇರಲೆ ಮರಗಳಿಂದ ಹಣ್ಣು ಉದುರಿಸುವುದರಲ್ಲಿ ನಾವು ಅರ್ಜುಣರಾಗಿದ್ದೆವು. ಕಲ್ಲು ಎಸೆದೆವು ಎಂದರೆ ಕಾಯಿ ಬೀಳುವುದು ಗ್ಯಾರಂಟಿ. ಗುತಿ ಗೊಂಚಲು ಕಂಡು ಎಸೆದರೆ ಕಾಯಿಗಳ ಮಳೆ ಆಗೋದು. ಎಷ್ಟೋ ಸಾರಿ ಕಾಯಿಗಳನ್ನು ಆಯಲು ಕೆಳಗೆ ಹೋದಾಗ ತಡಕಿ ನೋಡಿಕೊಳ್ಳುವಂತೆ ತಲೆ ಮೇಲೆ ಕಾಯಿಗಳು ಬಿದ್ದದ್ದೂ ಉಂಟು.

ಹೀಗೇ ಒಂದು ದಿನ ಹಲಸಿನ ಮರ ಕಾಯಲು ಹೋದಾಗ ನೆಲವನ್ನೆ ಅಳಗುಣಿ ಮನೆ ಮಾಡಿಕೊಂಡು ಸಣ್ಣ ಕಲ್ಲುಗಳನ್ನೆ ಅಳಗುಣಿ ಕಾಯಿ ಮಾಡಿಕೊಂಡು ಆಡುತ್ತಿದ್ದೆವು. ಆಟ ಬೇಜಾರಾಗಿ ಮರ ತಿರುಗಲು ಹೊರಟೆವು. ಮೊದಲು ನಮ್ಮ ಸವಾರಿ ಹೋದದ್ದು ಅಂದಾನಿ ಹಳ್ಳಕ್ಕೆ. ಅಂದಾನಿ ಹಳ್ಳ ನಮ್ಮ ಹೊಲದಿಂದ ಒಂದು ಮೈಲಿ ದೂರದಲ್ಲಿದ್ದ ಹೊಂಗೆ ಹಳ್ಳ. ಊರಿನ ಕೆರೆಗೆ ಸುತ್ತಲ ಹೊಲಮಾಳದಿಂದ ನೀರು ಹರಿದೂ ಹರಿದೂ ಆ ಪಾಸಲೆಯೆಲ್ಲ ಹಳ್ಳವಾಗಿತ್ತು. ಆ ಜಮೀನು ಪೂರ್ತಿ ಪಕ್ಕದ ಮಾಳನಾಗತಿ ಹಳ್ಳಿಯ ಅಂದಾನಿ ಎಂಬವನಿಗೆ ಸೇರಿತ್ತು. ಅವನೋ ವಡೆಬೋಂಡ ತೆವಲಿಗ ಆಗಿದ್ದರಿಂದ ಅದನ್ನು ಎಂದೂ ಅವನು ಆಬಾದು ಮಾಡಿರಲಿಲ್ಲ. ಮೊದಮೊದಲು ಅಂದಾನಿ ಹೊಲ ಆಗಿದ್ದದ್ದು, ದಿನಕ್ರಮೇಣ ಅಂದಾನಿ ಹಳ್ಳ ಆಯಿತು. ಆ ಅಂದಾನಿ ಹಳ್ಳದಿಂದ ಮೇಲಕ್ಕೆ ಏರಿ ಮಾರಿದೊಂಗರ ಇಳಿದು ನಾನು ಮತ್ತು ಮುನಿಯ ಇಬ್ಬರೂ ಮರಗಳನ್ನು ತಿರಗತೊಡಗಿದೆವು. ಎಲ್ಲಾದರೂ ಜೇನು ಸಿಗಬಹುದಾ, ಹಕ್ಕಿಮೊಟ್ಟೆ ಸಿಗಬಹುದಾ ಎಂದು ಬಹಳ ಹೊತ್ತು ಅಲೆದೆವು. ಮಾರಿದೊಂಗರ ಪೂರಾ ಒಂಥರಾ ಹಗಲೇ ಗವ್ವೆನ್ನುವ ಕತ್ತಲ ಕಾಡು. ಬಸುರಿಯರು, ತೊನ್ನರೆಲ್ಲ ಸತ್ತಾಗ ತಂದು ಎಸೆಯುವ ಜಾಗ ಅದು. ಅದಕ್ಕೆ ತೊನ್ನಿದೊಂಗರ ಅಂತನೂ ಕರೀತಿದ್ದೆವು.

ಅಲ್ಲೊಂದು ಕಣಿವೆಯಿತ್ತು. ಆ ಕಣಿವೆಯಲ್ಲೊಂದು ಮುಳ್ಳುಬೇಲದ ಮರ. ಅದರಲ್ಲಿ ಕೊಂಬೆಗಳು ನಾಲ್ಕು ನಾಲ್ಕು ಮಾರುದ್ದ ಹಾವಿನ ಥರ ಬೆಳೆದಿದ್ದವು. ಆ ಮರದಲ್ಲಿ ಒಂದು ತಿರಿಗಟ್ಟಿದ ಹಕ್ಕಿಗೂಡು ಕಂಡಿತು. ಮೊದಲಿಗೆ ಭಾರೀ ಜೇನಿನ ಹಾಗೆ ಕಂಡ ಅದು ಆಮೇಲೆ ಹಕ್ಕಿ ಗೂಡೆಂದು ತಿಳಿಯಿತು. ಆಮೇಲೆ ಅದೇ ಕೊಂಬೆಯ ಮೇಲೆ ತುದಿಯಲ್ಲಿ ಒಂದು ಚಿಟ್‌ಜೇನೂ ಇದೆ! ವಾಹ್ ನಮ್ಮ ಆನಂದಕ್ಕೆ ಪಾರವೇ ಇಲ್ಲ. ಇಬ್ಬರೂ ಏಯ್ ನಾನು ಮೊದಲು ನೋಡಿದ್ದು ನಾನು ಮೊದಲು ನೋಡಿದ್ದು ಎಂದು ಕೂಗಾಡಿದೆವು. ಕೊನೆಗೆ ಬಗೆ ಹರಿಯದೆ, ಇಬ್ಬರೂ ರಾಜಿ ಮಾಡಿಕೊಂಡೆವು. ಆ ಚಿಟ್ಟ ಜೇನನ್ನು ಕೀಳಲೇಬೇಕೆಂದು ನನ್ನ ತಮ್ಮ ಮರ ಹತ್ತತೊಡಗಿದ. ‘ಲೇ ಉಸಾರಲೇ ಒಂಟಿ ಕೊಂಬೆ ಆಸರ ಇಲ್ಲ’ ಎಂದು ನಾನು ಹೇಳುವ ಹೊತ್ತಿಗೆ ಅವನು ಕವಡಿನವರೆಗೆ ಜಿಗಿದು ಹತ್ತಿ ಆಗಿತ್ತು.

ನಾನು ‘ಆ ಗೂಡಿನಲ್ಲಿ ಮೊದಲು ಮೊಟ್ಟೆ ಇದ್ರೆ ಇಳುಸು. ಆಮೇಲೆ ಜೇನು ಕೀಳುವಿಯಂತೆ’ ಎಂದೆ. ಅವನು ಹಾಗೆ ಆಗಲೆಂದು ಅರ್ಧ ಕೊಂಬೆಯಲ್ಲಿ ಇದ್ದವನು ಗೂಡಿನ ಕಡೆ ಚಲಿಸಿದ. ‘ಬೇಗ ಹೋಗಿ ನೀನು ಉಗುನಿ ಹಂಬು ಕಿತ್ತುಕೊಂಡು ಬಾ. ಮೊಟ್ಟೆ ಇದಾವೆ! ಬಟ್ಟೆ ಬಿಚ್ಚಿ ಇಳುಸ್ತೀನಿ’ ಎಂದ. ನಾನು ಉಗುನಿ ಹಂಬು ಕಿತ್ತುಕೊಂಡು ಬರುವ ಹೊತ್ತಿಗೆ ಅವನು ಗೂಡಿನ ಹತ್ತಿರ ಅಡರುಗಾಲು ಹಾಕಿಕೊಂಡು ಕೂತಿದ್ದ. ಉಗುನಿ ಹಂಬಿನ ಒಂದು ತುದಿಗೆ ಕಲ್ಲು ಕಟ್ಟಿ ಸಿಂಬೆ ಸುತ್ತಿ ನಾನು ಕೊಂಬೆಗೆ ಎಸೆದೆ. ಹಂಬು ಒಂದು ಕೊಂಬೆಗೆ ಸಿಕ್ಕಿಕೊಂಡಿತು. ‘ಒಂದು ಹಂಬು ಎಸೆಯೋಕೆ ಬರಲ್ಲ. ಸರಿಯಾಗಿ ಪಾಲು ಮಾತ್ರ ಕೇಳೋಕೆ ರ‍್ತೀಯ’ ಅವನು ರೇಗಿದ. ಬಿಚ್ಚಿದ್ದ ಶರಟನ್ನು ಅಲ್ಲೆ ಗೂಡಿನ ಹತ್ತಿರ ನೇತಾಕಿ ಇತ್ತ ಕಡೆ ಹಂಬು ಹಿಡಿದುಕೊಳ್ಳಲು ಬಂದ.

ಅವನು ಈ ಕಡೆ ಹೆಜ್ಜೆ ಇಟ್ಟನೋ ಇಲ್ಲವೊ ಪಕ್ಕದ ಕೊಂಬೆಯಲ್ಲಿ ಉದ್ದನೆಯ ಹಾವೊಂದು ಬುಸ್ಸಂತ ಸದ್ದು ಮಾಡಿತು. ಮೊಟ್ಟೆ ತಿನ್ನಲೆಂದೆ ಅದು ಆಗ ತಾನೆ ಮರ ಹತ್ತಿತ್ತೆಂದು ಕಾಣುತ್ತದೆ. ಕೆಳಗಿನಿಂದ ನಾನೂ ಕೊಂಬೆಯಿಂದ ಅವನೂ ‘ಲೇಯ್ ಲೇಯ್ ಹಾವೂ’ ಎಂದು ಒಟ್ಟಿಗೇ ಕಿರಿಚಿದೆವು. ನಾನು ಅವನಿಗೆ ಬೇಗ ಇಳಿದುಬಿಡೋ ಎಂದು ಹೇಳುವ ಮೊದಲೇ ಅವನು ಮೇಲಿನ ಕೊಂಬೆಯಿಂದ ಕೆಳಗಿನ ಕೊಂಬೆಗೆ ಜಿಗಿದುಬಿಟ್ಟಿದ್ದ. ಅವನು ಜಿಗಿದನೋ ಬಿದ್ದನೋ ಗೊತ್ತಿಲ್ಲ. ಇಳಿಯಲೂ ಆಗದೆ ಬೀಳಲೂ ಆಗದೆ ಕೊಂಬೆಗೆ ನೆತಾಡುತ್ತಿದ್ದ ಮಾತ್ರ. ಇವನ ಜಗ್ಗುವಿಕೆಗೆ ಒಂದೇ ಕ್ಷಣದಲ್ಲಿ ಕೊಂಬೆ ಜಲ್ಲೆಂದ ಕಾರಣಕ್ಕೊ ಅಥವಾ ತಾನೂ ಭಯಗೊಂಡ ಕಾರಣಕ್ಕೊ ಹಾವು ನನ್ನ ತಮ್ಮನನ್ನೂ ತಾಕಿಕೊಂಡು ಕೆಳಕ್ಕೆ ಧೊಪ್ಪನೆ ಬಿತ್ತು. ಅವನೂ ಕಿರುಚಿದ, ನಾನೂ ಕಿರುಚಿದೆ. ನನ್ನ ಎದುರು ಒಂದು ಒತ್ತೋಳು ದೂರಕ್ಕೆ ಹಾವು ಬಿತ್ತು. ನಾನು ಸತ್ತೆನೋ ಕೆಟ್ಟೆನೋ ಎಂದು ಹಲಸಿನ ಮರದ ಕಡೆಗೆ ಓಡಿದೆ. ಹಲಸಿನ ಮರದವರೆಗೆ ತಿರುಗಿ ನೋಡದೆ ಓಡಿದ್ದೆ. ಮತ್ತೆ ಹಿಂದಿರುಗಿ ಹೋಗಲು ಭಯವಾಗಿತ್ತು. ಅವನು ಏನಾದನೋ ಎತ್ತಗೋ ಎಂದು ಗಾಭರಿಯೂ ಆಗಿತ್ತು. ಬಹಳಷ್ಟು ಸಾರಿ ಮುನಿಯಾ ಮುನಿಯಾ ಎಂದು ಕೂಗಿ ಕರೆದರೂ ಅವನಿಂದ ಉತ್ತರ ಬರಲಿಲ್ಲ. ನನಗೆ ಅಳು ಬಂತು. ಅಳುತ್ತಾ ಕೂತೆ. ಆಗ ನಮಗೆ ಅಮ್ಮಮ್ಮಾ ಅಂದರೆ ಒಂದು ಹತ್ತು ಹನ್ನೊಂದು ವರ್ಷ ವಯಸ್ಸಾಗಿತ್ತೇನೊ.

ಸುಮಾರು ಒಂದು ಗಂಟೆಯ ನಂತರ ಅವನು ಕಳಚಿದ ಶರಟಿನಲ್ಲಿ ಮೊಟ್ಟೆಗಳನ್ನು ಹಿಡಿದು ಬಂದ. ಅವನ ಚಡ್ಡಿ ನೆನೆದಿತ್ತು. ಹೆಗಲ ಮೇಲೆ ಉದ್ದನೆಯ ಹಸಿ ರೆಕ್ಕೆಯೊಂದು ಇತ್ತು. ಜೇನು ಕೀಳಲು ಆಗಿರಲಿಲ್ಲವೆಂದು ಕಾಣುತ್ತದೆ. ಅವನ ಕೆಳಗಿನ ತುಟಿ ಊದಿಕೊಂಡಿತ್ತು. ಎರಡು ಜೇನು ಹುಳಗಳು ಅಲ್ಲಿ ಕಚ್ಚಿದ್ದವು. ನಾನು ಮುರಿದ ಮುಳ್ಳು ಹಿರಿದು ತೆಗೆದೆ. ಊತ ಕಡಿಮೆ ಆಗಲಿಲ್ಲ. ಉದ್ದ ರೆಕ್ಕೆಯ ತುದಿಯಲ್ಲಿ ಹಾವು ಸುತ್ತಿ ತಂದಿದ್ದ. ಚೆನ್ನಾಗಿ ಚಚ್ಚಿದ್ದ. ಅದರ ತಲೆ ಪೂರಾ ಜಜ್ಜಿಬಜ್ಜಿಯಾಗಿತ್ತು. ನಾನು ಮೊದಲು ನೋಡಲಿಲ್ಲ. ತಂದವನೆ ನನ್ನ ಮೇಲೆ ಎಸೆದ. ತಕ್ಷಣಕ್ಕೆ ಹೆದರಿದ ನಾನು ಆಮೇಲೆ ಸತ್ತ ಹಾವೆಂದು ತಿಳಿದು ಸಮಾಧಾನ ಆದೆ. ಅವನನ್ನು ಒಂಟಿ ಬಿಟ್ಟು ಬಂದದ್ದರಿಂದ ಅವನು ಏನೂ ಮಾತಾಡಲಿಲ್ಲ. ಸುಮ್ಮನೆ ಎರಡು ಬೆರಳು ಡೊಂಕ ಮಡಿಚಿ ಟೂ ಬಿಟ್ಟವನಂತೆ ಸನ್ನೆ ಮಾಡಿದ. ನಾನು ಸುಮ್ಮನೆ ಮುಖ ಊದಿಸಿಕೊಂಡೆ.

ಶರಟಿನಲ್ಲಿ ನಾಲ್ಕು ಮೊಟ್ಟೆಗಳಿದ್ದವು. ಸೌದೆ ಪಿಳ್ಳೆ ತಂದು ಬೆಂಕಿ ಮಾಡಿ, ಹಸಿ ಸಗಣಿ ತಂದು ನಾಲ್ಕು ಮೊಟ್ಟೆಯನ್ನೂ ಉಂಡೆ ಕಟ್ಟಿ ಸುಡತೊಡಗಿದ. ಸುತ್ತಲ ಸಗಣಿ ಬೆರಣಿಯಾಗಿ, ಬೆಂಬೂದಿಯಾಗಿ ಹಣ್ಣುಕೆಂಡ ಆಗುವವರೆಗೆ ಸುಟ್ಟ. ನನ್ನ ಕಣ್ಣೆದುರಿಗೇ ಮುಖ ಊದಿಸಿಕೊಂಡು ನನ್ನನ್ನು ಹತ್ತಿರ ಸುಳಿಯಲೂ ಬಿಡದೆ ಬೆಂದು ಹಬೆಯಾಡುವ ಮೊಟ್ಟೆಗಳನ್ನು ಬಿಡಿಸಿ ಒಂದೊಂದೇ ಎರಡು ಮೊಟ್ಟೆಗಳನ್ನು ತಿಂದ. ನಾನು ಆಸೆಗಣ್ಣಿನಿಂದ ನೋಡುತ್ತಿದ್ದೆ. ಅವನನ್ನು ಅಲ್ಲೆ ಬಿಟ್ಟು ಓಡಿಬಂದದ್ದಕ್ಕೆ ಚೆನ್ನಾಗಿ ಸೇಡು ತೀರಿಸಿಕೊಳ್ಳುತ್ತಿದ್ದ. ಆಮೇಲೆ ನಿಧಾನಕ್ಕೆ ಮೂರನೆಯದನ್ನೂ ತಿಂದುಬಿಟ್ಟ. ‘ಹೊಟ್ಟೆಮುನಿಯ ನಿನ್ ಹೊಟ್ಟೆ ಕಡಿಯಾ ಎಂದು’ ನಾನು ಸಣ್ಣಗೆ ವಾದ್ಯ ಮಾಡತೊಡಗಿದೆ. ಆಮೇಲೆ ಸ್ವಲ್ಪ ಹೊತ್ತಿನ ನಂತರ ನನ್ನ ಕಡೆ ಕಣ್ಣೆತ್ತಿ ನೋಡಿ ಸಣ್ಣಗೆ ನಕ್ಕ. ನಾನು ಅವಮಾನವಾಗಿ ವಾದ್ಯ ಸ್ವಲ್ಪ ಜೋರು ಮಾಡಿದೆ. ಆಮೇಲೆ ಹತ್ತಿರ ಬಂದು ಸೇ ಸಿಗ್ನಲ್ ಮಾಡಿದ. ನಾನು ಸ್ವಲ್ಪ ಸಮಾಧಾನ ಆದೆ. ಉಳಿದಿದ್ದ ಒಂದು ಮೊಟ್ಟೆ ಕೊಟ್ಟ. ನಾನು ಸ್ವಾಭಿಮಾನಕ್ಕೆ ಬೇಡ ಅಂದೆ. ಅವನು ಸ್ವಲ್ಪ ಕೈ ಹಿಂದಕ್ಕೆ ತೆಗೆದುಕೊಂಡ. ಇನ್ನೆಲ್ಲಿ ಅದನ್ನೂ ತಿಂದು ಬಿಡುತ್ತಾನೋ ಎಂದು ನಾನು ಯ್ಯಾಯ್ಮ್ಂ ಎಂದು ಗಾಯಗೊಂಡ ಬೆಕ್ಕಿನಂತೆ ಸದ್ದು ಮಾಡುತ್ತ ಕಿತ್ತುಕೊಂಡೆ. ಗಬಗಬಕ್ಕನೆ ತಿಂದೆ.

ಸ್ವಲ್ಪ ಹೊತ್ತಾದ ಮೇಲೆ ಇಬ್ಬರೂ ಮೊದಲಿನಂತೆ ರಾಜಿಯಾದೆವು. ಅವನು ಮಾತಾಡುತ್ತಿದ್ದರೆ ಊದಿಕೊಂಡ ತುಟಿ ಗಲಗಲ ಅಲ್ಲಾಡುವುದನ್ನು ನಾನು ವೆವ್ವೆವೆವ್ವೆ ಎಂದು ಅಣಕಿಸಿದೆ. ಅವನೂ ಅಣಕಿಸಿದ. ಅಣಕಿಸಿದಾಗ ಇನ್ನಷ್ಟು ಕಿರುಬನಂತೆ ಕಂಡ. ಸಂಜೆ ಮನೆಗೆ ಹೋಗುವಾಗ ಅಪ್ಪನಿಗೆ ಏನೂ ಹೇಳಕೂಡದೆಂದು ಇಬ್ಬರೂ ಒಪ್ಪಂದಕ್ಕೆ ಬಂದೆವು. ರಾತ್ರಿ ಊಟಕ್ಕೆ ಕೂತಾಗ ಸೀಮೆಣ್ಣೆ ಬುಟ್ಟಿ ಬೆಳಕಲ್ಲಿ ಅಪ್ಪ ಅದೇನೆಂದು ಗದರಿ ಕೇಳಿದ. ಮೊದಲೇ ಅಪ್ಪ ಒಂದು ದರಾಮ್ ಏರಿಸಿ ಬಂದಿದ್ದ. ಮುನಿಯ ನನ್ನದೇ ಎಲ್ಲ ತಪ್ಪೆನ್ನುವಂತೆ ಒಂದಕ್ಕೆ ಎರಡು ಮಾಡಿ ಅಳು ಬೆರೆಸಿ ಹೇಳಿದ. ‘ಪಾಪ ಆ ಮಗೀಗೆ ತುತ್ತು ಬಾಯಿಗೆ ಇಡೋಕೆ ಆಗಲ್ಲವಲ್ಲ, ನಿನ್ನಮ್ಮನ್ನಾಕ್ಯಾಯ ಏನ್ ನಿನ್ನಾಟ ಜಾಸ್ತಿ ಆಗೋಯ್ತು’ ಅಂತೇಳಿ ಅಪ್ಪ ನನ್ನ ಬುರುಡೆಗೆ ಚೆನ್ನಾಗಿ ಬಿಸಿನೀರು ಕಾಯಿಸಿದ. ಚಿಕ್ಕವನು ದೂರು ಹೇಳಿದಾಗ ಒದೆ ಬೀಳುವುದು ದೊಡ್ಡವನಿಗೆ ತಾನೆ? ಸರಿಯಾಗಿ ಮಾಂಜಾ ಬಿದ್ದವು. ಮಾರನೆ ಬೆಳಗ್ಗೆ ಏಳೋಕೆ ಆಗಲಿಲ್ಲ್ಲ. ಅಮ್ಮ ಒದ್ದು ಎಬ್ಬಿಸಿದಳು. ಬೆಳಗ್ಗೆ ಬೆಳಗ್ಗೆ ಅಮ್ಮನಿಂದಲು ಮಂಗಳಾರ್ಚನೆ ಚೆನ್ನಾಗಿ ಆದುವು. ‘ನೆನ್ನೇನೆ ಮೈಗೆ ಎಣ್ಣೆ ಹಚ್ಚಿಕೊಂಡಿದ್ದರೆ ಚೆನ್ನಾಗಿತ್ತು ನನ್ನ ನಲೆಸೆಲೆ’ ಅಂತ ಅಳುತ್ತ ಅಳುತ್ತ ನನ್ನ ಬೆನ್ನಿಗೆ ಗುದ್ದುತ್ತ ಮೈಗೆ ಎಣ್ಣೆ ತಿಕ್ಕಿ ಬಿಸಿ ನೀರು ಹಾಕಿ ಉಪ್ಪಿನ ಕಾವುಟ ಕೊಟ್ಟಳು. ಮುನಿಯನ ಮುಸುಡಿಗು ಮನೆ ವೈದ್ಯ ಆಯಿತು.

ಈಗ ಅದನ್ನೆಲ್ಲ ನೆನಸಿಕೊಂಡರೆ ದುಕ್ಖವಾಗುತ್ತದೆ. ದಿಣ್ಣೆ ಹೊಲವನ್ನು ನಾವೀಗ ಮಾರಿಕೊಂಡಿದ್ದೇವೆ. ಅಂದಾನಿ ಹಳ್ಳ, ಮಾರಿ ದೊಂಗರ, ಹೊಂಗೆ ಸಾಲು, ಹಲಸಿನ ಮರ ಈಗ ಯಾವುವೂ ಅಲ್ಲಿ ಒಗ್ಗರಣೆಗೂ ಇಲ್ಲ. ಅಲ್ಲೆಲ್ಲ ಈಗ ಫ್ಯಾಕ್ಟರಿಗಳು ಎದ್ದಿವೆ. ಆವಾಗ ಸಿದ್ಮಾವ, ಅಣ್ಣಯ್ಯ, ದೊಡ್ಡಿ, ಚಿಕ್ಕಿ, ಗಾನ್ಮಣ್ಣ, ಪಾರಕ್ಕ, ಅಳೆಕುಂಟ್ರಿ, ಮುನೆಂಟಣ್ಣ ಎಲ್ಲರೂ ಗೊತ್ತಿದ್ರು. ಈವಾಗ ಯಾರೂ ಯಾರಿಗೂ ಗೊತ್ತಿಲ್ಲ! ಆ ಫ್ಯಾಕ್ಟ್ರಿಗಳು ಬಿಡುವ ಕೊಚ್ಚೆ ನಮ್ಮೂರಿನ ಕೆರೆಗೆ ಹರಿದು ಬರುತ್ತಿದೆ. ಊರಿನಂತೆ ಕೆರೆ ಕೂಡ ಆಗುತ್ತಿದೆ. ದಿನಾ ಸಂಜೆ ಆದರೆ ಗೋಧೂಳಿ ಏಳೋ ಬದಲು ಹೆಗಲಿಗೆ ಬ್ಯಾಗು ನೇತಾಕಿಕೊಂಡು ಸಾಲುಗಟ್ಟಿ ಗರ‍್ಮೆಂಟಿಗೊ ಕೆಮಿಕಲ್ ಫ್ಯಾಕ್ಟಿçಗೊ ಹೋಗಿ ಬರುವ ಹೆಣ್ಣು ಮಕ್ಕಳ ಸಾಲು ಕಾಣಿಸ್ತವೆ...

ಈ ಅಂಕಣದ ಹಿಂದಿನ ಬರೆಹಗಳು:
ನಿನಗೇ ಬರೆದ ಪತ್ರ
ಆಯ್ದಕ್ಕಿ ಕಾಯಕ ಎಂದರೇನು?
ಐದು ಕೃಷಿ ಸಂಬಂಧಿ ಪುಸ್ತಕಗಳು
ಅಮೃತ ಮಹೋತ್ಸವದ ಹೊತ್ತಿಗೆ ಸಂವಿಧಾನದ ಪೀಠಿಕೆಯನ್ನಾದರೂ ಸಾಧಿಸಿದೆವಾ?
ವ್ಯಕ್ತಿ ಪೂಜೆ, ಸ್ಥಾನ ಪೂಜೆ

ವೇಶಾಂತರದ ಸಿಟ್ಟು ದೇಶಾಂತರದ ದ್ವೇಶ
ಕನಸಲ್ಲಿ ಬರುವ ಛೂಮಂತ್ರಯ್ಯ
ವಸ್ತ್ರ ಸಂಹಿತೆಯ ಸುತ್ತ
‘ಉರಿವ ಉದಕ’: ಕನ್ನಡದ ಕಥನ ಜಗತ್ತಿನ ಅನುಭವ ಲೋಕವನ್ನು ವಿಸ್ತರಿಸುವಂತಹ ಕತೆಗಳು
ಲೇಖನ ಚಿಹ್ನೆಗಳು
ಆತಂಕ, ಸಂಭ್ರಮಗಳು ಒಟ್ಟಿಗೇ ಕುದಿಯುತ್ತವೆ
ಪದವಿ ಪೂರ್ವ ಕನ್ನಡ ಪಠ್ಯ ಮತ್ತು ಕಲಿಕೆಯ ಅನುವಿನ ಉಪಕ್ರಮಗಳು:
ದೇಶ ಕಟ್ಟುವ ಕನಸು: ‘ಹಿಂದ್ ಸ್ವರಾಜ್’
ಬಂಡಾಯ ಕತೆಗಳ ನೋಟ ನಿಲುವು
ವ್ಯಕ್ತಿಹೆಸರುಗಳ ಸುತ್ತ ಮುತ್ತ
ಪ್ರೀತಿಯೆ ಲೋಕನೀತಿ ಆದ ಬಳಗಪ್ರಜ್ಞೆಯ ಪದ್ಯಗಳು....!
ಪೋಸ್ಟ್ ಬಾಕ್ಸ್ ನಂ.9
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -2
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -1
ಹರಿಭಕ್ತಿ ಸಾರ ಎಂಬ ಗಿಳಿಪಾಠ
ಕಲ್ಲು ದೈವ, ಮೊರ ದೈವ?
ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು: ಕೆಲ ಟಿಪ್ಪಣಿಗಳು
ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...