ಒಳತಾರಸಿಯ ಒಂಟಿ ಚೌಕಗಳು The Queen's Gambit

Date: 01-01-2022

Location: ಬೆಂಗಳೂರು


‘ಅಳಿವು-ಉಳಿವುಗಳ ಹೋರಾಟದಲ್ಲಿ ಸುಖ-ದುಃಖಗಳದ್ದು ಸಮಪಾಲು. ಸಂಕಟಕ್ಕೂ ಸಂತೋಷಕ್ಕೂ ವ್ಯತ್ಯಾಸವೇ ಗೊತ್ತಾಗದಂತಹ ಮನಃಸ್ಥಿತಿಯ ಕಲ್ಪನೆಯೇ ಕಳವಳವನ್ನು ಉಂಟುಮಾಡುವಂಥದ್ದು’ ಎನ್ನುತ್ತಾರೆ ಲೇಖಕಿ ಅಂಜನಾ ಹೆಗಡೆ ಅವರು ತಮ್ಮ ‘ಬೆಳ್ಳಕ್ಕಿ ಸಾಲು’ ಅಂಕಣದಲ್ಲಿ The Queen's Gambit ಎಂಬ ವೆಬ್ ಸರಣಿಯ ಕುರಿತು ವಿಶ್ಲೇಷಿಸಿದ್ದಾರೆ.

ಬದುಕೆನ್ನುವ ಆಟದ ನಡೆಗಳೆಲ್ಲವೂ ಹೀಗೆಯೇ ಎಂದು ಮೊದಲೇ ನಿರ್ಧರಿಸಲ್ಪಟ್ಟಿದ್ದರೆ ಹೇಗಿರುತ್ತಿತ್ತು; ಯಾವ ಭಯ-ಆತಂಕಗಳೂ ಇಲ್ಲದೇ ನಿರಾಯಾಸದ ಚಲನೆ ನಮ್ಮದಾಗುತ್ತಿತ್ತೇ ಅಥವಾ ಎತ್ತಿಡುವ ಪ್ರತಿ ಹೆಜ್ಜೆಯಲ್ಲಿಯೂ ಪ್ರಜ್ಞಾಪೂರ್ವಕ ಕಳವಳವೊಂದು ಜೊತೆಯಾಗಿ ನೆಮ್ಮದಿಯನ್ನು ಹಾಳುಮಾಡುತ್ತಿತ್ತೇ! ಸೋಲು-ಗೆಲುವು, ಸುಖ-ದುಃಖಗಳೆಲ್ಲವೂ ಇಂತಿಂಥ ಸಮಯದಲ್ಲಿ ಹೀಗೆಯೇ ಘಟಿಸಲಿವೆ ಎನ್ನುವುದು ತಿಳಿದುಹೋದ ಮರುಗಳಿಗೆಯೇ ಎಲ್ಲವೂ ನೀರಸವಾಗಿಬಿಡುತ್ತಿತ್ತು. ನಾಳೆ ಎನ್ನುವುದರಲ್ಲಿ ಹೊಸತನ ಕಾಣಿಸದೇ, ಕನಸುಗಳೆಡೆಗೆ ಕುತೂಹಲವಿಲ್ಲದೇ, ಆಗುಹೋಗುಗಳೆಲ್ಲ ಇವತ್ತೇ ನಿರ್ಧರಿಸಲ್ಪಟ್ಟು ಬದುಕಿನ ಕ್ರಮವೇ ಬದಲಾಗಿಹೋಗುತ್ತಿತ್ತು. ಹಾಗೊಂದು ಪೂರ್ವನಿರ್ಧರಿತ ಚಲನೆ ಸಾಧ್ಯವಿಲ್ಲದೇ ಹೋದ ಕಾರಣಕ್ಕಾಗಿಯೇ ಬದುಕಿನೆಡೆಗೊಂದು, ಪ್ರತಿ ನಾಳೆಗಳೆಡೆಗೊಂದು ಅಚ್ಚರಿಯೂ, ಕೌತುಕವೂ ಖಾಯಂ ಆಗಿರುವಂಥದ್ದು. ಅಂತಹ ಅನೂಹ್ಯ ಸ್ಥಾನಪಲ್ಲಟಗಳ, ಅಚಲಿತ ಹೋರಾಟಗಳ ವಿಶಿಷ್ಟವಾದ ಕಥಾಸರಣಿಯೇ The Queen's Gambit.

ಹೆಸರೇ ಸೂಚಿಸುವಂತೆ ಇದೊಂದು ಚೆಸ್ ಕ್ರೀಡೆಯನ್ನು ಆಧರಿಸಿದ ಕಲ್ಪಿತ ಕಥೆಯ ಸರಣಿ. ಸೃಜನಾತ್ಮಕತೆ ಹಾಗೂ ವಿಲಕ್ಷಣತೆಗಳನ್ನು, ಮೇಧಾವಿತನ ಮತ್ತು ಹುಚ್ಚುತನಗಳನ್ನು ಒಟ್ಟೊಟ್ಟಿಗೆ ಎದುರುಬದುರಾಗಿಸುವ ಇಲ್ಲಿನ ಪಾತ್ರಗಳು ಸರಿ-ತಪ್ಪುಗಳ ಲೆಕ್ಕಾಚಾರವನ್ನು ಮೀರಿದ ಚಲನೆಯನ್ನು ತಮ್ಮದಾಗಿಸಿಕೊಳ್ಳುವ ಚದುರಂಗದ ಕಾಯಿಗಳಂತೆ ಅಸ್ಪಷ್ಟವೂ, ಅಷ್ಟೇ ಗಮನಾರ್ಹವೂ! ಈ ಸರಣಿಯ ಚದುರಂಗದ ಮಣೆಯ ಮೇಲೆ ತೆರೆದುಕೊಳ್ಳುವ ಪ್ರಪಂಚ ಒಮ್ಮೆ ಹೊಸದಾಗಿಯೂ, ಮರುಕ್ಷಣವೇ ಕಪ್ಪು-ಬಿಳುಪು ಕಾಯಿಗಳ ನಿಷ್ಕರುಣ ದಾಳಿಯಂತೆಯೂ ಭಾಸವಾಗಿ ಅಚ್ಚರಿಯನ್ನೂ, ತಲ್ಲಣವನ್ನೂ ಏಕಕಾಲಕ್ಕೆ ಉಂಟುಮಾಡುತ್ತದೆ. ಶುರುವಿನಲ್ಲಿ ಸಾಲಾಗಿ ನಿಂತು ಒಬ್ಬರಿಗೊಬ್ಬರು ಜೊತೆಯಾಗುವ ರಾಜ ರಾಣಿ ಪದಾತಿಗಳೆಲ್ಲ ಕ್ರಮೇಣ ಚಲ್ಲಾಪಿಲ್ಲಿಯಾಗಿ, ಒಬ್ಬೊಬ್ಬರಾಗಿ ಕಣ್ಮರೆಯಾಗುತ್ತ, ಇದ್ದೂ ಇಲ್ಲದಂತಾಗಿಬಿಡುವ ಸಂಕಟಕರ ಸನ್ನಿವೇಶಗಳು ಅವ್ಯಕ್ತ ನೋವಿನಂತೆ ನಮ್ಮನ್ನು ಆವರಿಸಿಕೊಳ್ಳುತ್ತವೆ. ಸೋಲುವವನಿಗೆ ತನ್ನ ಕೊನೆಯ ನಡೆಯವರೆಗೂ ತಾನು ಸೋಲುತ್ತಿರುವುದರ ಅರಿವಿಲ್ಲ; ಗೆಲುವಿನ ಆನಂದವನ್ನು ತನ್ನದಾಗಿಸಿಕೊಳ್ಳುವವನಿಗೂ ತನ್ನವರನ್ನು ಕಳೆದುಕೊಳ್ಳುವ ನೋವು ತಪ್ಪಿದ್ದಲ್ಲ. ಎದುರಿಗಿರುವವನ ದೌರ್ಬಲ್ಯದ ಪ್ರಯೋಜನ ಪಡೆದುಕೊಳ್ಳುವುದೋ ಅಥವಾ ತನ್ನ ಸಾಮರ್ಥ್ಯವನ್ನು ನೆಚ್ಚಿಕೊಂಡು ಆಟ ಮುಂದುವರಿಸುವುದೋ ಎನ್ನುವ ಹೊಯ್ದಾಟಕ್ಕೆ ಅಂತ್ಯವಿಲ್ಲ.

ತಂದೆಯಿಂದ ದೂರವಾಗಿದ್ದ, ತಾಯಿಯನ್ನೂ ಕಳೆದುಕೊಂಡ ಒಂಬತ್ತು ವರ್ಷ ವಯಸ್ಸಿನ ಹುಡುಗಿಯೊಬ್ಬಳು ಅನಾಥಾಶ್ರಮ ಸೇರುತ್ತಾಳೆ. ಅಲ್ಲಿ ಅಚಾನಕ್ಕಾಗಿ ಕಣ್ಣಿಗೆ ಬೀಳುವ ಚೆಸ್ ಆಡುತ್ತಿರುವ ಸುಪರ್ದುದಾರನೇ ಅವಳ ಮೊದಲ ಚೆಸ್ ಗುರುವಾಗುತ್ತಾನೆ. ಮಲಗುವ ಹಜಾರದ ಒಳತಾರಸಿಯೇ ಚದುರಂಗದ ಮಣೆಯಾಗಿ ಪರಿವರ್ತನೆಗೊಂಡು ಆನೆ, ಕುದುರೆ, ಒಂಟೆಗಳೆಲ್ಲ ಚಾವಣಿಯ ಒಳಮೈಮೇಲೆ ತಲೆಕೆಳಗಾಗಿ ಓಡಾಡಲಾರಂಭಿಸುವ ಸತ್ಯವೂ ಅಲ್ಲದ, ಮಿಥ್ಯವೆನ್ನಲಾಗದ ಭ್ರಮಾಧೀನವೆನ್ನುವಂತಹ ಪರಿಸ್ಥಿತಿಯಲ್ಲಿ ಅವಳ ಬದುಕಿನ ಪಯಣ ಆರಂಭವಾಗುತ್ತದೆ. ಕೈಹಿಡಿದು ಮುನ್ನಡೆಸುವವರಿಲ್ಲದ ಆ ಪಯಣದಲ್ಲಿ ರಾಜನನ್ನು ರಕ್ಷಿಸಿಕೊಳ್ಳಬೇಕೆನ್ನುವ ಹಂಬಲವೇ ಅವಳ ಬದುಕಿನ ಗುರಿಯಾಗಿ, ಕನಸಾಗಿ ದಾರಿ ತೋರಿಸತೊಡಗುತ್ತದೆ. ಅವಳನ್ನು ದತ್ತು ತೆಗೆದುಕೊಳ್ಳುವ ದಂಪತಿಗಳ ನಡುವಿನ ಮನಸ್ತಾಪ, ಹದಿಹರೆಯದ ವಯೋಸಹಜ ಆಸೆ-ಕನಸುಗಳಿಂದ ಭಿನ್ನವಾದ ಅವಳ ಬಯಕೆ, ವಿಭಿನ್ನವಾದ ಅವಳ ಆಯ್ಕೆ ತಂದೊಡ್ಡುವ ಸವಾಲುಗಳು, ತನ್ನದೇ ಆದ ವಿಲಕ್ಷಣವೆನ್ನಬಹುದಾದ ವೈಖರಿಯಲ್ಲಿ ಸವಾಲುಗಳನ್ನೆದುರಿಸುವ ಅವಳ ಧೈರ್ಯ ಹೀಗೆ ಎಲ್ಲವೂ ಅವಳ ಸುತ್ತಮುತ್ತಲೇ ಸುತ್ತುತ್ತವೆ. ಇಲ್ಲಿ ಅವಳೆಂದರೆ ಕೇವಲ ಹದಿಹರೆಯದ ಹುಡುಗಿಯಲ್ಲ; ಅರಿವಿದ್ದೋ ಇಲ್ಲದೆಯೋ ಚೌಕಗಳೊಳಗೆ ಬಂಧಿಯಾದ ಚದುರಂಗದ ಕಾಯಿ! ತಂತ್ರಗಾರಿಕೆ, ಆಕ್ರಮಣ, ಹೋರಾಟಗಳ ಹೊರತಾಗಿ ಬೇರೆ ಲಕ್ಷ್ಯವಿಲ್ಲ.

ಬಾಲ್ಯದಲ್ಲಿಯೇ ಮಾತ್ರೆಗಳ ವ್ಯಸನಿಯಾಗುವ, ಹದಿಹರೆಯದಲ್ಲಿ ಮದ್ಯಸಾರದ ಚಟಕ್ಕೆ ಬೀಳುವ ಅವಳಿಗೆ ಚದುರಂಗವನ್ನುಳಿದು ಬೇರೆ ಬದುಕು ಗೊತ್ತಿಲ್ಲ. "ಪ್ರತಿಯೊಂದು ಆಯ್ಕೆಗೂ ಅದರದೇ ಆದ ಪರಿಣಾಮವಿದೆ. ನಿಮ್ಮ ಪಾಲಕರ ಬದುಕಿನ ಆಯ್ಕೆಗಳ ಪರಿಣಾಮವಾಗಿ ನೀವು ಇಲ್ಲಿದ್ದೀರಿ. ಹಾಗಾಗಿಯೇ ನೀವು ಬೇರೆಯದೇ ಆದ ಆಯ್ಕೆಗಳನ್ನು ನಿಮ್ಮದಾಗಿಸಿಕೊಳ್ಳುವ ಅಗತ್ಯವಿದೆ" ಎನ್ನುವ ಮಾತುಗಳನ್ನು ಅನಾಥಾಶ್ರಮದಲ್ಲಿ ಕೇಳಿಸಿಕೊಂಡ ಅವಳು ಆಯ್ದುಕೊಳ್ಳುವುದು ಚದುರಂಗವನ್ನು. ಪ್ರಪಂಚದ ನೆಮ್ಮದಿ-ಸೌಂದರ್ಯಗಳೆಲ್ಲವೂ ಚದುರಂಗದಲ್ಲಿಯೇ ಇವೆ ಎಂದು ಅಂದುಕೊಂಡವಳು ಅವಳು. ಅರವತ್ನಾಲ್ಕು ಚೌಕಗಳಲ್ಲಿಯೇ ಅವಳ ಪ್ರಪಂಚವಿದೆ. ಆ ಚೌಕಗಳನ್ನೇ ಅವಳ ಬದುಕೆಂದುಕೊಂಡರೆ, ಅದರ ಸಂಪೂರ್ಣ ನಿಯಂತ್ರಣ ಅವಳ ಕೈಯಲ್ಲಿದೆ; ತಾನಿಲ್ಲಿ ಸುರಕ್ಷಿತಳೆಂಬ ಭಾವನೆ ಅವಳಿಗಿದೆ; ಅವುಗಳ ಮೇಲೆ ಪ್ರಾಬಲ್ಯ ಸಾಧಿಸುವ ಬಲವಾದ ನಂಬಿಕೆಯಿದೆ; ಹಾಗೆಯೇ ತನ್ನ ಮುಂದಿನ ನಡೆಯನ್ನು ತಾನು ಮೊದಲೇ ನಿರ್ಧರಿಸಬಲ್ಲೆ ಎನ್ನುವ ಆತ್ಮವಿಶ್ವಾಸವೂ! ತನ್ನ ನಡೆಗಳಿಂದಾಗಿ ನೋವುಂಟಾದರೆ ತಾನು ದೂಷಿಸಬೇಕಾಗಿರುವುದು ಕೇವಲ ತನ್ನನ್ನು ಮಾತ್ರ ಎನ್ನುವ ಸಂಪೂರ್ಣ ಅರಿವಿರುವ ಅವಳಿಗೆ ತನ್ನ ಬದುಕು ಪ್ರಶಾಂತವೂ, ಸಹನೀಯವೂ ಎನ್ನಿಸುವುದು ಚದುರಂಗದ ಸಹವಾಸದಲ್ಲಿ ಮಾತ್ರ ಎನ್ನುವುದಕ್ಕೆ ವಿವರಣೆಯ ಅಗತ್ಯವಿಲ್ಲ.

The Queen's Gambit ವೆಬ್ ಸರಣಿಯ ಹಾಡು:

ಚದುರಂಗದೊಂದಿಗಿನ ಅವಳ ಪಯಣ ವಿಶೇಷವೆನ್ನಿಸುವುದು ಅವಳು ಅದನ್ನು ಏಕಾಂಗಿಯಾಗಿ ನಿಭಾಯಿಸುವ ಕಾರಣಕ್ಕಾಗಿ. ಅನಾಥೆಯಾಗಿದ್ದ ಅವಳನ್ನು ದತ್ತು ಪಡೆದುಕೊಂಡವರ ದಾಂಪತ್ಯವೂ ಮುರಿದುಹೋಗಿ, ತನ್ನನ್ನು ಮಗಳೆಂದು ಸ್ವೀಕರಿಸಿದ ಸಾಕುತಾಯಿಯೂ ಅಕಾಲ ಮರಣ ಹೊಂದಿ ಮತ್ತೊಮ್ಮೆ ತಬ್ಬಲಿಯಾಗುವ ಪರಿಸ್ಥಿತಿ ಅವಳ ಬದುಕನ್ನು ಅಲ್ಲೋಲಕಲ್ಲೋಲಗೊಳಿಸುತ್ತದೆ. "ಏಕಾಂಗಿಯಾಗಿರಲು ಭಯಪಡದ ವ್ಯಕ್ತಿಯೇ ಬಲಶಾಲಿಯೆನ್ನಿಸಿಕೊಳ್ಳುತ್ತಾನೆ. ಒಂದಲ್ಲ ಒಂದು ದಿನ ನೀನು ಒಬ್ಬಂಟಿಯಾಗಿ ಬದುಕಬೇಕಾದ ಅನಿವಾರ್ಯತೆ ತಲೆದೋರುತ್ತದೆ. ಅಂತಹ ಸಂದರ್ಭಗಳಲ್ಲಿ ನಿನ್ನನ್ನು ನೀನು ರಕ್ಷಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಲೇಬೇಕು. ಸಮರ್ಥಳಾದ ಹೆಣ್ಣು ಮಾತ್ರ ತನ್ನ ದಾರಿಯನ್ನು ತಾನು ಹುಡುಕಿಕೊಳ್ಳಬಲ್ಲಳು" ಎನ್ನುವ ಅವಳ ತಾಯಿಯ ಮಾತು ಅವಳಿಗೆ ದಾರಿದೀಪವಾಗುತ್ತದೆ; ಮಾರ್ಗಮಧ್ಯದಲ್ಲಿ ಜೊತೆಯಾಗುವ ಸ್ನೇಹಿತರನ್ನು ಅವಳಾಗಿಯೇ ದೂರವಿಟ್ಟರೂ, ಅವರ ಮಾರ್ಗದರ್ಶನವೇ ಗೆಲುವಿನ ರಹದಾರಿಯಾಗುತ್ತದೆ. ಇಲ್ಲಿ ಹೆಣ್ಣು ಎನ್ನುವ ಒಂದೇ ಕಾರಣಕ್ಕಾಗಿ ಅವಳು ಸೋಲನ್ನೊಪ್ಪಿಕೊಳ್ಳಬೇಕಾದ ಅನಿವಾರ್ಯತೆಯಿಲ್ಲ; ಗೆಲುವಿನ ದಾರಿ ಸುಲಭವಾಗುವುದೂ ಇಲ್ಲ. ಇದೊಂದು ಗಂಡು-ಹೆಣ್ಣುಗಳ ಸಮಾನತೆಯನ್ನೂ, ಅಪರೂಪವೆನ್ನಿಸಬಹುದಾದ ಸ್ನೇಹವನ್ನೂ, ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕಾದ ಆತ್ಮವಿಶ್ವಾಸವನ್ನೂ ವಿಶಿಷ್ಟವಾಗಿ ತೆರೆದಿಡುತ್ತ ಹೋಗುವ ಕಥಾಸರಣಿ.

ಎಲ್ಲ ಪಾತ್ರಗಳೂ ಇಲ್ಲಿ ವಿಚಿತ್ರವೆನ್ನಿಸುವ ರೀತಿಯಲ್ಲಿಯೇ ವ್ಯವಹರಿಸುತ್ತವೆ. ನಿಜವೆಂದುಕೊಂಡಿದ್ದು ಸುಳ್ಳಾಗಿ, ಸುಳ್ಳೆಂದು ಪರಿಭಾವಿಸಿದ್ದು ಸರಳಸತ್ಯವಾಗಿ, ಸೋಲೆಂದುಕೊಳ್ಳುವುದು ಗೆಲುವಾಗಿ, ಗೆಲುವಿನ ದಾರಿಗಳೆಲ್ಲ ಸಂಕೀರ್ಣವಾಗಿ ಸೋಲು-ಗೆಲುವುಗಳ ಪರಿಭಾಷೆಯನ್ನೇ ಅದಲುಬದಲಾಗಿಸುತ್ತವೆ. ಗೆಲುವಿನ ಹಾದಿಯಲ್ಲಿ ಸಂಭವಿಸುವ ಸಂಬಂಧಗಳೆಲ್ಲವೂ ಚದುರಂಗದ ಮಣೆಯ ಮೇಲಿರುವ ರಾಜನನ್ನು ರಕ್ಷಿಸಲು ಪಣತೊಟ್ಟವರಂತೆ ಕೈಜೋಡಿಸುತ್ತವೆ. ಅನಾಥ ಹುಡುಗಿಯೊಬ್ಬಳು ಒಬ್ಬಂಟಿತನದ ನೋವಿಗೆ ತನ್ನನ್ನು ಒಪ್ಪಿಸಿಕೊಂಡು ಇನ್ನೇನು ಸೋಲನ್ನೂ ಒಪ್ಪಿಕೊಂಡುಬಿಡುತ್ತಾಳೆ ಎನ್ನುವ ಸಮಯದಲ್ಲಿ ನೆರವಿಗೆ ಬರುವ ಸ್ನೇಹಿತರ ಬಳಗವೊಂದು ಎಲ್ಲಿಯೋ ಹುಟ್ಟಿ ಇನ್ನೆಲ್ಲಿಯೋ ಬೆಳೆಯುತ್ತಿರಬಹುದಾದ, ಅಗತ್ಯಬಿದ್ದಾಗ ಬದುಕನ್ನು ಸಲಹಬಲ್ಲ ಆಶಾವಾದದ ಮೂರ್ತರೂಪದಂತೆ ಕಾಣಿಸುತ್ತದೆ. ನಿರಾಕರಣೆ, ನಿರಾಶಾವಾದಗಳು ಬದುಕನ್ನು ಸೋಲಿನ ಕಡೆಗೆ ಎಳೆದೊಯ್ಯುತ್ತಿರುವ ಸಂದರ್ಭಗಳಲ್ಲಿಯೂ ನಮಗೇ ಗೊತ್ತಿಲ್ಲದ ನಮ್ಮದೇ ಬದುಕಿನ ಪಾತ್ರವೊಂದು ಗುರುವಾಗಿ, ಗೆಳೆಯನಾಗಿ, ಎದುರಾಳಿಯೂ ಆಗಿ ಗೆಲುವಿನ ಹಾದಿ ತೋರಿಸುವ ಸಂಭ್ರಮವನ್ನು ವೈಚಿತ್ರ್ಯವೆನ್ನದೇ ಇರಲಾದೀತೇ; ಆ ವೈಚಿತ್ರ್ಯವೇ ವೈಶಿಷ್ಟ್ಯವೂ ಆಗಿ ಬದುಕಿಗೊಂದು ಹೊಸತನ ಒದಗಿಸುವ ಸೋಜಿಗವನ್ನು ಅಲ್ಲಗಳೆಯಲಾದೀತೇ!

ಅಳಿವು-ಉಳಿವುಗಳ ಹೋರಾಟದಲ್ಲಿ ಸುಖ-ದುಃಖಗಳದ್ದು ಸಮಪಾಲು. ಸಂಕಟಕ್ಕೂ ಸಂತೋಷಕ್ಕೂ ವ್ಯತ್ಯಾಸವೇ ಗೊತ್ತಾಗದಂತಹ ಮನಃಸ್ಥಿತಿಯ ಕಲ್ಪನೆಯೇ ಕಳವಳವನ್ನು ಉಂಟುಮಾಡುವಂಥದ್ದು. ಪ್ರೀತಿ-ವಿಶ್ವಾಸಗಳನ್ನು ಅಲ್ಲಗಳೆಯುವ, ದೈಹಿಕ ಸಂಬಂಧಗಳೂ ಸುಖ ನೀಡದಿರುವ, ಜನರ ಸಂಪರ್ಕದಿಂದಲೇ ದೂರ ಉಳಿಯುವ ಪರಿಸ್ಥಿತಿಯನ್ನು ಮನುಷ್ಯ ತಾನಾಗಿಯೇ ಸೃಷ್ಟಿಸಿಕೊಳ್ಳುತ್ತಾನೆಯೇ ಅಥವಾ ಅದೊಂದು ಮನಸ್ಸಿನ ಹೊಯ್ದಾಟವೇ ಎನ್ನುವುದನ್ನು ನಿರ್ಧರಿಸುವುದು ಸುಲಭವಲ್ಲ. ಗೆಲುವಿಗಾಗಿಯೇ ಸದಾ ಹೋರಾಟ ನಡೆಸುವವನು ಸೋಲಿನ ಎಲ್ಲ ಮಜಲುಗಳನ್ನು ದಾಟಿಯೇ ಮುನ್ನಡೆಯಬೇಕು. ಆ ಮಜಲುಗಳನ್ನು ಸರಾಗವಾಗಿ ದಾಟಿಬಿಡುವ ಯಾವ ಕಾಲುದಾರಿಯೂ ಇಲ್ಲ. ಈ ಪಯಣ ಕಷ್ಟಕರವಾದದ್ದು ಎನ್ನುವ ಆಲೋಚನೆ ಬಂದಾಗ ಮಾತ್ರ ಕಷ್ಟದ ಅನುಭವವೊಂದು ಬಾಧಿಸುತ್ತದೆ; ಸುಲಭಸಾಧ್ಯವೆಂದುಕೊಂಡ ಮರುಗಳಿಗೆಯೇ ಅದಕ್ಕನುಗುಣವಾಗಿ ನೆರವಿನ ಹಸ್ತಗಳು ಕೈಚಾಚುತ್ತವೆ. ಮಣೆಯ ಮೇಲಿನ ರಾಜನನ್ನು ರಕ್ಷಿಸಲೆಂದೇ ಪದಾತಿಗಳು ಸಾಲುಗಟ್ಟಿ ನಿಂತಿದ್ದಾರೆನ್ನುವ ಸ್ಪಷ್ಟತೆಯೇ ಚದುರಂಗದಾಟಕ್ಕೊಂದು ಹೊಸ ಅರ್ಥವನ್ನು ನೀಡಬಲ್ಲದು. ಮುಂದಿನ ನಡೆಯನ್ನು ಆಯ್ಕೆಮಾಡಿಕೊಳ್ಳಲು ದೊರಕುವ ಅಲ್ಪಸಮಯವೇ ಬದುಕಿನ ಎಲ್ಲ ಸೋಲು-ಗೆಲುವುಗಳನ್ನು ನಿರ್ಧರಿಸಬಲ್ಲದು.

ಈ ಅಂಕಣದ ಹಿಂದಿನ ಬರಹಗಳು:
ಅನುರಾಗದ ಮಧುರ ಆಲಾಪ BANDISH BANDITS (INDIAN ROMANTIC DRAMA)
ಆಧುನಿಕ ಲೋಕದ ಆತ್ಮಾವಲೋಕನ MADE IN HEAVEN (INDIAN ROMANTIC DRAMA)
ನೋವು-ನಲಿವುಗಳ ಪಂಚಾಯಿತಿ PANCHAYAT (HINDI COMEDY-DRAMA)
ಬಿಡುಗಡೆಯ ಹಾದಿಯ ಪಿಸುಮಾತು IT'S OKAY TO NOT BE OKAY(KOREAN DRAMA)

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...