ತತ್ತಿಯೊಡೆದ ಪುಟ್ಟ ಕೀಟದ ಕಣ್ಣಲ್ಲಿ ಫಲಿಸಿದ ಬೆಳಕು

Date: 07-03-2023

Location: ಬೆಂಗಳೂರು


“ಚಂದ್ರನನ್ನು ಭೇಟಿಯಾದಾಗ ಶ್ಯಾಮು ಇನ್ನೂ ಹರೆಯದ ಹುಡುಗಿ. ಕಾಡು ಮೇಡನ್ನು ಅಲೆದು ಕಂಡ ಕಂಡ ಎಲೆಗಳನ್ನೆಲ್ಲಾ ತಂದು ಪುಸ್ತಕದಲ್ಲಿರಿಸುವ ಸ್ಥಿತಿಯಿಂದ ಸ್ವಲ್ಪವಷ್ಟೇ ಮೇಲೆದ್ದವಳು. ಚಂದ್ರ ಜಗತ್ತಿಗೆ ಆಗ ಅರಳಿದ್ದ ಹೆಸರು,” ಎನ್ನುತ್ತಾರೆ ಲೇಖಕಿ ಪಿ. ಚಂದ್ರಿಕಾ. ಅವರು ತಮ್ಮ ‘ನಡೆಯದ ಬಟ್ಟೆ’ ಅಂಕಣದಲ್ಲಿ ‘ತತ್ತಿಯೊಡೆದ ಪುಟ್ಟ ಕೀಟದ ಕಣ್ಣಲ್ಲಿ ಫಲಿಸಿದ ಬೆಳಕು’ ವಿಚಾರವನ್ನು ಕಟ್ಟಿಕೊಟ್ಟಿದ್ದಾರೆ...

`ಪ್ಲೀಸ್ ಚಂದ್ರಾ ನನ್ನ ವಿಷಯದಲ್ಲಿ ಎಷ್ಟು ಬೇಕಾದರೂ ಪ್ರಶ್ನೆಗಳನ್ನು ಕೇಳಿಕೋ. ಉತ್ತರವನ್ನು ಹುಡುಕಬೇಡ. ಪ್ರಶ್ನೆಗಳು ಅನಾದಿ ಹಾಗೂ ರೂಕ್ಷ. ಅದಕ್ಕೆ ಉತ್ತರ ಹತ್ತು ಹೊಳೆಯುತ್ತೆ. ಹೊಳೆದ ಉತ್ತರವೆಲ್ಲಾ ಸರಿಯಂತಲೂ ಅಲ್ಲ. ಅಲ್ಲಿ ನಾನಿದ್ದೀನಾ ಎಂದರೆ ಇಲ್ಲ. ಎಲ್ಲ ಉತ್ತರಗಳೂ ಆಯಾ ಸಂದರ್ಭಕ್ಕೆ ಮಾತ್ರ ಪರಿಹಾರವೇನೋ ಎನ್ನಿಸಿಬಿಡುತ್ತವೆ. ಆದರೆ ಒಂದು ಪ್ರಶ್ನೆ ಹೊಳೆಯುವುದಿದೆಯಲ್ಲಾ ಅದು ಅದೃಷ್ಟ. ಜಗತ್ತಿನ ಎಲ್ಲ ಗೊಂದಲಗಳ ನಡುವೆ ಸಿಲುಕಿ ಭಾವ ಬಿಂದುವೇ ಆದ ನಾನು, ನಿನಗೇನಾಗಬೇಕು ಎಂದು ಕೇಳಿದೆನಲ್ಲವೇ? ಜಗತ್ತಿನ ಆದಿ ತಾಯಿ ಪಾರ್ವತಿ ಆದ್ಯಂತವೇ ಇಲ್ಲದ, ಅರಿವೇ ಮೂಡದ ಶಿವನನ್ನು ಕೇಳಿದ್ದು ಇದನ್ನೇ. ಶಿವ ಬೆಳದಿಂಗಳು ಮೂಡುವಂತೆ ಕಣ್ತೆರೆದು ನಕ್ಕ. ಆ ಒಂದು ಪ್ರಶ್ನೆಗೆ ಇಡೀ ಜಗತ್ತು ಆಗಿಬಿಟ್ಟಿತು. ಹೀಗೇ ಗತ್ಯಂತರವಿಲ್ಲದ ಸ್ಥಿತಿಯೊಂದು ನನಗೂ ನಿರ್ಮಾಣ ಆಗುತ್ತದೆಂದು ಅಂದುಕೊಂಡಿರಲಿಲ್ಲ. ಗೆರೆ ಹುಡುಕ ಹೊರಟು ಅಯಾಚಿತವಾಗಿ ಆಕೃತಿ ಮೂಡಿ ಎಷ್ಟೋ ಸಲ ಉತ್ಸಾಹವ ಉಸಿರಾಗಿಸಿಕೊಂಡು ನನಸಾಗಬೇಕಿರುವ ಕನಸುಗಳಿಗೆ ಹಗಲುಗಳು ಕಾಯುವಂತೆ ಉಸುರಿಕೊಂಡಿದ್ದೇನೆ. ಮಲಗಿದ್ದ ನಾಯಿ ಸಣ್ಣ ಶಬ್ದಕ್ಕೆ ತಲೆ ಎತ್ತಿ ನೋಡುತ್ತದೆ, ಹಾಗಾದರೆ ಅದು ಮಲಗಿದ್ದೇ ಸುಳ್ಳೇ! ಅಥವಾ ಅದೊಂದು ಜಾಗೃತ ಪ್ರಜ್ಞೆಯೇ? ಆದರೂ ನನ್ನ ವಿಷಯಕ್ಕೆ ಯಾಕೆ ಹೀಗೆ ಮಾಡುತ್ತಿರುವಿ? ಛೇ ಕಟ್ಟಬಾರದ ಕಡೆ ಮನೆ ಕಟ್ಟಿಸಿ ಕೈಹಿಡಿದು ನಡೆಸಬೇಕಾದಾಗ ಕೈಬಿಟ್ಟು ಹೋಗು ಎಂದು ಕಳಿಸಿ, ಆಟ ಕಟ್ಟಿದ್ದು ಯಾಕೆ? ಕಂಗಾಲಾಗಿದ್ದೇನೆ’ ಎಂದ ಶ್ಯಾಮುವಿನ ಮಾತಿಗೆ ಅವನ ನಗು ಕತ್ತಲಲ್ಲಿ ನಕ್ಷತ್ರ ಕಾಣಿಸಿತ್ತು.

ಆಕೃತಿಯಾಗಿ ಚಂದ್ರ ಸಿಕ್ಕ ಎಂದರೆ ನನಗೆ ತೀವ್ರ ಅನ್ನಿಸಿದ ಗಿರಿಯೂ ಅವಳಿಗೆ ಬರಿ ಗೆರೆಯಾಗಿ ಮಾತ್ರ ಕಾಡಿದ್ದನಾ? ಇಲ್ಲ ಯಾರೂ ಸುಮ್ಮನೆ ಸಿಗಲಾರರು. ಸಿಗುವುದು ಎಂದರೆ ಮೂರ್ತವಾಗಿ ಕೈಗೆ ಸಿಗುವುದೆಂದೇ? ಇಲ್ಲ ಒಳಹೊಗಬೇಕು. ಬಹುಶಃ ಅವಳ ಮನಸ್ಸಿಗೆ ಬಾರದ ಅವನು ಪ್ರೀತಿಯಲ್ಲ, ಬರಿಯ ವ್ಯಕ್ತಿ ಅಷ್ಟೇ. ಈ ದೇಹ ಮನಸ್ಸುಗಳು ಎಲ್ಲರಿಗೂ ಸಮಾನವೇ ಇರುವಾಗ ಕೆಲವರು ಮಾತ್ರ ಹತ್ತಿರ ಮತ್ತು ಎತ್ತರ ಆಗುವುದಾದರೂ ಯಾಕೆ? ಗಿರಿಯನ್ನು ತಿರಸ್ಕರಿಸಿ ಚಂದ್ರನನ್ನು ಒಪ್ಪಿಕೊಂಡಿದ್ದು ಅದು ಅವಳ ಆಯ್ಕೆ ಎಂದು ಹೇಳಿಬಿಡಬಹುದು. ಅದು ಆಯ್ಕೆಯ ಪ್ರಶ್ನೆಯಾ? ಸಮರಸದ್ದಾ? ಇಂಥಾ ಅಪದ್ದಗಳನ್ನು ನಾನು ಮಾತ್ರ ಕೇಳಿಕೊಳ್ಳಲು ಸಾಧ್ಯ ಎನ್ನುವುದು ಗೊತ್ತಿದೆ.

ಚಂದ್ರನನ್ನು ಭೇಟಿಯಾದಾಗ ಶ್ಯಾಮು ಇನ್ನೂ ಹರೆಯದ ಹುಡುಗಿ. ಕಾಡು ಮೇಡನ್ನು ಅಲೆದು ಕಂಡ ಕಂಡ ಎಲೆಗಳನ್ನೆಲ್ಲಾ ತಂದು ಪುಸ್ತಕದಲ್ಲಿರಿಸುವ ಸ್ಥಿತಿಯಿಂದ ಸ್ವಲ್ಪವಷ್ಟೇ ಮೇಲೆದ್ದವಳು. ಚಂದ್ರ ಜಗತ್ತಿಗೆ ಆಗ ಅರಳಿದ್ದ ಹೆಸರು. ಇಬ್ಬರೂ ಭೇಟಿಯಾಗಿದ್ದು ಆಕಸ್ಮಿಕ, ಅಚಾನಕ್ ಕೈಯಿಂದ ವಸ್ತುವೊಂದು ಜಾರಿ ಬೀಳುವಾಗ ಒಮ್ಮೆಲೇ ಎರಡೂ ಕೈಗಳು ಅದನ್ನು ಹಿಡಿಯಲೆಳೆಸುತ್ತವಲ್ಲ ಹಾಗೆ. ಮೌನ, ಮುನಿಸು, ಸಿಟ್ಟು, ಸೆಡವುಗಳು ಲಟಲಟನೆ ಮೈ ಮುರಿದು ಕೊಡವಿ ಏಳುತ್ತವಲ್ಲ! ಹೊಕ್ಕಳಾಳದ ವಾಂಛೆಗಳು ಅನಂಗವಾಗಿ ಇಡೀ ಮನುಷ್ಯನನ್ನು ಆವರಿಸಿ ಹೇಗೆಲ್ಲಾ ಮಾಡುತ್ತೆ ಎನ್ನುವುದು ಚಂದ್ರನ ಚಿತ್ರಗಳ ಥೀಮ್ ಆಗಿತ್ತು. ಅದನ್ನು ನೋಡಲಿಕ್ಕೆ ಕಾಲೇಜು ಮುಗಿಸಿಕೊಂಡು ಮನೆಯವರಿಗೆ ಹೇಳದೆ ನಾವಿಬ್ಬರೂ ಕದ್ದು ಹೋಗಿದ್ದೆವು. ಶ್ಯಾಮೂಗೆ ಆ ಚಿತ್ರಗಳು ಇಷ್ಟ ಆಗಿರಲಿಲ್ಲ. ಕಾಮಕ್ಕೆ ಆತುಕೊಳ್ಳುವ ಅವನ ಚಿತ್ರಗಳನ್ನು ನೋಡಿ ಶ್ಯಾಮು ನೇರವಾಗಿ ಕೇಳಿದ್ದಳು, `ಹೆಣ್ಣೆಂದರೆ ಬರಿಯ ಮೊಲೆ ಯೋನಿಗಳಲ್ಲ, ನಿಮ್ಮ ತಾಯಿ ಅಥವಾ ಸೋದರಿಯರಲ್ಲೂ ನಿಮಗೆ ಇದೇನಾ ಕಾಣುವುದು? ಅವರಲ್ಲಿ ಪ್ರೀತಿಸುವ ಕಣ್ಣೊಂದು ಅಂತಃಕರಣದ ಒಡಲನ್ನು ಬಿಚ್ಚುತ್ತದಲ್ಲ, ತುತ್ತಿಡುವಾಗ ಅಯಾಚಿತವಾಗಿ ಹಣೆ ನೆತ್ತಿಯನ್ನು ನೇವರಿಸುತ್ತಲ್ಲಾ! ಅದ್ಯಾಕೆ ವಸ್ತು ಆಗಿಲ್ಲ. ಹೆಣ್ಣೆಂದರೆ ಹೂವೊಂದು

ದಳಗಳುದುರಿ ಬರಿದಾಗುತ್ತಾ, ನಗ್ನವಾಗುತ್ತಾ ಅನಂತಕ್ಕೆ ಕನಸ ಹಚ್ಚುವ ಸಂತತಿಯನ್ನು ವಿಕಸನಗೊಳಿಸುವ ಸ್ಥಿತಿ’ ಎಂದು ನಗ್ನತೆಯ ವ್ಯಾಖ್ಯಾನವನ್ನೇ ಬೇರೆ ಮಾಡಿದ್ದಳು. ಆ ಮಾತಿಗೆ ಸುತ್ತಲಿದ್ದವರು ಚಪ್ಪಾಳೆ ತಟ್ಟಿದ್ದರು. ಅವಮಾನಿತಗೊಂಡು ಅದಕ್ಕೆ ಚಂದ್ರ ಕೂಡಾ ಪ್ರಾಣಿಗಳಿಗೆ ಇರುವಂತೆ ಸಸ್ಯಗಳಿಗೂ ಕಾಮ ಇರುತ್ತದೆ- ಇಲ್ಲದಿದ್ದರೆ ಸಂತತಿ ಬೆಳೆಯುವುದಾದರೂ ಹೇಗೆ? ಕಂಡಿದ್ದು ಮಾತ್ರ ಕಾಮ ಕಾಣದಿದ್ದರೆ ಅಲ್ಲವಾ? ಎಂದಿದ್ದ ಜಗದ ಸತ್ಯದ ಎದುರು ನಿಂತ ದ್ರಷ್ಟಾರನಂತೆ. ಶ್ಯಾಮು ಶುದ್ಧ ಪ್ರಕೃತಿಯಂತೆ ಹೋರಾಟಕ್ಕೆ ನಿಂತವಳಂತೆ ತನ್ನ ನಿಲುವಲ್ಲಿ ಅಚಲಳಾಗಿದ್ದಳು. ಕಾಮವು ಪ್ರೇಮದ ಒಂದು ಸ್ಥಿತಿಯಷ್ಟೇ ಹೊರತು ಪ್ರೇಮ ಕಾಮ ಎರಡೂ ತಕ್ಕಡಿಯ ಸಮವಾಗುವ ಆಟವಲ್ಲ. ನಾನೂ ನೀವೂ ಇಬ್ಬರೂ ಎದುರಾಗುತ್ತೇವೆ ನೋಡಿದ ತಕ್ಷಣ ಒಂದು ನಗೆ ಅರಳುತ್ತದಲ್ಲ ಅದನ್ನು ಏನನ್ನಬೇಕು? ಕಣ್ಣುಗಳು ಮತ್ತವಾಗಲೂ ತಾದ್ಯಾತ್ಮ ಬೇಕು. ಭುಜಕ್ಕೆ ಆನುವಂತೆ ಅಪ್ಪಿಕೊಂಡು ಹಣೆಗೊಂದು ಮುತ್ತುಕೊಡುವಾಗ ಜಗತ್ತಿನ ಸುಖ ನಮ್ಮಲ್ಲೇ ಇರುತ್ತಲ್ಲ ಅದು ಇಚ್ಚೆಯಾ? ಕಾಮವಾ? ಅಥವಾ ಮನುಷ್ಯರ ನಡುವೆ ತಂತುವಾದ ಪೂರ್ಣತ್ವವೊಂದು ಕಾದ ಹಾಗಾ? ಇಷ್ಟಕ್ಕೂ ಹೆಣ್ಣಾದ ನಮಗೇಕೆ ಗಂಡು ಬರಿಯ ಕಾಮ ಎನ್ನಿಸುವುದಿಲ್ಲ. ಅದರ ಫಲವಾದ ಒಡಲ ಸತ್ಯಗಳಿಗೆ ನಾವೇ ತಾನೆ ತೆರೆದುಕೊಳ್ಳುವುದು. ಕಾಮದಿಂದ ಜನಿಸಿದರೂ ಮಗುವನ್ನು ದೈವ ಸ್ಥಿತಿಯೆಂದು ಭಾಸವಾಗುತ್ತಲ್ಲ ಯಾವುದನ್ನು ಏನನ್ನಬೇಕು?’ ಎಂದು ಚಂದ್ರನ ಜೊತೆ ವಾದಕ್ಕಿಳಿದಿದಳು. ಚಂದ್ರ, `ಇವೆಲ್ಲಾ ಸುಮ್ಮನೆ ಮಾತುಗಳು. ಇರುವುದೊಂದೇ ಸತ್ಯ ಆ ಇರುವನ್ನು ಅಲ್ಲಗಳೆದು ಭ್ರಮೆಯನ್ನು ಹುಟ್ಟು ಹಾಕುವವರು ಈ ಹೆಣ್ಣುಗಳು ಬರೀ ಭಾವುಕ ಮುದ್ದೆಗಳು’ ಎಂದು ಅವಳನ್ನು ಉಚಾಯಿಸಿ ಮಾತಾಡಿಬಿಟ್ಟಿದ್ದ. ಕೋಪಗೊಂಡಿದ್ದ. ನನಗೆ ನೆನಪಿದೆ ಇಬ್ಬರ ಮಧ್ಯೆ ಜಗಳ ತಾರಕ್ಕಕ್ಕೇರಿದಾಗ ಶ್ಯಾಮುವಿನ ಮಾತಿಗೆ ಚಪ್ಪಾಳೆ ಹೊಡೆದವರೂ ಅವಳ ಪರವಾಗಿ ಮಾತಾಡಿರಲಿಲ್ಲ. `ನಿಮಗೆ ಇಷ್ಟವಿಲ್ಲ ಅಂದ್ರೆ ಸುಮ್ಮನಿರಿ. ಯಾರ ಯಾರ ಅಭಿವ್ಯಕ್ತಿ ಸ್ವಾತಂತ್ಯ್ರ ಅವರಿಗೆ’ ಎಂದಿದ್ದರು. ಶ್ಯಾಮು ಮಾತ್ರ ಪಟ್ಟು ಬಿಟ್ಟಿರಲಿಲ್ಲ. ಪರಸ್ಪರರು ಸಂಧಿಸುವುದು ಕಾಮದಲ್ಲಿ ಅಲ್ಲ ಪ್ರೇಮದಲ್ಲಿ; ಅದೇ ಸೆಳೆತ, ಅದೇ ಅಂತಿಮ ಸತ್ಯ’ ಎಂದು ನೇರವಾಗಿ ಹೇಳಿದ್ದಳು.

ಈ ಮಾತುಕತೆಗಳಲ್ಲಿ ಕನಲಿದ ಚಂದ್ರ ಶ್ಯಾಮುವಿನ ಮನೆಯ ವರೆಗೂ ಬಂದ. ಶ್ಯಾಮು ಅಷ್ಟು ಹೊತ್ತಿಗೆ ಅವನ ಮನಸ್ಸಿನ ಒಳಗಿದ್ದಳು. ನಿವೇದನೆಗಳಿಂದ ವಾದಗಳು ಇಲ್ಲವಾಯಿತು. ಇಬ್ಬರೂ ನಿಜವಾದ ಅರ್ಥದಲ್ಲಿ ಮನುಷ್ಯರಾಗಿ ಸಂಧಿಸಿದರು. ಪ್ರೇಮದ ಅರ್ಥವನ್ನು ಶ್ಯಾಮುವೂ, ಕಾಮದ ಮಹತ್ವವನ್ನು÷ಚಂದ್ರನೂ ಒಬ್ಬರಿಗೊಬ್ಬರು ಅರ್ಥ ಮಾಡಿಸಿದರಾ? ಗೊತ್ತಿಲ್ಲ. ಆದರೆ ತಮಗೆ ಗೊತ್ತಿಲ್ಲದ ಯಾವುದೋ ಹೊಸತರ ಹುಡುಕಾಟಕ್ಕೆ ಇಬ್ಬರೂ ಇಳಿದಿದ್ದರು.

ಮನೆಯವರ ವಿರೋಧ, ಸಮಾಜದ ಕಟ್ಟ್ಟಳೆಗೆ ಎದುರಾಗಿ ನಿಂತು ಗೆರೆಗಾಗಿ ಹಂಬಲಿಸಿದವಳು ಗೆರೆಯೊಂದು ಅಳಿಸಿ ಹೋಗಲಿ ಎಂದಿದ್ದಳು. ಅವಳ ಪ್ರಾರ್ಥನೆ ಸುಮ್ಮನೆಯದ್ದಲ್ಲ. ಬದುಕಿನೊಂದಿಗೆ ತಾದ್ಯಾತ್ಮವಾಗಬಲ್ಲ ಸ್ಥಿತಿ. ಗೊತ್ತು ಅದು ಜಗತ್ತಿನ ಯಾವುದಕ್ಕೂ ಸಾಕ್ಷಿಯಲ್ಲ. ಏನೂ ಘಟಿಸಲೇ ಇಲ್ಲ ಎನ್ನುವ ಹಾಗೆ ಸುಮ್ಮನೆ ಇರುವ ಅಗ್ನಿಶಿಖೆಯಂತೆ. ನೆಲದಾಳಕ್ಕೂ ಮೇಲಿನ ಶಿಖೆಗೂ ಮಧ್ಯ ಗೆರೆಯೊಂದಿರುತ್ತದಲ್ಲ! ಆ ತಳಕ್ಕೂ ಭೂಮಿಯ ಒಳಗಿಗೂ ಸಂಬಂಧವಿಲ್ಲವಾ? ಎರಡರ ಮಧ್ಯೆ ಇರುವುದೇ ಸಂಯೋಗವಾ? ವಿಯೋಗವಾ? ಅಥವಾ ಸ್ಪೋಟದ ಮುನ್ನಾ ಸ್ಥಿತಿ? ಉಹ್ ಉಸಿರು ಬಿಗಿ ಹಿಡಿದಂತೆ ಎದೆಯೊಳಾಡುವ ಗಿಳಿ ಹೊರಗೆ ಹಾರಿ ಹೋಗಲಿಕ್ಕೆ ಪಟಪಟನೆ ರೆಕ್ಕೆಗಳ ಕೊಡವಿದಂತೆ ಭಾಸವಾಗುವಾಗ ಅವಳು ನಿದ್ದೆ ಕಂಗಳಲ್ಲೂ `ಇದೂ ಒಂದು ಎಚ್ಚರ’ ಎಂದು ಕನಸಿದ್ದಳು. ಆ ಧ್ವನಿಯ ಆರ್ದ್ರತೆ ನನಗೆ ಮತ್ತೆ ಮತ್ತೆ ನೆನಪುಗಳ ಜೊತೆ ಪಯಣ ಬೆಳೆಸುವಂತೆ ಮಾಡುತ್ತಿದೆ.

`ತೇಜೂ ಆ ಕನಸು ನನಗೆ ಯಾಕೆ ಬಿತ್ತೋ ಗೊತ್ತಿಲ್ಲ ಹನಿಯ ಜೊತೆ ಇನ್ನೊಂದೇ ಮಗು ಇದೆ ಅನ್ನಿಸಲಿಕ್ಕೆ ಶುರುವಾಗಿದೆ ಅದು ಗಿರಿಯದ್ದೋ, ಚಂದ್ರನದ್ದೋ

ಯಾರದ್ದಾದರೇನು? ನನ್ನೊಡಲ ಸತ್ಯಗಳನ್ನು ಅಲ್ಲಗಳೆಯಲು ಸಾಧ್ಯವೇ’ ಎನ್ನುವಾಗ ನಾನು ಇದೇನಿದು ಶ್ಯಾಮು ಮತ್ತೆ ಹಿಂದಿನ ಭ್ರಮಾಸ್ಥಿತಿಗೆ ಜಾರುತ್ತಿದ್ದಾಳಾ? ಅನ್ನಿಸಿ ಭಯವಾಗಿಬಿಟ್ಟಿತ್ತು. ಶ್ಯಾಮು ಕನಸಿಗೂ ಅರ್ಥ ಹಚ್ಚುವುದು ಬೇಡ ಅನ್ನಿಸುತ್ತೆ ಎಂದಿದ್ದೆ. ನಕ್ಕ ಶ್ಯಾಮು `ನಾನು ಗಟ್ಟಿಯಾಗಿದ್ದೀನಿ- ಹಿಂದೆಂದಿಗಿಂತಲೂ. ಆದರೂ ಮಗುವಿನ ವಿಷಯ ಬಂದದ್ದಕ್ಕೆ ಸ್ವಲ್ಪ ಹೆಚ್ಚು ಭಾವುಕಳಾದೆ ಅನ್ನಿಸುತ್ತೆ. ಇರಲಿ ಬಿಡು’ ಎಂದಿದ್ದಳು.

ಪುಟ್ಟ ಪುಟ್ಟ ಹೂವಿನ ಲಂಗದ, ಹೂವಿನ ಪರಾಗದಲ್ಲೂ ಬಣ್ಣದ ಹುಡಿಯನ್ನು ಬೇರೆ ಮಾಡಿ ನೋಡುತ್ತಿದ್ದ ಪುಟ್ಟ ಶ್ಯಾಮು ತಾನು ಬಣ್ಣವೇ ಆಗಿದ್ದು ದೊಡ್ಡ ಪರಿವರ್ತನೆಯೇನಲ್ಲ. ಆಗಲೇ... ಆಗಲೇ... ಬಿಸಿಲಿಗೆ ಮುಖಮಾಡಿ, ಕಣ್ಣನ್ನು ಮುಚ್ಚಿ, ಬಣ್ಣಗಳ ಕಾಣುವ ಆಟ ಶುರು ಮಾಡಿದ್ದಳು. `ತೇಜೂ ನಿಂಗೆ ಎಷ್ಟು ಬಣ್ಣಗಳು ಕಾಣುತ್ತಿವೆಯೇ?’ ಎಂದು ಕೇಳಿದ್ದು ಈಗಲೇ ಇರಬೇಕು ಎನ್ನುವಷ್ಟು ಭ್ರಮಿತವಾಗುವ ಆರ್ದ್ರತೆ ಇತ್ತಲ್ಲವೆ ಅವಳ ಧ್ವನಿಯಲ್ಲಿ! ಬರಿಯ ಬಿಸಿಲಿನಲ್ಲಿ ಮಾತ್ರವಲ್ಲ, ನೆರಳು, ಕತ್ತಲೆ ಎಲ್ಲದರಲ್ಲೂ ಹೀಗೆ ಹುಡುಕುತ್ತಾ ಬಣ್ಣಗಳ ಎಣಿಸಲಿಕ್ಕಾಗದೆ ಕಂಗಾಲಾಗಿ ಬಿಡುತ್ತಿದ್ದಳು. ಯಾಕೆ ಹೀಗೆ ಎಲ್ಲವೂ ಹರಿದು, ಮುರಿದು ಹೋಗುತ್ತವೆ? ಅನೂಚಾನವಾದ ಗೆರೆಯಾಗಲೀ, ಬಣ್ಣವಾಗಲಿ ತನಗೆ ಕಾಣುತ್ತಿಲ್ಲ ಯಾಕೆ ಎಂದು ಕೊರಗುತ್ತಿದ್ದಳು. ಕಮಲತ್ತೆಗೆ ಶ್ಯಾಮು ಎಂದರೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು ವಿಚಿತ್ರವಾದ ಪ್ರಸಂಗದಲ್ಲಿ. ಈ ಹುಡುಕಾಟಗಳಲ್ಲಿ ಅವಳಿಗೆ ತನ್ನ ನೆಲೆಯನ್ನು ಹುಡುಕಿಕೊಳ್ಳಬೇಕು ಎನ್ನಿಸಿಬಿಡುತ್ತಿತ್ತು. ಒಮ್ಮೆಯಂತೂ, `ಅಮ್ಮಾ ನಾನು ಇಲ್ಲಿಯವಳಲ್ಲ. ನಾನು ಎಲ್ಲಿಂದ ಬಂದಿದ್ದೇನೋ ಅಲ್ಲಿಗೆ ಹೋಗಿಬಿಡಬೇಕು ಅನ್ನಿಸುತ್ತಿದೆ’ ಎಂದುಬಿಟ್ಟಿದ್ದಳು. ಪುಟ್ಟ ಹುಡುಗಿಯ ಬಾಯಲ್ಲಿ ಬರುವ ಮಾತುಗಳೇ ಇವು? ಈ ಹುಡುಗಿಗೆ ಏನಾಗಿದೆ? ಎಲ್ಲವೂ ಮುರಿದು ಕಟ್ಟಿಕೊಳ್ಳಲು ಹೆಣಗುವ ಅವಳ ಕಣ್ಣು ಮನಸ್ಸುಗಳು ಲೋಕದ ಎಲ್ಲಾ ಹುಡುಗಿಯರಿಗಿಂತ ಯಾಕೆ ಭಿನ್ನವಾಯಿತು. ಕಮಲತ್ತೆ ತಲೆ ಚೆಚ್ಚಿಕೊಂಡಿದ್ದರು. ಶ್ಯಾಮುವಿನ ಅಪ್ಪ ಅವಳ ಈ ಸ್ಥಿತಿಗೆ ತಾನೆಷ್ಟು ಕಾರಣ ಎಂದು ಕಂಗಾಲಾಗಿದ್ದರು. ಇದಕ್ಕೆಲ್ಲಾ ಕಾರಣ ತನ್ನ ಹುಟ್ಟು ನಿಗೂಢವಾದ ಎಂಥದ್ದೋ ಸಂಗತಿಗಳನ್ನು ತೆರೆಯುವಾಗ ಕಂಡಿದ್ದನ್ನೆಲ್ಲ್ಲಾ ಚಿತ್ರವಾಗಿಸುತ್ತಿದ್ದ, ಅದನ್ನೇ ಸತ್ಯವೆಂದು ನಂಬಿಸುವ ಹಾಗೆ ಅವಳು ಹೇಳಿದ್ದು, `ಜಗತ್ತನ್ನು ನೋಡಲು ಮೊದಲ ಬಾರಿ ಕಣ್ಬಿಟ್ಟ ತನ್ನ ಕಣ್ಣೆದುರು ಚಿಟ್ಟೆಯೊಂದು ಹಾರಿ ಹೋಗಿದ್ದಿರಬೇಕು, ಹಾಗೆೆ ಹೋಗುವಾಗ ಅದರ ರೆಕ್ಕೆ ಮುರಿದು ಬಿದ್ದಿರಬೇಕು ಅದಕ್ಕೆ ನನಗೆ ಹೀಗೆಲ್ಲಾ ಆಗುತ್ತಿದೆ’ ಎಂದಿದ್ದಳು. ಅವಳು ಹೇಳುತ್ತಿದ್ದುದು ಕಥೆಯೋ, ಕಲ್ಪನೆಯೋ, ಇಲ್ಲ ಯಾವುದೋ ಮಾಯಕ ಪುರಾಣವೋ! ಇರಬಹುದೇನೋ ಎಂದು ನಂಬಿದ್ದ ನನಗೆ, ಇಲ್ಲ ಅವಳ ಮಾತೆಲ್ಲಾ ಸುಳ್ಳು ಎನ್ನುವುದು ಅರ್ಥ ಆಗಲಿಕ್ಕೆ ತುಂಬಾ ಸಮಯ ಬೇಕಾಯಿತು. ಅವಳ ಆ ಮಾತುಗಳನ್ನು ಅಮ್ಮನೆದುರು ಬಿಚ್ಚಿಟ್ಟಾಗÀ ಅವಳು ಹೇಳಿದ್ದ ಮಾತುಗಳು ನೆನಪಾಗುತ್ತದೆ.

`ಪಾಪದ ಹುಡುಗಿ ಶ್ಯಾಮು ಹುಟ್ಟಿದಾಗ ಅವಳ ಅಪ್ಪ ಸಾಲ ಮಾಡಿಕೊಂಡು ಊರನ್ನು ಬಿಟ್ಟಿದ್ದರು. ಜನ ಎಲ್ಲಾ ಮಾತಾಡಿಕೊಂಡರು ಇನ್ನೊಂದು ಅವನು ಬರಲಾರನೆಂದು. ವಾರದ ಹಸಿ ಬಾಣಂತಿಗೆ ವಿಷಯ ತಿಳಿಯುತ್ತಿದ್ದಂತೆ ನಿನ್ನ ಕಮಲತ್ತೆಗೆ ಸನ್ನಿ ಆಯಿತು. ಅವಳ ಪರಿಸ್ಥಿತಿ ಹೇಳತೀರದು. ಮಗುವಿನ ಕಡೆ ಗಮನವೂ ಇಲ್ಲವಾಗಿ ಒಂದೇ ಕಡೆ ನೋಡುತ್ತಾ ಕುಳಿತುಬಿಡುತ್ತಿದ್ದಳು. ಹೊಟ್ಟೆಯಲ್ಲಿದ್ದ ಮಗು ಹೊರ ಜಗತ್ತಿಗೆ ಇನ್ನೂ ಹೊಂದಿಕೊಳ್ಳಲಾಗದೆ ಬೆಚ್ಚಗೆ ತಾಯ ಆಸರೆ ಬಯಸುವ ಹೊತ್ತದು. ಹೊಟ್ಟೆಗೂ ಇಲ್ಲದೆ ಅತ್ತು ಅತ್ತೂ ಮಲಗಿಬಿಡುತ್ತಿತ್ತು.

ಒಂದು ದಿನ ಶ್ಯಾಮೂನ ಮುತ್ತಜ್ಜಿ ಹೊರಗೆ ಅಂಗಳದಲ್ಲಿ ಹಗ್ಗದ ಮಂಚ ಎಳೆದುಕೊಂಡು ಮಲಗಬೇಕು ಆಗ ಯಾವುದೋ ನಾಯಿ ಕುನ್ನಿ ಅಳುವ ಶಬ್ದ ಕೇಳಿತಂತೆ. ಇದೇನು ಈಗ ಯಾವ ನಾಯಿ ಮರಿ ಹಾಕಿದೆ? ಊರಲ್ಲಿ ಯಾವ ನಾಯಿಯೂ ಗಬ್ಬ ಧರಿಸಿರಲಿಲ್ಲವಲ್ಲ ಎಂದು ಅಚ್ಚರಿಯಿಂದ ಹುಡುಕುತ್ತಾ ಕೂಗನ್ನು ಆಧರಿಸಿ ಹೋದಾಗ ಅಲ್ಲಿ ಕಂಡ ದೃಶ್ಯ ಅವಳ ಕರುಳನ್ನು ಹಿಂಡಿದೆ.

ಹಸು ಕರುಗಳಿದ್ದ ಮನೆ, ತಿಪ್ಪೆ ದೊಡ್ಡದಾಗಿದೆ. ಬೆಳದಿಂಗಳು ಹಾಳು ಸುರಿಯುವಂತೆ ಅದರ ಮೇಲೆ ಬಿದ್ದಿದೆ. ತಿಪ್ಪೆಯ ಒಂದು ಬುಡದಲ್ಲಿ ಮಗು! ಕಣ್ಣು ಬಾಯಿ ದೇಹದ ಎಲ್ಲಾ ಅಂಗಗಳಲ್ಲೂ ಇರುವೆ ಹರಿದು ಕಚ್ಚಿವೆ. ಗಾಬರಿಯಿಂದ ಅವಳ ಮುತ್ತಜ್ಜಿ ಶ್ಯಾಮುವನ್ನು ಎತ್ತಿಕೊಂಡು ಓಡಿದ್ದಾಳೆ. ಹಚ್ಚಿದ ದೀಪದ ಬುಡದಲ್ಲಿ ಮಗುವನ್ನು ಮಲಗಿಸಿ ಎಲ್ಲ ಇರುವೆಗಳನ್ನು ಆರಿಸಿ ಆರಿಸಿ ತೆಗೆದಿದ್ದಾಳೆ. ಎಳೆಯ ಚರ್ಮ ಕೆಂಪಾಗಿ ದದ್ದರಿಸಿಕೊಂಡು ಅಲ್ಲಲ್ಲಿ ಗಾಯಗಳು ಆಗಿವೆ. `ದೇವಾ ಈ ಮಗುವಿನ ಬಾಯೇ ಇದನ್ನು ಉಳಿಸಿದೆ ಎಂದು ಉದ್ಗಾರ ತೆಗೆದಿದ್ದರಂತೆ’ ಮುತ್ತಜ್ಜಿ. ಇದ್ಯಾವುದೂ ನಿನ್ನ ಕಮ್ಮಲತ್ತೆಗೆ ಈಗಲೂ ನೆನಪಿಲ್ಲ. `ಏನೋ ರೀ ನನಗೇನಾಯಿತು ಎಂದು ಗೊತ್ತೇ ಇಲ್ಲ. ಎಲ್ಲಾರೂ ಹೇಳಿದರೆ ಹೌದಾ ಅನ್ನಬೇಕು. ನನ್ನಿಂದ ಈ ಮಗುವಿಗೆ ಬರಬಾರದ ಹೆಸರು ಮಾತ್ರ ಬಂದುಬಿಟ್ಟಿತು ದುರಾದೃಷ್ಟವಂತೆ ಎಂದು ಹಲುಬಿದ್ದರು’ ಎನ್ನುವಾಗ ಅಮ್ಮನ ಕಣ್ಣುಗಳು ತುಂಬಿ ಬಂದಿದ್ದವು.

`ಈಗಲೂ ನಾನು ಅಮ್ಮನ ಬೆಚ್ಚಗಿನ ಸೆರಗ ಆಸರೆಯನ್ನು ಹುಡುಕುತ್ತಿರುವೆ ತೇಜೂ. ನಾನು ಕುಡಿದದ್ದು ಹಾಲಲ್ಲ ಅವಳೆದೆಯ ನೋವಿನ ಸಾರ. ನನಗೆ ಗೊತ್ತಿರುವುದು ಕಣ್ಣೀರಲ್ಲಿ ನೆಂದ ಅವಳ ಸೆರಗಿನ ಹಸಿತನ ಮಾತ್ರ ಬೆಚ್ಚಗಿನ ಆಸರೆಯಲ್ಲ. ಅವತ್ತು ಏನೇನು ನಡೆಯಿತೋ ನಡೆಯಿತು. ಸದ್ಯ ತೇಜೂ ಅದ್ಯಾವುದರ ಅರಿವೂ ಇಲ್ಲದೆ ಇರುವುದು ಎಂಥಾ ಪುಣ್ಯ ಅಲ್ಲವಾ? ಇಲ್ಲದಿದ್ದರೆ ಅದು ನರಕವಾಗಿ ಬಿಡುತ್ತಿತ್ತು. ಅನುಭವ ಏನೆಂದು ತಿಳಿಯದೇ ಇರುವ ಸ್ಥಿತಿ ಆಲ್ಲದಿದ್ದರೆ ನನ್ನ ಸ್ಥಿತಿ ಏನಾಗುತ್ತಿತ್ತೋ! ಆದರೂ ಇದು ನೋವಲ್ಲದೆ ಇನ್ನೇನು? ಎಲ್ಲಕ್ಕಿಂತ ಮುಖ್ಯ ಚಂದ್ರ ನನ್ನ ಜೀವನದಲ್ಲಿ ಬಂದು ಇಥಾ ನೋವಿನ ತೀವ್ರತೆಗಳೆಲ್ಲಾ ಕಡಿಮೆಯಾಗಿ ಹೋಯ್ತು. ಇಲ್ಲದಿದ್ದರೆ ಕಾಡುವ ಇಂಥಾ ಸಂಗತಿಗಳು ನನ್ನ ಮುಗಿಸೇಬಿಡುತ್ತಿದ್ದವೇನೋ’

ಹೀಗೆನ್ನುವಾಗ ಅವಳ ಒಳಗು ಅಲುಗಿದ್ದಿರಬೇಕು- ಮಳೆಬಿದ್ದ ಹೂಗೊಂಚಲು ನೀರ ತೊಟ್ಟಿಕ್ಕುವಂತೆ. ಮನಸ್ಸು ದೇಹದ ಹಾಗಲ್ಲ ದೇಹಕ್ಕೆ ವಾಸ್ತವಗಳು ಮಾತ್ರ ಗೊತ್ತು ಅದಕ್ಕೆ ಅದನ್ನು ಸಂಬಾಳಿಸುವುದು ಅಸಾಧ್ಯ. ಬೇಕೆನ್ನುವುದನ್ನು ಕೊಡಲೇ ಬೇಕು ಇಲ್ಲದಿದ್ದರೆ ಅದು ಹಟ ಮಾಡುತ್ತದೆ. ಆದರೆ ಮನಸ್ಸು ಹಾಗಲ್ಲ. ವಿನಮ್ರವಾದ ಮಗುವಿನ ಹಾಗೆ ಪ್ರೀತಿಗಾಗಿ ಬೇಡುತ್ತದೆ -ಅದೂ ಕಣ್ಣು ಬಿಟ್ಟಾಗೊಮ್ಮೆ ಕನಸೊಂದು ಮೂರ್ತರೂಪವಾಗಿ ಎದುರು ಕುಳಿತು ನನ್ನನ್ಯಾಕೆ ನೀನು ಕಾಣಲಿಲ್ಲ ಎಂದು ಕೇಳಿದಂತೆ ಎಷ್ಟೋ ಸಲ ಅನ್ನಿಸುತ್ತದೆ, ಇಷ್ಟಾಗಿಯೂ ಅವಳು ಬಯಸಿದ್ದು ಸಿಗಲಿ ಎಂದರೆ ಅದು ಬಯಕೆಯಲ್ಲ. ಅದೊಂದು ಹುಡುಕಾಟ. ಹರಿವ ನೀರಲ್ಲಿ ಬೊಗಸೆಯೊಡ್ಡಿ ಮೀನನ್ನು ಹಿಡಿಯುವ ಶ್ರದ್ಧೆಯ ಆಟ.

`ಜಗತ್ತೆಲ್ಲಾ ಬೈದರೂ ಅಪ್ಪ ಮಾತ್ರ ನನ್ನ ಎಂದೂ ಏನೂ ಅನ್ನಲಿಲ್ಲ. ತೇಜೂ ಅವನಿಗೆ ನನ್ನ ಮೇಲೆ ಕರುಣೆ ಜಾಸ್ತಿ. ತನ್ನದಲ್ಲದ ತಪ್ಪಿಗೆ ಕಷ್ಟಪಟ್ಟಿದ್ದಾಳೆ ಅಂತ. ಅದಕ್ಕೆ ಕಾರಣ ತಾನೇ ಅಂತ. ಅದಕ್ಕೆ ನನ್ನ ಮಗಳು ರಾಜಕುಮಾರಿ ಎಂದ. ಅಮ್ಮ ಅಣಕಿಸಿದಳು ಚಿಂದಿಬಟ್ಟೆಯುಟ್ಟವಳು ಹೇಗೆ ರಾಜಕುಮಾರಿಯಾದಾಳು ಎಂದು. ಅಪ್ಪ ಏನಂದಿದ್ದ ಗೊತ್ತಾ? ನೋಡ್ತಾ ಇರು ಜಗತ್ತನ್ನೆ ಜಯಿಸಬಲ್ಲ ಶಕ್ತಿ ಇವಳಿಗಿದೆ. ಸಾಧಿಸದೆ ಹೋಗುತ್ತಾಳಾ? ಅಂತ. ನಾನು ಕೇಳಿದ್ದನ್ನು ತಂದುಕೊಡುತ್ತಿದ್ದ. ನನ್ನ ಕೈಲಿ ಹಿಡಿದ ಹೂಗಳನ್ನು ಸೂರ್ಯನಿಗೆ ತೋರಿಸಿ ಆದಿ ದೇವರೇ ನನ್ನ ಮಗಳ ಕೈಲಿರುವ ಈ ಮೃದುವಾದ ಹೂಗಳನ್ನು ನಿನ್ನ ಸಂಕಲ್ಪ ಬಲದಿಂದ ವಜ್ರವಾಗಿಸು ಎಂದಿದ್ದ. ಅಪ್ಪ ನನಗೆ ತುಂಬಾ ವಿಚಿತ್ರ ಅನ್ನಿಸುತ್ತಿದ್ದುದು ಈ ಕಾರಣಕ್ಕೆ. ನಾನು ಬೇಡಿದ್ದನ್ನು ತಂದುಕೊಡುತ್ತಿದ್ದ ನನಗೆ ಒಳ್ಳೆಯದಾಗಲಿ ಎಂದು ಮನತುಂಬಿ ಹರಸುತ್ತಿದ್ದ. ಆದರೆ ಯಾರೋ ಏನೋ ಹೇಳಿದರು ಎಂದರೆ ಕಂಗಾಲಾಗುತ್ತಿದ್ದ. ಅವನೇ ತಂದುಕೊಟ್ಟಿದ್ದ- ನಾನು ಆಸೆಯಿಂದ ಕೇಳಿದ್ದ ಬಣ್ಣದ ಡಬ್ಬಗಳನ್ನು ಎಸೆದು ಬಂದಿದ್ದ- ತಾನೇ ಎಸೆದು ಬಂದಿದ್ದನ್ನೂ ಗುಟ್ಟಾಗಿಟ್ಟು.

ನನ್ನ ಅಳುವನ್ನು ಸಂತೈಸಿದ್ದ, `ಅದು ಬೇಡ ಬಿಡು ಮಗು ತಾನೇ ತಾನಾಗಿ ಹೋಗಿದೆ ಎಂದ ಮೇಲೆ ಅದಕ್ಕೆ ನಿನ್ನ ಬಳಿ ಇರಲು ಇಚ್ಚೆ ಇಲ್ಲ ಎಂದೇ ತಾನೆ?’ ಎಂದಾಗ ನಾನು ಅಳುತ್ತಾ, `ಅಪ್ಪ

ನನಗೆ ಅದು ಬೇಕು’ ಎಂದು ಗೋಗರೆದಿದ್ದೆ. ಅಸೀಮವಾಗಿದ್ದ ನನ್ನ ಆಸೆಗೆ ಅವನ ನಿಟ್ಟುಸಿರೊಂದೇ ಉತ್ತರ ಎನ್ನುವಂತೆ ನನ್ನೆಡೆಗೆ ನೋಡಿದ್ದ. `ಅದೇನು ಗೆರೆಯೋ ಅದೇನು ಬಣ್ಣವೋ ನಿನ್ನ ಮಗಳು ಹೀಗೆಲ್ಲಾ ಹುಚ್ಚು ಹುಚ್ಚಾಗಿ ಆಡ್ತಾ ಇದ್ದರೆ ಸುಮ್ಮನೆ ನೋಡ್ತಾ ಇದ್ದೀಯಲ್ಲಾ’ ಎಂದಿದ್ದಳು ಅತ್ತೆ. ಅತ್ತೆ ಅಂದಿದ್ದಕ್ಕೂ ಅರ್ಥ ಇತ್ತು.. ಇರದಿದ್ದರೆ ಯಾರೂ ಮಾತಾಡುವುದಿಲ್ಲ ಆದರೆ ಅದು ನನಗೆ ಮಾರಕ ಆಗಿತ್ತು ಅಷ್ಟೇ.

ಎಲ್ಲದರಲ್ಲೂ ಚಿತ್ರ ಹುಡುಕುತ್ತಿದ್ದ ನನ್ನ ನೋಡಿ ಇದೇನಿದು ಎಂದ. ನಾನು ಚಕ್ಕುಲಿ ಎನ್ನುವುದನ್ನು ಬಿಟ್ಟು ಬೇರೆ ಎಲ್ಲವನ್ನೂ ಹೇಳಿದ್ದೆ. ಅತ್ತೆಯ ಮಗ ರಾಮುಗೆ ಅದು ತಮಾಷಿ ಅನ್ನಿಸಿದೆ. ಅವನು ಒಂದೊಂದೇ ವಸ್ತುವನ್ನು ತೋರಿಸುತ್ತಾ ಇದೇನಿದು ಎನ್ನುತ್ತಿದ್ದರೆ ನನ್ನ ಮನಸ್ಸಿನಲ್ಲಿ ಅನಂತವಾಗುತ್ತಿದ್ದ ಕಲ್ಪನೆಗೆ ಆಕಾರ ಕೊಡುವಂತೆ ಪದಗಳನ್ನು ಹೆಕ್ಕಿಕೊಳ್ಳುತ್ತಿದ್ದೆ. ಅತ್ತೆ ಇದೇನಿದು ಎಂದು ಹುಬ್ಬೇರಿಸಿದ್ದಳು. ಅಮ್ಮ ತಲೆ ಚೆಚ್ಚಿಕೊಂಡಿದ್ದಳು. ರಾಮು ಹೇ ಎಂದು ತಮಾಷಿ ಮಾಡಿದ್ದ. ನನಗಿನ್ನೂ ನೆನಪಿದೆ ಅಮ್ಮ ನನ್ನನ್ನು ರೂಮಿಗೆ ಕರಕೊಂಡು ಹೋಗಿ, `ನಿನಗೆ ಕೈ ಮುಗೀತೀನಿ ಹೀಗೆಲ್ಲ ಮಾತಾಡಬೇಡ’ ಎಂದಿದ್ದಳು. ನನಗೆ ಆಗ ಗೊತ್ತೇ ಆಗಿರಲಿಲ್ಲ ನಾನು ಏನು ಮಾತಾಡಿದ್ದೆ ಎಂದು. ಅದಾದ ಮೇಲೆ ನಾನು ನಾನಾಗಿ ಉಳಿಯದ ಅನೇಕ ಘಟನೆಗಳು ನಡೆದದ್ದು’ ಎಂದಿದ್ದಳು.

ಅವಳ ಯಾವ ಮಾತುಗಳು ಸುಳ್ಳಲ್ಲ ಆ ಹೊತ್ತಲ್ಲೂ ಅವಳ ಪ್ರಯತ್ನ ನಿರಂತರವಾಗಿತ್ತು. ಬಣ್ಣದ ಡಬ್ಬ ಇಲ್ಲದಿದ್ದರೇನು ಪೆನ್ಸಿಲ್‌ನಿಂದ ಗೀಚುತ್ತಿದ್ದ ಅವಳನ್ನು ಮಾತಾಡಿಸಲು ಹೋದಾಗ, ನನ್ನೆಡೆಗೆ ನೋಡಿ, `ತೇಜೂ ನಿಂಗೆ ಗೊತ್ತಾ ನನ್ನ ಒಳಗೆ ಗೆರೆ ಮಾತ್ರ ಇದೆ ನಾನು ಅದನ್ನು ಜೋಡಿಸಬೇಕಿರುವುದು ಹೊರಗಿನ ಸೌಂದರ್ಯದ ಸಂಗತಿಗಳ ಜೊತೆಗೆ. ಪ್ರಯತ್ನ ಪಡ್ತಾಣೇ ಇದೀನಿ ಯಾವುದೂ ಹೊಂದಾಣಿಕೆ ಆಗ್ತಾ ಇಲ್ಲ. ಜಗತ್ತು ನನ್ನ ಗೆರೆಗಳನ್ನು ಯಾಕೆ ಅಸಮ್ಮತಿಸುತ್ತಿದೆ? ಯಾವ ಶುದ್ಧತೆಗಾಗಿ ಈ ಹಾತೊರೆತ’ ಶ್ಯಾಮುವಿನ ಕಣ್ಣುಗಳು ಎಳೆಯ ಮಗುವಿನಂತೆ ನಿರ್ಮಲವಾಗಿದ್ದವು.

ಅಲ್ಲಿಂದ ಬಣ್ಣ ಡಬ್ಬದಲ್ಲಿಲ್ಲ ಎನ್ನುವ ಸತ್ಯ ಅರ್ಥವಾದವಳಂತೆ ತನ್ನ ಪ್ರಯತ್ನವನ್ನು ಮುಂದುವರೆಸಿದ್ದಳು. ಯಾವುದೂ ಅವಳ ಮಿತಿಯಲ್ಲ. ತನ್ನ ಮಿತಿಯನ್ನೂ ಅನಂತ ಸಾಧ್ಯತೆಯಾಗಿಸುವತ್ತ ಸಾಗಿಬಿಡುತ್ತಿದ್ದಳು. ಅವಳಿಗಿಷ್ಟವಾದ ಜಾಲಾರದ ಹೂಗಳನ್ನು ಕಿತ್ತು ತರುತ್ತಿದ್ದಳು. ಮಾವಿನ ಹೂವಿನ ಗೊಂಚಲನ್ನು ಹೋಲುವ ಅತ್ಯಂತ ಕಟು, ಮತ್ತ ವಾಸನೆಯ ಅದನ್ನು ಜಡೆಗೆ ಹೆಣೆಯುವಂತೆ ಕೇಳುತ್ತಿದ್ದಳು. ಮೂರು ದಿನವಾದರೂ ಹೋಗದ ವಾಸನೆಯನ್ನು ತನ್ನ ಕೂದಲಿಂದ ಮತ್ತೆ ಮತ್ತೆ ಹೀರುತ್ತಾ ಇದರ ಗಿಡವನ್ನು ಅಂಗಳದಲ್ಲಿ ನೆಡಬೇಕು ಎನ್ನುತ್ತಿದ್ದಳು. ಕಾಡು ಮರವಾದ ಅದು ಹಾಗೆಲ್ಲಾ ಅಂಗಳದಲ್ಲಿ ಬೆಳೆಯುತ್ತದೆಯೇ? ಯಾರ ಮಾತನ್ನೂ ಕೇಳದೆ ಗಿಡವಿಲ್ಲದೆ ಮರ ಆಗುವುದು ಹೇಗೆ ಸಾಧ್ಯ ಎಂದು ಹುಡುಕ ಹೋಗಿ ಕಾಡಲ್ಲಿ ಕಳೆದೆಹೋಗಿದ್ದಳು. ಏನಾದರೂ ಸರಿಯೇ ತನಗೆ ಬೇಕಾದ ಅದು ಶಾಶ್ವತವಾಗಿ ತನಗೆ ದಕ್ಕಬೇಕು ಎನ್ನುವ ಪ್ರಯತ್ನ ಎಂದೂ ಬಿಟ್ಟಿರಲಿಲ್ಲ.

ಅಮ್ಮ ರಂಗೋಲಿಯನ್ನು ಬಿಡಲಿಕ್ಕೆ ಕೆಮ್ಮಣ್ಣು ಉಂಡೆಯನ್ನು ನೀರಲ್ಲಿ ನೆನೆಸಿಟ್ಟಿದ್ದಳು. ಚಿತ್ರದ ಗುಂಗಿಗೆ ಬಿದ್ದ ಶ್ಯಾಮು ಜಾಲಾರದ ಹೂವನ್ನು ತಂದು, ಅದರಲ್ಲಿ ಅದ್ದಿ, ಪೇಪರ್ ಮೇಲೆ ಒತ್ತಿ, ಮೂಡುತ್ತಿದ್ದ ಚಿತ್ರಗಳನ್ನು ನೋಡುತ್ತಾ ಮೋಹಗೊಳ್ಳುತ್ತಿದ್ದಳು. `ಏನೇ ಮಾಡ್ತಾ ಇದ್ದೀಯ?’ ಎಂದದ್ದಕ್ಕೆ, ಮುಗ್ಧವಾದ ನೋವಿಂದ `ತೇಜು ಹೂವಿನ ಚಿತ್ರ ಹೇಗೋ ಬರೀಬಹುದು, ವಾಸನೆಯನ್ನು ಹೇಗೆ ಬರೆಯಲಿ?’ ಎಂದಿದ್ದಳು. ಹೀಗೆಂದ ತಕ್ಷಣ ತತ್ತಿಯೊಡೆದ ಪುಟ್ಟ ಕೀಟವೊಂದು ಜಗತ್ತನ್ನು ನೋಡುವ ಹಂಬಲಕ್ಕೆ ಬಿದ್ದು ಕಣ್ಣನ್ನು ತೆರೆಯಿತು. ಸೃಷ್ಟಿ ರಹಸ್ಯ ಎನ್ನುವಂತಿದ್ದ ಆದಿ ಕತ್ತಲೆ ತುಂಬಿದ್ದ ಅದರ ಕಣ್ಣಲ್ಲಿ ಮಾಯೆ ಎನ್ನುವ ಹೊರಗಿನ ಬೆಳಕು ಫಲಿಸಿತು. ಅದನ್ನೇ

ನೋಡುತ್ತಿದ್ದ ಶ್ಯಾಮು ಉದ್ಗರಿಸಿದ್ದಳು. `ತೇಜೂ ಹೇಳು ಈ ಆನಂದ ಜಗತ್ತಿನದ್ದೊ ಕೀಟದ್ದೋ!’

ಈ ಅಂಕಣದ ಹಿಂದಿನ ಬರೆಹಗಳು:
ಪದದೂಳಿಗೆ ಮುತ್ತಿಟ್ಟವನ ಜೀವದ ಗುರುತು ಎದೆ ಮೇಲೆ
ನೆತ್ತರಲೂ ರತ್ನವಾಗುವ ಗುಣ

ಅಘಟಿತ ಘಟನೆಗಳು
ಪ್ರಪಂಚ ಒಂದು ಸುಂದರ ಕನಸು

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...