ಅಘಟಿತ ಘಟನೆಗಳು

Date: 14-02-2023

Location: ಬೆಂಗಳೂರು


“ನಿಜ, ಲೋಕದ ಗೊಡವೆ ಶ್ಯಾಮೂಗೆ ಅಂದೂ ಇರಲಿಲ್ಲ. ಈಗಲೂ ಇಲ್ಲ. ತನ್ನ ಅಸ್ತಿತ್ವವನ್ನೇ ಇಲ್ಲವಾಗಿಸಿಕೊಳ್ಳುವ ಸ್ಥಿತಿಯನ್ನು ದಕ್ಕಿಸಿಕೊಳ್ಳುವ ಹುಚ್ಚಿಗೆ ಅಂದೂ ಬಿದ್ದಿದ್ದಳು ; ಅದೇ ಹುಚ್ಚು ಅವಳಿಗೆ ಇಂದೂ ಇದೆ. `ಜಗತ್ತು ಆಗುವಾಗಲೇ ಪ್ರೀತಿಯ ಜೊತೆ ದ್ವೇಷವೂ ಹುಟ್ಟಿಬಿಟ್ಟಿತು. ಬಿತ್ತದೊಳಗೆ ಮೊಳಕೆ ಇಟ್ಟವನಿಗೆ ತಿನ್ನುವ ಬಾಯನ್ನು ಸೃಷ್ಟಿಸುವುದು ತಿಳಿಯದೇ ಇರುತ್ತದೆಯೇ?” ಎನ್ನುತ್ತಾರೆ ಲೇಖಕಿ ಪಿ. ಚಂದ್ರಿಕಾ. ಅವರು ತಮ್ಮ ‘ನಡೆಯದ ಬಟ್ಟೆ’ ಅಂಕಣದಲ್ಲಿ ‘ಅಘಟಿತ ಘಟನೆಗಳು’ ವಿಚಾರದ ಕುರಿತು ವಿವರಿಸಿದ್ದಾರೆ...

ಶ್ಯಾಮುವಿನ ಕಣ್ಣುಗಳು ಹೊಳೆದವು. ಆ ಕಣ್ಣುಗಳ ಹೊಳಪನ್ನು ತಡೆಯುವುದು ಯಾರಿಗೂ ಸಾಧ್ಯವಿರಲಿಲ್ಲ. ಜಗತ್ತಿನ ಅದ್ಭುತಕ್ಕೆ ಸಾಕ್ಷಿಯಾಗುವಂತೆ ತಾನು ಎಳೆದ ಗೆರೆಯನ್ನು ಸೈಕಲ್ ಟೈರ್ ಬಿಟ್ಟುಹೋದ ಚಿತ್ರದ ಗೆರೆಯ ಜೊತೆ ಜೋಡಿಸತೊಡಗಿದ್ದಳು. ಅವಳ ಸೌಭಾಗ್ಯ ಎನ್ನುವಂತೆ ಅನಾಯಾಸವಾಗಿ ಅಲ್ಲೊಂದು ಗಿಡ, ಇಲ್ಲೊಂದು ಬಳ್ಳಿ... ಹೀಗೆ ತೂಗುವಾಗ ಅವುಗಳ ಎಲೆಗಳು ಅವಳ ಗೆರೆಗಳ ಮೇಲೆ ಬಂದು ಕೂತು ಕುತೂಹಲದಿಂದ ನೋಡುತ್ತಾ ಗೆರೆಯ ಒಳಗೆ ಚಿತ್ರಗಳಾಗುತ್ತಿದ್ದವು. ಶ್ಯಾಮು ಮಾತ್ರ ಎಲ್ಲವನ್ನೂ ಒಳಗೊಂಡಂತೆ ಬರೆಯುತ್ತಲೇ ಇದ್ದಳು- ಕಾಣದ್ದರ ಒಳಗೆ ಏನನ್ನೋ ಕಾಣುವಂತೆ. `ಶ್ಯಾಮು ಸಂಜೆ ಆಗ್ತಾ ಇದೆ ಮನೆಗೆ ಹೋಗೋಣ, ನಾಳಿನ ಹೋಂ ವರ್ಕ್ ಮಾಡಲಿಕ್ಕಿದೆ. ಇಲ್ಲದಿದ್ದರೆ ಅಮ್ಮ ಮಾತ್ರ ಅಲ್ಲ, ನಾಳೆ ಟೀಚರ್ ಕೂಡಾ ಬೈತಾರೆ’. ಶ್ಯಾಮು ತನ್ನ ಕೈಗಳನ್ನು ಆಡಿಸಿ ನನಗೆ ಹೋಗುವಂತೆ ಸೂಚಿಸಿದಳು. ಹೊರಟ ನಾನು ಅವಳೆಡೆಗೆ ತಿರುಗಿ ನೋಡಿದೆ ಅವಳಿಗೆ ಜಗತ್ತಿನ ಪರಿವೆ ಇದ್ದ ಹಾಗಿರಲಿಲ್ಲ. ಎಳೆದ ಗೆರೆಗಳ ಅಕ್ಕ ಪಕ್ಕದಲ್ಲಿ ತನ್ನ ಕೈಗಳನ್ನು, ಪಾದಗಳನ್ನು ಒತ್ತಿ ಅದನ್ನು ಮತ್ತೇನೋ ಮಾಡುತ್ತಿದ್ದಳು. ಅವಳ ಕ್ರಿಯೆ ನನ್ನ ಕಂಗೆಡಿಸಿತು- ಏನು ಮಾಡುತ್ತಿದ್ದಾಳೆ ಇವಳು? ಎಂದು. ಶ್ರದ್ಧೆಯ ಸಿಂಹಾಸನದಲ್ಲಿ ಕುಳಿತಂತೆ, ನಾಳೆ ತನ್ನ ತಲೆಯ ಮೇಲೆ ಇಟ್ಟುಕೊಳ್ಳುವ ಕಿರೀಟಕ್ಕೆ ಬೇಕಿರುವ ಮುತ್ತು, ರತ್ನಗಳ ಒಂದೊಂದನ್ನೂ ತಾನೇ ಮಾಡಿಕೊಳ್ಳುತ್ತಿದ್ದಳೇನೋ ಎಂದು ಈಗನ್ನಿಸುತ್ತದೆ. ಭವಿಷ್ಯವೊಂದು ಬಿಚ್ಚಿಹೋಗುವ ಅರಿವನ್ನು ಅವಳ ಕೈಗಳಲ್ಲಿಟ್ಟು ಗೆರೆಗಳಾಗಿಸುತ್ತಿತ್ತೇ? ಒತ್ತಿ ಒತ್ತಿ ಇಡುತ್ತಿರುವ ಅವಳ ಅಡಿಗೆ ಯಾವ ದಿವ್ಯತೆಯ ಬಾಗಿಲು ತೆರೆಯಲು ಸಿದ್ಧವಾಗಿದೆಯೋ! ಕಣ್ಣುಗಳಲ್ಲಿ ಸೂರ್ಯ ಹಳದಿ, ಕೆಂಪಾಗುತ್ತಾ ಆಗುತ್ತಾ ತುಂಡು ತುಂಡಾದ ಮಾವಿನ ಹೋಳಿನ ಹಾಗೆ ಭಾಸವಾಗತೊಡಗಿದ್ದ. ಅವಳ ಕೈಗಳು ತಪ್ಪಿದರೆ ಕಾಲುಗಳು ಚಕಚಕನೆ ಮಣ್ಣ ಮೇಲೆ ತಿರುಗುತ್ತಿದ್ದವು. ನನಗೆ ಅಲ್ಲೇ ನಿಲ್ಲುವ ತವಕ ಇದ್ದರೂ ನಿಲ್ಲಲಾರೆ. ಅವಳ ಹಾಗೆ ಪರಿವೆ ಇಲ್ಲದೆ. ಹೊರಟ ನಂತರವೂ, `ಇಲ್ಲೊಂದು ಹಕ್ಕಿ, ಅಲ್ಲೊಂದು ಚುಕ್ಕಿ, ಎಲೆ ಬಳ್ಳೀ, ಮಾಡು, ಕಾಡು...’ ಹೀಗೆ ಏನೇನನ್ನೋ ಹೇಳಿಕೊಳ್ಳುತ್ತಿದ್ದಳು. ನಾನು ನೋಡುತ್ತಿದ್ದ ನನ್ನ ಜೊತೆಯ ಹುಡುಗಿಯಲ್ಲದೆ ತೀವ್ರವಾಗಿದ್ದ ಭಾವವಾಗಿದ್ದಳು. ಅವಳ ಮಾತು ಬಹುದೂರದ ವರೆಗೂ ಕೇಳುತ್ತಲೇ ಇತ್ತು.

ಮನೆಗೆ ಬಂದಾಗ ಶ್ಯಾಮು ಅಮ್ಮ ಕಮಲತ್ತೆ (ಸಂಬಂಧ ಅಲ್ಲದಿದ್ದರೂ ನಾನು ಅವರನ್ನು ಹಾಗೆ ಕರೆಯುತ್ತಿದ್ದೆ) ಕೇಳಿದ್ದರು, `ಎಲ್ಲೇ ಶ್ಯಾಮು?’. ಕೈತೋರುತ್ತಾ, `ಅಲ್ಲಿದ್ದಾಳೆ. ಸೈಕಲ್ ಹೋದ ಟೈರಿನ ಗುರುತಿಗೂ ಅವಳು ಎಳೆದ ಗೆರೆಯ ಗುರುತಿಗೂ ಕೂಡಿಸಿ ಏನೋ ಮಾಡ್ತಾ ಇದಾಳೆ’ ಎಂದಿದ್ದೆ. ಇಳಿಮುಖವಾಗುತ್ತಿದ್ದ ಬೆಳಕನ್ನು ಮಬ್ಬುಗತ್ತಲೆ ಆವರಿಸುತ್ತಾ, ಇಡೀ ಜಗತ್ತೇ ನಿಗೂಢವಾಗುತ್ತಿದೆಯೇನೋ ಅನ್ನಿಸುವಂತಿತ್ತು. ಅಲ್ಲಿ ಗೆರೆಗಳನ್ನು ಎಳೆಯುತ್ತಾ ತನಗೆ ತಾನೆ ಮಾತಾಡುತ್ತಿದ್ದ ಶ್ಯಾಮು ಒಂದು ಚಿತ್ರದ ಹಾಗೆ ಭಾಸವಾಗುತ್ತಿದ್ದಳು. ಅವಳು ಹಾಕಿದ್ದ ಬಿಳಿ ಬಣ್ಣದ ಬಟ್ಟೆ ಮಬ್ಬುಗತ್ತಲಲಿ ಸ್ವಲ್ಪ ಸ್ವಲ್ಪವಾಗಿ ಅವಳ ಇರುವನ್ನು ತೋರುತ್ತಿತ್ತು. ಕತ್ತಲು ಅವಳನ್ನು ನುಂಗದಿರಲಿ ಎನ್ನುವುದಷ್ಟೇ ನನ್ನ ಪ್ರಾರ್ಥನೆ ಆಗಿತ್ತು. ಕಮಲತ್ತೆ ತಲೆ ಚೆಚ್ಚಿಕೊಳ್ಳುತ್ತಾ `ಅಯ್ಯೊ ದೇವ್ರೆ ಈ ಹುಡುಗೀನ ಏನಪ್ಪಾ ಮಾಡ್ಲಿ, ದಾರೀಗೆ ಹೇಗೆ ತರ್ಲಿ?’ ಎಂದು ಕಣ್ಣಲ್ಲಿ ನೀರು ಹಾಕಿಕೊಂಡಿದ್ದರು. ಶ್ಯಾಮೂನ ಕರೆತರಲು ಹೊರಟ ಕಮಲತ್ತೆಯನ್ನು ತಡೆದು ಅಮ್ಮ, `ನೋಡಿ ಕಮಲಮ್ಮ ಮಕ್ಕಳು ಬೆಳೀತಾ ಬೆಳೀತಾ ಒಬ್ಬೊಬ್ಬರು ಒಂದೊಂದು ಥರಾ ಆಗ್ತಾರೆ. ಅವಳನ್ನ ಬೈಬೇಡಿ ಹೊಡೀಬೇಡಿ’ ಎಂದೆಲ್ಲಾ ಹೇಳಿದ್ದಳು. ಕಮಲತ್ತೆಗೆ ಏನು ಮಾಡಬೇಕು ಅಂತ ತಿಳಿಯದ ಸ್ಥಿತಿ. ತನ್ನ ಮಗಳು ಹುಚ್ಚಿಯಾ ಬೆಪ್ಪಾ ಇಲ್ಲ ಇದೇನು ಶಿವಲೀಲೆಯಾ? ಎನ್ನುವ ಗೊಂದಲ. `ಇದು ಹುಟ್ಟಿದಾಗ ದುರಾದೃಷ್ಟವನ್ನು ಹೊತ್ತು ತಂದಿತ್ತು. ಹೋಗಲಿ ಎಂದರೆ ಈ ಹುಚ್ಚು ಬೇರೆ. ಜಗತ್ತಿಗೆ ಹುಚ್ಚೊಂದನ್ನು ನಾನು ಹೀಗೆ ತರ್ತೀನಿ ಅಂತ ಅಂದುಕೊಳ್ಳಲೇ ಇಲ್ಲಾರೀ’ ಎಂದು ಅಮ್ಮನ ಹತ್ತಿರ ಹೇಳಿಕೊಂಡು ಅತ್ತಿದ್ದರು. ಶ್ಯಾಮು ದುರಾದೃಷ್ಟವಂತಳಾ? ಜಗತ್ತಿನಲ್ಲಿ ಯಾರಿಗೂ ಕಾಣದ್ದು ಅವಳಿಗೆ ಕಾಣುತ್ತಿದೆ. ನನಗೆ ಆಗದೇ ಇರುವ ಯಾವುದೋ ಅವಳಲ್ಲಿ ಸಂಭವಿಸುತ್ತಿದೆ. ಅದಕ್ಕೇ ಅವಳು ಎಲ್ಲರಿಗಿಂತ ವಿಶೇಷ. ಹೀಗೆಲ್ಲ ಅಂದು ಹೇಳಲಿಕ್ಕೆ ನನ್ನ ಹತ್ತಿರ ಈ ಪದಗಳ್ಯಾವುದೂ ಇರಲಿಲ್ಲ ಆದ್ದರಿಂದ ಸುಮ್ಮನಾಗಿ ಬಿಟ್ಟಿದ್ದೆ. ಶ್ಯಾಮು ನೀವೆಂದುಕೊಂಡ ಹಾಗೆ ಅಲ್ಲ ಎನ್ನುವುದನ್ನು ತುಟಿ ತುದಿಯಲ್ಲೆ ಹಿಡಿದು - ಕಮಲತ್ತೆಯ ಸಂಕಟ ನೋಡಿ - ಮಾತಾಡದೆ ಉಳಿದೆ.

ನಿಜ, ಲೋಕದ ಗೊಡವೆ ಶ್ಯಾಮೂಗೆ ಅಂದೂ ಇರಲಿಲ್ಲ. ಈಗಲೂ ಇಲ್ಲ. ತನ್ನ ಅಸ್ತಿತ್ವವನ್ನೇ ಇಲ್ಲವಾಗಿಸಿಕೊಳ್ಳುವ ಸ್ಥಿತಿಯನ್ನು ದಕ್ಕಿಸಿಕೊಳ್ಳುವ ಹುಚ್ಚಿಗೆ ಅಂದೂ ಬಿದ್ದಿದ್ದಳು ; ಅದೇ ಹುಚ್ಚು ಅವಳಿಗೆ ಇಂದೂ ಇದೆ. `ಜಗತ್ತು ಆಗುವಾಗಲೇ ಪ್ರೀತಿಯ ಜೊತೆ ದ್ವೇಷವೂ ಹುಟ್ಟಿಬಿಟ್ಟಿತು. ಬಿತ್ತದೊಳಗೆ ಮೊಳಕೆ ಇಟ್ಟವನಿಗೆ ತಿನ್ನುವ ಬಾಯನ್ನು ಸೃಷ್ಟಿಸುವುದು ತಿಳಿಯದೇ ಇರುತ್ತದೆಯೇ? ಆದಿಗೂ ಅಂತ್ಯಕ್ಕೂ, ಹುಟ್ಟಿಗೂ ಸಾವಿಗೂ ಅಂಥಾ ವ್ಯತ್ಯಾಸವೇನೂ ಇಲ್ಲ. ಚಂದ್ರನ ಪ್ರೀತಿ ದಕ್ಕುವವರೆಗೂ ಅದಿತ್ತು ಎನ್ನುವುದೇ ಗೊತ್ತಾಗಿರಲಿಲ್ಲ. ಗೊತ್ತಾಗಿದ್ದೇ ಎಷ್ಟು ಸುಂದರ ಕನಸುಗಳೆಲ್ಲಾ ನನ್ನ ಸುತ್ತಾ ಸುತ್ತಿಬಿಟ್ಟವು. ಅಲ್ಲಿ ಪ್ರೀತಿಗೂ ಯುದ್ಧಕ್ಕೂ ಯಾವ ಯಾವ ಅರ್ಥಗಳೆಲ್ಲಾ ದಕ್ಕಿ ಬಿಟ್ಟವು. ಈಗ ...? ಇರುವುದು ಹೋಗುತ್ತದೆ, ಹೋಗುವುದು ಮತ್ತೆ ಬರುತ್ತದೆ. ನಿಜ ಹೇಳು ತೇಜೂ ಜಗತ್ತಿನ ಕೊನೆಯ ಪ್ರೀತಿಯನ್ನು, ಕೊನೆಯ ದ್ವೇಷವನ್ನು ಯಾರು ಹೇಳಲು ಇರುತ್ತಾರೆ? ಹೇಳುವವರು ಉಳಿದಿದ್ದರೆ ಅದು ಕೊನೆಯದಾದರೂ ಹೇಗಾಗುತ್ತದೆ. ಒಂದೊಮ್ಮೆ ಆ ಕೊನೆ ಇರುತ್ತೆ ಎನ್ನುವುದಾದರೆ ಅದು ನಾನೇ ಆಗಬೇಕು, ಅಷ್ಟು ತೀವ್ರವಾದದ್ದನ್ನೆಲ್ಲಾ ಅನುಭವಿಸಿಯೇ ಬಿಡಬೇಕು ಅಂತ ಅನ್ನಿಸಿಬಿಡುತ್ತೆ. ಎಂಥಾ ಸ್ವಾರ್ಥಿ ನಾನು! ನನ್ನ ಜೊತೆ ಜಗತ್ತು ಸತ್ತು ಹೋಗಲಿ ಯಾಕೆ? ಬದುಕುವ ಹಕ್ಕು ಎಲ್ಲರದ್ದೂ ಆದಾಗ ಸಾಯಲಿ ಎಂದುಕೊಳ್ಳುವ ಕ್ರೂರತ್ವಕ್ಕೆ ನಾನೂ ಬಲಿ ಬೀಳುವುದು ಯಾಕೋ? ಅನುಭವ ಎಲ್ಲರ ಹಕ್ಕಲ್ಲವಾ?’ ಎಂದ ಶ್ಯಾಮೂನ ಕಡೆ ನೋಡಿದೆ. ಅವತ್ತು ಶ್ಯಾಮು ತನ್ನ ಕೈಗಳಿಂದ ಪಾದಗಳಿಂದ ಗೆರೆಗಳನ್ನು ಜೋಡಿಸಿ, ಜೋಡಿಸಿ ಆಯಾಸವೂ ಗೊತ್ತಾಗದಂತೆ ತೀವ್ರವಾಗುತ್ತಿದಂತೆ ನೆಲದಿಂದ ಎದ್ದ ದೂಳು ಎಲ್ಲವನ್ನು ಮಸುಕಾಗಿಸುತ್ತಾ ಹೋಗಿತ್ತು. ಅಮ್ಮ ಬೇಡವೆಂದರೂ ಕಮಲತ್ತೆ ಅವಳನ್ನು ಹೊಡೆಯಲೆಂದೆ ಕಡ್ಡಿಯನ್ನು ತೆಗೆದುಕೊಂಡಾಗ, ಅವರೆಡೆಗೆ ನೋಡುತ್ತಾ ಶ್ಯಾಮು, `ಅಮ್ಮಾ ನೋಡು ಗೆರೆಗಳೇ ಇಲ್ಲ’ ಎಂದಿದ್ದಳು. ದೂಳಿಳಿದ ಮೇಲೆ ಗೊತ್ತಾಗಿದ್ದು ಅವಳು ಅಲ್ಲಿ ಏನೂ ಉಳಿಸದೆ ಅಳಿಸಿಬಿಟ್ಟಿದ್ದಾಳೆಂದು. ಅಂದು ನಾನು ಶ್ಯಾಮುವಿನ ಈ ಕ್ರಿಯೆಯನ್ನು ನೋಡುತ್ತಲೇ ಇದ್ದೆ. ಕೊನೆಗೆ ಬರೆದೂ ಬರೆದೂ ಸಾಕಾಗಿ ಕೊನೆಗೆ ಅಷ್ಟು ಹೊತ್ತಿನ ತನ್ನ ಶ್ರಮ, ಕಲ್ಪನೆ ಯಾವುದೂ ಉಳಿಯದಂತೆ ಎಲ್ಲವನ್ನೂ ಅಳಿಸಿಬಿಟ್ಟಿದ್ದಳು. ಹಾಗಾದ್ರೆ ಇಷ್ಟು ಹೊತ್ತಿನ ತನಕ ಬರೆದದ್ದರ ಸಾರ್ಥಕತೆ ಏನು ಎಂದು ಅವಳನ್ನೇ ಅಚ್ಚರಿಯಿಂದ ನೋಡಿದ್ದೆ.

ಜಗತ್ತಿನ ಸಕಲ ವಿದ್ಯಮಾನಗಳೂ ದಿಕ್ಕೆಟ್ಟಂತೆ ಅವಳು ಜೋಡಿಸುವುದನ್ನು ನೋಡಿತ್ತು. ಅಳಿಸುವುದನ್ನೂ ಕೂಡಾ. ಅರೆ ಹೀಗೆಂದರೇನು? ಗೀಳಿಗೆ ಬಿದ್ದಂತೆ ಮಾತಾಡುತ್ತಿದ್ದೇನಾ? ಇಂಥಾ ಮಾತುಗಳ ಅರ್ಥ ಏನು? ನೋಡಿದ್ದು ಅಳಿಸಿದ್ದು ಎರಡು ನೋಟಕ್ಕೆ ದಕ್ಕಿದ್ದು. ಅಂದರೆ ಆ ಕ್ರಿಯೆ ಹೊರಗಿನದ್ದಾ? ಏನೂ ಇಲ್ಲದರ ಕಡೆ ಏನನ್ನೋ ಮೂಡಿಸಿದ್ದಳಲ್ಲ ಹಾಗಾದರೆ ಅದು ಒಳಗಿನದ್ದಾ? ಒಳಗೆ ಹೊರಗೆ ಗೆರೆಗಳನ್ನು ಜೋಡಿಸಲು ಹೆಣಗುವ ಶ್ಯಾಮು ತನ್ನ ಸಂಬಂಧಗಳೆಲ್ಲಾ ಕಣ್ಣೆದುರೇ ಮುರಿದು ಹೋಗುತ್ತಿದ್ದರೂ ಸುಮ್ಮನೆ ಯಾಕೆ ಉಳಿದಳು? ಸಂಬಂಧಗಳ ಅರ್ಥ ಅದು ಹೊರಗಿನದ್ದಾ? ಅವಳು ಗೆರೆಗಳನ್ನು ಮಾತ್ರ ಜೋಡಿಸುವವಳಾ?

ನಖ ಶಿಖಾಂತ ತುಂಬಿದ ದೂಳನ್ನು ಕಮಲತ್ತೆ ತಮ್ಮ ಕೈಗಳಿಂದ ವದರುತ್ತಾ, ಬೈಯ್ಯುತ್ತಲೇ ಇದ್ದರು. ವದರಿದ್ದು ದೂಳನ್ನೋ ಅವಳನ್ನೋ ಗೊತ್ತಾಗದೆ ನೋಡುತ್ತಾ ನಿಂತ ನನಗೆ, `ನಿಮ್ಮಮ್ಮ ಒಲೆಯಲ್ಲಿ ಅಂಟವಾಳ ಕಾಯಿ ಹಾಕಿದ್ದಾರಂತೆ. ಇಸ್ಕೊಂಡ್ ಬಾ. ಇವತ್ತು ಈ ಹುಚ್ಚು ಬಿಟ್ಟ್ ಹೋಗಬೇಕು ಹಾಗೆ ಸ್ನಾನ ಮಾಡಿಸ್ತೀನಿ’ ಎಂದು ಬಕೇಟಿಗೆ ನೀರನ್ನು ತುಂಬುತ್ತಿದ್ದರು. ಅಚ್ಚರಿಯನ್ನು ನೋಡುವಂತೆ ಬಕೇಟಿನ ಒಂದು ಕಡೆ ಸೀಳಿ ಅಲ್ಲಿಂದ ಹರಿಯುತ್ತಿದ್ದ ನೀರಿನ ಗೆರೆಯನ್ನೇ ನೋಡುತ್ತಾ ಕೂತಿದ್ದಳು ಶ್ಯಾಮು. `ಬಟ್ಟೆ ಬಿಚ್ಚೇ’ ಎಂದು ಕಮಲಮ್ಮ ಅವಳ ತಲೆ ಮೇಲೆ ಮೊಟುಕಿ, `ಅಲ್ಲೇನು ಜಗತ್ತಿನ ಅದ್ಭುತ ಕಾಣ್ತಾ ಇದೆ ಅಂತ ನೋಡ್ತಾ ಇದೀಯ?’ ಎಂದಾಗ, `ಅಮ್ಮಾ ಗೆರೆ ಯಾಕೆ ಒಂದೊಂದು ಸಲ ಒಂದೊಂದು ರೀತಿ ಆಗುತ್ತೆ’ ಎಂದು ಕೇಳಿದ್ದಳು. `ನನ್ನ ಕರ್ಮಕ್ಕೆ, ನಿನ್ನಂಥ ಮಗಳನ್ನ ಹೆತ್ತ ತಪ್ಪಿಗೆ ನರಳ್ತಾ ಇದೀನಿ. ಹಾಗೆ ಆ ಗೆರೆಯೂ ಯಾವ ಯಾವ ಹೊತ್ತಿನಲ್ಲೋ, ಯಾರ ಯಾರ ಕೈಗೋ ಸಿಕ್ಕು ಹೀಗಾಗುತ್ತೆ’ ಎಂದಿದ್ದರು.

ಅಂದು ರಾತ್ರಿ ಅಮ್ಮನ ಮಾತನ್ನೂ ಅವಳು ಗಂಭೀರವಾಗಿ ಯೋಚಿಸಿದ್ದಳು. ಯೋಚಿಸಿದ್ದಳು ಎಂದು ನನಗೆ ಗೊತ್ತಾಗಿದ್ದು ಮಾರನೆಯ ಬೆಳಗ್ಗೆ.

ಎಂದಿನಂತೆ ಶಾಲೆಗೆ ಹೋಗುವ ದಾರಿಯಲ್ಲಿ ಕಡ್ಡಿ ಹಿಡಿದು ನಿಂತ ಶ್ಯಾಮುವನ್ನು ಕಂಡೆ. ಏನೆ? ಎಂದಾಗ, ಸತ್ಯವನ್ನು ಕಂಡುಕೊಳ್ಳುವ ದಾಷ್ಟ್ಯಾತದಲ್ಲಿ ಕಡ್ಡಿಯನ್ನು ನನ್ನ ಕೈಗೆ ಕೊಟ್ಟು, `ನೀನೂ ಗೆರೆ ಎಳೀ ನಾನೂ ಎಳೆಯುತ್ತೇನೆ. ಅಮ್ಮ ಹೇಳಿದ್ದಳಲ್ಲ ಯಾವ ಯಾವ್ ಹೊತ್ತಲ್ಲಿ ಯಾರ ಯಾರ ಕೈಲಿ ಸಿಕ್ಕು ಗೆರೆ ಏನೇನೋ ಆಗುತ್ತೆ ಅಂತ, ನೋಡೇಬಿಡೋಣ’ ಎಂದಳು. ಇದ್ಯಾಕೋ ಅತಿ ಆಯ್ತು ಅನ್ನಿಸಿ, `ಅಲ್ವೇ ಆತುಗಳೆಲ್ಲಾ ನಿಮ್ಮಮ್ಮ ನಿನ್ನ ಬೈದಿದ್ದಲ್ವಾ’ ಎಂದೆ. `ಹುಂ ದೊಡ್ಡವರು ಹೇಳಿದ್ದರಲ್ಲಿ ಸತ್ಯ ಇರುತ್ತಲ್ವಾ? ಅದಕ್ಕೆ ನೋಡೇ ಬಿಡೋಣ’ ಎನ್ನುತ್ತಾ ನನ್ನ ಕೈಲಿ ಗೆರೆ ಹಾಕಿಸಿದಳು, ಸ್ಕೂಲಿಗೆ ಹೋಗಲ್ಲ ಎಂದು ಅಳುತ್ತಿದ್ದ ಬೆಳ್ಳಿ, ಅವನನ್ನು ಬಲವಂತದಿಂದ ಶಾಲೆಗೆ ಕರೆದೊಯ್ಯುತ್ತಿದ್ದ ಚಿನ್ನಮ್ಮ, ಅಕ್ಷರ ಕಲಿಕೆಯಲ್ಲಿ ಸುಖ ಕಾಣುತ್ತಿದ್ದ ಸಾಮಿ ಹೀಗೆ ಎಲ್ಲರ ಹತ್ತಿರವೂ ಗೆರೆ ಹಾಕಿಸಿದ್ದಳು. ಕೆಲವು ಆಳವಾಗಿಯೂ, ಕೆಲವು ಮೇಲು ಮೇಲು ಮಾತ್ರವೂ, ಇನ್ನು ಕೆಲವು ಸಣ್ಣದಾಗೂ, ಇನ್ನಷ್ಟು ಉದ್ದವಾಗೂ, ತೆಳುವಾಗಿ, ಗಾಢವಾಗಿ... ಹೀಗೆ ಏನೇನೋ ಆಗಿ ಗೆರೆಗಳು ಬಿದ್ದುಕೊಂಡಿದ್ದವು. ಅವುಗಳನ್ನು ಬಗ್ಗಿ ನೋಡುತ್ತಾ `ಯಾಕೆ ಹೀಗೆ? ಎಲ್ಲವೂ ಗೆರೆಯೇ; ಆದರೆ ಒಂದಿದ್ದ ಹಾಗೆ ಒಂದಿಲ್ಲ’ ಎಂದು ಉದ್ಗಾರ ತೆಗೆದಿದ್ದಳು. ಇವಳೇನು ಮಾಡುತ್ತಿದ್ದಾಳೆ? ಏನನ್ನು ಹುಡುಕುತ್ತಿದ್ದಾಳೆ? ಎಂದು ಅರ್ಥವಾಗದೆ ಹೋಗಿತ್ತು. ಆದರೆ ಏನನ್ನೋ ಕಂಡುಕೊಳ್ಳುವವಳಂತೆ ಶ್ಯಾಮು ಓಡುತ್ತಲೇ ಇದ್ದಳು.

ಎಳೆದ ಗೆರೆಗಳು ಚಿತ್ತದ ಆಟವಾ? ಕೈಗಳ ಕಸುವಾ? ಒಳಗಿನ ತಲ್ಲಣವಾ? ಹೊರಗಿನ ಪ್ರಚೋದನೆಯಾ? ಸುಲಭವಾಗಿ ಹೇಳುವ ಪದ ಒಂದಿದೆ ಪ್ರವಾಹ. ಶ್ಯಾಮು ಒಂದು ಭಾವ ಪ್ರವಾಹವೇ! ಅವಳ ಆ ಶಕ್ತಿ ಎಳೆಯ ಕೈಗಳನ್ನು ದಾಟಿ ಇಲ್ಲಿಯವರೆಗೂ ಬಂತಲ್ಲ! ಬರುವಾಗ ಎಷ್ಟೆಲ್ಲಾ ಸಂಗತಿಗಳನ್ನೂ ಜೊತೆಯಲ್ಲಿ ತಂದಳಲ್ಲ!! ಗೆರೆ ಹಾಕುವಾಗ ಏರಿಳಿತಗಳಿರಬಾರದು ಗಣಿತದ ಮೇಷ್ಟುç ಹೇಳುತ್ತಿದ್ದರೆ, ನಡುಗುತ್ತಿದ್ದ ಅವಳ ಕೈಗಳು ಗೆರೆಗಳ ಏರಿಳಿತಗಳನ್ನು ಸ್ಪಷ್ಟವಾಗಿ ದಾಖಲಿಸುತ್ತಿದ್ದವು. ಕೇಳಿದರೆ ಲೆಕ್ಕ ನನಗರ್ಥ ಆಗಲ್ಲ ಎನ್ನುತ್ತಿದ್ದಳು. ನನಗೆ ಈಗಲೂ ನೆನಪಿದೆ ಲೆಕ್ಕದ ಮೇಷ್ಟ್ರು ಪ್ರತಿಸಲ ಒಂದೊಂದು ಉತ್ತರ ಹೇಳುವ (ಮಗ್ಗಿಯನ್ನೂ ಸೇರಿದಂತೆ) ಅವಳ ರೀತಿಗೆ ಬೇಸತ್ತು ದಿನವಿಡೀ ಬಿಸಿಲು ಬೀಳುವ ಕಡೆ ನಿಲ್ಲಿಸಿದ್ದರು. ಅವಳ ಬಿಳಿಯದಾದ ಮೈ ಪೂರಾ ಬಿಸಿಲ ಝಳಕೆ ಕೆಂಪಾಗಿ ಸಂಜೆಯ ಹೊತ್ತಿಗೆ ನವೆ ಶುರುವಾಗಿತ್ತು.

ಶ್ಯಾಮೂಗೆ ಇದ್ಯಾವುದರ ಪರಿವೆಯೂ ಇರಲಿಲ್ಲ. ಶಾಲೆಬಿಟ್ಟು ಮನೆಗೆ ಹೋಗುವಾಗ ದಾರಿಯಲ್ಲಿ ಅವಳನ್ನು, `ಅಲ್ವೇ ಯಾಕೇ ಹೀಗೆ ಮಾಡ್ತೀಯ. ಬಾಯಿಪಾಠ ಮಾಡಿಬಿಟ್ಟರೆ ಆದೀತಲ್ಲಾ? ಬೇಕಾದ್ರೆ ಸಂಜೆ ನನ್ನ ಜೊತೆ ನೀನೂ ಕುತ್ಕೋ. ನಾನೇ ಹೇಳಿಕೊಡ್ತೀನಿ. ಲೆಕ್ಕ ಅಂದ್ರೆ ಹೀಗೆ ಅಲ್ಲವಾ? ಇಲ್ಲದೆ ಇದ್ದದ್ದನ್ನ ಹೇಳಿದ್ರೆ ಹೇಗೆ?’ ಎಂದೆ. ನಾವು ಅದೇ ವೇಳೆಗೆ ಮಾವಿನ ಮರದ ಕೆಳಗೆ ಬಂದಿದ್ದೆವು. ಅವಳು ನಗುತ್ತಾ, `ಈ ಮರದಲ್ಲಿ ಎಷ್ಟು ಕಾಯಿಗಳಿವೆ ಎಂದು ಹೇಳು’ ಎಂದಳು. `ಎಣಿಸಿದರೆ ಲೆಕ್ಕ ಸಿಗುತ್ತೆ’ ಎಂದೆ. `ಇಲ್ಲ ಈ ಸಲದ ಲೆಕ್ಕ ಅಲ್ಲ, ಹೋದ ಸಲದ ಲೆಕ್ಕ, ಬರುವ ಸಲದ ಲೆಕ್ಕ ಹೇಳು’ ಎಂದಳು. `ಇದ್ಯಾವ ವಿಚಿತ್ರ ಆಟ ಆಡ್ತಾ ಇದೀಯ?’ ಎಂದೆ. `ನಿನಗೆ ಗೊತ್ತಿರುವ ಲೆಕ್ಕದಲ್ಲಿ ಯಾವ ಕಾಲಕ್ಕೂ ಒಂದೇ ಮಗ್ಗಿ, ಒಂದೆ ಗುಣಾಕಾರ, ಭಾಗಾಕಾರ. ಆದರೆ ಈ ಮರಕ್ಕೆ ಪ್ರತಿ ಸಲದ ಲೆಕ್ಕ ಬೇರೆ ಬೇರೆಯೇ ಅಲ್ವಾ? ಎಂದಳು. ನಾನು ತಲೆ ಆಡಿಸಿದೆ. `ಅಂದುಕೊಳ್ತೇನೆ ನಮ್ಮ ಲೆಕ್ಕದ ಮೇಷ್ಟಿçಗೆ ಇಂಥಾ ಲೆಕ್ಕವನ್ನು ಹೇಳಿಕೊಡಬೇಕೆಂದು. ಆದರೆ ಏನು ಮಾಡಲಿ? ಅವರ ಕೈಲಿದ್ದ ಕೋಲು ನನ್ನ ಮಾತಾಡಲಿಕ್ಕೆ ಬಿಡೊಲ್ಲ’ ಎಂದಳು.

ಹೀಗೆ ನಿಖರವಲ್ಲದ ಲೆಕ್ಕಕ್ಕಾಗಿ ಬಾಲ್ಯದಿಂದಲೂ ಕನಸುತ್ತಿದ್ದ ಶ್ಯಾಮೂ, ಸರಳ ರೇಖೆ ಎಂದು ಕಿಟಕಿಯ ಕಂಬಿಯನ್ನು ತೋರಿಸಿದರೆ, ಗೆದ್ದಲು ತಿಂದು ವಕ್ರವಾಗಿದ್ದ ಕಿಟಕಿಯ ಮರದ ದಿಂಡನ್ನು ನೋಡುತ್ತಿದ್ದಳು. `ನಿನ್ನ ಕಣ್ಣು ಎಲ್ಲಾಡುತ್ತಿದೆ ಎಂದು ಗೊತ್ತು’ ಎನ್ನುತ್ತಾ ಮೇಷ್ಟ್ರು ತಲೆಗೆ ಮೊಟಕಿದಾಗ ಅವಳ ಕಣ್ಣುಗಳು ಖಾಲಿತನದಲ್ಲಿ ತುಂಬಿಕೊಂಡಿದ್ದವು.

ಚೀಲವನ್ನು ಹೆಗಲಿಗೆ ಹಾಕಿಕೊಂಡು ನೇತಾಡುತ್ತಾ ಹೊರಟ ಶ್ಯಾಮು ವಾಲಿಕೊಂಡ ಒಂದು ಗೆರೆಯ ಹಾಗಿರುತ್ತಿದ್ದಳು. ನನಗೆ ಕಂಡಿದ್ದು ಅವಳ ಒಳಗಿನ ನರಳಿಕೆಯಾ? ಅಥವಾ ಬದುಕಿನ ಜೊತೆ ಸಾಮರಸ್ಯವನ್ನು ಸ್ಥಾಪಿಸಿಕೊಳ್ಳುವ ಮಾರ್ಗವಾ? ಸಾಮರಸ್ಯವೇ ಆದರೆ ಚಂದ್ರನ ಜೊತೆ ಅವಳ ಸಂಬಂಧ ಯಾಕೆ ಮುರಿಯಿತು? ಸಂಕೀರ್ಣವಾದ ಸಂಬಂಧದಲ್ಲೂ ಗೆರೆಯನ್ನೇ ಹುಡುಕಿದಳಾ? ಹನಿ ಹುಟ್ಟಿದ ಮೇಲೆ ಚಂದ್ರ ಶ್ಯಾಮುವಿನ ಮೇಲೆ ತುಂಬ ಡಿಪೆಂಡ್ ಆಗಿದ್ದ. ಪ್ರೀತಿಯ ಮಗಳನ್ನು ಕೊಟ್ಟ ಶ್ಯಾಮು ಅವನ ಸರ್ವಸ್ವ ಆಗಿದ್ದಳು. ಆದರೆ ಆಮೇಲೆ ...

`ನಾನೂ ತುಂಬಾ ಅರ್ಥಗಳನ್ನು ಹುಡುಕಬಾರದಿತ್ತು ತೇಜೂ, ಯಾವುದರಲ್ಲೂ. ಅಮ್ಮ, ಅಪ್ಪ, ಚಂದ್ರ, ಹನಿ ಅಥವಾ ನೀನು ಕೂಡಾ... ಯಾರಿಗೂ ಅರ್ಥದ ಹಿಂದೆ ಹೋಗುವುದೇ ಬೇಡವಾಗಿದೆ. ಯಾರು ಯಾವುದನ್ನು ಎದುರು ನೋಡುತ್ತಾರೋ ತಿಳಿಯದು. ಆದರೆ ಎದುರಿನವರು ನಿರೀಕ್ಷೆ ಮಾಡುವುದನ್ನು ನಾವು ಕೊಡದಾದಾಗ ಅವರಿಗೆ ನಿಷ್ಪ್ರಯೋಜಕರಾಗಿಬಿಡುತ್ತೇವೆ. ಎಲ್ಲವೂ ಜೀವಕ್ಕಂಟಿಕೊಂಡ ಗಾಯಗಳೇ. ಅದಕ್ಕೆ ನಾವೆಲ್ಲಾ ಮೇಲೆ ಮೇಲೆ ಮುಲಾಮು ಸವರುತ್ತಿದ್ದೇವೆ. ಸವರಿದ್ದು ಆಳಕ್ಕೆ ಇಳಿಯದು. ಯಾಕೆಂದರೆ ಈ ಮುಲಾಮು ಮೇಲನ್ನು ಮಾತ್ರ ಚಂದ ಮಾಡುತ್ತದೆ. ಆಳದ ಬಿರುಕುಗಳು ಹಾಗೇ ಉಳಿದುಬಿಡುತ್ತವೆ. ಹಾಗೆ ಒಳ ಹೊರಗುಗಳನ್ನು ಮಾಯಿಸುವ ಸಂಗತಿಗಳು ಘಟಿಸುವುದು ಅಪರೂಪ ಅಥವಾ ಅವೆಲ್ಲವೂ ಅಘಟಿತ ಘಟನೆಗಳೇ. ಹುಡುಕುತ್ತಾ ಹೋದರೆ ಏನೂ ಸಿಗುವುದಿಲ್ಲ’ ಎನ್ನುತ್ತಾ ನನ್ನ ಕೈಗಳನ್ನು ಹಿಡಿದಳು. ಅವಳ ಬೆಚ್ಚಗಿನ ಸ್ಪರ್ಷಕ್ಕೆ ನನ್ನನ್ನು ನಾನು ತೆತ್ತುಕೊಂಡಿದ್ದೇನೆ ಯಾಕೆಂದರೆ ಅಲ್ಲಿರುವ ಆಪ್ತತೆ ನನಗೆ ಬೇರೆಲ್ಲು ಕಂಡಿಲ್ಲ. ರಕ್ತಕ್ಕೆ ಹತ್ತಿದ ಬಣ್ಣದಂತೆ ನನ್ನ ಅವಳ ಬಂಧ. ಐವತ್ತೆರಡು ವರ್ಷಗಳ ದೀರ್ಘ ಬದುಕಿನಲ್ಲಿ ಅಪರೂಪ ಎನ್ನುವ ಹಾಗೆ ನಡೆದು ಬಂದಿದೆ. ಆದ್ದರಿಂದಲೇ ಅವಳ ಮಾತಿನ ಆಳದಲ್ಲಿ ಹುದುಗಿದ ಅನೇಕ ಸಂಗತಿಗಳು ಧುತ್ತೆಂದು ಕಣ್ಣೆದುರು ತೆರೆದುಕೊಂಡವು.

ಈ ಅಂಕಣದ ಹಿಂದಿನ ಬರೆಹಗಳು:
ಪ್ರಪಂಚ ಒಂದು ಸುಂದರ ಕನಸು
ಕಾಲು ಜಾರಿ ಬಿದ್ದವನು ಹಲವರಿಗೆ ದಾರಿ ತೋರುವನು
ಕಂದನಂತೆ ಚಂದಿರನ ಬಾನು ಎತ್ತಿ ಆಡಿಸುತಲಿಹುದು
ತೇಲಿಸು ಇಲ್ಲ ಮುಳುಗಿಸು
ಭಾವಶುದ್ಧಿಯೇ ಆಧ್ಯಾತ್ಮ
ಕಿರಿದನ್ನು ಕಿರಿದರಲ್ಲೇ ನೋಡು
ಅನುಭವದಲ್ಲಿ ಘನೀಭವಿಸುವ ವಿಶ್ವದ ರಹಸ್ಯಮಯ ಸಂಗತಿಗಳು

ಬಿಟ್ಟುಬಿಡುವುದೆಂದರೂ ಕಟ್ಟಿಕೊಳ್ಳುವುದೇ
ಗಾಳದ ದಾರ ದೂರಕ್ಕೆ ಬಿಡುವುದು ಮೀನಿನ ಆಸೆಗೆ
ಕಳಚಿಕೊಳ್ಳುವುದೂ ಆಟದ ಭಾಗವೇ.
ಸರಿದ ಸೆರಗಿನಲ್ಲಿ ಅಡಗಿದ್ದು ಸೂರ್ಯ ಚಂದ್ರ
ಪ್ರಾರ್ಥನೆ; ಪದಾರ್ಥವಲ್ಲ, ಪರಾರ್ಥ
ಜಗತ್ತಿನ ಮೇರು ತಾಯಿ
ನಿಧಿಯ ಕನವರಿಕೆ
ಅವಳ ಧ್ಯಾನಕ್ಕೆ ಒಳಿತೇ ಗುರಿ
ಅನುಬಂಧಗಳ ಲೀಲೆ
ಕನಸಿನೊಳಗಿನ ನನಸು
ನೀಲಿ ಕಣ್ಣುಗಳ ಮುತ್ತಜ್ಜಿ ಮತ್ತು ನಾನು

 

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...