ನೆತ್ತರಲೂ ರತ್ನವಾಗುವ ಗುಣ

Date: 21-02-2023

Location: ಬೆಂಗಳೂರು


“ನಡುಹಗಲಲ್ಲಿ ಕೆರೆಯ ದಂಡೆಯಲ್ಲಿ ಕೂತು ಕಲ್ಲುಗಳನ್ನು ಒಗೆಯುತ್ತಾ ಅವು ಸೃಷ್ಟಿಸುತ್ತಿದ್ದ ತರಂಗಗಳನ್ನು ನೋಡುತ್ತಾ ಶ್ಯಾಮು ಕೂಗುತ್ತಿದ್ದಳು, `ಓಹ್ ನೋಡು ಎಷ್ಟು ಚೆನ್ನಾಗಿದೆ’. ಅವಳ ಹಾಗೆ ಒಳಗೆ ಖುಷಿ ನನಗೂ ಇತ್ತು. ಕಲ್ಲು ಬೀಸಿ ಒಗೆದರೆ ಚಿಕ್ಕ ಕಲ್ಲಾದರೆ ಚಿಕ್ಕ ವರ್ತುಲ ದೊಡ್ಡದಾದರೆ ದೊಡ್ಡದು. ಕೆಲವೊಮ್ಮೆ ವರ್ತುಲ ನಿರ್ಮಿಸದೆ ಕಲ್ಲು ಮುಳುಗಿ ಕೆಲ ಗುಳ್ಳೆಗಳನ್ನು ಮಾತ್ರ ನಿರ್ಮಿಸುತ್ತಿತ್ತು,” ಎನ್ನುತ್ತಾರೆ ಲೇಖಕಿ ಪಿ. ಚಂದ್ರಿಕಾ. ಅವರು ತಮ್ಮ ‘ನಡೆಯದ ಬಟ್ಟೆ’ ಅಂಕಣದಲ್ಲಿ ‘ನೆತ್ತರಲೂ ರತ್ನವಾಗುವ ಗುಣ’ ವಿಚಾರದ ಕುರಿತು ವಿವರಿಸಿದ್ದಾರೆ...

`ಚಂದ್ರನಿಗೆ ಈ ಕೋಣೆ ಯಾವಾಗಲೂ ಪ್ರಿಯ. ಅವನೇ ಈ ಕೋಣೆಯನ್ನು ತನಗೆ ಹೇಗೆ ಬೇಕೋ ಹಾಗೆ ರೂಪಿಸಿದ್ದ. ಮೊದಲಿಗೆ ಅವನ ಬಣ್ಣದ ಪ್ರಜ್ಞೆ ನನಗಿಷ್ಟವಾಗಿರಲಿಲ್ಲ. ಹೇಳಿದ್ದೆ ಕೂಡಾ, `ಇದೊಂದು ವಿಷಯದಲ್ಲಿ ನೀನು ಸುಮ್ಮನಿದ್ದುಬಿಡು ಶ್ಯಾಮೂ’ ಎಂದಿದ್ದ. ಎಷ್ಟೋ ದಿನಗಳ ವರೆಗೆ ಗೋಡೆಯ ಆ ತಿಳಿ ನೇರಳೆಯ ಬಣ್ಣ ನನ್ನ ಕಣ್ಣನ್ನು ರಾಚುತ್ತಿತ್ತು. ತಿಳಿ ಹಸಿರು... ಅದೇ ಪಿಸ್ತಾ ಬಣ್ಣ ಆದರೆ ಕಣ್ಣಿಗೆ ತಂಪು ಎಂದಿದ್ದೆ. ಆಮೇಲೆ ತಿಳಿನೇರಳೆಯ ಬಣ್ಣವೇ ಪ್ರಿಯವಾಗುತ್ತಾ ಬಂತು. ಬಣ್ಣ ಬರೀ ಬಣ್ಣ ಅಲ್ಲ, ಅದರ ಜೊತೆ ಏನೆಲ್ಲಾ ಸೇರಿರುತ್ತೆ ಅಲ್ವಾ? ಚಂದ್ರಾ ದಿನ ಕಳೆದಂತೆ ನನಗೆ ಹತ್ತಿರವಾಗಿದ್ದ. ಎರಡು ವಕ್ರ ರೇಖೆಗಳು ಒಂದರೊಳಗೊಂದು ಸೇರಿದಂತೆ’ ಬಟ್ಟೆಯೊಂದನ್ನು ಮಡಚಿ ಎತ್ತಿಡುತ್ತಾ, ಶ್ಯಾಮು ಏನೋ ನೆನಪಾದವಳಂತೆ ಮೌನಕ್ಕೆ ಸಂದಳು. ಅಷ್ಟರಲ್ಲಿ ಹನಿ ಒಳಗೆ ಇಣುಕಿ ನೋಡಿ, `ಅಮ್ಮಾ ಊಟಕ್ಕೆ ಬರೊಲ್ವಾ?’ ಎಂದಾಗ, `ನೀನು ಮಾಡು. ನಾನು ತೇಜೂ ಒಟ್ಟಿಗೆ ಮಾಡ್ತೀವಿ’ ಎಂದಿದ್ದಳು. `ಅಮ್ಮ ಆಪ್ಪನನ್ನು ನೆನೆಸಿಕೊಂಡು ಈಗ ಬೇಜಾರು ಮಾಡ್ಕೊಂಡ್ರೆ ಏನ್ಮಾಡೋಕ್ಖಾಗುತ್ತೆ? ನನ್ನ ಗಂಡ ಎನ್ನುವ ಕಾರಣಕ್ಕೆ ನನ್ನ ಅಧೀನದಲ್ಲೇ ಇರ್ಲಿ ಅನ್ನೋಕ್ಕಾಗಲ್ಲ. ಅವ್ರವ್ರ ಬದುಕು ಅವರವರಿಗೆ ಎಂದಿದ್ದು ನೀನೇ ತಾನೆ. ಇಲ್ಲಂದಿದ್ರೆ...’ ಹನಿ ಹೀಗೆಲ್ಲಾ ಮಾತಾಡಬಹುದು ಎಂದುಕೊಂಡೆ. ಹಾಗೆ ಆಗಲಿಲ್ಲ. ಹನಿ ಬಾಗಿಲನ್ನು ಎಳೆದುಕೊಳ್ಳುತ್ತಾ, `ಆಂಟಿ ಅಮ್ಮ ಉಪವಾಸ ಮಲಗದ ಹಾಗೆ ನೋಡಿಕೊ’ ಎಂದು ಹೊರಟಿದ್ದಳು. ನೋಡಲಿಕ್ಕೆ ಅಪ್ಪನ ಹಾಗೆ ಆದರೂ ಶ್ಯಾಮುವಿನ ಎಲ್ಲಾ ಗುಣಗಳು ಹನಿಗೂ ಬಂದಿತ್ತು. ಆದ್ರೂ ಅವತ್ತು ಲೆಕ್ಕದ ಮೇಷ್ಟ್ರು ನಿನ್ನ ಮಾತನ್ನ ಕೇಳಿ ಬೆಸ್ತು ಬಿದ್ದಿದ್ದು ಮಾತ್ರ ಈಗಲೂ ನನ್ನ ಕಣ್ಣೆದುರಿದೆ.

ಲೆಕ್ಕದ ಮೇಷ್ಟ್ರು ಬೇರೆ ಮೇಷ್ಟ್ರು ಥರ ಅಲ್ಲ. ಅವರಿಗೆ ಎಲ್ಲದರಲ್ಲೂ ಶಿಸ್ತು ಬೇಕು. ಲೆಕ್ಕಕ್ಕಿರುವ ಶಿಸ್ತು ಅವರಿಗೂ ಇದೆ ಎಂದು ಶ್ಯಾಮು ಛೇಡಿಸುತ್ತಿದ್ದಳು. ಅವತ್ತು ಅವಳು ಲೆಕ್ಕದ ಪುಸ್ತಕ ತಂದಿರಲಿಲ್ಲ. ತಂದಿರಲಿಲ್ಲ ಅಲ್ಲ... ತ್ರಿಭುಜ, ಚತುರ್ಭುಜ, ಅಷ್ಟಭುಜ ಅಂತ ಏನೇನೋ ಪಾಠಗಳನ್ನು ಒಂದನ್ನು ಅವಳು ಬರೆದಿರಲಿಲ್ಲ. ಅದಕ್ಕೆ ಮನೆಯಲ್ಲಿ ಬಿಟ್ಟು ಬಂದಿದ್ದೇನೆ ಎನ್ನುವ ನಾಟಕ ಆಡಿದ್ದಳು. `ಮನೆಗೆ ಹೋಗಿ ತಗೊಂಡು ಬಾ’ ಎಂದ ಮೇಷ್ಟ್ರು ಮಾತು ಕೇಳಲಿಲ್ಲ ಎನ್ನುವಂತೆ ನಿಂತಿದ್ದಳು. `ಹೀಗೆ ಆದರೆ ಜೀವನದಲ್ಲಿ ಏನು ಸಾಧಿಸ್ತೀಯಾ?’ ಎಂದು ಬಿಟ್ಟಿದ್ದರು ಕೋಪದಿಂದ ಮೇಷ್ಟ್ರು. ಆ ಮಾತು ಕೇಳಿದ್ದೇ ತಡ ಶ್ಯಾಮು, `ಸಾಧನೆ... ಇರೋ ಲೆಕ್ಕಾನ ಹೇಳೋದ್ರಲ್ಲಾ? ಇಲ್ಲದಿರೋ ಲೆಕ್ಕಾನ ಹೇಳೋದ್ರಲ್ಲಾ ಮೇಷ್ಟ್ರೇ?’ ಎಂದಿದ್ದಳು. ಅಷ್ಟು ಜನರ ಮಧ್ಯೆ ಆದ ಅವಮಾನಕ್ಕೆ ಮೇಷ್ಟ್ರು ಅವಳನ್ನು ಹೊಡೆಯದೆ ದಾರಿ ಇರಲಿಲ್ಲ. ಹೊಡೆಸಿಕೊಂಡರೂ ಲೆಕ್ಕವಿಲ್ಲದಿರುವವಳಂತೆ, ಹಟಕ್ಕೆ ಬಿದ್ದವಳಂತೆ, `ನಿಮ್ಮ ಲೆಕ್ಕಕ್ಕೆ ನನ್ನ ಜಗತ್ತು ಸಿಕ್ಕೊಲ್ಲ. ಬರೀ ಮೂರು ನಾಕು ಐದು ಆರು ಹೆಚ್ಚೆಂದರೆ ಎಂಟು ಭುಜ. ಮೇಷ್ಟೇ ಈ ಜಗತ್ತು ಪೂರ್ತಿ ಗೆರೆಗಳೇ ಎಷ್ಟೂಂತ ಹೆಸರುಕೊಡ್ತೀರ? ನಿಮ್ಮ್ ಹಿಂದೆ ಇರೋ ಬೋರ್ಡಿಗೆ ಎಷ್ಟು ಗೆರೆ ಹೇಳಿ? ನಿಮ್ಮನ್ನ ಕೇಳಿದ್ರೆ ಬರೀ ನಾಲ್ಕು ಅಂತೀರ ನನಗೆ ಅದರಲ್ಲಿ ನೂರಾರು ಗೆರೆ ಕಾಣುತ್ತೆ ಏನನ್ನ ಬರೀಲಿ ನಾನು? ಕಣ್ಣಿಗೆ ಕಾಣೋದೇ ಸತ್ಯ ಅಂದುಕೊಂಡ್ರೆ ಗೆರೆಗಳು ನಿಮ್ಮ ಲೆಕ್ಕ. ಒಳಗೇ ಉಳಿದವಕ್ಕೆ ಜೀವ ಕೊಟ್ಟರೆ ನನ್ನ ಲೆಕ್ಕ ಯಾವ ಲೆಕ್ಕ ಸರಿ ಅನ್ನೋದನ್ನ ನೀವೇ ಹೇಳಿ’ ಎಂದುಬಿಟ್ಟಿದ್ದಳು. ಅವರಾದ್ದರೂ ಏನು ಹೇಳಿಯಾರು? ಅದರವರಿಗೆ ಅರ್ಥವಾದರೂ ಆಗಿತ್ತೆ? ಗೊತ್ತಿಲ್ಲ. ಮೇಷ್ಟ್ರಿಗೆ ಮಾತಿಲ್ಲದವಳಾಗಿ ಮಾಡಿದ ಶ್ಯಾಮು ಅವತ್ತು ನಿಜಕ್ಕೂ ದೊಡ್ಡವಳಾಗಿ ಕಂಡಿದ್ದಳು. ನಮ್ಮ ಅಂಗೈ ಮುಂಗೈ ಮೇಲೆ ಬಿದ್ದ ಹೊಡೆತಗಳೆಲ್ಲ ಎದ್ದೆದ್ದು ನಕ್ಕುಬಿಟ್ಟಿದ್ದವು. ಬರೀ ಗೆರೆಗಳು ಮಾತ್ರವಲ್ಲ ಶ್ಯಾಮೂ ಕೂಡಾ ಅವರ ಲೆಕ್ಕಕ್ಕೆ ಸಿಕ್ಕಿರಲಿಲ್ಲ. ಅವಳ ಅಪ್ಪ ಅಮ್ಮನನ್ನು ಕರೆಸಿ, `ನಿಮ್ಮ ಹುಡುಗಿ ಫೇಲ್ ಆಗ್ತಾಳೆ ಗ್ಯಾರೆಂಟಿ’ ಎಂದಿದ್ದರು. ಆ ವರ್ಷ ಶ್ಯಾಮು ಮೇಷ್ಟ್ರು ಕೃಪೆಯಿಂದ ಫೇಲ್ ಆದಳು ಕೂಡಾ. ಮತ್ತದೇ ಕ್ಲಾಸು. ಓದು ಬಿಡ್ತೀನೆಂದಳು. ಅವಳ ಅಪ್ಪ ಕಾಡಿ ಬೇಡಿ ಪಾಸ್ ಮಾಡಿಸಿಕೊಂಡು ಬಂದಿದ್ದು ಊರೆಲ್ಲರಿಗೂ ಗೊತ್ತಾಗಿತ್ತು.

ಶ್ಯಾಮು ಯಾವುದಕ್ಕೂ ಸೊಪ್ಪು ಹಾಕಿರಲಿಲ್ಲ. `ಅವರ ಮಾತನ್ನ ನಾನು ಕೇಳಲಿಲ್ಲ ಅದಕ್ಕೆ ನನ್ನ ಫೇಲ್ ಮಾಡಿದ್ರು’ ಎಂದಿದ್ದಳು ಕೇಳಿದವರಿಗೆ. ಅವಳದ್ದು ಭಂಡತನ ಅಂತ ಅವತ್ತು ನನಗನ್ನಿಸಿತ್ತು. `ಶ್ಯಾಮು ನಿನಗೆ ನಾಚಿಕೆ ಅನ್ನಿಸಲಿಲ್ವಾ?’ ಎಂದಾಗ, `ಅರೆ ಬೇಕಂತ ನನ್ನ ಫೇಲ್ ಮಾಡಿದ್ದಕ್ಕೆ ಅವರಿಗೆ ನಾಚಿಕೆ ಆಗಬೇಕಲ್ವಾ? ನನ್ನ ತಪ್ಪಿದ್ದಿದ್ರೆ ನನ್ನ ಯಾಕೆ ಮತ್ತೆ ಪಾಸ್ ಮಾಡ್ತಿದ್ರು’ ಎಂದಿದ್ದಳು. ಅವಳ ಈ ಮಾತುಗಳೆಲ್ಲಾ ಮೇಷ್ಟ್ರು ಕಿವಿಗೆ ಮುಟ್ಟಿವಷ್ಟರಲ್ಲಿ ಕಾಲ ಮಿಂಚಿತ್ತು. ಅವಳು ಅವತ್ತೇ ನಿರ್ಧಾರ ಮಾಡಿಯೂ ಬಿಟ್ಟಿದ್ದಳು ಇನ್ನು ಮುಂದೆ ಲೆಕ್ಕ ಓದುವುದಿಲ್ಲವೆಂದು. `ಈಗಲೂ ನನಗೆ ಬೀಳುವ ಕನಸೊಂದು ಇದ್ದರೆ ಅದು ನಾಳೆ ಲೆಕ್ಕದ ಪರೀಕ್ಷೆ ನನಗೆ ಗೊತ್ತು ಅದರಲ್ಲಿ ಫೇಲ್ ಆಗ್ತೀನಿ ಅಂತ ಆದರೂ ಓದಲು ಕೂಡುತ್ತೇನೆ ಎಲ್ಲವೂ ಮರೆತು ಹೋಗುತ್ತದೆ. ದುಃಖ ಉಮ್ಮಳಿಸಿ ಬರುತ್ತೆ. ಜೋರಾಗಿ ಅಳಲಿಕ್ಕೆ ಶುರು ಮಾಡ್ತೀನಿ’ ಶ್ಯಾಮು ನಿಧಾನವಾಗಿ ಶಾಂತವಾಗಿ ಹೇಳುತ್ತಿದ್ದರೆ, ಇವಳಿಗೆ ಗಣಿತದ ಲೆಕ್ಕಾಚಾರ ಇರಲಿ ಬದುಕಿನ ಲೆಕ್ಕಾಚಾರವೂ ಗೊತ್ತಾಗುವುದಿಲ್ಲವಾ? ಲೆಕ್ಕವನ್ನು ಬಿಟ್ಟುಕೊಟ್ಟಂತೆ ಚಂದ್ರನನ್ನು ನೀನು ಹೋದ ಕಡೆಗೆ ಹೋಗು ಎಂದು ಬಿಟ್ಟುಕೊಡುತ್ತಿದ್ದಳಾ?

ಅವಳ ಕೈಗೆ ಪೆನ್ಸಿಲ್ ಬಂತೆಂದರೆ ಈಗಲೂ ಅಲ್ಲೊಂದು ಗೆರೆ; ಮತ್ತೊಂದನ್ನು ಮಗದೊಂದನ್ನು ಒಂದರೊಳಗೊಂದು ಸೇರಿಸಿಕೊಂಡು ಇನ್ನೇನೋ ಆಕಾರ ಪಡೆಯುತ್ತದೆ. ಅವಳ ಹೋದ ಎಕ್ಸಿಬಿಷನ್‌ಗೆ ಅವಳು ಕೊಟ್ಟ ಹೆಸರು ಡ್ಯಾನ್ಸಿಂಗ್ ಲೈನ್ಸ್ ಅಂತ. ಜೀವಂತವಾಗುವ ಗೆರೆಗಳು ಸರಿದಾಡುವ ಅನುಭವ ನೀಡುತ್ತವೆ. ಗೀಚುವುದು ಎಂದು ತೋರುವ ಅವಳ ಕ್ರಿಯೆಯಲ್ಲಿ ಏನೋ ಹುಟ್ಟಿಸುವ ತವಕ ಇದ್ದೇ ಇರುತ್ತದೆ. ಅವಳ ಭುಜದ ಮೇಲೆ ಕೈಯಿಟ್ಟು, `ಶ್ಯಾಮು ಏನ್ ನಡೀತೋ ನಡೆದು ಹೋಯ್ತು ಈಗ ನೆನೆಸಿಕೊಂಡರೆ ಏನ್ ಮಾಡೋಕ್ಕಾಗುತ್ತೆ? ಹಾಗಂತ ಹಸ್ಕೊಂಡಿರ್ತೀಯಾ?’ ಎಂದೆ. ಅವಳ ಮುಖದಲ್ಲಿ ತೇಲಿದ್ದು ವಿಷಾದವೇ ಆದರೆ ಅದಕ್ಕೆ ನಾನೂ ಹೊಣೆಯೇ. ಅವಳ ಬದುಕಿನ ಪ್ರತಿಘಟ್ಟದಲ್ಲೂ ನಾನಿದ್ದೀನಿ. ನಾನಿದ್ದೂ ಹೀಗೆಲ್ಲಾ ಆಯ್ತಲ್ಲಾ? ಎನ್ನುವುದು ನನ್ನ ನೋವು. ನಿಜ ಚಂದ್ರನ ನೆನಪು ಈ ಮನೆ ಮಾತ್ರವಲ್ಲ ಅವಳ ಮೈ ಮನ ಎಲ್ಲದರಲ್ಲೂ ಇತ್ತು. ಹಾಗಿದ್ದೂ ಆವನನ್ನು ಪಡಕೊಳ್ಳಬೇಕು ಎನ್ನುವ ಹಟಕ್ಕೆ ಯಾಕೆ ಬೀಳಲಿಲ್ಲ! ಬೇರೆ ಯಾವ ಹೆಂಡತಿ ಆಗಿದ್ದರೂ ನನ್ನದು ಹಕ್ಕು ಎನ್ನುವ ಹಾಗೆ ಮಾತಾಡುತ್ತಿದ್ದರು. `ಬದುಕು ಗೆರೆಯಲ್ಲ ಎಳೆದ ತಕ್ಷಣ ಮುಗಿದು ಹೋಗುವುದಕ್ಕೆ. ಪ್ರೀತಿ ಹಕ್ಕಲ್ಲ, ಕೇಳಿ ಪಡೆಯುವುದೂ ಅಲ್ಲ. ಹಟ ಮಾಡಿ ವಸ್ತುಗಳನ್ನ ತೆಗೆದುಕೊಳ್ಳಬಹುದು. ಅವಕ್ಕೆ ಮನಸ್ಸಿರಲ್ಲ. ಹಾಗಾಗಿ ಅವು ನಮ್ಮನ್ನ ಏನೂ ಕೇಳಲ್ಲ. ಆದರೆ ಮನಸ್ಸಿರುವ ಮನುಷ್ಯರ ಕಾಂಪ್ಲೆಕ್ಸ್ಗಳೇ ಬೇರೆ. ಹಟ ಮಾಡಿದಷ್ಟೂ ದೂರವೇ ಹೋಗ್ತಾರೆ. ನಿನಗೆ ಗೊತ್ತಾ ತೇಜೂ ಇದೇ ನಾಲ್ಕು ಗೋಡೆಗಳ ಕೋಣೆಯಲ್ಲಿ ಚಂದ್ರನ ಎದೆ ಮೇಲೆ ಒರಗಿ ಅವನ ಮಿಡಿತವನ್ನು ಆಲಿಸುವಾಗ `ಅಲ್ಲಿ ನೀನಿಲ್ಲ ಶ್ಯಾಮು’ ಎಂದಿದ್ದ. ನಕ್ಕಿದ್ದೆ ಅದು ನಿನ್ನ ಅನಿಸಿಕೆ ನಾನು ಇದ್ದೀನಿ ಅನ್ನುವುದು ನನ್ನ ಭಾವನೆ. ನನಗೆ ನನ್ನ ಭಾವನೆಯ ಮೇಲೆ ನಂಬಿಕೆ. ಯಾಕಂದ್ರೆ ಭಾವನೆಯೇ ನಮ್ಮನ್ನು ನಂಬಿಸುವುದು. ಅವತ್ತು ಭಾರವಾದ ನನ್ನ ಕಣ್ಣಲ್ಲಿ ಹನಿ ಮುತ್ತಾಗುತ್ತಿತ್ತು. `ಆಕಾಶ ನನ್ನದೆಂದುಕೊಳ್ಳಲಿಕ್ಕೆ ಎರಡು ರೆಕ್ಕೆ ಸಾಕು ಚಂದ್ರಾ’ ಎಂದಿದ್ದೆ. ಅವನು ನಕ್ಕ. ಅವನ ನಗು ಆಕಾಶ. ನೀನಿಲ್ಲ ಅಂದ್ರೆ ನೀನಿಲ್ಲ ಅಂತ ಅಲ್ಲ ಶ್ಯಾಮು... ಈಗ ನನ್ನೆದೆಯ ತುಂಬಾ ಮಗಳೇ ತುಂಬಿದ್ದಾಳೆ. ಕೆಲಸ ಮಾಡುವಾಗಲೂ ಅವಳನ್ನ ನೋಡಬೇಕು ಅನ್ನಿಸಿಬಿಡುತ್ತೆ. ಯಾಕೋ ಈಚೆಗೆ ನಿನಗಿಂತ ಅವಳೇ ಮುಖ್ಯ ಅನ್ನಿಸುತ್ತೆ ಎಂದಿದ್ದ. ನನಗೆ ನಗು ಬಂತು `ಮಗಳ ಜೊತೆ ನಾನು ಕಾಂಪಿಟೇಷನ್‌ಗೆ ಇಳಿಯಬೇಕಾ? ಚಂದ್ರಾ, ಅರೂಪವಾಗಿದ್ದ ನಮ್ಮ ದಾಂಪತ್ಯಕ್ಕೆ ರೂಪ ಬಂದಿದ್ದು ಹನಿಯಿಂದ. ತಿಳಿಯಾದ ಅವಕಾಶದಲ್ಲಿ ಅವಳೊಂದು ಬಣ್ಣದ ಬಿಂದು. ಅವಳಿಗಾಗಿ ಹೆಸರನ್ನು ಹುಡುಕುವಾಗ ನಾವಿಬ್ಬರೂ ಎಷ್ಟು ಕಷ್ಟ ಪಟ್ಟಿದ್ದೆವು. ದಿನ ಬೆಳಗಾದರೆ ಹೆಸರು ಸಂಜೆಯಾದರೆ ಹೆಸರು. ಇದನ್ನು ಬಿಟ್ಟರೆ ಒಂದಿಷ್ಟು ದಿನ ಏನೂ ಮಾಡಲೇ ಇಲ್ಲ’ ಶ್ಯಾಮುವಿನ ಕಣ್ಣುಗಳಲ್ಲಿ ಭಾವುಕತೆ ಮಡುಗಟ್ಟಿತ್ತು. ಕಾಲಗರ್ಭದಲ್ಲಿ ಕರಗಿಹೋಗುವ ಮನುಷ್ಯನ ಬದುಕಿಗೆ ಯಾವ ಅರ್ಥ? ಯಾವ ಹೆಸರು? ತೊಟ್ಟಿಲಟ್ಟೆಯಲ್ಲಿ ಇಂದಿಗೂ ಅಡಗಿರುವ ಹನಿಯ ಆ ಮೃದು ಅಂಗಾಲಿನ ಸ್ಪರ್ಷಕ್ಕೆ ಹಾತೊರೆಯುವಂತೆ ಅವಳ ಕೈ ಶೂನ್ಯದಲ್ಲಿ ಆಡುತ್ತಿತ್ತು. ಮಾತು ಘನತೆಯ ಆಚೆಗಿನ ಸಂಗತಿ ಎಂದು ಅರ್ಥವಾಗುವುದೇ ಇಲ್ಲ. ಅದಕ್ಕೆ ಎಲ್ಲವಾಗಲೂ ಆಡಿ ಮುಗಿಸುತ್ತೇವೆ. ಖಾಲಿಯಾಗುತ್ತೇವೆ. ತುಂಬಿ ಬರುವ ಮುಂದಿನ ಯಾವುದಕ್ಕೂ ಅದನ್ನು ಮೀರುವ ಶಬ್ದಗಳು ದೊರಕುವುದೂ ಇಲ್ಲ.

ಆ ಕೋಣೆಯಲ್ಲಿ ಶ್ಯಾಮೂ ಬರೆದ ಚಿತ್ರಗಳಿದ್ದವು. ಎಷ್ಟೋ ವೇಳೆ ಆ ಚಿತ್ರಗಳ ರೇಖೆಗಳಿಗೂ ಲೆಕ್ಕಾಚಾರವಿರಲಿಲ್ಲ. ಹೇಗೆ ಹೇಗೋ ಚಿತ್ರಗಳಾಗಿಬಿಡುತ್ತಿದ್ದವು. ಅಂದು ರಸ್ತೆಯ ಮಧ್ಯೆ ನಿಂತು ಅವರಿವರು ಎಳೆದ- ಆಳ, ಅಗಲ, ಉದ್ದ, ತೆಳು- ಹೀಗೆ ಗೆರೆಯ ಲೆಕ್ಕಾಚಾರ ಹಾಕುತ್ತಿದ್ದ ಶ್ಯಾಮು ದಕ್ಕಿಸಿಕೊಂಡಿದ್ದೇನು? `ಮೂಗಿಗಿಂತ ಮೂಗುತಿಯೇ ದೊಡ್ಡದು ಮಾರಾಯ್ತಿ’ ಎಂದರೆ `ಇದನ್ನ ಚಿಕ್ಕದು ಮಾಡಿದ್ರೆ ನಿನಗೆ ಏನು ವ್ಯತ್ಯಾಸ ಆಗುತ್ತೆ?’ ಎನ್ನುತ್ತಿದ್ದಳು. `ಅದು ಹಾಗಲ್ಲ ನಿನ್ನ ಚಿತ್ರಗಳ ಬಗ್ಗೆ ಇರೋ ಆಕ್ಷೇಪಾನೇ ಇದು’ ಎಂದಾಗ, ಗಂಭೀರವಾಗಿ, `ಕಾಪ್ಲಿಮೆಂಟರಿ ಯಾಕಲ್ಲ?’ ಎಂದಿದ್ದಳು. ಗೆರೆಯ ಬರೆವವಳು ಗೆರೆಯಾಗಿ ಹಂಬಲಿಸಿದವಳು, ಅಮೃತವಾಗುವ ಬೆಳಕಿಗಾಗಿ ಕತ್ತಲಲ್ಲಿ ನಿಖರವಾಗಿ ಹುಡುಕುವವಳಂತೆ ಕಂಡಿದ್ದಳು.

`ನಿನಗೆ ಈ ಕೋಣೆಯ ವಿಷಯ ಹೇಳುತ್ತಿದ್ದೆ ಅಲ್ಲವಾ? ನನ್ನ ಚಂದ್ರನ ಶಾಶ್ವತ ಸಂಬಂಧಕ್ಕೆ ಈ ಕೋಣೆ ಸಾಕ್ಷಿ. ಕಾಮದಲ್ಲಿ ತೀವ್ರವಾಗಿ, ಪ್ರೀತಿಯಲ್ಲಿ ವಿನಮ್ರವಾಗಿ, ಅಂತಃಕರಣದಲ್ಲಿ ವಿಶ್ವಾಸದಿಂದ...’ ಅವಳು ಉತ್ಸಾಹದಲ್ಲಿ ಎಲ್ಲವನ್ನೂ ಹೇಳುತ್ತಿದ್ದಳು. ಬಿಕ್ಕುವಿಕೆ ನನಗೆ ಮಾತ್ರ ಕೇಳುತ್ತಿದೆಯಾ? ನಾಟಕ ಮುಗಿದ ಮೇಲೆ ರಂಗಸ್ಥಳಕ್ಕೂ ನಟನಿಗೂ ಏನು ಸಂಬಂಧ? ಮುಗಿದ ಯುದ್ಧಗಳಿಗೆ ಸಾಕ್ಷಿಗಳಂತೆ ಎಲ್ಲವೂ ಇವೆ. ಉಳಿಸಿದ ಗಾಯಗಳು ನೆತ್ತರನ್ನು ಕಾರುತ್ತಾ ಒಳಗೆ ನೋವನ್ನು ಉಣಿಸುತ್ತಿವೆ. ಈಗ ಅಂದುಕೊಳ್ಳುತ್ತಿದ್ದೇವೆ ಆ ನೆತ್ತರು ರತ್ನವಾಗುವ ಗುಣ ಪಡೆಯಲಿ ಎಂದು. ಶ್ಯಾಮುವಿನ ಕಡೆಗೆ ನೋಡಿದೆ. ಅವಳ ಮುಖದ ಚಹರೆಗಳಲ್ಲಿ ಏನನ್ನಾದರೂ ಹುಡುಕುವುದು ನನಗೆ ಕಷ್ಟ ಎನ್ನಿಸಿತು. ಎಷ್ಟೋ ವೇಳೆ ಕನ್ನಡಿಯ ಮುಂದೆ ನಿಂತು ತನ್ನ ಮುಖದಲ್ಲಿ ದಟ್ಟವಾಗುವ ರೇಖೆಗಳನ್ನು ನೋಡಿಕೊಳ್ಳುತ್ತಿದ್ದಳು. ಒಮ್ಮೆಯಂತೂ `ತೇಜೂ ಈಚೆಗೆ ನನ್ನ ಮುಖದಲ್ಲಿ ರೇಖೆಗಳು ಜಾಸ್ತಿ ಆಗ್ತಾ ಇವೆ ಅನ್ನಿಸ್ತಾ ಇದೆ’ ಎಂದಿದ್ದಳು. `ಹುಂ ಮತ್ತೆ ವಯಸ್ಸಾಗ್ತಾ ಆಗ್ತಾ ಮುಖದಲ್ಲಿ ಮಡತೆ ಬೀಳೋದನ್ನ ಹೇಗೆ ತಪ್ಪಿಸೋಕ್ಕಾಗುತ್ತೆ?’ ದಾರಿಯಲ್ಲಿ ಅಡ್ಡಲಾಗಿ ನಿಂತು ಕೈಲಿ ಕಡ್ಡಿ ಹಿಡಿದು ಗೆರೆ ಹಾಕುತ್ತಿದ್ದ ಶ್ಯಾಮುಗೆ ಈಗ ತನ್ನ ಮುಖದಲ್ಲೇ ಕಾಲ ಎಳೆದುಹೋದ ಗೆರೆಗಳನ್ನು ಎಣೆಸುವ ಹುಕಿ. ಅವಳು ಅದರಲ್ಲೇ ನಿಮಗ್ನ. ಹೇಳಿದ್ದು ಅವಳೋ ಅನಿಸಿದ್ದು ನನಗೋ. ಜಿಗಿತ ಕಾಣುವ ಮಾತುಗಳಿಗೆ ಕಪ್ಪೆಯದ್ದೇ ಕಾಲುಗಳು.

`ಈ ಕೋಣೆ ನನಗೆ ಯಾವಾಗಲೂ ಜೀವಂತ ಅನ್ನಿಸುತ್ತಿದೆ ತೇಜೂ. ಇದು ಮತ್ತೆ ವಾಸ್ತವದಲ್ಲಿ ಬರಲಿಕ್ಕೆ ಸಾಧ್ಯವೇ ಇಲ್ಲದ ನನ್ನ ಚಂದ್ರನನ್ನು ತಂದುಕೊಡಬಲ್ಲ ಏಕೈಕ ಸಾಧನ ಮಾತ್ರ. ಉಸಿರ ಉದ್ವೇಗಗಳು, ಪಟ್ಟುಬಿಡದ ಹಟಮಾರಿತನ, ಕರಗಿ ದ್ರವಿಸಿಯೇ ಬಿಡುವ ಇಬ್ಬರ ನಡುವಣ ಜಂಗಿ ಕುಸ್ತಿ... ರೋಚಕತೆ, ದಾಂಪತ್ಯದ ಶೀಲವಾದ ಮತ್ತತೆ, ಸಾಲು ಸಾಲು ತೀರದ ಕೋರಿಕೆ. ತಳವಿರದ ದುಂಡನೆಯ ಪಾತ್ರೆಯನ್ನು ಸಪಟಾದ ನೆಲದ ಮೇಲೆ ನಿಲ್ಲಿಸುವ ಯತ್ನ ಅನ್ನಿಸುತ್ತಿತ್ತು...’ ಅವಳ ಮಾತುಗಳು ಎಲ್ಲೋ ಆಳದಲ್ಲಿ ಹುದುಗಿ ಹೋದ ಕೊಳವೆಯಿಂದ ಮೇಲಕ್ಕೆತ್ತಿದಂತೆ ಕೇಳತೊಡಗಿದಾಗ, ಅರೇ ಎಲ್ಲಿ ಇವಳು ಎಂದು ಹುಡುಕತೊಡಗಿದೆ. ಅವಳು ಕಾಣಲೇ ಇಲ್ಲ. ಮೇಜು ಕುರ್ಚಿ ಮಂಚ ಕೊನೆಗೆ ಗೋಡೆಗಂಟಿದ ಕನ್ನಡಿ ಎಲ್ಲವೂ ಎಲ್ಲಿ ಎಂದು ಕೇಳತೊಡಗಿ ಒಂದೊಂದೂ ಒಂದೊಂದು ರೀತಿಯ ಗೆರೆಗಳಾಗಿ ಶ್ಯಾಮುವನ್ನು ಬಿಟ್ಟು ನನ್ನ ಸುತ್ತಾ ಸುತ್ತತೊಡಗಿದವು. ಶ್ಯಾಮು ಮಾತಾಡುತ್ತಲೇ ಇದ್ದಳು. `ಅವನನ್ನು ಕೂಡಿದ ಮೇಲೆ ಮತ್ತೆ ಕೂಟದ ಆಸೆ... ಎರಡು ರೇಖೆಗಳು ಕ್ಯಾನ್ವಾಸಿನ ಪರಿಧಿಯನ್ನು ದಾಟಿ ಆಚೆಗೂ ಬೆಳೆದ ಹಾಗೆ...’

ನಡುಹಗಲಲ್ಲಿ ಕೆರೆಯ ದಂಡೆಯಲ್ಲಿ ಕೂತು ಕಲ್ಲುಗಳನ್ನು ಒಗೆಯುತ್ತಾ ಅವು ಸೃಷ್ಟಿಸುತ್ತಿದ್ದ ತರಂಗಗಳನ್ನು ನೋಡುತ್ತಾ ಶ್ಯಾಮು ಕೂಗುತ್ತಿದ್ದಳು, `ಓಹ್ ನೋಡು ಎಷ್ಟು ಚೆನ್ನಾಗಿದೆ’. ಅವಳ ಹಾಗೆ ಒಳಗೆ ಖುಷಿ ನನಗೂ ಇತ್ತು. ಕಲ್ಲು ಬೀಸಿ ಒಗೆದರೆ ಚಿಕ್ಕ ಕಲ್ಲಾದರೆ ಚಿಕ್ಕ ವರ್ತುಲ ದೊಡ್ಡದಾದರೆ ದೊಡ್ಡದು. ಕೆಲವೊಮ್ಮೆ ವರ್ತುಲ ನಿರ್ಮಿಸದೆ ಕಲ್ಲು ಮುಳುಗಿ ಕೆಲ ಗುಳ್ಳೆಗಳನ್ನು ಮಾತ್ರ ನಿರ್ಮಿಸುತ್ತಿತ್ತು. ಇದ್ದಕ್ಕಿದ್ದಂತೆ ಬೆಳ್ಳಿ ಕೋಪದಿಂದ ನಾಯಿ ಕುನ್ನಿಯೊಂದನ್ನು ಓಡಿಸಿಕೊಂಡು ಬಂದ. ಅವನ ಕೈಲಿದ್ದ ಬ್ರೆಡ್ಡನ್ನು ಅದು ಕಸಿದುಕೊಂಡು ಬಂದಿತ್ತು. ಬಂದಿದ್ದೇ ತಪ್ಪಿಸಿಕೊಳ್ಳಲಿಕ್ಕೆ ಎಂದು ದಡಾರೆಂದು ಕೆರೆಗೆ ಜಿಗಿದಿತ್ತು. ನನಗೆ ಅವಳಿಗೆ ದೊಡ್ಡ ವರ್ತುಲ ತರಂಗವನ್ನು ತೋರುವ ತವಕ. ಆದರೆ ಅವಳ ಪ್ರತಿಕ್ರಿಯೆ ವಿಚಿತ್ರವಾಗಿತ್ತು. ಬೆಳ್ಳಿಗೆ ಬಡಿಯುತ್ತಾ ಆ ಕುನ್ನಿಯನ್ನು ರಕ್ಷಿಸುವಂತೆ ತಾಕೀತು ಮಾಡಿದ್ದಳು. ನೀರು ಕುಡಿದ ಕುನ್ನಿ ಅಷ್ಟು ಹೊತ್ತಿಗೆ ಈಜುವುದನ್ನೂ ಕಲಿಯುತ್ತಿತ್ತೇನೋ ಬೆಳ್ಳಿ ಅದನ್ನು ತಂದು ದಡಕ್ಕೆ ಹಾಕಿದ್ದ. ಸಿನಿಮಾದಲ್ಲಿ ತಾನೆಂದೋ ಕಂಡ ದೃಶ್ಯವನ್ನು ನೆನೆಸಿಕೊಂಡು ಶ್ಯಾಮು ಅದರ ಹೊಟ್ಟೆಯನ್ನು ಒತ್ತಿ ಒತ್ತಿ ನೀರು ತೆಗೆವ ಪ್ರಯತ್ನದಲ್ಲಿದ್ದಳು. ಸ್ವಲ್ಪ ಹೊತ್ತಿಗೆ ಕುನ್ನಿ ಎರಡು ಕಾಲಿನ ಮಧ್ಯೆ ಬ್ಯಾಲೆನ್ಸ್ ತಂದುಕೊಳ್ಳುತ್ತಾ ಅಡ್ಡಗಾಲನ್ನು ಹಾಕುತ್ತಾ ನಡೆದು ಹೊರಟಿತ್ತು. ಅದು ಇಟ್ಟ ಹೆಜ್ಜೆಯ ಕಡೆಗೆ ಮೂಡಿದ ಚಿತ್ರವನ್ನು ಕುತೂಹಲದಿಂದ ನೋಡುತ್ತಾ ನಿಂತ ಶ್ಯಾಮುವನ್ನು, `ಕುತೂಹಲದಿಂದ ನೋಡ್ತಾ ಇದೀಯ! ಇದೂ ಚಿತ್ರವಾಯಿತೇನೆ?’ ಎಂದಾಗ ಶ್ಯಾಮು ನಕ್ಕಿದ್ದಳು. `ಗೆರೆ ಯಾವತ್ತೂ ನನ್ನ ಅಭ್ಯಾಸ ಮಾಡು ಎಂದು ಹೇಳಿಲ್ಲ ತೇಜೂ. ನನ್ನ ಕುತೂಹಲ, ಆಸಕ್ತಿ ಇದನ್ನು ನೋಡುವಂತೆ ಮಾಡುತ್ತಿದೆ ಅಷ್ಟೇ. ಗೆರೆ ಮಾತ್ರವಲ್ಲ ಜಗತ್ತಿನ ಯಾವುದೂ ನನ್ನ ಅಭ್ಯಾಸ ಮಾಡು ಎಂದು ಹೇಳುತ್ತದೆ?! ಎಲ್ಲವೂ ಅವುಗಳಿರುವ ಹಾಗೆ ಅವಿರುತ್ತವೆ. ಅವುಗಳನ್ನು ಬಿಟ್ಟಿರದ ಅನಿವಾರ್ಯತೆಯನ್ನು ನಾವಷ್ಟೇ ಸೃಷ್ಟಿಸಿಕೊಳ್ಳುತ್ತಿದ್ದೇವೆ. ಅದಕ್ಕೆ ಎಲ್ಲವೂ ಜೀವಕ್ಕಂಟಿಕೊಂಡಂತೆ ಅನಿವಾರ್ಯವಾಗುತ್ತವೆ’. ಹಾಗದರೆ ಅವಳು ಬಾಲ್ಯದಿಂದಲೂ ಆರಾಧನೆಯ ಹಾಗೆ ನೋಡುತ್ತಿದ್ದ ಆ ಗೆರೆಗಳನ್ನು ಬೇಡವೆಂದರೆ ಬಿಟ್ಟಿರಲು ಆಗುತ್ತದಾ?` `ಗೊತ್ತಿಲ್ಲ ತೇಜೂ ಇನ್ನೂ ಗೆರೆಗೆ ಅಂಟಿಕೊಂಡಿದ್ದೇನೆ, ಸಿಪ್ಪೆಯನ್ನು ತೆಗೆಯದೆ ಹಣ್ಣು ಸಿಕ್ಕೊಲ್ಲ. ಹಾಗಂತ ಸಿಪ್ಪೆಯಿಲ್ಲದ ಹಣ್ಣನ್ನು ಕಲ್ಪನೆ ಮಾಡಿಕೊಳ್ಳುವುದಕ್ಕೂ ಆಗಲ್ಲ. ಬೆಳಕಿಗಾಗಿ ಹಂಬಲಿಸುವ ನಾವು ರಾತ್ರಿ ಕತ್ತಲು ಲಾಲಿ ಹಾಡಲಿ ಎಂದುಕೊಳ್ಳುತ್ತೇವೆ. ಎಲ್ಲಾ ವೈರುಧ್ಯಗಳು ನಮ್ಮವೇ. ನಾನಿನ್ನೂ ಗೆರೆಯ ಹಂಗನ್ನು ಮೀರುವ ಹಾದಿಯಲ್ಲ್ಲೇ ಇದ್ದೇನೆ- ಸಂಬಂಧದಲ್ಲೂ’ ಎಂದಿದ್ದಳು. ದೇಶ ವಿದೇಶಗಳಲ್ಲಿ ಕಲಾಕೃತಿಗಳ ಪ್ರದರ್ಶನ, ವ್ಯಾಪಾರ ಕೈತುಂಬಾ ಹಣ... ಎಲ್ಲವನ್ನೂ ಪಡೆದ ಶ್ಯಾಮು ಸಾಧನೆಯನ್ನೇ ಮಾಡಿಲ್ಲ ಎನ್ನುವಂತೆ ತೊಳಲುತ್ತಿದ್ದಾಳಲ್ಲಾ ಎನ್ನಿಸಿತು.

`ತೊರೆಯಲಾರದ್ದನ್ನು ತೊರೆವ ಹಂಬಲ. ಮುಟ್ಟಬಾರದ್ದನ್ನು ಮುಟ್ಟುವ ಕನಸು. ಎಷ್ಟೋ ಜನ ಹೀಗೆ ಸತ್ತೂ ಹೋಗಿದ್ದಾರೆ. ಸಾವೆಂದರೆ ಸಾವಲ್ಲ ತೇಜೂ ಅದೊಂದು ಅವಸ್ಥಾಂತರ. ಕಳೆದುಕೊಳ್ಳುವುದು ಉದ್ವಿಗ್ನ ಸ್ಥಿತಿಯಲ್ಲ- ಅದೊಂದು ಮೆಟ್ಟಿಲು. ಇಳಿಯುತ್ತೀಯೋ ಹತ್ತುತ್ತೀಯೋ ಅದು ನಿನ್ನ ಯೋಗ್ಯತಾನುಸಾರ. ಅಶಕ್ತರಾಗುವಾಗ ಮನುಷ್ಯನ ಒಳಗೊಂದು ಹಟ ಹುಟ್ಟುತ್ತದೆ. ಅದು ಉಳಿಯುವುದು. ಉಳಿದೇನಾಗಬೇಕಿದೆ ಎನ್ನುವುದೂ ಗಂಭೀರವಾದ ಪ್ರಶ್ನೆಯೇ. ಮನುಷ್ಯ ಸತ್ತ ಮೇಲೆ ಏನಾಗುತ್ತಾನೋ ಯಾರಿಗೆ ಗೊತ್ತು. ಆದರೆ ನನ್ನ ವಿವೇಕದ ಕಣ್ಣು ಈ ಜಗತ್ತನ್ನು ದೀಪದ ಹಾಗೆ ಕಾಪಾಡಬೇಕಲ್ಲವೇ. ಹಾಗಲ್ಲದಿದ್ದರೆ ಈ ಕಣ್ಣುಗಳ ಪ್ರಯೋಜನವಾದರೂ ಏನು? ಶ್ಯಾಮು ಮಾತಾಡುತ್ತಾಳೊ ಮಾತಾಡದೆಯೇ ಎಲ್ಲಾವನ್ನೂ ದಾಟಿಸುತ್ತಾಳೋ ಒಂದೊಮ್ಮೆ ಹೇಳುವುದೇ ಕಷ್ಟವಾಗುತ್ತದೆ.

ಸಂಬಂಧಕ್ಕೂ ಗೆರೆಗೂ ಮಧ್ಯ ಏನೋ ಬಂಧವಿದೆ. ನನ್ನ ಬಿಟ್ಟು ಬದುಕು ಹೇಗಿಲ್ಲವೋ ಬದುಕನ್ನು ಬಿಟ್ಟು ನಾನೂ ಇಲ್ಲ. ನಿನಗೆ ಗೊತ್ತಾ ಈ ಕೋಣೆಯಲ್ಲಿನ ಪ್ರೇಮದ ವಾಸನೆ ನನ್ನ ಮೂಗಿಗೆ ತಟ್ಟುತ್ತಿದೆ. ಪಂಚೇದ್ರಿಯಗಳೂ ಅದನ್ನು ಅನುಭವಿಸುತ್ತದೆ.

ಮನಸ್ಸು ಹೊಸದಾಗೇ ಶೋಧಿಸುತ್ತದೆ. ಹೊಸ ಹೊಸದಾಗಿ ಚಂದ್ರನ ನೆರಳು ನನ್ನ ಮೇಲೆ ಫಲಿಸುತ್ತಲೇ ಇದೆ. ಮತ್ತೇರುವ ಆ ಸುಂದರ ಸಂಬಂಧಕ್ಕೆ ಹೆಸರು ಏನೆಂದುಕೊಡಲಿ? ಏನೆಂದು ಪ್ರಾರ್ಥಿಸಲಿ ನನ್ನ ಸಾವಿಗೂ ಮುನ್ನ ನನ್ನ ನಾಲಗೆಗೆ ಅವನ ಹೆಸರನ್ನು ಮಾತ್ರ ಹೇಳುವ ಶಕ್ತಿ ಸಿಗಲಿ ಎಂದಾ?’ `ಶ್ಯಾಮೂ ಇದನ್ನೆಲ್ಲಾ ನನ್ನ ಹತ್ತಿರ ಹೇಳುವ ಬದಲು ಚಂದ್ರನಲ್ಲೇ ಹೇಳು. ಅವನ ಮನಸಿನಲ್ಲಿ ನಿನಗಾಗಿ ಕೆಲ ಬದಲಾವಣೆಯನ್ನಾದರೂ ಕಾಣಬಹುದು. ನಿನ್ನ ಬಳಿ ಮರಳಿ ಬಂದರೆ ಆಶ್ಚರ್ಯವಿಲ್ಲ’ ಎಂದೆ. `ನಿಜ ಬರಬಹುದು ತೇಜೂ, ಅದು ನನ್ನ ಬಗ್ಗೆ ಇವಳಿಗೆ ಇಷ್ಟು ಅನುಕಂಪೆ ಇದೆ ಎಂದು ಮಾತ್ರ. ನಿನಗೆ ಗೊತ್ತಾ? ಜಗತ್ತು ಆಗುವ ಮುಂಚೆ ಹುಟ್ಟಿದ್ದು ಹುಲ್ಲು ಮಾತ್ರ ಆ ಹುಲ್ಲು ಕಾಯುತ್ತಲಿತ್ತು, ತನ್ನ ತಿನ್ನುವ ಒಂದು ಜೀವ ಬರಲಿ ಎಂದು. ಹೀಗೆ ಜೀವ ಕೋಟಿಗಳೆಲ್ಲಾ ಹುಟ್ಟಿಬಂದವು. ನಾನೀಗ ಆ ಹುಲ್ಲಾಗಬೇಕು. ನನ್ನ ಮನಸ್ಸಿನ ಪ್ರಾರ್ಥನೆ ಚಂದ್ರನನ್ನು ನನ್ನ ಬಳಿಗೆ ಕರೆತರಬೇಕು. ಹೀಗೆಲ್ಲಾ ಮಾಡಿ ಅವನನ್ನು ಮತ್ತೆ ನನ್ನ ಜೊತೆ ಉಳಿಸಿಕೊಳ್ಳಬೇಕು ಎಂದುಕೊಳ್ಳುವ ಲೆಕ್ಕಾಚಾರ ಕ್ರೂರ ಎಂದು ನಿನಗೆ ಎಂದಿಗಾದರೂ ಅನ್ನಿಸಿದೆಯೇ?’. `ಇಲ್ಲ ನಿನ್ನ ಹಾಗೆ ನಾನು ಯೋಚಿಸಲ್ಲ ನನಗೆ ಬೇಕು ಅನ್ನಿಸಿದ್ದು ಬೇಕು. ಅದನ್ನು ಪಡೆಯಲು ಏನನ್ನು ಬೇಕಾದರೂ ಮಾಡುತ್ತೇನೆ. ನಿನ್ನ ಹಾಗೆ ಅರಿವು ಪ್ರಜ್ಞೆ ಎಂದು ಹೊರಡುವುದಿಲ್ಲ’ ಎಂದೆ ಕೋಪದಿಂದ. `ಕೊಂಬೆಯಿಂದ ನೀನು ಎಷ್ಟೇ ಗೆರೆ ಹಾಕು ಆದು ನೀರ ಮೇಲೆ ನಿಲ್ಲದು ಅಲ್ಲವಾ? ಜತನದಿಂದ ಕಾಪಾಡಿಕೊಳ್ಳುವ ಸಂಬಂಧಗಳು ಹಟಮಾರಿತನದಿಂದ ಹಾಳಾಗುತ್ತವೆ. ಕೈ ಬಲವಂತದಿಂದ ಹಾಕುವ ಗೆರೆಗಳು ಹಾಳಾಗುವುದರಲ್ಲಿ ಅನುಮಾನವೇ ಇಲ್ಲ. ಕಿರುಗಾವಲ ನಡುವೆ ಇರುವ ತುಂಡು ಗೋಡೆಗಳು ಬಿದ್ದು ಹೋದರೆ ಅಡೆತಡೆ ಇಲ್ಲದ ವಿಶಾಲ ಬಯಲೇ ಕಾಣುತ್ತದೆ. ಕಾಣಬೇಕೆನ್ನುವುದು ನಿನ್ನ ಒಳಗಿನ ಅಭೀಪ್ಸೆ ಮಾತ್ರ ಆಗಿರಬೇಕು’. ಅವಳ ಮಾತುಗಳೆಲ್ಲಾ ಬೂರುಗದ ಹತ್ತಿ ಬೀಜವನ್ನು ತುದಿಗೆ ಅಂಟಿಸಿಕೊಂಡು ಚಕ್ರಾಕಾರವಾಗಿ ಸುತ್ತಿ ಸುತ್ತಿ ಇಳಿದ ಅನುಭವವುಂಟು ಮಾಡುತ್ತದೆ. ಅದು ನೆಲಕ್ಕಿಳಿಯುವ ತನಕ ಗಾಳಿ ಅದನ್ನು ಯಾವ ದಿಕ್ಕಿಗೂ ತಳ್ಳಿಬಹುದು. ನಾನು ಹೀಗೆ ಹೇಳಿದಾಗ ಶ್ಯಾಮು ನಕ್ಕುಬಿಡುತ್ತಿದ್ದಳು, `ಮಾತು ಮಾನಸ ಸಂಚರ ಅಂತ ಸುಮ್ಮನೆ ಹೇಳಿಲ್ಲವೇ, ನೀನು ಪದ್ಯ ಬರಿ ಒಳ್ಳೆ ಕವಿಯಾಗುತ್ತೀ’ ಎಂದು. ನನಗದರಲ್ಲಿ ಆಸಕ್ತಿ ಇಲ್ಲ ಎಂದು ಅವಳ ಮಾತನ್ನು ತಳ್ಳಿ ಹಾಕಿದ್ದೆ.

ಅಂದು ರಾತ್ರಿ ನನಗೆ ಕನಸೊಂದು ಬಿದ್ದಿತ್ತು- ಭಯಂಕರವಾಗಿತ್ತು ಕೂಡಾ. ಬೆಟ್ಟ ಗುಡ್ಡಗಳ ಆ ಊರಿನ ತುಂಬಾ ದೇವಸ್ಥಾನಗಳೇ. ಕೆಲವು ಉಳಿದವು ಇನ್ನು ಕೆಲವು ಹಾಳಾದವು. ಊರನ್ನು ನೋಡಲಿಕ್ಕೆ ಬಂದ ಶ್ಯಾಮು ಅವಳೊಂದಿಗೊಬ್ಬ ಹುಡುಗ. ಆ ಹುಡುಗ ಶ್ಯಾಮುವಿನ ಪ್ರಿಯಕರ ಇನ್ನೂ ಚಿಕ್ಕವ. ದೂರದಿಂದ ಬಂದ ಇಬ್ಬರಿಗೂ ರಾತ್ರಿ ಅಲ್ಲೇ ಉಳಿಯುವುದು ಅನಿವಾರ್ಯವಾಗುತ್ತದೆ. ಅವರಿಬ್ಬರೂ ಯಾವುದೋ ಒಂದು ಮನೆಗೆ ಬರುತ್ತಾರೆ. ಹಣ ತೆಗೆದುಕೊಂಡು ಅವರಿಗೆ ಕೋಣೆಯನ್ನು ಬಿಟ್ಟುಕೊಡಲಾಗುತ್ತದೆ. ಅಚ್ಚರಿ ಎಂದರೆ ಆ ಕೋಣೆ ಥೇಟ್ ಶ್ಯಾಮು, ಚಂದ್ರರ ಕೋಣೆಯ ಹಾಗೇ ಇರುತ್ತದೆ. ಅವರಿಬ್ಬರ ಮಧ್ಯೆ ಪ್ರೀತಿ ಪ್ರೇಮ ನಡೆಯುತ್ತದೆ. ಶ್ಯಾಮು ಮತ್ತಳಾಗಿ ಅವನೊಂದಿಗೆ ಶೃಂಗಾರದಲ್ಲಿ ತೊಡಗುತ್ತಾಳೆ. ಮದುವೆಯಿಲ್ಲದೆ ಒಟ್ಟಿಗೆ ಇರುವುದನ್ನು ಈ ಸಮಾಜ ಒಪ್ಪುವುದಿಲ್ಲ. ಒಪ್ಪಬಾರದು ಕೂಡಾ. ಮಧ್ಯರಾತ್ರಿ ಚಂದ್ರನ ಕಡೆಯವರು ಅವರಿಬ್ಬರೂ ಎಲ್ಲಿದ್ದಾರೆಂದು ತಿಳಿದುಕೊಂಡು ಬಂದು ಅವರಿಗೆ ತೊಂದರೆ ಕೊಡುತ್ತಾರೆ. ಆ ಹುಡುಗನನ್ನು ಸಾಯಿಸಿ, ನೀರಿನ ತೊಟ್ಟಿಯಲ್ಲಿ ಮುಳುಗಿಸಿ, `ಹೀಗೆ ಮಾಡುವವರಿಗೆ ಶಿಕ್ಷೆ ಇದೇ’ ಎಂದು ಕೂಗಾಡುತ್ತಾ ಹೊರಡುತ್ತಾರೆ. ಶ್ಯಾಮು ಬಿಕ್ಕುವುದಿಲ್ಲ. ಆಶ್ರಯ ಕೊಟ್ಟ ಮನೆಯವರು ಅವಳನ್ನು ಬೈಯ್ಯುತ್ತಾರೆ, `ನಿನ್ನಿಂದ ಈ ಚಿಕ್ಕ ಹುಡುಗ ಹೆಣವಾಗಿ ಹೋದ. ಇಷ್ಟು ವಯಸ್ಸಾದ ನಿನಗಾದರೂ ಬುದ್ಧಿ ಬೇಡವೇ?’ ಎಂದು. ಶ್ಯಾಮು ಮಾತ್ರ ಧೈರ್ಯ ಕುಂದದೆ ಆ ಹೆಣವನ್ನು ನೀರಿಂದ ಮೇಲೆತ್ತಿಕೊಂಡು ಹೆಗಲ ಮೇಲೆ ಹಾಕಿಕೊಂಡು ಹೊರಡುತ್ತಾಳೆ. ಅವಳಿಗೆ ಆಸರೆ ಕೊಟ್ಟ ಆ ಮನೆಯವರು, `ಭಾರವನ್ನು ಎತ್ತಿಕೊಂಡು ಹೇಗೆ ಹೋಗುತ್ತೀ ಒಬ್ಬಳಿಂದಾಗದು’ ಎಂದಾಗ, `ಸತ್ತಿರುವುದು ನೆನಪಲ್ಲ, ಪ್ರೀತಿಯಲ್ಲ. ನನಗೆ ಯಾವುದೂ ಭಾರವಲ್ಲ’ ಎನ್ನುತ್ತಾಳೆ. ಧಡಕ್ಕೆಂದು ಎಚ್ಚರವಾಗುತ್ತದೆ. ಶ್ಯಾಮು ನಿಶ್ಚಿಂತಳಾಗಿ ಪಕ್ಕದಲ್ಲೇ ಮಲಗಿದ್ದಾಳೆ. ಕನಸಿನಲ್ಲಿ ಕಂಡ ಶ್ಯಾಮುವಿನ ದೃಢವಾದ ಮುಖ ಮತ್ತೆ ಕಣ್ಣೆದುರು ನಿಂತು ಅಣಕಿಸಿದಂತಾಯಿತು.

- ಪಿ. ಚಂದ್ರಿಕಾ

ಈ ಅಂಕಣದ ಹಿಂದಿನ ಬರೆಹಗಳು:
ಪ್ರಪಂಚ ಒಂದು ಸುಂದರ ಕನಸು
ಕಾಲು ಜಾರಿ ಬಿದ್ದವನು ಹಲವರಿಗೆ ದಾರಿ ತೋರುವನು
ಕಂದನಂತೆ ಚಂದಿರನ ಬಾನು ಎತ್ತಿ ಆಡಿಸುತಲಿಹುದು
ತೇಲಿಸು ಇಲ್ಲ ಮುಳುಗಿಸು
ಭಾವಶುದ್ಧಿಯೇ ಆಧ್ಯಾತ್ಮ
ಕಿರಿದನ್ನು ಕಿರಿದರಲ್ಲೇ ನೋಡು
ಅನುಭವದಲ್ಲಿ ಘನೀಭವಿಸುವ ವಿಶ್ವದ ರಹಸ್ಯಮಯ ಸಂಗತಿಗಳು

ಬಿಟ್ಟುಬಿಡುವುದೆಂದರೂ ಕಟ್ಟಿಕೊಳ್ಳುವುದೇ
ಗಾಳದ ದಾರ ದೂರಕ್ಕೆ ಬಿಡುವುದು ಮೀನಿನ ಆಸೆಗೆ
ಕಳಚಿಕೊಳ್ಳುವುದೂ ಆಟದ ಭಾಗವೇ.
ಸರಿದ ಸೆರಗಿನಲ್ಲಿ ಅಡಗಿದ್ದು ಸೂರ್ಯ ಚಂದ್ರ
ಪ್ರಾರ್ಥನೆ; ಪದಾರ್ಥವಲ್ಲ, ಪರಾರ್ಥ
ಜಗತ್ತಿನ ಮೇರು ತಾಯಿ
ನಿಧಿಯ ಕನವರಿಕೆ
ಅವಳ ಧ್ಯಾನಕ್ಕೆ ಒಳಿತೇ ಗುರಿ
ಅನುಬಂಧಗಳ ಲೀಲೆ
ಕನಸಿನೊಳಗಿನ ನನಸು
ನೀಲಿ ಕಣ್ಣುಗಳ ಮುತ್ತಜ್ಜಿ ಮತ್ತು ನಾನು

MORE NEWS

ಮೊದಲ ನಾಟಕದ ಮೊದಲ ಟೀಮ್ ಸ್ಪಿರಿಟ್

08-12-2025 ಬೆಂಗಳೂರು

"ರಂಗಾಭ್ಯಾಸದಲ್ಲಿ ಮೊದ ಮೊದಲು ಅರ್ಥಾತ್ ಆರಂಭಕ್ಕೆ ಭಾಷಿಕವಾಗಿ ಸಣ್ಪುಟ್ಟ ತೊಡಕುಗಳು ಕಾಡಿದವು. ಪ್ರತಿಗಂಧರ್ವ ಹೆಸ...

ಪುರುಷವತಾರ- ದೇಹ ಮೀಮಾಂಸೆಯ ಕಥನ 

05-12-2025 ಬೆಂಗಳೂರು

"`ಪುರುಷಾವತಾರ’ ಕಾದಂಬರಿಯಲ್ಲಿ ಗೋಸಾಯಿ ಗುರು ಹನುಮಂತ ಒಂಟಿಮನಿ ಅವರಿಗೆ ಹೇಳುವ ಮಾತುಗಳಿವು. ಈ ಮಾತುಗಳು ಕ...

DAILY COLUMN: ಮಗುವಿನ ಪ್ರಾಗ್ನಿಕ ರಚನೆ, ಕಲಿಕೆ ಮತ್ತು ಬಾಶೆ

04-12-2025 ಬೆಂಗಳೂರು

"ತಾಯ್ಮಾತು ಮತ್ತು ಶಿಕ್ಶಣ ಮಾದ್ಯಮ ಇವುಗಳ ನಡುವಿನ ರಾಚನಿಕ ಬಿನ್ನತೆಗಳೂ ಕೂಡ ಪೆರಮಾತಿನ ಶಿಕ್ಶಣದ ಸೋಲಿಗೆ ಕಾರಣವಾ...