Poem

ನಕ್ಷತ್ರ ಬಿತ್ತಿ ಬೆಳೆದ ಮುತ್ತಿನ ಬೆಳೆ

ಸುರಿವ ಮಳೆಹನಿಗಳ ಬೊಗಸೆಯಲ್ಲಿ ಹಿಡಿದು,
ಸಮುದ್ರ ಮಾಡಿದಿರಿ
ಉಪ್ಪುಂಡ ಸಮುದ್ರ
ನಿಮ್ಮ ಸ್ಪರ್ಷದಿಂದ ತಿಳಿ ನೀರಾಯಿತು

ಹರಿದು ಚೂರಾದ ಮನಗಳ
ಬಯಲ ಸೂಜಿಯ ಹಿಡಿದು
ಲೋಕಾಂತವ ಹೊಲಿದು
ಆಕಾಶವ ಮಾಡಿದಿರಿ.
ಆಕಾಶ ನಂದನ ವನವಾಯಿತು

ನಕ್ಷತ್ರಗಳ ಉತ್ತಿ ಬಿತ್ತಿ ಮುತ್ತಿನ ಬೆಳೆ ಬೆಳಿದಿರಿ.
ಹಕ್ಕಿಹಿಂಡುಗಳು ಬಂದು
ತಿಂದುಂಡು ಹಿಕ್ಕಿ ಹಾಕಿ ಹೋದವು
ಅದನ್ನೇ ಗೊಬ್ಬರ ಮಾಡಿ ಉತ್ತುತ್ತಲೇ ಇದ್ದೀರಿ

ಬಣ್ಣ ಬಣ್ಣದ ಕುಲಾಯಿಗಳ ಹಿಡಿದ ದಂಡು
ನಿಮ್ಮ ತೋಟದ ತೆನೆಗಳ ತಿನ್ನಲು ಬೆನ್ನತ್ತಿದವು.
ಬೆನ್ನು ಬಾಗಿಸದೆ
ಹೊತ್ತು ಮುನ್ನೆಡಿದಿರಿ ನಿಮ್ಮದೇ ದಾರಿಯಲಿ

ರಾಗಗಳ ಜೋಳಿಗೆಯಲಿ ಪ್ರತಿಭೆಗಳ ತುಂಬಿಸಿದಿರಿ.
ಮುಂದೊಂದು ದಿನ ‌ಬನದ ಹೂಗಳು
ಅರಳಿ ಮಂದಾರ ಬೀಸಲೆಂದು

ಭವದ ಕೋಲಿನಲಿ ಅನುಭಾವವ ಊರಿದಿರಿ.
ಬಯಲ ನಡೆ ನುಡಿಯ ತೊಟ್ಟು,
ಕರುಣೆಯ ಕಳಸ ಹೊತ್ತು
ನಡೆಯೂತ್ತಲೇ ಇದ್ದೀರಿ ಘರಾನದ ನಾಡಿನಲಿ

- ಡಾ. ರಾಜಶೇಖರ ಹಳೆಮನೆ, ಉಜಿರೆ

 

ರಾಜಶೇಖರ ಹಳೆಮನೆ

ರಾಜಶೇಖರ ಹಳೆಮನೆ ಅವರು ಸೂಕ್ಷ್ಮ ಸಂವೇದನೆಯ ಕತೆಗಾರ ಹಾಗೂ ಅಪರೂಪದ ಒಳನೋಟಗಳುಳ್ಳ ವಿಮರ್ಶಕರು ಎಂದೇ ಪ್ರಸಿದ್ಧರು. ವಿಜಯ ಕರ್ನಾಟಕ, ಅಕ್ಷಯ ಮತ್ತು ಕರ್ಮವೀರ ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡಮಿಯು ಸಂಯೋಜಿಸಿದ ಸಮಾವೇಶದಲ್ಲಿ ಅವರು ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಈ ತನಕ ಪ್ರಕಟಿಸಿದ ಮೂರು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರಿಗೆ 2019ನೇ ಸಾಲಿನ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಸಂದಿದೆ.

More About Author