Poem

ರಂಗೋಲಿ

ಮನೆಯಂಗಳದ ರಂಗವಲ್ಲಿ
ಸುಖ ಶಾಂತಿ ತೋರುವಲ್ಲಿ
ನಕಾರಾತ್ಮಕತೆ ಇಲ್ಲ ಇಲ್ಲಿ
ಸಕಾರಾತ್ಮಕತೆ ಎಲ್ಲವೂ ಇಲ್ಲಿ ||

ಬಣ್ಣ ಬಣ್ಣದ ಕಲ್ಲಿನ ಪುಡಿಯು
ಹೂವು ಕೆಮ್ಮಣ್ಣು ಉಪ್ಪು ಜೋಡಿಯು
ಪೂಜಾ ಸ್ಥಳದ ಅಲಂಕಾರದ ಮಡಿಯು
ಚಿತ್ತಾರದ ರಂಗವಲ್ಲಿಯ ಮೋಡಿಯು ||

ನೀಲಾಕಾಶದ ನಕ್ಷತ್ರದಂತೆ
ಧ್ಯಾನಕ್ಕಾಧಾರ ಬಿಂದುವಿದಂತೆ
ಬಿಳಿಚುಕ್ಕಿಯಿದು ಪುರುಷರಿಗಂತೆ
ಕೆಂಪುಚುಕ್ಕಿ ಸ್ತ್ರೀ ಪ್ರತೀಕವಂತೆ ||

ಭೂತಾರಾಧಕರು ನಾಟಿವೈದ್ಯರು
ದೈವಾರಾಧಕರು ತಂತ್ರಗಾರರು
ತ್ರಿಭುಜ ಷಡ್ಬುಜ ಸೂರ್ಯ ಚಂದಿರ
ವಿವಿಧ ಬಗೆಯ ರಂಗೋಲಿ ಸುಂದರ ||

ಸ್ವಸ್ತಿಕ ಚಕ್ರ ಸೂರ್ಯನ ಸಂಕೇತ
ಪದ್ಮದಿ ನೋಡು ಲಕ್ಷ್ಮೀಯ ಬಿಂಬಿತ
ವೃತ್ತಾಕಾರ ಶುಭಕಾರ್ಯದ ಶೋಭಿತ
ಚತುಸ್ರಾಕಾರ ಸ್ಥಿರತೆಗೆ ಸೂಚಿತ ||

ಬೆರಳ ಸಹಾಯದಿ ಮೂಡಿದ ಕಲೆಯಿದು
ಹುಡಿ ಮಣ್ಣಿನ ಧೂಳಿಚಿತ್ರವಿದು
ಬಿಂದುಜವೆಂಬ ಕಲೆಯ ಭಾಗವಿದು
ಬಣ್ಣ ಬಣ್ಣದ ರಂಗೋಲಿಯಿದು ||

ರಂಗನ ಒಲುಮೆಯ ಬಣ್ಣದಾವಳಿಯಿದು
ಭಗವಂತ -ಭಕ್ತನ ನಡು ಸೋಪಾನವಿದು
ಲೋಪಾಮುದ್ರೆ ಕಂಡ ಲಲಿತಕಲೆಯಿದು
ಸ್ವಚ್ಛಂದ ಸುಂದರ ರಂಗೋಲಿಯಿದು

ವಿದ್ಯಾಕುಮಾರ ಮ ಬಡಿಗೇರ

ಯಾದಗಿರಿ ಜಿಲ್ಲೆಯ, ಹುಣಸಗಿ ತಾಲೂಕಿನ ಕವಿ ವಿದ್ಯಾಕುಮಾರ .ಮ.ಬಡಿಗೇರ.ವೃತ್ತಿಯಲ್ಲಿ  ಸ. ಕಿ.ಪ್ರಾ.ಶಾಲೆ ಹೆಬ್ಬಾಳದ ಪ್ರಾಧ್ಯಾಪಕರು.ತಬಲಾ ವಾದನ,ಪದಬಂಧ ರಚನೆ,ಕವನ ರಚನೆ, ನಾಟಕ ರಚನೆ ಇವರ ಹವ್ಯಾಸ.

ಶಿಕ್ಷಕ ರತ್ನ ಪ್ರಶಸ್ತಿ, ಮಕ್ಕಳು ಮೆಚ್ಚಿದ ಮೆಷ್ಟ್ರುವಿಶ್ವಕರ್ಮ ಅನರ್ಘ್ಯ ಸೇವಾ ರತ್ನ ಪ್ರಶಸ್ತಿ,ಸಾಹಿತ್ಯ ಶ್ರೀ-ಪ್ರಶಸ್ತಿ,ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿದೆ. ಇವರು ಬರೆದ ಅನೇಕ ಕವನಗಳು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.ಸುಮಾರು ನೂರಕ್ಕೂ ಹೆಚ್ಚು ಕವಿಗೋಷ್ಠಿಯಲ್ಲಿ ಭಾಗವಹಿಸಿರುವ ಅನುಭವಿ. 

ಪ್ರಕಟಿತ ಕೃತಿಗಳು 

ಸುಧಾ ರಸಧಾರೆ - ಕವನ ಸಂಕಲನ 2013
ಹೃನ್ಮಣಿ - ಕವನ ಸಂಕಲನ 2015

More About Author