Poem

ಕತ್ತಲ ದೀಪ್ತಿ

ಲೇಖಕಿ ವಿಮಲಾರುಣ ಪಡ್ಡoಬೈಲು ಬರೆದ ಕವಿತೆಯ ಸಾಲುಗಳು....

ಕತ್ತಲ ಹಾದಿಲಿ
ಬತ್ತದ ನಗು ಹೊಂಬೆಳಕ ಸೂಸಿ
ಕಣ್ಣ ಕಾಡಿಗೆಲಿ ಕನಸ ಪೋಣಿಸಿ
ಸೆಳೆಯುತ್ತಿದ್ದಳು ಹೊನ್ನ ಮೈಮಾಟದಿ.

ರಸಿಕರು ಬೇಗುದಿಯ ತಣಿಸಲು
ಕಂಪು ಬೀರುವ ಸುಗಂಧವಿಡಿದು
ಅವಳ ಹೆಜ್ಜೆಯ ಮೇಲೆ
ಹೆಜ್ಜೆ ಇಟ್ಟು ಕತ್ತಲಲಿ ಮರೆಯಾದರು.

ಸಂತೃಪ್ತಿಯ ಸಿರಿ ಹೊತ್ತು
ಹಸನ್ಮುಖದಿ ಹೊಕ್ಕವರ ನಿರ್ಗಮನ
ಸುತ್ತಲೂ ಹರಡಿತು
ಕನ್ನಿಕೆಯ ಬೆತ್ತಲ ಮನಸ್ಸಿನ ಕತ್ತಲ ಸೇವೆ.

ಅದೆಂಥ ಜಾಲ ಹೆಣೆದಿದ್ದಳು
ವಿಲಾಸರಿಗೆ ನವಚೇತನ ತುಂಬಿ
ಬದುಕಿನ ಮೌಲ್ಯದರಿವ ಬಿತ್ತಿ
ಸೃಷ್ಟಿಸಿದಳು ಪರಿಮಳ ಹೂವಲ್ಲಿ ಕಾಯ
ತೊಟ್ಟಳು ನೋಟುಗಳ ಮಾಲೆ
ಓರಗೆಯ ಕಣ್ಣ ಕೆಂಪಾಗಿಸಿತು!.

ಮೋಹವೋ ಸಂಶಯವೋ
ಬಾಳಸಂಗಾತಿಯ ಅರಸುತಾ
ಸ್ತ್ರೀಯರು ಹೂ ಹಿಡಿದು ಕದ ತಟ್ಟಿದರು
ಕೋಲ್ಮಿಂಚಂತೆ ನಾಟಿತು
ಕನ್ನಿಕೆಯ ಕಣ್ಣ ಕಾಂತಿಯ ಹೊಳಹು.

ಬೆರಗಾಗಿಸಿತು ಹಂದರದ ಸುಂದರ
ಸುತ್ತಲಿನ ಸುಗಂಧ ಒಳಗುದಿಯ ಅಳಿಸಿ
ಕಸಬಲಿ ಒಂದಾದ ಹತ್ತಾರು ಕೈಗಳಲಿ
ಬಾಳಸಂಗಾತಿ ಕರ ಸೇರಿತ್ತು.

ಅರಸುತ್ತಾ ಬಂದ ಸ್ತ್ರೀಯರು ಒಗ್ಗೂಡಿ
ಸಂಗಾತಿಯ ಕಾಯದಿ ಕರಸೇರಿಸಿ
ಮನದ ಕಲ್ಮಶ ಸ್ವೇದಾ ಬಸಿದು
ಪರಿಮಳ ಪುಷ್ಪ ಸುಗಂಧವಾಗಿ
ಮಾರುಕಟ್ಟೆಗೆ ಸುವಾಸನೆ ಪಸರಿಸಿತು.

ಕನ್ನಿಕೆಯ ಸುಂದರ ಹಂದರದಿ
ಅಂಧಕಾರದ ಮನಕೆ ಹಣತೆ ಹಚ್ಹಿ
ದಿವ್ಯಜ್ಞಾನದತ್ತ ಒಯ್ಯತ್ತಿದ್ದರು
ಬಸವಳಿದ ಬದುಕಿಗೆ ಆಶ್ರಯಿಸಿ
ಕಾಯಕವೇ ಕೈಲಾಸ ನಾದ
ಸುತ್ತಲೂ ಹೊಮ್ಮಿ ಬದುಕು ಸಂತಸದಿ ಜೀಗಿತ್ತು.

ವಿಮಲಾರುಣ ಪಡ್ಡಂಬೈಲು

ವಿಮಲಾರುಣ ಪಡ್ಡಂಬೈಲು. ಎಂ.ಎ. ಬಿ.ಎಡ್ ಪದವೀಧರರು.ಕನ್ನಡ ಹಾಗು ಅರೆಭಾಷೆಗಳಲ್ಲಿ ಕಥೆ, ಕವನ , ಲೇಖನ, ಲಲಿತ ಪ್ರಬಂಧ ರಚನೆ ಇವರ ಹವ್ಯಾಸ.

ಪ್ರಕಟಿತ ಕವನಸಂಕಲನಗಳು : ಇಬ್ಬನಿಯ ಹನಿ ಮತ್ತು ಮಿಂಚುಹುಳು, ಸೂoತ್ರಿ (ಅರೆಭಾಷೆ) ಕಥಾ ಸಂಕಲನ ಅಚ್ಚಿನಲ್ಲಿದೆ.

ಅವರ ಕಥೆ, ಕವನ, ಲೇಖನ,ಲಲಿತ ಪ್ರಬಂಧ ಹಾಗೂ ಅವಲೋಕನ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮಡಿಕೇರಿ ಆಕಾಶವಾಣಿಯಲ್ಲಿ ಕಥೆ, ಕವನ ವಾಚನ, ಲಲಿತ ಪ್ರಬಂಧ ಪ್ರಸಾರಗೊಂಡಿದೆ. 
ತಾಲೂಕು, ಜಿಲ್ಲಾ, ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚನ ಮತ್ತು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆಯಾಗಿ,ಕಾರ್ಯಕ್ರಮ ನಿರ್ವಹಿಸಿದ ಅನುಭವವಿದೆ. 

More About Author