Poem

ರಾಧಾ-ಮಾಧವ

ತೀರ್ಥಹಳ್ಳಿ ಮೂಲದ ಅನಂತ್ ಹರಿತ್ಸ ಅವರು ಬರೆದ 'ರಾಧಾ-ಮಾಧವ' ಕವಿತೆಯ ಸಾಲುಗಳು ಹೀಗಿವೆ...

ಮಾಧವ ನುಡಿಸಿದ ಮುರಲಿಯ ರವಕೆ
ತಲೆಯಾಡುತ ಕುಣಿದವು ಗೋವುಗಳು..
ಮೇಘಶ್ಯಾಮನ ಕೊಳಲಿನ ಗಾನಕೆ
ನಲಿದವು ಚಿಗರೆ, ನವಿಲುಗಳು
// ಮಾಧವ ನುಡಿಸಿದ ಮುರಲಿಯ ರವಕೆ //

ದೂರದಿ ಎಲ್ಲೋ ವಿರಹದ ಹೃದಯದಿ
ಕನಸುತ ರಾಧೆಯು ಕೃಷ್ಣನನು
ನಾದದ ಕರ್ಣಾನಂದ ತರಂಗದಿ
ಹುಡುಕಲು, ಬರುವನೆ.. ಪ್ರಿಯತಮನು?
// ಮಾಧವ ನುಡಿಸಿದ ಮುರಲಿಯ ರವಕೆ //

ಮರೆತನೆ ತನ್ನನು ನಂದಕಿಶೋರನು?
ಸೋಲುತ ಮನದಲೆ ಮುನಿದಿಹಳು
ಕಾಣದೆ ಕೇಳುವ ವೇಣುನಿನಾದಕೆ
ಸಿಡುಕುತ ಪಿಣಿಲನು ಕೊಡವಿದಳು.
// ಮಾಧವ ನುಡಿಸಿದ ಮುರಲಿಯ ರವಕೆ //

ಸೆರಗನು ಹಿಡಿದು ಕಾಯುತ ಕಾದಲೆ,
ಒರೆಸುತ ಕಂಗಳ ಹನಿಗಳನು
ಮುಕುರದ ಎದುರು ಉಲಿದಳು ಒಲವಲಿ
ಉರದಲೆ ಮಾಧವ ನೆಲೆಸಿಹನು..!!

ಮಾಧವ ನುಡಿಸಿದ ಮುರಲಿಯ ರವಕೆ
ತಲೆಯಾಡುತ ಕುಣಿದವು ಗೋವುಗಳು..
ಮೇಘಶ್ಯಾಮನ ಕೊಳಲಿನ ಗಾನಕೆ
ಗೋಪಿಕೆಯರು ತಲೆದೂಗಿದರು..
// ಮಾಧವ ನುಡಿಸಿದ ಮುರಲಿಯ ರವಕೆ //

ಅನಂತ ಹರಿತ್ಸ

ಅನಂತ ಹರಿತ್ಸ(ಅನಂತ ಮೂರ್ತಿ ಕೆ.ವಿ) ಅವರು ಮೂಲತಃ ತೀರ್ಥಹಳ್ಳಿಯವರು. ಪ್ರಸ್ತುತ ವಿದ್ಯುತ್ ಸಮಾಲೋಚಕರಾಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರೇಖಾ ಚಿತ್ರ ಪೇಯಿಂಟಿಂಗ್, ಕತೆ, ಕವನ, ಲೇಖನ, ಗಿಟಾರ್, ಫೋಟೊಗ್ರಫಿ ,ಸಂಗೀತ ಅವರ ಹವ್ಯಾಸವಾಗಿದೆ. ಇವರ ಅನೇಕ ಲೇಖನ ಕವನಗಳು ತರಂಗ, ವಿಜಯಕರ್ನಾಟಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತದೆ.

More About Author