Poem

ಆತ್ಮ ಸಂಗಾತಿ  

ನನ್ನ ಕವಿತೆಯ ಸಾಲುಗಳಲಿ
ಬರುವ ಹುಡುಗಿ,
ಅಕ್ಕನ ಚೆನ್ನಮಲ್ಲಿಕಾರ್ಜುನನ ಹಾಗೆ;
ಸಾವಿಲ್ಲದ, ಕೇಡಿಲ್ಲದ, ರೂಹಿಲ್ಲದ ಚೆಲುವೆ.

ಈ ಕಾವ್ಯ ಕನ್ನಿಕೆಯು ತನ್ನ
ಚೆಲುವಿನ ಸೊಬಗಿನಲಿ,
ಸಹಸ್ರ ಪ್ರಣತಿಗಳ ಹಾಗೆ
ಬೆಳಕು ಚೆಲ್ಲುವ,
ಅಂತರಂಗದ ಕೋಮಲ ಬೆಳಕು.

ನನ್ನ ಕನಸುಗಳ ಜೊತೆ
ಮಲಗಿಕೊಂಡವಳು;
ನಲುಗಿಕೊಂಡವಳು.
ಕನಸಿನ ಕೌದಿ ಹೆಣೆದು, ಹೊದ್ದು, ಹಾಸಿ ,
ಹೊಸ ಹೊಸ ಬಣ್ಣ ತುಂಬಿದವಳು.

ತನ್ನ ಪಿಸುಮಾತಿನ ಸಂಭಾಷಣೆಗಳಿಂದ,
ಮೈಯಲ್ಲ ಉನ್ಮಾದ ಸೃಷ್ಟಿಸಿ,
ನನ್ನೆದೆಯ ಮೇಲೆಲ್ಲ ಹೊಸ ಭಾಷ್ಯ
ಬರೆದವಳು,
ಕವಿತೆಗೂ ಮೀರಿದ ಧ್ವನಿಯಾದವಳು.

ನಸುಗೆಂಪು ಗಲ್ಲಗಳಿಂದ
ಹೂನಗೆ ಸೃಷ್ಟಿಸಿ,
ತಂಗಾಳಿ ಬೀಸಿ ಹೋದವಳು.
ನನ್ನ ಒಡಲ ದನಿ; ಒಡಲಾಳದ ದನಿ.
ಎಂದಿಗೂ ಮುಗಿಯದ ಕನಸು..

ನನ್ನ ಕವಿತೆಗಳಲಿ ಹುದುಗಿರುವ
ಅವಳು,
ಕಣ್ಣಿಗೆ ಕಾಣದ
ಬರೀ ಕಲ್ಪನೆಯ ಆಕೃತಿ ಆದರೂ,,
ಗೆಳತಿ - ಆತ್ಮ ಸಂಗಾತಿ.
ಕಾಡಿ ಕಲಕುವ ಚೆಲುವೆ;
ದೇವಲೋಕದ ಪ್ರತಿಕೃತಿ....

ಬಸವ ಪಾಟೀಲ ಜಾವಳಿ
9481470600

ಬಸವ ಪಾಟೀಲ ಜಾವಳಿ

ಬಸವ ಪಾಟೀಲ ಜಾವಳಿ ಅವರು ಮೂಲತಃ ಕಲಬುರಗಿಯವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದೆ. ಅವರ ಕವನಗಳು ಪತ್ರಿಕೆಗಳಲ್ಲಿಯೂ ಪ್ರಕಟಗೊಂಡಿರುತ್ತದೆ.

More About Author