Poem

ಆವಿಯಾಗಿದೆ ಭಾಷೆ

 

ಮಗ;
ಅಮ್ಮಾ ನಾಳೆಯಿಂದ ನಾನಿರುವುದಿಲ್ಲ
ನೀನು ನಗುತ್ತಾ ಇರು
ನಿನ್ನೆಯೂ ಅಳುತ್ತಿದ್ದೆ ನೀನು
ವೇದನೆಯಲ್ಲಿ ಅದ್ದಿದ ಒದ್ದೆ ಕಣ್ಣು
ಉಬ್ಬುಬ್ಬಿ ಏರಿಳಿವ ಕೊರಳಸೆರೆ
ಕಣ್ಣ ಕಿಟಕಿಯಲ್ಲಿ ಕಾಣುತ್ತಿತ್ತು.

ಅದು ಕನಸೇ ಇರಬೇಕು
ಬಿಚ್ಚಿದ ಹೆರಳಲ್ಲಿ ಮುಚ್ಚಿದ ನಿನ್ನ ಮುಖ
ಒಮ್ಮೆ ಮುದ್ದಿಸಬೇಕಿತ್ತು
ಆದರೆ ಹೆಬ್ಬಾಗಿಲಿಗೆ ಚಿಲಕ ಹಾಕಿತ್ತು
ಒಂದೂ ಶಬ್ದಹೊರಡಿಸಲಾಗದ ನಿನ್ನ
ಅಸಹಾಯ ನೋಟ ಹೆಪ್ಪುಗಟ್ಟಿತ್ತು
ಎಚ್ಚರಾದಾಗ ಬಾಗಿಲು ತೆರೆದೇ ಇತ್ತು
ನೀ ಹಾಕಿದ ರಂಗೋಲಿ ನಗುತ್ತಿತ್ತು

ಜೋಡಿಸಿಟ್ಟ ಕಪಾಟಿನಂತೆ ಚೆಂದವಾಗಿತ್ತು
ಬೆಳಕಲ್ಲಿ ಎಲ್ಲವೂ
ಬಾಗಿಲೊಳಗೆ ಬಾಗಿಲು
ಸಣ್ಣಸಣ್ಣ ಸಂದೂಕು
ಬೀಗಹೊತ್ತ ಹತ್ತಾರು ಲೋಕಗಳು
ತಬ್ಬಿಬ್ಬಾಗಿ ನಿಂತ ನಿನ್ನ ತಬ್ಬಲಿ
ಬೆನ್ನಿಗೂ ಕಣ್ಣಿತ್ತು.

 

 

 

 

 

 

 

 

 

 

 

ಅಮ್ಮ:
ಮಗೂ ಇಂದು ನೀನಿಲ್ಲ
ಆದರೂ ಬೆಳಗಾಗಿದೆ ನೋಡು!
ಕುಕ್ಕರು ಚೀರುತ್ತಿದೆ
ಮಿಕ್ಸರು ಆಕ್ರಂದಿಸುತ್ತಿದೆ
ಈರುಳ್ಳಿಯ ಕಣ್ಣಲೂ ನೀರು!
ಸಣ್ಣ ಉರಿಯಲ್ಲಿ ಬೇಯುತ್ತಿದೆ ಎಲ್ಲವೂ…..

ನೀ ಅರ್ಧ ಬಿಡಿಸಿಟ್ಟ ಚಿತ್ರ ಆರ್ದ್ರಗೊಳಿಸುತಿದೆ
ನೂರಾರು ಕತೆಹೇಳಿ
ಹಾದಿಯಲಿ ಯಾರೋ ಬಿಟ್ಟುಹೋಗಿದ್ದ
ಮುದ್ದುಮರಿಗಳು ಮುಲುಗುತ್ತಿವೆ
ನಿನ್ನ ಕ್ಯಾನ್ವಾಸಿನೊಳಗೆ
ಹೊಳೆಯುತಿದೆ ಮರಿಗಳ ಒದ್ದೆ ಕಣ್ಣು
ಅಗಾಧ ಕತ್ತಲ ಒಳಗೆ
ನಿನ್ನ ಒಂದೊಂದೇ ಪ್ರಶ್ನೆಯ ಕಂಪನ
ಇಳಿಯುತಿದೆ ಹೊಕ್ಕಳಿನ ಆಳದೊಳಗೆ.

ಉರುಳುತ್ತಿವೆ ದಿನಗಳು
ಯಾರೋ ಒದ್ದ ಚೆಂಡಿನಂತೆ
ಗರ್ಭಚೀಲದೊಳಗಿಂದ ಅವನು
ಈಸಿ ಹೊರಬಂದ ಹಸಿಹಸಿ ನೆನಪ
ಹರವಿಕೂತ ಸಂಜೆ
ಮಗ ಪತ್ರ ಬರೆಯುತ್ತಾನೆ
‘ಅಮ್ಮಾ ಇಲ್ಲಿ ನಾನು ಕ್ಷೇಮ
ಅಲ್ಲಿ ನೀನು ನಗುತ್ತಾ ಇರು
ಮರುಟಪಾಲಿಗೆ ಅಮ್ಮ ಉತ್ತರಿಸುತ್ತಾಳೆ
‘ಮಗೂ ಇಲ್ಲಿ ನಾನೂ ಕ್ಷೇಮ
ಅಲ್ಲಿ ನೀನು ಜಾಣನಾಗಿರು’

ಚಿತ್ರ: ಮಲ್ಲಿಕಾರ್ಜುನಗೌಡ ತೂಲಹಳ್ಳಿ

ಗೀತಾ ವಸಂತ

ಗೀತಾ ವಸಂತ- ಕವಯತ್ರಿ, ಕಥೆಗಾರ್ತಿ ಮತ್ತು ವಿಮರ್ಶಕಿ. ಗೀತಾ ಅವರು ಹುಟ್ಟಿದ್ದು ಶಿರಸಿಯ ಎಕ್ಕಂಬಿ ಸಮೀಪದ ಕಾಡನಡುವಿನ ಒಂಟಿಮನೆ ಕಾಟೀಮನೆಯಲ್ಲಿ 1976 ಏಪ್ರಿಲ್ 20 ರಂದು  . ಈಗ ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಚೌಕಟ್ಟಿನಾಚೆಯವರು’ ಇವರ ಪ್ರಮುಖ ಕಥಾ ಸಂಕಲನ. ’ಹೊಸಿಲಾಚೆ ಹೊಸ ಬದುಕು , ಪರಿಮಳದ ಬೀಜ’ ಗೀತಾ ವಸಂತ ಅವರ ಕವನಸಂಕಲನಗಳು. ಬೆಳಕಿನ ಬೀಜ, ಬೇಂದ್ರೆ ಕಾವ್ಯ - ಅವಧೂತ ಪ್ರಜ್ಞೆ, ಹೊಸ ದಿಗಂತದ ಹೊಸದಾರಿ ಇವರ ಪ್ರಮುಖ ವಿಮರ್ಶಾ ಕೃತಿಗಳು, ಸ್ವಾತಂತ್ರ್ಯೋತ್ತರ ಕಥನ ಸಾಹಿತ್ಯದಲ್ಲಿ ಸ್ತ್ರೀವಾದಿ ಚಿಂತನೆಗಳು ಅವರ ಮಹಾಪ್ರಬಂಧ. ಪಾಟೀಲಪುಟ್ಟಪ್ಪ ಕಥಾ ಪ್ರಶಸ್ತಿ, ದೇವಾಂಗನಾ ಶಾಸ್ತ್ರಿ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ರತ್ನಮ್ಮ ಹೆಗಡೆ ಪ್ರಶಸ್ತಿಗಳು ದೊರೆತಿವೆ.

More About Author