Poem

ಹಾಡಿದ್ದು ನೋವೇ ಆದರೂ..

ಹಾಡಿದ್ದು ನೋವೇ
ಆದರೂ
ಜನ ಮುಗಿಲು ಮುಟ್ಟುವ ಹಾಗೆ
ಚಪ್ಪಾಳೆ ತಟ್ಟಿದರು!

ಪಟ್ಟಿದ್ದು ನೋವೇ
ಆದರೂ
ಜನ ಎದೆಯ ದನಿಯರಿಯದ ಹಾಗೆ
ಕುಣಿದು ಕುಪ್ಪಳಿಸಿದರು!

ಹೇಳಿದ್ದು ಸತ್ಯವೇ
ಆದರೂ
ಜನರು ನಿಗಿನಿಗಿ ಕೆಂಡದ ಹಾಗೆ
ಉರಿದು ಮೇಲೆ ಬಿದ್ದರು!

ಕೇಳಿದ್ದು ದಿಟವೇ
ಆದರೂ
ಸತ್ಯದ ತಲೆಯ ಮೇಲೆ ಹೊಡೆದ ಹಾಗೆ
ಹುಸಿಯನೇ ನಿಜವೆಂಬಂತೆ ವಾದಿಸಿದರು!

ರೋಧನ ಅರಣ್ಯ ರೋಧನವಾಗಿ
ಸತ್ಯದ ಜೀವಕೆ ಸಾವಿನ ಮೊಳೆಯ ಹೊಡೆದು
ಅಸತ್ಯದ ಹೆಗಲ ಮೇಲೆ ಮಸಣಕೆ ಸಾಗಿಸುತ್ತಿಹರು
ಮರದೊಡಲ ಕರಳೇ ಇಲ್ಲದ ಕಲಿಗಾಲದ ಮೃಗಗಳು!

- ಸದಾಶಿವ ದೊಡಮನಿ, ಇಲಕಲ್ಲ.

ಸದಾಶಿವ ದೊಡಮನಿ

ಸದಾಶಿವ ದೊಡಮನಿ ಮೂಲತಃ ಇಳಕಲ್ ನವರು. ಕಾವ್ಯ ಸಂಶೋಧನೆ, ವಿಮರ್ಶೆ ಹೀಗೆ ಹಲವು ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹನಿಗವಿತೆಗಳನ್ನು ಬರೆಯುತ್ತಿದ್ದಾರೆ. ಪ್ರಸ್ತುತ ಇಳಕಲ್ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ನೆರಳಿಗೂ ಮೈಲಿಗೆ, ಇರುವುದು ಒಂದೇ ರೊಟ್ಟಿ

More About Author