Poem

ಅಜ್ಜಿಯ ಊರು

ರಜೆ ಬಂತೆಂದರೆ ಹಾರುತ್ತಿದ್ದೆ
ಅಜ್ಜಿಯೂರಿಗೆ
ಮರಳಿ ನನ್ನೂರಿಗೆ ಬರುತ್ತಿದ್ದುದು
ನಾಳೆ ಶಾಲೆ ಎಂದಾಗಲೇ

ಓಡಾಡದ ಕೇರಿಗಳಿಲ್ಲ
ಹತ್ತದ ದಿಬ್ಬಗಳಿಲ್ಲ
ಕೆರೆ ದಾಟಿ ಮೈಲು ದೂರ ನಡೆದು
ಕದ್ದು ಹೋದ ಸಿನಿಮಾ ಟೆಂಟ್‌ಗಳು
ಇಂದು ಅಸ್ತಿತ್ವದಲ್ಲೇ ಇಲ್ಲ

ಹತ್ತದ ಗಾಡಿಗಳಿಲ್ಲ
ಎತ್ತಿನಗಾಡಿ, ಟ್ರ್ಯಾಕ್ಟರ್,
ಲಾರಿಯನ್ನೂ ಬಿಟ್ಟಿಲ್ಲ
ಆದರೆ ಊರ ಸೇರಲು ಮಾತ್ರ

ತುಂಬು ಬಸುರಿ ನಟರಾಜ ಬಸ್ಸ್... ಉಸ್ಸ್!!

ಹುಳಿಸೆ ಬೆಲ್ಲದ ಲಾಲಿಪಾಪ್ಪಿನ ಸವಿ
ವಡೆ ಕಜ್ಜಾಯ, ಅಟ್ಟಕ್ಕೇರಿ ಮೆಲ್ಲುತ
ಓರಗೆಯವರೊಡನೆ ಸಾಲಾಗಿ ಹಾಸಿ
ಕತೆಯಲ್ಲಿನ ರಾಜಕುಮಾರನ ಜಾಡು ಹಿಡಿದು
ಭೂತ ಪ್ರೇತಗಳ ರೋಚಕ ಸರಣಿಗಳು.

ಊಟಕೆ ಕುಳಿತರೆ ಸಾಲಾದ ಪಂಕ್ತಿ
ಶಿಸ್ತಿನ ಸಿಪಾಯಿಗಳಂತೆ ನಮ್ಮ ಯುಕ್ತಿ
ನಿವಾಳಿಸೋ ಅಂಚಿಕಡ್ಡಿಗೆ ತದೇಕ ದೃಷ್ಟಿ

ಆಳುಕಾಳುಗಳಿಗೆ ಕೊರತೆಯಿರಲಿಲ್ಲ
ಕುರಿ ಕೋಳಿಗಳಿಗೆ ಲೆಕ್ಕವೇ ಇರಲಿಲ್ಲ
ಹಿತ್ತಲ ದನ ಎಮ್ಮೆಗಳು ತಾಸುಗಟ್ಟಲೆ
ಜಗಿಯುತ್ತಿದ್ದುದು ಏಕೆಂದು ಅರಿವಾದದ್ದು

ಹೈಸ್ಕೂಲು biology ಓದಿದಾಗಲೇ..

ಅಪ್ಪನ ಢರ್ ಢರ್ ಸ್ಕೂಟರಿನ ಸದ್ದಿಗೆ
ಕತ್ತು ಕೊಂಕಿಸಿ, ಕಿಟಕಿ ಕಿಂಡಿಯ ಇಣುಕಿ
ಕೈಯಲ್ಲಿ ಪೆನ್ಸಿಲ್ಲು, ಬಿಡಿಸಲಾರದ ಲೆಕ್ಕ ಬಿಡಿಸುತ್ತ
ಕೆರೆದಂಡೆಯ ಕನಸು ಕಾಣುತ್ತಲೇ
ವಿಧೇಯ ವಿದ್ಯಾರ್ಥಿಗಳಾಗುತ್ತಿದ್ದೆವು ಕೆಲ ಹೊತ್ತಿಗೆ

ಇಲ್ಲವೇ,
ಕಳ್ಳ ನಿದ್ದೆಯ ನಾಟಕ ಶುರು

ಕತ್ತಲಾವರಿಸುತಿದೆ... ಕಂದೀಲು ಉರಿಯುತಿದೆ
ದೀಪ ಹಚ್ಚುವ ಸಮಯವಾಗಿದೆ
ದೇವರ ಕೋಣೆಯಲ್ಲಿ ಚಾಪೆ ಹಾಸಿದೆ
ಒಂದರ ಹಿಂದೊಂದು ದೇವರನಾಮ ಉಲಿಯುತಿದೆ
ಒಬ್ಬೊಬ್ಬರ ಕೈಯಲ್ಲ್ಲೂಒಂದೊಂದು ತಾಳವಿದೆ
ಭಜನೆಗಳಿಗೆ ಲೆಕ್ಕವೇ ಇಲ್ಲ

ಅಂತ್ಯ ಬಂದಾಗ ಸಾಕು ಅನ್ನಿಸಲಿಲ್ಲ

ಪುರಿ ಬತ್ತಾಸು ಕೊಳ್ಳಲು, ಕಾಸಿಗೆ
ಅಜ್ಜನ ಕೊಠಡಿಯ ಹೊಸಿಲಲಿ ತವಕದಿ ನಿಂತದ್ದು
ನೆನಪಿಂದ ಮಾಸಿಲ್ಲ
ಅಂಗೈಯಲ್ಲಿ ಮುಚ್ಚಿಟ್ಟ ಐದು ಪೈಸೆಗೆ ಕಣ್ಣರಳಿಸಿ
ಜಾತ್ರೆಯಲ್ಲಿ ಕೊಂಡ ಪೀಪಿ, ಬಣ್ಣದ ಕನ್ನಡಕವೇರಿಸಿ

ಮೆರೆದದ್ದು ಕನಸಲ್ಲ

ಹಬ್ಬಹರಿದಿನ ಜಾತ್ರೆ ತೇರೆಂದು
ಒಗ್ಗೂಡಿ ಆಚರಿಸದ ದಿನಗಳೇ ಇರಲಿಲ್ಲ
ಮದುವೆ, ಹೆರಿಗೆ ಬಾಣಂತನದ ಸರಣಿಗಳಲ್ಲಿ
ಕೂಸುಗಳು ಬೆಳೆದು ಪುರ್ರೆಂದು ಹಾರಿದವು

ಗಲಗಲವೆನ್ನುತ್ತಿದ್ದ ಭಂಗಲೆ
ಇದೀಗ ಸದ್ದಿಲ್ಲದೆ ತಲೆ ಬಗ್ಗಿಸಿದೆ
ಕೊಟ್ಟಿಗೆ ಬಿಕೋ ಎನ್ನುತ್ತಿದ್ದರೂ
ಆಕಳ ಅಂಬಾ. ಕೂಗು ಕಿವಿಯಲ್ಲಿ
ಇನ್ನೂ ಪ್ರತಿಧ್ವನಿಸುತ್ತಿದೆ
ಗಂಜಲ ಸಗಣಿಯ ಘಾಟು
ನಾಸಿಕಕ್ಕಿನ್ನೂ ಅಂಟಿದೆ

ಗೋಡೆ ಗೋಡೆಗಳೂ ಮಾತನಾಡುತ್ತಿದ್ದವು ಅಂದು.
ಇಂದು, ಮಂದ ಬೆಳಕೂ ಇಲ್ಲವಾಗಿದೆ
ಮೌನವೇ ಬಸಿರಾಗಿ, ನಿರ್ಜೀವ ಗೂಡಾಗಿದೆ

-ಧಾರಿಣಿ ಮಾಯಾ

ವಿಡಿಯೋ
ವಿಡಿಯೋ

ಧಾರಿಣಿ ಮಾಯಾ

ಧಾರಿಣಿ ಮಾಯಾ ಅವರು ಮೈಸೂರಿನ ಪತ್ರಿಕೋದ್ಯಮ ವಿಭಾಗದಲ್ಲಿ ಪದವಿ ಹಾಗೂ ಇಂಗ್ಲೀಷ್ ವಿಭಾಗದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದಿದ್ದು, ಓದು- ಬರಹದಲ್ಲಿ ಆಸಕ್ತಿ, ಬರವಣಿಗೆಯನ್ನು ಪ್ರಾರಂಭಿಸಿ ಹವ್ಯಾಸಿ ಬರಹಗಾರ್ತಿಯಾಗಿ, ಸಾಹಿತ್ಯ ಕಣಜವು ಕಥೆ, ಕವನ, ಲೇಖನ ಹಾಗೂ ಲಲಿತ ಪ್ರಬಂಧಗಳ ಪ್ರಕಾರಗಳನ್ನು ಒಳಗೊಂಡಿದೆ. ಬಹುತೇಕ ಬರಹಗಳು ಭೂಮಿಕಾ, ಸುಧಾ, ತರಂಗ, ವಿಶ್ವವಾಣಿ, ವಿಜಯ ಕರ್ನಾಟಕ, ಮಂಗಳ, ಕರ್ಮವೀರ, ಹಾಗೂ ವಿನಯವಾಣಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 'ನೇಯ್ದೆನುಡಿ' ಎಂಬ ಮಾಸಿಕ ಪತ್ರಿಕೆಯಲ್ಲಿ ಇವರ ಅಂಕಣ ಬರಹಗಳು ಕಳೆದ ಮೂರು ವರ್ಷಗಳಿಂದ ಸತತವಾಗಿ ಮೂಡಿ ಬರುತ್ತಿವೆ. ಚಿತ್ರಕಲೆ, ವಾಲ್ ಪೇಂಟಿಂಗ್, ಅಡುಗೆ, ಸ್ಟ್ರೀಟ್ ಫೋಟೋಗ್ರಾಫಿ ಹವ್ಯಾಸವಾಗಿದ್ದು ಚಿಕ್ಕಂದಿನಿಂದಲೂ ನೃತ್ಯ, ನಾಟಕ ಇವರ ನೆಚ್ಚಿನ ರಂಗಗಳು, ಕೌಂಟುಬಿಕ ಆಧಾರಿತ “ಮನೋರಮೆಯರ ತಲ್ಲಣಗಳು” ಎಂಬ ನಾಟಕವನ್ನು (ಮ್ಯೂಸಿಕಲ್ ಡ್ರಾಮಾ) ರಚಿಸಿ, ನಿರ್ದೇಶಿಸಿ ನಟಿಸಿದ್ದಾರೆ.

ಕೃತಿ: ಮೌನದ ಚಿಪ್ಪಿನೊಳಗೆ

More About Author