Poem

ಆಕಾಶ ಮಲ್ಲಿಗೆ

 

ಇರುವುದನು ಬದಿಗಿಟ್ಟು ಇಲ್ಲದುದ ಬಯಸಿದರೆ
ಅಪಘಾತ ಉಪಘಾತ ನೂರೆಂಟಿವೆ
ಉಳ್ಳವರ ಅನುಕರಿಸೆ ಗೋಳಂಟವೆ? ॥ಪ॥

ಹಂಚುಣ್ಣಿ ಹಾಲುಣ್ಣಿ ಕೆಚ್ಚಲಲಿ ಮನೆಮಾಡಿ
ಹಾಲುಣ್ಣವಿವು ಎಂದೂ ಬರಿರಕ್ತವು
ಮರದೊಳಗೆ ಹಾರಾಡಿ ಎತ್ತರದಿ ಜಿಗಿದಾಡಿ
ಗೃಹತಾರೆ ಜೊತೆಗಿರದು ಅನುರಕ್ತವು

ಹಸುರುಟ್ಟ ಮರಗಿಡದಿ ಕರಿಬೊಡ್ಡೆ ವರಟ್ಯಾಕೆ
ಹರಿಕೊಂಬೆ ಹೂವರಳಿ ಹಲವುಬಣ್ಣ
ಬೇರಿರದ ಮರಗಳಿಗೆ ಕೊನೆಯಲ್ಲಿ ಬದುಕಿಲ್ಲ
ಮರಸತ್ತ ಮರುಘಳಿಗೆ ಬೇರುಮಣ್ಣು

ಕರಿನಾಯಿ ಬಿಳಿಮರಿಗೆ ಬಣ್ಣವಿದು ಬದಲಾಯ್ತು
ಒಳಗೊಂದು ರಾಜಕೀಯ ನಡೆದಂತಿದೆ
ಉಸಿರಿರದ ಜಾಗದಲಿ ಆಗರ್ಭ ಕತ್ತಲಲಿ
ಮೊಟ್ಟೆಯನು ಮರಿಕುಕ್ಕಿ ಹೊರಡುತ್ತಿದೆ

ಅಮೃತದ ಬೋಗುಣಿಯ ದೂರಿರಿಸಿ ಜನರೀಗ
ಸುರಪಾನ ಸುರಿಸುರಿದು ಸಾಯುತ್ತಿವೆ
ಮದ್ದಿರುವ ಹಿತನುಡಿಯು ಬಿದ್ದಲ್ಲೆ ವದ್ದಾಡಿ
ಬಣ್ಣಗಳ ವಣಮಾತು ಬೇಯುತ್ತಿವೆ

ಆಕಾಶ ಮಲ್ಲಿಗೆಗೆ ಕೈಚಾಚಿ ಜನರೀಗ
ಹುಲಿಬಯಸಿ ಮೈಗೆಲ್ಲ ಬರೆಯಿಟ್ಟರು
ನೆಲಕಾತ ಜನರೆಲ್ಲ ಹಾರಾಟ ಬಯಸಿದರು
ಕೈಸೋತು ಮೇಲಿಂದ ಕೆಳಬಿದ್ದರು

-ಜೀವರಾಜ ಹ ಛತ್ರದ

ಜೀವರಾಜ ಹ ಛತ್ರದ

ಲೇಖಕ ಜೀವರಾಜ ಹನುಮಂತಪ್ಪ ಛತ್ರದ ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಸರ್ಕಾರಿ ಪ್ರೌಢಶಾಲಾ ಶಿಕ್ಷಕರು. ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರು.  ಪ್ರಸ್ತುತ ಬ್ಯಾಡಗಿ ತಾಲೂಕಿನ ಮಾಸನಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 

ಕೃತಿಗಳು: ಖುಷಿ ತರಲಿ ಕೃಷಿ, ಅಕ್ಕಡಿ ಕಾಳು( ವೈಚಾರಿಕ ಲೇಖನಗಳು), ಯಾಲಕ್ಕಿ ಹಾಲಕ್ಕಿ, ರಮ್ಯಗಾನ, ಅನುವಿನು, ದಾಂಪತ್ಯ ಗೀತೆಗಳು, ಜೀವಣ್ಣನ ಆಧುನಿಕ ತ್ರಿಪದಿಗಳು, ಅಸಲಿ ಮಳೆ, ಹನಿ ಹನಿ ಕಾವ್ಯಧಾರೆ, ಮಂಜೂರ್ಶಿ, ಸೂರು ಗುಡ್ಡ, ಉದಯ ರಶ್ಮಿ (ಕವನ ಸಂಕಲನಗಳು)

More About Author