Poem

ಅಕ್ಕನಿಗೊಂದು ನಿವೇದನೆ !

ನೀ ಕಲಿತಿದ್ದ ಆ ಗುರುಮಠಗಳು
ಇಂದು ಶಾಲೆಗಳಾಗಿವೆ!
ಎಲ್ಲೆಲ್ಲೂ ಹುಡುಗಿಯರು ಥೇಟು ನಿನ್ನ ಹಾಗೆ,
ಅಕ್ಷರ ಅರಸುತ್ತಿದ್ದಾರೆ!
ನೀ ಕಲಿಯಲು ಹೋಗುವಾಗ
ಇದ್ದ ಕೊಂಕು ಮಾತುಗಳು ಮಾತ್ರ
ಹಾಗೆಯೇ ಉಳಿದು ಬಿಟ್ಟಿವೆ!

ಧಿಮಾಕಿನ ರಾಜಮಹಾರಾಜರ
ಮೆರವಣಿಗೆ ಹಾಗೆಯೇ ಉಳಿದುಬಿಟ್ಟಿವೆ,
ನಿನಗೆ ಕೌಶಿಕನೊಬ್ಬನೇ!!
ಇಲ್ಲಿ ನಮಗೆ ಸಾವಿರಾರು ಕೌಶಿಕರ ಕಾಮದ ಕಣ್ಣು ತಪ್ಪಿಲ್ಲ!
ಬೀದಿಯಲ್ಲಿ ನಡೆಯುವಾಗ
ತಲೆ ಎತ್ತದಂತೆ ಮಾಡಿವೆ!

ಉಟ್ಟ ಸೀರೆ ಬಿಚ್ಚಿ, ಕೇಶ ರಾಶಿ ವಸ್ತ್ರವನ್ನಾಗಿಸಿ ಅದ್ಹೇಗೆ
ಹೊರಟು ನಿಂತೇ?
ಇಲ್ಲಿ ಒಂದಿಂಚೂ ಮೈ ತೋರಿಸದೆ
ಎಲ್ಲವೂ ಮುಚ್ಚಿಕೊಂಡರೂ
ಗಂಡಸರುಗಳು ಹದ್ದುಗಳಂತೆ ಬೆನ್ನ ಹಿಂದೆ ಬಿದ್ದಿದ್ದಾರೆ!

ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ
ಚೆಲುವನ ಅರಸುತ್ತ ಅದೆಷ್ಟು
ಸರಳವಾಗಿ ಹೊರಟಿಬಿಟ್ಟೆ?
ನೋಡಲು ಬರುವ ಗಂಡಿನೆದರು
ಇಲ್ಲಿ ನಾವಿನ್ನೂ ಚಾ ಕಾಫಿ ಕಪ್
ಹಿಡಿದು ನಾರಿ ಸಮ್ಮಾನ್ ಎನ್ನುವ ಭಾಷಣ ಕೇಳುತ್ತಾ ರಾತ್ರಿಗಳನ್ನು ಕಳೆಯುತ್ತೇವೆ!

ಹಸಿವಾದೊಡೆ, ತೃಷೆಯಾದೊಡೆ
ಭಿಕ್ಷಾನ್ನ, ಕೆರೆ, ಬಾವಿ ಎಂದು
ಅದೆಷ್ಟು ನಿರಮ್ಮಳವಾಗಿ ಹೇಳಿದೆ.
ಅಪ್ಪ, ಗಂಡ, ಮಗನ ಆಶ್ರಯದಲ್ಲಿಯೇ
ಒಂದು ಹೊತ್ತಿನ ತುತ್ತಿಗಾಗಿ
ಧ್ವನಿ ಇಲ್ಲದವರಂತೆ ಬದುಕು ಸಾಗಿಸುತ್ತಿದ್ದೇವೆ!

ಸಂತೆ, ಬೆಟ್ಟ, ಸಮುದ್ರದ
ತಲ್ಲಣಗಳಿಗೆ ಬೆದರಿ
ಇಲ್ಲಿ ನಾವಿನ್ನೂ
ಕೋಪವ ತಾಳದೆ ನಲುಗುತ್ತಿದ್ದೇವೆ, ನಮ್ಮೊಳಗೆ ಸಾಯುತ್ತಿದ್ದೇವೆ.
ಇನ್ನೂ ಅದೆಷ್ಟು ಶತಮಾನ ಬೇಕಾದೀತು
ಅಕ್ಕ, ನಿನ್ನ ದಾರಿ ತುಳಿಯಲು?

ನಮ್ಮದು ಬರೀ ಸಾಕ್ಷರತೆಯ ಬದುಕು,
ಸಾಕ್ಷಾತ್ಕಾರದ ಬದುಕಿಗಾಗಿ ನಂಬಿಕೆಯ ಬೀಜ ಎದೆಯ ತುಂಬೆಲ್ಲ ಬಿತ್ತಿಕೊಂಡು,
ಮೊಗ್ಗುಗಳಿಗಾಗಿ ಕಾಯುತ್ತ ನಿಂತಿದ್ದೇವೆ.
ಮೊಗ್ಗುಗಳನ್ನು ಆಸ್ತ್ರವಾಗಿ ಬಳಸಲು; ಯುದ್ಧಗಳನು ಗೆಲ್ಲಲು!!

- ಬಸವ ಪಾಟೀಲ ಜಾವಳಿ
ಕಲಬುರಗಿ.

ವಿಡಿಯೋ
ವಿಡಿಯೋ

ಬಸವ ಪಾಟೀಲ ಜಾವಳಿ

ಬಸವ ಪಾಟೀಲ ಜಾವಳಿ ಅವರು ಮೂಲತಃ ಕಲಬುರಗಿಯವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದೆ. ಅವರ ಕವನಗಳು ಪತ್ರಿಕೆಗಳಲ್ಲಿಯೂ ಪ್ರಕಟಗೊಂಡಿರುತ್ತದೆ.

More About Author