Poem

ಅಳಿಸಲಾಗದ ಬರಹ

ಇಂದಿಗೂ ನಾನು ಮರೆತಿಲ್ಲ
ಮರೆಯುವುದು ಸಾಧ್ಯವೇ?
ನೀ ನನ್ನ ಕಾಡಿಸಿದ್ದು, ಅಲೆದಾಡಿಸಿದ್ದು
ಬಿಸಿಲ ಬೇಗೆಯಲ್ಲಿಯೂ ಮನಸು ನೀಡಿ ಹೊರಳಾಡಿಸಿದ್ದು

ಆ ದಿನ ನೀ ನನ್ನ ಅಂತರಂಗದ ಬೆಳದಿಂಗಳಾಗಿ ಬಿಟ್ಟೆ,
ಇವತ್ತಿಗೂ ಕೂಡ
ನೆನಪಿದೆಯಾ, ಮಾತಾಡದೇ ಸತಾಯಿಸಿದ್ದು, ಮೌನದಲ್ಲೇ ಮಾತಾಡಿದ್ದು
ಮೂಕ ಸಂಭಾಷಣೆಯಲ್ಲೇ ತುಂತುರು ಮಳೆಗರೆದದ್ದು

ನಿನ್ನ ಹೆಸರ ನನ್ನ ಹೃದಯದಿ ಹಚ್ಚೆ ಹಾಕಿಸಿದ್ದು
ಹಾಯಿ ದೋಣಿಯಲ್ಲಿ ಇಬ್ಬರೇ ಬಹುದೂರ ಸಾಗಿದ್ದು
ಕನಸಿನಲ್ಲಿ ನಮ್ಮಿಬ್ಬರ ಮಧುರ
ದಾಂಪತ್ಯದ ಕ್ಷಣಗಳ ಕಂಡಿದ್ದು
ಆತ್ಮ ಸಾಂಗತ್ಯದ ರಸಮಯ ಘಳಿಗೆಯನು ಮೆಲುಕು ಹಾಕಿದ್ದು

ಭಾವನೆಗಳು ಪ್ರವಾಹದಂತೆ ಪ್ರವಹಿಸಿ, ಸೃಷ್ಟಿಸಿದ ಈ ಆರ್ಭಟವೇ
ನಮ್ಮಿಬ್ಬರ ಸವಿ ಪ್ರೇಮಕ್ಕೆ ಮುಳುವಾಯಿತೇ?
ವಿಧಿ ಏನೇ ಬಗೆದರೂ, ನಿನ್ನ ಅಳಿಸಲಾಗದ ಸುಮಧುರ ನೆನಪುಗಳೇ
ಸಾಕೆನಗೆ, ಈ ಜನ್ಮಪೂರ್ತಿ
ಪ್ರತಿದಿನವೂ ಸಿಹಿಯುಂಡಂತೆ

ವಿದ್ವಾನ್ ಮಂಜುನಾಥ್ ಎನ್

ವಿದ್ವಾನ್ ಮಂಜುನಾಥ್ ಎನ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಮಂಜುನಾಥ್ ಅವರು ಸಾಹಿತ್ಯದ ಜೊತೆಗೆ ಭರತನಾಟ್ಯ, ಸುಗಮ ಸಂಗೀತ, ಯಕ್ಷಗಾನ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ವೃತ್ತಿಪರ ಭರತನಾಟ್ಯ ಕಲಾವಿದರಾಗಿ ಕಲ್ಬುರ್ಗಿಯಲ್ಲಿ ನೆಲೆಸಿದ್ದಾರೆ.

More About Author