Poem

ಅಲ್ಲೀಗ ಏನೂ ಉಳಿದಿಲ್ಲ

ಅಲ್ಲೀಗ ಎಲ್ಲವೂ ಮಣ್ಣಪಾಲಾಗಿವೆ
ಮುಗಿಲೆತ್ತರಕ್ಕೆ ಬೆಳೆದುನಿಂತಿದ್ದ ಕಟ್ಟಡ
ಮತ್ತೆ ಭೂತಳವನು
ತನ್ನಡಿಪಾಯವನು ತಾನೇ ಶೋಧಿಸುತಿದೆ
ಹೊರಟ ನೆಲೆಯೆಡೆಗೇ ಮತ್ತೆ ಮರಳಿಬಂದಿದೆ

ಬಲಿಷ್ಠ ಗೋಡೆಗಳು
ಭೀಮನ ಬಾಹುದ್ವಯಗಳನು ಸೋಲಿಸುವಂತಿದ್ದ ಕಂಬಗಳು
ಅತ್ಯಾಕರ್ಷಕ ಛಾವಣಿ
ಎಲ್ಲವೂ...ಎಲ್ಲವೂ ಮಣ್ಣು ಈಗ
ಗೋಡೆಯ ಬಣ್ಣ, ಕಂಬಗಳನು ನಿರ್ಮಿಸಿದ ಕೈ, ಆ ಕೈಯ್ಯ ಕುಸುರಿ,
ಕಾರ್ಮಿಕರ ಬೆವರ ಹನಿಗಳು,
ಶಿಲ್ಪಿಯ ಕನಸು
ಎಲ್ಲವೂ ಮಣ್ಣಲ್ಲಿ ಮಣ್ಣಾಗಿದೆ
ಗುರುತಿಸಿ ತೆಗೆಯದಂತೆ

ಮನುಷ್ಯ ಓಡಾಡಬೇಕಾದ ಕಡೆಯಲ್ಲೆಲ್ಲಾ
ಯುದ್ಧ ಟ್ಯಾಂಕರ್ ಗಳು ಚಲಿಸುತ್ತಿವೆ
ಸಂಚಾರದ ಏಕತಾನತೆ ಕಳೆದುಕೊಳ್ಳಲು
ಆಗೊಮ್ಮೆ ಈಗೊಮ್ಮೆ ಹೂಂಕರಿಸುತ್ತಿವೆ
ಸುಪ್ತ ಆಕ್ರೋಶದ ಪ್ರತಿನಿಧಿಯಾಗಿ

ಅಲ್ಲೀಗ ಏನೂ ಉಳಿದಿಲ್ಲ
ಮನುಷ್ಯ ಸಂಬಂಧಗಳು
ಮಾನವೀಯ ನಂಬಿಕೆಗಳೆಲ್ಲವೂ
ಮೌನವಾಗಿ ಗೋರಿ ಸೇರಿಕೊಂಡಿವೆ
'ಸತ್ತ ಮನುಷ್ಯರ' ಸ್ಮಶಾನದಲ್ಲಿ
ಸ್ವಾರ್ಥ, ಅಸೂಯೆ, ಅವಕಾಶವಾದಿತನಗಳು
ಪೆಣದಿನಿಗಳಾಗಿ ಹೊಟ್ಟೆ ತುಂಬಿಸಿಕೊಳ್ಳುತ್ತಿವೆ

ಈಗ ತಾನೇ ಹುಟ್ಟಿದ ಮಗು
ಬಾಯನ್ನು ಹಿರಿದಗಲ ಮಾಡಿ,
ಪಿಳಿಪಿಳಿ ಕಣ್ಣು ಮಾಡಿ ನೋಡುತ್ತಿದೆ-
ಆ ಬಾಂಬು ದಾಳಿ, ಸಾವು, ನೋವು, ಕ್ಷಿಪಣಿ ಮಣ್ಣು ಮಸಿ ಎಲ್ಲವನ್ನೂ....
ಮತ್ತು ಮನಸ್ಸಿನಲ್ಲೇ
ಅಂದುಕೊಳ್ಳುತ್ತಿದೆ-

'ಭೂಮಿಯೆಂದರೆ ಇಷ್ಟೇ,
ಬರೀ ಯುದ್ಧ'
***
✍️ವಿಶ್ವನಾಥ ಎನ್ ನೇರಳಕಟ್ಟೆ

ವಿಶ್ವನಾಥ್ ಎನ್. ನೇರಳಕಟ್ಟೆ

ಲೇಖಕ ವಿ.ಎನ್. ನೇರಳಕಟ್ಟೆ ಕಾವ್ಯನಾಮದ ಮೂಲಕ ಕತೆ-ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಪಂತಡ್ಕದ ವಿಶ್ವನಾಥ್ ಎನ್. ನೇರಳಕಟ್ಟೆ ಅವರು, ‘ಡಾ.ನಾ. ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ’ ವಿಷಯದಲ್ಲಿ ಪಿಎಚ್‌ಡಿ ಸಂಶೋಧನೆ ನಡೆಸಿದ್ದಾರೆ. ಪ್ರಸ್ತುತ ಸಿದ್ಧಕಟ್ಟೆಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ‘ತುಸು ತಿಳಿದವನ ಪಿಸುಮಾತು’ ಅಂಕಣ ಬರಹ ಬರೆಯುತ್ತಿದ್ದಾರೆ.

ಕೃತಿಗಳು:   ಮೊದಲ ತೊದಲು, ಕಪ್ಪು ಬಿಳುಪು (ಕವನ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ) ಮತ್ತು ಸಾವಿರದ ಮೇಲೆ (ನಾಟಕ). ಇವರಿಗೆ ಪುಟ್ಟಣ್ಣ ಕುಲಾಲ್‌ ಯುವ ಕತೆಗಾರ ಪುರಸ್ಕಾರ’, ‘ಯೆನಪೋಯ ಎಕ್ಸಲೆನ್ಸಿ ಪ್ರಶಸ್ತಿ ಹಾಗೂ ಚಂದನ ಸಾಹಿತ್ಯ ವೇದಿಕೆ ನೀಡುವ ಸಾಹಿತ್ಯ ರತ್ನ ಪ್ರಶಸ್ತಿ ಸಂದಿವೆ.

More About Author