Poem

ಅಲ್ಲಿಗೆ ಮುಗಿಯಿತು!!

ಅಲ್ಲಿಗೆ ಮುಗಿಯಿತು!!

ಸದ್ದೊಂದು ಮೊಳಗಿತು, ಕೈ ಹಿಡಿದ ಕಟ್ಟಿಗೆ ಸರಿಯಿತು.
ಸುರಿವ ಮಳೆ, ಇಳೆಯ ಮೈ ತುಂಬ ಕಂಪ, ರಜನಿ ಬರುವ ಹೊತ್ತು
ಕಟ್ಟಿಗೆಯಲ್ಲಿ ಇದ್ದ ಹಸುವೊಂದು ಅಂಬಾ.... ಎಂದಿತು,
ಭೂಮಿ ತಾಯಿಯ ತಾಳ್ಮೆ ಮುಗಿಯಿತು ಮಹಾ ಮಳೆ ಬಂದಿತು
ಅಲ್ಲಿಗೆ ಮುಗಿಯಿತು!!

ಹೊರ ಬಂದಳು ಮನೆಯ ಹಿಂದಿನ ದೊಡ್ಡ ಬೆಟ್ಟ
ಮೊನ್ನೆಯಷ್ಟೇ ಅಗೆದು ಕಾಫಿ, ಸಿಲ್ವಾರ್‌ ಹಾಕಿದ ತೋಟ
ತನ್ನಷ್ಟಕ್ಕೆ ತಾನು ಸೀಳು ಒಡೆದು ಜಾರುತಿತ್ತು.
ನಡುವೆ ನುಗ್ಗಿ ಉಕ್ಕುವ ನೀರಿನ ರಭಸ ಕಾಡಲ್ಲಿ ಪ್ರವಾಹ ಭೋರ್ಗರೆತ.
ಅಲ್ಲಿಗೆ ಮುಗಿಯಿತು!!

ಒಳಗ ಹೋಗುವಂತೆ ಇಲ್ಲಾ, ಗುಡ್ಡ ಜರಿದ ಮಣ್ಣು,
ತೊಳೆದ ಕೆಂಪು ನೀರು ಮನೆಯೊಳಗೆ ಗುಡಿಸುತಿದೆ ಹೊನ್ನು.
ಅವಳಿಗೊಂದೆ ಚಿಂತೆ, ಮಗಳ ಮದುವೆಗೆ ಮಾಡಿಟ್ಟ ಒಡವೆ,
ಪೆಟ್ಟಿಗೆಯಲ್ಲಿದೆ ಸಾಲದ ಕರಾರು ಪತ್ರ ಕೂಡ ನಡುವೆ.
ಅಲ್ಲಿಗೆ ಮುಗಿಯಿತು!!

ಸದ್ದಿಗೆ ಬಗ್ಗಿದವ ಎದ್ದು, ಜಿದ್ದಿಗೆ ಬಿದ್ದಂತೆ ಓಡುತಲಿ ಬಂದ ಯಜಮಾನ,
ನೀರು ಮನೆಯಂಗಳ ದಾಟಿ ತಗ್ಗಿಗಿಳಿಯಿತು, ಮೇಲೆ ಕಾರ್ಮೋಡದ ಕಮಾನ,
ತಗ್ಗಿಗೆ ಬರಿಯ ಕಂಪ, ನೆಲ ಜರಿಯಿತು ಮಣ್ಣು ಜಾರಿತು ಜೀವ(ನ) ಮುಗಿಯಿತು
ಆಳಕೆ ಇಳಿದ ದೇಹ, ಸತ್ತೇನೆಂಬ ಕೂಗ ಕಂಪನ ಮುಗಿಲು ಮುಟ್ಟಿತು.
ಅಲ್ಲಿಗೆ ಮುಗಿಯಿತು!!

ಕನಸು ಕಂಡ ಕಾಫಿತೋಟ, ಇಷ್ಟದಿ ಕಟ್ಟಿದ ಮಹಡಿಮನೆಯ ಗೂಡು,
ಕೊಟ್ಟಿಗೆಯ ಜಾನುವಾರು, ಕತ್ತಲೆಂದು ಗೂಡು ಸೇರಿದ ಕೋಳಿ ಹಿಂಡು.
ನೀರಲ್ಲಿ ತೇಲಿ ಮುಳುಗಿತು, ಅವಳ ಕಣ್ಣೀರು ಮಳೆನೀರಿಗೆ ಸಮವೆ?
ಅವಳು ಜೊತೆಗೆ ಒಂಟಿ ನಾಯಿ ಮಾತ್ರ ದಿಬ್ಬದಲ್ಲಿ, ಸುರಿದ ಮಳೆ ಘಮವೆ?
ಅಲ್ಲಿಗೆ ಮುಗಿಯಿತು!!

ಅವಳೆದೆಯಲ್ಲಿ ಕಂಪನ, ಭಾರದ ಹೆಜ್ಜೆ ಕೆಸರಲ್ಲಿ ಕಾಲ್ಗೆಜ್ಜೆ ನೆಂದ ಉಡುಗೆ,
ಹೆಜ್ಜೆಯ ಮೇಲೆ ಹೆಜ್ಜೆ ಹಾಕಿದಳು, ಮಲಗಿ ಮುಳುಗಿದ ಗಂಡನೆಡೆಗೆ.
ಚಾಚಿದ ಕೈ ಕಾಣಲಿಲ್ಲ, ಕಂಡಿದ್ದು ತೋಟಕ್ಕೊಡೆದ ರಾಸಾಯನಿಕ ಬಾಟಲಿ
ಅವು ಮುಳುಗದೆ ತೇಲಿದವು ನಗುವಂತೆ ನಗುತ್ತ! ಎದೆಗೆ ನಾಟಲಿ
ಅಲ್ಲಿಗೆ ಮುಗಿಯಿತು!!

ಪೋಲಿಸಪ್ಪನ ಟೋಪಿ, ಬಿಳಿಯಂಗಿಯ ಸಮಾಜ ಸೇವಕರು,
ಹೂತ ನೆಲದಲ್ಲಿ ಹೆಣ ಹುಡುಕಿದರು ಮಾಸಲು ಬಟ್ಟೆಯ ಕೂಲಿಯವರು.
ಹಿಟಾಚಿ ಜೆಸಿಬಿ ಅವು ಯಂತ್ರಗಳು ಜೀವದ ಹಂಗುತೊರೆದು
ಮತ್ತದೆ ಭೂಮಿ ತಾಯಿಯ ಅಗೆತ ನೆಲ ಜಲದ ಕೊರೆತ.
ಅಲ್ಲಿಗೆ ಮುಗಿಯಿತು!!

ಸತ್ತವರಿಗೆ ಪರಿಹಾರ ಗಂಜಿ ಕೇಂದ್ರದ ಸ್ವಗತ, ಉಳಿದವರ ಹೆಜ್ಜೆ,
ಉಳಿದ ನೆಲದ ಬಗೆತ ಅಳಿದು ಉಳಿದಿದ್ದು ನೆಪದ ಬೆಳ್ಳಿ ಗೆಜ್ಜೆ.
ಅಧಿಕಾರಿಗಳ ಕೈ ಚಳಕ ಪರಿಹಾರದಲ್ಲಿ ಬಾರಿ ವಿಕೋಪ,
ಮತ್ತದೆ ಹರಿದ ಬನಿಯನ್‌, ಬೆವರು ಮೂಡುವ ನೊಸಲು, ಪಾಪ.
ಅಲ್ಲಿಗೆ ಮುಗಿಯಿತು!!

ಟಿಪ್ಪಣಿ (2019 ರಲ್ಲಿ ಸುರಿದ ಮಳೆಗೆ ನಲುಗಿದ ಮಲೆನಾಡಿನ ರೈತ ಕುಟುಂಬವೊಂದರ ಬದುಕಿನ ಚಿತ್ರಣ)

✍️ ರತ್ನಾಕರ್‌ ಗಡಿಗೇಶ್ವರ

ರತ್ನಾಕರ ಗಡಿಗೇಶ್ವರ

ರತ್ನಾಕರ್ ಗಡಿಗೇಶ್ವರ ಅವರು ನರಸಿಂಹರಾಜಪುರ ತಾಲ್ಲೂಕಿನ ಗಡಿಗೇಶ್ವರ ಮೂಲದವರು. ಪ್ರೌಢಶಾಲ ಶಿಕ್ಷಣ ಸರ್ಕಾರಿ ಪ್ರೌಢಶಾಲೆ ಗಡಿಗೇಶ್ವರ, ಪಿಯು,ಸರ್ಕಾರಿ ಪದವಿ ಪೂರ್ವ ಕಾಲೇಜು ನರಸಿಂಹರಾಜಪುರ, ಕುವೆಂಪು ವಿಶ್ವವಿದ್ಯಾನಿಲಯ ಶಂಕರ ಘಟ್ಟದಿಂದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾಬ್ಯಾಸ ಮುಗಿಸಿದ್ದಾರೆ.. ಪ್ರಸ್ತುತ ಕೃಷಿಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೃತಿ : ಬಫರ್ zone

More About Author